ಗುರುವಾರ, ಸೆಪ್ಟೆಂಬರ್ 30, 2010

ಅಪ್ಪ,ಬಂದ್ ಮತ್ತು ನಾನು

ಸುಮಾರು ಹತ್ತು ಜನ ಮಲಗಬಹುದಾದ ಕೊಠಡಿ ಅದು. ನಾವು ಮೂರು ಜನ ಒಳ ಹೊಕ್ಕಾಗ ಇದ್ದಿದ್ದು ಆರು ಜನ. ನಾಳೆ ಸಂಭವಿಸಬಹುದಾದ ಅನಾಹುತಕ್ಕಾಗಿ ಇವತ್ತೇ ಮುಂದಾಲೋಚನೆ ಮಾಡಿ, ಆಫೀಸ್ನಲ್ಲೆ ಉಳಿದುಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೆವು.ನಾಳೆ ನೀವೆಲ್ಲ half -day ಬರಲೇಬೇಕು ಎಂದು ಮ್ಯಾನೇಜರ್ ಹೇಳಿದಾಗ, ನಮ್ಮೆಲ್ಲರಲ್ಲಿ ಶುರುವಾಯಿತು ಗುಂಪಿನಲ್ಲಿ ಚರ್ಚೆ.ಛೆ! ಏನ್ ಜನಾನಪ್ಪ.ನಾಳೆ ಅಷ್ಟು ದೊಡ್ಡ ಗಲಾಟೆ ಆಗೋದಿದೆ.ಇವರಿಗೆ ಒಂದು ರಜೆ ಕೊಟ್ಟು ಸಾಯೋಕೆ ಏನು? ನಾಳೆ ಬಸ್ ಇಲ್ದೆ ಇದ್ರೆ? ಹಾಗೆ ಹೀಗೆ ಅಂತ ಮಾತಾಡ್ಕೋತಾ ಇದ್ರು .. ಅಂತು ನಾವು ಮೂರು ಗೆಳತಿಯರೆಲ್ಲ ಸೇರಿ ಇವತ್ತು ಇಲ್ಲೇ ಉಳಿದುಕೊಂಡು,ನಾಳೆ ಕೆಲಸ ಮುಗ್ಸಿ ಮೂರು ಘಂಟೆ ಒಳಗೆ ಮನೆ ಸೇರಿ ಕೊಳ್ಳೋಣ ಅಂತ ನಿರ್ಧಾರ ಮಾಡಿದೆವು .ನನಗೇನೋ ಆಫೀಸಿನಲ್ಲಿ ಉಳ್ಕೊಳೋಕೆ ಸ್ವಲ್ಪವೂ ಇಷ್ಟ ಇರಲಿಲ್ಲ. ಅಮ್ಮನು ಹಂಗೆ ಮಾಡು ಮಗಾ ಅಂತ ಹೇಳಿದ್ ಮೇಲೆ ಸರಿ ಅಂತ ಒಪ್ಕೊಂಡೆ. ಅನಿವಾರ್ಯವೂ ಆಗಿತ್ತು.

ಅಲ್ಲಿ ಮಲಗಲು ಹೋಗುವ ಹೊತ್ತಿಗಾಗಲೇ ಎಂಟು ಘಂಟೆಯಾಗಿತ್ತು. ಸುತ್ತಲು ಬರೀ ನಿಶ್ಯಬ್ಧ. ಸೂಜಿ ಬಿದ್ದರೂ ಕೇಳುವಷ್ಟು.ಅಲ್ಲಿದ್ದವರೆಲ್ಲ ಮುಸುಕು ಹಾಕಿಕೊಂಡು ಮಲಗಿದ್ದರು.ನನಗ್ಯಾರೋ ಅಲ್ಲಿ ದೆವ್ವ ಓಡಾಡುತ್ತೆ ಅಂತೆಲ್ಲ ಹೇಳಿದ್ದರು.ಸ್ನೇಹಿತೆಯರು noodles ತೆಗೆದುಕೊಂಡು ಬರುತ್ತೇವೆ.ಸಾಕು .ಇವತ್ತು ಊಟ ಬೇಡ ಅಂದರು,ನನಗೂ ತಗೊಂಡು ಬನ್ನಿ ಅಂತ ಹೇಳಿ ಅಲ್ಲೇ ಕುರ್ಚಿಯಲ್ಲಿ ಕುಳಿತುಕೊಂಡೆ. ದೊಡ್ಡ ನಿಲುವುಗನ್ನೆಡಿ ಇತ್ತು.ಕಣ್ಣು ಮುಚ್ಚಿದೆ.ಗೆಜ್ಜೆ ಸಪ್ಪಳ ಆಯಿತು.ಬೆಚ್ಚಿದೆ.ನೋಡಿದರೆ ನನ್ನ ಗೆಜ್ಜೆ ಶಬ್ದ. ಮತ್ತೆ ಕಣ್ಣು ಮುಚ್ಚಲು ಧೈರ್ಯ ಆಗಲಿಲ್ಲ. ಅವನಿಗೆ ಮೆಸೇಜ್ ಮಾಡುತ್ತಾ ಕುಳಿತೆ.ಆದರೂ ಅಲ್ಲಿ ಮುಸುಕು ಹಾಕಿ ಮಲಗಿಕೊಂಡವರಲ್ಲಿ ಯಾರಾದರು ದೆವ್ವ ಇರಬಹುದೇ??ಹೀಗೆ ಎನೇನೋ ಯೋಚನೆ ಆಗುತ್ತಾ ಇದ್ದು.ಅವನ ಮೆಸೇಜ್ ಬರುತ್ತಿದ್ದಾಗ ಮನಸು ಸ್ವಲ್ಪ ಶಾಂತವಾಗುತಿತ್ತು. ಅಷ್ಟರಲ್ಲೇ ಸ್ನೇಹಿತೆಯರು ಬಂದರು. ಅಬ್ಬ!! ಅಂದುಕೊಂಡು noodles ತಿಂದು, ಸುಮಾರು ಹನ್ನೆರಡು ಘಂಟೆ ಒರೆಗೆ ನಿದ್ದೆ ಬರಲಿಲ್ಲ.ನನಗೇನೋ insecured ಅನ್ನಿಸ್ತಾ ಇತ್ತು. ತಕ್ಷಣ ಹಳೆ ನೆನಪುಗಳೆಲ್ಲ ಕಣ್ಣ ಮುಂದೆ ಬಂದು ನಿಂತವು.

*****

ನಾನು ಆಗ ಐದನೇ ಕ್ಲಾಸಿನಲ್ಲಿ ಓದುತಿದ್ದೆ. ಊಟಕ್ಕೆ ಎಲ್ಲರೂ ಜೊತೆಯಲ್ಲೇ ಕುಳಿತು ಮಾಡುವುದು ನಮ್ಮ ವಾಡಿಕೆ. ನಾನು,ಅಪ್ಪ,ಅಮ್ಮ ಮತ್ತೆ ತಂಗಿ. ಅಪ್ಪ ಹೇಳೋಕೆ ಶುರು ಮಾಡಿದರು -"ಕೃಷ್ಣನಿಗೆ ಹೆಣ್ಣು ಮಗು ಆತಡ.ನಂ ಎದ್ರಿಗೆ ಅವನ್ ಹೆಂಡ್ತಿ ಮನೆಯವರಿಂದ ಫೋನ್ ಬಂತು.ಸರಿಯಾಗಿ ಮಾತೂ ಆಡಲ್ಲೇ .ಹೆಂಡ್ತಿನ ನೋಡಲು ಹೋಗ್ತ್ನಿಲ್ಯದ"ಅಂತ. ಅವಾಗಲೇ ನನಗನ್ನಿಸಿತು. ಅಪ್ಪನಿಗೆ ಯಾವಾಗಲೂ ಗಂಡು ಮಗು ಬೇಕು ಅಂತ ಅನಿಸಿರಲಿಲ್ಲವೇ ಅಂತ?.ತಕ್ಷಣ ಅಪ್ಪನಿಗೆ ಕೇಳಿದ್ದೆ. ಅಪ್ಪ..ನಿಂಗೆ ಮಗಾ ಬೇಕು ಹೇಳಿರ್ಲ್ಯ? ಅಂತ.ಅಪ್ಪ ತಲೆಗೆ ಒಂದು ಹೊಡೆದು ಹೇಳಿದ್ರು."ನೀನ್ ಯಾಕೆ ಹಿಂಗೆಲ್ಲ ಕೇಳ್ತಾ ಇದ್ದೆ.ನಾ ಯಾವತ್ತರು ಹಂಗೆ ಮಾಡಿದ್ನ?ನೀನು ,ಮಧು ನಂಗೆ ಎರಡು ಕಣ್ಣಿದ್ದಂಗೆ .ನೀವೇ ನಂಗೆ ಗಂಡು,ಹೆಣ್ಣು ಎಲ್ಲಾ. ನಂಗೆ ಗಂಡಿಲ್ಲೆ ಹೇಳಿ ಬೇಜಾರ್ ಇಲ್ಲೇ ಅಂತ. "ಆವಾಗಲೇ ಸಮಾಧಾನ ಆಯಿತು ನಂಗೆ.ಆದ್ರೆ ಅಪ್ಪನಿಗೆ ನಾನು ಕೇಳಿದ್ದು ಇಷ್ಟ ಆಗಲಿಲ್ಲ ಅಂತನೂ ತಿಳಿಯಿತು.

ಅಮ್ಮನಿಗೆನೋ ಹೇಳೋದಿತ್ತು.ಅವಳ ಮುಖದಿಂದ ತಿಳಿತಿತ್ತು. ಅಪ್ಪ ಎದ್ದು ಹೋದ ಮೇಲೆ ಅಮ್ಮ ಶುರು ಮಾಡಿದರು." ನೀನ್ ಹುಟ್ಟಿದಾಗ ಏನು ಹೇಳಿಲ್ಲ ಯಾರು.ಆದ್ರೆ ಮಧು ಹುಟ್ಟಿದಾಗ ,"ಇದೂ ಹೆಣ್ಣೆಯ?"...ಅಂತ ಎಲ್ಲರೂ ವಿಷಾದ ಪಡ್ತಿದ್ರು.ಆದ್ರೆ ನಿನ್ ಅಪ್ಪ ಮಾತ್ರ ಒಂದು ದಿನಾನು ನಂಗೆ ಬೈಯಲ್ಲೇ.ನಿಂಗ ಪುಣ್ಯ ಮಾಡಿದ್ದಿ ಅಂಥ ಅಪ್ಪನ ಪಡಿಯಕೆ" ಅಂತ. ಹೌದು ಅಂತ ನನಗೆ ಜೀವನದ ಪ್ರತಿ ಘಟ್ಟದಲ್ಲೂ ಅನಿಸುತ್ತಾನೆ ಇದೆ.ಎಲ್ಲರೂ same ಅಪ್ಪನ ಹಂಗೆ ಇದ್ದೆ ನೋಡು ಅಂದಾಗ ಏನೋ ಖುಷಿ ಆಗತ್ತೆ ನಂಗೆ. ಅಪ್ಪನಿಗೆ ನಾಳೆ ವಿಶ್ ಮಾಡಬೇಕು ಅಂತ ಮನಸಿನಲ್ಲಿ ಅಂದುಕೊಳ್ತಾ ಕಣ್ಣು ಮುಚ್ಚಿಕೊಂಡವಳು ಬೆಳಗ್ಗೆ ಆರು ಘಂಟೆಗೆ ಅಲರಾಂ ಆದ ಮೇಲೇ ತೆರೆದಿದ್ದು.


ನನ್ನ ಅಪ್ಪನ 51 ನೆ ವರ್ಷದ ಹುಟ್ಟಿದ ದಿನ ಇಂದು. ಅವರಿಗೆ ನನ್ನ ಶುಭಾಶಯಗಳು...:-)

(ಚಿತ್ರಕೃಪೆ: ಅಂತರ್ಜಾಲ)

ಬುಧವಾರ, ಸೆಪ್ಟೆಂಬರ್ 29, 2010

ಹೆಸರಿನ ಹಂಗಿಲ್ಲದ್ದು - ೧

ಲಹರಿಯಲ್ಲಿ ತೇಲುತ್ತಿದ್ದೆ
ಬಸ್ಸಿನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತು,
ಯಾವುದೋ ಲಹರಿಯಲ್ಲಿ ತೇಲುತ್ತಿದ್ದೆ,
ಸುಮ್ ಸುಮ್ನೆ ನನ್ನಷ್ಟಕ್ಕೆ ನಾನೇ ನಗುತಿದ್ದೆ,
ಆಮೇಲೇ ತಿಳಿದಿದ್ದು,
ಎದುರಿನ ಸೀಟಿನಲ್ಲಿ ಕೂತಿದ್ದ ಹುಡುಗ,
ನನ್ನೇ ಗುರಾಯಿಸುತಿದ್ದ ಎಂದು!

ನೀನು ರೆಡಿಯಾ?
ಜೀವನವೆಂಬ ನಾಟಕದಲ್ಲಿ,
ಸೀತೆಯ ಪಾತ್ರ ಹಾಕಲು ನಾನು ರೆಡಿ..
ಅಧುನಿಕ ಸೀತೆಯಲ್ಲವೋ,
ಪಕ್ಕಾ ರಾಮಾಯಣದ ಸೀತೆ,
ಆದರೆ ರಾಮಾಯಣದ ರಾಮನಾಗಲು ನೀನು ರೆಡಿಯಾ?

ಬುದ್ದಿವಂತಿಕೆ ಏನೋ!
ಎಲ್ಲರೂ ಹೇಳಿದರು,
"ನಾವು ಒಳ್ಳೆಯವರಾದರೆ,
ಜಗತ್ತೇ ಒಳ್ಳೇದು"
ಆದರೆ ಯಾಕೋ ನನಗೆ ಒಂದೊಂದು ಸಾರಿ
ಇದು ಸುಳ್ಳು ಅನಿಸುತ್ತದೆ.
ಏನೇ ಇರಲಿ, ಜಗತ್ತನ್ನು ಒಳ್ಳೇದು ಎಂದು ಅಂದುಕೊಂಡು,
ನಾವು ಒಳ್ಳೆಯವರಾಗೋದೆ ಬುದ್ದಿವಂತಿಕೆ ಏನೋ!

ಸ್ವರ್ಗಕ್ಕೆ ಕಿಚ್ಚು
ಸಂಜೆಯ ವೇಳೆ,
ದಿನವಿಡೀ ಕೆಲಸ ಮಾಡಿದ ಆಯಾಸ,
ನೈಸ್ ರೋಡಿನ ಮೇಲೆ ಪಯಣ,
ಇಕ್ಕೆಲದಲ್ಲಿ ಹಸಿರು ಗುಡ್ಡಗಳು,
ಆಗೊಮ್ಮೆ ಈಗೊಮ್ಮೆ ಕಾಣುವ ಹಕ್ಕಿಗಳು,
ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಾ,
ಹಾಡುಗಳನ್ನು ಕೇಳುತ್ತಾ ಮನೆಗೆ ಬರುತ್ತಿದ್ದರೆ,
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ!!

ಬಟ್ಟೆಯ ಸೇಲ್
ಬಟ್ಟೆಯ ಸೇಲ್ ಬಂದಲ್ಲಿಗೆ,
ಅಚಾನಕ್ಕಾಗಿ ಆ ದಾರಿಯಲ್ಲಿ ಹೋಗುತ್ತಿದ್ದಾಗ,
ಚೂಡಿದಾರ್ ಬಟ್ಟೆಗಳು, ಚೆನ್ನಾಗಿವೆ ಎಂದು ,
ನಾಲ್ಕು ಜೊತೆ ಕೊಂಡು ತಂದೆ.
ತಂದ ಕೂಡಲೇ,ಪ್ರಶ್ನೆಗಳು,
ರೇಟ್ ಎಷ್ಟು?ಎಲ್ಲಿಂದ ತಂದೆ?
ಸೇಲ್ ಇನ್ನೆಷ್ಟು ದಿನ?
ಸೇಲ್ ಇವತ್ತೇ ಕೊನೆಯ ದಿನ ಎಂದು ಹೇಳಲು,
ಹೊಟ್ಟೆಕಿಚ್ಚೆಲ್ಲ ಮಾತಿನ ರೂಪದಲ್ಲಿ ಹೊರ ಬಂತಲ್ಲ,
"ಬಟ್ಟೆ ಅಷ್ಟು ಚನಾಗಿರಲ್ಲ",
"ಎರಡು ಸಾರಿ ತೊಳೆದರೆ ಹಾಳಾಗತ್ತೆ "
ಅಬ್ಬ!! ಇವರ ಬುದ್ದಿಯೇ ಅಂತ ಅನ್ನಿಸಿ
ಸುಮ್ಮನಾಗದೆ ವಿಧಿ ಇರಲಿಲ್ಲ.

ನಾನು ನಿರುತ್ತರಿ
ಗೆಳತಿ ಹೇಳಿದಳು,
ನಡಿ ಆ ಕಡೆ ಹೋಗಿ ಹುಡುಗರನ್ನು,
ನೋಡಿಕೊಂಡು ಬರುವ.ನಾನಂದೆ,
ನೋಡಿ ಏನು ಮಾಡುವುದಿದೆ??
ಒಬ್ಬರು ಸಾಕು,ಹಾಗೆಲ್ಲ ನನಗಿಷ್ಟ ಆಗಲ್ಲ ಅಂತ.
ಅದಕ್ಕೆ ಅವಳು ಹೇಳಿದ್ದು,
ಅದೆಲ್ಲ ಮದುವೆ ಆದ ಮೇಲೆ ,
ಈಗ ನಾವ್ ಎಂಜಾಯ್ ಮಾಡಬೇಕು ಅಂತ.
ಅವಳ ಮಾತುಗಳಿಗೆ "ನಾನು ನಿರುತ್ತರಿ"

ಸೋಮವಾರ, ಸೆಪ್ಟೆಂಬರ್ 27, 2010

ನಾ ಮಾಡಿದ್ದು - ಉತ್ತರ.. :-)


ಮೊದಲಿಗೆ, ದೊಡ್ಡವರ ಮಾತುಗಳಂತೆ. "ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ.ಬಹುಮಾನದ ಬಗ್ಗೆ ಚಿಂತಿಸಬಾರದು " ಅಂತ.
ಭಾಗವಹಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು...:-)

ಹಾಗೆ ಕೆಲವೊಂದು ಹೊಸ ಬ್ಲಾಗಿಗರು ನನ್ನ ಬ್ಲಾಗಿಗೆ ಭೇಟಿ ಇತ್ತು ಉತ್ತರಿಸಿದ್ದೀರ .ನನ್ನ ಬ್ಲಾಗಿಗೆ ಸ್ವಾಗತ... :-)

ನನ್ನ ಪ್ರಶ್ನೆಗೆ ಸರಿಯಾದ ಉತ್ತರ..

ಅಂದರೆ ನಾನು ಮಾಡಿದ್ದು "ಕ್ಯಾರೆಟ್ ಬರ್ಫೀ " ಅಥವ "ಕ್ಯಾರೆಟ್ ಹಲ್ವಾ"

ಸಾಧಾರಣವಾಗಿ ಕ್ಯಾರೆಟ್ ಹಲ್ವಾ ಎಂದರೆ ಸ್ವಲ್ಪ ದ್ರವ ರೂಪದಲ್ಲಿರುವುದಕ್ಕೆ ಅದನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನಬೇಕಾಗುತ್ತದೆ. ಆದರೆ ನಾನು ಅದನ್ನು ಬಟ್ಟಲಿಗೆ ಸುರಿದು ವಜ್ರಾಕಾರದಲ್ಲಿ ಕತ್ತರಿಸುವುದರಿಂದ "ಕ್ಯಾರೆಟ್ ಬರ್ಫಿ " ಅತ್ಯಂತ ಸರಿ ಉತ್ತರ.

ಅತ್ಯಂತ ಸರಿ ಉತ್ತರ ಊಹಿಸಿದವರು " ಸುಬ್ರಹ್ಮಣ್ಯ "ಮತ್ತು " ಪ್ರಗತಿ ಹೆಗಡೆ ".ನಿಮ್ಮಿಬ್ಬರಿಗೂ CONGRATULATIONS !!..:-)

"ಕ್ಯಾರೆಟ್ ಹಲ್ವಾ"ಕೂಡ ಸಮೀಪದ ಉತ್ತರವಾದ್ದರಿಂದ ನಿಮಗೂ ಬಹುಮಾನ ಕೊಡುತ್ತೀನಿ.ಉಳಿದಂತೆ ಉತ್ತರಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ಕೊಡುತ್ತೇನೆ.

ಒಂದು ಚಪ್ಪಾಳೆ ನಿಮಗೆಲ್ಲರಿಗೂ... :-) ಉತ್ತರಗಳನ್ನು ಊಹಿಸಿ ನನ್ನಲ್ಲೂ ಲವಲವಿಕೆ ತಂದ ನಿಮಗೆಲ್ಲ ಧನ್ಯವಾದಗಳು.

ಬಹುಮಾನಗಳನ್ನು ಕೊಡಲು ಶೀಘ್ರವೇ ನಿಮ್ಮಲ್ಲರ ಮನೆಗಳಿಗೆ ಬರುವೆ. ಅಲ್ಲಿವರೆಗೂ ಕಾಯುತ್ತಿರಿ. ನಿಮ್ಮೆಲ್ಲರ ಪ್ರೋತ್ಸಾಹ,ಪ್ರೀತಿಗೆ ನನ್ನದೊಂದು thanks ... :-)

ಪ್ರೀತಿಯಿಂದ,
ದಿವ್ಯಾ:-)


(ಚಿತ್ರಕೃಪೆ: ಅಂತರ್ಜಾಲ)

ಮಂಗಳವಾರ, ಸೆಪ್ಟೆಂಬರ್ 21, 2010

ಹಾಗಿದ್ದರೆ ನಾ ಮಾಡಿದ್ದು ಏನು??

ಆ ದಿನ ಹೋಟೆಲ್ ನಲ್ಲಿ
ಊಟದ ಜೊತೆ ಅದನ್ನ ಕೊಟ್ಟಾಗಲೇ
ನಾ ಅಂದುಕೊಂಡಿದ್ದೆ,
ಒಮ್ಮೆ ಮನೇಲಿ ಮಾಡಿ ನೋಡಲೇ ಬೇಕು ಅಂತ.
PG ಯ ಅತ್ತೆಗೆ ಮಾಡಲೇ? ಎಂದು ಅನುಮತಿ ಕೇಳಿದಾಗ,
ಎಲ್ಲರಿಗೂ ಆಗುವ ಹಾಗೆ ಮಾಡುವುದಾದರೆ ಮಾಡು ಅಂದರು.
ನನಗೂ ಅದೇ ಬೇಕಾಗಿದ್ದು.
ಹತ್ತಿರದಲ್ಲೇ ಇದ್ದ ಅಂಗಡಿಗೆ ಹೋಗಿ,
ಕೆಜಿ ಗೆ ನಾಲ್ಕು ರೂಪಾಯಿ ಕಡಿಮೆ ಮಾಡುವಂತೆ ,
ಚೌಕಾಶಿ ಮಾಡಿ ಮನೆಗೆ ತಂದೆ.
ಮನೆಗೆ ತಂದ ಕೂಡಲೇ ,ಅದರ ತಲೆ,ಬಾಲವನ್ನು ಕುಯಿದು,
ಹೊರಗಿನ ಅದರ ಚರ್ಮವನ್ನು ಸಣ್ಣಗೆ ತೆಗೆದು,ನೀರಿನಲ್ಲಿ ತೊಳೆದು,
ನುಣ್ಣಗೆ ತುರಿದು, ಕುಕ್ಕರಿನಲ್ಲಿ ಒಂದು ಸೀಟಿ ಹೊಡೆಸಿ,
ಬಾಣಲೆಯಲ್ಲಿ ಕಾಯುತ್ತಿದ್ದ ಬಿಸಿ ಹಾಲಿಗೆ ಇದನ್ನು ಬೆರೆಸಿ,
ಪೂರ್ಣ ಬೆಂದ ಬಳಿಕ ಸಕ್ಕರೆ ಹಾಕಿ,ಹಾಲು ಇಂಗಿದ ಬಳಿಕ,
ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ,
ತುಪ್ಪ ತಳ ಬಿಡುತ್ತಿರಲು ,ತುಪ್ಪದಲ್ಲೇ ಹುರಿದ ಗೋಡಂಬಿ,ದ್ರಾಕ್ಷಿ ಹಾಕಿ,
ಒಂದು ಹದಕ್ಕೆ ಬಂದಾದ ಮೇಲೆ,ತುಪ್ಪ ಸವರಿದ ಬಟ್ಟಲಿಗೆ ಅದನ್ನು ಹಾಕಿ,
ವಜ್ರಾಕಾರದಲ್ಲಿ ಅದನ್ನು ಕತ್ತರಿಸಿ, ಎಲ್ಲರಿಗೂ ತಿನ್ನಲು ಕೊಟ್ಟೆನಲ್ಲ!!
ಎಲ್ಲರು ಚನಾಗಿ ಮಾಡಿದೀಯ ಎಂದಾಗ ಖುಷಿ ಪಟ್ಟೆನಲ್ಲ,
ಹಾಗಿದ್ದರೆ ನೀವೇ ಹೇಳಿ ನಾನು ಮಾಡಿದ್ದು ಏನು ಅಂತ...


(*ಸರಿಯಾದ ಉತ್ತರ ಊಹಿಸಿದವರಿಗೆ, ಬಹುಮಾನ ಕೊಡುತ್ತೇನೆ.. :-))
ಸ್ನೇಹಿತರೆ comment moderation ಮಾಡಿಟ್ಟಿದ್ದೇನೆ .ಸೆಪ್ಟೆಂಬರ್ 27 ಕ್ಕೆ ಉತ್ತರಗಳನ್ನು ಪ್ರಕಟಿಸುವೆ.

ಶುಕ್ರವಾರ, ಸೆಪ್ಟೆಂಬರ್ 17, 2010

ಬಿಂದುಗಳು...
**** ಅವನು ಎದೆ ಉರಿ ಅಂತ ಹೇಳಿಕೊಂಡ. ಸ್ನೇಹಿತರೆಲ್ಲ ಭಗ್ನ ಪ್ರೇಮ ಇರಬೇಕು, ಹುಡುಗಿ ಕೈ ಕೊಟ್ಟಿರಬೇಕು ಎಂದು ಹೇಳಿ ನಕ್ಕರು.ಅವನೂ ನಕ್ಕ. ಆದರೂ ಎದೆ ಉರಿ ಕಡಿಮೆ ಆಗಲಿಲ್ಲ. ಡಾಕ್ಟರ್ ಮಾತ್ರ acidity ತೊಂದರೆ ಇದೆ. ಸರಿಯಾಗಿ ಸಮಯ ಸಮಯಕ್ಕೆ ಊಟ ಮಾಡು ಎಂದರು!!


**** ಪದಗಳಿಗೆ ಹಿಂಸೆ ಕೊಟ್ಟು, ಅವನ್ನು ಹಿಂದೂ ಮುಂದಾಗಿಸಿ ಒಂದು ಕ್ಲಿಷ್ಟ ಕವನ ಬರೆಯಬೇಕು , ಓದಿದ ಹಲವರಲ್ಲಿ ಕೆಲವರಿಗಷ್ಟೇ ಅರ್ಥ ಆಗುವ ಹಾಗೆ ಅಂತ ಪ್ರಯತ್ನ ಪಟ್ಟೆ. ಕವನ ಹುಟ್ಟಲಿಲ್ಲ. ಮನಸಿನ ಸತ್ಯ ಗೋಚರಿಸಿತು. ನೀನೇ 'straight forward' ಆಗಿರುವಾಗ ಕ್ಲಿಷ್ಟ ಕವನ ಹೇಗೆ ಸಾದ್ಯ? ಕೈಯಲ್ಲಿ ಆಗದೆ ಇದ್ರೆ ಹೇಳೋದು ಹೀಗಾ ?ಇರಬಹುದು !


**** ಕೆಲಸ ಮುಗಿಯುವವರೆಗೆ ಕೆಲವರಿಗೆ ಕೆಲವರೇ ಇಂದ್ರ-ಚಂದ್ರ.ಕೆಲಸ ಮುಗಿದ ಮೇಲೆ ಯಾರು ಇಂದ್ರ? ಯಾರು ಚಂದ್ರ?...ಬಲ್ಲವರಾರು?

**** ಹತ್ತು ಜನ ತಪ್ಪಿರುವ ಒಂದು ವಿಷಯವನ್ನು ಸರಿ ಎಂದು ವಾದಿಸುತ್ತಿರುವಾಗ , ನ್ಯಾಯದ ಪರವಾಗಿ ಮಾತಾಡಿದ ಒಂದು ದ್ವನಿ ಯಾರಿಗೂ ಕೇಳದೆ ಹೋಯಿತು. ಅದು ಅರಣ್ಯ ರೋಧನ!!


**** ಹೊಸತಾಗಿ ಬಂದ ಎದಿರು ಮನೆ ಹುಡುಗಿ ದಿನವೂ ಆತನನ್ನು ಗುರಾಯಿಸುತಿದ್ದಳು. ಇವನಿಗೋ ಕುತೂಹಲ. ದೈರ್ಯ ಮಾಡಿ ಒಂದು ದಿನ ಕೇಳಿಯೇ ಬಿಟ್ಟ. ಯಾಕೆ ನನ್ನ ಗುರಾಯಿಸುತ್ತಿಯ? ಅವಳಂದಳು.."ನಿನ್ನ ನೋಡಿದರೆ ಸತ್ತು ಹೋದ ನನ್ನ ಅಣ್ಣನ ನೆನಪು ಆಗುತ್ತೆ" ...ಹುಡುಗ ಮಾತಾಡದೆ ವಾಪಸ್ಸಾದ...

**** ಹುಡುಗ ಕೇಳಿದ ಹುಡುಗಿಗೆ..ನೀನ್ ಯಾಕೆ ಯಾವಾಗಲೂ ಕೈಗೊಂದು ಬಣ್ಣದ nailpolish ,ಕಾಲುಗಳಿಗೊಂದು ಬಣ್ಣದ nailpolish ಹಚ್ಚುತ್ತಿಯ ?..ಅಂತ. ಹುಡುಗಿ ನಕ್ಕು ಸುಮ್ಮನಾದಳು. ಅವನಿಗೇನು ಗೊತ್ತು? ಅವನು ಕೇಳಲಿ ಎಂದೇ ಅವಳು ಹಾಗೆ ಮಾಡುತ್ತಾಳೆ ಎಂದು..

**** ಸಾವಿರ ರೂಪಾಯಿ ಕೊಟ್ಟು fast track watch ಕೊಂಡು ಎಲ್ಲರೆದುರೂ ತೋರಿಸಿಕೊಂಡು ಮೆರೆದವನಿಗೇ ಸಮಯ ಪಾಲನೆ ಗೊತ್ತಿಲ್ಲ. watch ಯಾವುದಾದರೇನು ತೋರಿಸುವ ಸಮಯ ಒಂದೇ!

**** ನನಗೂ ಎಲ್ಲ ಬರುತ್ತೆ. ಬರುತ್ತೆ ಅಂತ ತೋರಿಸಿಕೊಳ್ಳಲು ಬರುವುದಿಲ್ಲ ಅಷ್ಟೇ . ಇನ್ನು ಮುಂದೆ ಬರುತ್ತೆ ನನಗೂ ಅಂತ ತೋರಿಸಿಕೊಳ್ಳಬೇಕು ಅಂತ ಆತ ನಿರ್ಧರಿಸುವಾಗಲೇ ಆತನಿಗೆ ವರುಷ ಅರವತ್ತು!

**** ಕೇಜಿಗಟ್ಟಲೆ ಬಂಗಾರ ಸುರಿದುಕೊಂಡು ಹೋದವಳಿಗೆ ಜನರ ಹೊಗಳಿಕೆಗೆ ಖುಷಿ ಆದರೂ ,ಒಳಗೊಳಗೇ ಅಯ್ಯೋ ಇವೆಲ್ಲ ನಿಜವಾಗಲು ಬಂಗಾರವೇ ಆಗಿದ್ದರೆ ಎಂಬ ಗುಟ್ಟು ಆಸೆ!

**** ಬೇಕರಿ ಎದಿರು ನಿಂತ ಹುಡುಗನ್ನ ಅಂಗಡಿಯಾತ ಕೇಳಿದ.. ಏನಪ್ಪಾ ಬೇಕು? ನನಗೆ ಆ ರಸ ಒಡೆಯುತ್ತಿರುವ ಹನಿ ಕೇಕ್ ಇಷ್ಟ, ಘಂ ಅನ್ನುತ್ತಿರುವ ಪಪ್ಸ್ ಇಷ್ಟ, ಆಲೂಗಡ್ಡೆ ಚಿಪ್ಸ್ ಇಷ್ಟ, ಡೈರಿ ಮಿಲ್ಕ್ ಚಾಕಲೇಟ್ ಇಷ್ಟ.. ಆಮೇಲೆ ಒಂದು ನಿಟ್ಟುಸಿರು ಬಿಟ್ಟು.. ಸದ್ಯಕ್ಕೆ ನನಗೆ ಈ ಅಡ್ರೆಸ್ ಎಲ್ಲಿ ಬರುತ್ತೆ ಹೇಳಿ... ಅಂದ..

**** ಚಂದ ಚಂದ ಎಂದು ಹುಡುಕುವುದು ಯಾಕೆ?ಕಪ್ಪಗಿದ್ದರೂ ನೇರಳೆ ಬಲು ಸಿಹಿ.ಕೆಂಪಗಿದ್ದರೂ ಅತ್ತಿ ಹಣ್ಣು ಹೊರಗೆ, ಒಳಗೆ ಮಾತ್ರ ಹುಳ-ಹುಳ .

**** ಅವಳು ಹಾಗೇ... ಅವಳಿಗೆ ಹೀಗಿರಬೇಡ ಕಣೆ.. atleast ಎಲ್ಲರನ್ನ ನೋಡಿಯಾದರೂ ಅವರ ಹಾಗೇ ಇರು ಎಂದು ಹೇಳಿ ತಿದ್ದಲು ಹೊರಟ ಅವನು ಕಡೆಗೆ ಅವಳ ಹಾಗೇ ಆಗಿಬಿಟ್ಟ..

**** ಅವನು ಶ್ರೀಮಂತ. ಹುಲ್ಲು ತಿಂದ. ಜನ "ಔಷಧಿಗಾಗಿ ಹುಲ್ಲು ತಿನ್ನುತ್ತಿರಬೇಕು" ಅಂದರು.ಇವನು ಬಡವ.ಹುಲ್ಲು ತಿಂದ. ಜನರು "ಪಾಪ,ಹೊಟ್ಟೆಗೆ ಇಲ್ವೇನೋ ಅದ್ಕೆ ಹುಲ್ಲು ತಿಂತಾ ಇದಾನೆ" ಅಂದರು.

****ಯಾಕೋ ಒಂಟಿ ಅನಿಸುತ್ತಿದೆಯಲ್ಲ ಅಂತ ಯೋಚಿಸುತ್ತ ತಾರಸಿಯ ಮೆಟ್ಟಿಲು ಹತ್ತಿದರೆ..ಅಲ್ಲಿ ಆಗಸದಲ್ಲಿ ಚಂದ್ರಮ ನಗುತ್ತಾ ನಿಂತಿದ್ದ..(ಚಿತ್ರಕೃಪೆ: ಅಂತರ್ಜಾಲ)