ಆ ಮೀನು ಸುಮಾರು 15 ರಿಂದ 20 ಇಂಚು ಉದ್ದವಿರಬಹುದು.ಮೈಯಲ್ಲಿ ಅಲ್ಲಲ್ಲಿ ಚೂರು ರಕ್ತದ ಕಲೆಗಳು. ಆದರ್ಶ, ರಸ್ತೆಯಲ್ಲಿ ಬರುವಾಗ ಆ ಮೀನನ್ನು ದಾಟಿಕೊಂಡು ಬಂದಿದ್ದಾನೆ. ಬಂಗಾರದ ಬಣ್ಣದ ಮೀನಿನ ಮೈ , ಮದ್ಯಾನದ ಸೂರ್ಯನ ಬೆಳಕಿಗೆ ಪಳ ಪಳನೆ ಹೊಳೆಯುತ್ತಿತ್ತು.ಉಸಿರಾಡಲು ಕಷ್ಟ ಪಡುತಿತ್ತು.ಬಾಲವನ್ನು ಆಗಾಗ ಬಡಿಯುತ್ತಾ, ಪಲ್ಟಿ ಹೊಡೆಯುತ್ತಾ ಇತ್ತು. ಒಂದು ಚರಂಡಿಯ ದಂಡೆಯ ಹತ್ತಿರದಲ್ಲಿ ಅರೆ ಜೀವ ಇಟ್ಟುಕೊಂಡು ಒದ್ದಾಡುತಿದ್ದ ಮೀನಿನ ಪಕ್ಕಲ್ಲಿ ನಿಂತಿದ್ದ ಒಬ್ಬ ಪೋರ. ಹೆಚ್ಚೆಂದರೆ 12 ಇರಬಹುದು ಅವನ ವಯಸ್ಸು. ಹರಕು ಅಂಗಿ, ಕಾಲಲ್ಲಿ ಚಪ್ಪಲಿ ಇಲ್ಲ. ಅವನ ಕಣ್ಣುಗಳಲ್ಲಿ ಕನಸುಗಳಿಲ್ಲ. ನಾಳೆಯ ದಿನಗಳ ಬಗ್ಗೆ ಭರವಸೆ ಇಲ್ಲ. ಇಂದನ ದಿನದ ಬಗ್ಗೆ ಉತ್ಸಾಹ ಇಲ್ಲ. ಮಕ್ಕಳಿಗೆ ಇರಬೇಕಾದ ಮುಗ್ದತೆ ಇಲ್ಲ. ಅವನ ನೋಡಿದರೆ ಅವನ ಪರಿಸ್ತಿತಿ ಎಂಥದ್ದೆಂದು ತಿಳಿಯುವಂತಿತ್ತು. ಆದರ್ಶ ಒಂದು ಮನೆ ಹುಡುಕುತಿದ್ದ. ಮನೆ ಬದಲಿಸಬೇಕು ಅಂತ ಆತ ಪ್ರಯತ್ನ ಮಾಡುತ್ತಾ ಸತತವಾಗಿ ಎರಡು ವರುಷಗಳು!!.. ಮನೆ ಸರಿ ಇದ್ದರೆ, ಬಾಡಿಗೆ ಹೆಚ್ಚೆನಿಸುತಿತ್ತು. ಬಾಡಿಗೆ ಕಡಿಮೆ ಇರುವಲ್ಲಿ ನೀರಿನ ತೊಂದರೆ. ಮನೆ ಹುಡುಕಾಟ ನಿರಂತರವಾಗಿ ಸಾಗಿತ್ತು. ಅಲ್ಲೇ ಇದ್ದ ಒಂದು ಬಾಡಿಗೆಗೆ ಮೀಸಲಿದ್ದ ಒಂದು ಮನೆಯನ್ನು ನೋಡಿಕೊಂಡು ಬರುತ್ತಾನೆ. ಮನೆ ಮನಸಿಗೆ ಇಷ್ಟವಾಗಿದೆ. ಹೊರಬರುತಿದ್ದಂತ ಒಂದು cigarette ಹೊತ್ತಿಸಿಕೊಂಡು ಏನೋ ಯೋಚಿಸುತ್ತ ಆ ಬಂಗಾರದ ಬಣ್ಣದ ಮೀನನ್ನು ತದೇಕಚಿತ್ತವಾಗಿ ನೋಡುತಿದ್ದಾನೆ.
ಹುಡುಗ, ಮೀನು ಅಪ್ಪಿತಪ್ಪಿ ಆ ಚರಂಡಿಗೆ ವಾಪಸ್ಸು ಬೀಳದಿರುವಂತೆ ನೋಡಿಕೊಳ್ಳುತಿದ್ದಾನೆ. ಕೈಯಲ್ಲಿ ಒಂದು ಕೋಲನ್ನು ಹಿಡಿದುಕೊಂಡಿದ್ದಾನೆ, ಮೀನು ಚರಂಡಿಗೆ ಬಿದ್ದರೆ ಎತ್ತಿ ತೆಗೆಯಲು. ಆದರೂ ಮೀನು ಪ್ರಯತ್ನ ಮಾಡುತ್ತಲೇ ಇದೆ. ಚರಂಡಿಗೆ ಧುಮುಕಲು.ಹುಡುಗನ ಈ ಆಟಗಳನ್ನು ನಿಂತಲ್ಲೇ ಗಮನಿಸುತಿದ್ದ ಅದರ್ಶನಿಗೆ , ಒಂದು ವಿದೇಶಿ ಪ್ರವಾಸಿಗ ಜೋಡಿ ಬರುವುದು ಕಾಣುತ್ತದೆ.ಗಂಡ ಹೆಂಡತಿ ಇರಬಹುದೇ ಎಂಬ ಶಂಕೆ ಆದರ್ಶನ ಮನಸ್ಸಲ್ಲಿ. ಗಂಡ ಸುಮಾರು ಆರು ಅಡಿ ಎತ್ತರಕ್ಕೆ ದಪ್ಪ ಇದ್ದು, ಒಂದು T -shirt ,3 /4 ಪ್ಯಾಂಟ್ ಹಾಕಿದ್ದ, ಹೆಂಡತಿ jeans , t - shirt ಹಾಕಿದ್ದು, ಕೂದಲು ಭುಜದ ಒರೆಗೆ ಬರುತಿತ್ತು. ಅವರು ಇಂಗ್ಲಿಷ್ನಲ್ಲಿ ಮಾತಾಡುತಿದ್ದರು.ಪ್ರವಾಸಿ ತಾಣವಾದ ಆ ಜಾಗಕ್ಕೆ ವಿದೇಶಿಗರೇನು ಅಪರೂಪವಾಗಿರಲಿಲ್ಲ. ಆದರೆ ಯಾರೂ ಆ ಊರಲ್ಲಿ ಉಳಿಯಲು ಇಷ್ಟ ಪಡುತ್ತಿರಲಿಲ್ಲ. ವಸತಿ ವ್ಯವಸ್ತೆ ಸರಿ ಇರಲಿಲ್ಲ ಊರಲ್ಲಿ. ಅವರು ಮಾತನಾಡುತ್ತಿದ್ದುದು ಆದರ್ಶನ ಕಿವಿಗೆ ಕೇಳಿಸುತಿತ್ತು.
ಮಹಿಳೆ - " ನಾನು ಮೊದಲೇ ಹೇಳಿದೆ ಇಲ್ಲಿ ಬರುವುದು ಬೇಡ ಅಂತ."
ಆತ- " ಈಗ ಬಂದಾಗಿದೆಯಲ್ಲ. ನೋಡೋಣ... ಇಲ್ಲೇ ಎಲ್ಲಾದರೂ ಉಳಿದುಕೊಳ್ಳೋದಕ್ಕೆ ವ್ಯವಸ್ತೆ ಹುಡುಕುವ ಇರು .."
ಮೀನು ಆ ಮಹಿಳೆಯ ಕಣ್ಣಿಗೆ ಕಾಣುತ್ತದೆ.
ಮಹಿಳೆ - "ರೀ ಅದನ್ನ ನೋಡಿ...ಪಾಪದ ಪ್ರಾಣಿ"
ಆತ- "ಅದೆಲ್ಲಾ ಬೇಡ ಈಗ . ಸದ್ಯಕ್ಕೆ ಬೇಗ ಉಳಿದುಕೊಳ್ಳಲು ವ್ಯವಸ್ತೆ ಮಾಡಬೇಕು.ಸ್ವಲ್ಪ ಬೇಗ ಹೆಜ್ಜೆ ಹಾಕು. ಆಗಲೇ ಕತ್ತಲಾಗುತ್ತಿದೆ "
ಮಹಿಳೆ - "ರೀ... ಪಾಪದ ಪ್ರಾಣಿ ರೀ.. ಒಂದೇ ನಿಮಿಷ ಇರಿ... ಬರ್ತೀನಿ"
ಆ ಹುಡುಗನ ಹತ್ತಿರ ಹೋಗುತ್ತಾಳೆ ಮಹಿಳೆ.
ಅಲ್ಲೇ, ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಆದರ್ಶನ ಗಮನಿಸದೇ ಇರಲಿಲ್ಲ ಮಹಿಳೆ. ಆ ಹುಡುಗನ ಹತ್ತಿರ ಇಂಗ್ಲಿಷ್ನಲ್ಲಿ ಕೇಳುತ್ತಾಳೆ.
"what do you want to do with this poor thing ? ..
ಹುಡುಗ ಮಾತಾಡಲಿಲ್ಲ. ಮತ್ತೆ ಮಹಿಳೆ ಕೇಳುತ್ತಾಳೆ.
ನಿನಗೆ ಇಂಗ್ಲಿಷ್ ಬರುವುದಿಲ್ಲವಾ? ಹುಡುಗ ಮಾತಾಡುತ್ತಿಲ್ಲ.
ಆದರ್ಶನ ಹತ್ತಿರ - ಆ ಹುಡುಗ ಮೀನನ್ನು ಏನು ಮಾಡಬೇಕೆಂದಿದ್ದಾನೆ ?? ಅದನ್ನು ನೀರಲ್ಲಿ ಬಿಟ್ಟು ಬಿಡುವಂತೆ ಹೇಳುತ್ತಾಳೆ.
ಆದರ್ಶ ಹೇಳೋಣ ಅಂತ ಅಂದುಕೊಳ್ಳುತ್ತಾನೆ- ಸಮುದ್ರದ ದಂಡೆಗಳಲ್ಲಿ ವಾಸಿಸುವ ಮೀನುಗಾರರ ದರಿದ್ರ ಜೀವನವನ್ನ . ಹೇಗೆ ಅವರು ಹೊತ್ತಿನ ಗಂಜಿಗಾಗಿ ಕಷ್ಟ ಪಡುತ್ತಾರೆ. ಅವರ ಜೀವನ ಹೇಗಿದೆ?ಶಾಲೆಯೇ ಕಾಣದ ಮಕ್ಕಳು, ಹೊಟ್ಟೆಗೆ ಹಿಟ್ಟಿಲ್ಲದೆ ಸೊರಗುತ್ತಿರುವ ಮಹಿಳೆಯರು, ಔಷದ ತರಲು ದುಡ್ಡಿಲ್ಲದೆ, ರೋಗ ವಾಸಿಯಾಗದೇ ಸಾಯುತ್ತಿರುವ ಜನರ ಬಗ್ಗೆ. ಯಾವಾಗ ತ್ಸುನಾಮಿ ಬಂದು ತಮ್ಮ ಇರುವ ಒಂದು ನೆಲೆಯೂ ಕಳೆದು ಹೋಗಬಹುದು ಎಂಬ ಭಯದಿಂದ ಬದುಕುತ್ತಿರುವ ಜನರ ಬಗ್ಗೆ. ಆಮೇಲೆ ಯಾಕೋ , ಹೇಳಿ ಪ್ರಯೋಜನ ಇಲ್ಲ ಅಂತ ಅನ್ನಿಸಿ ,ಒಂದು ದೀರ್ಘ ಉಸಿರು ಬಿಟ್ಟು , ಹುಡುಗನನ್ನು ಕೇಳಲು ಮುಂದಾಗುತ್ತಾನೆ. ಹುಡುಗನನ್ನು ಕನ್ನಡದಲ್ಲಿ ಮಾತಾಡಿಸುತ್ತಾನೆ.
ಆದರ್ಶ - "ಮೀನನ್ನು ಯಾಕೆ ಹೀಗೆ ಹಿಡಿದುಕೊಂಡಿದಿಯ? ಏನು ಮಾಡಬೇಕು ಅಂದುಕೊಂಡಿದ್ದಿಯ?"
ಹುಡುಗ -" ಮಾರಬೇಕು ಅಂದುಕೊಂಡಿದ್ದೇನೆ. "
ಆದರ್ಶ ಮಹಿಳೆಗೆ -" ಮಾರುತ್ತಾನಂತೆ."
ಮಹಿಳೆ- "ಎಷ್ಟಾಗುತ್ತಂತೆ?"
ಆದರ್ಶ- "ಎಷ್ತಾಗುತ್ತಪ್ಪ? "
ಮೀನಿಗೆ ಆ ಊರಿನಲ್ಲಿ ಸಿಗಬಹುದಾದಕ್ಕಿಂತ ಐದು ಪಟ್ಟು ದುಡ್ಡು ಹೆಚ್ಚಿಗೆ ಹೇಳುತ್ತಾನೆ ಹುಡುಗ.
ಆದರ್ಶ- "......... ಇಷ್ಟಾಗುತ್ತಂತೆ "
ಕೂಡಲೇ ಮಹಿಳೆ ಗಂಡನ ಹತ್ತಿರ ಓಡಿ ದುಡ್ಡು ತಂದು ಹುಡುಗನಿಗೆ ಕೊಟ್ಟು , ಆ ಮೀನನ್ನು ಚರಂಡಿಗೆ ಬಿಟ್ಟು ಬಿಡುವಂತೆ ಹೇಳುತ್ತಾಳೆ. ದುಡ್ಡು ಇಸಿದುಕೊಂಡು ಹುಡುಗ ಮೀನನ್ನು ಚರಂಡಿಗೆ ತಳ್ಳುತ್ತಾನೆ. ಖುಷಿ ಪಟ್ಟ ಮಹಿಳೆ, ಗಂಡನೊಡನೆ ಹೊರಟು ಹೋಗುತ್ತಾಳೆ. ಹೋಗುತಿದ್ದ ಆ ಜೋಡಿಗಳು, ಹೋಗುತ್ತಾ ಹೋಗುತ್ತಾ, ಕಣ್ಣಿಂದ ಮಾಯವಾಗುತ್ತಾರೆ.
ಇತ್ತ ಹುಡುಗ , ಚರಂಡಿಗೆ ತಳ್ಳಿದ ಮೀನನ್ನು ಮತ್ತೆ ಒಂದು ಕೋಲಿನಿಂದ ಎಳೆದು ತೆಗೆದು, ಮತ್ತೆ ಯಥಾ ಪ್ರಕಾರ ಅದೇ ಜಾಗದಲ್ಲಿ ನಿಲ್ಲುತ್ತಾನೆ. ಮೀನು ಜಗತ್ತಿಗೆ ಅಷ್ಟೊತ್ತಿಗೆ ಕೊನೆಯ ವಿದಾಯ ಹೇಳಾಗಿತ್ತು
.
ಆದರ್ಶ , ಮತ್ತೊಂದು cigarette ಹೊತ್ತಿಸಿ ಮತ್ತೆ ಚಿಂತಾ ಮಗ್ನನಾದ .