ಮಂಗಳವಾರ, ಜೂನ್ 07, 2016

ಬರವಣಿಗೆಗೆ ಏಕಾಂತ ಬೇಕೇ?

ಖ್ಯಾತ ಚಿತ್ರಕಾರ ಪಿಕಾಸೊ ಹೇಳುತ್ತಾನೆ- 'Without great solitude no serious work is possible' ಅಂತ. ಒಂದು ಮಹತ್ವದ ಏಕಾಂತವಿಲ್ಲದೇ ಯಾವುದೇ ಮಹಾನ್ ಕೆಲಸ ಸಾಧ್ಯವೇ ಇಲ್ಲ ಎಂಬುದು ಅವನ ನಂಬುಗೆಯಾಗಿತ್ತು. ಯಾವುದೇ ಸೃಜನಾತ್ಮಕ ಕೆಲಸವಾದರೂ ಸರಿಯೆ, ಸ್ವಲ್ಪ ಮಟ್ಟಿನ ಏಕಾಂತವನ್ನ ಬೇಡುತ್ತದೆ. ಒಬ್ಬ ಬರಹಗಾರನಿಗೆ ಸಹಜವಾಗಿಯೇ ತನ್ನ ಬರವಣಿಗೆಯ ಬಗ್ಗೆ ಯೋಚಿಸುವ, ಯೋಜಿಸುವ ಹಾಗೂ ವಿಷಯದ ಕುರಿತು ಪೂರ್ವಾಧ್ಯಯನ ಮಾಡಿ ಅದರ ಬಗ್ಗೆ ಬರೆಯುವ ಅನಿವಾರ್ಯತೆ ಇರುತ್ತದೆ. ಬರವಣಿಗೆಗೆ ಬೇಕಾದ ಶಾಂತ ಮನಸ್ಸು, ವಾತಾವರಣ ಹಾಗೂ ಏಕಾಗ್ರತೆಯನ್ನ ಏಕಾಂತ ಒದಗಿಸುತ್ತದೆ. 

ಸೃಜನಶೀಲತೆಗೆ ಏಕಾಂತದ ಅಗತ್ಯ ಖಂಡಿತ ಇದೆ. ಬಹಳಷ್ಟು ಬರಹಗಾರು ತಮ್ಮ ಬರವಣಿಗೆಗೆ ಏಕಾಂತವನ್ನೇ ಬಯಸುತ್ತಾರೆ. ಕೆಲ ಬರಹಗಾರು ಮೊದಲ ಕರಡನ್ನು ಗಡಿಬಿಡಿಯಲ್ಲಿ ಬರೆದಿದ್ದರೂ ನಂತರ ಏಕಾಂತದಲ್ಲಿ ಕೂತು ಅದನ್ನು ತಿದ್ದುತ್ತಾರೆ. ಆಂಗ್ಲ ಬರಹಗಾರ ಲಿಯೊನೆಲ್ ಫ಼ಿಶರ್ ಹೇಳುವಂತೆ, ಏಕಾಂತವು ವ್ಯಕ್ತಿಯ ಮನಸ್ಸನ್ನು ತಣಿಸಿ, ಸೃಜನಾತ್ಮಕ ಸ್ಫೂರ್ತಿಗೆ ಅಣಿಮಾಡಿಕೊಡುತ್ತದೆ. ಹೊರಜಗತ್ತಿನಲ್ಲಿರುವ ಗಲಾಟೆ, ಗೊಂದಲಗಳು ಮನುಷ್ಯನ ಸೃಜನಾತ್ಮಕ ಕ್ರಿಯೆಯನ್ನು ಕೊಂದುಬಿಡುತ್ತವೆ. ಅದೇ ಏಕಾಂತ ಈ ಎಲ್ಲವನ್ನು ದಕ್ಕಿಸಿಕೊಡುತ್ತದೆ.

ಏಕಾಂತದ ವಾತಾವರಣದಿಂದ ಹಲವು ಉಪಯೋಗಗಳಿವೆ. ಮೊದಲನೆಯದಾಗಿ, ಏಕಾಂತವು ಲೇಖಕನಿಗೆ ಸ್ಪಷ್ಟವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ. ತನಗೆ ಸಿಕ್ಕ ಏಕಾಗ್ರತೆಯಿಂದಾಗಿ, ಲೇಖಕ ಬರೆಯಲು ಹೆಚ್ಚು ಸಮರ್ಥನಾಗುತ್ತಾನೆ. ಸೃಜನಶೀಲತೆ ಜಾಗೃತವಾಗುವುದೂ ಏಕಾಂತದಲ್ಲೇ.  ಅಲ್ಲದೇ, ಏಕಾಂತದಲ್ಲಿದ್ದಾಗ ಲೇಖಕ ತನ್ನ ಬರವಣಿಗೆಯ ಸಮಯವನ್ನ ಆನಂದಿಸುತ್ತಾನೆ. ಬರವಣಿಗೆಗಷ್ಟೇ ಅಲ್ಲ, ಯಾವುದೇ ಸೃಜನಾತ್ಮಕ ಕೆಲಸಕ್ಕೂ ಏಕಾಂತ ಅತ್ಯಗತ್ಯ.

ಬಹಳ ಜನ ಏಕಾಂತ ಮತ್ತು ಒಂಟಿತನಗಳ ನಡುವಿನ ವ್ಯತ್ಯಾಸ ತಿಳಿಯದೇ ಗೊಂದಲಕ್ಕೊಳಗಾಗುತ್ತಾರೆ.  ಏಕಾಂತ ತಾದಾತ್ಯ್ಮದತ್ತ ವ್ಯಕ್ತಿಯನ್ನು ಬೆಳೆಸುತ್ತದೆ. ಅದು ಸಾಹಿತ್ಯದ ಮೂಲಕವಾಗಿರಬಹುದು ಅಥವಾ ಯಾವುದೇ ಸೃಜನಾತ್ಮಕ ಕೆಲಸದ ಮೂಲಕವಾಗಿರಬಹುದು. ಆದರೆ ಒಂಟಿತನ ವ್ಯಕ್ತಿಯನ್ನು ನುಂಗುತ್ತಾ ಹೋಗುತ್ತದೆ. ಸಾವಿರಾರು ಜನರ ನಡುವೆ ಇದ್ದಾಗಲೂ ಒಂಟಿತನ ನಮ್ಮನ್ನು ಕಾಡಬಹುದು. ಆದರೆ ಒಂದು ದಿವ್ಯ ಏಕಾಂತಕ್ಕೆ ಬರಹಗಾರ ಸದಾ ಹಪಹಪಿಸುತ್ತಾನೆ. ನಾವೀಗ ಮಾತನಾಡಹೊರಟಿರುವುದು ಅಂತಹ ಏಕಾಂತದ ಬಗ್ಗೆ.  

ಕವಿರತ್ನ ಕಾಳಿದಾಸ ಬರೆಯುವ ಸಲುವಾಗಿಯೇ ಬೆಟ್ಟದ ತಪ್ಪಲುಗಳನ್ನೂ, ಸರೋವರದ ತಟಗಳನ್ನೂ ಅರಸಿ ಹೋಗುತ್ತಿದ್ದನಂತೆ. ಆತನ ಶಾಕುಂತಲೆ ಅಂತಹ ಏಕಾಂತಕ್ಕೊಲಿದ ಚೆಲುವೆ! ಗದುಗಿನ ನಾರಣಪ್ಪ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಆ ಒದ್ದೆ ಮೈಯಲ್ಲೇ ವೀರನಾರಾಯಣನ ಗುಡಿಯ ಕಂಬವೊಂದಕ್ಕೆ ಒರಗಿ ಕೂತು ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ್ದು. ಆ ದೇಗುಲದ ಘಂಟೆ ಢಂಡಣಗಳ ನಡುವಿನ ಮೌನದಲ್ಲೇ ಆತ ಕುಮಾರವ್ಯಾಸನಾದದ್ದು. ರಸಋಷಿ ಕುವೆಂಪು ಏಕಾಂತವಿಲ್ಲದೇ ಏನನ್ನೂ ಬರೆಯುತ್ತಿರಲಿಲ್ಲವಂತೆ. ಕುಪ್ಪಳಿಯ ಕವಿಶೈಲದ ಹಕ್ಕಿಕುಕಿಲುಗಳ ನಡುವಿನ ದಿವ್ಯಮೌನದಲ್ಲೋ, ಮಾನಸ ಗಂಗೋತ್ರಿಯ ಕಾರಿಡಾರಿನ ಚಪ್ಪಲಿ ಸದ್ದನ್ನು ಮೀರಿದ ಸ್ಟಾಫ್ ರೂಮಿನಲ್ಲೋ ಕೂತೇ ಅವರು ತಮ್ಮ ಸಾಹಿತ್ಯ ಸೃಷ್ಟಿಯಲ್ಲಿ ತೊಡಗುತ್ತಿದ್ದುದು. ಬೇಂದ್ರೆಯವರನ್ನು ಬಲ್ಲವರು ಹೇಳುವ ಪ್ರಕಾರ, ಸಾವಿರಾರು ಪುಸ್ತಕಗಳು, ವಿಜ್ಞಾನ-ಗಣಿತಕ್ಕೆ ಸಂಬಂಧಿಸಿದ ಚಿತ್ರವಿಚಿತ್ರ ಉಪಕರಣಗಳು ಕೂಡಿದ್ದ ಪ್ರಯೋಗಶಾಲೆಯಂತಹ ತಮ್ಮ ಕೊಠಡಿಯಲ್ಲಿ ಕೂತೋ ಅಥವಾ ಅಲ್ಲೇ ಇದ್ದ ಹಾಸಿಗೆಯಲ್ಲಿ ಮಲಗಿಯೋ ಅವರು ಬರೆಯುತ್ತಿದ್ದರಂತೆ. ಖ್ಯಾತ ಕಾದಂಬರಿಕಾರ ಚದುರಂಗರು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಲೇಖನಿ ಹಿಡಿಯುತ್ತಿದ್ದರಂತೆ. ಕತೆಗಾರ್ತಿ ವೈದೇಹಿಯವರಿಗೆ ಅಡುಗೆ ಮನೆಯಲ್ಲಿರುವ ಟೇಬಲ್ಲೇ ಏಕಾಂತವನ್ನು ಒದಗಿಸಿಕೊಡುವ ತಾಣ.

ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ನಮ್ಮನಮ್ಮ ಕೆಲಸ-ಕಾರ್ಯಗಳಲ್ಲಿ ಅವಿರತ ತೊಡಗಿಕೊಂಡಿರುವ ಕಾಲ. ಯಾರಿಗೂ ಪುರುಸೊತ್ತಿಲ್ಲ. ಬೆಳಗಾದರೆ ನೂರಾರು ಟೆನ್ಷನ್ನುಗಳು, ಕರೆಗಳು, ಕರಕರೆಗಳು. ಗಂಡ-ಹೆಂಡತಿ-ಮಕ್ಕಳು ಎಲ್ಲರೂ ಬೆಳಗಾಗುತ್ತಿದ್ದಂತೆಯೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಲಣಿಯಾಗುತ್ತಾರೆ. ಶಾಲೆ, ಆಫೀಸು, ಮಾರ್ಕೆಟ್ಟು, ಯಾರ ಜೊತೆಗೋ ಮೀಟಿಂಗು, ಎಲ್ಲೋ ಮಧ್ಯಾಹ್ನದ ಊಟ, ಮತ್ತೆಲ್ಲೋ ಸಂಜೆಯ ಕಾಫಿ, ದಟ್ಟ ಟ್ರಾಫಿಕ್ಕು, ಮುಗಿಯದ ಗೋಳುಗಳ ನಡುವೆ ಸಮಯವನ್ನು ಸಂಭಾಳಿಸುವುದೇ ದೊಡ್ಡ ಸವಾಲಾಗಿರುವ ಕಾಲ ಇದು. ಹೀಗಾಗಿ ಈ ಎಲ್ಲ ತರಾತುರಿಗಳ ನಡುವೆ ಏಕಾಂತವನ್ನು ಕಂಡುಕೊಳ್ಳುವುದು ಬಹಳ ಕಷ್ಟದ ವಿಷಯ. ಏಕಾಂತವೆಂಬುದು ಅತಿ ದುಬಾರಿಯಾಗಿರುವ ಕಾಲ ಇದು. ನಾವೀಗ ಪೆನ್ನು-ಹಾಳೆಯಲ್ಲಿ ಬರೆಯುತ್ತಿಲ್ಲ; ಲ್ಯಾಪ್‌ಟಾಪಿನಲ್ಲಿ  ನೇರವಾಗಿ ಟೈಪಿಸುತ್ತಿದ್ದೇವೆ. ರಸ್ತೆಯಲ್ಲೇ ನಿಂತು ಸ್ಮಾರ್ಟ್‌ಫೋನು-ಟ್ಯಾಬ್ಲೆಟ್ಟುಗಳಲ್ಲಿ ಬರೆದು ತಲುಪಬೇಕಾದಲ್ಲಿಗೆ ಕಳುಹಿಸುತ್ತಿದ್ದೇವೆ. ಕೃತಕ ಏಕಾಂತವೊಂದನ್ನು ಸೃಷ್ಟಿಸಿ ಕುಳಿತುಕೊಂಡರೂ ಫೋನು ರಿಂಗಾಗುತ್ತದೆ, ಮೊಬೈಲಿಗೆ ಎಸ್ಸೆಮ್ಮೆಸ್ ಬರುತ್ತದೆ, ವಾಟ್ಸಾಪಿನಲ್ಲಿ ಮತ್ತೇನೋ ಬರುತ್ತದೆ, ಇನ್ಯಾವುದೋ ನೋಟಿಫಿಕೇಶನ್ನು ಟಿಂಗೆನ್ನುತ್ತದೆ, ಹೊಸ ಮೇಯ್ಲ್ ಬಂತು ಅಂತ ಲ್ಯಾಪ್‌ಟಾಪ್ ಸದ್ದು ಮಾಡುತ್ತದೆ... ಹೀಗೆ ನಮ್ಮ ಏಕಾಂತವನ್ನೂ, ಏಕಾಗ್ರತೆಯನ್ನೂ ಭಂಗ ಮಾಡಲೆಂದೇ ನೂರಾರು ತರಹದ ಅಡೆತಡೆಗಳು ಇರುವ ಕಾಲ ಇದು. 

ಹೀಗಿದ್ದಾಗಲೂ ಸೃಜನಶೀಲತೆಯ ಅಭಿವ್ಯಕ್ತಿ ಆಗುತ್ತಿದೆ ಎಂಬುದು ಸೋಜಿಗದ, ಸಂತೋಷದ ಸಂಗತಿ.  ಆಫೀಸಿನ ಐದು ನಿಮಿಷದ ಬಿಡುವಿನ ಸಮಯದಲ್ಲಿ ಒಂದು ಪುಟ್ಟ ಕವಿತೆ ಬರೆದು  ಫೇಸ್‌ಬುಕ್ಕಿಗೆ ಹಾಕುತ್ತೇವೆ. ಲಂಚ್ ಅವರಿನಲ್ಲಿ ಸಿಕ್ಕ ಬಿಡುವಿನಲ್ಲಿ ಒಂದು ಬ್ಲಾಗ್‌ಪೋಸ್ಟ್ ತಯಾರಾಗುತ್ತದೆ. ಟ್ರಾಫಿಕ್ ಜಾಮಿನಲ್ಲಿ ಸಿಲುಕಿ ಮುಂದೆ ಹೋಗಲಾಗದಂತೆ ಬಂಧಿಯಾದ ಕ್ಷಣದಲ್ಲಿ ಯಾರದೋ ಬರಹಕ್ಕೆ ಪ್ರತಿಕ್ರಿಯೆ ಜೋಡಿಸುತ್ತೇವೆ. ವಾಟ್ಸಾಪಿನ ಗ್ರೂಪಿನಲ್ಲಿ ಯಾರೋ ಬರೆದ ಕತೆಯನ್ನು ಮುಂದುವರೆಸುತ್ತೇವೆ.  ಹೀಗೆ, ಬರವಣಿಗೆಗೆ ಏಕಾಂತ ಅತ್ಯಗತ್ಯ ಎಂಬ ನಿಲುವು ಬದಲಾಗಿದೆಯಾ ಎಂಬ ಅನುಮಾನ ಬರುವ ಕಾಲ ಇದು. ಅಥವಾ, ‘ಏಕಾಂತ ಎಂಬ ಶಬ್ದದ ವ್ಯಾಖ್ಯಾನವೇ ಬದಲಾಗಿರಬಹುದು. ಒಂದೆರಡು ನಿಮಿಷದ ಬಿಡುವಿನಲ್ಲಿ ನಮ್ಮ ಸುತ್ತ ನಾವೇ ಒಂದು ಸಣ್ಣ ಏಕಾಂತವನ್ನು ಆವಾಹಿಸಿಕೊಂಡು ಬರವಣಿಗೆಯಲ್ಲಿ ತೊಡಗಿಕೊಳ್ಳುವಲ್ಲಿ ನಾವು ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದೇವೆ.

ಹತ್ತಾರು ಪತ್ರಿಕೆಗಳು, ನೂರಾರು ವೆಬ್‌ಸೈಟುಗಳು, ಸಾವಿರಾರು ಬ್ಲಾಗುಗಳು, ನಮ್ಮ ಅಭಿವ್ಯಕ್ತಿಯನ್ನು ಹಂಚಿಕೊಳ್ಳಲೆಂದೇ ಇರುವ ಅದೆಷ್ಟೋ ಸಾಮಾಜಿಕ ಜಾಲತಾಣಗಳು ಇರುವ ಕಾಲ ಇದು. ಇವೆಲ್ಲವೂ ನಮ್ಮಿಂದ ಬರಹವನ್ನೋ, ವಿಚಾರ ಮಂಥನವನ್ನೋ ಅಥವಾ ಮತ್ಯಾವುದೇ ಸೃಜನಶೀಲ ಸೃಷ್ಟಿಯನ್ನೋ ಬಯಸುತ್ತವೆ. ನಾವು ಬರೆದದ್ದನ್ನು ಮರು ಕ್ಷಣದಲ್ಲೇ ಲಕ್ಷಾಂತರ ಜನರಿಗೆ ಓದಲು ತೆರೆದಿಡಲು ಈಗ ಸಾಧ್ಯವಿದೆ. ಪತ್ರಿಕೆಗಳಿಗೆ ಅಂಕಣ ಬರೆಯುವ ಅಂಕಣಕಾರರನ್ನು ಮಾತನಾಡಿಸಿ ನೋಡಿ: ಇವತ್ತೊಂದು ಪತ್ರಿಕೆಗೆ, ನಾಳೆ ಮತ್ತೊಂದು ಪತ್ರಿಕೆಗೆ ಅಂತ ಬರೆಯುತ್ತಲೇ ಇರುತ್ತಾರೆ. ಅವರಿಗೆ ಅಷ್ಟೊಂದು ಸಾಮಗ್ರಿ, ಬರೆಯಲು ಬೇಕಾದ ಏಕಾಂತ ಎಲ್ಲಿಂದ ಸಿಗುತ್ತದೆ? ಅವರೂ ತಮ್ಮ ಕೆಲಸದ ಬಿಡುವಿನ ಸಮಯದಲ್ಲೇ ಬರೆಯುವವರು. ಟೀವಿ ಚಾನೆಲ್ಲುಗಳಲ್ಲಂತೂ ದಿನಂಪ್ರತಿ ಧಾರಾವಾಹಿಗಳು. ಈ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವವರನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇವರು ದಿನವಿಡೀ ಬರೆಯುತ್ತಲೇ ಇರುತ್ತಾರೆ! ನಾಳಿನ ಸಂಚಿಕೆಗೆ ಇಂತಿಷ್ಟು ಬೇಕು ಅಂತ ಹೇಳಿಬಿಟ್ಟರೆ ಸಾಕು, ಇವರು ತಕ್ಷಣ ಕಾರ್ಯೋನ್ಮುಖರಾಗಿ ಹಗಲು-ರಾತ್ರಿ  ಬರೆದು ಕಳುಹಿಸಿಯೇಬಿಡುತ್ತಾರೆ. ಎಲ್ಲೇ ಇರಲಿ, ಹೇಗೇ ಇರಲಿ, ಶೂಟಿಂಗ್ ಸ್ಥಳದಲ್ಲಿಯೇ ದಿಢೀರ್ ಬರೆಯಬಲ್ಲರು, ಎಲ್ಲೋ ಪ್ರವಾಸ ಹೋಗಿದ್ದಾಗ ಕರೆ ಬಂದರೆ ಅಲ್ಲೇ ಬರೆಯಲು ಕೂತುಬಿಡುವರು, ಅಕ್ಷರಶಃ ಸಂತೆಯಲ್ಲೂ ಬರೆಯಬಲ್ಲರು. ಇವನ್ನೆಲ್ಲ ನೋಡಿದಾಗ, ಬರವಣಿಗೆಯು ಕೇವಲ ಏಕಾಂತದಲ್ಲಿ ಮಾತ್ರ ಅರಳುವ ಹೂವಲ್ಲ, ಅದೊಂದು ಮಾನಸಿಕ ಸ್ಥಿತಿ ಅಂತ ಅನಿಸೋಕೆ ಶುರುವಾಗುತ್ತದೆ. ಇತ್ತೀಚಿಗೆ ವಿಫುಲವಾಗಿ ಬರೆಯುತ್ತಿರುವ ಖ್ಯಾತ ಸಾಹಿತಿ ಜೋಗಿ, ಧಾರಾವಾಹಿಗೆ ಸಂಭಾಷಣೆ, ಸಿನೆಮಾಗೆ ಚಿತ್ರಕತೆ, ಮತ್ಯಾವುದೋ ಚಿತ್ರಕ್ಕೆ ಹಾಡು, ಎರಡ್ಮೂರು ಪತ್ರಿಕೆಗಳಿಗೆ ಅಂಕಣ, ಇವೆಲ್ಲದರ ಜತೆಗೆ ತಮ್ಮ ವೃತ್ತಿಯ ಪತ್ರಕರ್ತನ ಜವಾಬ್ದಾರಿಯನ್ನೂ ನಿಭಾಯಿಸುತ್ತಾರೆ. “ಇದೆಲ್ಲ ಹೇಗೆ ಸಾಧ್ಯ?” ಅಂತ ಅವರನ್ನು ಕೇಳಿ ನೋಡಿ: “ಬರೀಬೇಕು ಅಂದ್ಕೊಂಡ್ರೆ ಎಲ್ಲಾ ಸಾಧ್ಯ” ಅಂತ ಕಣ್ಣು ಹೊಡೆಯುತ್ತಾರೆ. ಕಥೆಗಾರ ವಸುಧೇಂದ್ರ ತಮ್ಮ ಕಾರಿನ ಹಿಂದಿನ ಸೀಟಿನಲ್ಲೇ ಕೂತು ಅದ್ಭುತ ಕತೆ-ಕಾದಂಬರಿಗಳನ್ನು ಬರೆಯುವರು. ಅದಕ್ಕೆಂದೇ ಬೆಂಗಳೂರಿನ ಟ್ರಾಫಿಕ್ಕಿಗೇ ತಮ್ಮ ಪುಸ್ತಕವೊಂದನ್ನು ಅವರು ಅರ್ಪಿಸಿದ್ದಾರೆ!

ಖ್ಯಾತ ಪತ್ರಕರ್ತ ಮತ್ತು ಬರಹಗಾರ ವಿಶ್ವೇಶ್ವರ ಭಟ್ಟರಿಗೆ ಒಬ್ಬ ಹುಡುಗಿ ಹೀಗೊಂದು ಪ್ರಶ್ನೆ ಕೇಳಿದಳಂತೆ:ನನಗೆ ಲಕ್ಷಣವಾದ ಕೆಲಸ, ಸಂಬಳ ಇದೆ. ಆದರೆ ಅದರ ಜೊತೆಗೆ ನನಗಿಷ್ಟವಾದ ಸೃಜನಶೀಲ ಬರವಣಿಗೆಯ ಕೆಲಸ ಮಾಡಬೇಕು ಎನಿಸುತ್ತಿದೆ. ಆದರೆ ಮನೆಯಲ್ಲಿ ಕುಳಿತು ಮಾಡಲು ಆಗುತ್ತಿಲ್ಲ. ಮನೆಯಲ್ಲಿ ಬರೆಯಲು ಪ್ರೈವೆಸಿ ಇಲ್ಲ. ಇತರ ಮನೆಕೆಲಸಗಳಲ್ಲೇ ಸಮಯ ಹೋಗುತ್ತದೆ. ಹುಡುಗಿಯಾಗಿದ್ದರಿಂದ ಮನೆಯಿಂದ ಬೇರೆಯಾಗಿ ಒಬ್ಬಳೇ ಇರಬೇಕು ಎನ್ನುವ ಆಸೆಗೆ ಅಡ್ಡಿಯಾಗುತ್ತಿದೆ. ಇದರ ಜೊತೆ ಮನೆಯಲ್ಲಿ ಮದುವೆಯ ಒತ್ತಡ. ಏನು ಮಾಡಲಿ?”.  ಇದಕ್ಕೆ ವಿಶ್ವೇಶ್ವರ ಭಟ್ಟರು ಕೊಟ್ಟ ಉತ್ತರ ಆಸಕ್ತಿಕರವಾಗಿದೆ: “ಸೃಜನಶೀಲತೆಗೆ ಚೌಕಟ್ಟು ಎಂಬುದಿಲ್ಲ. ಕ್ರಿಯಾಶೀಲ ಮನಸ್ಸು ಯಾವುದೇ ನೆಪವನ್ನು ಒಡ್ಡುವುದಿಲ್ಲ. ಬರವಣಿಗೆಯ ತುಡಿತ ಎಂಬುದು ಏಕಾಂತದಲ್ಲಷ್ಟೇ ಅರಳುವ, ಒಲಿಯುವ ದೇವರಲ್ಲ. ಅದೊಂದು ಸಮಾಧಿ ಸ್ಥಿತಿ. ನಿನ್ನೊಳಗಿನ ತುಡಿತ ಅಷ್ಟೊಂದು ಬಲವಾದದ್ದೇ ಆದರೆ ಜಗತ್ತೇ ಮುಳುಗಿ ಹೋದರೂ ಗೊತ್ತಾಗದಂತೆ ನೀನು ನಿನ್ನ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯ. ಅಂಥದ್ದೊಂದು ಏಕಾಗ್ರತೆ, ಇಚ್ಛಾಶಕ್ತಿ, ಛಲವನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಅದೆಷ್ಟೋ ಪತ್ರಕರ್ತರು ಸಂತೆಯಲ್ಲೇ ಕುಳಿತು ಸುದ್ದಿ ನೇಯಬೇಕಾದ ಅನಿವಾರ್ಯತೆ ಎದುರಿಸುತ್ತಿರುತ್ತಾರೆ. ನಿನ್ನ ಹಾಗೆ ಅವರೂ ಏಕಾಂತ ಬೇಕು ಎಂದು ಕುಳಿತರೆ ಯಾವ ಪತ್ರಿಕೆಗಳೂ ಪ್ರಕಟವಾಗುವುದೇ ಇಲ್ಲ. ಇರುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಜಾಣತನ ಮೆರೆಯಬೇಕು. ಮದುವೆಯಾದ ಮಾತ್ರಕ್ಕೆ ಸೃಜನಶೀಲ ಬರವಣಿಗೆಗೆ ಧಕ್ಕೆ ಬರುತ್ತದೆ ಎಂಬುದು ನಿನ್ನ ಭ್ರಮೆ ಅಷ್ಟೇ. ನಿನ್ನನ್ನು ನೀನು ಮೊದಲು ಸಂಭಾಳಿಸಿಕೋ. ಪಟ್ಟಾಗಿ ಬರೆಯಲು ಕುಳಿತರೆ, ಅಕ್ಷರಗಳು ತಂತಾನೇ ಮೂಡುತ್ತವೆ.”


ಹೀಗಾಗಿ ಬರವಣಿಗೆಗೆ ಏಕಾಂತ ಬೇಕೇ ಅಥವಾ ಬೇಡವೇ ಎಂಬುದು ಅವರವರಿಗೆ ಬಿಟ್ಟ ವಿಚಾರವಾಗಿದೆ ಈಗ. ಸಂತೆಯಲ್ಲೂ ಕೂತು ಬರೆಯುವವರೂ, ಸಣ್ಣ ಕ್ಷೋಭೆಯಾದರೂ ಮೂಡು ಹಾಳಾಗಿ ಬರೆಯಲಾಗದವರು –ಇಬ್ಬರೂ ಈಗ ಒಟ್ಟಿಗೇ ಇದ್ದಾರೆ. ಈ ಇಬ್ಬರನ್ನೂ ಕೇಳಿ ನೋಡಿ: ಎಲ್ಲಾ ಅವರವರ ಮನಸ್ಥಿತಿ ಅಂತ ಉತ್ತರಿಸುತ್ತಾರೆ! ಬಹುಶಃ ಅದೇ ಸತ್ಯವೇನೋ? ಬರವಣಿಗೆಗೆ ಏಕಾಂತವೆಂಬುದು ಅಗತ್ಯವಲ್ಲ, ಆಯ್ಕೆಯಷ್ಟೇ ಅಂತ ನಮ್ಮ ವಾದವನ್ನು ಮುಗಿಸಬಹುದೇನೋ.
***

(16-05-2016 ರಂದು ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಭಾಷಣ)

2 ಕಾಮೆಂಟ್‌ಗಳು:

prashasti ಹೇಳಿದರು...

Olleya lekhana

ಸಂಗಮೇಶ್ ಡಿಗ್ಗಿ ಹೇಳಿದರು...

ಚನ್ನಾಗಿದೆ.
ಏಕಾಂತವಿಲ್ಲದ ಬರಹ, ಓದುಗನಿಗೆ ವಿರಹ