ಗುರುವಾರ, ನವೆಂಬರ್ 18, 2010

ಪಯಣ ಹೊಸ ಕನಸಿನೆಡೆಗೆ

ಆ ದಿನ ಕಾಲೇಜಿನಲ್ಲಿ ನಾವೆಲ್ಲ ಕ್ಲಾಸಿನಲ್ಲಿ ಕೂತಾಗ, ಪ್ರಿನ್ಸಿಪಾಲರು ಬಂದು ಇಪ್ಪತ್ತು ಜನರ ಹೆಸರನ್ನು ಕೂಗಿ , "come to my chamber " ಎಂದಾಗ ಏನಿರಬಹುದಪ್ಪಾ?! ಎಂದು ಅನುಮಾನಿಸುತ್ತಲೇ ನಾವೆಲ್ಲ ಗೆಳೆಯರು ಪಿಸು ಪಿಸು ಮಾತಡುತ್ತಾ ಹೆಜ್ಜೆ ಹಾಕಿದೆವು.ಚೇಂಬರ್ ಒಳಗೆ ಹೋದ ಮೇಲೆ ಪ್ರಿನ್ಸಿಪಾಲರು ಮಾತನ್ನು ಶುರುವಿಟ್ಟುಕೊಂಡರು. ಒಂದು ಕಂಪನಿಯವರು campus interview ಮಾಡಲು ಬರುತಿದ್ದಾರೆ.ನಾನು ನಿಮ್ಮೆಲ್ಲರನ್ನು ಸೆಲೆಕ್ಟ್ ಮಾಡಿದೀನಿ. ನೀವೆಲ್ಲ prepare ಆಗಿ ಅಂದರು. ಹೊರಗೆ ಬಂದ ನಮಗೆ ಅಯ್ಯೋ! ಯಾರಿಗೆ ಬೇಕಿತ್ತಪ್ಪ ಇದೆಲ್ಲ.ಸುಮ್ನೆ ಓಡಾಡಿಕೊಂಡಿದ್ವಿ ಅಂತ ಅನ್ನಿಸಿತ್ತು. ಹಾಗೇ preparation ಏನೂ ಮಾಡದೆ ಇಂಟರ್ವ್ಯೂ ಹೋಗ್ಬಂದ್ವಿ.ಮೊದಲ ಸುತ್ತಿನ ಇಂಟರ್ವ್ಯೂ ನಡೆದ ಮೇಲೆ ಊಟಕ್ಕೆ ಹೋಗಿ ಬನ್ನಿ.ಆಮೇಲೆ ರಿಸಲ್ಟ್ ಹೇಳುತ್ತೀವಿ ಎಂದಾಗ ನಾನಂತೂ ನನಗೆ ಸಕತ್ ಹಶ್ವಾಗಿದೆ.ಮೊದಲು ಊಟ ಮಾಡೋಣ ಅಂತ ಹೋಗಿದ್ದೆ.ಮನಸಲ್ಲಿ ನಾನು ಹೇಗಿದ್ರೂ ಸೆಲೆಕ್ಟ್ ಆಗಲ್ಲ ಬಿಡು ಅಂದುಕೊಂಡಿದ್ದೆ.ಆದರೆ, ಬಂದು ನೋಡಿದರೆ ಹತ್ತು ಜನರ ಹೆಸರಿನ ಮಧ್ಯೆ ನನ್ನ ಹೆಸರೂ ಸ್ಮೈಲ್ ಮಾಡ್ತಾ ಕೂತಿತ್ತು.ನಂಗೇ ನಂಬ್ಕೆ ಆಗ್ಲಿಲ್ಲ! ಆಮೇಲೆ ಸಿಕ್ಕಿದ್ದು ಆಫರ್ ಲೆಟರ್.ಸೀದಾ ಇತ್ತಕಡೆ ಪಯಣ.ಇದು ಫ್ಲಾಶ್ ಬ್ಯಾಕ್.

ಕೆಲಸ ಬಿಡುತ್ತೀನಿ ಎಂದು ನನ್ನ ಟೀಂ ಲೀಡರ್ ಗೆ ಹೋಗಿ ಒಂದು ತಿಂಗಳ ಹಿಂದೆ ಹೇಳುತ್ತೀನಿ.ಅವರೋ ಆಶ್ಚರ್ಯ , ಆತಂಕದಿಂದ "ವೈ ,ವಾಟ್ ಹ್ಯಾಪೇನ್ಡ್? ಅಂತಾರೆ.ನಾನು ಕೆಲಸಕ್ಕೆ ರಿಸೈನ್ ಮಾಡುತ್ತೀನಿ.ಒಹ್! ನೀವು ಪೆಪೆರ್ಸ್ ಹಾಕಿದ್ರಾ? ಯಾವಾಗ ಲಾಸ್ಟ್ ವರ್ಕಿಂಗ್ ಡೇ ? ಎಂದು ಕೇಳುವ ಎಲ್ಲರಿಗೂ ಉತ್ತರ ಕೊಟ್ಟು ದಣಿಯುತ್ತೇನೆ.ಇನ್ನು ಕೆಲವರು ಯಾಕೆ ಬೇರೆ ಕಡೆ ಕೆಲಸ ಸಿಕ್ಕಿತಾ? ಮದುವೆ ಆಗ್ತಾ ಇದ್ದೀರಾ? ನೀವು ಸೇರುವ ಹೊಸ ಕಂಪನಿಯಲ್ಲಿ ನಮಗೂ ರೆಫರ್ ಮಾಡಿ ಅಂತ ಹೇಳುತ್ತಾರೆ.. ಇನ್ನು ಕೆಲವರು ,ಸಾಕು ಬಿಡಿ ,ಇನ್ಮೇಲಾದ್ರು ಆರಾಮಾಗಿರಿ, ಎಂದು ಬಿಟ್ಟಿ ಸಲಹೆ ಕೊಡುವವರು.ಏನೋ..ಇಷ್ಟು ದಿನ ಮಣ್ಣು ಹೊತ್ತು ಕಷ್ಟ ಪಟ್ಟ ಹಾಗೆ! ಮರಿಬೇಡ ಕಣೆ ಎಂದು ,ಒಂದು ದಿನವೂ ಮಾತಾಡಿಸದ ಹುಡುಗಿ ಬಂದು ಹೇಳುತ್ತಾಳೆ.ಹೋ..ನೀನು ಆರ್ಕುಟ್ನಲ್ಲಿ ಇದಿಯಲ್ಲ..ನಾನು ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸ್ತೇವೆ ಅಂತ ಸ್ವಲ್ಪ ಜನ ಹೇಳುತ್ತಾರೆ.ನೀವು ಈಗ "ಫ್ರೀ ಬರ್ಡ್"ಅಂತ ಇನ್ಯಾರೋ ಹೇಳುತ್ತಾರೆ. ನಾವೆಲ್ಲ ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.ಯಾರೇ ಬ್ಲಾಗ್ ಬಗ್ಗೆ, ಅಥವ ಪುಸ್ತಕದ ಬಗ್ಗೆ ಮಾತಾಡಿದರೆ ನಿನ್ನ ನೆನಪೇ ಆಗುತ್ತೆ ಎಂದು ಹೇಳಿ ನನ್ನನ್ನು ಭಾವುಕಗೊಳಿಸುತ್ತಾರೆ. ನನ್ನ ಸುಂದರ campus , ಇಲ್ಲಿ ಇರುವ ಈಜು ಕೊಳದ ಬಳಿ ನಾನು ಕಳೆಯುತ್ತಿದ್ದ ಸಮಯ ಎಲ್ಲವೂ ಒಮ್ಮೆಲೇ ನೆನಪಾಗುತ್ತದೆ. ನಮ್ಮನ್ನೆಲ್ಲ ಬಿಟ್ಟು ಹೋಗಬೇಡಾ ಪ್ಲೀಸ್ ಅಂತ ಹೇಳಿದ ಹಾಗೇ ನನಗೆ ಭಾಸವಾಗುತ್ತದೆ. ಬಸ್ ನಲ್ಲಿ ಎರಡು ಘಂಟೆಗಳ ಪಯಣ ಮಾಡಿದರೂ, ಅದರಲ್ಲಿ ಇರುವ ಖುಷಿ ಇನ್ನು ಮೇಲೆ ಸಿಗಲ್ಲವಲ್ಲ ಅಂತ ಒಂದು ಸಾರಿ ಬೇಸರವಾಗುತ್ತದೆ. ಮತ್ತೆ ಇದೆಲ್ಲ ನನ್ನ ಸ್ವಂತದ್ದ? ನೀನು ಮುಂದುವರೆಯಬೇಕು.ನಿಂತ ನೀರಾಗಬೇಡ ಅಂತ ನನ್ನ ಮನಸು ಎಲ್ಲೋ ಒಂದು ಕಡೆ ಎಚ್ಚರಿಸುತ್ತೆ.ಮೂರು ವರುಷಗಳಲ್ಲಿ ಪಡೆದುಕೊಂಡಿದ್ದು ಬಹಳಿದೆ. ಕಳೆದುಕೊಂಡಿದ್ದು ಏನೂ ಇಲ್ಲ.ಬರೀ ಗಳಿಕೆ.ಮೊದಲ ಜಾಬು ,ಅಂದರೆ ಏನೋ ವಿಶೇಷ ಪ್ರೀತಿ.ಅಪ್ಪ ಅಮ್ಮನ ನಂತರ ಇದೇ ನನ್ನ ಅನ್ನದಾತ.ನನ್ನ ಜಾಬು ನನಗೆ ಬ್ರೆಡ್,ಬಟರ್ ,ಜಾಮ್,ಗೋಲ್ -ಗಪ್ಪ, ಹೊಸ ಡ್ರೆಸ್ಸು,ಮೊಬೈಲ್, ಕ್ಯಾಮೆರಾ,ಅಮ್ಮಂಗೆ -ಅಪ್ಪಂಗೆ-ತಂಗಿಗೆ ಗಿಫ್ಟುಗಳು,ಹುಡುಗನಿಗೆ ಕೊಟ್ಟ ನಾಯಿ ಮರಿ ಗೊಂಬೆ, ಎಲ್ಲದಕ್ಕೂ ದುಡ್ಡು ಒದಗಿಸಿದೆ. Thank you soo much .ಆದರೂ ಕಂಪನಿ ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವಾದರೂ, ಮುಂದಿನ ದಿನಗಳ ಬಗ್ಗೆ ನೆನೆಸಿಕೊಂಡು ಪುಳಕಗೊಳ್ಳುತ್ತೀನಿ.

ಯಾರಾದರೂ ಕಂಪನಿ ಬಿಟ್ಟು ಹೋಗುವಾಗ,ಯಾರದೋ ಹುಟ್ಟಿದ ದಿನ ಆದಾಗ,ಯಾರದೋ ಮದುವೆ ಆದಾಗ ಟೀಮಿನಲ್ಲಿ ಎಲ್ಲರ ಬಳಿ ಹಣ ಸಂಗ್ರಹ ಮಾಡಿ ಅವರಿಗೊಂದು ನೆನಪಿನ ಕಾಣಿಕೆಯನ್ನು ಕೊಡೋದು ಅಭ್ಯಾಸ.ನನಗೂ ಹಾಗೊಂದು ಬೀಳ್ಕೊಡುಗೆ ಸಮಾರಂಭವನ್ನು ಇಟ್ಟುಕೊಳ್ಳಲು ಇವರೆಲ್ಲ ಗುಟ್ಟು ಗುಟ್ಟಾಗಿ ದುಡ್ಡು ಸಂಗ್ರಹ ಮಾಡುತ್ತಿರುವುದು ನನ್ನ ಗಮನಕ್ಕೆ ಬರುತ್ತಿದೆ.ಈಗಾಗಲೇ ಎಲ್ಲರು ಸೇರಿ ಒಂದು ದೊಡ್ಡ ಡಬ್ಬಿಯಲ್ಲಿ ಚಂದನೆ ,ಬಣ್ಣ ಬಣ್ಣದ ಹೊಳೆಯುವ ಕಾಗದದಲ್ಲಿ ಸುತ್ತಿ,ಅದಕ್ಕೊಂದು ಲೇಬೆಲ್ ಹಚ್ಚಿ ಇಟ್ಟುಕೊಂಡಿದ್ದಾರೆ."ನಾಳೆ ನನ್ನ ಫೇರ್ವೆಲ್ ಕಣೋ.ಹೊಸ ಡ್ರೆಸ್ ಕೊಳ್ಳಲಾ ಅಂತ ನೋಡ್ತಾ ಇದೀನಿ ಅಂತ ಹುಡುಗನಿಗೆ ಹೇಳಿದರೆ, 'ಎಂತದೂ ಬೇಡ.ಇದ್ದಿದ್ ಡ್ರೆಸ್ಸು ಹಾಕಂಡು ಹೋಗು ಸಾಕು.ಏನ್ ಭಾರಿ!!.:-)." ಅಂತಾನೆ.ಇಲ್ಲಿಂದ ಬಿಟ್ಟು ಹೋಗಲು ಬೇಸರ ಆಗುತ್ತಿದ್ದರೂ( ಬೇಸರ ಅನ್ನೋಕಿಂತ mixed feelings ಅನ್ನಬಹುದು )ಹೇಳಿಕೊಳ್ಳಲು ಅವನು,ಮತ್ತು ಅಪ್ಪ ಅಮ್ಮ ಎಲ್ಲರೂ ಇದ್ದಾರೆ ಅನ್ನುವ ನೆಮ್ಮದಿ ಬಿಟ್ಟರೆ ಇನ್ನೇನು ಅಲ್ಲ.ಎಲ್ಲವೂ ಚೆನ್ನಾಗಿದೆ.ಯಾಕೆ ಬಿಡುತಿದ್ದೀಯ ಎಂದು ಯಾರಾದ್ರು ಕೇಳಿದರೆ ನನ್ನ ಬಳಿ ಉತ್ತರ ಇಲ್ಲ. ಪಯಣ ನಾಳೆಯಡೆಗೆ.ಹೊಸ ಕನಸಿನೆಡೆಗೆ.

ರೋಬರ್ಟ್ ಫ್ರಾಸ್ಟ್ ಅವರ ಕವನದ ಸಾಲುಗಳು ನೆನಪಾಗುತ್ತಿವೆ.

"The woods are lovely, dark, and deep,
But I have promises to keep,
And miles to go before I sleep,
And miles to go before I sleep. "ನನಗಾಗಿ ತಂದ ಡಬ್ಬಿಯಲ್ಲಿ ಏನಿರಬಹುದೋ ಗೊತ್ತಿಲ್ಲ.ಇಲ್ಲಿಂದಾನೆ ಇಣುಕುತ್ತಾ ಇದೀನಿ!!...ಸರ್ವೇ ಜನಃ ಸುಖಿನೋ ಭವಂತು!!..:-)

ಸೋಮವಾರ, ನವೆಂಬರ್ 08, 2010

ಮಾತನ್ನು ಹೇಳುತ್ತಾ - ಎರಡು ವರುಷಗಳು!!

ನಾನು ಯಾರಾದರು ನಾವಲ್ಲಿ ಹೋಗುತ್ತಿದ್ದೇವೆ.ಇಲ್ಲಿ ಹೋಗುತ್ತಿದ್ದೇವೆ..ನಿನಗೆ ಏನು ತರಬೇಕು ಅಂತ ಕೇಳಿದಾಗ,"ನನಗೆ ನೈಲ್ ಪೋಲಿಷ್ ತಗೊಂಡು ಬನ್ನಿ"..ಮತ್ತೇನೂ ಬೇಡ ಅಂತ ಹೇಳೋದು.ಸುಮಾರು 35-40 ಬಣ್ಣದ ನೈಲ್ ಪೋಲಿಷ್ ಬಾಟಲಿಗಳು ಇವೆ ನನ್ನ ಬಳಿ.ಅದೇನೋ ನನಗೆ ಬಹಳ ಪ್ರೀತಿ. ಸ್ವಚ್ಛವಾಗಿ ತೊಳೆದುಕೊಂಡ, ಬೆಳೆಸಿದ ಉಗುರುಗಳಿಗೆ ಬಣ್ಣ ಹಚ್ಚಿಕೊಂಡಾಗ ಅದೇನೋ ಒಂತರಹ ಹೇಳಿಕೊಳ್ಳಲಾಗದ ಖುಷಿ ಆಗುತ್ತದೆ ನನಗೆ.ಖುಷಿ ಪಡುವಂತಹ ಕ್ಷಣಗಳನ್ನು ಬಿಡುವುದುಂಟೆ? ಅದಕ್ಕೆಂದೇ ಅವನ್ನು ನನ್ನದಾಗಿಸಿಕೊಂಡೆ. ಚಿಕ್ಕಂದಿನಲ್ಲಿ ಬಾಟಲಿ ಅರ್ಧ ಖಾಲಿ ಆದ ಕೂಡಲೇ ನೀರನ್ನು ಹಾಕಿ ಅದನ್ನು ತುಂಬಿಸುತಿದ್ದೆ. ಅದು ಹಾಳಾಗಿ ಉಗುರುಗಳಿಗೆ ಹಚ್ಚಲು ಬಾರದೇ ಅಳುತಿದ್ದಾಗ ,ಅಪ್ಪ ಬಂದು "ಹೋಗ್ಲಿ ತಗ...ಆಳಡ ಮಗಾ,ನಿಂಗೆ ಹೊಸಾ ನೈಲ್ ಪೋಲಿಷ್ ಕೋಡ್ಸ್ತಿ.ನೀರು ತಾಗ್ಸಿದ್ರೆ ಹಾಳಗ್ತು.ನೀರ್ ತಾಗ್ಸಡ ..ಫ್ರಿಡ್ಜ್ ನಲ್ಲಿ ಇಟ್ಕ "ಅಂತ ಹೇಳ್ತಿದ್ರು.

ಹ್ಮ್!! ..ಹೌದು .ಈ ನೈಲ್ ಪೋಲಿಷ್ ಹೇಗೆ ಬಂದಿರಬಹುದು? ಎಂಬ ಯೋಚನೆ ಬಂದಿದ್ದು ತೀರಾ ಇತ್ತೀಚೆಗೆ ! ಮಾರುಕಟ್ಟೆಯಲ್ಲಿ ದೊರೆಯುವ ಬಣ್ಣ ಬಣ್ಣದ ನೈಲ್ ಪೋಲಿಷ್ ಗಳಿಗೆ ಮನ ಸೋಲದೆ ಇರುವವರೇ ಇಲ್ಲ. ನೈಲ್ ಪೋಲಿಷ್ ಪ್ರಾಚೀನ ಕಾಲದಿಂದಲೂ ಪ್ರಚಲಿತ. ಪ್ರಾಚೀನ ಚೀನಾದಲ್ಲಿ ಮೊದಲ ಬಾರಿ ಇದರ ಆವಿಷ್ಕಾರವಾಯಿತು.ಆಮೇಲೆ ಕಾಲಕ್ರಮೇಣ ಬೇರೆ ದೇಶಗಳಿಗೆ ರಾವಾಣೆಯಾಯಿತಂತೆ.ಆಗಿನ ಕಾಲದಲ್ಲಿ ಇದು ಕೇವಲ ಫ್ಯಾಶನ್ ಗಾಗಿ ಅಷ್ಟೇ ಮೀಸಲಾಗದೆ, ಒಬ್ಬ ವ್ಯಕ್ತಿಯ ಅಂತಸ್ತನ್ನು ತೋರಿಸುತಿತ್ತು . ಒಂದೊಂದು ಬಣ್ಣಕ್ಕೆ ಒಂದೊಂದು ಅರ್ಥಗಳಿದ್ದವು. ಶ್ರೀಮಂತರು ತಮಗೆ ಬೇಕಾದ ಬಣ್ಣವನ್ನು ಧರಿಸಬಹುದಾಗಿಯೂ ,ಬಡವರು ಯಾವಾಗಲೂ ಮಣ್ಣಿನ ಬಣ್ಣವೋ,ಅಥವಾ ತೀರಾ ಉಗುರಿಗಿಂತ ಬಿನ್ನವಾಗದಂತಹ ಬಣ್ಣವನ್ನು ಹಚ್ಚಬೇಕಾಗುತಿತ್ತು.. ಕೆಲವೊಂದು ಬಣ್ಣಗಳನ್ನು ಕೇವಲ ಹಬ್ಬ, ತಿಥಿ, ಮದುವೆ ಮುಂತಾದ ಕಾರ್ಯಕ್ರಮಗಳಿಗಾಗಿಯೇ ಎತ್ತಿಟ್ಟಿದ್ದರು. ಹೀಗೆ ಇದು ಒಂದು ರೀತಿಯಲ್ಲಿ ಧಾರ್ಮಿಕ ಸಂಕೇತವೂ ಆಗಿತ್ತು ಎಂದರೆ ತಪ್ಪಾಗಲಾರದು.

ಆದರೆ ಇತ್ತೀಚಿನ ದಿನಗಳಲ್ಲಿ ಇದು ಧಾರ್ಮಿಕ ಸಂಕೇತವಾಗಿ ಉಳಿದಿಲ್ಲ.ಎಷ್ಟೋ ಕಂಪನಿಗಳು ನೈಲ್ ಪೋಲಿಷ್ಅನ್ನೇ ಮುಖ್ಯ ಉತ್ಪನ್ನವನ್ನಾಗಿ ಮಾಡಿಕೊಂಡಿದೆ. ಲಾಕ್ಮೆ, ಎವೊನ್ ,ಎಲ್ಲೇ 18 ಇನ್ನೂ ಅನೇಕ ಕಂಪನಿಗಳು ನೈಲ್ ಪೋಲಿಷ್ ತಯಾರಿಕೆಯಲ್ಲೆ ಹೆಸರುವಾಸಿಯಾಗಿವೆ .15 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿ ಬೆಲೆ ಬಾಳುವ ನೈಲ್ ಪೋಲಿಶಗಳು ಅಂಗಡಿಗಳಲ್ಲಿ ದೊರೆಯುತ್ತಿವೆ. ಎಲ್ಲರೂ ಕೊಳ್ಳಬಹುದಾದ ಬೆಲೆಗಳಲ್ಲಿ. ಈಗ ಇದನ್ನು ಕೇವಲ ಫ್ಯಾಶನ್ ,ಮತ್ತು ಕೈ -ಕಾಲುಗಳ ಸೌಂದರ್ಯ ವೃದ್ಧಿ ಸಾಧನ ಎಂದಷ್ಟೇ ನೋಡಲಾಗುತ್ತದೆ ಎಂಬುದು ಏನೋ ವನ್ ತರಹ ಸಮಾಧಾನಕರ ವಿಷಯವೇ ಅಂತ ಹೇಳಬಹುದು.ಇಲ್ಲಿಗೆ ನೈಲ್ ಪೋಲಿಷ್ ಪುರಾಣ ಮುಕ್ತಾಯವಾಯಿತು.********
ದೀಪಾವಳಿಯ ರಂಗು ರಂಗಿನ ಬೆಳಕುಗಳಲ್ಲಿ, ಎಲ್ಲಿ ನೋಡಿದ್ರೂ ಜಗಮಗಿಸುವ ಲೈಟಿನ ಸರಗಳು,ಸಿಹಿ ತಿಂಡಿಗಳು, ಹೊಸ ಬಟ್ಟೆಗಳು, ಹುಡುಗನ ಕಾಲ್ ,ಮೆಸ್ಸೇಜುಗಳು, ಆಗಾಗ ಬರುವ ಮಳೆಗಳು ,ಅಮ್ಮ-ಅಪ್ಪನ ಶುಭಾಶೀರ್ವಾದಗಳು, ತಂಗಿಯ ಶುಭಾಶಯಗಳು,ಸ್ನೇಹಿತರ ಮೈಲ್‍ಗಳು,ಪಟಾಕಿಗಳು ,ಅಲಂಕಾರಗಳು, ಟಿವಿಯಲ್ಲಿ ಬರುವ ಹಬ್ಬದ ವಿಶೇಷ ಕಾರ್ಯಕ್ರಮಗಳು, ಪಿಜಿಯಲ್ಲಿ ನಡೆಯುವ ಮೆಹೇಂದಿ ಕಾರ್ಯಕ್ರಮಗಳು, ಹೊರಗಿನಿಂದ ತರಿಸಿದ ಹೋಳಿಗೆಗಳು ,ಇವೆಲ್ಲದರ ಮಧ್ಯೆ ನನ್ನ ಬ್ಲಾಗ್ ಮಗೂಗು ಎರಡು ವರ್ಷ ಆಯ್ತು. ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ ಸರಿಯಾಗಿ ಎರಡು ವರುಷಗಳು!!

ಬರೆದ ಬರಹಗಳು ಎಷ್ಟರ ಮಟ್ಟಿಗೆ ಓದಲು ಸಹ್ಯವೋ ನನಗಂತೂ ಖಂಡಿತ ತಿಳಿದಿಲ್ಲ. ಬರೆದದ್ದಷ್ಟೇ ಗೊತ್ತು. ಬ್ಲಾಗ್ ನಿಂದಾಗಿ ಒಳ್ಳೇ ಸ್ನೇಹಿತರು, ಅಣ್ಣಂದಿರು, ಅಕ್ಕಂದಿರೂ, ತಂಗಿಯರು,ತಮ್ಮಂದಿರು ಹೀಗೆ ಇನ್ನೂ ಹಲವಾರು ಸಿಕ್ಕಿದ್ದಾರೆ. ಬ್ಲಾಗ್ ನನಗೆ ಯಾವತ್ತಿದ್ದರೂ ಖುಷಿ ಕೊಡುವ ಸ್ನೇಹಿತ. ನನ್ನ ಮಾತನ್ನು ಕೇಳಿಸಿಕೊಳ್ಳುವ ಜಾಣ. ಒಂದೊಂದು ಬರಹವೂ ನನಗೆ ಅಷ್ಟಿಷ್ಟು ಖುಷಿ ಕೊಟ್ಟವೆ. ಎಲ್ಲರೂ ಬರೆಯುತ್ತಾರೆ ಅಂತಲೋ, ಅಥವಾ ಇನ್ಯಾರೊಂದಿಗೋ ಸ್ಪರ್ಧೆಗಾಗಿ ನಾನು ಖಂಡಿತ ಬರೆಯೋದಿಲ್ಲ. ಬರೆಯೋಕೆ ನಂಗಿಷ್ಟ.

ಸುಮಾರು ಜನ ಚೆನ್ನಾಗಿ ಬರೆಯುತ್ತಿಯ ಅಂದರು. ಇನ್ಯಾರೋ ಏನು ಬರಿತಿಯ. ಬರೀ ಭಾವನೆಗಳ advertisement ಅಂದರು.ಹಾಗೆ ಹೇಳಿದವರು ಇನ್ಯಾರದೋ ಬ್ಲೋಗಿಗೆ ಚಪ್ಪರಿಸಿಕೊಂಡು ಕಾಮೆಂಟ್ ಹಾಕಿದರು! ಇಂಥವರ ಬಗ್ಗೆ ಅಸಡ್ಡೆ ಇದೆ. ಹೋಗ್ಲಿ ಬಿಡಿ,ಮನಸು ಹಾಳು ಮಾಡಿಕೊಳ್ಳೋದು ಬೇಡ. ಒಳ್ಳೇದು ,ಕೆಟ್ಟದ್ದು ಎರಡನ್ನೂ ಸ್ವೀಕರಿಸಲು ಬರಬೇಕು ಅಲ್ಲವ? ಯಾರು ಏನೇ ಹೇಳಿದರು ನಾನು ಮಾತ್ರ ನನ್ನ "ಮನಸಿನ ಮಾತುಗಳನ್ನು" ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ .ನಾನು ನಿಮ್ಮೆಲ್ಲರ ಬ್ಲಾಗುಗಳನ್ನು ಓದುತ್ತೇನೆ.ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೇನೆ.ನಿಮಗೆ ,ನಿಮ್ಮ ಬ್ಲಾಗಿನ ಮೇಲಿನ ಪ್ರೀತಿ ನನಗೂ ಬರೆಯುವ ಉಮೇದಿ ಹೆಚ್ಚಿಸುತ್ತದೆ. ಯಾರು ಏನು ಬೇಕಾದರೂ ಅಂದುಕೊಳ್ಳಲಿ.ಸಹನೆಯಿಂದ ಕೇಳಿಸಿಕೊಳ್ಳಲು ನೀವಿದ್ದೀರಿ ಎಂಬ ನಂಬಿಕೆ ನನಗಿದೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಇಲ್ಲದಿದ್ದರೆ ಖಂಡಿತ ನಾನು ಬರೆಯುತ್ತಿರಲಿಲ್ಲ. ನಿಮ್ಮೆಲ್ಲರ ಪ್ರೀತಿಗೆ, ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.ಪ್ರೀತಿ ಹೀಗೆ ಇರಲಿ .ಎಲ್ಲರಿಗೂ ಶುಭವಾಗಲಿ.
Love you all....


ಪ್ರೀತಿಯಿಂದ,
ದಿವ್ಯಾ...:-)

(ಚಿತ್ರಕೃಪೆ: ಅಂತರ್ಜಾಲ)