ಶನಿವಾರ, ಅಕ್ಟೋಬರ್ 19, 2013

ವೀಕೆಂಡು!!..

ವೀಕೆಂಡು! ಅದರಲ್ಲಿ  ಏನಿದೆ ಅಂದಿರಾ?
ಇದೆ ಎಂದರೆ ಇದೆ, ಇಲ್ಲಾ ಅಂದರೆ ಇಲ್ಲ.
ಮತ್ತದೇ ಅದೇ ನೆಲವನ್ನ ಗುಡಿಸಿ,
ಫಿನಾಯ್ಲ್ ಸೇರಿಸಿದ ನೀರಿಗೆ,
ಅದ್ದಿ ಅದ್ದಿ ಬಟ್ಟೆ, ನೆಲ ಒರೆಸುವುದು.
ಅಡಿಗೆ ಮನೆಯನ್ನ ಸ್ವಚ್ಹ ಮಾಡು.
ಸಿಂಕನ್ನು ತಿಕ್ಕಿ ತಿಕ್ಕಿ, ತೊಳತೊಳೆದು,
ಮುಖ ಕಾಣಿಸಿಕೊಳ್ಳುವುದು.
ಲೀಟರ್ ಎಣ್ಣೆ ತಲೆಗೆ ಸುರಿದು,
ಘಂಟೆಗಟ್ಟಲೆ ಸ್ನಾನ ಮಾಡುವುದು.
ಅರ್ಧ ಬಿಡಿಸಿದ ಚಿತ್ರ,
ಅರ್ಧಕ್ಕೇ ಬಿಟ್ಟ ಪುಸ್ತಕ,
ಧೂಳಾಗಿರುವ ಟೀವಿ ಪರದೆ,
ಎಲ್ಲವೂ ನಿನಗಾಗೇ ಕಾಯುತ್ತಿರುವವು.
ಅಲ್ಲೆಲ್ಲೋ ಒಂದು ನಿರೀಕ್ಷೆ ಇದೆ,
ವೀಕೆಂಡಲ್ಲಾದರೂ ಸಿಗಬಹುದೇ, ಒಳ್ಳೇ ಊಟ?
ಬಟ್ಟೆಗಳಿಗೋ ರಾಶಿ ಬೀಳುವ ಚಾಳಿ.
ರಾಶಿ ಬಿದ್ದಿರುವುದನ್ನ ವಪ್ಪ ಮಾಡಿ
ತೊಳೆದು ಇಸ್ತ್ರಿ ಮಾಡಬೇಡವೇ?
ತೆಗೆದು ನೋಡಿದರೆ ಸಾಂಬಾರ್ ಡಬ್ಬಿ,
ಖಾಲೀ ಕಾಣುತ್ತಿರುವ ಕುಳಿಗಳು,
ಸಾಸಿವೆ, ಉದ್ದಿನಬೇಳೆ, ಅರಿಶಿನ.
ತುಂಬಿಸಬೇಡವೇ ಖಾಲಿಯನ್ನು?
ಹಿಗ್ಗಬೇಡವೇ ಮನ ತುಂಬಿದ್ದನ್ನು ಕಂಡು?

ಗೋಲಗಪ್ಪ ಅಂಗಡಿಯವ ನೋಡಿ ನಗುತ್ತಾನೆ,
ಇರಬಹುದೇ, ಇವರು ಬಿಡು ವೀಕೆಂಡ್-
ಗಿರಾಕಿ ಎಂಬ ತಾತ್ಸಾರ, ಅಥವ ಕನಿಕರ?
ತುಂಬಿಸಲು ಖಾಲಿಯನ್ನು,
ಹೋಗಿ ಮಾರುಕಟ್ಟೆಗೆ, ಪರಿಶೀಲಿಸಿ,
ಅಳೆದು ಸುರಿದು, ಚೀಲ ತುಂಬಿ
ತಂದ ಸಾಮಾನುಗಳು.
ತಂದ ಸಾಮಾನು, ಕಾಳು-ಬೇಳೆ
ತರಕಾರಿಯನ್ನು ಜೋಡಿಸಿಟ್ಟಿದ್ದೇ,
ಹೊರಟಿದ್ದು ಹೊರಗೆ ನಿಟ್ಟುಸಿರು.
ಎಲ್ಲೋ ಕೇಳಿದ ನಾಟಕ,
ಎಲ್ಲೋ ಓದಿದ ಚಿತ್ರವಿಮರ್ಶೆ,
ಎಲ್ಲವೂ ಕಣ್ಣೆದುರಿಗೆ ಬಂದು ನಿಲ್ಲುವುದು,
ಈ ವೀಕೆಂಡಿಗೆ!

ಬೆಳಗ್ಗೆ ಮುಂಚೆ ಏಳಬೇಕೆಂಬುದಿಲ್ಲ,
ತಯಾರಾಗಿ ಒಡಬೇಕೆಂಬುದಿಲ್ಲ.
ನನಗೂ ಸಮಯ ಬೇಕು,
ನಾ ಇಷ್ಟ ಪಡುವುದನ್ನ ಮಾಡಲು,
ಸೋಮಾರಿಯಾಗಿ ಕಾಲ ಕಳೆಯಲು.
ಅವನ ಜೊತೆ ಹರಟಲು.
ಅದಕ್ಕೆಂದೇ ನಾನು ವೀಕೆಂಡಿಗಾಗಿ ಕಾಯುವೆ,
ಪ್ರತೀ ಬಾರಿ ಬಂದು ಹೋದಮೇಲೂ,
ವರುಣನಿಗಾಗಿ ಕಾಯುವ ಭೂಮಿಯ ಹಾಗೆ!
ಸಖನಿಗಾಗಿ ಕಾಯುವ ಸಖಿಯ ಹಾಗೆ!!

ಶನಿವಾರ, ಜೂನ್ 01, 2013

ಹಿಮದೂರಿನ ದಾರಿಯಲ್ಲಿ

ಎಲ್ಲಿ ನೋಡಿದಲ್ಲಿ,
ಆಗಸ ಚುಂಬಿಸುವ ಪೈನ್ ಮರಗಳು.
ಹಿಮ ಬೇಕಾದರೂ ಬೀಳಲಿ,
ಮಳೆಯಾದರೂ ಬರಲಿ ಎಂದು,
ಎದೆ ಸೆಟೆದು ನಿಂತಿವೆ.
ಇವುಗಳನ್ನು ಸಾಲಾಗಿ
ನೆಟ್ಟವರು ಯಾರು?

ಮಲಗಿದ ಕೋಣೆಯ ಕಿಟಕಿ
ಕೊಂಚ ಸರಿಸಿ ನೋಡಿದರೂ
ಆದಿತು, ಕಂಡಿತು ನಿನಗೆ,
ಹಿಮ ಹೊದ್ದು ಮಲಗಿದ ಶಿಖರ.

 


 ಬಿಳಿ ಬಿಳಿ ಕಲ್ಲುಗಳ, ನಾನು
ಪಿಳಿ ಪಿಳಿ ಕಣ್ಣಲ್ಲೆ ತುಂಬಿಸಿದೆ.
ಆಹ್! ಅಲ್ಲಿ ನೇರ ನಡೆಯೋ
ಪ್ರಶ್ನೆಯೇ ಇಲ್ಲ.
ಹಾಗೆ ನಡೆದರೆ ನಷ್ಟ ನಮ್ಮದೇ!
ಕೇವಲ ಜನರು, ವಾಹನಗಳಿಗೆ
ಹೊಂದಿಕೊಂಡ ನನ್ನ
ಕಣ್ಣುಗಳಿಗೆ ಹಬ್ಬ!
ಆ ನೀರು ನೋಡಲ್ಲಿ
ಹಿಮ ಕರಗಿ, ಶುಭ್ರವಾಗಿ ಹರಿಯುತ್ತಿದೆ.
ಮುಟ್ಟಿ ನೋಡಿದರೆ,
ಮನೆಯ ತಂಗಳು ಪೆಟ್ಟಿಗೆಯ
ನೀರಿಗೆ ಹೋಲಿಸುವ ಮನಸು.
ಹಕ್ಕಿಯಂತೆ ಹಾರಬೇಕು
ಎಂದು ಕನಸು ಕಂಡಿದ್ದು ಬಾಲ್ಯ.
ನನಸಾಗಿದ್ದು ಈಗ.
ಎತ್ತರಕ್ಕೆ ಹಾರಿದಾಗ,

ಮೈಯಲ್ಲೆಲ್ಲ ರೋಮಾಂಚನ
ಚಿವುಟಿಕೊಳ್ಳುವಂತೆಯೂ ಇಲ್ಲ!
ಬೆಟ್ಟ ಹತ್ತಿ ಉಸುರು ಕಟ್ಟಿದಾಗಲೂ,

ತುಟಿಯಲ್ಲಿ ನಗು!


ಸುಂದರ ಪ್ರಕ್ರುತಿ,
ಜೊತೆಯಲ್ಲಿ ಅವನು!
ಜೀವನ ಸುಂದರ.
ಆ ಪ್ರೇಮ ಸ್ಮಾರಕದ ಮುಂದೊಂದು
ಭಾವಚಿತ್ರ ನಮ್ಮದು.
ನೋಡಲಾಯಿತಲ್ಲಾ ಇಷ್ಟಾದರೂ
ಎಂಬ ನಿಟ್ಟುಸಿರು.
ಹಿಂದಿರುಗಿ ಬರುವಾಗೆಲ್ಲ
ಇದೇ ಪ್ರಾರ್ಥನೆ.
ಈ ಅವಕಾಶ
ಮತ್ತೆ ಮತ್ತೆ ಬರಲಿ ಎಂದಷ್ಟೇ!!
ಶನಿವಾರ, ಫೆಬ್ರವರಿ 09, 2013

ಹಕ್ಕಿ ಮತ್ತು ಜೀವ

ಸ್ವಚ್ಛ ಬಿಳಿ ಹಾಳೆಯ ಮೇಲೆ
ಶುರುವಿಟ್ಟೆ ಬರೆಯಲೊಂದು ಚಿತ್ರ
ಬರೆಯುತ್ತಾ ಬಿಡಿಸುತ್ತಾ
ಆಮೇಲೆ ಅರಿವಿಗೆ ಬಂದಿದ್ದು
ನಾನು ಕೇವಲ ಬಿಡಿಸುತ್ತಿಲ್ಲ
ಯಾವುದೋ ಕಲ್ಪನಾ ಲೋಕಕ್ಕೆ
ಹೋಗುತ್ತಿದ್ದೇನೆ ಎಂದು.


ಹಕ್ಕಿಗೆ ರೆಕ್ಕೆ,
ಸುಂದರ ಪುಕ್ಕ,
ಅದಕ್ಕೊಂದು ಕೊಕ್ಕು,
ಅದರ ಮಧ್ಯದಲ್ಲೊಂದು
ಮೀನು.
ಆ ಮೀನು ಈಗ
ಹಕ್ಕಿಗೆ ಆಹಾರ.
ಸುತ್ತಲೂ ಹಸಿರು,
ಹಕ್ಕಿ ನದಿಯ ದಡದಲ್ಲಿ.

ಆ ಚಿತ್ರದಲ್ಲಿರುವ
ಹಕ್ಕಿಗೆ ಎಂದೂ
ಮುಪ್ಪಾಗುವುದೇ ಇಲ್ಲ.
ಆ ಮೀನು ಎಂದೂ
ಅದರ ಹೊಟ್ಟೆಗೆ
ಹೋಗುವುದೇ ಇಲ್ಲ.
ಎಲೆ, ಗಿಡ, ಮರಗಳು
ಹಸಿರಾಗೇ ಇರುತ್ತವೆ.

ನಿಂತಿದೆ ಕಾಲಚಕ್ರ
ಸ್ಥಬ್ಧವಾಗಿ.
ಚಿತ್ರ ಬಿಡಿಸಿ
ಮುಗಿದ ಮೇಲೆ ಯೋಚಿಸುತ್ತೇನೆ,
ಇಷ್ಟು ಸುಂದರ
ಹಕ್ಕಿಗೆ ಜೀವ
ಬರುವ ಹಾಗಿದ್ದರೆ?
ಮತ್ತೆ ಹಾಗೆ,
ಎಲ್ಲ ಚಿತ್ರಗಳಿಗೂ
ಜೀವ ಬರುವ ಹಾಗಿದ್ದರೆ?
ಬಿಡಿಸಿಟ್ಟ ಚಿತ್ರಕ್ಕೆ
ಅವನು ಚೆನ್ನಾಗಿದೆ
ಅನ್ನುತ್ತಾನೆ.
ಚಿತ್ರಕ್ಕೆ ಜೀವ ಬಂದು
ಹಕ್ಕಿ ರೆಕ್ಕೆಬಿಚ್ಚಿ
ಹಾರಿದ ಅನುಭವ
ನನಗಾಗುತ್ತದೆ !