ಶುಕ್ರವಾರ, ಮೇ 13, 2016

ಪಟ್ಟರೆ ಪಾಡು, ಕಲಿತರೆ ಪಾಠ!

ಜೀವನ ಕೆಲವರಿಗೆ ಮತ್ತೆ ಮತ್ತೆ ಅವಕಾಶಗಳನ್ನ ಕೊಡುತ್ತಲೇ ಇರುತ್ತದೆ. ಕೆಲವರಿಗೆ ಅವಕಾಶ ಬಂದಿದ್ದೇ ತಿಳಿಯದಿದ್ದರೆ, ಇನ್ಕೆಲವರು ಬಂದ ಅವಕಾಶಗಳನ್ನೇ ಸಂಪೂರ್ಣ ಬಳಸಿ ಬದುಕನ್ನ ಕಟ್ಟಿಕೊಳ್ಳುತ್ತಾರೆ. ನಾನು ಚಿಕ್ಕವಳಿದ್ದಾಗ, ನಾವಿದ್ದ ಮನೆಯ ಪಕ್ಕದ ಮನೆಯಲ್ಲಿ ನಾಲ್ಕು ಜನ ಮಕ್ಕಳು ಹಾಗೂ ತಂದೆತಾಯಿ ಇರುವ ಒಂದು ಕುಟುಂಬ ವಾಸವಾಗಿತ್ತು. ತಂದೆ ಇಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದರು. ತಾಯಿ ಮನೆಗೆಲಸ. ಹುಡುಗರಿನ್ನೂ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದರು. ಅಂಥಾ ಸ್ಥಿತಿವಂತರೇನೂ ಅಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೆ ಕಡಿಮೆ ಇರಲಿಲ್ಲ. ಎಲ್ಲವೂ ಚನ್ನಾಗೇ ಇದೆ ಅಂದುಕೊಳ್ಳುವಾಗ, ಒಂದು ದಿನ ಅಚಾನಕ್ಕಾಗಿ ಮನೆಯ ಯಜಮಾನ ಅಪಘಾತದಲ್ಲಿ ತೀರಿಕೊಂಡುಬಿಟ್ಟರು. ಕೂಡಿಟ್ಟ ಹಣ ಕುಂತು ಉಣ್ಣಲು ಸಾಕಾಗಿರಲಿಲ್ಲ. ಮಕ್ಕಳು ಬೇರೆ ಚಿಕ್ಕವರು. ಯಜಮಾನಿಗೆ ಹೊರಗಿನ ಕೆಲಸಗಳಾವುದೂ ಬರುವುದಿಲ್ಲ. ಬಂಧುಮಿತ್ರರು ಸಹಾಯಕ್ಕೆ ಬರಲಿಲ್ಲ. ದಿಕ್ಕೇ ತೋಚದಾಯಿತು ಅವಳಿಗೆ. ಮೊದಲಿಂದಲೂ ಏನಾದರೂ ಮಾಡಬೇಕು ಎಂದು ಕನಸು ಕಂಡಿದ್ದ ಅವಳಿಗೆ, ಈಗ ಏನಾದರೂ ಮಾಡುವುದು ಅನಿವಾರ್ಯವಾಗಿತ್ತು.

ಹೀಗೇ ಒಂದು ಮಧ್ಯಾಹ್ನ ಮಕ್ಕಳು ಶಾಲೆಗೆ ಹೋದ ವೇಳೆಗೆ ಏನೋ ಹೊಳೆದು, ತಕ್ಷಣ ಪಕ್ಕದಲ್ಲೇ ಇದ್ದ ಕಿರಾಣಿ ಅಂಗಡಿಯಿಂದ ಹಪ್ಪಳ ಮಾಡಲು ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ಮನೆಯಲ್ಲೇ ಹಪ್ಪಳ ತಯಾರಿಸಿದಳು. ಮಕ್ಕಳೂ ಬಿಡುವಿನ ವೇಳೆಯಲ್ಲಿ ಅವಳ ಸಹಾಯಕ್ಕೆ ನಿಂತರು. ಹತ್ತಿರವಿರುವ ಒಂದು ನಾಲ್ಕು ಅಂಗಡಿಗಳಿಗೆ ಖಾಯಂ ಹಪ್ಪಳ ಮಾರುವುದಕ್ಕೆ ಮಾತಾಡಿದಳು. ಕೈಗೆ ಒಂದಷ್ಟು ಕಾಸೂ ಆಯಿತು, ಮನಸಿಗೆ ನೆಮ್ಮದಿ, ವಿಶ್ವಾಸಗಳೂ ದೊರಕಿತು! ಈಗ ಅವಳ ಕೈ ಕೆಳಗೆ ಸುಮಾರು ಇಪ್ಪತ್ತು ಜನ ಮಹಿಳೆಯರು ಕೆಲಸ ಮಾಡುತ್ತಾ, ಅವರ ಬದುಕಿಗೊಂದು ದಾರಿ ದೀಪವಾಗಿದ್ದಾರೆ.

ಇದು ಒಂದು ಕಥೆಯಾದರೆ, ಮುಕ್ತ ಎಂಬುವಳ ಕಥೆ ಇನ್ನೊಂದು ರೀತಿಯದ್ದು. ಅವರು ಹೇಳುವಂತೆ, ಅವರಿಗೆ ಜೀವನದಲ್ಲಿ ಏನಾದರೂ ಮಹತ್ವದ್ದನ್ನ ಸಾಧಿಸಬೇಕು ಎಂಬ ಕನಸೊಂದಿತ್ತು. ನಾನು ಪದವಿ ಮುಗಿಸಿದ ತಕ್ಷಣವೇ ಒಂದು ಉನ್ನತ ಕಂಪನಿಯಲ್ಲಿ ಕೆಲಸ ಸಿಕ್ಕಿತು. ನಾನಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಅಪ್ಪ-ಅಮ್ಮ ಸ್ವಲ್ಪ ದಿನಗಳಾದರೂ ಮನೆಯಲ್ಲಿ ಬಂದಿರಲು ಹೇಳಿದರು. ಚಿಕ್ಕಂದಿನಿಂದಲೂ ಬೋರ್ಡಿಂಗ್ ಶಾಲೆಯಲ್ಲೇ ಕಲಿತ ನನಗೂ ಮದುವೆ ಆಗೋಕೂ ಮುಂಚೆ ಅಪ್ಪ ಅಮ್ಮರ ಜೊತೆ ಕಾಲ ಕಳೆಯೋ ಆಸೆಯಾಗಿ ಕೆಲಸಕ್ಕೆ ವಿದಾಯ ಹೇಳಿದೆ. ಮನೆಯಲ್ಲಿ ಇರುವ ವೇಳೆಯಲ್ಲೆಲ್ಲಾ ನನಗೆ ಏನಾದರೂ ಮಾಡಬೇಕು ಅಂತ ಮನಸು ತುಡಿತಲೇ ಇತ್ತು. ಹೀಗಿರುವಾಗ ಒಂದು ದಿನ ನನ್ನ ತಂದೆಯ ಸ್ನೇಹಿತರೊಬ್ಬರು ತಾವು ಹೊಸಾ ಶಾಲೆ ಕಟ್ಟಿಸುತ್ತಿರುವ ವಿಷಯ ತಿಳಿಸಿದರು. ಹೇಗೂ ಶಾಲೆ ಆಗತಾನೇ ಶುರು ಆಗುತ್ತಿದ್ದರಿಂದ ನನಗ್ಯಾವ ತರಬೇತಿಯ ಅವಶ್ಯಕತೆ ಇರಲಿಲ್ಲ. ಅಂತರ್ಜಾಲದಲ್ಲಿ ಸಿಗಬಹುದಾದ ಮಾಹಿತಿಯನ್ನು ಕಲೆ ಹಾಕುವುದರ ಜೊತೆಜೊತೆಗೆ, ಬೇರೆ-ಬೇರೆ ಶಾಲೆಗಳಲ್ಲಿ ಬಳಸುವ ಕಲಿಕಾ ವಿಧಾನ ಮತ್ತದರ ಅಳವಡಿಸುವಿಕೆಯ ತಂತ್ರಗಳ ಬಗ್ಗೆ ತಿಳಿದುಕೊಳ್ಳತೊಡಗಿದೆ.

ಕಲೆ ಎಂದರೆ ನನಗೆ ಬಹಳ ಆಸಕ್ತಿ. ನಾನು ಓದಿದ ಪದವಿ ಕಲೆಗೆ ಸಂಬಂಧವಿಲ್ಲದಿದ್ದರೂ, ಕಲೆ ನನ್ನ ಹೃದಯಕ್ಕೆ ಹತ್ತಿರವಿತ್ತು. ವಿವಿಧ ಬಗೆಯ ಕೈಗಾರಿಕೆಗಳು ನನಗೆ ತಿಳಿದಿದ್ದವು. ಕೆಲವೊಮ್ಮೆ ಶಾಲೆಗೆ ಹೋಗಿ ಮಕ್ಕಳಿಗೆ ಸುಲಭದ ಕೈಗಾರಿಕೆಗಳನ್ನ ಹೇಳಿಕೊಡುತ್ತಿದ್ದೆ. ಮಕ್ಕಳ ಸಂತಸ ನೋಡಿ ಮನಸ್ಸು ಅರಳ್ತಾ ಇತ್ತು. ನನ್ನ ಮದುವೆ ಆದಬಳಿಕ, ನನ್ನ ಕುಟುಂಬದವರಿಗೆ ನಾನು ಹೊರಗೆ ಹೋಗಿ ದುಡಿಯುವುದು ಇಷ್ಟವಿರಲಿಲ್ಲ. ಹಾಗಾಗಿ ನಾನು ಮನೆ ಕೆಲಸಗಳ ಮುಗಿಸುತ್ತಾ, ಬಿಡುವಾದಾಗಲೆಲ್ಲಾ ನನ್ನಲ್ಲಿರುವ ಕಲೆಯನ್ನು ಜೀವಂತವಾಗಿಟ್ಟುಕೊಳ್ಳಲು ಏನಾದರೂ ಮಾಡುತ್ತಲೇ ಇದ್ದೆ. ಮನೆಗೆಂದು ಅಲಂಕಾರಿಕ ವಸ್ತುಗಳನ್ನ ಮಾಡಿದೆ, ಗೆಳೆಯರಿಗೆ ಉಡುಗೊರೆಯಾಗಿ ಕೊಟ್ಟೆ. ಜನ ನನ್ನ ಕೆಲಸ ಇಷ್ಟಪಡೋಕೆ ಶುರು ಮಾಡಿದ್ದು ನನ್ನಲ್ಲಿ ಹೊಸಾ ಉತ್ಸಾಹ ಕೊಟ್ಟಿತು. ಮಗಳು ಹುಟ್ಟುವವರೆಗೂ ಇದನ್ನೇ ಮಾಡಿದೆ.

ಆಸ್ಚರ್ಯ ಅನ್ನೋ ಹಾಗೆ, ನನ್ನ ಮಗಳಿಗೂ ಕೈಗಾರಿಕೆಯೆಂದರೆ ಇಷ್ಟ! ಅವಳು ಮಾಡಿದ ಕೈಗಾರಿಕೆಯನ್ನ ವೀಡಿಯೋ ಮಾಡಿ ಯು ತ್ಯುಬ್ಗೆ ಹಾಕಿದೆ. ಒಂದು ವರ್ಷದ ಕೂಸು ಮಾಡುವ ಕೈಗಾರಿಕೆಯನ್ನ ಜನರೂ ಇಷ್ಟಪಟ್ಟರು. ವೀಡಿಯೋ ನೋಡಿ ಒಂದು ಖಾಸಗಿ ಚಾನಲ್ನವರು ವಾರಕ್ಕೊಂದು ವೀಡಿಯೋ ಹಂಚಿಕೊಳ್ಳುವಂತೆ ಕೋರಿಕೊಂಡರು. ಇದ್ಯಾವುದರ ನಿರೀಕ್ಷೆಯೂ ಇಲ್ಲದ ನನ್ನ ಸಂತೋಷಕ್ಕೇ ಪಾರವೇ ಇಲ್ಲ. ನಾನೀಗ ಮನೆಯಲ್ಲೇ ಕುಳಿತು ನನ್ನ ಕೈಗಾರಿಕೆಗಳನ್ನ ಮಾರುತ್ತೇನೆ. ಹಲವು ಮಕ್ಕಳಿಗೆ ಮನೆಯಲ್ಲೇ ತರಬೇತಿ ಕೊಡುತ್ತೇನೆ. ಹೊಸ ವಿಚಾರಗಳನ್ನ ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತೇನೆ. ಎಲ್ಲದಕ್ಕಿಂತ ಮುಖ್ಯವಾಗಿ ನಾನು ನನ್ನ ಮಗಳ ಜೊತೆಯೂ ಕಾಲ ಕಳೆಯುತ್ತಾ, ಮನೆ ಕೆಲಸ ಮಾಡಿಕೊಳ್ಳುತ್ತಾ, ನನ್ನ ಕನಸುಗಳಿಗೂ ನೀರೆರೆಯುತ್ತಿದ್ದೇನೆ. ಒಮ್ಮೊಮ್ಮೆ ಅನ್ನಿಸುತ್ತೆ, ನನ್ನ ಸ್ನೇಹಿತರು ವೃತ್ತಿಯಲ್ಲಿ ನನ್ನಕ್ಕಿಂತ ಬಹಳ ಮುಂದಿರಬಹುದು. ಆದರೂ ಯಶಸ್ಸು ಅನ್ನೋದು ಕೇವಲ ವೃತ್ತಿ ಬದುಕು ಮಾತ್ರವಲ್ಲವಲ್ಲ. ನಮ್ಮ ಸುತ್ತಮುತ್ತಲಿನವರು ನಮ್ಮಿಂದಾಗಿ ಎಷ್ಟು ಸಂತಸವಾಗಿದ್ದಾರೆ ಅನ್ನೋದು ಮುಖ್ಯವಾಗುತ್ತೆ ಎನ್ನುತ್ತಾ ಒಂದು ಮಂದಹಾಸ ಮುಖದ ಮೇಲೆ ಹಾದುಹೋಗುತ್ತೆ.

ಹೀಗೇ, ಹೇಳುತ್ತಾ ಹೋದರೆ ಇಂಥ ಎಷ್ಟೋ ಕಥೆಗಳು ಸಿಗುತ್ತವೆ. ಒಂದು ಬಾಗಿಲು ಮುಚ್ಚಿದಂತೆ ಕಂಡರೂ ಇನ್ನೆಲ್ಲೋ ಬಾಗಿಲು ನಮಗಾಗಿಯೇ ತೆರೆದಿರುತ್ತದೆ. ಬದುಕಿನಲ್ಲಿ ಬರುವ ಸಣ್ಣಾ-ಪುಟ್ಟ ಅವಕಾಶಗಳನ್ನ ಸರಿಯಾಗಿ ಬಳಸಿಕೊಂಡು, ಅದರಿಂದಲೇ ಏನು ಬೇಕಾದರೂ ಸಾಧಿಸಬಹುದು. ಅಥ್ವ, ಕಾರಣಗಳನ್ನ ಕೊಡುತ್ತಾ ಸುಮ್ಮನೇ ಕೂತುಬಿಡಬಹುದು. ಆಯ್ಕೆ ನಿಮ್ಮದು! ಏನಂತೀರಿ?

***
(ಮಾರ್ಚ್ 16, 2016 ಉದಯವಾಣಿ ಅವಳುನಲ್ಲಿ ಪ್ರಕಟಿತ ಬರಹ )

1 ಕಾಮೆಂಟ್‌:

kumar ಹೇಳಿದರು...

yes true we always the closed doors not to find new doors opened.