ಶನಿವಾರ, ಡಿಸೆಂಬರ್ 26, 2009

ಪ್ರೇಮ ಪತ್ರಗಳು ತಂದ ಅವಾಂತರ.....


ನಮ್ಮ ಆಫೀಸಿನಲ್ಲಿ ಹೊಸ team leader ಬಂದಿದ್ದಾರೆ. ಅವರು ಸಕತ್ ತಮಾಷೆ ಮಾಡುತ್ತಿರುತ್ತಾರೆ. ಅವರಿಗೆ lovers ಅಂದರೆ ಏನೋ ವಿಶೇಷ ಆಸಕ್ತಿ ತೋರಿಸುತ್ತಾರೆ .ಅದು ಯಾಕೆ ಅಂತ ನನಗೆ ಇನ್ನೂ ಕಂಡು ಹಿಡಿಯೋಕೆ ಆಗಲೇ ಇಲ್ಲ ...:(

ನಮ್ಮ teamನಲ್ಲಿ ಯಾರಿಗಾದರು boyfriend / girlfriend ಇದ್ದರೆ ಅವರ ಹೆಸರನ್ನು team ಗೆ ಹೇಳಬೇಕು. ಹಾಗೇ ಹೇಳಿದಮೇಲೆ ನಾವು ಅವರ ಹೆಸರನ್ನು ಕರೆಯೋ ಹಾಗಿಲ್ಲ. ಬದಲಿಗೆ ಅವರ boyfriend/ girlfriend ಹೆಸರಿನಿಂದ ಅವರನ್ನು ಕರೀಬೇಕು. ನಮ್ಮ teamನಲ್ಲಿ ಸುಮಾರು ಜನರ ಹೆಸರೇ ಮರೆತು ಹೋಗಿದೆ ನನಗೆ ಏಕೆಂದರೆ ಅವರನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ . ಉದಾ : ನಮ್ಮ teamನಲ್ಲಿ ಒಬ್ಬ ನೀಲಂ ಅಂತ ಇದಾನೆ . ಅವನ ಹುಡುಗಿಯ ಹೆಸರು ಲೀಲಾ. ಅದಕ್ಕೆ ನಾವೆಲ್ಲಾ ಅವನನ್ನು 'ಲೀಲಾ' ಎಂದೇ ಕರೆಯುತ್ತೇವೆ.

ಹೀಗಿದ್ದಾಗ ಮೊನ್ನೆ ನನ್ನ ಮೇಲೆ ಅವರ ವಕ್ರ(!) ದೃಷ್ಟಿ ಬಿತ್ತು. ದಿವ್ಯನಿಗೆ ಮಾತ್ರ ಇನ್ನೂ ದಿವ್ಯಾ ಅಂತಾನೆ ಕರಿತಾ ಇದೀವಿ. ಅವಳ boyfriend ಹೆಸರನ್ನು ಕೇಳಬೇಕು ಎಂದು ಹಿಂದೆ ಬಿದ್ದು ಬಿಟ್ಟರು. ಇದ್ಯಾವುದರ ನಿರೀಕ್ಷೆ ಇಲ್ಲದ ನನಗೆ ಒನ್ ತರಹ shock ಆಗೋಯ್ತು . ಇದೇನಪ್ಪ? ನಾನು ನನ್ನ ಪಾಡಿಗೆ ಆರಾಮಾಗಿ ಆಫೀಸಿನಲ್ಲಿ ಕಾಫಿ, ಟೀ, ಕುಡ್ಕೊಂಡು... ಜೊತೆಗೆ ಕೆಲಸದ ಮಧ್ಯೆ ಆಗೀಗ ಚಾಟಿಂಗ್, ಬ್ಲಾಗಿಂಗ್ ಮಾಡ್ತಿರಬೇಕಾದ್ರೆ ಇದೆಲ್ಲಿಂದ ಬಂತಪ್ಪ ತಲೆನೋವು ಅಂತ ಮನಸಲ್ಲೇ ಎಲ್ಲರನ್ನು ಬೈದು ಕೊಳ್ಳುತ್ತಿದ್ದೆ . ನನಗೆ ಯಾರೂ boyfriend ಇಲ್ಲ. ತುಂಬಾ ನಂಬಿಕಸ್ತ , ಒಳ್ಳೇ ಫ್ರೆಂಡ್ಸ್ ಇದಾರೆ ಅಂದರೆ ನಂಬಲು ತಯಾರೇ ಇಲ್ಲ ಆಸಾಮಿಗಳು. ನಾನು ಯಾರ ಹೆಸರು ಹೇಳುವುದಪ್ಪ, ಅಯ್ಯೋ ಅಂತ ಕೂತ್ಕೊಂಡಾಗ, ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ - " ಅಯ್ಯೋ ದಿವ್ಯಂಗೆ boyfriend ಇಲ್ಲ ಅಂದ್ರೆ ನಂಬೋಕೆ ಆಗೋಲ್ಲ. ಬ್ಲಾಗ್ನಲ್ಲಿ ಬರೀ ಪ್ರೇಮ ಪತ್ರಗಳನ್ನೇ ತುಂಬಿಸಿದ್ದಾಳೆ ಅನ್ನೋದೇ...:-(

ನಾನು ಹೇಳಿಬಿಟ್ಟೆ ನೀವು ಆ ತರಹ assume ಮಾಡಿಕೊಂಡರೆ ನಾನೇನು ಮಾಡೋಕಾಗಲ್ಲ ಎಂದೆ . ನನ್ನ ಪರಿಸ್ಥಿತಿ ಯಾರಿಗೂ ಬೇಡ. ಇದೊಳ್ಳೆ ಗೋಳಾಯ್ತಲ್ಲ ..... ಅದೆಲ್ಲ ಬರೀ ಕಲ್ಪನೆ ...ನನಗೆ ಯಾರೂ boyfriend ಇಲ್ಲಾಆಆಆಆ.... plz ನನ್ನ ಬಿಟ್ಟು ಬಿಡಿ. boyfriend ಸಿಕ್ಕಿದ ಕೂಡಲೇ ನಿಮಗೆ ತಿಳಿಸುತ್ತೀನಿ . ಆಗ ಅವನ ಹೆಸರಿನಿಂದ ಕರೀರಿ "ಅಂದೆ.....ನೀನೂ ಈಗ ಹೇಳದೆ ಇದ್ರೆ ನಮಗೆ ಟ್ರೀಟ್ ಕೊಡಿಸಬೇಕು ಅಂದ್ರು... ಅಬ್ಬ!!! ಇವತ್ತು ಬೆಳಗ್ಗೆ ಬೆಳಗ್ಗೆ ಯಾರ್ ಮುಖ ನೋಡಿದ್ನಪ್ಪ ??? ಅಯ್ಯೋ ನನ್ನ ಪರ್ಸ್ಗೆ ಕತ್ತರಿ ಬೀಳುತ್ತಲ್ಲಪ್ಪ ಅನ್ಕೊತಾ ಇದ್ದೆ... ಇದ್ದರೆ ಹೇಳಬಹುದು...ಇಲ್ದೆ ಇದ್ರೆ ಹೇಗೆ ಹೇಳಲಿ? ನಾನು ಸುಮ್ನೆ ಕೂತಿದ್ದೆ.

ಆಮೇಲೆ ಅವರಿಗೆ ನನ್ನ ನೋಡಿ 'ಪಾಪ' ಅನಿಸ್ತು ಅನ್ಸುತ್ತೆ. ಸರಿ ನಿನ್ನ ಹುಡುಗ ಹೇಗಿರಬೇಕು ಅನ್ನೋದಾದರೂ ಹೇಳು ಅಂದ್ರು. ಒಂದಷ್ಟು ಅದು - ಇದು ಹೇಳಿ ಬದುಕಿದೆಯಾ ಬಡಜೀವವೇ ಎಂದು ಹೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ!!! ಆ ಹುಡುಗ ಯಾವಾಗ ಸಿಗುತ್ತಾನೋ ... ನನಗೆ ಯಾವಾಗ ಅವರು ಆ ಹೆಸರಿನಿಂದ ಕರೆಯುತ್ತಾರೋ ???....ಎಂದು ಇಲ್ಲಿವರೆಗೂ ಇರದ ವಿಚಾರ ಮಾತ್ರ ಯಾಕೋ ಮನಸ್ಸಿನಲ್ಲಿ ಹಾದು ಹೋಯ್ತು...

ಭಾನುವಾರ, ಡಿಸೆಂಬರ್ 20, 2009

ಚಿಂತ್ಯಾಕೆ ಮಾಡತಿದ್ದಿ...


ನೀವು ಕೆಲವರನ್ನು ಗಮನಿಸಿದ್ದೀರಾ? ಅವರನ್ನು ನೋಡಿದರೆ ಯಾವಾಗಲು ಏನೋ ಯೋಚಿಸುತ್ತಿರುವಂತೆ ಕಾಣುತ್ತದೆ. ಮುಖ ನೋಡಿ ನಕ್ಕರೂ ತಿರುಗಿ ನಗುವಷ್ಟು ಸಮಾಧಾನ ಇರುವುದಿಲ್ಲ... ಜಗತ್ತಿನ ಎಲ್ಲಾ ಸಮಸ್ಯೆಯು ತಮಗೇ ಬಂದಿರುವ ಹಾಗೇ ಆಡುತ್ತಿರುತ್ತಾರೆ...ಎಲ್ಲರ ಮೇಲೆ ಸಿಡುಕುವುದು, ತಾವೇ

ಜೀವನದಲ್ಲಿ ಚಿಂತೆ ಎಂಬುದು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಒಬ್ಬರಿಗೆ ಒಂದೊಂದು ಚಿಂತೆ. ಅವರವರಿಗೆ ಇರುವ ತೊಂದರೆಯ ಬಗ್ಗೆ, ಅನಾನುಕೂಲಗಳ ಬಗ್ಗೆ ಪ್ರತಿಯೊಬ್ಬನಿಗೂ ಚಿಂತೆ ಇರುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ .....ಅವರ ಮದುವೆ ಮಾಡಬೇಕು ಎನ್ನುವುದು ಪಾಲಕರ ಚಿಂತೆಯಾದರೆ, ಮಕ್ಕಳಿಗೆ ತಮ್ಮ ಮದುವೆಯಾಗೋ ಹುಡುಗ\ಹುಡುಗಿ ಹೇಗಿರಬಹುದು ಎನ್ನುವ ಚಿಂತೆ... ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಮುಂದಿನ ಫೀಸ್ ಹೇಗೆ ಕೊಡುವುದು ಎನ್ನುವ ಚಿಂತೆ... ಮನೆ ಬಿಟ್ಟು ಹೋದ ಗಂಡ ಇನ್ನೂ ಹಿಂದಿರುಗಲಿಲ್ಲ ಎನ್ನುವುದು ಅವನಿಗಾಗಿ ಕಾದು ಕುಳಿತ ಹೆಂಡತಿಯ ಚಿಂತೆ.... ಹೀಗೆ ಒಂದಿಲ್ಲೊಂದು ಚಿಂತೆಯಲ್ಲಿಯೇ ನಮ್ಮ ಜೀವನವನ್ನು ಕಳೆದುಬಿಡುತ್ತೆವಲ್ಲವೇ? ಎಷ್ಟೋ ಇಷ್ಟ ಪಟ್ಟು ಪ್ರೀತಿಸಿದ ವ್ಯಕ್ತಿ ಒಂದು ದಿನ ಬಿಟ್ಟು ಹೋಗಿರುತ್ತಾರೆ.... ತುಂಬಾ ನಂಬಿಕೆ ಇತ್ತ ಗೆಳತಿ ಮೋಸ ಮಾಡಿರುತ್ತಾಳೆ... ಸಾಲ ಮಾಡಿ ಶುರು ಮಾಡಿದ ಕಸುಬು ಕೈಗೆ ಹತ್ತಿರುವುದಿಲ್ಲ ........ ಎಷ್ಟೇ ಕೆಲಸ ಮಾಡಿದರೂ ಬಡ್ತಿ ಸಿಕ್ಕಿರುವುದಿಲ್ಲ..... ಒಂದೇ ,ಎರಡೇ ಚಿಂತೆ ಮಾಡುತ್ತೀನಿ ಎಂದರೆ ಸಿಗುತ್ತದೆ ಸಾವಿರಾರು ವಿಷಯಗಳು.. ಬೇಸರಿಸಿಕೊಳ್ಳುವುದು,ಅವರಿಗೆ ಅವರ ಮೇಲೆ ಕೋಪವಾ? ಬೇಸರವ?ಗೊತ್ತಿಲ್ಲ...


" ಹೊಟ್ಟೆ ತುಂಬಿದವನಿಗೆ ಹೊಟ್ಟೆ ಹೊರುವ ಚಿಂತೆ,
ಹೊಟ್ಟೆ ಹಸಿದವನಿಗೆ ಹೊಟ್ಟೆ ಹೊರೆವ ಚಿಂತೆ"

ಆದರೆ ಒಂದಂತೂ ನಿಜ ಹೀಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ....ನಮ್ಮನ್ನು ನಾವು ಇನ್ನಷ್ಟು ಶಿಕ್ಷಿಸಿಕೊಳ್ಳುತ್ತೇವೆ ...

ಒಂದು ಗಾದೆ ಮಾತಿದೆಯಲ್ಲ "ಚಿತೆ ಹೆಣವನ್ನು ಸುಟ್ಟರೆ, ಚಿಂತೆ ಬದುಕಿರುವವನನ್ನು ಸುಡುತ್ತದೆ " ಎಂದು.


ಅದಕ್ಕೆ ನಾನು ಹೇಳುವುದೆಂದರೆ , ಚಿಂತೆ ಮಾಡಿ ಯಾವುದೇ ಉಪಯೋಗವಿಲ್ಲ. ಅದರ ಬದಲು ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಇರುವುದು ಜಾಣತನ.. ಜೀವನದಲ್ಲಿ ಎಷ್ಟೋ ಸಿಹಿ-ಕಹಿ ಘಟನೆಗಳಾಗಿರುತ್ತವೆ. ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ .... ಏನು ನಡಿಬೇಕೋ ಅದು ಆಗೇ ಆಗುತ್ತದೆ. ನಾವು ಚಿಂತೆ ಮಾಡಿದರೂ ಅಷ್ಟೇ ಬಿಟ್ಟರು.. ಇರುವಷ್ಟು ದಿನ ನಗುನಗುತ ಜೀವನ ಸಾಗಿಸುವುದನ್ನು ಕಲಿಯೋಣ.. ನನ್ನ ಕೆಲವು ಸ್ನೇಹಿತರಿಗೆ ಹೇಳಿದ್ದೀನಿ ಯೋಚನೆ ಮಾಡಬೇಡಿ ಎಲ್ಲಾ ಸರಿ ಹೋಗುತ್ತದೆ ಎಂದು..ಒಂದು ವೇಳೆ ಹಾಗಾದರೆ??ಹೀಗಾದರೆ?... ಎಂದು ಅನಾವಶ್ಯಕವಾಗಿ ಯೋಚಿಸುತ್ತಾರೆ. ಕೊನೆಗೆ ನೋಡಿದರೆ ಎಲ್ಲವು ಒಳ್ಳೇದೆ ಆಗಿರುತ್ತದೆ. ಯೋಚಿಸಿ ಮನಸು ಹಾಳುಮಾಡಿಕೊಂಡಿದ್ದೆ ಬಂತು !!!!.....

"ಬಂದದ್ದು ಬರಲಿ, ಗೋವಿಂದನ ದಯೆ ಇರಲಿ" ಎಂಬ ಮಾತಿನಂತೆ ಬದುಕಿನಲ್ಲಿ ಮುಂದೆ ಸಾಗೋಣ. ಅನಾವಶ್ಯಕವಾಗಿ ಯೋಚಿಸಿ ಮನಸ್ಸನ್ನು ಹಾಳುಮಾಡಿ ಕೊಳ್ಳುವುದು ಬೇಡ.ಜೀವನವನ್ನು ಸಂತೋಷದಿಂದ ಸಾಗಿಸೋಣ. "Hope for the best, prepare for the worst". ಮನುಷ್ಯನ ಇಂಥ ಚಿಂತೆ ಮಾಡುವಂಥ ಬುದ್ದಿಯನ್ನು ಕಂಡೇ ಹಿರಿಯರು ಬಹುಷಃ ಹಾಡಿದ್ದೇನೋ... "ಚಿಂತ್ಯಾಕೆ ಮಾಡತಿದ್ದಿ ಚಿನ್ಮಯನಿದ್ದಾನೆ
"ಎಂದು....

ಶುಕ್ರವಾರ, ಡಿಸೆಂಬರ್ 11, 2009

ಭರವಸೆ ಇದೆ ನನಗಿಂದು.....
ಭರವಸೆ ಇದೆ ನನಗಿಂದು ,ಸೂರ್ಯಸ್ಥಮಾನವಾದರೆ ,
ನಾಳೆ ಸೂರ್ಯೋದಯ ಆಗುವುದೆಂದು .
ಭರವಸೆ ಇದೆ ನನಗಿಂದು , ಇವತ್ತು ನಾ ದುಃಖವನ್ನು ಉಂಡರೆ,
ನನ್ನ ಪಾಲಿಗೆ ನಾಳೆ ನಗುವಿದೆ ಎಂದು .

ಭರವಸೆ ಇದೆ ನನಗಿಂದು ,ಕಂಡ ಕನಸುಗಳೆಲ್ಲ
ನಾಳೆ ನನಸಾಗುವುದೆಂದು .
ಭರವಸೆ ಇದೆ ನನಗಿಂದು ,ನಾನು ಬಯಸಿದ್ದೆಲ್ಲ ,
ನನಗೆ ಸಿಗುವುದೆಂದು .

ಭರವಸೆ ಇದೆ ನನಗಿಂದು ,ಕಳೆದುಕೊಂಡಿದ್ದಕ್ಕಿಂತ
ಉತ್ತಮವಾದುದನ್ನು ನಾಳೆ ಪಡೆದುಕೊಳ್ಳುತ್ತೆನೆಂದು .
ಭರವಸೆ ಇದೆ ನನಗಿಂದು ,ಘಾಸಿಗೊಂಡ ಹೃದಯ ,
ತಾನೇ ಸುಧಾರಿಸಿಕೊಳ್ಳುತ್ತದೆಂದು .

ಭರವಸೆ ಇದೆ ನನಗಿಂದು , ಜೀವನದ ಸಮುದ್ರವನ್ನು
ಈಸುತ್ತೆನೆಂದು ,ಈಸಿ ಜಯಿಸುತ್ತೇನೆಂದು .
ಭರವಸೆ ಇದೆ ನನಗಿಂದು , ನನ್ನ ಮೇಲೆ ,
ನನ್ನ ಮನಸ್ಸಿನ ಮೇಲೆ , ನನ್ನ ನಾಳೆಗಳ ಮೇಲೆ .ಶುಕ್ರವಾರ, ಡಿಸೆಂಬರ್ 04, 2009

ಅವಳು ಬಂದಾಗಿನಿಂದ ನನ್ನ.......

ನಾನೂ ನೋಡ್ತಾನೆ ಇದೀನಿ .....
ಅವಳು ಬಂದಾಗಿನಿಂದ ನನ್ನ ಯಜಮಾನ ನನ್ನೆಡೆಗೆ ನೋಡುತ್ತಲೂ ಇಲ್ಲ .ಬರೀ ಅವಳನ್ನು ಮಾತ್ರ ಜೊತೆಯಲ್ಲಿಟ್ಟುಕೊಂಡು ತಿರುಗುತ್ತಾನೆ .ಅವಳೊಡನೆ ಅಷ್ಟೆ ಮಾತಾಡುತ್ತಾನೆ . ಮೊದಲೆಲ್ಲ ಅವನು ಹೀಗಿರಲಿಲ್ಲ. ಯಾರೊಡನೆ ಮಾತಾಡಬೇಕಿದ್ದರೂ ನಾನೇ ಬೇಕು ಎನ್ನುತ್ತಿದ್ದ . ಆದರೆ ಈಗ ನನಗೆ ಹೊಟ್ಟೆಗೂ ಸರಿಯಾಗಿ ಹಾಕುತ್ತಿಲ್ಲ . ಸುಮಾರು ಮೂರು ವರ್ಷಗಳ ಕಾಲ ನಾನೂ ಅವನ ಜೊತೆಗೇ ಇದ್ದೆ ..ಅವನು ನನ್ನನ್ನು ತನಗೆ ಬೇಕಾದ ಹಾಗೆಲ್ಲ ಬಳಸಿಕೊಂಡ . ಈಗ ನಾನು ಅವನಿಗೆ ಬೇಡ . ಕಾರಣ ಇನ್ನೊಂದು ಸುಂದರಿ ಅವನ ಮೋಡಿ ಮಾಡಿರುವಳಲ್ಲ !!! ಅವನು ಅವಳ ಜೊತೆಗೆ ತಿರುಗಾಡುವುದನ್ನು ನೋಡಿದರೆ ಯಾಕೋ ಏನೋ ಒನ್ ತರಹದ ಸಂಕಟವಾಗುತ್ತಿದೆ .
ಯಾರಿಗೆ ಹೇಳಲಿ ನಾನು ಈ ದುಃಖವನ್ನು ?ಹೇಳಿಕೊಳ್ಳಲು ಅಪ್ಪ- ಅಮ್ಮ ಯಾರೂ ಇಲ್ಲ ನನಗೆ . ಇವನೊಬ್ಬನೇ ನನಗೆ ದಿಕ್ಕಾಗಿದ್ದ . ಆದರೆ ಈಗ ಅವನೂ ನನ್ನ ಆಲೈಸುತ್ತಿಲ್ಲ .ನನ್ನೆಡೆಗೆ ನೋಡುತ್ತಲೂ ಇಲ್ಲ .ಬಹುಷಃ ಅವನಿಗೆ ನನ್ನಲ್ಲಿ ಆಸಕ್ತಿ ಹೊರಟು ಹೋಗಿರಬೇಕು . ಇವಳು ಬರುವ ಮುಂಚೆ ಇವನು ಯಾವತ್ತೂ ನನ್ನ ಒಂಟಿ ಮಾಡಿರಲಿಲ್ಲ . ನನ್ನ ಅಸ್ತಿತ್ವವೇ ಹೊರಟು ಹೋಗಿದೆ ಇವಳು ಬಂದಾಗಿನಿಂದ . ನಾನು ಒಪ್ಪಿಕೊಳ್ಳುತ್ತೇನೆ ,ಅವಳಲ್ಲಿರುವ ರಂಗುರಂಗಿನ ಬಿನ್ನಾಣವಾಗಲಿ ,ಹೊಳಪಾಗಲಿ , ಅಥವಾ ನನ್ನ ಯಜಮಾನನನ್ನು ಸಂತೋಷಿಸುವ ಯಾವುದೇ ಗುಣವಾಗಲಿ ನನ್ನಲ್ಲಿಲ್ಲ ..ಅವಳು ನನಗಿಂತ ಸಣ್ಣಗಿದ್ದಾಳೆ ..ನಾನು ಸ್ವಲ್ಪ ದಪ್ಪ ……ಆದರೂ ನಾನು ಅವನವಳಾಗಿದ್ದೆ ಅಲ್ಲವ ?ಅದಕ್ಕಾದರೂ ನನ್ನ ಮಾತಾಡಿಸಬಾರದೆ ?ನನ್ನನ್ನು ಅವಳ ಹಾಗೆ ಇರಿಸಿಕೊಳ್ಳಬಾರದೆ ??
ಎಷ್ಟೊಂದು ಸಾರಿ ಹೊಟ್ಟೆ ಹಸಿದು ಸಾಯುತ್ತಿರುವಾಗ ಬಂದು ಹೊಟ್ಟೆಗೆ ಹಾಕುತ್ತಾನೆ ಪುಣ್ಯಾತ್ಮ . ಎಷ್ಟು ನೋವಾಗುತ್ತೆ ಅವನಿಗೇನು ಗೊತ್ತು ? ಅವನಾಗಲೇ ಅವಳ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿರುವನು . ಅವಳನ್ನು ಬೆಚ್ಚನೆಯ ಗೂಡಿನಲ್ಲಿ ಕೂಡಿಟ್ಟಿರುವನು . ಅವಳನ್ನು ಕಾಪಾಡಲು ಒಂದೊಳ್ಳೆ ರೇಶಿಮೆಯ ಅಂಗಿಯನ್ನು ತಂದಿರುವನು .ಆದರೆ ನನಗೆ ಏನನ್ನು ಕೊಡಿಸಲಿಲ್ಲ . ನಾನು ಅವನಿಗೆ ತುಂಬ ಸಹಾಯ ಮಾಡಿದ್ದೀನಿ . ಅವನ ಅಪ್ಪ ಅಮ್ಮನೊಡನೆ , ಸ್ನೇಹಿತರೊಡನೆ ಒಂದು ನಂಟನ್ನು ಕಾದಿರಿಕೊಳ್ಳಲು ನಾನು ಸಹಾಯವಾಗಿದ್ದೀನಿ . ಸಿಟ್ಟಿನಿಂದ ಒಂದೊಂದು ಸಾರಿ ನನ್ನನ್ನು ತಳ್ಳಿದ್ದಾನೆ ಆದರೂ ಸಹಿಸಿಕೊಂಡಿದ್ದೆ . ಆದರೆ ಈಗ ಬಂದಿರುವ ಹೊಸಬಳನ್ನು ತಪ್ಪಿಯೂ ಕೈ ಜಾರಲು ಬಿಡುವುದಿಲ್ಲ .ಕಾರಣ ಅವಳು ಬಲು ನಾಜೂಕಂತೆ .
ನನ್ನ ಕಣ್ಣೀರು ನನ್ನೆಜಮಾನನಿಗೆ ಕಾಣುತ್ತಿಲ್ಲ . ಅವಳ ನಗುವಷ್ಟೇ ಕಾಣುತ್ತಿದೆ .ನಾನು ಸಹಾಯ ಮಾಡಿದ್ದೆಲ್ಲ , ನನ್ನ ನೆನಪುಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಯಿತು . ತುಂಬಾ ನೋವಾಗುತ್ತಿದೆ . ಪ್ರೀತಿ ಇಂದ ಮನೆಗೆ ಕರೆತಂದ ನನ್ನ ಯಜಮಾನನಿಗೆ ನಾನು ಬೇಡ ಎಂದರೆ ನಾನಿನ್ನು ಯಾರಿಗೆ ಬೇಕು ಹೇಳಿ ? ಯಜಮಾನ ಇನ್ನು ನನ್ನ ಇಟ್ಟುಕೊಳ್ಳುವುದಿಲ್ಲ .ತಪ್ಪು ನನ್ನದೇನು ಇಲ್ಲ .ತಪ್ಪು ಯಾರದ್ದು ಎಂದು ಹೇಳಲಾಗುತ್ತಿಲ್ಲ . ನನ್ನೆದುರೇ ನನ್ನ ಜಾಗವನ್ನು ಆವರಿಸಿದ ಅವಳು ಅದೃಷ್ಟವಂತೆಯೋ , ಅಥವಾ ನನ್ನ ಸ್ಥಾನವನ್ನು ಅವಳಿಗೆ ಬಿಟ್ಟುಕೊಟ್ಟ ನಾನು ಬುದ್ದಿಗೇಡಿಯೋ ನಿರ್ಧರಿಸಲು ಆಗುತ್ತಿಲ್ಲ . ಕಸದ ತೊಟ್ಟಿಯ ಪಾಲಾಗುವ ಭಯದಿಂದ ಬದುಕುತ್ತಿರುವ , ಯಜಮಾನನ ಹಳೆಯ ಮೊಬೈಲ್ .

(ಮನೆಯಜಮಾನ ಹೊಸ ಮೊಬೈಲ್ ಕೊಂಡು ತಂದಿರುವಾಗ ಹಳೇ ಮೊಬೈಲ್ ಏನು ಯೋಚಿಸಿತು ಎನ್ನುವ ಬಗ್ಗೆ ಒಂದು ಕಲ್ಪನೆ ಹೊಟ್ಟೆ ಹಸಿವು = ಚಾರ್ಜ್ ಕಡಿಮೆ ಇರುವುದು..
ರೇಶಿಮೆ ಅಂಗಿ=ಮೊಬೈಲ್ ಕವರ್
ಅವಳು = ಹೊಸ ಸ್ಲಿಮ್ ಮೊಬೈಲ್ )