ಶುಕ್ರವಾರ, ಜುಲೈ 22, 2011

ನೋವಿನಲೂ ನಲಿವಿನಲೂ...

ಇಷ್ಟವಿಲ್ಲದಿದ್ದರೂ, ಬೆಳಗ್ಗೆ ಕೆಲಸಕ್ಕೆ ಹೋಗಲು ಎಚ್ಚರ ಆಗಲೇ ಬೇಕೆಂದು, ಹಾಗೂ ಹತ್ತು ನಿಮಿಷ ಮುಂಚೆಯೇ ಬಡಿದುಕೊಳ್ಳುವಂತೆ ಇಟ್ಟ ಅಲರಾಮನ್ನು ತಕ್ಷಣ ನಿಲ್ಲಿಸಿ, ಇನ್ನೂ ಹತ್ತು ನಿಮಿಷ ನಿದ್ದೆಗೆ ಹೋದೆ. ಹಾಗೆ ನಾನು ಸಕ್ಕರೆ ನಿದ್ದೆಯಲ್ಲಿ ಇರುವಾಗ, ಸಕ್ಕರೆಗಿಂತ ಸಿಹಿಯಾಗಿರುವ ನೀನು ಬಂದಾಗ ನಾನು ಕಣ್ಣು ಮುಚ್ಚಿಕೊಂಡೇ ನಗುತ್ತಿದ್ದೆ ಎಂದು ನನ್ನ ಗೆಳತಿ ಹೇಳಿದರೆ ನಾನು ಅಚ್ಚರಿ ಇಂದ ಕಣ್ ಕಣ್ ಬಿಡುತ್ತಿದ್ದೆ. ಚಿಕ್ಕವರಿದ್ದಾಗ, ರಾತ್ರಿ ಅಪ್ಪ ಬರುವಾಗ ತಡವಾಗುವುದೆಂದು ಅಮ್ಮ ನಮಗೆ ಮೊದಲು ಊಟ ಹಾಕಿರುತ್ತಿದ್ದರೂ, ಅಪ್ಪ ಬಂದ ಮೇಲೆ ಅವರು ಊಟ ಮಾಡುವಾಗ ಒಂದು ತುತ್ತು ನನ್ನ ಬಾಯಿಗೆ ಇಟ್ಟ ನೆನಪು, ನೀನು ಮಸ್ಸಾಲ್ ಪೂರಿಯ ಒಂದು ತುತ್ತನ್ನು ಎಲ್ಲರ ಎದುರಿಗೇ ನನ್ನ ಬಾಯಿಗೆ ಹಾಕಿದಾಗ. ಮನೆಯಿಂದ ದೂರವಿದ್ದರೂ, ಅದು ಅಮ್ಮನಿಗೂ ಅಭ್ಯಾಸವಾಗಿದ್ದರೂ, ಪ್ರತಿ ಸಾರಿ ಮನೆಯಿಂದ ಬರುವಾಗ, ನಾನು ಬಸ್ಸು ಹತ್ತಿದ ಕೂಡಲೇ ಅಮ್ಮನ ಕಣ್ಣುಗಳು ತುಂಬಿಕೊಂಡ ನೆನಪು, ನೀನು ನನ್ನ ಬಸ್ಸು ಹತ್ತಿಸಿದಾಗ.

ನೀನು ಮಾಡಿದ ರುಚಿಯಾದ ಟೊಮೇಟೊ ಹಣ್ಣಿನ ಸಾರನ್ನು, ಮೂರು ಬಾರಿಯೂ ತಿನ್ನುವಾಗ ಅನ್ನಿಸಿದ್ದು, ಎಷ್ಟು ರುಚಿಯಾಗಿದೆ! ಎಂದೇ. ಸಾರೇ ರುಚಿ ಇತ್ತೋ, ನೀನು ಪ್ರೀತಿಯಿಂದ ನನಗಾಗಿ ಮಾಡಿದ್ದಕ್ಕೋ ಉತ್ತರ ಗೊತ್ತಿಲ್ಲ. ಪಿ ಜಿ ಯಲ್ಲಿ ಮಾಡಿದ ಸಾರಿಗೂ, ಅಮ್ಮ ಮಾಡಿದ ಸಾರಿಗೂ ಇತ್ತು ಇಷ್ಟು ದಿನ ಹೋಲಿಕೆ. ಈಗಲ್ಲಿ ನೀನು ಮಾಡಿದ ಸಾರು ಬಂದು ನಾನು ನಾನು ಎಂದು ಹೋಲಿಕೆಗೆ ಪೈಪೋಟಿ ನಿಂತ ಭಾಸ. ನೀನು ಕೊಟ್ಟ ಮಲೆಗಳಲ್ಲಿ ಮದುಮಗಳು ಓದುವಾಗ, ಯಾವುದೋ ಸನ್ನಿವೇಶಕ್ಕೆ ನಿನ್ನ ನೆನಪಾಗಿ, ಕಣ್ಣಲ್ಲಿ ಹನಿ ಮೂಡಿ, ಪುಟ ತಿರುವುತ್ತೇನೆ. ಹಿಂದೆ ಬೈಕಿನಲ್ಲಿ ಕುಳಿತು ಪ್ರತಿ ಬಾರಿಯೂ ಹೋಗುವಾಗ, ಚಿಕ್ಕಂದಿನಲ್ಲಿ ಅಪ್ಪನ ಸ್ಕೂಟರ್ನಲ್ಲಿ ಶಾಲೆಗೆ ಹೋಗುತಿದ್ದ ನೆನಪು. ಯಾರೋ ಕೆಲಸಕ್ಕೆ ಬಾರದವರು ಹೇಳಿದ ಅನವಶ್ಯಕ ಮಾತಿಗೆ ತಲೆ ಕೆಡಿಸಿಕೊಂಡು ಅಳುವಾಗ ಸಮಾಧಾನಿಸುವ ನಿನ್ನ ಗುಣದ ಜೊತೆ ಅಮ್ಮನ ಹೋಲಿಕೆಗೆ ತೆರಳುವ ಮನಸ್ಸು.

ಈಗ ಪಾರ್ಕಲ್ಲೂ ನೀನು ನನ್ನ ಜೊತೆ ಇಲ್ಲದಿದ್ದರೂ ನೀನು ನನ್ನ ಜೊತೆಗೇ ಇದ್ದಂತೆ ಭಾಸ. ಬೋರ್ ಎನಿಸುತಿದ್ದ ಬಟ್ಟೆ ತೊಳೆಯುವುದು, ರೂಮು ಕ್ಲೀನ್ ಮಾಡುವುದು, ವ್ಯಾಯಾಮ ಮಾಡುವುದು ಎಲ್ಲೂ ಈಗ ಬೇಸರ ಕಾಣುತ್ತಿಲ್ಲ. ಹಿಂತಿರುಗಿ ನೋಡಿದಾಗ ನನ್ನಲ್ಲೂ ಬದಲಾವಣೆಗಳು. ಮತ್ತು ಅದು ನಾನೂ ಬೇಸರ ಪಡದೆ ಇರುವಂಥದ್ದು. ನಿನ್ನ ಜೊತೆ ಇರುವಾಗೆಲ್ಲ ನನಗೆ ಅನ್ನಿಸಿದ್ದು, ಎಲ್ಲ ಹುಡುಗಿಗೂ ನಿನ್ನ ತರದ ಹುಡುಗನೇ ಸಿಗಲಿ ಎಂದು. ಆದರೆ ನೀನು ಹಾಕುವ ಆ ಚಾಕಲೇಟ್ ಪರ್ಫುಮ್ ಇದೆಯಲ್ಲ
ಅದು ನನಗೆ ಆಗಲ್ಲ ನೋಡು!.ಗೊತ್ತು!.ನೀನು ಅದನ್ನು ಹಾಕುವುದನ್ನು ಬಿಟ್ಟಿದ್ದಿಯ ಎಂದು.

ಯಾರೋ ಓಡಿ ಹೋದಾಗ, ಯಾರದೋ ಮದುವೆ ಮುರಿದಾಗ, ಇನ್ಯಾರದೋ ಗಂಡ ಕಿರುಕುಳ ಕೊಡುವ ಸುದ್ದಿ ಓದಿದಾಗ, ನಿನ್ನ ಮುಖ ನೆನಪಾಗಿ, ನಾನು ಇದರಿಂದೆಲ್ಲ ಪಾರಾದ ಸಮಾಧಾನದ ನಿಟ್ಟುಸಿರು. ನಿನ್ನ ಸಹನೆಯ ಗುಣವನ್ನು ಸ್ವಲ್ಪವಾದರೂ ನಾನು ಅಳವಡಿಸಿ ಕೊಳ್ಳಬೇಕೆಂದು ಅಮ್ಮ ಹೇಳಿದ್ದಾಳೆ. ಅದಕೆಂದೇ ನಾನೂ ಪ್ರಯತ್ನ ಪಡುತ್ತಿರುವೆ. ನೀನೇ ದಾನವಾಗಿ ಕೊಟ್ಟರೆ ಇನ್ನೂ ಒಳಿತು ನೋಡು! ಯಾರೋ ಏನೋ ಹೇಳಿದರು ಅಂತ ನಾನು ತಲೆಕೆಡಿಸಿಕೊಳ್ಳಲ್ಲ ಬಿಡು. ಅವರು ಏನು ಅಂತ ಮೊದಲು ಅಳೆದೇ ಅಳೆಯುವೆ. ನೀನು ಮಾತ್ರ ಯಾವಾಗಲೂ ಹೀಗೆ ಇರಬೇಕು ಆಯ್ತಾ? ನೀನು ಯಾವತ್ತೂ ಬದಲಾಗಬಾರದು. ಭಾವಕ್ಕೆ ಭಾವವನ್ನು ಬೆಸೆಯುತ್ತಿರುವ ನೀನು ನನಗೆ ಅದ್ಭುತ ಗೆಳೆಯ. ಹೀಗೆಲ್ಲ ಹೇಳಿ ನಾನು ಕಾಗೆ ಹಾರಿಸುವುದಿಲ್ಲ ಬಿಡು. ಉಳಿದಿದ್ದು ನಿನಗೆ ಗೊತ್ತೇ ಇದೆ.
ಆದರೆ ಅದೇನೋ ಗೊತ್ತಿಲ್ಲ. ನಾನು ನಿನ್ನೊಡನೆ ಎಷ್ಟೇ ಜಗಳ ಆಡಿದರೂ, ಮತ್ತೆ ನನಗೇ ನನ್ನ ಬಗ್ಗೆ ಬೇಸರ. ತಪ್ಪು ನನ್ನದಿದ್ದರೂ ನೀನು ಬಂದು ಸಂತೈಸುವಾಗಲೇ ನಾನು ಕರಗಿ ಹೋಗುವುದು. ಈಗಂತೂ ಅಭ್ಯಾಸವಾಗಿ ಬಿಟ್ಟಿದೆ! ಜಗಳವಾಡಿದ ಮೇಲೆ ನೀನು ಕೊಡುವ ಸಂತೈಕೆಗೆ ನಾನು addict ಆಗಿಬಿಟ್ಟಿದೀನಿ. ನೋವಿನಲೂ ನಲಿವಿನಲೂ ನಾನು ನಿನ್ನ ಜೊತೆಗೆ ಇರುತ್ತೀನಿ ಎಂಬ ಭರವಸೆ ಮಾತ್ರ ನಾ ಕೊಡಬಲ್ಲೆ. ನನ್ನಲ್ಲಿರುವ ಅಭದ್ರತೆಯ ಕೋಟೆಯೊಳಗೂ ನಿನ್ನ ಭದ್ರವಾಗಿಟ್ಟುಕೊಳ್ಳುವೆ. ನೀನು ನನ್ನೊಡನೆ ಸಂತೋಷದಿಂದ ಇರುವೆ ಎಂದು ನಂಬಿ, ನಿನ್ನಿಂದ ನನಗೆ ಸಿಗುತ್ತಿರುವ ಆನಂದಕ್ಕಾದರೂ ನಾನು ನಿನ್ನ-ನಿನ್ನೇ ಪ್ರೀತಿಸುವೆ.

ತಾರಸಿಯಲ್ಲಿ ನಿಂತು ಮಾತಾಡುವಾಗ, ಒಂದೇ ಚಂದ್ರನಾಗಿದ್ದ ಮೊದಲೆಲ್ಲ. ಈಗ ಎರಡು! ಇಬ್ಬರೂ ತಣ್ಣಗೇ, ಹಿತವಾಗೇ ಇದ್ದಾರೆ!