ಭಾನುವಾರ, ಅಕ್ಟೋಬರ್ 21, 2012

ಪೇರಳೆ ಹಣ್ಣು

"ಏ ಅಲ್ನೋಡು, ಒಂದು ಹಣ್ಣು ಅರಿಶಿನಕ್ಕಾಗಿದೆ."

"ಓ ಹೌದು, ಪೂರ್ತಿ ಹಣ್ಣಾಗಿದೆ."

"ಇವತ್ತು ಅದನ್ನ ಕೊಯ್ದು ಬಿಡೋಣ ಆಯ್ತಾ?"

"ಅಯ್ಯೋ ಬೇಡ ಬೇಡ, ಪಕ್ಕದ್ಮನೆ ಆಂಟಿಗೆ ಗೊತ್ತಾದ್ರೆ ಬೈತಾರೆ, ಅಮ್ಮನೂ ಬೈತಾಳೆ."

"ಹಮ್, ಇವತ್ತು ಅಮ್ಮ ಮತ್ತೆ ಆಂಟಿ ಹೊರಗೆ ಹೋಗ್ತಾರಲ್ಲ, ಆವಾಗ ಮರ ಹತ್ತಿ ಕೊಯ್ದು ತಿಂದು ಬಿಡೋಣ".

ಹೀಗೇ ಸಾಗುತ್ತಿತ್ತು ನನ್ನ ಮತ್ತು ತಂಗಿಯ ಮಾತುಗಳು. ನಾವಿದಿದ್ದು ಪೇಟೆ ಮನೆಯಲ್ಲಿ. ಅದಕ್ಕೆಂದೇ ನಮಗೆ ಹಳ್ಳಿಗಳಲ್ಲಿ ಸಿಕ್ಕುವ ಹಣ್ಣುಗಳನ್ನು , ಆ ಮರಗಳನ್ನು ಹತ್ತಿ ಕೊಯ್ದು ತಿನ್ನುವ ಅವಕಾಶಗಳು ಕಡಿಮೆಯೇ ಇತ್ತು. ಆದರೂ ನಮ್ಮ ಅದೃಷ್ಟ ಎನ್ನುವಂತೆ ನಾವು ಬಾಡಿಗೆಗಿದ್ದ ಮನೆಯಂಗಳದಲ್ಲಿ ಒಂದು ಪೇರಳೆ ಮರ ಇದ್ದಿದ್ದು ನನಗೂ, ತಂಗಿಗೂ ಇನ್ನಿಲ್ಲದ ಆನಂದ ನೀಡಿತ್ತು. ಪ್ರತೀ ಬಾರಿಯೂ ಮರದಲ್ಲಿ ಹಣ್ಣಾದಾಗ, ಎಲ್ಲರ ಕಣ್ಣು ತಪ್ಪಿಸಿ, ಮರ ಹತ್ತಿ ಹಣ್ಣನ್ನು ಕೊಯ್ದು ತಿನ್ನುವ ಅಭ್ಯಾಸ ನಮ್ಮದಾಗಿತ್ತು. ಆವಾಗಿನ್ನೂ ನಾವು ಚಿಕ್ಕವರು. ಏನೂ ತಿಳಿಯದ ಬಾಲ್ಯ. ಪ್ರತೀ ಬಾರಿಯೂ ಹಣ್ಣಾಗಿಯೂ ಒಂದು ಸಾರಿಯೂ ತಮಗೆ ತಿನ್ನಲು ಸಿಗದೇ ಇದ್ದಿದ್ದು ನಮ್ಮ ಓನರ್ ಅವರ ತಳಮಳಕ್ಕೆ ಕಾರಣವಾಗಿತ್ತು. ಅಮ್ಮನ ಬಳಿಯೂ ಒಂದೆರಡು ಬಾರಿ ಹೇಳಿಕೊಂಡಿದ್ದೂ ಇದೆ ಇದರ ಬಗ್ಗೆ. ನಮ್ಮ ಕಣ್ಣಾಮುಚ್ಚಾಲೆ ಆಟ ತಿಳಿಯದ ಅಮ್ಮ ಹೇಳಿದ್ದಳು, ಗಿಳಿ ಏನಾದರೂ ತಿಂದಿರಬಹುದು ಎಂದು.

ಪೇರಳೆ ಹಣ್ಣುಗಳೆಂದರೆ ನಮಗೆ ತುಂಬಾ ಪ್ರೀತಿಯಾಗಿತ್ತು. ಅದೂ ಕಂಪೊಂಡಿನ ಒಳಗೆ ಕಣ್ಣು ಕುಕ್ಕುವಂತೆ, ಮಿಡಿಯಾಗಿ,ಕಾಯಾಗಿ, ಹಣ್ಣಾಗುತ್ತಿರುವುದನ್ನು ನೋಡಿಯೂ ಸುಮ್ಮನಿರಲು ನಮಗಂತೂ ಸಾದ್ಯವೇ ಆಗುತ್ತಿರಲಿಲ್ಲ. ಹೇಳಿ ಕೇಳಿ ಅದು ಚಂದ್ರ ಪೇರಳೆ. ಹಣ್ಣನ್ನು ಕತ್ತರಿಸಿ ಒಂದು ಚೂರು ಉಪ್ಪು, ಒಂದ್ ಸ್ವಲ್ಪ ಮೆಣಸಿನ ಪುಡಿ ಹಚ್ಚಿ ತಿಂದರೆ, ಆಹಾ!. ಬಹುಪಾಲು ನಾವು ಮನೆಯಲ್ಲಿ ಯಾರು ಇಲ್ಲದಿರುವ ಸಮಯ ಸಿಕ್ಕಿದಾಗ ಇದನ್ನೇ ಮಾಡುತ್ತಿದ್ದೆವು.

ಒಂದು ದಿನ ಏನಾಯಿತೆಂದರೆ, ನಾನು ಮರ ಹತ್ತಿ ಹಣ್ಣು ಕೊಯ್ಯುತ್ತಿದ್ದೆ. ನಮ್ಮ ಮನೆಯಲ್ಲಿ ಮತ್ತು ಓನರ್ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡಾಗಿತ್ತು. ನನ್ನ ತಂಗಿ ಕೆಳಗೆ ನಿಂತು, ನನಗೆ ಹಣ್ಣು ಕೊಯ್ಯಲು, ದೋಟಿ ಕೋಲನ್ನು ಕೊಡುತ್ತ, ಹಣ್ಣೆಲ್ಲಿದೆ ಎಂದು ತೋರಿಸುತ್ತಿದ್ದಳು. ಆದರೆ ಆ ದಿನ ನಮ್ಮ ಅದೃಷ್ಟ ಕೈ ಕೊಟ್ಟಿತ್ತು. ಏನೋ ಮರೆತು ಹೋದ ಪಕ್ಕದ ಮನೆಯ ಆಂಟಿ, ವಾಪಾಸ್ ಬಂದು ಬಿಟ್ಟಿದ್ದರು! ನನ್ನ ತಂಗಿ ಅಕ್ಕ, ಇಳಿ ಸಾಕು ಎಂದು ಚೀರಿದರೂ, ಮರದ ತುದಿಯಲ್ಲಿರುವ ನನಗೆ ತಕ್ಷಣಕ್ಕೆ ಇಳಿಯಲು ಆಗಲೇ ಇಲ್ಲ. ಅಷ್ಟರಲ್ಲಿ ತಂಗಿ ಓಡಿ ಹೋಗಿ ಮನೆ ಸೇರಿಕೊಂಡಿದ್ದಳು. ನಾನು ಹೇಗೋ ಸಂಭಾಳಿಸಿಕೊಂಡು ಇಳಿಯುತ್ತಿದಂತೆ, ಆಂಟಿ ತಮ್ಮ ಚಾನೆಲ್ನ ಶುರು ಮಾಡಿದರು. "ಕಳ್ಳ ಮಕ್ಳ, ನೀವಾ ಇದು? ಇಷ್ಟು ದಿನ ಈ ಹಣ್ಣು ನನಗೆ ಸಿಗದೇ ಇರುವ ಹಾಗೆ ಮಾಡಿದ್ದಿರಲ್ಲ. ಇರಿ, ಏನು ಮಾಡ್ತೀನಿ ನೋಡಿ, ನಿಮ್ ಅಮ್ಮ ಬರಲಿ" ಅಂತ ಕೂಗ್ತಾ ಇದ್ರೆ ನಾನು ಮಾತ್ರ ಒಂದೇ ಸಮನೆ ಮನೆಗೆ ಓಡಿದ್ದೆ. ಇಬ್ಬರೂ ಮನೆ ಬಾಗಿಲನ್ನು ಹಾಕಿಕೊಂಡು ಒಬ್ಬರ ಮುಖ ಮತ್ತೊಬ್ಬರು ನೋಡ್ತಾ ಕುಳಿತು ಬಿಟ್ಟೆವು. ಅಮ್ಮನಿಗೆ ವಿಷಯ ಗೊತ್ತಾಗಿ, ಆಮೇಲೆ ನಮಗೆ ಬೀಳುವ ಏಟಿನ ಬಗ್ಗೆ ನಾವು ತೀವ್ರ ವಾಗಿ ಯೋಚಿಸಲಾರಂಭಿಸಿದ್ದೆವು.

ಅಂತೂ ಅಮ್ಮ ಬಂದಿದ್ದೆ, ಅದನ್ನೇ ಕಾಯ್ತಾ ಇದ್ದ ಆಂಟಿ ನಮ್ಮ ಬಗ್ಗೆ ಎಲ್ಲಾ ಚಾಡಿ ಹೇಳಿಕೊಟ್ಟರು. ಅಮ್ಮ, ಆಂಟಿಯ ಬಳಿ ಇನ್ನು ಮುಂದೆ ಹಿಂಗಾಗಲ್ಲ ಎಂದು ಹೇಳಿ ಕಳಿಸಿದ್ದೂ ಆಯಿತು. ನಾನು, ತಂಗಿಯೂ ಬಹಳ ಹೆದರಿಕೆಯಿಂದ ಒಂದು ಮೂಲೆಯಲ್ಲಿ ಕುಳಿತೂ ಬಿಟ್ಟಿದ್ದೆವು. ಅಳುವುದೊಂದೇ ಬಾಕಿ ಇದ್ದಿತ್ತು! ಇನ್ನೇನು ಏಟು ಬೀಳುತ್ತೆ ಎಂದುಕೊಂಡರೆ, ಆಶ್ಚರ್ಯ ಎಂಬಂತೆ, ಅಮ್ಮ, ನಮ್ಮ ಬಳಿ ಬಂದು, ಆಗಿದ್ದು ಆಯ್ತು. ಇನ್ನು ಮುಂದೆ ಹೀಗೆಲ್ಲ ಮಾಡಬೇಡಿ ಎಂದು ಬುದ್ದಿ ಹೇಳಿ, ನಿಮಗೆ ಹಣ್ಣು ಬೇಕಾದ್ರೆ ಕೇಳಿ ಇಸ್ಕೊಳಿ, ಕಡಿಯೋದು ತಪ್ಪು ಎಂದೂ ಹೇಳಿ ನಮ್ಮನ್ನು ಮುದ್ದಾಡಿದ್ದಳು. ನನಗೂ ತಂಗಿಗೂ ಏಟು ತಪ್ಪಿದ ನಿಟ್ಟುಸಿರು ಅರಿವಿಲ್ಲದಂತೆ ಬಂದು ಹೋಯಿತು. ನಮ್ಮ ಮರ ಹತ್ತಿ ಹಣ್ಣು ತಿನ್ನುವ ಕಾಯಕಕ್ಕೆ, ಅಲ್ಲೇ ಪೂರ್ಣ ವಿರಾಮವೂ ಬಿದ್ದಿತ್ತು.

***
ಎಷ್ಟೋ ನೆನಪುಗಳೇ ಹಾಗೆ. ಅವು ಮರೆಯಬೇಕೆಂದುಕೊಂಡರೂ ಆಗುವುದೇ ಇಲ್ಲ. ಎಲ್ಲೋ ಒಂದು ಮೂಲೆಯಲ್ಲಿ, ನಮ್ಮಲ್ಲೇ ಬಚ್ಚಿಕೊಂಡು ಕುಳಿತು ಬಿಟ್ಟಿರುತ್ತವೆ. ಅಪರೂಪಕ್ಕೆ ಎಲ್ಲವೂ ಮನಸಿನಲ್ಲಿ ಚಿತ್ರವಾಗಿ ಮೂಡಿ,  ತುಟಿಯಲ್ಲೊಂದು ಕಿರುನಗೆ ಮೂಡಿಸಿ, ಮರೆಯಾಗುತ್ತವೆ. ಮೊನ್ನೆ ಸೂಪರ್ ಮಾರ್ಕೆಟ್ನಿಂದ ತಂದ ಪೇರಳೆ ಹಣ್ಣಿನ ರಸದ ಬಾಟಲಿ ನೋಡಿದಾಗ, ಹಳೆ ನೆನಪನ್ನೆಲ್ಲ ಕೆದಕಿ ಕಣ್ಣು ಹೊಡೆದ ಭಾಸವಾಯಿತು.

ಶನಿವಾರ, ಸೆಪ್ಟೆಂಬರ್ 01, 2012

ನಾನೀಗ ಮೂಕ ಪ್ರೇಕ್ಷಕಿ!!

ಆ ಮುಖವನ್ನು ಮೊದಲ
ಬಾರಿಗೆ ನೋಡಿದಾಗ ಅನ್ನಿಸಿದ್ದು
ಎಷ್ಟು ಪ್ರಶಾಂತ ಮುಖ!
ಹೊಳೆ ಹೊಳೆಯುವ ಆ ಮುಖದ
ಹಿಂದಿನ ಕಥೆ ಏನು ಎಂಬ ಕುತೂಹಲ
ಮೂಡಿದ್ದು ತೀರ ಇತ್ತೀಚಿಗೆ.
ಹೆಸರಾಗಿದೆ ಅದು ತನ್ನ ಒಳ್ಳೆತನಕ್ಕೆ,
ಮಾತಿಗೂ ಮುನ್ನ ಬೀರುವ ಮಂದಹಾಸಕ್ಕೆ .
ಹೊರಗೆ ಹೊಳೆಯುವ ನಗು, ಒಳಗೂ?
ಇರುವವನು ಒಬ್ಬನೇ ಮನೆಗೆ ಯಜಮಾನ
ಅಕ್ಷರ ಕಲಿಯದ ತಂಗಿ,
ಗಂಡ ಬಿಟ್ಟು ಹೋದ ಅಕ್ಕ,
ವಯಸ್ಸಾದ ತಾಯಿ.
ತೋರದೆ ನೋವನ್ನು, ತನ್ನಲ್ಲೇ ನುಂಗಿ,
ಎಲ್ಲರೊಂದಿಗೆ ಬೆರೆತು, ನಲಿಯುತ್ತ,
ಮುಂದೊಂದು ದಿನ ಬರಲಿರುವ
ಒಳ್ಳೆ ದಿನಗಳ ಎಣಿಸುತ್ತಿರುವನು .
ಅವನು ಆಶಾವಾದಿ!
ಅವನ ಆತ್ಮವಿಶ್ವಾಸ,
ಮುಂದಿನ ದಿನಗಳ ಬಗ್ಗೆ ಭರವಸೆ,
ಎಲ್ಲದನ್ನೂ, ಎಲ್ಲವನ್ನೂ ಸಹಿಸುವ ಪರಿಗೆ,
ನಾನು ಮೂಕ ಪ್ರೇಕ್ಷಕಿ!!

* * *
ಅವನು ನೋಡಲು ತೀರ ಸುಮಾರು
ಎಂದು ನೀನು ಅದನ್ನ ಕಮ್ಮಿ
ಅಂದುಕೊಂಡರೆ ತಪ್ಪು ನಿನ್ನದೇ!
ಒಳಗೆ ಬರುವ ವಯ್ಯಾರಿಯನ್ನು
ಪಾದದಿಂದ ಹಿಡಿದು ತಲೆಯವರೆಗೆ
ನೋಡುವ ರೀತಿಗೆ ಹೇಸಿಗೆಯಾಗಿ
ಮನದಲ್ಲಿ ಅವನೆಡೆಗೆ ಅಸಹ್ಯ ಮೂಡಿದರೆ
ತಪ್ಪು ಅವನದಲ್ಲ, ನಿನ್ನದೇ.
ಇದು ಹೀಗೆ, ಬದಲಾಯಿಸಲಾಗದನ್ನು ಒಪ್ಪಿಕೊ,
ಒಪ್ಪಿಕೊಳ್ಳಲಾಗದನ್ನು ಬದಲಾಯಿಸು ಎಂಬ
ಮಾತನ್ನು ನಂಬಿ ಬದುಕ ಬೇಕೆಂದರೂ,
ಅದೆಷ್ಟು ಕಷ್ಟ ಎಂದು
ಆಗಾಗ ಮನವರಿಕೆಯಾಗುವುದು.
ಹಂಡೆಯ ತೊಟ್ಟಿನಂತಿರುವ ಆ ಕಿವಿಯೋಲೆ,
ಮೊಣಕಾಲಿಗಿಂತ ಮೇಲಿರುವ ಸ್ಕರ್ಟು
ತುಟಿಗೆ ಮೆತ್ತಿದ ಕೆಜಿ ಲಿಪ್‌ಸ್ಟಿಕ್ಕು,
ಕೆನ್ನೆಗಚ್ಚಿದ ಎರಡಿಂಚು ಪೌಡರ್:
ಹೊರ ಸೌಂದರ್ಯದ ಮೆರವಣಿಗೆಯಲ್ಲಿ
ಮರೆಯಾಗಿದೆ ಅಂತರಂಗ ಸೌಂದರ್ಯ.

ಅವನೂ ನಗವನು, ಅವಳೂ ನಗುವಳು,
ಇಬ್ಬರ ಕಣ್ಣುಗಳು ಏನೋ ಮಾತಾಡುವವು
ಜಗತ್ತಿನ ಚಿಂತೆ ಮರೆತ ಜೋಡಿಹಕ್ಕಿಗಳು
ನೋಡುಗರನ್ನು ಅಲಕ್ಷಿಸಿದಂತಿದೆ.

ಇದ್ಯಾವುದರ ಪರಿವೆ ಇಲ್ಲದ ತೀರ ಸುಮಾರಿನ
ಹೆಣ್ಣೊಂದು ಕುಳಿತಿದೆ ತನ್ನ ತವರ ಮನೆಯಲ್ಲಿ,
ಕರುಳ ಕುಡಿಯ ಬರುವಿಕೆಯ ಸಂಭ್ರಮದಲ್ಲಿ,
ದಿನಗಳ ಎಣಿಸುತ್ತಾ.
ಅವಳ ಕಣ್ಣುಗಳಲ್ಲಿ, ಅವನಿಗಾಗಿಯೇ
ನಿರೀಕ್ಷೆ, ಊಹೂಂ ಅವನಿಲ್ಲ ಈ ಜಗದೊಳು.
ಅವನಿರುವುದು ಕಳೆದುಹೋದ ತನ್ನದೇ ಹೊಸ ಜಗದಲ್ಲಿ,
ತಕ್ಷಣಕ್ಕೆ ಸಿಗುವ ಮತ್ತಿನಾಲಿಂಗನದಲಿ.

ಎಲ್ಲವನ್ನು ನೋಡುತ್ತಾ, ಗಮನಿಸುತ್ತಾ,
ನಿಂತ ನನ್ನಲ್ಲಿ ಸಾವಿರಾರು ಪ್ರಶ್ನೆಗಳು.
ಯಾವುದು ಸರಿ, ಯಾವುದು ತಪ್ಪು?
ಕೇಳುವವರಾರು, ನಿರ್ಧರಿಸುವರಾರು?
ಎಲ್ಲರೂ ಅವರವರ ಬ್ರಮಾಲೋಕದಲ್ಲಿ
ಮಿಂಚಿ ಮರೆಯಾಗುವ ಮಿಂಚು ಹುಳುವಿನ
ಹಾಗೆ, ಏನೋ ನೆನೆದು, ಪುಳಕಗೊಂಡು
ಎನೋ ಪಡೆದುಕೊಂಡಂತನಿಸಿ,
ಮತ್ತಿನ್ನೆನೋ ಕಳೆದುಕೊಳ್ಳುವುದರಲ್ಲಿ,
ಮೈಮರೆತಿರುವರಲ್ಲ, ನಿದ್ರಿಸುತ್ತಿರುವರಲ್ಲ!
ಎಚ್ಚರಿಸುವ ಧೈರ್ಯ ನನಗಿಲ್ಲ!
ಎಚ್ಚರಿಸಬೇಕೆಂದು ಮನಸು ಹೇಳಿದರೂ
ನನ್ನ ಅಸಹಾಯಕತೆಗೆ ಬೆಪ್ಪಾಗಿ ಕುಳಿತಿರುವೆ!!
ನಾನು ಮೂಕ ಪ್ರೇಕ್ಷಕಿ !

ಗುರುವಾರ, ಆಗಸ್ಟ್ 09, 2012

ಕೋರಿಕೆ

ತೀರ ನಿನ್ನೆ ಮೊನ್ನೆಯೇ ನಡೆದಂತೆ ಇದೆ ಎಲ್ಲವೂ
ಅವನ ಕಂಡು, ಮಾತಾಡಿ, ಮುಂದಿನ ಬದುಕಿನ
ಕನಸುಗಳನ್ನು ಕಟ್ಟಿದ್ದು, ಮುಸ್ಸಂಜೆ ವೇಳೆ.
ವಾರದ ಕೊನೆ ಬರುತ್ತಲೇ ಅವನ ಭೇಟಿಯಾಗಲು
ಕಾದ ನಿರೀಕ್ಷೆ, ಮಸ್ಸಾಲ್ ಪೂರಿಯೊಂದಿಗೆ ಕೊನೆಗೊಂಡಿದ್ದು.
ಕೂಡಿ ನಕ್ಕು, ಅತ್ತು , ತಿಂದು , ರಸ್ತೆ ತಿರುಗಿದ ಲೆಕ್ಕ ಎಷ್ಟೋ ?
ಹಿರಯರೆಲ್ಲ ಸೇರಿ , ಆಯ್ದುಕೊಂಡ ಒಂದು ದಿನ,
ಬರಿದಾದ ನನ್ನ ಕೈಗಳಲ್ಲಿ ಮದರಂಗಿಯ ರಂಗು.
ಕರೆಯೋಲೆಗಾಗಿ ತಿರುಗಿದ್ದೆಷ್ಟೋ ? ಮನೆಗಾಗಿ ಹುಡುಕಿದ್ದೆಷ್ಟೋ ?
ತೀರ ನಿನ್ನೆ ಮೊನ್ನೆಯೇ ನಡೆದಂತೆ ಇದೆ ಎಲ್ಲವೂ
ರೇಶಿಮೆ ಸೀರೆ ಉಟ್ಟು ಮಂಟಪಕ್ಕೆ ನಾ ನಡೆದುಬಂದ ಘಳಿಗೆ.
ಆಮೇಲೆಲ್ಲಾ ದಿನಗಳು ಹೇಗೆ ಕಳೆಯಿತೋ ?
ಕ್ಷಣಗಳು ,ದಿನಗಳು ,ವಾರಗಳು ಕಳೆದಿದ್ದೆ ತಿಳಿಯಲಿಲ್ಲ.
ಮದುವೆಯಾಗಿ ಕಳೆದ ಮೂರು ಮಾಸಕ್ಕೆ ಇಷ್ಟೇ ಕೋರಿಕೆ,
ಇದೇ ತರದಲ್ಲಿ ಯುಗಗಳೆಲ್ಲ ಕ್ಷಣದಂತೆ ಉರುಳಿ,
ಬದುಕು ಹಸನಾಗಿ ನಲಿಯಲಿ ಎಂದಷ್ಟೇ!

ಭಾನುವಾರ, ಜುಲೈ 29, 2012

ಬದನೆಕಾಯಿ ಎಣಗಾಯಿ

ಬೇಕಾಗುವ ಸಾಮಾಗ್ರಿಗಳು
ಸಣ್ಣ ಬದನೆಕಾಯಿ - ಎಂಟು
ಶೇಂಗ - ಒಂದು ಮುಷ್ಟಿ
ಮೆನಸಿನಕಾಯಿ ಪುಡಿ - ಎರಡು ಟಿ ಚಮಚ
ಧನಿಯ - ಎರಡು ಟಿ ಚಮಚ
ತೆಂಗಿನ ತುರಿ - ಒಂದು ಬಟ್ಟಲು
ಬೆಳ್ಳುಳ್ಳಿ - ಒಂದು
ಹುಣಿಸೆ ಹುಳಿ - ಎರಡು ಟಿ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಈರುಳ್ಳಿ- ಒಂದು
ಸಾಸಿವೆ - ಒಂದು ಟಿ ಚಮಚ
ಎಣ್ಣೆ - ೫ ಟಿ ಚಮಚ
ಅರಿಸಿನ - ಚಿಟಕಿ
ಜೀರಿಗೆ - ಒಂದು ಟಿ ಚಮಚ

ಮಾಡುವ ವಿಧಾನ
ಶೇಂಗ,ಮೆನಸಿನಕಾಯಿ ಪುಡಿ,ಧನಿಯ,ತೆಂಗಿನ ತುರಿ,ಹುಣಿಸೆ ಹುಳಿ,ಉಪ್ಪು,ಬೆಳ್ಳುಳ್ಳಿ ಹಾಕಿ ನುಣ್ಣಗೆ ರುಬ್ಬಿ.
ಈ ಮಿಶ್ರಣವನ್ನು ಮೊದಲೇ ತೊಳೆದು ಹೆಚ್ಚಿಟ್ಟ ಬದನೆಕಾಯಿಗೆ ತುಂಬಿಸಿ. ಬದನೆಕಾಯಿಯನ್ನು ತೊಟ್ಟು ಇದ್ದಂತೆ ನಾಲ್ಕು ಭಾಗವಾಗಿ ಕತ್ತರಿಸಬೇಕು. ಬೀಸಿಟ್ಟ ಅರ್ಧ ಮಿಶ್ರಣ ಮಾತ್ರ ಇದಕ್ಕೆ ಉಪಯೋಗಿಸಿ, ಇನ್ನರ್ಧ ಉಳಿಸಿಕೊಳ್ಳಿ.
ಕಡಾಯಿಗೆ ಎಣ್ಣೆ, ಹಾಕಿ ಅದು ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ ಹಾಕಿ. ಒಗ್ಗರಣೆ ಬೆಂದ ಬಳಿಕ ಈರುಳ್ಳಿ ಹಾಕಿ. ಆಮೇಲೆ ಮಸಾಲೆ ತುಂಬಿಸಿಟ್ಟ ಬದನೆಕಾಯಿಯನ್ನು ಒಂದೊಂದೆ ಕಡಾಯಿಗೆ ಹಾಕಿ. ಬದನೆಕಾಯಿ ಕಂದು ಬಣ್ಣ ಬಂದ ಬಳಿಕ, ಉಳಿದ ಮಿಶ್ರಣವನ್ನ ಹಾಕಿ, ಕುದಿಸಿ, ಕೆಳಗಿಳಿಸಿ.
ರುಚಿ ರುಚಿಯಾದ ಎಣಗಾಯಿ ತಯಾರು. ಇದನ್ನು ರೊಟ್ಟಿ, ಚಪಾತಿ ಅಥವ ದೋಸೆಯ ಜೊತೆಗೆ ಬಳಸಬಹುದು. ಇಲ್ಲವೇ ಊಟದ ಜೊತೆಗೂ ಬಳಸಬಹುದು.

ಭಾನುವಾರ, ಜುಲೈ 22, 2012

ಮಳೆಯೆಂದರೆ....

ಮಳೆಯೆಂದರೆ ಅಲ್ಲಿ, ಅಜ್ಜನ ಮನೆಯಲ್ಲಿ ಸಂಭ್ರಮ, ಸಡಗರ.
ಮನೆಯ ಮತ್ತು ಕೊಟ್ಟಿಗೆಯ ಮಾಡು ಸೇರುವಲ್ಲಿ,
ಆಡಿಕೆ ಮರದ ದಬ್ಬೆಯ ಕಡಿದು ನೀರು ಸೋರದಂತೆ ಅಡ್ಡ ಬಿಗಿದು,
ನೀರಿಗೆ ದಾರಿ ಮಾಡುವುದು.
ಹಂಚಿನ ಮನೆಗೆ ಸೋರುವಲ್ಲೆಲ್ಲಾ, ಹಾಳೆ ಪಾಕ ಸಿಕ್ಕಿಸುವುದು.
ಬಲಿತ ಹಲಸಿನ ಕಾಯಿಯನ್ನು, ಒಂದೊಂದೇ
ಪರಿಶೀಲಿಸಿ, ಕೊಯ್ದು, ಬಿಡಿಸಿ ಸೊಳೆಯ ಬೇಯಿಸಿ, ಬೀಸಿ, ಒಣಗಿಸಿ,
ಡಬ್ಬಿ ತುಂಬಿ, ಮೆತ್ತಿಯ ಮೇಲಿರಿಸಿದ ಹಪ್ಪಳ ಇಳಿದು,
ಎಣ್ಣೆಯನ್ನು ಕೂಡಿ ಸಾಲಾಗಿ ಕುಳಿತ ಮಕ್ಕಳ ಬಾಯಿ ಸೇರುವುದು.
ಮಳೆಯೆಂದರೆ, ಬೇಸಿಗೆಯ ಧೂಳಿಗೆ ಕೆಂಪಾದ ಎಲೆಗಳು, ಹಸಿರಾಗುವುದು.
ಮಳೆಯೆಂದರೆ ಮಾವನಿಗೆ ಕಂಬಳಿಕೊಪ್ಪೆ ಹೊದೆದು,
ಅಡಿಕೆ ತೋಟದಲ್ಲಿ ಮಣ್ಣು ಸಮ ಮಾಡಿ,
ಅವಳೆಗಳಿಗೆ ನೀರು ಹೋಗಲು ದಾರಿ ಮಾಡುವುದು.
ಮಳೆಗಾಲವೆಂದರೆ ಅಜ್ಜಿ ಸುಟ್ಟು ಕೊಡುವ ಗೇರು ಬೀಜದ ಕಂಪು.
ಮಳೆಯೆಂದರೆ ಸೌದೆ ಮನೆಯಲ್ಲಿ ಬಚ್ಚಲ ಒಲೆಗೆಂದು ಬೆಚ್ಚಗಿಟ್ಟ ಕಟ್ಟಿಗೆಗಳು.
ಮಳೆಯೆಂದರೆ ಹಂಡೆಯಲ್ಲಿ ಕಾಯಿಸಿಟ್ಟ ಬಿಸಿನೀರನ್ನು ಪೂರ್ತಿ ಮೀಯುವುದು.
ಮಳೆಯೆಂದರೆ ಅಲ್ಲಿ, ಮನೆಯಿಂದ ಹೊರ ಹೊರಟಾಗ ಕಾಲಿಗಂಟುವ ಉಂಬಳ.

*****

ಮಳೆಯೆಂದರೆ ಇಲ್ಲಿ, ಓಡಾಡಲಾಗದ ಕೆಸರು,
ಬಟ್ಟೆ ಕೊಳೆಯಾದೀತೆಂಬ ಭಯ.
ಮಳೆಯೆಂದರೆ ಇಲ್ಲಿ ಜಕಮ್ಮಾಗುವ ಟ್ರಾಫಿಕ್ಕು,
ಮಳೆಯೆಂದರೆ ಇಲ್ಲಿ ಎಲ್ಲೆಂದರಲ್ಲಿ, ಹರಿಯುವ ಚರಂಡಿಯ ನೀರು.
ತೋಯದೇ ಮನೆ ಸೇರಿದರೆ ಅದೇ ನಿಟ್ಟುಸಿರು!!
ಭಾನುವಾರ ಸಂಜೆ, ಜಿಟಿ ಮಳೆ, ಬಿಸಿ ತಿಂಡಿ ಬೇಡುವ ನಾಲಿಗೆ.
ಇಲ್ಲಿ ಸುಟ್ಟ ಗೇರು ಬೇಜವೂ ಇಲ್ಲ!
ಕರಿಯಲು ಹಲಸಿನ ಕಾಯಿ ಹಪ್ಪಳವೂ ಇಲ್ಲ!
ಕೊನೆಗೆ, ಸುಟ್ಟ ಗೇರು ಬೀಜ ಇಲ್ಲದಿದ್ದರೇನು?
ಸುಂದರವಾಗಿ ಬಜ್ಜಿ ಮಾಡಬಹುದಲ್ಲ?
ಅನ್ನಿಸಿದ್ದೇ, ಖುರ್ಚಿಯಿಂದ ಜಿಗಿದು,
ಕಡಲೆ ಹಿಟ್ಟಿನ ಡಬ್ಬಿಯ ಕೆಳಗಿಳಿಸುವೆ.
ಈರುಳ್ಳೀ, ಮೆಣಸನ್ನು ಕತ್ತರಿಸಿ,ಕಲಸಿ
ಒಂದೊಂದೇ ಕಡಾಯಿಗಿಳಿಸುವೆ,
ಅಜ್ಜಿ ಪಕ್ಕಕ್ಕೇ ನಿಂತಂತೆ ಭಾಸವಾಗುತ್ತದೆ,
ಮಳೆಯನ್ನು ಮತ್ತೊಮ್ಮೆ ನೋಡುತ್ತೇನೆ, ಕುತೂಹಲದಿಂದ!!

ಸೋಮವಾರ, ಜುಲೈ 09, 2012

ಡೋಕಲ

ಬೇಕಾಗುವ ಸಾಮಾಗ್ರಿಗಳು
ಡೋಕಲ ಹಿಟ್ಟಿಗೆ ಕಡಲೆ ಹಿಟ್ಟು - 2 ಕಪ್
ಹುಳಿ ಮೊಸರು/ಮಜ್ಜಿಗೆ - 1/2 ಕಪ್
ಅಡಿಗೆ ಸೋಡಾ - 1/2 ಟೀ ಚಮಚ
ಹಸಿರು ಮೆಣಸಿನಕಾಯಿ ಪೇಸ್ಟ್ -4 ಟೀ ಚಮಚ
ಲಿಂಬೆ ರಸ - 5 ಟೀ ಚಮಚ
ಜೀರಿಗೆ - 1/2 ಟೀ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 5 ಟೀ ಚಮಚ
ಸಾಸಿವೆ ಕಾಳು - ೧ ಟೀ ಚಮಚ
ಅರಿಸಿನ - 1/2 ಟೀ ಚಮಚ
ಕೊತ್ತಂಬರಿ ಸೊಪ್ಪು - 2 ಟೀ ಚಮಚ
ತೆಂಗಿನ ಕಾಯಿ ತುರಿ - 3 ಟೀ ಚಮಚ
ಪುದಿನ ಸೊಪ್ಪಿನ ಚಟ್ನಿಗೆ
ಪುದಿನ ಸೊಪ್ಪು - 7 ರಿಂದ 8 ಎಲೆಗಳು
ಮೆಣಸಿನ ಕಾಯಿ – 4
ಲಿಂಬೆ ರಸ - 5 ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು

ವಿಧಾನ
1.ಮೊದಲಿಗೆ ಕಡಲೆ ಹಿಟ್ಟು, ಮೊಸರು, ಮೆಣಸಿನ ಪೇಸ್ಟ್, ಜೀರಿಗೆ, ಅರಿಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆ ರಸ, ಅಡಿಗೆ ಸೋಡಾ, ಎಲ್ಲವನ್ನು ಹಾಕಿ ಕಲಸಿ. ಕಲಸಿದ ಹಿಟ್ಟು, ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು.(ತುಂಬಾ ತೆಳ್ಳಗಿರಬಾರದು). ಈ ಮಿಶ್ರಣವನ್ನ ಸುಮಾರು ನಾಲ್ಕು ಘಂಟೆಗಳ ಕಾಲ ಮುಚ್ಚಿಡಿ.
2. ನಾಲ್ಕು ಘಂಟೆಗಳ ನಂತರ ಉಬ್ಬಿದ ಮೇಲಿನ ಮಿಶ್ರಣವನ್ನ ಕುಕ್ಕರ್ ಪಾತ್ರೆಯ ತಳಕ್ಕೆ ಸ್ವಲ್ಪ ಎಣ್ಣೆ ಒರೆಸಿ ಮಿಶ್ರಣವನ್ನು ಹದವಾಗಿ ಸುರಿಯಿರಿ.
3. ಕುಕ್ಕರ್ನಲ್ಲಿ ಮೂರು ಸೀಟಿ ಹೊಡೆಸಿ
4. ಕುಕ್ಕರ್ ತಣಿದ ಬಳಿಕ, ಬೆಂದ ಮಿಶ್ರಣವನ್ನು, ಬೇಕಾದ ಆಕಾರಕ್ಕೆ ಕತ್ತರಿಸಿ.
5. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಹಾಕಿ, ಸಾಸಿವೆ ಚಿಟ ಗುಟ್ಟಿದ ಮೇಲೆ , ಸ್ವಲ್ಪ ಜೀರಿಗೆ ಹಾಕಿ.
6. ಈ ಒಗ್ಗರಣೆಯನ್ನು ಕತ್ತರಿಸಿಟ್ಟ ಮಿಶ್ರಣಕ್ಕೆ, ಹುಯ್ಯಿರಿ.
7. ಕತ್ತರಿಸಿದ ಕೊತ್ತಂಬರಿ ಸೊಪ್ಪು, ತುರಿದ ತೆಂಗಿನ ಕಾಯನ್ನು ಹಾಕಿ ಅಲಂಕರಿಸಿ.

ಚಟ್ನಿ
ಪುದಿನ ಸೊಪ್ಪು, ಮೆಣಸಿನ ಕಾಯಿ, ಉಪ್ಪು, ಮತ್ತು ಲಿಂಬೆ ರಸ ಹಾಕಿ ನುಣ್ಣಗೆ ಬೀಸಿ. ಡೋಕಲದೊಂದಿಗೆ ಸವಿಯಲು ಕೊಡಿ.

ಗುರುವಾರ, ಏಪ್ರಿಲ್ 26, 2012

ನಮ್ಮ ಮದುವೆಗೆ ಬನ್ನಿ!!


ಅಂತೂ ಇಂತೂ ಹಿಂಗೆಲ್ಲಾ ಆಗಿ ಸುಂದರ ಮನಸಿನ ಹುಡುಗನ ಜೊತೆ ನನ್ನ ಮದುವೆ ನಿಕ್ಕಿಯಾಗಿದೆ. ಸ್ನೇಹಿತರಾಗಿ, ಪ್ರೇಮಿಗಳಾಗಿ ದಿನಗಳ ಕಳೆದು ಇನ್ನು ಮುಂದೆ ದಂಪತಿಗಳಾಗಿ ಭಡ್ತಿ ಪಡೆದು ಬಾಳುವ ಕನಸನ್ನು ಜಂಟಿಯಾಗಿ ಕಾಣುತ್ತಿದ್ದೇವೆ.

ಕಲ್ಪನೆಯ ಖುಷಿಗಳಿಗೆ ಹೂಮುತ್ತ ವಿದಾಯ ಹೇಳುತ್ತಾ, ವಾಸ್ತವ ಬದುಕಿಗೆ ಹೂಗುಚ್ಛ ಹಿಡಿದು ಸ್ವಾಗತ ಬಯಸುತ್ತಾ, ಮುನ್ನಡೆಯುವಾಸೆ. ಪ್ರತೀ ಬಾರಿಯೂ ಮನೆಯಿಂದ ಬರುವಾಗ ಬರುವ ಅಪ್ಪ-ಅಮ್ಮನ ಕಾಳಜಿಯ ಮಾತುಗಳನ್ನು ತಪ್ಪಿಸಲೊಬ್ಬರು ಬಂದಾಗಿದೆ. ಇನ್ನೆಲ್ಲಾ ನನ್ನ ಪಕ್ಕದ ಸೀಟುಗಳು ತುಂಬಿಕೊಂಡೇ ಇರುತ್ತವೆ.ಹೌದು!! ಸುಶ್ರುತನ ಎದೆಯಾಳದ ಮೌನಗಾಳದಲ್ಲಿ ಸಿಕ್ಕ ಮೀನು ನಾನು. ಮೌನಗಾಳದಲಿ ಮಾತುಗಳು, ಮಾತಾಡದೇ ಸಿಕ್ಕಿಬಿದ್ದವು. ಮೌನದ ಜೊತೆ ಮಾತು ಸೇರಿದರೆ ಎಷ್ಟು ಚೆನ್ನ! ಇದೀಗ ಗಾಳದಲ್ಲಿ ಸಿಲುಕಿರುವ ಮಾತಿಗೂ, ಹೊರಗಿರುವ ಮೌನಕ್ಕೂ ಮದುವೆಯಂತೆ! ಮೌನಗಾಳದ ಜೊತೆಗೆ ಮನಸಿನ ಮಾತುಗಳು.

ಸುದಿನದಲಿ ಅವನ ಜೊತೆ ಏಳು ಹೆಜ್ಜೆ ಇಡಲು, ಬಾಳ
ಶ್ರುತಿಗಳ ಜೊತೆ, ಸ್ವರ, ರಾಗ, ತಾಳಗಳ ಬೆರೆಸಲು, ಅಗಣಿ
, ತಾರಾಗಣದಲ್ಲಿ ನಾನು ಆಯ್ದುಕೊಂಡವನೇ ಸುಶ್ರುತ.
ದಿನಗಳ, ವರುಷಗಳ, ಜೊತೆಯಾಗಿ ಅವನೊಡನೆ ಕಳೆಯುವಾಸೆ, ಕನಸ
ವ್ವಸಾಯ ದಿನವೂ ನನಗೀಗ, ಹರಸಿ ಎಲ್ಲರೂ ನಮ್ಮ ಬಾಳು ಆಗಲೆಂದು ದಿವ್ಯ.

ವಸಂತ ಋತುವಿನಾಗಮನದ ಜೊತೆಜೊತೆಯಲ್ಲಿ, ದೊಡ್ಡೇರಿ ಊರಿನ "ಸುಶ್ರುತ" ಜೊತೆ, ಮಂಗಳ ವಾದ್ಯಗಳ ನಡುವೆ, ಅಪ್ಪ-ಅಮ್ಮ, ಗುರುಹಿರಿಯರು, ಬಂಧು ಮಿತ್ರರ ಸಮ್ಮುಖದಲ್ಲಿ ನಾನು "ದಿವ್ಯಾ" ಅವನ ಕೈ ಹಿಡಿದು ಸಪ್ತಪದಿ ತುಳಿದು, ತವರ ಮನೆಯಿಂದವರ ಮನೆ ಸೇರಲಿದ್ದೇನೆ. ಬುಧವಾರ, ಮೇ 9 , 2012 ನೇ ತಾರೀಖು. ನಿಮ್ಮೆಲ್ಲರ ಆಶೀರ್ವಾದ, ಶುಭ ಹಾರೈಕೆಗಳು ನಮಗೆ ಅವಶ್ಯ! ಎಲ್ಲರು ಖಂಡಿತಾ ಬರಬೇಕು ನಮ್ಮ ಮದುವೆಗೆ.

ನಿಮ್ಮ ನಿರೀಕ್ಷೆಯಲ್ಲಿ,

ನಿಮ್ಮ ಪ್ರೀತಿಯ,