ಭಾನುವಾರ, ಅಕ್ಟೋಬರ್ 21, 2012

ಪೇರಳೆ ಹಣ್ಣು

"ಏ ಅಲ್ನೋಡು, ಒಂದು ಹಣ್ಣು ಅರಿಶಿನಕ್ಕಾಗಿದೆ."

"ಓ ಹೌದು, ಪೂರ್ತಿ ಹಣ್ಣಾಗಿದೆ."

"ಇವತ್ತು ಅದನ್ನ ಕೊಯ್ದು ಬಿಡೋಣ ಆಯ್ತಾ?"

"ಅಯ್ಯೋ ಬೇಡ ಬೇಡ, ಪಕ್ಕದ್ಮನೆ ಆಂಟಿಗೆ ಗೊತ್ತಾದ್ರೆ ಬೈತಾರೆ, ಅಮ್ಮನೂ ಬೈತಾಳೆ."

"ಹಮ್, ಇವತ್ತು ಅಮ್ಮ ಮತ್ತೆ ಆಂಟಿ ಹೊರಗೆ ಹೋಗ್ತಾರಲ್ಲ, ಆವಾಗ ಮರ ಹತ್ತಿ ಕೊಯ್ದು ತಿಂದು ಬಿಡೋಣ".

ಹೀಗೇ ಸಾಗುತ್ತಿತ್ತು ನನ್ನ ಮತ್ತು ತಂಗಿಯ ಮಾತುಗಳು. ನಾವಿದಿದ್ದು ಪೇಟೆ ಮನೆಯಲ್ಲಿ. ಅದಕ್ಕೆಂದೇ ನಮಗೆ ಹಳ್ಳಿಗಳಲ್ಲಿ ಸಿಕ್ಕುವ ಹಣ್ಣುಗಳನ್ನು , ಆ ಮರಗಳನ್ನು ಹತ್ತಿ ಕೊಯ್ದು ತಿನ್ನುವ ಅವಕಾಶಗಳು ಕಡಿಮೆಯೇ ಇತ್ತು. ಆದರೂ ನಮ್ಮ ಅದೃಷ್ಟ ಎನ್ನುವಂತೆ ನಾವು ಬಾಡಿಗೆಗಿದ್ದ ಮನೆಯಂಗಳದಲ್ಲಿ ಒಂದು ಪೇರಳೆ ಮರ ಇದ್ದಿದ್ದು ನನಗೂ, ತಂಗಿಗೂ ಇನ್ನಿಲ್ಲದ ಆನಂದ ನೀಡಿತ್ತು. ಪ್ರತೀ ಬಾರಿಯೂ ಮರದಲ್ಲಿ ಹಣ್ಣಾದಾಗ, ಎಲ್ಲರ ಕಣ್ಣು ತಪ್ಪಿಸಿ, ಮರ ಹತ್ತಿ ಹಣ್ಣನ್ನು ಕೊಯ್ದು ತಿನ್ನುವ ಅಭ್ಯಾಸ ನಮ್ಮದಾಗಿತ್ತು. ಆವಾಗಿನ್ನೂ ನಾವು ಚಿಕ್ಕವರು. ಏನೂ ತಿಳಿಯದ ಬಾಲ್ಯ. ಪ್ರತೀ ಬಾರಿಯೂ ಹಣ್ಣಾಗಿಯೂ ಒಂದು ಸಾರಿಯೂ ತಮಗೆ ತಿನ್ನಲು ಸಿಗದೇ ಇದ್ದಿದ್ದು ನಮ್ಮ ಓನರ್ ಅವರ ತಳಮಳಕ್ಕೆ ಕಾರಣವಾಗಿತ್ತು. ಅಮ್ಮನ ಬಳಿಯೂ ಒಂದೆರಡು ಬಾರಿ ಹೇಳಿಕೊಂಡಿದ್ದೂ ಇದೆ ಇದರ ಬಗ್ಗೆ. ನಮ್ಮ ಕಣ್ಣಾಮುಚ್ಚಾಲೆ ಆಟ ತಿಳಿಯದ ಅಮ್ಮ ಹೇಳಿದ್ದಳು, ಗಿಳಿ ಏನಾದರೂ ತಿಂದಿರಬಹುದು ಎಂದು.

ಪೇರಳೆ ಹಣ್ಣುಗಳೆಂದರೆ ನಮಗೆ ತುಂಬಾ ಪ್ರೀತಿಯಾಗಿತ್ತು. ಅದೂ ಕಂಪೊಂಡಿನ ಒಳಗೆ ಕಣ್ಣು ಕುಕ್ಕುವಂತೆ, ಮಿಡಿಯಾಗಿ,ಕಾಯಾಗಿ, ಹಣ್ಣಾಗುತ್ತಿರುವುದನ್ನು ನೋಡಿಯೂ ಸುಮ್ಮನಿರಲು ನಮಗಂತೂ ಸಾದ್ಯವೇ ಆಗುತ್ತಿರಲಿಲ್ಲ. ಹೇಳಿ ಕೇಳಿ ಅದು ಚಂದ್ರ ಪೇರಳೆ. ಹಣ್ಣನ್ನು ಕತ್ತರಿಸಿ ಒಂದು ಚೂರು ಉಪ್ಪು, ಒಂದ್ ಸ್ವಲ್ಪ ಮೆಣಸಿನ ಪುಡಿ ಹಚ್ಚಿ ತಿಂದರೆ, ಆಹಾ!. ಬಹುಪಾಲು ನಾವು ಮನೆಯಲ್ಲಿ ಯಾರು ಇಲ್ಲದಿರುವ ಸಮಯ ಸಿಕ್ಕಿದಾಗ ಇದನ್ನೇ ಮಾಡುತ್ತಿದ್ದೆವು.

ಒಂದು ದಿನ ಏನಾಯಿತೆಂದರೆ, ನಾನು ಮರ ಹತ್ತಿ ಹಣ್ಣು ಕೊಯ್ಯುತ್ತಿದ್ದೆ. ನಮ್ಮ ಮನೆಯಲ್ಲಿ ಮತ್ತು ಓನರ್ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡಾಗಿತ್ತು. ನನ್ನ ತಂಗಿ ಕೆಳಗೆ ನಿಂತು, ನನಗೆ ಹಣ್ಣು ಕೊಯ್ಯಲು, ದೋಟಿ ಕೋಲನ್ನು ಕೊಡುತ್ತ, ಹಣ್ಣೆಲ್ಲಿದೆ ಎಂದು ತೋರಿಸುತ್ತಿದ್ದಳು. ಆದರೆ ಆ ದಿನ ನಮ್ಮ ಅದೃಷ್ಟ ಕೈ ಕೊಟ್ಟಿತ್ತು. ಏನೋ ಮರೆತು ಹೋದ ಪಕ್ಕದ ಮನೆಯ ಆಂಟಿ, ವಾಪಾಸ್ ಬಂದು ಬಿಟ್ಟಿದ್ದರು! ನನ್ನ ತಂಗಿ ಅಕ್ಕ, ಇಳಿ ಸಾಕು ಎಂದು ಚೀರಿದರೂ, ಮರದ ತುದಿಯಲ್ಲಿರುವ ನನಗೆ ತಕ್ಷಣಕ್ಕೆ ಇಳಿಯಲು ಆಗಲೇ ಇಲ್ಲ. ಅಷ್ಟರಲ್ಲಿ ತಂಗಿ ಓಡಿ ಹೋಗಿ ಮನೆ ಸೇರಿಕೊಂಡಿದ್ದಳು. ನಾನು ಹೇಗೋ ಸಂಭಾಳಿಸಿಕೊಂಡು ಇಳಿಯುತ್ತಿದಂತೆ, ಆಂಟಿ ತಮ್ಮ ಚಾನೆಲ್ನ ಶುರು ಮಾಡಿದರು. "ಕಳ್ಳ ಮಕ್ಳ, ನೀವಾ ಇದು? ಇಷ್ಟು ದಿನ ಈ ಹಣ್ಣು ನನಗೆ ಸಿಗದೇ ಇರುವ ಹಾಗೆ ಮಾಡಿದ್ದಿರಲ್ಲ. ಇರಿ, ಏನು ಮಾಡ್ತೀನಿ ನೋಡಿ, ನಿಮ್ ಅಮ್ಮ ಬರಲಿ" ಅಂತ ಕೂಗ್ತಾ ಇದ್ರೆ ನಾನು ಮಾತ್ರ ಒಂದೇ ಸಮನೆ ಮನೆಗೆ ಓಡಿದ್ದೆ. ಇಬ್ಬರೂ ಮನೆ ಬಾಗಿಲನ್ನು ಹಾಕಿಕೊಂಡು ಒಬ್ಬರ ಮುಖ ಮತ್ತೊಬ್ಬರು ನೋಡ್ತಾ ಕುಳಿತು ಬಿಟ್ಟೆವು. ಅಮ್ಮನಿಗೆ ವಿಷಯ ಗೊತ್ತಾಗಿ, ಆಮೇಲೆ ನಮಗೆ ಬೀಳುವ ಏಟಿನ ಬಗ್ಗೆ ನಾವು ತೀವ್ರ ವಾಗಿ ಯೋಚಿಸಲಾರಂಭಿಸಿದ್ದೆವು.

ಅಂತೂ ಅಮ್ಮ ಬಂದಿದ್ದೆ, ಅದನ್ನೇ ಕಾಯ್ತಾ ಇದ್ದ ಆಂಟಿ ನಮ್ಮ ಬಗ್ಗೆ ಎಲ್ಲಾ ಚಾಡಿ ಹೇಳಿಕೊಟ್ಟರು. ಅಮ್ಮ, ಆಂಟಿಯ ಬಳಿ ಇನ್ನು ಮುಂದೆ ಹಿಂಗಾಗಲ್ಲ ಎಂದು ಹೇಳಿ ಕಳಿಸಿದ್ದೂ ಆಯಿತು. ನಾನು, ತಂಗಿಯೂ ಬಹಳ ಹೆದರಿಕೆಯಿಂದ ಒಂದು ಮೂಲೆಯಲ್ಲಿ ಕುಳಿತೂ ಬಿಟ್ಟಿದ್ದೆವು. ಅಳುವುದೊಂದೇ ಬಾಕಿ ಇದ್ದಿತ್ತು! ಇನ್ನೇನು ಏಟು ಬೀಳುತ್ತೆ ಎಂದುಕೊಂಡರೆ, ಆಶ್ಚರ್ಯ ಎಂಬಂತೆ, ಅಮ್ಮ, ನಮ್ಮ ಬಳಿ ಬಂದು, ಆಗಿದ್ದು ಆಯ್ತು. ಇನ್ನು ಮುಂದೆ ಹೀಗೆಲ್ಲ ಮಾಡಬೇಡಿ ಎಂದು ಬುದ್ದಿ ಹೇಳಿ, ನಿಮಗೆ ಹಣ್ಣು ಬೇಕಾದ್ರೆ ಕೇಳಿ ಇಸ್ಕೊಳಿ, ಕಡಿಯೋದು ತಪ್ಪು ಎಂದೂ ಹೇಳಿ ನಮ್ಮನ್ನು ಮುದ್ದಾಡಿದ್ದಳು. ನನಗೂ ತಂಗಿಗೂ ಏಟು ತಪ್ಪಿದ ನಿಟ್ಟುಸಿರು ಅರಿವಿಲ್ಲದಂತೆ ಬಂದು ಹೋಯಿತು. ನಮ್ಮ ಮರ ಹತ್ತಿ ಹಣ್ಣು ತಿನ್ನುವ ಕಾಯಕಕ್ಕೆ, ಅಲ್ಲೇ ಪೂರ್ಣ ವಿರಾಮವೂ ಬಿದ್ದಿತ್ತು.

***
ಎಷ್ಟೋ ನೆನಪುಗಳೇ ಹಾಗೆ. ಅವು ಮರೆಯಬೇಕೆಂದುಕೊಂಡರೂ ಆಗುವುದೇ ಇಲ್ಲ. ಎಲ್ಲೋ ಒಂದು ಮೂಲೆಯಲ್ಲಿ, ನಮ್ಮಲ್ಲೇ ಬಚ್ಚಿಕೊಂಡು ಕುಳಿತು ಬಿಟ್ಟಿರುತ್ತವೆ. ಅಪರೂಪಕ್ಕೆ ಎಲ್ಲವೂ ಮನಸಿನಲ್ಲಿ ಚಿತ್ರವಾಗಿ ಮೂಡಿ,  ತುಟಿಯಲ್ಲೊಂದು ಕಿರುನಗೆ ಮೂಡಿಸಿ, ಮರೆಯಾಗುತ್ತವೆ. ಮೊನ್ನೆ ಸೂಪರ್ ಮಾರ್ಕೆಟ್ನಿಂದ ತಂದ ಪೇರಳೆ ಹಣ್ಣಿನ ರಸದ ಬಾಟಲಿ ನೋಡಿದಾಗ, ಹಳೆ ನೆನಪನ್ನೆಲ್ಲ ಕೆದಕಿ ಕಣ್ಣು ಹೊಡೆದ ಭಾಸವಾಯಿತು.