ಬುಧವಾರ, ಫೆಬ್ರವರಿ 23, 2011

ಗತಕಾಲದ ನೆನಪು

ದೊಡ್ಡ ಕಂಪನಿಯ ಮಾಲೀಕ ಆತ .ದಿನಕ್ಕೆ ಲಕ್ಷ ರೂಪಾಯಿಗಳ ವಹಿವಾಟು ಅವನ ಕಂಪನಿಯಲ್ಲಿ. ಐದನೆಯ ಮಹಡಿಯ ಮೇಲಿನಿಂದ ನಿಂತು ಆಕಾಶವನ್ನು ದಿಟ್ಟಿಸುತ್ತಿದ್ದಾನೆ. ಸುಮ್ಮನೆ ಹಾಗೇ ಒಮ್ಮೆ ಕೆಳಗೆ ನೋಡಿದಾಗ ,ಒಬ್ಬ ಹುಡುಗ ಹುಡುಗಿಗೆ ಕೆಂಪು ಗುಲಾಬಿ ಹೂವನ್ನು ಕೊಡುವುದನ್ನು ಕಾಣುತ್ತಾನೆ.ನಿನ್ನೆ ಲಕ್ಷ್ಮಿ ನನಗೆ ಮಾತನ್ನು ಹೇಳಿದ್ದಾಗಿನಿಂದ ಮನಸ್ಸಲ್ಲಿ ಏನೋ ಒಂದು ರೀತಿ ವಿಕೃತ ಆನಂದ ಆಗಿದ್ದು ಸುಳ್ಳಂತೂ ಅಲ್ಲ.

ಅದು ಮಳೆಗಾಲದ ಸಮಯ. ಹೇಳಿ ಕೇಳಿ ಮಲೆನಾಡಿನ ಹಳ್ಳಿ. ಮಳೆ ಎಂದರೆ ಏನೆಂದು ಅಲ್ಲಿ ಹೋಗಿಯೇ ತಿಳಿಯಬೇಕು. ಎಲ್ಲಿ ನೋಡಿದಲ್ಲಿ ಹಸಿರು, ತುಂಬಿ ತುಳುಕುತ್ತಿರುವ ಹೊಳೆ,ಕೆರೆ ,ಬಾವಿಗಳು. ಮನೆಯಲ್ಲಿ ಅಮ್ಮ ಒಬ್ಬಳೇ. ಅಪ್ಪ, ನಾನು ಮೂರು ವರುಷದವನಿದ್ದಾಗಲೇ ತೀರಿಕೊಂಡರು. ಅಮ್ಮ ಇರೋ ಒಂದಷ್ಟು ಅಡಿಕೆ ತೋಟದಲ್ಲೇ ಹೇಗೋ ಮನೆ ತೂಗಿಸುತ್ತಿದ್ದಳು. ಏನಿತ್ತು ಆಗ ನನ್ನ ಹತ್ತಿರ? ಒಂದು ಹೊತ್ತು ಜಾಸ್ತಿ ತಿಂದರೆ ,ಮತ್ತೊಂದು ಹೊತ್ತಿನ ಬಗ್ಗೆ ಯೋಚಿಸುವಂತಹ ಪರಿಸ್ಥಿತಿ . ಆದರೂ ಹೃದಯ ಅನ್ನೋದಕ್ಕೆ ಇದೆಲ್ಲ ಎಲ್ಲಿಯ ಕಡಿವಾಣ?

"ಮನಸ್ಸು ತಪ್ಪು ಅಂದಿದ್ದನ್ನು,

ಹೃದಯ ಸರಿ ಎನ್ನುತ್ತದೆ".

ಅದೊಂದು ದಿನ ಅಮ್ಮ ಬರುವುದನ್ನು ಕಾಯುತ್ತ ಬಸ್ ಸ್ಟಾಪಿನ ಬಳಿ ನಿಂತಿದ್ದೆ. ನಮ್ಮೂರಿಗೆ ಬರುತ್ತಿದ್ದುದ್ದು ಒಂದೇ ಬಸ್ಸು. ಅಮ್ಮ ನಾಡಿದ್ದು ಮನೆಯಲ್ಲಿ ನಡೆಯುವ ಅಪ್ಪನ ಶ್ರಾದ್ಧಕ್ಕೆ ಸಾಮಾನು ತರಲು ಹೋಗಿದ್ದಳು. ನಾನೇ ಹೋಗುತ್ತೀನಿ ಎಂದರೂ ನಿನಗೆ ವ್ಯವಹಾರ ಜ್ಞಾನ ಕಡಿಮೆ ಎಂದು ಬಿಟ್ಟು ಹೋಗಿದ್ದಳು. ಅಂದು ಬಸ್ಸು ಬಂತು. ಅಮ್ಮನೂ ಬಂದಳು. ಹಾಗೇ ನಮ್ಮೂರಿನ ಶ್ರೀಮಂತ ಮನೆತನದವರ ಮೊಮ್ಮಗಳು,ಕೂಡ ಬಂದಿದ್ದಳು. ಅವಳನ್ನು ನಾನು ಇದುವರೆಗೂ ನೋಡಿರಲಿಲ್ಲ. ಹಾಲು ಗೆನ್ನೆಯ ಹುಡುಗಿ,ನಕ್ಕರೆ ಕೆನ್ನೆಯ ಮೇಲೆ ಗುಳಿ ಬೀಳುತ್ತಿತ್ತು. ಅದೇನು ಆಯ್ತೋ ನನಗೇ ಗೊತ್ತಿಲ್ಲ. ಕ್ಷಣದಿಂದ ನಾನು ಅವಳ ಮೋಹದಲ್ಲಿ ಬಿದ್ದುಬಿಟ್ಟೆ. ಮನಸ್ಸು ಸಾವಿರ ಬಾರಿ ಹೇಳಿತು. ಅವರು ದೊಡ್ಡ ಮೆನೆತನದವರು . ನಿನಗೆ ಏನಿದೆ ಅಂತ ಅವಳನ್ನ ಇಷ್ಟ ಪಡುವೆ ಎಂದು?ಆದರೂ ಹೃದಯ?!! ಊಹೂಂ.ನನ್ನ ಮಾತೇ ಕೇಳಲಿಲ್ಲ. "ಅಪ್ಪಿ...ಸುಬ್ಬಣ್ಣ ತುಪ್ಪಕ್ಕೆ ರೂಪಾಯಿ ಹೆಚ್ಚಿಗೆ ಮಾಡಿದ್ದ ಕೇಜಿಗೆ ಅಂತ ಅಮ್ಮ ಹೇಳುತ್ತಿದ್ದರೆ ನಾನು ಯಾವುದೋ ಲಹರಿಯಲ್ಲಿ ತೇಲುತ್ತಿದ್ದೆ.

ಅವಳು ಬೇಸಿಗೆಯ ರಜೆ ಕಳೆಯಲು ನಮ್ಮೂರಿಗೆ, ಅಂದರೆ ಅವಳ ಅಜ್ಜನ ಮನೆಗೆ ಬಂದಿದ್ದಳು. ಪುಸ್ತಕ ಓದೋಕೆ ಅವಳಿಗೂ ಇಷ್ಟ ಎಂದು ಗೊತ್ತಾಯಿತು ನನಗೆ ಹೇಗೋ. ಅದೇ ನೆವ ಮಾಡಿಕೊಂಡು ಅವರ ಮನೆಗೆ ಹೋಗುವುದು, ಅವಳನ್ನು ಕದ್ದು ನೋಡುವುದು ನನಗೆ ಅಬ್ಯಾಸವಾಗಿ ಹೋಯಿತು. ಆದರೆ ಮಾತಾಡಿಸುವ ಧೈರ್ಯ ಇರಲಿಲ್ಲ. ಒಂದು ದಿನ ಅವಳಾಗಿಯೇ ಬಂದು ಮಾತಾಡಿಸಿದಳು. ನಾನೂ ಮಾತಾಡಿದೆ.ಊರಿನ ಜನರ ಬಗ್ಗೆ, ನಾನು ಓದಿದೆ ಪುಸ್ತಕದ ಬಗ್ಗೆ, ಎಲ್ಲ. ನೋಡನೋಡುತ್ತ ನಾವು ತುಂಬಾ ಹತ್ತಿರವಾಗಿ ಬಿಟ್ಟೆವು. ಅವಳು ಇನ್ನೇನು ಹೋಗುವ ದಿನ ಬಂದಾಗಿತ್ತು. ಅವಳು ತಾನು ಊರಿಗೆ ಹೋದ ಮೇಲೂ ಕಾಗದ ಬರೆಯುವೆ ಎಂದಿದ್ದಳು. ಆದರೆ ನನಗ್ಯಾಕೋ ದಿಗಿಲಾಗಿತ್ತು. ಏನೋ ಕಳೆದುಕೊಂಡು ಬಿಡುತ್ತೇನೆ ಎಂದೆನಿಸಿತ್ತು. ಹಿಂದೆಂದೂ ಅನಿಸದ ವೇದನೆಯೊಂದು ಮನಸಲ್ಲಿ ಮನೆ ಮಾಡಿತ್ತು.

ಅವಳಿಗೆ ಪತ್ರ ಬರೆದೆ.ಬರೆದೇ ಬರೆದೆ. ಒಂದಕ್ಕೂ ಉತ್ತರವಿಲ್ಲ. ಅಮ್ಮನೂ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಳು. "ಅಪ್ಪಿ,ಅವೆಲ್ಲ ನಿಂಗೆ ಅವ್ರ ಮಗಳನ್ನ ಕೊಡ್ತ್ವನ? ಕನಸೇಯ. ಮರ್ತು ಬಿಡು ಅವಳನ್ನ" ಅಂತ ಹೇಳುತ್ತಿದ್ದಳು. ನಾನು ರಾತ್ರಿ ಅಮ್ಮ ಮಲಗಿದ ಮೇಲೆ ತಲೆ ದಿಂಬನ್ನು ಮುಖಕ್ಕೆ ಒತ್ತಿ ಹಿಡಿದು ಬಿಕ್ಕಿ - ಬಿಕ್ಕಿ ಅಳುತ್ತಿದ್ದೆ. ಅವಳನ್ನು ಬಿಟ್ಟಿರುವುದು ನನ್ನಿಂದ ಆಗದ ಮಾತಾಗಿತ್ತು. ಒಂದು ದಿನ ಪತ್ರದಲ್ಲಿ ಬರೆದೂ ಬಿಟ್ಟೆ. "ನೀನಿಲ್ಲದೆ ನಂಗೆ ಬದುಕೋಕೆ ಆಗೋದಿಲ್ಲ. ಪ್ರೀತಿಸುತ್ತಿದೀಯ? ನನ್ನ" ಎಂದು?. ಅವಳ ಪತ್ರ ಬಂದಿತ್ತು ನಾನು ನಿರೀಕ್ಷಿಸಿದಂತೆ. "ಹೌದು ಕಣೋ,ಊರಿಗೆ ಬಂದ ಒಂದು ತಿಂಗಳು ನಂಗೆ ನೀನು ಇಷ್ಟ ಆಗಿದ್ದೆ. ಅದಕ್ಕೆಂದೇ ನಾನು ನಿನ್ನೊಡನೆ ಪ್ರೀತಿಯಿಂದ ಇರುತ್ತಿದ್ದುದು. ಆದರೆ ನಂಗೆ ಈಗ ವಾಸ್ತವದ ಅರಿವಾಗಿದೆ.ಬದುಕೋಕೆ ಪ್ರೀತಿ ಒಂದೇ ಸಾಲುವುದಿಲ್ಲ. ದುಡ್ಡೂ ಬೇಕು. ನನಗೆ ಮನೆಯಲ್ಲಿ ಹುಡುಗನನ್ನು ನೋಡಿದ್ದಾರೆ. ಅವನು ಸಾಫ್ಟ್ವೇರ್ ಇಂಜಿನಿಯರ್. ಅವನಿಗೆ ತಿಂಗಳಿಗೆ ಎಂಭತ್ತು ಸಾವಿರ ಸಂಬಳ.ನನಗೆ ಅವನೇ ಇಷ್ಟ ಈಗ. ನಿನ್ನನ್ನು ಪ್ರೀತಿಸಲಾರೆ. "ಹಾಗೂ ನನಗೆ ಸಮಾಧಾನ ಆಗಲಿಲ್ಲ. ಅವಳ ಮನೆಗೆ ಹೋಗಿ ಮಾತಾಡಿಸಿದೆ. ಅದಕ್ಕೆ ಅವಳು ಅವಳ ತಂದೆಯಿಂದ ನನಗೆ ,ನನ್ನ ಸ್ವಭಾವ ಸರಿ ಇಲ್ಲದಿರುವುದಾಗಿ ಆಪಾದನೆ ಮಾಡಿ ಬೈಯ್ಯಿಸಿ ಕಳಿಸಿದಳು. ನನ್ನ ಪಾಲಿಗೆ ಉಳಿದಿದ್ದು ಮುರಿದ ನನ್ನ ಹೃದಯ, ಅವಳ ಮತ್ತು ಅವಳ ತಂದೆಯ ಬೈಗುಳದಿಂದ ಮನಸಿಗಾದ ಗಾಯ ಮತ್ತು ಹಾಲುಣಿಸಿ ಸಾಕಿ ಬೆಳೆಸಿದ ದೇವತೆ ನನ್ನ ಅಮ್ಮ ಅಷ್ಟೇ.

ದಿನದಿಂದ ದಿನಕ್ಕೆ ನಾನು ಬಡವಾಗುತಿದ್ದೆ. ಬಡತನದ ಬೇಗೆ ಒಂದು ಕಡೆ. ಪ್ರೀತಿಯ ವಂಚನೆ ಇನ್ನೊಂದು ಕಡೆ. ಹೇಗಾದರೂ ಮಾಡಿ ವಿಷ ವೃತ್ತದಿಂದ ಪಾರು ಮಾಡಲು ಅಮ್ಮ ಹುಡುಕಿಕೊಂಡ ದಾರಿ ನನ್ನ ಮದುವೆ! ಆಗಲೇ ಬಂದವಳು ಲಕ್ಷ್ಮಿ. ಹೌದು .ನನ್ನ ಲಕ್ಷ್ಮಿ. ಅವಳು ನನ್ನ ನೋಡದೆಯೇ ಒಪ್ಪಿದಳಂತೆ. ಏನಿತ್ತು ನನ್ನ ಬಳಿ?! ಏನಿಲ್ಲ ಅಂತ ಒಂದು ಹುಡುಗಿ ನನ್ನ ತಿರಸ್ಕಾರ ಮಾಡಿದ್ದಳೋ, ಹಾಗೇ ಮತ್ತೊಂದು ಹುಡುಗಿ ಏನೂ ಇಲ್ಲದಿದ್ದರೇನು? ಎಂದು ಸವಾಲೊಡ್ಡುವ ಹಾಗೇ ನನ್ನ ಒಪ್ಪಿಕೊಂಡಿದ್ದಳು. ಲಕ್ಷ್ಮಿಗೆ ನನ್ನ ಕಥೆಯನ್ನೆಲ್ಲ ಹೇಳಿಕೊಂಡೆ. ಮನಸು ಹಗುರಾಯಿತು ಎಷ್ಟೋ. ಅವಳು ಅರ್ಥ ಮಾಡಿಕೊಂಡು,ಕೊಂಚ ಯೋಚಿಸಿ ಹೇಳಿದಳು. "ನೀವು ಬುದ್ದಿವಂತರು,ಮನಸು ಮಾಡಿದರೆ ಅವಳ ಗಂಡನ ಮೀರಿಸಿ ದುಡಿಯಬಹುದು. ಒಂದು ದಿನ ಅವಳು ನಾಚಿಕೊಳ್ಳುವಂತೆ ನೀವು ಬದುಕಬಹುದು ಎಂದು ಹೇಳಿದಳು. ನಾನು ನಿಮ್ಮೊಂದಿಗೆ ಇದ್ದೀನಿ ಅಂತಲೂ ಹೇಳಿದಳು. ಯಾಕೋ ಮನಸ್ಸಿಗೆ ಅದೇ ಸರಿ ಅನ್ನಿಸಿತು. ಹಾಗೇ, ಒಂದು ಹುಡುಗಿ ನನ್ನನ್ನು ಇಷ್ಟೊಂದು ನಂಬುತ್ತಾಳಲ್ಲ ಅಂತ ಖುಷಿಯೂ!ದಿನಗಳೆದಂತೆ ನನಗೆ ಅವಳ ನೆನಪು ಕಡಿಮೆಯಾಯಿತು. ಅವಳು ನನಗೆ ಕಾಗೆಯಾಗಿಯೂ,ಲಕ್ಷ್ಮಿ ನವಿಲಾಗಿಯೂ ಕಾಣತೊಡಗಿದರು.ಅಲ್ಲಿಂದ ಬದುಕು ನಡೆದ ಬಂದ ರೀತಿಯೇ ಬೇರೆ.

ಅಮ್ಮನನ್ನು ಒಪ್ಪಿಸಿ ಹಳ್ಳಿ ಬಿಟ್ಟು ,ಎಲ್ಲರೂ ಹೇಳುವಂತೆ "ಕೆಟ್ಟು ಪಟ್ಟಣ ಸೇರು" . ಅಂತೆ ನಾವು ಬೆಂಗಳೂರಿಗೆ ಬಂದೆವು. ಹಗಲು ರಾತ್ರಿ ದುಡಿದೆವು.ದೇವರೂ ನನ್ನ ಕೈ ಬಿಡಲಿಲ್ಲ. ಕಷ್ಟಕ್ಕೆ ತಕ್ಕ ಪ್ರತಿಫಲ ಸಿಕ್ಕಿತು. ನಡುವೆ ಅವಳ ನೆನಪೂ ಇಲ್ಲ! ಈಗ ನನ್ನ ಬಳಿ ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ಇದೆ.ಯಾರೂ ನನ್ನ ಬೆಟ್ಟು ಮಾಡಿ ತೋರಿಸುವ ಹಾಗಿಲ್ಲ. ಎನೇನೋ ಯೋಚನೆ ಬರುತಿತ್ತು ಮನಸ್ಸಿನಲ್ಲಿ ಅವನಿಗೆ. ಆದರೆ ನಿನ್ನೆ ಲಕ್ಷ್ಮಿ,"ರೀ ನಿಮ್ಮ ಲವ್ವರ್ ಗಂಡ ಅದೇನೋ ಕುದುರೆ ರೇಸ್ನಲ್ಲಿ ಸೋತು ಎಲ್ಲಾ ಆಸ್ತಿನೂ ಕಳೆದುಕೊಂಡಿದಾರಂತೆ. ಈಗ ಅವಳು ತವರು ಮನೆಗೆ ಬಂದಿದಾಳಂತೆ ,ಅಪ್ಪನ ಬಳಿ ಹಣ ಕೇಳಲು ಎಂದಾಗ ,ಯಾಕೋ ಮನಸ್ಸಿಗೆ ವಿಕೃತ ಆನಂದವಾಗಿತ್ತು.

ಆದರೆ ತರಹ ಅನಂದಿಸೋದು ತಪ್ಪು ಎಂದು ನನಗೆ ಈಗ ಅನ್ನಿಸತೊಡಗಿದೆ. ಎಲ್ಲಾ ಹಣೆಬರಹ.ಯಾರು ಯಾರನ್ನು ಎಷ್ಟೇ ಪ್ರೀತಿಸಲಿ,ಹಣೆ ಬರಹವನ್ನು ಬದಲಿಸಲು ಸಾದ್ಯವಿಲ್ಲ. ಜನ ಮಾತಾಡಿಕೊಳ್ಳಬಹುದು. ಆದರೂ ತಾನು ಇವತ್ತು ತರಹ ಒಂದು ಉನ್ನತ ಜೀವನ ನಡೆಸಲು ಅವಳೂ ಒಂದು ರೀತಿಯಲ್ಲಿ ಕಾರಣ ಎನ್ನುವುದು ನೆನಪಾಯಿತು. ಇಲ್ಲದಿದ್ದರೆ ನನಗೆ ಎಲ್ಲಿಂದ ಇಂಥಹ ಒಂದು ಕಿಚ್ಚ್ಹುಬರುತಿತ್ತು!ಹಳ್ಳಿಯಲ್ಲಿ ಹಲ್ಲು ಕಿರಿದುಕೊಂಡು ಬದುಕನ್ನು ನಡೆಸುತಿದ್ದೆ! ಹಾ! ಇವತ್ತು valentines day. ಲಕ್ಷ್ಮಿ ನನಗಾಗಿ ಸಿಂಗರಿಸಿಕೊಂಡು ಕಾಯುತ್ತಿರುತ್ತಾಳೆ. ಅವಳು ಒಲಿದು ಬಂದವಳು. ದಾರಿಯಲ್ಲಿ ಗುಲಾಬಿ ಹೂವನ್ನು ತೆಗೆದುಕೊಂಡು ಹೋಗಬೇಕು ಎಂದು ನೆನಪಿಸಿಕೊಳ್ಳುತ್ತಾ ಲಿಫ್ಟನ್ನು ಇಳಿಯತೊಡಗಿದ.