ಮಂಗಳವಾರ, ಜೂನ್ 07, 2016

ಬರವಣಿಗೆಗೆ ಏಕಾಂತ ಬೇಕೇ?

ಖ್ಯಾತ ಚಿತ್ರಕಾರ ಪಿಕಾಸೊ ಹೇಳುತ್ತಾನೆ- 'Without great solitude no serious work is possible' ಅಂತ. ಒಂದು ಮಹತ್ವದ ಏಕಾಂತವಿಲ್ಲದೇ ಯಾವುದೇ ಮಹಾನ್ ಕೆಲಸ ಸಾಧ್ಯವೇ ಇಲ್ಲ ಎಂಬುದು ಅವನ ನಂಬುಗೆಯಾಗಿತ್ತು. ಯಾವುದೇ ಸೃಜನಾತ್ಮಕ ಕೆಲಸವಾದರೂ ಸರಿಯೆ, ಸ್ವಲ್ಪ ಮಟ್ಟಿನ ಏಕಾಂತವನ್ನ ಬೇಡುತ್ತದೆ. ಒಬ್ಬ ಬರಹಗಾರನಿಗೆ ಸಹಜವಾಗಿಯೇ ತನ್ನ ಬರವಣಿಗೆಯ ಬಗ್ಗೆ ಯೋಚಿಸುವ, ಯೋಜಿಸುವ ಹಾಗೂ ವಿಷಯದ ಕುರಿತು ಪೂರ್ವಾಧ್ಯಯನ ಮಾಡಿ ಅದರ ಬಗ್ಗೆ ಬರೆಯುವ ಅನಿವಾರ್ಯತೆ ಇರುತ್ತದೆ. ಬರವಣಿಗೆಗೆ ಬೇಕಾದ ಶಾಂತ ಮನಸ್ಸು, ವಾತಾವರಣ ಹಾಗೂ ಏಕಾಗ್ರತೆಯನ್ನ ಏಕಾಂತ ಒದಗಿಸುತ್ತದೆ. 

ಸೃಜನಶೀಲತೆಗೆ ಏಕಾಂತದ ಅಗತ್ಯ ಖಂಡಿತ ಇದೆ. ಬಹಳಷ್ಟು ಬರಹಗಾರು ತಮ್ಮ ಬರವಣಿಗೆಗೆ ಏಕಾಂತವನ್ನೇ ಬಯಸುತ್ತಾರೆ. ಕೆಲ ಬರಹಗಾರು ಮೊದಲ ಕರಡನ್ನು ಗಡಿಬಿಡಿಯಲ್ಲಿ ಬರೆದಿದ್ದರೂ ನಂತರ ಏಕಾಂತದಲ್ಲಿ ಕೂತು ಅದನ್ನು ತಿದ್ದುತ್ತಾರೆ. ಆಂಗ್ಲ ಬರಹಗಾರ ಲಿಯೊನೆಲ್ ಫ಼ಿಶರ್ ಹೇಳುವಂತೆ, ಏಕಾಂತವು ವ್ಯಕ್ತಿಯ ಮನಸ್ಸನ್ನು ತಣಿಸಿ, ಸೃಜನಾತ್ಮಕ ಸ್ಫೂರ್ತಿಗೆ ಅಣಿಮಾಡಿಕೊಡುತ್ತದೆ. ಹೊರಜಗತ್ತಿನಲ್ಲಿರುವ ಗಲಾಟೆ, ಗೊಂದಲಗಳು ಮನುಷ್ಯನ ಸೃಜನಾತ್ಮಕ ಕ್ರಿಯೆಯನ್ನು ಕೊಂದುಬಿಡುತ್ತವೆ. ಅದೇ ಏಕಾಂತ ಈ ಎಲ್ಲವನ್ನು ದಕ್ಕಿಸಿಕೊಡುತ್ತದೆ.

ಏಕಾಂತದ ವಾತಾವರಣದಿಂದ ಹಲವು ಉಪಯೋಗಗಳಿವೆ. ಮೊದಲನೆಯದಾಗಿ, ಏಕಾಂತವು ಲೇಖಕನಿಗೆ ಸ್ಪಷ್ಟವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ. ತನಗೆ ಸಿಕ್ಕ ಏಕಾಗ್ರತೆಯಿಂದಾಗಿ, ಲೇಖಕ ಬರೆಯಲು ಹೆಚ್ಚು ಸಮರ್ಥನಾಗುತ್ತಾನೆ. ಸೃಜನಶೀಲತೆ ಜಾಗೃತವಾಗುವುದೂ ಏಕಾಂತದಲ್ಲೇ.  ಅಲ್ಲದೇ, ಏಕಾಂತದಲ್ಲಿದ್ದಾಗ ಲೇಖಕ ತನ್ನ ಬರವಣಿಗೆಯ ಸಮಯವನ್ನ ಆನಂದಿಸುತ್ತಾನೆ. ಬರವಣಿಗೆಗಷ್ಟೇ ಅಲ್ಲ, ಯಾವುದೇ ಸೃಜನಾತ್ಮಕ ಕೆಲಸಕ್ಕೂ ಏಕಾಂತ ಅತ್ಯಗತ್ಯ.

ಬಹಳ ಜನ ಏಕಾಂತ ಮತ್ತು ಒಂಟಿತನಗಳ ನಡುವಿನ ವ್ಯತ್ಯಾಸ ತಿಳಿಯದೇ ಗೊಂದಲಕ್ಕೊಳಗಾಗುತ್ತಾರೆ.  ಏಕಾಂತ ತಾದಾತ್ಯ್ಮದತ್ತ ವ್ಯಕ್ತಿಯನ್ನು ಬೆಳೆಸುತ್ತದೆ. ಅದು ಸಾಹಿತ್ಯದ ಮೂಲಕವಾಗಿರಬಹುದು ಅಥವಾ ಯಾವುದೇ ಸೃಜನಾತ್ಮಕ ಕೆಲಸದ ಮೂಲಕವಾಗಿರಬಹುದು. ಆದರೆ ಒಂಟಿತನ ವ್ಯಕ್ತಿಯನ್ನು ನುಂಗುತ್ತಾ ಹೋಗುತ್ತದೆ. ಸಾವಿರಾರು ಜನರ ನಡುವೆ ಇದ್ದಾಗಲೂ ಒಂಟಿತನ ನಮ್ಮನ್ನು ಕಾಡಬಹುದು. ಆದರೆ ಒಂದು ದಿವ್ಯ ಏಕಾಂತಕ್ಕೆ ಬರಹಗಾರ ಸದಾ ಹಪಹಪಿಸುತ್ತಾನೆ. ನಾವೀಗ ಮಾತನಾಡಹೊರಟಿರುವುದು ಅಂತಹ ಏಕಾಂತದ ಬಗ್ಗೆ.  

ಕವಿರತ್ನ ಕಾಳಿದಾಸ ಬರೆಯುವ ಸಲುವಾಗಿಯೇ ಬೆಟ್ಟದ ತಪ್ಪಲುಗಳನ್ನೂ, ಸರೋವರದ ತಟಗಳನ್ನೂ ಅರಸಿ ಹೋಗುತ್ತಿದ್ದನಂತೆ. ಆತನ ಶಾಕುಂತಲೆ ಅಂತಹ ಏಕಾಂತಕ್ಕೊಲಿದ ಚೆಲುವೆ! ಗದುಗಿನ ನಾರಣಪ್ಪ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಆ ಒದ್ದೆ ಮೈಯಲ್ಲೇ ವೀರನಾರಾಯಣನ ಗುಡಿಯ ಕಂಬವೊಂದಕ್ಕೆ ಒರಗಿ ಕೂತು ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ್ದು. ಆ ದೇಗುಲದ ಘಂಟೆ ಢಂಡಣಗಳ ನಡುವಿನ ಮೌನದಲ್ಲೇ ಆತ ಕುಮಾರವ್ಯಾಸನಾದದ್ದು. ರಸಋಷಿ ಕುವೆಂಪು ಏಕಾಂತವಿಲ್ಲದೇ ಏನನ್ನೂ ಬರೆಯುತ್ತಿರಲಿಲ್ಲವಂತೆ. ಕುಪ್ಪಳಿಯ ಕವಿಶೈಲದ ಹಕ್ಕಿಕುಕಿಲುಗಳ ನಡುವಿನ ದಿವ್ಯಮೌನದಲ್ಲೋ, ಮಾನಸ ಗಂಗೋತ್ರಿಯ ಕಾರಿಡಾರಿನ ಚಪ್ಪಲಿ ಸದ್ದನ್ನು ಮೀರಿದ ಸ್ಟಾಫ್ ರೂಮಿನಲ್ಲೋ ಕೂತೇ ಅವರು ತಮ್ಮ ಸಾಹಿತ್ಯ ಸೃಷ್ಟಿಯಲ್ಲಿ ತೊಡಗುತ್ತಿದ್ದುದು. ಬೇಂದ್ರೆಯವರನ್ನು ಬಲ್ಲವರು ಹೇಳುವ ಪ್ರಕಾರ, ಸಾವಿರಾರು ಪುಸ್ತಕಗಳು, ವಿಜ್ಞಾನ-ಗಣಿತಕ್ಕೆ ಸಂಬಂಧಿಸಿದ ಚಿತ್ರವಿಚಿತ್ರ ಉಪಕರಣಗಳು ಕೂಡಿದ್ದ ಪ್ರಯೋಗಶಾಲೆಯಂತಹ ತಮ್ಮ ಕೊಠಡಿಯಲ್ಲಿ ಕೂತೋ ಅಥವಾ ಅಲ್ಲೇ ಇದ್ದ ಹಾಸಿಗೆಯಲ್ಲಿ ಮಲಗಿಯೋ ಅವರು ಬರೆಯುತ್ತಿದ್ದರಂತೆ. ಖ್ಯಾತ ಕಾದಂಬರಿಕಾರ ಚದುರಂಗರು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಲೇಖನಿ ಹಿಡಿಯುತ್ತಿದ್ದರಂತೆ. ಕತೆಗಾರ್ತಿ ವೈದೇಹಿಯವರಿಗೆ ಅಡುಗೆ ಮನೆಯಲ್ಲಿರುವ ಟೇಬಲ್ಲೇ ಏಕಾಂತವನ್ನು ಒದಗಿಸಿಕೊಡುವ ತಾಣ.

ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ನಮ್ಮನಮ್ಮ ಕೆಲಸ-ಕಾರ್ಯಗಳಲ್ಲಿ ಅವಿರತ ತೊಡಗಿಕೊಂಡಿರುವ ಕಾಲ. ಯಾರಿಗೂ ಪುರುಸೊತ್ತಿಲ್ಲ. ಬೆಳಗಾದರೆ ನೂರಾರು ಟೆನ್ಷನ್ನುಗಳು, ಕರೆಗಳು, ಕರಕರೆಗಳು. ಗಂಡ-ಹೆಂಡತಿ-ಮಕ್ಕಳು ಎಲ್ಲರೂ ಬೆಳಗಾಗುತ್ತಿದ್ದಂತೆಯೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಲಣಿಯಾಗುತ್ತಾರೆ. ಶಾಲೆ, ಆಫೀಸು, ಮಾರ್ಕೆಟ್ಟು, ಯಾರ ಜೊತೆಗೋ ಮೀಟಿಂಗು, ಎಲ್ಲೋ ಮಧ್ಯಾಹ್ನದ ಊಟ, ಮತ್ತೆಲ್ಲೋ ಸಂಜೆಯ ಕಾಫಿ, ದಟ್ಟ ಟ್ರಾಫಿಕ್ಕು, ಮುಗಿಯದ ಗೋಳುಗಳ ನಡುವೆ ಸಮಯವನ್ನು ಸಂಭಾಳಿಸುವುದೇ ದೊಡ್ಡ ಸವಾಲಾಗಿರುವ ಕಾಲ ಇದು. ಹೀಗಾಗಿ ಈ ಎಲ್ಲ ತರಾತುರಿಗಳ ನಡುವೆ ಏಕಾಂತವನ್ನು ಕಂಡುಕೊಳ್ಳುವುದು ಬಹಳ ಕಷ್ಟದ ವಿಷಯ. ಏಕಾಂತವೆಂಬುದು ಅತಿ ದುಬಾರಿಯಾಗಿರುವ ಕಾಲ ಇದು. ನಾವೀಗ ಪೆನ್ನು-ಹಾಳೆಯಲ್ಲಿ ಬರೆಯುತ್ತಿಲ್ಲ; ಲ್ಯಾಪ್‌ಟಾಪಿನಲ್ಲಿ  ನೇರವಾಗಿ ಟೈಪಿಸುತ್ತಿದ್ದೇವೆ. ರಸ್ತೆಯಲ್ಲೇ ನಿಂತು ಸ್ಮಾರ್ಟ್‌ಫೋನು-ಟ್ಯಾಬ್ಲೆಟ್ಟುಗಳಲ್ಲಿ ಬರೆದು ತಲುಪಬೇಕಾದಲ್ಲಿಗೆ ಕಳುಹಿಸುತ್ತಿದ್ದೇವೆ. ಕೃತಕ ಏಕಾಂತವೊಂದನ್ನು ಸೃಷ್ಟಿಸಿ ಕುಳಿತುಕೊಂಡರೂ ಫೋನು ರಿಂಗಾಗುತ್ತದೆ, ಮೊಬೈಲಿಗೆ ಎಸ್ಸೆಮ್ಮೆಸ್ ಬರುತ್ತದೆ, ವಾಟ್ಸಾಪಿನಲ್ಲಿ ಮತ್ತೇನೋ ಬರುತ್ತದೆ, ಇನ್ಯಾವುದೋ ನೋಟಿಫಿಕೇಶನ್ನು ಟಿಂಗೆನ್ನುತ್ತದೆ, ಹೊಸ ಮೇಯ್ಲ್ ಬಂತು ಅಂತ ಲ್ಯಾಪ್‌ಟಾಪ್ ಸದ್ದು ಮಾಡುತ್ತದೆ... ಹೀಗೆ ನಮ್ಮ ಏಕಾಂತವನ್ನೂ, ಏಕಾಗ್ರತೆಯನ್ನೂ ಭಂಗ ಮಾಡಲೆಂದೇ ನೂರಾರು ತರಹದ ಅಡೆತಡೆಗಳು ಇರುವ ಕಾಲ ಇದು. 

ಹೀಗಿದ್ದಾಗಲೂ ಸೃಜನಶೀಲತೆಯ ಅಭಿವ್ಯಕ್ತಿ ಆಗುತ್ತಿದೆ ಎಂಬುದು ಸೋಜಿಗದ, ಸಂತೋಷದ ಸಂಗತಿ.  ಆಫೀಸಿನ ಐದು ನಿಮಿಷದ ಬಿಡುವಿನ ಸಮಯದಲ್ಲಿ ಒಂದು ಪುಟ್ಟ ಕವಿತೆ ಬರೆದು  ಫೇಸ್‌ಬುಕ್ಕಿಗೆ ಹಾಕುತ್ತೇವೆ. ಲಂಚ್ ಅವರಿನಲ್ಲಿ ಸಿಕ್ಕ ಬಿಡುವಿನಲ್ಲಿ ಒಂದು ಬ್ಲಾಗ್‌ಪೋಸ್ಟ್ ತಯಾರಾಗುತ್ತದೆ. ಟ್ರಾಫಿಕ್ ಜಾಮಿನಲ್ಲಿ ಸಿಲುಕಿ ಮುಂದೆ ಹೋಗಲಾಗದಂತೆ ಬಂಧಿಯಾದ ಕ್ಷಣದಲ್ಲಿ ಯಾರದೋ ಬರಹಕ್ಕೆ ಪ್ರತಿಕ್ರಿಯೆ ಜೋಡಿಸುತ್ತೇವೆ. ವಾಟ್ಸಾಪಿನ ಗ್ರೂಪಿನಲ್ಲಿ ಯಾರೋ ಬರೆದ ಕತೆಯನ್ನು ಮುಂದುವರೆಸುತ್ತೇವೆ.  ಹೀಗೆ, ಬರವಣಿಗೆಗೆ ಏಕಾಂತ ಅತ್ಯಗತ್ಯ ಎಂಬ ನಿಲುವು ಬದಲಾಗಿದೆಯಾ ಎಂಬ ಅನುಮಾನ ಬರುವ ಕಾಲ ಇದು. ಅಥವಾ, ‘ಏಕಾಂತ ಎಂಬ ಶಬ್ದದ ವ್ಯಾಖ್ಯಾನವೇ ಬದಲಾಗಿರಬಹುದು. ಒಂದೆರಡು ನಿಮಿಷದ ಬಿಡುವಿನಲ್ಲಿ ನಮ್ಮ ಸುತ್ತ ನಾವೇ ಒಂದು ಸಣ್ಣ ಏಕಾಂತವನ್ನು ಆವಾಹಿಸಿಕೊಂಡು ಬರವಣಿಗೆಯಲ್ಲಿ ತೊಡಗಿಕೊಳ್ಳುವಲ್ಲಿ ನಾವು ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದೇವೆ.

ಹತ್ತಾರು ಪತ್ರಿಕೆಗಳು, ನೂರಾರು ವೆಬ್‌ಸೈಟುಗಳು, ಸಾವಿರಾರು ಬ್ಲಾಗುಗಳು, ನಮ್ಮ ಅಭಿವ್ಯಕ್ತಿಯನ್ನು ಹಂಚಿಕೊಳ್ಳಲೆಂದೇ ಇರುವ ಅದೆಷ್ಟೋ ಸಾಮಾಜಿಕ ಜಾಲತಾಣಗಳು ಇರುವ ಕಾಲ ಇದು. ಇವೆಲ್ಲವೂ ನಮ್ಮಿಂದ ಬರಹವನ್ನೋ, ವಿಚಾರ ಮಂಥನವನ್ನೋ ಅಥವಾ ಮತ್ಯಾವುದೇ ಸೃಜನಶೀಲ ಸೃಷ್ಟಿಯನ್ನೋ ಬಯಸುತ್ತವೆ. ನಾವು ಬರೆದದ್ದನ್ನು ಮರು ಕ್ಷಣದಲ್ಲೇ ಲಕ್ಷಾಂತರ ಜನರಿಗೆ ಓದಲು ತೆರೆದಿಡಲು ಈಗ ಸಾಧ್ಯವಿದೆ. ಪತ್ರಿಕೆಗಳಿಗೆ ಅಂಕಣ ಬರೆಯುವ ಅಂಕಣಕಾರರನ್ನು ಮಾತನಾಡಿಸಿ ನೋಡಿ: ಇವತ್ತೊಂದು ಪತ್ರಿಕೆಗೆ, ನಾಳೆ ಮತ್ತೊಂದು ಪತ್ರಿಕೆಗೆ ಅಂತ ಬರೆಯುತ್ತಲೇ ಇರುತ್ತಾರೆ. ಅವರಿಗೆ ಅಷ್ಟೊಂದು ಸಾಮಗ್ರಿ, ಬರೆಯಲು ಬೇಕಾದ ಏಕಾಂತ ಎಲ್ಲಿಂದ ಸಿಗುತ್ತದೆ? ಅವರೂ ತಮ್ಮ ಕೆಲಸದ ಬಿಡುವಿನ ಸಮಯದಲ್ಲೇ ಬರೆಯುವವರು. ಟೀವಿ ಚಾನೆಲ್ಲುಗಳಲ್ಲಂತೂ ದಿನಂಪ್ರತಿ ಧಾರಾವಾಹಿಗಳು. ಈ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವವರನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇವರು ದಿನವಿಡೀ ಬರೆಯುತ್ತಲೇ ಇರುತ್ತಾರೆ! ನಾಳಿನ ಸಂಚಿಕೆಗೆ ಇಂತಿಷ್ಟು ಬೇಕು ಅಂತ ಹೇಳಿಬಿಟ್ಟರೆ ಸಾಕು, ಇವರು ತಕ್ಷಣ ಕಾರ್ಯೋನ್ಮುಖರಾಗಿ ಹಗಲು-ರಾತ್ರಿ  ಬರೆದು ಕಳುಹಿಸಿಯೇಬಿಡುತ್ತಾರೆ. ಎಲ್ಲೇ ಇರಲಿ, ಹೇಗೇ ಇರಲಿ, ಶೂಟಿಂಗ್ ಸ್ಥಳದಲ್ಲಿಯೇ ದಿಢೀರ್ ಬರೆಯಬಲ್ಲರು, ಎಲ್ಲೋ ಪ್ರವಾಸ ಹೋಗಿದ್ದಾಗ ಕರೆ ಬಂದರೆ ಅಲ್ಲೇ ಬರೆಯಲು ಕೂತುಬಿಡುವರು, ಅಕ್ಷರಶಃ ಸಂತೆಯಲ್ಲೂ ಬರೆಯಬಲ್ಲರು. ಇವನ್ನೆಲ್ಲ ನೋಡಿದಾಗ, ಬರವಣಿಗೆಯು ಕೇವಲ ಏಕಾಂತದಲ್ಲಿ ಮಾತ್ರ ಅರಳುವ ಹೂವಲ್ಲ, ಅದೊಂದು ಮಾನಸಿಕ ಸ್ಥಿತಿ ಅಂತ ಅನಿಸೋಕೆ ಶುರುವಾಗುತ್ತದೆ. ಇತ್ತೀಚಿಗೆ ವಿಫುಲವಾಗಿ ಬರೆಯುತ್ತಿರುವ ಖ್ಯಾತ ಸಾಹಿತಿ ಜೋಗಿ, ಧಾರಾವಾಹಿಗೆ ಸಂಭಾಷಣೆ, ಸಿನೆಮಾಗೆ ಚಿತ್ರಕತೆ, ಮತ್ಯಾವುದೋ ಚಿತ್ರಕ್ಕೆ ಹಾಡು, ಎರಡ್ಮೂರು ಪತ್ರಿಕೆಗಳಿಗೆ ಅಂಕಣ, ಇವೆಲ್ಲದರ ಜತೆಗೆ ತಮ್ಮ ವೃತ್ತಿಯ ಪತ್ರಕರ್ತನ ಜವಾಬ್ದಾರಿಯನ್ನೂ ನಿಭಾಯಿಸುತ್ತಾರೆ. “ಇದೆಲ್ಲ ಹೇಗೆ ಸಾಧ್ಯ?” ಅಂತ ಅವರನ್ನು ಕೇಳಿ ನೋಡಿ: “ಬರೀಬೇಕು ಅಂದ್ಕೊಂಡ್ರೆ ಎಲ್ಲಾ ಸಾಧ್ಯ” ಅಂತ ಕಣ್ಣು ಹೊಡೆಯುತ್ತಾರೆ. ಕಥೆಗಾರ ವಸುಧೇಂದ್ರ ತಮ್ಮ ಕಾರಿನ ಹಿಂದಿನ ಸೀಟಿನಲ್ಲೇ ಕೂತು ಅದ್ಭುತ ಕತೆ-ಕಾದಂಬರಿಗಳನ್ನು ಬರೆಯುವರು. ಅದಕ್ಕೆಂದೇ ಬೆಂಗಳೂರಿನ ಟ್ರಾಫಿಕ್ಕಿಗೇ ತಮ್ಮ ಪುಸ್ತಕವೊಂದನ್ನು ಅವರು ಅರ್ಪಿಸಿದ್ದಾರೆ!

ಖ್ಯಾತ ಪತ್ರಕರ್ತ ಮತ್ತು ಬರಹಗಾರ ವಿಶ್ವೇಶ್ವರ ಭಟ್ಟರಿಗೆ ಒಬ್ಬ ಹುಡುಗಿ ಹೀಗೊಂದು ಪ್ರಶ್ನೆ ಕೇಳಿದಳಂತೆ:ನನಗೆ ಲಕ್ಷಣವಾದ ಕೆಲಸ, ಸಂಬಳ ಇದೆ. ಆದರೆ ಅದರ ಜೊತೆಗೆ ನನಗಿಷ್ಟವಾದ ಸೃಜನಶೀಲ ಬರವಣಿಗೆಯ ಕೆಲಸ ಮಾಡಬೇಕು ಎನಿಸುತ್ತಿದೆ. ಆದರೆ ಮನೆಯಲ್ಲಿ ಕುಳಿತು ಮಾಡಲು ಆಗುತ್ತಿಲ್ಲ. ಮನೆಯಲ್ಲಿ ಬರೆಯಲು ಪ್ರೈವೆಸಿ ಇಲ್ಲ. ಇತರ ಮನೆಕೆಲಸಗಳಲ್ಲೇ ಸಮಯ ಹೋಗುತ್ತದೆ. ಹುಡುಗಿಯಾಗಿದ್ದರಿಂದ ಮನೆಯಿಂದ ಬೇರೆಯಾಗಿ ಒಬ್ಬಳೇ ಇರಬೇಕು ಎನ್ನುವ ಆಸೆಗೆ ಅಡ್ಡಿಯಾಗುತ್ತಿದೆ. ಇದರ ಜೊತೆ ಮನೆಯಲ್ಲಿ ಮದುವೆಯ ಒತ್ತಡ. ಏನು ಮಾಡಲಿ?”.  ಇದಕ್ಕೆ ವಿಶ್ವೇಶ್ವರ ಭಟ್ಟರು ಕೊಟ್ಟ ಉತ್ತರ ಆಸಕ್ತಿಕರವಾಗಿದೆ: “ಸೃಜನಶೀಲತೆಗೆ ಚೌಕಟ್ಟು ಎಂಬುದಿಲ್ಲ. ಕ್ರಿಯಾಶೀಲ ಮನಸ್ಸು ಯಾವುದೇ ನೆಪವನ್ನು ಒಡ್ಡುವುದಿಲ್ಲ. ಬರವಣಿಗೆಯ ತುಡಿತ ಎಂಬುದು ಏಕಾಂತದಲ್ಲಷ್ಟೇ ಅರಳುವ, ಒಲಿಯುವ ದೇವರಲ್ಲ. ಅದೊಂದು ಸಮಾಧಿ ಸ್ಥಿತಿ. ನಿನ್ನೊಳಗಿನ ತುಡಿತ ಅಷ್ಟೊಂದು ಬಲವಾದದ್ದೇ ಆದರೆ ಜಗತ್ತೇ ಮುಳುಗಿ ಹೋದರೂ ಗೊತ್ತಾಗದಂತೆ ನೀನು ನಿನ್ನ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯ. ಅಂಥದ್ದೊಂದು ಏಕಾಗ್ರತೆ, ಇಚ್ಛಾಶಕ್ತಿ, ಛಲವನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಅದೆಷ್ಟೋ ಪತ್ರಕರ್ತರು ಸಂತೆಯಲ್ಲೇ ಕುಳಿತು ಸುದ್ದಿ ನೇಯಬೇಕಾದ ಅನಿವಾರ್ಯತೆ ಎದುರಿಸುತ್ತಿರುತ್ತಾರೆ. ನಿನ್ನ ಹಾಗೆ ಅವರೂ ಏಕಾಂತ ಬೇಕು ಎಂದು ಕುಳಿತರೆ ಯಾವ ಪತ್ರಿಕೆಗಳೂ ಪ್ರಕಟವಾಗುವುದೇ ಇಲ್ಲ. ಇರುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಜಾಣತನ ಮೆರೆಯಬೇಕು. ಮದುವೆಯಾದ ಮಾತ್ರಕ್ಕೆ ಸೃಜನಶೀಲ ಬರವಣಿಗೆಗೆ ಧಕ್ಕೆ ಬರುತ್ತದೆ ಎಂಬುದು ನಿನ್ನ ಭ್ರಮೆ ಅಷ್ಟೇ. ನಿನ್ನನ್ನು ನೀನು ಮೊದಲು ಸಂಭಾಳಿಸಿಕೋ. ಪಟ್ಟಾಗಿ ಬರೆಯಲು ಕುಳಿತರೆ, ಅಕ್ಷರಗಳು ತಂತಾನೇ ಮೂಡುತ್ತವೆ.”


ಹೀಗಾಗಿ ಬರವಣಿಗೆಗೆ ಏಕಾಂತ ಬೇಕೇ ಅಥವಾ ಬೇಡವೇ ಎಂಬುದು ಅವರವರಿಗೆ ಬಿಟ್ಟ ವಿಚಾರವಾಗಿದೆ ಈಗ. ಸಂತೆಯಲ್ಲೂ ಕೂತು ಬರೆಯುವವರೂ, ಸಣ್ಣ ಕ್ಷೋಭೆಯಾದರೂ ಮೂಡು ಹಾಳಾಗಿ ಬರೆಯಲಾಗದವರು –ಇಬ್ಬರೂ ಈಗ ಒಟ್ಟಿಗೇ ಇದ್ದಾರೆ. ಈ ಇಬ್ಬರನ್ನೂ ಕೇಳಿ ನೋಡಿ: ಎಲ್ಲಾ ಅವರವರ ಮನಸ್ಥಿತಿ ಅಂತ ಉತ್ತರಿಸುತ್ತಾರೆ! ಬಹುಶಃ ಅದೇ ಸತ್ಯವೇನೋ? ಬರವಣಿಗೆಗೆ ಏಕಾಂತವೆಂಬುದು ಅಗತ್ಯವಲ್ಲ, ಆಯ್ಕೆಯಷ್ಟೇ ಅಂತ ನಮ್ಮ ವಾದವನ್ನು ಮುಗಿಸಬಹುದೇನೋ.
***

(16-05-2016 ರಂದು ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಭಾಷಣ)

ಶುಕ್ರವಾರ, ಮೇ 13, 2016

ಪಟ್ಟರೆ ಪಾಡು, ಕಲಿತರೆ ಪಾಠ!

ಜೀವನ ಕೆಲವರಿಗೆ ಮತ್ತೆ ಮತ್ತೆ ಅವಕಾಶಗಳನ್ನ ಕೊಡುತ್ತಲೇ ಇರುತ್ತದೆ. ಕೆಲವರಿಗೆ ಅವಕಾಶ ಬಂದಿದ್ದೇ ತಿಳಿಯದಿದ್ದರೆ, ಇನ್ಕೆಲವರು ಬಂದ ಅವಕಾಶಗಳನ್ನೇ ಸಂಪೂರ್ಣ ಬಳಸಿ ಬದುಕನ್ನ ಕಟ್ಟಿಕೊಳ್ಳುತ್ತಾರೆ. ನಾನು ಚಿಕ್ಕವಳಿದ್ದಾಗ, ನಾವಿದ್ದ ಮನೆಯ ಪಕ್ಕದ ಮನೆಯಲ್ಲಿ ನಾಲ್ಕು ಜನ ಮಕ್ಕಳು ಹಾಗೂ ತಂದೆತಾಯಿ ಇರುವ ಒಂದು ಕುಟುಂಬ ವಾಸವಾಗಿತ್ತು. ತಂದೆ ಇಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದರು. ತಾಯಿ ಮನೆಗೆಲಸ. ಹುಡುಗರಿನ್ನೂ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದರು. ಅಂಥಾ ಸ್ಥಿತಿವಂತರೇನೂ ಅಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೆ ಕಡಿಮೆ ಇರಲಿಲ್ಲ. ಎಲ್ಲವೂ ಚನ್ನಾಗೇ ಇದೆ ಅಂದುಕೊಳ್ಳುವಾಗ, ಒಂದು ದಿನ ಅಚಾನಕ್ಕಾಗಿ ಮನೆಯ ಯಜಮಾನ ಅಪಘಾತದಲ್ಲಿ ತೀರಿಕೊಂಡುಬಿಟ್ಟರು. ಕೂಡಿಟ್ಟ ಹಣ ಕುಂತು ಉಣ್ಣಲು ಸಾಕಾಗಿರಲಿಲ್ಲ. ಮಕ್ಕಳು ಬೇರೆ ಚಿಕ್ಕವರು. ಯಜಮಾನಿಗೆ ಹೊರಗಿನ ಕೆಲಸಗಳಾವುದೂ ಬರುವುದಿಲ್ಲ. ಬಂಧುಮಿತ್ರರು ಸಹಾಯಕ್ಕೆ ಬರಲಿಲ್ಲ. ದಿಕ್ಕೇ ತೋಚದಾಯಿತು ಅವಳಿಗೆ. ಮೊದಲಿಂದಲೂ ಏನಾದರೂ ಮಾಡಬೇಕು ಎಂದು ಕನಸು ಕಂಡಿದ್ದ ಅವಳಿಗೆ, ಈಗ ಏನಾದರೂ ಮಾಡುವುದು ಅನಿವಾರ್ಯವಾಗಿತ್ತು.

ಹೀಗೇ ಒಂದು ಮಧ್ಯಾಹ್ನ ಮಕ್ಕಳು ಶಾಲೆಗೆ ಹೋದ ವೇಳೆಗೆ ಏನೋ ಹೊಳೆದು, ತಕ್ಷಣ ಪಕ್ಕದಲ್ಲೇ ಇದ್ದ ಕಿರಾಣಿ ಅಂಗಡಿಯಿಂದ ಹಪ್ಪಳ ಮಾಡಲು ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ಮನೆಯಲ್ಲೇ ಹಪ್ಪಳ ತಯಾರಿಸಿದಳು. ಮಕ್ಕಳೂ ಬಿಡುವಿನ ವೇಳೆಯಲ್ಲಿ ಅವಳ ಸಹಾಯಕ್ಕೆ ನಿಂತರು. ಹತ್ತಿರವಿರುವ ಒಂದು ನಾಲ್ಕು ಅಂಗಡಿಗಳಿಗೆ ಖಾಯಂ ಹಪ್ಪಳ ಮಾರುವುದಕ್ಕೆ ಮಾತಾಡಿದಳು. ಕೈಗೆ ಒಂದಷ್ಟು ಕಾಸೂ ಆಯಿತು, ಮನಸಿಗೆ ನೆಮ್ಮದಿ, ವಿಶ್ವಾಸಗಳೂ ದೊರಕಿತು! ಈಗ ಅವಳ ಕೈ ಕೆಳಗೆ ಸುಮಾರು ಇಪ್ಪತ್ತು ಜನ ಮಹಿಳೆಯರು ಕೆಲಸ ಮಾಡುತ್ತಾ, ಅವರ ಬದುಕಿಗೊಂದು ದಾರಿ ದೀಪವಾಗಿದ್ದಾರೆ.

ಇದು ಒಂದು ಕಥೆಯಾದರೆ, ಮುಕ್ತ ಎಂಬುವಳ ಕಥೆ ಇನ್ನೊಂದು ರೀತಿಯದ್ದು. ಅವರು ಹೇಳುವಂತೆ, ಅವರಿಗೆ ಜೀವನದಲ್ಲಿ ಏನಾದರೂ ಮಹತ್ವದ್ದನ್ನ ಸಾಧಿಸಬೇಕು ಎಂಬ ಕನಸೊಂದಿತ್ತು. ನಾನು ಪದವಿ ಮುಗಿಸಿದ ತಕ್ಷಣವೇ ಒಂದು ಉನ್ನತ ಕಂಪನಿಯಲ್ಲಿ ಕೆಲಸ ಸಿಕ್ಕಿತು. ನಾನಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಅಪ್ಪ-ಅಮ್ಮ ಸ್ವಲ್ಪ ದಿನಗಳಾದರೂ ಮನೆಯಲ್ಲಿ ಬಂದಿರಲು ಹೇಳಿದರು. ಚಿಕ್ಕಂದಿನಿಂದಲೂ ಬೋರ್ಡಿಂಗ್ ಶಾಲೆಯಲ್ಲೇ ಕಲಿತ ನನಗೂ ಮದುವೆ ಆಗೋಕೂ ಮುಂಚೆ ಅಪ್ಪ ಅಮ್ಮರ ಜೊತೆ ಕಾಲ ಕಳೆಯೋ ಆಸೆಯಾಗಿ ಕೆಲಸಕ್ಕೆ ವಿದಾಯ ಹೇಳಿದೆ. ಮನೆಯಲ್ಲಿ ಇರುವ ವೇಳೆಯಲ್ಲೆಲ್ಲಾ ನನಗೆ ಏನಾದರೂ ಮಾಡಬೇಕು ಅಂತ ಮನಸು ತುಡಿತಲೇ ಇತ್ತು. ಹೀಗಿರುವಾಗ ಒಂದು ದಿನ ನನ್ನ ತಂದೆಯ ಸ್ನೇಹಿತರೊಬ್ಬರು ತಾವು ಹೊಸಾ ಶಾಲೆ ಕಟ್ಟಿಸುತ್ತಿರುವ ವಿಷಯ ತಿಳಿಸಿದರು. ಹೇಗೂ ಶಾಲೆ ಆಗತಾನೇ ಶುರು ಆಗುತ್ತಿದ್ದರಿಂದ ನನಗ್ಯಾವ ತರಬೇತಿಯ ಅವಶ್ಯಕತೆ ಇರಲಿಲ್ಲ. ಅಂತರ್ಜಾಲದಲ್ಲಿ ಸಿಗಬಹುದಾದ ಮಾಹಿತಿಯನ್ನು ಕಲೆ ಹಾಕುವುದರ ಜೊತೆಜೊತೆಗೆ, ಬೇರೆ-ಬೇರೆ ಶಾಲೆಗಳಲ್ಲಿ ಬಳಸುವ ಕಲಿಕಾ ವಿಧಾನ ಮತ್ತದರ ಅಳವಡಿಸುವಿಕೆಯ ತಂತ್ರಗಳ ಬಗ್ಗೆ ತಿಳಿದುಕೊಳ್ಳತೊಡಗಿದೆ.

ಕಲೆ ಎಂದರೆ ನನಗೆ ಬಹಳ ಆಸಕ್ತಿ. ನಾನು ಓದಿದ ಪದವಿ ಕಲೆಗೆ ಸಂಬಂಧವಿಲ್ಲದಿದ್ದರೂ, ಕಲೆ ನನ್ನ ಹೃದಯಕ್ಕೆ ಹತ್ತಿರವಿತ್ತು. ವಿವಿಧ ಬಗೆಯ ಕೈಗಾರಿಕೆಗಳು ನನಗೆ ತಿಳಿದಿದ್ದವು. ಕೆಲವೊಮ್ಮೆ ಶಾಲೆಗೆ ಹೋಗಿ ಮಕ್ಕಳಿಗೆ ಸುಲಭದ ಕೈಗಾರಿಕೆಗಳನ್ನ ಹೇಳಿಕೊಡುತ್ತಿದ್ದೆ. ಮಕ್ಕಳ ಸಂತಸ ನೋಡಿ ಮನಸ್ಸು ಅರಳ್ತಾ ಇತ್ತು. ನನ್ನ ಮದುವೆ ಆದಬಳಿಕ, ನನ್ನ ಕುಟುಂಬದವರಿಗೆ ನಾನು ಹೊರಗೆ ಹೋಗಿ ದುಡಿಯುವುದು ಇಷ್ಟವಿರಲಿಲ್ಲ. ಹಾಗಾಗಿ ನಾನು ಮನೆ ಕೆಲಸಗಳ ಮುಗಿಸುತ್ತಾ, ಬಿಡುವಾದಾಗಲೆಲ್ಲಾ ನನ್ನಲ್ಲಿರುವ ಕಲೆಯನ್ನು ಜೀವಂತವಾಗಿಟ್ಟುಕೊಳ್ಳಲು ಏನಾದರೂ ಮಾಡುತ್ತಲೇ ಇದ್ದೆ. ಮನೆಗೆಂದು ಅಲಂಕಾರಿಕ ವಸ್ತುಗಳನ್ನ ಮಾಡಿದೆ, ಗೆಳೆಯರಿಗೆ ಉಡುಗೊರೆಯಾಗಿ ಕೊಟ್ಟೆ. ಜನ ನನ್ನ ಕೆಲಸ ಇಷ್ಟಪಡೋಕೆ ಶುರು ಮಾಡಿದ್ದು ನನ್ನಲ್ಲಿ ಹೊಸಾ ಉತ್ಸಾಹ ಕೊಟ್ಟಿತು. ಮಗಳು ಹುಟ್ಟುವವರೆಗೂ ಇದನ್ನೇ ಮಾಡಿದೆ.

ಆಸ್ಚರ್ಯ ಅನ್ನೋ ಹಾಗೆ, ನನ್ನ ಮಗಳಿಗೂ ಕೈಗಾರಿಕೆಯೆಂದರೆ ಇಷ್ಟ! ಅವಳು ಮಾಡಿದ ಕೈಗಾರಿಕೆಯನ್ನ ವೀಡಿಯೋ ಮಾಡಿ ಯು ತ್ಯುಬ್ಗೆ ಹಾಕಿದೆ. ಒಂದು ವರ್ಷದ ಕೂಸು ಮಾಡುವ ಕೈಗಾರಿಕೆಯನ್ನ ಜನರೂ ಇಷ್ಟಪಟ್ಟರು. ವೀಡಿಯೋ ನೋಡಿ ಒಂದು ಖಾಸಗಿ ಚಾನಲ್ನವರು ವಾರಕ್ಕೊಂದು ವೀಡಿಯೋ ಹಂಚಿಕೊಳ್ಳುವಂತೆ ಕೋರಿಕೊಂಡರು. ಇದ್ಯಾವುದರ ನಿರೀಕ್ಷೆಯೂ ಇಲ್ಲದ ನನ್ನ ಸಂತೋಷಕ್ಕೇ ಪಾರವೇ ಇಲ್ಲ. ನಾನೀಗ ಮನೆಯಲ್ಲೇ ಕುಳಿತು ನನ್ನ ಕೈಗಾರಿಕೆಗಳನ್ನ ಮಾರುತ್ತೇನೆ. ಹಲವು ಮಕ್ಕಳಿಗೆ ಮನೆಯಲ್ಲೇ ತರಬೇತಿ ಕೊಡುತ್ತೇನೆ. ಹೊಸ ವಿಚಾರಗಳನ್ನ ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತೇನೆ. ಎಲ್ಲದಕ್ಕಿಂತ ಮುಖ್ಯವಾಗಿ ನಾನು ನನ್ನ ಮಗಳ ಜೊತೆಯೂ ಕಾಲ ಕಳೆಯುತ್ತಾ, ಮನೆ ಕೆಲಸ ಮಾಡಿಕೊಳ್ಳುತ್ತಾ, ನನ್ನ ಕನಸುಗಳಿಗೂ ನೀರೆರೆಯುತ್ತಿದ್ದೇನೆ. ಒಮ್ಮೊಮ್ಮೆ ಅನ್ನಿಸುತ್ತೆ, ನನ್ನ ಸ್ನೇಹಿತರು ವೃತ್ತಿಯಲ್ಲಿ ನನ್ನಕ್ಕಿಂತ ಬಹಳ ಮುಂದಿರಬಹುದು. ಆದರೂ ಯಶಸ್ಸು ಅನ್ನೋದು ಕೇವಲ ವೃತ್ತಿ ಬದುಕು ಮಾತ್ರವಲ್ಲವಲ್ಲ. ನಮ್ಮ ಸುತ್ತಮುತ್ತಲಿನವರು ನಮ್ಮಿಂದಾಗಿ ಎಷ್ಟು ಸಂತಸವಾಗಿದ್ದಾರೆ ಅನ್ನೋದು ಮುಖ್ಯವಾಗುತ್ತೆ ಎನ್ನುತ್ತಾ ಒಂದು ಮಂದಹಾಸ ಮುಖದ ಮೇಲೆ ಹಾದುಹೋಗುತ್ತೆ.

ಹೀಗೇ, ಹೇಳುತ್ತಾ ಹೋದರೆ ಇಂಥ ಎಷ್ಟೋ ಕಥೆಗಳು ಸಿಗುತ್ತವೆ. ಒಂದು ಬಾಗಿಲು ಮುಚ್ಚಿದಂತೆ ಕಂಡರೂ ಇನ್ನೆಲ್ಲೋ ಬಾಗಿಲು ನಮಗಾಗಿಯೇ ತೆರೆದಿರುತ್ತದೆ. ಬದುಕಿನಲ್ಲಿ ಬರುವ ಸಣ್ಣಾ-ಪುಟ್ಟ ಅವಕಾಶಗಳನ್ನ ಸರಿಯಾಗಿ ಬಳಸಿಕೊಂಡು, ಅದರಿಂದಲೇ ಏನು ಬೇಕಾದರೂ ಸಾಧಿಸಬಹುದು. ಅಥ್ವ, ಕಾರಣಗಳನ್ನ ಕೊಡುತ್ತಾ ಸುಮ್ಮನೇ ಕೂತುಬಿಡಬಹುದು. ಆಯ್ಕೆ ನಿಮ್ಮದು! ಏನಂತೀರಿ?

***
(ಮಾರ್ಚ್ 16, 2016 ಉದಯವಾಣಿ ಅವಳುನಲ್ಲಿ ಪ್ರಕಟಿತ ಬರಹ )

ಬುಧವಾರ, ಮಾರ್ಚ್ 02, 2016

ದುರ್ಗಾಸ್ತಮಾನ ಓದಿದೆ!
ಕಪಾಟಿನೊಳಗಿನ ಪುಸ್ತಕಗಳು

ಪುಟ ತೆರೆದವು

ಚಿತ್ರದುರ್ಗದ ಇತಿಹಾಸವಾದವರು

ಮತ್ತೆ ಜೀವಂತ ಬಂದರು

ಹಂಗೊ-ಹಿಂಗೋ-ಹೆಂಗೋ

ಕಳೆಧ್ಹೋಗೋ ನನ್ನ ಕ್ಷಣಗಳು

ಸುಂದರವಾದವು


ಸತತವಾಗಿ ಒಂದು ತಿಂಗಳ ಕಾಲ ತ.ರಾ.ಸು ಅವರು ಚಿತ್ರದುರ್ಗದ ಇತಿಹಾಸದ ಬಗ್ಗೆ ಬರೆದ ಕಾದಂಬರಿಗಳನ್ನು ಓದಿ ಮುಗಿಸಿದೆ. ಕಂಬನಿಯ ಕುಯಿಲಿನಿಂದ ಶುರು ಮಾಡಿ, ದುರ್ಗಾಸ್ತಮಾನದ ಒರೆಗೂ ಚೂರೂ ಬೇಸರವಾಗದೆ, ಬದಲಿಗೆ ತ.ರಾ.ಸು ಅವರ ಮೇಲೇ ಪ್ರೀತಿ ಹುಟ್ಟುವಂತೆ ಮಾಡಿ ನನ್ನನ್ನಾವರಿಸಿದ ಈ ಒಂದು ತಿಂಗಳು ನನ್ನ ಮಟ್ಟಿಗೆ ತಿಳಿ ಬೆಳದಿಂಗಳಿನಂಥವು.

ಸಾಧಾರಣವಾಗಿ ಬರೀ ಇತಿಹಾಸ ಓದುವುದು ಸ್ವಲ್ಪ ಬೇಸರದ ಕೆಲಸ ನನಗೆ. ಆದರೆ ಆ ಇತಿಹಾಸ ಒಂದು ಕಥೆರೂಪದಲ್ಲಿ ದೊರೆತರೆ? ಅದನ್ನೆ ತ.ರಾ.ಸು ಅವರು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಕಂಬನಿಯ ಕುಯಿಲು, ರಕ್ತ ರಾತ್ರಿ, ತಿರುಗು ಬಾಣ, ಹೊಸ ಹಗಲು, ವಿಜಯೋತ್ಸವ, ರಾಜ್ಯ ದಾಹ, ಕಸ್ತೂರಿ ಕಂಕಣ, ದುರ್ಗಾಸ್ತಮಾನ ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿ ಹಾಗೂ ಆಸಕ್ತಿಕರವಾಗಿವೆ. ಇದೊಂದು ಅದ್ಭುತ ಪಯಣ!

ಎಲ್ಲಾ ಪುಸ್ತಕಗಳ ಬಗೆಗೆ ಬರಿಯೋ ಆಸೆ ಇದ್ದರೂ, ನನ್ನ ಬಹಳವಾಗಿ ಸೆಳೆದ, ಕಾಡಿದ, ಕಣ್ತೇವಗೊಳಿಸಿ ಇಷ್ಟವಾದ ಕಾದಂಬರಿ "ದುರ್ಗಾಸ್ತಮಾನ". ಆರಂಭದಲ್ಲಿ ಲೇಖಕರು ಹೇಳುವಂತೆ - ’ಚಿತ್ರದುರ್ಗ’_’ಮದಕರಿನಾಯಕ’ ಬೇರೆಬೇರೆಯಲ್ಲ. ಒಂದೇ ಎಂಬ ಅವಿನಾಭಾವ. ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ. ಈ ಮಾತು ಎಷ್ಟು ನಿಜ ಎಂದು ಕಾದಂಬರಿ ಓದುತ್ತಾ ಹೋದ ಹಾಗೆ ನಿಧಾನಕ್ಕೆ ಸುರುಳಿ ಬಿಚ್ಚುತ್ತಾ ಹೋಗುತ್ತದೆ.

ಹಿರಿಯ ಮದಕರಿ ನಾಯಕ ಹಾಗೂ ಓಬವ್ವ ನಾಗತಿಯ ಮಗನಾದ ಕಸ್ತೂರಿ ರಂಗಪ್ಪ ನಾಯಕರ ಸಾವಿನಿಂದ ಶುರುವಾಗಿ, ಮದುವೆ ಆಗದ ನಾಯಕರ ಸಾವಿನ ನಂತರ ದುರ್ಗಕ್ಕೆ ನಾಯಕರು ಯಾರು ಎಂಬ ಬಿಕ್ಕಟ್ಟು ಮತ್ತು ಅವರ ಸಾವಿನ ದುಃಖದ ಜೊತೆಜೊತೆಯಲ್ಲೆ ಕಥೆ ಆರಂಭವಾಗುತ್ತದೆ. ಇದರ ಚರ್ಚೆಗೆ ಸಭೆ ಸೇರಿಸಿ ಓಬವ್ವ ನಾಗತಿಯ ಆಯ್ಕೆಯಾಗಿ, ಕಾಮಗೇತೀ ವ೦ಶದ  ಜಾನಕಲ್ಲಿನ ದಳವಾಯಿ ಬರಮಣ್ಣನಾಯಕನ ಹನ್ನೆರಡು ವರ್ಷದ ಮಗ ಚಿಕ್ಕ ಮದಕರಿ ರಾಜೇ೦ದ್ರನನ್ನು ಆಯ್ದು ಅವನಿಗೆ ಪಟ್ಟಾಭಿಷೇಕವಾಗುತ್ತದೆ.

ಓಬವ್ವ ನಾಗತಿ ತನ್ನಿಂದಾದಷ್ಟು ಮದಕರಿಯನ್ನು ತಿದ್ದುತ್ತಾ, ನಾಯಕರು ಹೇಗಿರಬೇಕು ಎಂಬ ತರಬೇತಿ ನೀಡುತ್ತಾ ಒಂದಿನ ಸಾವನ್ನಪ್ಪುತ್ತಾಳೆ. ಓಬವ್ವ ನಾಗತಿಯ ಇಷ್ಟದ ಮೇರೆಗೆ, ಮದಕರಿ ನಾಯಕರ ತಂದೆ ಭರಮಣ್ಣನಾಯಕ, ತಾಯಿ ನಿಂಗವ್ವ ಹಾಗೂ ಸೋದರ ಪರಶುರಾಮನಾಯಕ ಅರಮನೆಯಲ್ಲೇ ಬಂದು ನೆಲೆಸುತ್ತಾರೆ. ತನ್ನ ಸಾಹಸ, ಶೌರ್ಯ, ಪ್ರೀತಿ, ಔದಾರ್ಯ, ಮಮತೆ, ಕರುಣೆ, ಬುದ್ದಿವಂತಿಕೆಯಿಂದಾಗಿ ದುರ್ಗದ ಜನರೆಲ್ಲರೂ ನಾಯಕರಿಗೆ, ದುರ್ಗಕ್ಕೆ ತಮ್ಮ ತಲೆ ಕೊಡಲು ಎಂದೂ ಸಿದ್ದರಿದ್ದೇವೆ ಎಂಬ ಮಟ್ಟಿಗೆ ಅಭಿಮಾನಕ್ಕೆ ಪಾತ್ರನಾಗುತ್ತಾನೆ. ಹಲವಾರು ಯುದ್ದಗಳ ಮಾಡಿ ಗೆದ್ದುಬರುತ್ತಾರೆ. ಈ ಮದ್ಯೆ ನಾಯಕರಿಗೆ ಮೊದಲ ಮದುವೆಯಾಗಿ, ಏನೋ ಕಾರಣಗಳಿಂದ ಹೆಂಡತಿಯನ್ನು ತವರಿಗಟ್ಟಿ, ಮತ್ತೆ ಬಂಗರವ್ವ ಹಾಗು ಪದ್ಮವ್ವ ಎಂಬ ಇಬ್ಬರೊಡನೆ ವಿವಾಹವಾಗಿ, ಕೊನೆಯವೆಗೂ ಅವರನ್ನು ಚನ್ನಾಗಿ ನೋಡಿಕೊಳ್ಳುತ್ತಾನೆ. ಇವರ ಜೊತೆ ಕಡೂರಿ ಹಾಗು ನಾಗವ್ವ ಎಂಬ ಅಕ್ಕ ತಂಗಿಯರ ಮೋಹದಲ್ಲಿ ಸಿಲುಕಿ ಅವರನ್ನು ತನ್ನ ವಿಲಾಸದ ಅರಸಿಯರನ್ನಾಗಿ ಮಾಡಿಕೊಂಡು ಸಕಲ ಮರ್ಯಾದೆಯಿಂದ ನೋಡಿಕೊಳ್ಳುತ್ತಾನೆ ಮದಕರಿ.

ಹೀಗಿರುವಾಗ ನಾಯಕರು ಅತಿಕಾಮಿ ಎಂಬ ಸುದ್ದಿ ಊರಲೆಲ್ಲಾ ಹರಡಿ, ಸುಂದರ ಸ್ತ್ರೀಯರು ರಾಜರ ಕಣ್ಣಿಗೆ ಬೀಳುವಂತಿಲ್ಲ ಎಂಬ ಗುಮಾನಿ ಹುಟ್ಟಿ, ಸ್ತ್ರೀಯರು ಹೆದರಿ ನಡುಗುತ್ತಾರೆ. ಇದಕ್ಕೆ ಇಂಬು ಕೊಡುವಂತೆ ಒಂದು ದುರಂತ ನಡೆದು, ಏನೆಂದರೆ, ನಾಯಕರು ಕಣ್ಣು ಹಾಕಿದರೆಂದು, ಒಂದು ಹೆಣ್ಣಿನ ತಂದೆ ತನ್ನ ಮಗಳು ನಾಯಕರ ಪಾಲಾದರೆ ಸಂಸಾರದ ಮರ್ಯಾದೆ ಹೋಗಿಬಿಡುತ್ತದೆಂದು ದೇವರಿಗೆ ಅವಳನ್ನು ಬಲಿ ಕೊಟ್ಟುಬಿಡುತ್ತಾನೆ. ಈ ಘಟನೆ ನಾಯಕರಲ್ಲಿ ಬಹಳ ನೋವು, ವ್ಯಥೆವುಂಟು ಮಾಡಿ, ತಮ್ಮ ತಪ್ಪನ್ನು ತಿದ್ದುಕೊಳ್ಳುವಲ್ಲಿ ಕಾರ್ಯಗತರಾಗುತ್ತರೆ.

ಶ್ರೀ ಮುರುಗಿ ರಾಜೇಂದ್ರ  ಸ್ವಾಮಿಗಳಲ್ಲಿ ಭಕ್ತಿ ಹೊಂದಿದ್ದ ಮದಕರಿಗೆ, ಯಾವುದೋ ಒಂದು ವಿಷಯಕ್ಕೆ ಗುರುಗಳಿಗೂ-ತನಗೂ ಮಾತಿನ ಚಕಮಕಿಯಲ್ಲಿ, ’ಅರಮನೆ ಇರುವುದ್ರಿಂದಲೇ ಗುರುಮನೆ, ಮರೆಯಬೇಡಿ’ ಎಂಬ ಮಾತನ್ನು ದುಡುಕಿಯಾಡಿ, ಗುರುಗಳು ಮಠಬಿಟ್ಟು ಹೋಗಲು ಕಾರಣವಾಗುತ್ತಾನೆ. ಕೊಟ್ಟ ಮಾತಿಗೆ ತಪ್ಪಬಾರದೆಂದು ಮರಾಠರ ಸ್ನೇಹವನ್ನು ಉಳಿಸಿಕೊಳ್ಳಲೋಸುಗ, ನವಾಬರ ಹೈದರಾಲಿಯ ದ್ವೇಶ ಕಟ್ಟಿಕೊಳ್ಳುತ್ತಾನೆ. ಪ್ರಧಾನಿಯಾಗಿ ಕಳ್ಳೀ ನರಸಪ್ಪಯ್ಯನ ಮೇಲಿನ ತನ್ನ ಅನುಮಾನ ಪ್ರಧಾನಿಗಳಿಗೆ ತಿಳಿದಿದ್ದೇ, ತಮ್ಮ ಗೌರವಕ್ಕೆ ಚ್ಯುತಿ ಬಂತೆಂದು, ಪ್ರಧಾನಿ ಪದವಿಗೆ ರಾಜಿನಾಮೆ ಕೊಟ್ಟು, ಹೆಂಡತಿಯ ಜೊತೆಗೆ ದೇಶಾಂತರ ಹೊರಟು, ಮುಂದೆ ಅತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅವರ ಕಥೆ ದುರಂತಮಯವಾಗುತ್ತದೆ.

ಮದಕರಿನಾಯಕರ ಮಗ ಭರಮಣ್ಣನಾಯಕನನ್ನು, ಒಂದು ಗುಪ್ತ ಜಾಗಕ್ಕೆ ಕರೆದುಕೊಂಡೋಗಿ, ನಿಧಿ ಸಂಗ್ರಹಣೆ ಮಾಡುವ ಸ್ಥಳವಿದು ಎಂದು ತೋರಿಸಿಕೊಡುವ ಕ್ಷಣಗಳು ಯಾವುದೋ ಸಿನೆಮಾದ ದ್ರುಶ್ಯದ ಹಾಗೆ ಕಣ್ಣೆದುರು ನಿಲ್ಲುತ್ತವೆ. ಹೈದರಾಲಿಯ ಸೈನ್ಯದ ಜೊತೆಗೆ ಸತತ ಎಂಟು ತಿಂಗಳು ಹೋರಾಡಿ, ಸ್ನೇಹದ ಸಂಧಾನದ ಕುಟಿಲ ತಂತ್ರದಲ್ಲಿ ಸಿಲುಕಿಬಿಡುತ್ತಾನೆ. ಕೋಟೆಯ ಒಳಗೆ ದುರ್ಗದ ಜನ, ಹೊರಗೆ ಸದಾ ಪಿತೂರಿ ಮಾಡುತ್ತಾ, ಕೋಟೆಯ ಹುಳುಕನ್ನು ಹುಡುಕುವ ಹೈದರನ ಸೇನೆ. ಒಮ್ಮೆ, ಹೈದರನ ಸೇನೆ ಕೋಟೆಯ ಸಣ್ಣದಾದ ಕಿಂಡಿಯಿಂದ ಬರುವ ಶತ್ರು ಸೈನಿಕರ ಸದೆಬಡಿದು ಅಪಾರ ವೀರತ್ವ ಮೆರೆದು,  ನಾಯಕರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ ಒಬ್ಬ ದಳವಾಯಿಯ ಹೆಂಡತಿ. ಅವಳೇ ಓಬವ್ವ. ಮುಂದೆ ಆ ಕಿಂಡಿ ’ಓಬವ್ವನ ಕಿಂಡಿ’ ಎಂದು ಹೆಸರುವಾಸಿಯಾಗಿದ್ದು ಎಲ್ಲರಿಗೂ ತಿಳಿದ ವಿಷಯ.

ದುರ್ಗದ ಒಳಗೇ ಇರುವ ಜನರ ಮೋಸದ ಜಾಲಕ್ಕೆ ಸಿಕ್ಕು, ದುರ್ಗವನ್ನು ಕಳೆದುಕೊಳ್ಳುವಂತಾಗುತ್ತದೆ. ಕೊನೆಯ ದಿನ ಯುದ್ದಕ್ಕೆ ಹೊರಡುವ ದಿನಗಳ ಬಗ್ಗೆ ಓದುವಾಗ ಮೈನವಿರೇಳುತ್ತದೆ. ತನ್ನ ಹೆಂಡತಿಯರ ಬಳಿ ತನ್ನನ್ನು ಸಿಂಗರಿಸಿ, ಸಂತೋಷದಿಂದ ಕಳಿಸಿಕೊಡಿ ಎಂದು ಬೇಡಿ, ಸಕಲ ಸಿಂಗಾರಗೊಂಡು, ಹೋಗುವ ವೇಳೆಗೆ ಬಂಗಾರವ್ವ ತನ್ನ ತುಟಿ ಕಚ್ಚಿಕೊಂಡು, ರಕ್ತಬರಿಸಿ, ಮದಕರಿಯ ಹಣೆಗೆ ಮುತ್ತಿಟ್ಟು, ರಕ್ತಮುದ್ರೆ ಕೊಟ್ಟು ಕಳಿಸುತ್ತಾಳೆ. ಅವ ಹೋದ ಬಳಿಕ ಅಕ್ಕ ತಂಗಿಯರಿಬ್ಬರೂ, ಮದುವಣಗಿತ್ತಿಯರ ಹಾಗೆ ತಯಾರಾಗಿ, ಇಬ್ಬರೂ ಒಬ್ಬೊರನ್ನೊಬ್ಬರು ತಬ್ಬಿ, ಹೊಂಡಕ್ಕೆ ಹಾರುತ್ತಾರೆ. ಕಡೂರಿ ಮತ್ತು ನಾಗವ್ವ ವಿಷ ಸೇವಿಸಿ ಸಾಯುತ್ತಾರೆ. ಒಂದೊಂದು ಸಾಲು ಓದುವಾಗಲೂ ಮನಸ್ಸು ’ಅಯ್ಯೋ, ಅಯ್ಯೋ’ ಅನ್ನುತ್ತಾ, ಮೈ ರೋಮಾಂಚನವಾಗುತ್ತದೆ.

ಇತ್ತ ವಿಷ್ಯ ತಿಳಿದ ಮದಕರಿ, ಅಶ್ವದ ಮೇಲೆ ಕುಳಿತು ಹೋರಾಡುತ್ತ, ಅಶ್ವ ಸತ್ತು ಬಿದ್ದಾಗಲೂ, ಕೆಳಗಿಳಿದು ಯುದ್ಧಮಾಡುತ್ತಾ, ಹೈದರನ ಸೈನಿಕರ ಗುಂಡಿನ ಧಾಳಿಗೆ ಬಲಿಯಾಗಿ, ನೆಲಕ್ಕುರುಳುತ್ತಾನೆ. ’ಅವ್ವಾ’...., ಎನ್ನುತ್ತ ದುರ್ಗದ ಭೂಮಿಯನ್ನು ಮುತ್ತಿಟ್ಟು ಕೊನೆಯುಸಿರಿರೆಳೆಯುತ್ತಾನೆ.

***

೬೫೯ ಪುಟಗಳ ಈ ಬ್ರುಹತ್ ಕಾದಂಬರಿ ಓದಿ ಮುಗಿಸೋ ವೇಳೆಗೆ ನನಗೂ ಸಹ ಮದಕರಿಯ ಬಗ್ಗೆ ಹೆಮ್ಮೆ ಅನ್ನಿಸೋಕೆ ಶುರುವಾಗಿಬಿಟ್ಟಿತು. ಅಷ್ಟರ ಮಟ್ಟಿಗೆ ಕಾಡುತ್ತೆ ಈ ಪುಸ್ತಕ. ಯಾಕಿಷ್ಟು ತಡ ಮಾಡಿ ಓದಿದೆ ಅನಿಸಿದ್ರೂ, ಸಧ್ಯ ಓದಿದ್ನಲ್ಲ ಅಂತ ಸಮಾಧಾನದಲ್ಲಿ ಪುಟ ತಿರುವುತ್ತೇನೆ.

PC: GOOGLE

ಬುಧವಾರ, ಜುಲೈ 15, 2015

ಕ್ಯಾಂಡಿ ಕ್ರಶ್ ಎಂಬ ಮಾಯಾಸಾಗ!

ಕ್ಯಾಂಡಿ ಕ್ರಶ್! ಈ ಆಟದ ಬಗ್ಗೆ ತುಂಬಾ ಜನ ಮಾತಾಡ್ತಾ ಇದ್ರೂ ನಾನು ಆಕಡೆ ತಲೆ ಹಾಕಿರಲಿಲ್ಲ. ಯಾಕೋ ಏನೋ, ಯಾವಾಗ್ಲು ಅದನ್ನ ಆಡಬೇಕು ಅಂತ ನಂಗೆ ಅನಿಸಿರಲೇ ಇಲ್ಲ. ಅದೇನಾಯಿತೋ ಗೊತ್ತಿಲ್ಲ. ನನ್ನ ಯಜಮಾನರು ಹೊಸಾ ಫೋನ್ ಕೊಂಡಿದ್ದೇ, ತಾನು ’ಕ್ಯಾಂಡಿ ಕ್ರಶ್’ ಡೌನ್ಲೋಡ್ ಮಾಡಿದ್ದೇನೆ ಎಂದು ಹೇಳಿದ್ದು ನನ್ನ ತಲೆಯಲ್ಲಿ, ’ನನ್ನ ಮೊಬೈಲ್ನಲ್ಲೂ ಈ ಆಟ ಇದ್ದರೆ ಹೇಗೆ’? ಎಂಬ ಆಲೋಚನೆಯ ಹುಳವನ್ನ ನಾನೇ ಬಿಟ್ಟುಕೊಂಡು, ಆಮೇಲೆ ಈ ಹುಳದ ಕಾಟ ತಾಳಲಾರದೆ ಡೌನ್ಲೋಡ್ ಮಾಡಿದೆ ನೋಡಿ, ಅಲ್ಲೇ ಎಲ್ಲವೂ ಶುರುವಾಗಿದ್ದು.

ಮೇಲ್ನೋಟಕ್ಕೆ ಸುಲಭಕ್ಕೆ ತುದಿಗಾಣದ ಹಾವಿನಂತೆ ಕಾಣುವ ಈ ಆಟ, ನಾವು ಒಂದೊಂದೇ ಲೆವಲ್ ದಾಟುತ್ತಿದ್ದಂತೆ ತುದಿಗೆ ಹತ್ತಿರವಾಗುತ್ತಾ ಸಾಗುತ್ತೇವೆ. ನಮ್ಮ ಫ಼ೇಸ್ಬುಕ್ ಸ್ನೇಹಿತರು ಯಾರ್ಯಾರು ಎಲ್ಲೆಲ್ಲಿದ್ದಾರೆ, ಯಾವ ಲೆವಲ್ ಮುಗಿಸಿ, ಯಾವ ಲೆವಲ್ನಲ್ಲಿ ಆಟ ಆಡುತ್ತಿದ್ದಾರೆ ಎಂಬುದನ್ನೂ ತೋರಿಸಿ, ನೀನೊಬ್ಬಳೇ ಅಲ್ಲ, ಇಡೀ ಜಗತ್ತೇ ಈ ಆಟ ಆಡ್ತಾ ಇದೆ, ನೀನೇ ಸ್ಲೋ ಅಂತನೂ ತೋರಿಸಿಕೊಡುತ್ತದೆ. ಎಷ್ಟೆಷ್ಟೋ ಲೆವಲ್ಗಳನ್ನು ದಾಟಿ ಮುಂದೆ ಹೋದವರು ನನಗೆ ನಮ್ಮ ಹಿರೀಕರಂತೆ ಭಾಸವಾಗುತ್ತಾರೆ. ಹಿರೀಕರು ಎಂದರೆ ನಮಗಿಂತ ಹೆಚ್ಚು ಅನುಭವ ಉಳ್ಳವರು ಎಂದಲ್ಲವೇ? ಇಲ್ಲು ಅದೇ ಲಾಜಿಕ್ಕು. ಆದರೆ ಇಲ್ಲಿ ಆಟ, ಅಲ್ಲಿ ಜೀವನ.  

ನಿಮಗೀ ಆಟ ಶುರು ಮಾಡಿದ ಕೂಡಲೇ ಐದು ಜೀವ ದೊರಕುತ್ತದೆ. ಹಾಂ! ಅದೇ... ಪಂಚಪ್ರಾಣ! ಈ ಪ್ರಾಣ ಮುಗಿಯೋವರೆಗೂ ನೀವು ಆಡುತ್ತಲೇ ಇರಬಹುದು. ನಿಮ್ಮ ಜೀವಗಳು ಮುಗಿದ ಕೂಡಲೇ, ಆಟವೇ ನಿಮ್ಮ ಸ್ನೇಹಿತರಲ್ಲಿ ಜೀವಭಿಕ್ಷೆ ಬೇಡಿಕೋ ಎಂದು ಹೇಳುತ್ತದೆ. ಆಗ, ನೀವೇನಾದರೂ, "ಸರಿ" ಎಂದು ಬಟ್ಟನ್ ಒತ್ತಿದಿರೋ, ನಿಮ್ಮ ಫ಼ೇಸ್ಬುಕ್ ಸ್ನೇಹವಲಯದ ಎಲ್ಲರಿಗೂ, ನಿಮ್ಮ ಜೀವ ಭಿಕ್ಷೆಯ ಕೋರಿಕೆಗಳು ವೈರಸ್ನಂತೆ ಸಂಚರಿಸಿಬಿಡುತ್ತವೆ. ಈ ಆಟಕ್ಕಿನ್ನೂ ಮರುಳಾಗದವರಿಗೇನಾದರೂ ನಿಮ್ಮ ಅಹವಾಲು ಹೋಯಿತೋ, ಮರುದಿನ ಅವರ ಯೆಫ಼್ಬಿ ಸ್ಟೇಟಸ್, "ನಾನು ಯಾವ ಆಟವನ್ನು ಆಡುವುದಿಲ್ಲ. ದಯವಿಟ್ಟು ನನ್ನ ಬಿಟ್ಟುಬಿಡಿ" ಎಂದಿದ್ದರೂ ಆಶ್ಚರ್ಯವಿಲ್ಲ. ಆಟದ ಸುಖ-ದುಃಖ ತಿಳಿದವರ್ಯಾರಾರು ಜೀವದಾನ ಮಾಡಿದರೆ ನೀವು ಇನ್ನೊಂದು ಆಟ ಆಡೇ ಬಿಡಬಹುದು. ಇಲ್ಲದಿದ್ದರೆ ಮತ್ತೆ ಅರ್ಧ ಗಂಟೆಯೋ, ಒಂದು ಗಂಟೆಯೋ ಕಾಯಬೇಕಾಗುವುದು. 

ನೇರಾವಾಗಿ, ಅಥ್ವ ಅಡ್ಡವಾಗಿ, ಮೂರು, ನಾಲ್ಕು, ಐದು ಒಂದೇ ಬಣ್ಣದ ಕ್ಯಾಂಡಿಗಳನ್ನು ಸೇರಿಸಬೇಕು. ಮೂರು ಸೇರಿಸಿದರೆ "ಗುಡ್" ಅಂದರೆ ನೀವು ಒಂದು ’ಮೂವ್’ ಕಳೆದುಕೊಂಡು, ಅಲ್ಲಿರುವ ಜಲ್ಲಿಯನ್ನು ಒಡೆಯುವಿರಿ. ನಾಲ್ಕು ಸೇರಿಸಿದರೆ, "ಬೆಟರ್" ಅಂದರೆ ಇದರಿಂದ ಒಂದಿಡೀ ಸಾಲಿನಲ್ಲಿರುವ ಜಲ್ಲಿಯನ್ನು ನೀವು ಸಲೀಸಾಗಿ ಒಡೆಯುವಿರಿ. ಒಂದು ’ಮೂವ್’ ಕಳೆದುಕೊಂಡು, ಬಹಳ ಲಾಭ ಮಾಡುವಿರಿ. ಇನ್ನು ಈ ತರಹದ ಎರಡು ಬಿಲ್ಲೆಗಳನ್ನು ಮಾಡಿ, ಒಂದಕ್ಕೊಂದು ಹೊಡಿಸಿದಿರೋ, ಎರಡು ಸಾಲುಗಳನ್ನು ಒಟ್ಟಿಗೇ ಒಡೆದುಬಿಡಬಹುದು, ಅಡ್ಡಡ್ಡ ಸೇರಿಸಿದರೆ ಆರು ಸಾಲು, ಅಡ್ಡ-ಉದ್ದ ಸೇರಿಸಿದರೆ ಎರಡು ಸಾಲು ಹೀಗೆ. ಇನ್ನು ಒಂದೇ ಬಣ್ಣದ ಐದು ಕ್ಯಾಂಡಿಗಳನ್ನು ಸೇರಿಸುವುದು, ದ "ಬೆಸ್ಟ್". ಇದು ಒಂದು ಬಾಂಬಿನಂತೆ ಕೆಲಸ ಮಾಡುತ್ತದೆ. ಇದಕ್ಕೇನಾದರೂ ನೀವು, "ಬೆಟರ್" ಎಂದಿದ್ದೆನಲ್ಲ, ಆತರಹದ ಬಿಲ್ಲೆಗೆ ತಾಗಿಸಿದಿರೋ,  ಬಂಪರ್ ಲಾಟರಿ ಬಂದಹಾಗೇ ಲೆಕ್ಕ! ನಿಮ್ಮ ಅಷ್ಟೂ ಜಲ್ಲಿ ನಿರ್ಣಾಮವಾಗಿ, ನೀವು ಲೆವಲ್ ದಾಟುವುದರಲ್ಲಿ ಯಾವುದೇ ಶಂಕ್ಯೆಯೇ ಇಲ್ಲ! ಇನ್ನುಳಿದಂತೆ ನೀವು ಹೇಗೆ ಆಟ ಬೇಗನೇ ಮುಗಿಸುತ್ತೀರೋ ಹಾಗೆ ನಿಮಗೆ ಆಟವನ್ನು ವೇಗವಾಗಿಸೋ ಅವಾರ್ಡುಗಳು ಬರುತ್ತಾ ಹೋಗುತ್ತವೆ. 

ನಾನೇನೋ ಸುಮ್ಮನೆ ನೋಡೋಣ ಎಂದು ಶುರು ಮಾಡಿದ ಆಟ ಆಮೇಲಾಮೇಲೆ ಒಂಥರ ನಶೆ ಏರತೊಡಗಿದಂತಾಗಿಹೋಯಿತು. ಸ್ವಲ್ಪ ಸಮಯ ಪುರುಸೊತ್ತು ಸಿಕ್ಕಾಗ ಹಿಡಿಯುತ್ತಿದ್ದ ಮೊಬೈಲನ್ನ, ಈಗ ಸಮಯ ಮಾಡಿಕೊಂಡು, ಹೊಂದಿಸಿಕೊಂಡು, ಅಥ್ವ ಯಾವುದೋ ಕೆಲ್ಸ ಮುಂದೂಡಿಕೊಂಡು ’ಆಟವನ್ನೇ ಆಡುತ್ತಿರುವ’ ಅನ್ನುವ ಮಟ್ಟಿಗೆ ಲೈಟಾಗಿ ಹಾಳಗಿ ಹೋದೆ. ಊಟ ಮಾಡುವಾಗಲೂ ಇದನ್ನೇ ಆಟ ಆಡುತ್ತಿರೋದನ್ನ ಕಂಡು ಅಮ್ಮ ಉಗಿದಿದ್ದೂ ಆಯಿತು. ಆದರೂ ನನಗೆ ಮಾತ್ರ ಆಡೋದನ್ನ ನಿಲ್ಸೋಕೆ ಆಗಲೇ ಇಲ್ಲ. ಯಾವಾಗಲೂ ನಾನು ಏನಾದ್ರು ಸುದ್ದಿನೋ/ಕಥೆನೋ ನಮ್ಮೆಜಮಾನ್ರಿಗೆ ಹೇಳಿ ಮುಗಿದ ಬಳಿಕ, ’ನಾ ಎನ್ ಹೇಳ್ದೆ ಹೇಳಿ’ ಅನ್ನೋ ವಾಡಿಕೆ, ಈಗ ಉಲ್ಟ, ಇದೇ ಪ್ರಶ್ನೆ ನನ್ ಯಜ್ಮಾನ್ರು ಕೇಳೋ ಹಾಗಾಗೋಯ್ತು.(ನೋಡಿ ಕಾಲ ಹೇಗೆಲ್ಲಾ ಆಟಾಡಿಸುತ್ತೆ). ಆಡಿದ್ದೇ ಆಟ ಆಡೀ-ಆಡೀ ಅಮೇಲೆ ಸಮಯ ಬರಿದೇ ನಷ್ಟ ಆಗುವಾಗ, ಕಪಾಟಿನೊಳಗಿನ ಪುಸ್ತಕ, ಸಿನೆಮ ಸೀಡಿ ನೋಡ್ತಾ ಇಣುಕು ನೋಟ. ಪುಸ್ತಕದ ಮೇಲೆ ಆಸೆ, ಆಟದ ಮೇಲೆ ಪ್ರೀತಿ!

ಹೀಗೇ ನಡಿತಾ ಒಂದೆರಡು ತಿಂಗಳು ಸರಿದವು. ಇನ್ನೊಂದ್ ವಿಷ್ಯ ಏನು ಅಂದರೆ, ಜೀವ ಮುಗಿದ ಕೂಡಲೇ, ನಾವು ಸ್ನೇಹಿತರಿಗೆ ಜೀವದಾನದ ವಿನಂತಿ ಕಳಿಸಿದರೆ, ತಕ್ಷಣ ಜೀವ ಕೊಡೋದಕ್ಕೆ ಅವರಿಗೆಲ್ಲ ಪುರುಸೊತ್ತಿರುವುದಿಲ್ಲ, ಅಥ್ವ ಕೊಡೋಕೇ ಮನಸಿರುವುದಿಲ್ಲ. ಜೀವ ಬರುವವರೆಗೂ ಆಡುವ ಹಾಗಿಲ್ಲ. ಅದಕ್ಕೇನು ಮಾಡಬಹುದು? ಎಂದು ಸುಮಾರು ತಲೆಕೆಡಿಸಿಕೊಂಡು ಗೂಗಲ್ ಮೊರೆ ಹೋಗ್ ನೋಡ್ತೀನಿ, ಅಲ್ಲಿ ನೂರಾರು ವಿಡಿಯೋಗಳು, ಸಲಹೆಗಳು! ಉಪಾಯ ಏನು ಅಂದರೆ, ನಮ್ಮ ಮೊಬೈಲ್ನಲ್ಲಿ ಸಮಯವನ್ನ ಮೂರು ತಾಸಿಗೆ ಮುಂದೂಡುವುದು. ಅಲ್ಲಿಗೆ ನನಗಿದ್ದ ಸಣ್ಣ ತೊಡಕೂ ಮಾಯವಾಗಿ ಎಲ್ಲವೂ ಸುಗಮ, ಸರಳ! ಇದೇ ಪ್ರಯೋಗ ಇನ್ನೂರನೇ ಲೆವಲ್ವರೆಗೂ ಯಾವುದೇ ಅಡೆತಡೆಗಳಿಲ್ಲದೇ ಸಾಗಿತು.

ಒಂದು ಮಾತು ನಿಜ ನೋಡಿ, ಯಾರು ಏನೇ ಬೈಯಲಿ, ಬುದ್ದಿ ಹೇಳಲಿ, ನಮಗೇ ಏನೋ ಒಂದು ಅನ್ನಿಸೋವರೆಗೂ ಅವರ್ಯಾವ್ ಮಾತೂ ತಲೆ ಒಳಗೆ ಹೋಗುವುದೇ ಇಲ್ಲ! ಇನ್ನೂರನೇ ಲೆವಲ್ಗೆ ಹೋಗಿದ್ದೇ, ಯಾಕೆ ಈ ಆಟ, ಏನುಪಯೋಗ? ಎಂಬೆಲ್ಲಾ ಪ್ರಶ್ನೆಗಳು ತಲೆಕೊರೆಯ ತೊಡಗಿದವು. ಕಪಾಟಿನೊಳಗಿರುವ ಪುಸ್ತಕಗಳು, ಅರ್ಧ ಬಿಟ್ಟ ಪೈಂಟಿಂಗಳು ಎಲ್ಲಾ ನನ್ನೆದುರಿಗೆ ಒಟ್ಟೊಟ್ಟಿಗೆ ಯಕ್ಷಗಾನ, ಭರತನಾಟ್ಯ ಮಾಡತೊಡಗಿದವು. ಗಡಿಯಾರ ಹಿನ್ನೆಲೆ ಧ್ವನಿಯಾಯಿತು. ’ನೀನು ಹೀಗೇ ನಮ್ಮನ್ನು ಕಡೆಗಣಿಸಿದರೆ ಈ ಕ್ಷಣವೇ ನಿನ್ನ ಮನೆಯಿಂದ ಹೋಗುತ್ತೇವೆ. ಯಾರಿಂದ ಒಂದು ಪೈಸೆ ಉಪಯೋಗವಿಲ್ಲವೋ, ಅಂಥವರನ್ನು ಮಾತ್ರ ಪೋಷಿಸುವ ಜಾಗದಲ್ಲಿ ಖಂಡಿತಾ ನಾವಿರುವುದಿಲ್ಲ’ ಎಂದೆಲ್ಲ ಅಂದಂತೆ ಭ್ರಮೆಯಲ್ಲೂ, ಜ್ನಾನೋದಯವಾಯಿತು. ಅವರನ್ನೆಲ್ಲ ಅಲ್ಲೆ ತಡೆದುನಿಲ್ಲಿಸಿ, ಅವರೆದುರಿಗೇ "ಕ್ಯಾಂಡೀ ಕ್ರಶ್" ಎಂಬ ಮರೀಚಿಕಯನ್ನು ಕಸದ ಬುಟ್ಟಿಗೆ ಸೇರಿಸಿದೆ. ತಡೆದು ನಿಂತವರು, ನನ್ನ ಕೆನ್ನೆ ಸವರಿ, ಮುಗುಳ್ನಗೆ ಬೀರಿ ತಮ್ಮ ತಮ್ಮ ಸ್ಥಾನಕ್ಕೆ ತೆರಳಿದವು.


ಯಜ್ಮಾನ್ರು ಆಪಿಸ್ ಮುಗಿಸಿ ಮನೆಗೆ ಬಂದರು. ಬಹಳ ದಿನಗಳ ಮೇಲೆ ಮನೆಯಲ್ಲಿ ಬೋಂಡ, ಜಾಮೂನು. ಮೊದಲೇ ಹಸಿವೆಯಾಗಿದ್ದ ಯಜಮಾನರು, ಬೋಂಡ ಕರಿದು ತಟ್ಟೆಗೆ ಹಾಕುತ್ತಿದ್ದಂತೆ, ತಿನ್ನುತ್ತಾ ಬಂದರು. ಕಾಫಿ ಮಾಡಿಕೊಂಡು, ಅವರಿಗೊಂದು ಕಪ್ಪು ಕೊಟ್ಟು ಬಾಯಿಗೆ ಇಡುತ್ತೇನೆ. ಇವರು, "ಹೇ, ಕ್ಯಾಂಡಿ ಕ್ರಶ್ ನಂದು ಇವತ್ತು ನೂರನೇ ಲೆವಲ್ ಕ್ಲಿಯರ್ ಆಯಿತು, ನಿಂದು?" ಎಂದು ಖುಶಿಯಿಂದ ಕೇಳಲು, ಗೋಡೆಯಲ್ಲಿ ನೇತು ಹಾಕಿದ ಗಡಿಯಾರ, ಕಪಾಟಿನೊಳಗಿನ ಪುಸ್ತಕಗಳು ನನ್ನನ್ನೇ ನೋಡುತ್ತಿದ್ದಂತೆ ಭಾಸವಾಯಿತು! 

ಶುಕ್ರವಾರ, ಮಾರ್ಚ್ 06, 2015

ಇದ್ದು ಬಿಡಬೇಕು ಸುಮ್ಮನೆ

ಇದ್ದು ಬಿಡಬೇಕು ಸುಮ್ಮನೆ
ಕೆಲವೊಮ್ಮೆ, ಕಣ್ಣಿದ್ದೂ ಕುರುಡರಂತೆ,
ಬಾಯಿದ್ದೂ ಮೂಗರಂತೆ, ಕಿವಿ
ಇದ್ದೂ ಕಿವುಡರಂತೆ!
ಒಪ್ಪಿಸಿಬಿಡಬೇಕು ಎಲ್ಲಾ
ನಿರ್ಣಯಗಳನ್ನು ಕಾಲನ
ಕೈಗೆ!
ಕುಡುಗಿ ಎಲ್ಲ ವ್ಯಂಗ್ಯ, ಕುಹಕ,
ಸುಮ್ಮನೆದ್ದು ಹೊರಟುಬಿಡಬೇಕು.
ನದಿಯ ದಡದಲ್ಲಿರುವ
ನೆರಳ ಕೊಡುವ ಮರಕ್ಕೆ,
ಕೊಡಲಿ ಪೆಟ್ಟು ಕೊಟ್ಟುರುಳಿಸಿ,
ಮನೆಕಟ್ಟಿ, ದುಡ್ಡು ಮಾಡುವ
ವ್ಯಾಪಾರಿ ನೀನು.
ನದಿಯಲ್ಲಿ ಉದುರಿಬಿದ್ದ,
ಚಿಗುರೆಲೆ ನಾನು.
ನನಗೆ ಗಮ್ಯದ ಚಿಂತೆಯಿಲ್ಲ,
ಪಯಣದ ಸವಿಯ
ಸವಿಯುವುದಷ್ಟೇ ಗೊತ್ತು,
ಅದು ನನಗಿಷ್ಟ ಕೂಡ.
ಬಿಡು, ನಿನ್ನ ಜೊತೆ
ನನಗೇನು ಮಾತು!
ಕಾಲನ ಕೈಗೆ
ನಿರ್ಣಯಗಳನ್ನು ಒಪ್ಪಿಸಿಯಾಗಿದೆ.
ಇದ್ದು ಬಿಡಬೇಕು ಸುಮ್ಮನೆ
ಕೆಲವೊಮ್ಮೆ, ಕಣ್ಣಿದ್ದೂ ಕುರುಡರಂತೆ,
ಬಾಯಿದ್ದೂ ಮೂಗರಂತೆ, ಕಿವಿ
ಇದ್ದೂ ಕಿವುಡರಂತೆ!