ಶುಕ್ರವಾರ, ಜನವರಿ 28, 2011

ಕಾರಣವಿಲ್ಲದೆ..

ಇವತ್ತು ಬಸ್ಸಿನಲ್ಲಿ ಬರಬೇಕಾದರೆ ಒಂದು ಘಟನೆ ನಡೆಯಿತು.
ಒಂದು ಚಿಕ್ಕ ಮಗು, ಸುಮಾರು ಒಂದು ಮೂರು ವರುಷ ಇರಬಹುದೇನೋ.ತನ್ನ ಅಮ್ಮನ ಜೊತೆ ಬಂದು ನನ್ನ ಎದುರಿನ ಸೀಟಿನಲ್ಲಿ ಬಂದು ಕುಳಿತರು. ಮಗು ತುಂಬಾ ಮುದ್ದು ಮುದ್ದಾಗಿ ಚುರುಕಾಗಿತ್ತು.ಕೆಂಪು ಸ್ವೆಟರ್ನಲ್ಲಿ ತೀರ ಪ್ರೀತಿ ಉಕ್ಕುವಂತೆ ಕಾಣುತ್ತಾ ಇತ್ತು.ನಿಂತ ಎಲ್ಲರೂ ಆ ಮಗುವನ್ನೇ ನೋಡುತ್ತಾ ಇದ್ದರೆ, ಅಮ್ಮನಿಗೆ ತನ್ನ ಮಗಳ ಬಗ್ಗೆ ಹಿಗ್ಗು!..

ಹಾಗೇ ಮತ್ತೊಂದು ನಿಲ್ದಾಣದಲ್ಲಿ ಮತ್ತೊಂದು ಮಗು ತನ್ನ ತಾಯಿಯೊಂದಿಗೆ ಬಸ್ಸನ್ನು ಹತ್ತಿದರು .ಆ ಮಗು ಅಷ್ಟೇನೂ ಚುರುಕಾಗಿರಲಿಲ್ಲ.ಸುಮ್ಮನಿತ್ತು. ನೋಡಲು ಅಷ್ಟೇನು ಮುದ್ದಾಗಿರಲಿಲ್ಲ.ಮಕ್ಕಳು ಮಕ್ಕಳೇ ಬಿಡಿ..ಅದಕ್ಕಲ್ಲ.ಮೊದಲು ಹತ್ತಿದ ಮಗು ಎರಡನೇ ಮಗುವನ್ನು ಸುಮಾರು ಹೊತ್ತಿನಿಂದ ಮಾತಾಡಿಸಲು ಪ್ರಯತ್ನಿಸುತ್ತಿತ್ತು.ಆದರೆ ಆ ಮಗು ಸುತರಾಂ ಮಾತಾಡಲಿಲ್ಲ. ಬೇಸತ್ತ ಈ ಮಗು ಅಳಲು ಶುರು ಮಾಡಿತು. ಅದರ ಅಮ್ಮನಿಗೋ ಅವಳನ್ನು ಸಮಾಧಾನಿಸುವುದೇ ಆಯಿತು..
"ಹೋಗ್ಲಿ ಬಿಡು ಪುಟ್ಟ..ಅವಳೇನು ನಿನ್ನ ಫ್ರೆಂಡಾ ..ಮಾತಾಡಲು"..ಅಂತ ಹೇಳುತ್ತಿದ್ದರು.

ಇದನ್ನೆಲ್ಲಾ ನೋಡುತಿದ್ದ ನನಗೆ ಇದ್ದಕ್ಕಿದ್ದಂತೆ ನನ್ನ ಬಾಲ್ಯ ನೆನಪಾಗಿ ಬಿಟ್ಟಿತು .ಯಾರನ್ನಾದರೂ ನಾನು ಮಾತಾಡಿಸಿ ಅವರು ನನ್ನನ್ನು ಅಲಕ್ಷಿಸಿದ್ದರೆ((ಚಿಕ್ಕವಳಿದ್ದಾಗ) ನಾನೂ ಅಳುತ್ತಿದ್ದೆ.ಯಾಕೋ ನನ್ನಲ್ಲಿ ಈಗ ಇಂಥ ಗುಣಗಳು ಮಾಯವಾಗಿ ಬಿಟ್ಟಿವೆ!
ನಮ್ಮಲ್ಲಿ ಎಷ್ಟೋ ಜನ ಈ ಮೊದಲ ಗುಂಪಿನಲ್ಲಿ ಇದ್ದಿವಿ ಅಲ್ಲವ?..ನಮ್ಮ ಮ್ಯಾನೇಜರ್ ಗಳಿಗೆ,ನಮ್ಮ ಪ್ರೀತಿಸದವರಿಗೆ ,ನಮ್ಮನ್ನು ಅರ್ಥ ಮಾಡಿಕೊಳ್ಳದವರಿಗೆ,ಮುನಿಸಿಕೊಂಡು ನಮ್ಮ ಕ್ಷಮಿಸದ ಗೆಳೆಯರಿಗೆ...

ಎಲ್ಲರನ್ನೂ ಹಚ್ಚಿಕೊಂಡು,ಎಲ್ಲರನ್ನೂ ಮಾತಾಡಿಸುವ ಗುಣ ನನ್ನಲ್ಲಿ ಇಲ್ಲ ಈಗ. ಆ ಅತಿಯಾದ ಭಾವುಕತೆ, ನಮ್ಮವರ ಮೇಲಿನ ಅತಿಯಾದ ಮೋಹ , ಆ ಮುಗ್ಧತೆ ಎಲ್ಲ ಮಾಯವಾಗಿ, ಯಾರಾದರು "ನೀನು" ಅಂದರೆ ನಿನ್ನಪ್ಪ ಎಂದು ಹೇಳುವವರೆಗೆ ತಯಾರಗಿದ್ದೀನಿ ನಾನು ಎಂಬುದು ನನಗೆ ನಂಬಲಾಗದ "ಕಹಿ ಸತ್ಯ". ಹೌದು...ನಾನು ಬದಲಾಗಿದ್ದೇನೆ!.ಬದಲಾವಣೆ ಜಗದ ನಿಯಮ ಅಲ್ಲವೇ?

ಬುಧವಾರ, ಜನವರಿ 12, 2011

ಒಂದು ಹಾಡು

ಮೊನ್ನೆ ಮನೆಗೆ ಹೋದಾಗ ಹಳೆ ಕ್ಯಾಸೆಟ್ ಗಳನ್ನು ಸರಿಯಾಗಿ ಜೋಡಿಸುತ್ತಿದ್ದಾಗ ಈ ಕ್ಯಾಸೆಟ್ ಕಣ್ಣಿಗೆ ಬಿತ್ತು. ಇದೊಂದು ಜನಪದ ಗೀತೆ. ಚಿಕ್ಕಂದಿನಲ್ಲಿ ಕೇಳುತ್ತಿದ್ದ ಹಾಡು. ನನ್ನನ್ನು ತುಂಬಾ ಹೊತ್ತು ಕಾಡಿಸಿದ ಹಾಡು ಇದು.ಕ್ಯಾಸೆಟ್ ಮಾತ್ರ ಇದ್ದು ಹೊದಿಕೆ ಇಲ್ಲದ್ದರಿಂದ ಹಾಡಿದವರು ಯಾರು? ಸಾಹಿತ್ಯ ಯಾರಿದ್ದು ಅಂತ ಗೊತ್ತಾಗಲಿಲ್ಲ ನನಗೆ.ನಿಮಗೆ ಗೊತ್ತಿದ್ದರೆ ನನಗೆ ತಿಳಿಸತಕ್ಕದ್ದು.(ಇರಬೇಕು ,ಇರಬಹುದೇನೋ ಅಂತ ಹೇಳೋದಾದ್ರೆ ಬೇಡ.ನಿಖರವಾಗಿ ಗೊತ್ತಿದ್ದರಷ್ಟೇ ಹೇಳಿ !..:-)).

ಹಳ್ಳಿ ಜೀವನಕ್ಕೆ ಮೂಗು ಮುರಿದು ಪೇಟೆಯ ಜೀವನದ ಸೆಳೆತಕ್ಕೆ ಒಳಗಾಗುವ ಜನರ ಕುರಿತು ವ್ಯಂಗ್ಯ ಮಾಡಿದ್ದಾರೆ. ಹೆತ್ತ ಅಪ್ಪ ಅಮ್ಮನ ಕಡೆಗಣಿಸುವ ಮಕ್ಕಳ ಕುರಿತಾಗಿಯೂ ಇದೆ ಈ ಹಾಡು. ಕೆಲವರಿಗೆ ಪೇಟೆ ಜೀವನ "ಇಷ್ಟ" ಆದರೆ ಇನ್ನು ಕೆಲವರಿಗೆ "ಅನಿವಾರ್ಯ" .ಏನೇ ಇರಲಿ.ಅದರ ಚರ್ಚೆ ಇಲ್ಲಿ ಬೇಡ.

ಹಾಡು ನಿಮಗಾಗಿ.ಓದಿ ಆನಂದಿಸಿ...:-)

=========

ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)

ಕಲಿತವರೆಲ್ಲ ಜಾಣ್ಯಾರಲ್ಲ
ಸೀಳಿದರಕ್ಷರ ಇಲ್ಲ
ಎದಿ ಸೀಳಿದರಕ್ಷರ ಇಲ್ಲ
ಕಿಸೆದಾಗ ಐದರ ಪೈಸೆ ಇಲ್ಲ
ಕೈವಡ್ಡಿ ಬೇಡ್ಯಾರಲ್ಲ
ಲಂಚ ತಿಂದು ಬದುಕುತಾರಲ್ಲ
ಲಂಚ ತಿಂದು ಬದುಕುತಾರಲ್ಲ (೧)

ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)

ಸಾಹೇಬ ಸುಬೇದಾರ ಆಗಿ ಪ್ಯಾಟೆಯ ಹೆಣ್ಣ ಮದುವಿ ಆಗತಾರ
ಹೆತ್ತವರನು ತುಳಿತಾರ
ಹಡೆದಪ್ಪ ಮಗನ ನೋಡಾಕ ಬಂದರ
ಮನಿ ಆಳ್ ಅಂತ ಹೇಳತಾರ
ಮಂದ್ಯಾಗ ಮಾನ ಕಳಿತಾರ
ಸಂಧ್ಯಾಗ ಕಾಲ ಹಿಡಿತಾರ (೨)

ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)
===========

ಮಂಗಳವಾರ, ಜನವರಿ 04, 2011

ರಾಜೀ ಸಂತೋಷ

ಅವನು ತಮಾಷೆಗೆಂದು ಕಳಿಸಿದ
ಯಾವುದೋ ಸಂದೇಶಕ್ಕೆ ತಲೆ ಕೆಡಿಸಿಕೊಂಡು
ಅತ್ತು,ಕಣ್ಣು ಮೂಗು ಕೆಂಪಾಗಿಸಿಕೊಂಡು
ಊಟ ಮಾಡದೆ ಸಿಟ್ಟಿನಿಂದ ಊದಿದ
ಮುಖದಲ್ಲೇ ,ನಾನೂ ಕಳಿಸಿದೆ ಒಂದು ಸಂದೇಶ

ಕೋಪ ಬಂದಿದೆ ನನಗೆ ,ಖಾತ್ರಿಯಾದ
ಅವನು,"ಇವತ್ತು ಸಿಗುವೆಯಾ"? ಎಂದಾಗ
ಮುಲಾಜಿಲ್ಲದೆ "ಇಲ್ಲ" ಎಂದೆ.
ಸರಿಯಾಗಿ ಒಂದು ಘಂಟೆಗಳ ನಂತರ
"ಎಲ್ಲಿ"? ಎಂದಾಗ ಅವನು "ಯಾವಾಗಲೂ ಸಿಗುವಲ್ಲಿ"
ಎಂದು ಮೊನಚಾಗಿ ಬಂದಿತ್ತು ಉತ್ತರ!

ಬಂದಾಗ ನನ್ನ ಹುಡುಗನ ಮುಖ
ಎಲ್ಲ ದಿನಗಳ ಹಾಗೆ ಹಸನ್ಮುಖವಾಗಿರಲಿಲ್ಲ.
ಬಂದು ಕುಳಿತ ಎರಡು ಘಂಟೆಗಳ ನಂತರ
ತಿಳಿದ ವಿಷಯ ಅವನು ಊಟ ಮಾಡಿಲ್ಲ!
ನಾನೇನೋ ಅತ್ತೆಯ "ಅನ್ನ ಹೆಚ್ಚಾಗ್ತು, ಮೊದಲೇ ಹೇಳವು"
ರಗಳೆಗೆ ಹೆದರಿ ಉಂಡು ಬಿಟ್ಟೆ
ಆದರೆ ಅವನು? ಊಹೂಂ ಊಟ ಮಾಡಿಲ್ಲ.

ಇನ್ನು ಮುಂದೆ ಊಟ ಬಿಡಬಾರದೆಂದು
ಆಣೆ ಮಾಡಿಸಿಕೊಂಡು, ಅವನ ಕಳಿಸುವಷ್ಟರಲ್ಲಿ
ಅವನ ಬಾಡಿದ ಮುಖ,ನನ್ನ ಮುಂಗೋಪ
ನನ್ನನ್ನು ಸಹಿಸಿಕೊಳ್ಳುವ ಅವನ ದೊಡ್ಡ ಗುಣ ನೆನೆದು,
ಕಣ್ಣುಗಳು ತೇವ, ಮನದಲ್ಲೇಕೋ ಪಾಪಪ್ರಜ್ಞೆ,
ತುಟಿಯಲ್ಲಿ ಕಿರುನಗೆ!!!