ಸೋಮವಾರ, ಫೆಬ್ರವರಿ 14, 2011

ಓಂಕಾರ ಬೆಟ್ಟ - ಒಂದು ದಿನ


ತುಂಬಾ ದಿನಗಳಾಗಿತ್ತು ಎಲ್ಲೂ ಹೊರಗೆ ಹೋಗದೆ. ಈ ಬೆಂಗಳೂರಿನ ಏಕತಾನತೆಯಲ್ಲಿಯೇ ಜೀವನ ಸಾಗುತಿತ್ತು. ತಟ್ಟನೆ ಅನ್ನಿಸಿದ್ದು "we need a refreshment ".ಅದಕ್ಕೆಂದೇ ಎಲ್ಲಾದರೂ ಹೊರಗೆ ಹೋಗೋಣ ಅಂತ ನಾವು ನಿರ್ಧರಿಸಿದ್ದಾಯ್ತು .ಆದರೆ ಎಲ್ಲಿ ಹೋಗುವುದು ? ಎಲ್ಲಿಗೆ ಹೋಗುವುದು ಎಂಬುದು ಒಂದು ಸಮಸ್ಯೆ ಆದಾಗ, ಯಾರೋ ಹಿಂದೆ ಹೇಳಿದ್ದ "ಓಂಕಾರ ಬೆಟ್ಟ" ನೆನಪಿಗೆ ಟಿಂಗ್ ಅಂತ ಬಂತು. ಅದೇ ಜಾಗಕ್ಕೆ ಹೋಗೋದು ಅಂತ ಘಟ್ಟಿ ನಿರ್ಧಾರ ಆದ ಮೇಲೆ ಹೊರಡಲು ಅಣಿಯಾದೆವು.

ಈ ಓಂಕಾರ ಬೆಟ್ಟ ಬೆಂಗಳೂರಿನ ಹೊರ ವಲಯದಲ್ಲಿದೆ. ಮೈಸೂರ್ ರಸ್ತೆಯಿಂದ ಸುಮಾರು ೪-೫ ಕಿಲೋ ಮೀಟರ್ ದೂರದಲ್ಲಿ.ಇದು ಅಷ್ಟೊಂದು ಚಿರಪರಿಚಿತ ಸ್ಥಳವಲ್ಲದರಿಂದ ಜನರ ದಟ್ಟನೆ ಕಡಿಮೆಯೇ. ಬಸ್ಸಿನಲ್ಲಿ ಹೋಗುವುದಾದರೆ ಕೆ .ಆರ್. ಮಾರ್ಕೆಟಿಂದ ಬಸ್ ಸಂಖ್ಯೆ 225 ಅಥವ 222 ಗೆ ಬರಬಹುದು. ಇಲ್ಲದಿದ್ದರೆ ನೀವು ಸ್ಯಾಟಲೈಟ್ ಬಸ್ ನಿಲ್ದಾಣದಿಂದವೂ ಬರಬಹುದು. ಈ ಬೆಟ್ಟವು ಸುಮಾರು 2800 ಅಡಿ ಎತ್ತರ ಇದ್ದು , ದಕ್ಷಿಣ ಬೆಂಗಳೂರನ್ನು ಪಕ್ಷಿ ನೋಟದಲ್ಲಿ ಕಾಣಬಹುದಾಗಿದೆ. ಬುಸ್ಸಿನ್ನಲ್ಲಿ ಹೋದಾಗ ನೀವು JSS ಕಾಲೇಜು ಸ್ಟಾಪ್ ನಲ್ಲಿ ಇಳಿದುಕೊಂದರೆ ನಿಮಗೆ ಬೆಟ್ಟ ಹಾಗೂ ಅದರ ಮೇಲಿರುವ ದೇವಸ್ಥಾನವು ಕಾಣಿಸುತ್ತದೆ. ಹಾಗೆ ಆ ಮಣ್ಣು ರಸ್ತೆಯನ್ನು ಹತ್ತಿ ಮೇಲೆ ಬಂದರೆ ಅದೇ "ಓಂಕಾರ ಬೆಟ್ಟ".

ಈ ಓಂಕಾರ ಬೆಟ್ಟದ ಮೇಲೆ ಹತ್ತುತ್ತಿದ್ದಂತೆ ನನ್ನನ್ನು ಆಕರ್ಷಿಸಿದ್ದು ಒಂದು ಬೃಹದಾಕಾರದ ಗಡಿಯಾರ. ಎಚ್.ಎಂ.ಟಿ ಕಂಪನಿ ಯವರು ಇದನ್ನು ನಿರ್ಮಿಸಿದ್ದಾರೆ. ಇದು ಜಗತ್ತಿನ ಎರಡನೇ ಅತಿ ದೊಡ್ಡ ಗಡಿಯಾರ ಎಂದು ಪರಿಗಣಿಸಲಾಗಿದೆ. ಗಡಿಯಾರದ ಮುಖಬಿಲ್ಲೆಯ ಅಡ್ಡಳತೆ ಸುಮಾರು 24 ಅಡಿ ಉದ್ದವಿದೆ.UK ಯಲ್ಲಿ "ಬಿಗ್ ಬೆನ್" ಎಂಬ ಜಗದ್ವಿಖ್ಯಾತ ಗಡಿಯಾರಕ್ಕಿಂತ ದೊಡ್ಡದಾಗಿದೆ ಈ ಗಡಿಯಾರ. ಈ ಗಡಿಯಾರದ ವಿಶೇಷತೆ ಏನು ಎಂದರೆ ಇದು ಘಂಟೆಗೊಂದು ಸಾರಿ "ಓಂ " ಎಂಬ ನಾದದಲ್ಲಿ ಐದು ನಿಮಿಷ ಬದಿದುಕೊಳ್ಳುತ್ತದೆ.ಇದನ್ನು "ಶಂಖನಾದ "ಎಂದು ಕರೆಯಲಾಗುತ್ತದೆ.


ಬೆಟ್ಟ ಹತ್ತುತ್ತಿದ್ದಂತೆ ಬೆಂಗಳೂರು ಇನ್ನಿಲ್ಲದಂತೆ ಚಂದ ಕಾಣಲು ಶುರುವಾಗುತ್ತದೆ. ಮನೆಗಳು,ಮರಗಳು ಎಲ್ಲವೂ ಸಾಲಾಗಿ ಬರುವ ಚಿಕ್ಕ- ಚಿಕ್ಕ ಇರುವೆಗಳಂತೆ ಕಾಣುತ್ತವೆ.ನನಗಂತೂ ಸಿಕ್ಕಾಪಟ್ಟೆ ಸಂತೋಷ ಆಗಿದ್ದು ಅದೇ ಕ್ಷಣದಲ್ಲಿ!ಬೀಸುತ್ತಿರುವ ಚಳಿ ಗಾಳಿಯಲ್ಲಿ ಒಮ್ಮೆ ನನ್ನನ್ನೇ ನಾನು ಮೈಮರೆತೆ .ಆಹಾ! ಎಂಥಹ ಎಕಾಂತವಲ್ಲಿ !!

ಹಾಗೇ ಮುಂದುವರಿದಾಗ ಅಲ್ಲೊಂದು ದೊಡ್ಡ ಆಲದ ಮರ ನಮ್ಮ ಕಣ್ಣಿಗೆ ಕಾಣ ಸಿಗುತ್ತದೆ.ಇದನ್ನು "ಸರ್ವಧರ್ಮ ಸಮನ್ವಯ ಪೀಠ " ಎಂದು ಹೆಸರಿಸಿದ್ದಾರೆ. ಅರ್ಥಾತ್ ಸಕಲ ಧರ್ಮದ ಸಮಾನ ಪೀಠ ಎಂದು . ಈ ಮರದಡಿಯಲ್ಲಿ ಸುಮಾರು ಎಂಟು ಚಿಕ್ಕ- ಚಿಕ್ಕ ಬೇರೆ -ಬೇರೆ ಮಂದಿರಗಳನ್ನು ನಿರ್ಮಿಸಿದ್ದಾರೆ .(ಏಸು ಕ್ರಿಸ್ತ,ಬುದ್ದ, ಮಹಾವೀರ,ಮಾಧವಾಚಾರ್ಯ,ಇತ್ಯಾದಿ).


ಮುಂದೆ ಹೋಗುತ್ತಿದ್ದಂತೆ ,ಒಳಗೆ ದೇವರ ಮಂದಿರವಿದೆ. ಅಲ್ಲಿ ನಾವು ತೀರ್ಥ ಪ್ರಸಾದ ತೆಗೆದುಕೊಂಡು ಹೊರ ಬಂದ್ವಿ.ಆಮೇಲೆ ಫೋಟೋ ತೆಗೆಯುವುದರಲ್ಲಿ ಕಳೆದು ಹೋದೆವು.ವಾರಾಂತ್ಯದಲ್ಲಿ ತಕ್ಷಣಕ್ಕೆ ಹೋಗಿ ಬರಲು , ಮನಸ್ಸನ್ನು ಆಹ್ಲಾದ ಗೊಳಿಸಲು ಇದೊಂದು ಸುಂದರ ಜಾಗ. ಇಲ್ಲಿ ತುಂಬಾ ಹೊತ್ತು ಇರುವ ಯೋಚನೆ ಇದ್ದಲ್ಲಿ ಉಪಹಾರ ತಂದುಕೊಳ್ಳುವುದು ಒಳ್ಳೆಯದು, ಏಕೆಂದರೆ ಹತ್ತಿರದಲ್ಲಿ ಏನೂ ಸಿಗುವುದಿಲ್ಲ.ಹಾಗೇ ಈ ಜಾಗ ನೋಡಲು ಬಂದವರು, ಸಮಯ ಮಿಕ್ಕಿದ್ದರೆ ಹತ್ತಿರದಲ್ಲೇ ಇರುವ "ಶ್ರೀಧರ ಬೆಟ್ಟ ", "ದೊಡ್ಡಾಲದ ಮರ" ಮತ್ತು "ಮುಕ್ತಿನಾಗ " ದೇವಸ್ಥಾನಕ್ಕೂ ಹೋಗಬಹುದು.


ಮನೆಗೆ ಬರುವಾಗ ಮನಸೆಲ್ಲ ಖುಷಿ ಖುಷಿ!!.ಒಮ್ಮೆ ಭೇಟಿ ಕೊಟ್ಟು ನೋಡಿ . ಒಂದು ದಿನದ ವಿಹಾರದ ಸಂತೋಷಕ್ಕೇನೂ ಮೋಸ ಇಲ್ಲ!! ಹೋಗ್ತಿರಲ್ಲ?

ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿ ಕೊಡಿ..http://omkarhills.org/

ಬುಧವಾರ, ಫೆಬ್ರವರಿ 02, 2011

ಗರಿಗರಿ ಪಾಪಡ್ ಮಸಾಲ

ಮೊನ್ನೆ ಮನೆಗೆ ಹೋದಾಗ ನನ್ನ ತಂಗಿ ಏನಾದ್ರೂ ತಿನ್ನೋಕೆ ಮಾಡು ಅಂತ ಹಠ ಮಾಡ್ತಾ ಇದ್ಲು. ಅದು crispy ಆಗಿಯೂ ಇರಬೇಕು,spicy ಆಗಿಯೂ ಇರಬೇಕು ಅನ್ನೋದು ಅವಳ ಕೋರಿಕೆ.ತಟ್ ಅಂತ ಮನಸಿಗೆ ಹೊಳೆದಿದ್ದು "*ಪಾಪಡ್ ಮಸಾಲ". ಮಾಡುವ ವಿಧಾನವನ್ನು ಕೆಳಗೆ ಹೇಳಿದ್ದೇನೆ. ನೀವೂ ಮನೇಲಿ ಮಾಡಿ ನೋಡ್ತಿರಲ್ಲ?? ಹಾಗಾದ್ರೆ ಬನ್ನಿ ..ಮಾಡೋದನ್ನ ಕಲಿಯೋಣ.


ಬೇಕಾಗುವ ಸಾಮಾಗ್ರಿಗಳು:

ಪಾಪಡ್ (ಹಪ್ಪಳ) ಇದು ಎಲ್ಲ ಅಂಗಡಿಗಳಲ್ಲಿ ಸಿಗುತ್ತೆ. ಆದಷ್ಟು ಉದ್ದಿನ ಹಪ್ಪಳ ಬಳಸುವುದು ಒಳಿತು.(ಅಕ್ಕಿ, ಹಲಸಿನ ಹಪ್ಪಳಗಳು ಅಷ್ಟು ರುಚಿ ಆಗಲಾರವು) : ಒಂದು
ಈರುಳ್ಳಿ : ಒಂದು
ಟೊಮೇಟೊ ಹಣ್ಣು : ಒಂದು
ಕೊತ್ತಂಬರಿ ಸೊಪ್ಪು : ನಾಲ್ಕು ಎಸಳು
ಲಿಂಬೆ ಹಣ್ಣು : ಅರ್ಧ ಕಡಿ
ಖಾರ ಪುಡಿ : ಅರ್ಧ ಟೀ ಚಮಚ
ಕಾಳು ಮೆಣಸಿನ ಪುಡಿ(ಪೆಪ್ಪರ್) : ಒಂದು ಚಿಟಕಿ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲಿಗೆ ಹಪ್ಪಳವನ್ನು ಒಲೆಯಲ್ಲಿ ಅದು ಗರಿಯಾಗುವಂತೆ ಸುಡಬೇಕು.ನೆನಪಿರಲಿ(ಎಣ್ಣೆಯಲ್ಲಿ ಕರಿಯಬೇಡಿ) .(ಗ್ಯಾಸಿನಲ್ಲಿ ಸುಡಬೇಕಾದರೆ ಇಕ್ಕಳದ ಹಿಂಭಾಗದಲ್ಲಿ ಹಪ್ಪಳವನ್ನು ಹಿಡಿದುಕೊಂಡು ಸಣ್ಣ ಬೆಂಕಿಯಲ್ಲಿ ಸುಡುತ್ತಾ ,ಅದು ಪೂರ್ತಿ ಆದ ಮೇಲೆ ಒಂದು ಪ್ಲೇಟಿನಲ್ಲಿ ಅದನ್ನು ಇರಿಸಿ)


ಈಗ ಟೊಮೇಟೊ ಹಣ್ಣು,ಈರುಳ್ಳಿ,ಕೊತ್ತಂಬರಿ ಸೊಪ್ಪುನ್ನು ಸಣ್ಣಗೆ ಹೆಚ್ಚಿ.(ಸಣ್ಣಗೆ ಹೆಚ್ಚಲು ಬರದವರು ಬೇಕಾದರೆ ಒಮ್ಮೆ ಮಿಕ್ಸರ್ ನಲ್ಲಿ ಒಂದು ಸಾರಿ ತಿರುಗಿಸಿ)

ಈ ಮಿಶ್ರಣಕ್ಕೆ ಖಾರ ಪುಡಿ, ಪೆಪ್ಪರ್ ,ಒಂದೆರಡು ಹನಿ ಲಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಬೇಕು.
ಕಲಸಿದ ಮಿಶ್ರಣವನ್ನು ಬಟ್ಟಲಲ್ಲಿ ಇಟ್ಟ ಹಪ್ಪಳದ ಮೇಲೆ ಚೆನ್ನಾಗಿ ಹರಡಿ, ಮೇಲಿಂದ ಒಂದಷ್ಟು ಸೇವ್ (ಅಂಗಡಿಗಳಲ್ಲಿ ಸಿಗುತ್ತೆ) ಉದುರಿಸಿದರೆ ,ರುಚಿ-ರುಚಿಯಾದ,ಗರಿಗರಿಯಾದ "ಪಾಪಡ್ ಮಸಾಲ " ನಿಮ್ಮ ಮುಂದೆ.ಇದನ್ನು ಊಟದ ಜೊತೆಗೆ, ಅಥವಾ starter ತರಾನೂ ಉಪಯೋಗಿಸಬಹುದು.ನನ್ನ ಮತ್ತು ನನ್ನ ತಂಗಿ ತರಹ ಇರುವವರು ಹಸಿವಾದಾಗ ,ತಿನ್ನಬೇಕು ಎನಿಸಿದಾಗಲೂ ಮಾಡಿಕೊಂಡು ತಿನ್ನಬಹುದು...;-)(ಇತ್ತೀಚಿಗೆ ಅಡಿಗೆ ಬಗ್ಗೆ ಆಸಕ್ತಿ ಬರ್ತಾ ಇದೆ. ಇನ್ನು ಮುಂದೆ ನನ್ನ ಪುಟ್ಟ ಪುಟ್ಟ ಲೇಖನಗಳನ್ನು ಬ್ಲಾಗಿನಲ್ಲಿ ಸೇರಿಸುತ್ತಿರುತ್ತೇನೆ.)


(ಚಿತ್ರಕೃಪೆ: ಅಂತರ್ಜಾಲ)