ಬುಧವಾರ, ಫೆಬ್ರವರಿ 17, 2010

ಗೆಳೆಯನ ತಂದೆಗೆ.....

"ಒಂದಿನ ಬಾರೆ ನಮ್ಮನೆಗೆ ...ಅಪ್ಪ ಅಮ್ಮನ ನಿಂಗೆ ಪರಚಯ ಮಾಡಸ್ತಿ . ಈಗ ಅಪ್ಪ-ಅಮ್ಮ ಬೆಂಗಳೂರಿಗೆ ಬೈಂದ. ಊಟ ಮಾಡ್ಕಂಡು ಹೋಗ್ಲಕ್ಕು "....ಎಂದು ಪ್ರತೀ ಭಾರಿಯೂ ನನ್ನ ನೆಚ್ಚಿನ ಗೆಳಯ ಹೇಳಿದಾಗಲೆಲ್ಲ ಸರಿ ಬಿಡು "ಇವತ್ ಬತ್ತ್ನಿಲ್ಲೇ..ಎಂದಾದರು ಒಂದು ದಿನ ಬತ್ತಿ "...ಎಂದು ಹೇಳಿಕೊಂಡು ನುನುಚಿಕೊಳ್ಳುತ್ತಿದ್ದೆ. ಗೆಳಯನೂ ಭಾರಿ ಒತ್ತಾಯ ಏನು ಮಾಡಿರಲಿಲ್ಲ. ಸುಮ್ಮನಾದೆ. ಸುಮಾರು ಸಾರಿ ಈ ತರಹ ಆಗಿದೆ.

ಭಾರಿ ಅಪರೂಪಕ್ಕೆ ಗೆಳೆಯ ಕರೆ ಮಾಡುತಿದ್ದ. ತಿಂಗಳಿಗೊಂದು ಸಾರಿ ಇರಬಹುದೇನೋ. ಈ ಸಾರಿ ಸುಮಾರು 6-7 ತಿಂಗಳಿರಬಹುದೇನೋ... ಗೆಳೆಯ ಕರೆ ಮಾಡಿರಲಿಲ್ಲ. ಒಂದು msg ಕೂಡ ಬಂದಿರಲಿಲ್ಲ. ಸರಿ ನಾನೇ ಮಾಡಿದರಾಯಿತು ಅಂತ ಫೋನಾಯಿಸಿದೆ. ನೋಡಿದರೆ ಫೋನ್ not reachable ಅಂದಿತು. ಎಲ್ಲೋ ಹೋಗಿರಬೇಕು ಅಂದುಕೊಂಡು ಸುಮ್ಮನಾದೆ.
ಈಗ ಒಂದು ವಾರದ
ಹಿಂದೆ ತಾತನ ಮನೆಗೆ ಫೋನ್ ಮಾಡಿದ್ದಾಗ , ಅಜ್ಜಿ ಹೇಳಿದರು-" ನಿನ್ನ ಗೆಳೆಯನ ತಂದೆ heart attack ಆಗಿ ಮೊನ್ನೆ ತೀರಿಕೊಂಡರು, ಅಮ್ಮ ಮಗ ಇಲ್ಲೇ ಊರಲ್ಲಿ ಇದ್ದಾರೆ " ಎಂದು. ನನ್ನ ಎದೆ ದಸಕ್ ಎಂದಿತು. ಬೇಡ ಬೇಡ ಎಂದರು ಕಣ್ಣಲ್ಲಿ ನೀರು ಒತ್ತರಿಸಿಕೊಂಡು ಬರುತಿತ್ತು. ಮಾತಾಡಕ್ಕೂ ಆಗಲಿಲ್ಲ. ಫೋನಿಟ್ಟು ಬಿಟ್ಟೆ. ಅವರಿಗಿನ್ನೂಸಾಯುವ ವಯಸ್ಸು ಆಗಿರಲಿಲ್ಲ. ಸುಮಾರು 53-54 ರರ ಆಸು ಪಾಸಿರಬೇಕು ಅಷ್ಟೇ.

ಆಗಲೇ ಅನಿಸಿದ್ದು ನಾ ಮಾಡಿದ್ದು ತಪ್ಪೆಂದು. ನನ್ನಲ್ಲಿ ಒಂದು ತರಹದ " guilt "ತಕ್ಷಣ ಮನೆ ಮಾಡಿಬಿಟ್ಟಿತ್ತು.ಗೆಳೆಯ ಅಷ್ಟು ಕರೆದಾಗ ನಾನು ಹೋಗಲಿಲ್ಲ. ಈಗ ಹೋಗುತ್ತೇನೆ ಅಂದರೂ ಅವರಿಲ್ಲ. ಈ ವಿಧಿ ಅದೆಷ್ಟು
ಕಠೋರ ಅನಿಸಿಬಿಡುತ್ತದೆ ಒಂದೊಂದು ಸಾರಿ.. ಅಷ್ಟು ಬೇಗನೆ ಕರೆಸಿಕೊಳ್ಳುವಂಥ ಅಂಥ ಅವಶ್ಯಕತೆ ಏನಿತ್ತು ಅಂತ ನನಗೂ ತಿಳಿಯಲಿಲ್ಲ. ಈ ವಿಧಿಗು ಬಹಳ ' urgentu ' ಅನಿಸಿಬಿಟ್ಟಿತು.ನಿಜ ಜೀವನದಲ್ಲಿ ಅದೆಷ್ಟೋ ಸಾರಿ ಹೀಗೆ ಆಗಿರುತ್ತದೆ ಅಲ್ಲವ? ನಾವು ತುಂಬಾ ಇಷ್ಟ ಪಡುವವರಿಗೆ, ತುಂಬಾ ಪ್ರೀತಿ ಪಾತ್ರರಿಗೆ ಎಷ್ಟೋ ಸಾರಿ ಕೆಟ್ಟದಾಗಿ ನಡೆದುಕೊಂಡಿರುತ್ತೇವೆ. ಇದ್ದಾಗ ನಮಗೆ ಅವರ ಬೆಲೆ ತಿಳಿಯುವುದೇ ಇಲ್ಲ. ಅವರು ಕಣ್ಮರೆಯಾದಾಗ ಬೇಸರ ಮಾಡಿಕೊಳ್ಳುತ್ತೇವೆ.

ಅದಕ್ಕೆ ನಾನು ನಿರ್ಧರಿಸಿಬಿಟ್ಟಿದ್ದೇನೆ. ಗೆಳೆಯನ ತಂದೆಯ ವಿಷಯದಲ್ಲಿ ಆದ ರೀತಿ ಇನ್ನು ಯಾವುದೇ ಸಂದರ್ಭದಲ್ಲಿ, ಯಾವ ವಿಷಯದಲ್ಲೂ ಆಗಗೊಡಬಾರದು. ಯಾಕೆಂದರೆ ನಮಗೆ ಆ ಕ್ಷಣದಲ್ಲಿ ಗೊತ್ತಾಗುವುದಿಲ್ಲ. ಆದರೆ ಇಂಥ ಒಂದು ಘಟನೆ ಸಂಭವಿಸಿದರೆ ಅದನ್ನು ಜೀವನ ಪೂರ್ತಿ ಮರೆಯಲು ಸಾಧ್ಯವಾಗುವುದಿಲ್ಲ. ಗೆಳೆಯನ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ . ಹಾಗೆ ನಾನು ಮನೆಗೆ ಬರದೆ ತಪ್ಪು ಮಾಡಿದ್ದಕ್ಕೆ ನನ್ನ ಒಂದು ಕ್ಷಮಾಪಣೆ ಕೂಡ.


ಗುರುವಾರ, ಫೆಬ್ರವರಿ 11, 2010

ನನ್ನ ಮೆಚ್ಚಿನ ಪುಸ್ತಕ...


ರೋಬಿನ್ ಶರ್ಮಾ ಒಬ್ಬ ಒಳ್ಳೇ ಲೇಖಕ. ಅವರು ಎಷ್ಟೋ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಬರೆದಿದ್ದಾರೆ .ಓದುಗರನ್ನು ಬೆಳಕಿನತ್ತ ಕೊಂಡಯ್ಯುವ ಕೆಲಸದಲ್ಲಿ ಇವರು ಪರಿಣಿತರು.

ಹೀಗೆ ಇವರ ಒಂದು ಪುಸ್ತಕ " Who Will Cry ,When You Die?". ಇದನ್ನು ರೋಬಿನ್ ಶರ್ಮಾರವರು "ಬದುಕಿನ ಪಾಠಗಳು " ಅಂತ ಕರೆದಿದ್ದಾರೆ . ಇದು ನಿಜ ಕೂಡ. ಈ ಪುಸ್ತಕದಲ್ಲಿ ನೆಮ್ಮದಿಯ ಜೀವನಕ್ಕೆ ಬೇಕಾಗುವ ಅಥವಾ ನಾವು ಅಳವಡಿಸಿಕೊಳ್ಳಬಹುದಾದ 101 ಸೂತ್ರಗಳನ್ನು ಹೇಳುತ್ತಾರೆ. ಚಿಕ್ಕ ಚಿಕ್ಕ ವಿಷಯಗಳಿಗೆ ಬೇಸರ ಮಾಡಿಕೊಳ್ಳುವಂತವರು , ಜೀವನದಲ್ಲಿ ಬರೀ ನಕಾರಾತ್ಮಕವಾಗಿ ಯೋಚಿಸುವವರು, ಖಂಡಿತ ಈ ಪುಸ್ತಕವನ್ನು ಒಮ್ಮೆ ಓದಲೇ ಬೇಕು.

ನನಗೆ ಈ ಪುಸ್ತಕ ತುಂಬಾ ಇಷ್ಟವಾಯಿತು. ಎಷ್ಟೋ ಬ್ಲಾಗಿಗರು ಈ ಪುಸ್ತಕದ ಬಗ್ಗೆ ಬರೆದುಕೊಂಡಿದ್ದಾರೆ. ನನಗೂ ಬರೆಯಲೇ ಬೇಕು ಎನಿಸಿ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳುತ್ತಿದ್ದೇನೆ . ಈ ಪುಸ್ತಕದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಆದರೂ ಒಂದು ಪ್ರಯತ್ನ ಇದರೆಡೆಗೆ.
101 ಸೂತ್ರಗಳಲ್ಲಿ ಒಂದು ಹತ್ತನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

1. ನಿಮ್ಮದಿನವನ್ನು ಸರಿಯಾಗಿ ಆರಂಭಿಸಿ . ನೀವು ಎದ್ದಾಗ ನಿಮಗೆ ಜೀವನದಲ್ಲಿ ಇದುವರೆಗೂ ಸಿಕ್ಕ ಸಂತೋಷದ ಬಗ್ಗೆ ಯೋಚಿಸಬೇಕು . ಇಷ್ಟೆಲ್ಲಾ ನನಗೆ ದೊರಕಿದೆ ಅಂತ ಸಂತೋಷಿಸಬೇಕು .
2. ದೂರು ಹೇಳುವುದನ್ನ ಬಿಟ್ಟು ಬದುಕುವುದನ್ನು ಕಲಿಯಬೇಕು .
3. ಹಿಂದೆ ಆಗಿದ್ದರ ಬಗ್ಗೆ ಎಂದೂ ಯೋಚಿಸಬಾರದು . ಬದಲಿಗೆ ಮುಂದೆ ಬರಲಿರುವ ಅವಕಾಶಗಳ ಬಗ್ಗೆ ಯೋಚಿಸಬೇಕು .
4. ಇಷ್ಟವಿಲ್ಲದನ್ನಇಷ್ಟ ಇಲ್ಲಎಂದು ಹೇಳುವುದನ್ನ ಕಲಿಯಬೇಕು .
5. ಆದಷ್ಟು ನಗುನಗುತ್ತಿರಿ. .
6. ಜೀವನ ಬರೀ ಆಯ್ಕೆಗಳ ಸಂತೆ . ಸರಿಯಾದ ಆಯ್ಕೆ ಮಾಡಿಕೊಳ್ಳಿ .
7. ಮಾತನಾಡುವ ಎರಡರಷ್ಟು ಕೇಳಿಸಿಕೊಳ್ಳಿ .
8. ಶಾಂತಚಿತ್ತರಾಗಿರಿ . ಯಾರಾದರು ಸಿಟ್ಟಿಗೇಳಬಹುದು . ಆದರೆ ಶಾಂತವಾಗಿರುವುದು ಕಷ್ಟ .
9. ಪ್ರಶ್ನೆ ಮಾಡುವುದನ್ನು ಕಲಿಯಬೇಕು .
10. ಬದಲಾಯಿಸಲಾಗದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ .

ಹೀಗೆ ಇನ್ನೂ ಸುಮಾರಷ್ಟು ವಿಷಯಗಳನ್ನು ತಿಳಿಸಿಕೊಡುತ್ತಾರೆ ರೋಬಿನ್ ಶರ್ಮಾರವರು. ಅದನ್ನು ಓದಿ ಒಂದು ನಾಲಕ್ಕಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು , ಹಾಗು ಪುಸ್ತಕ ಓದಿದ್ದು ಎರಡೂ ಸಾರ್ಥಕ.