ಬುಧವಾರ, ಮಾರ್ಚ್ 02, 2016

ದುರ್ಗಾಸ್ತಮಾನ ಓದಿದೆ!
ಕಪಾಟಿನೊಳಗಿನ ಪುಸ್ತಕಗಳು

ಪುಟ ತೆರೆದವು

ಚಿತ್ರದುರ್ಗದ ಇತಿಹಾಸವಾದವರು

ಮತ್ತೆ ಜೀವಂತ ಬಂದರು

ಹಂಗೊ-ಹಿಂಗೋ-ಹೆಂಗೋ

ಕಳೆಧ್ಹೋಗೋ ನನ್ನ ಕ್ಷಣಗಳು

ಸುಂದರವಾದವು


ಸತತವಾಗಿ ಒಂದು ತಿಂಗಳ ಕಾಲ ತ.ರಾ.ಸು ಅವರು ಚಿತ್ರದುರ್ಗದ ಇತಿಹಾಸದ ಬಗ್ಗೆ ಬರೆದ ಕಾದಂಬರಿಗಳನ್ನು ಓದಿ ಮುಗಿಸಿದೆ. ಕಂಬನಿಯ ಕುಯಿಲಿನಿಂದ ಶುರು ಮಾಡಿ, ದುರ್ಗಾಸ್ತಮಾನದ ಒರೆಗೂ ಚೂರೂ ಬೇಸರವಾಗದೆ, ಬದಲಿಗೆ ತ.ರಾ.ಸು ಅವರ ಮೇಲೇ ಪ್ರೀತಿ ಹುಟ್ಟುವಂತೆ ಮಾಡಿ ನನ್ನನ್ನಾವರಿಸಿದ ಈ ಒಂದು ತಿಂಗಳು ನನ್ನ ಮಟ್ಟಿಗೆ ತಿಳಿ ಬೆಳದಿಂಗಳಿನಂಥವು.

ಸಾಧಾರಣವಾಗಿ ಬರೀ ಇತಿಹಾಸ ಓದುವುದು ಸ್ವಲ್ಪ ಬೇಸರದ ಕೆಲಸ ನನಗೆ. ಆದರೆ ಆ ಇತಿಹಾಸ ಒಂದು ಕಥೆರೂಪದಲ್ಲಿ ದೊರೆತರೆ? ಅದನ್ನೆ ತ.ರಾ.ಸು ಅವರು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಕಂಬನಿಯ ಕುಯಿಲು, ರಕ್ತ ರಾತ್ರಿ, ತಿರುಗು ಬಾಣ, ಹೊಸ ಹಗಲು, ವಿಜಯೋತ್ಸವ, ರಾಜ್ಯ ದಾಹ, ಕಸ್ತೂರಿ ಕಂಕಣ, ದುರ್ಗಾಸ್ತಮಾನ ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿ ಹಾಗೂ ಆಸಕ್ತಿಕರವಾಗಿವೆ. ಇದೊಂದು ಅದ್ಭುತ ಪಯಣ!

ಎಲ್ಲಾ ಪುಸ್ತಕಗಳ ಬಗೆಗೆ ಬರಿಯೋ ಆಸೆ ಇದ್ದರೂ, ನನ್ನ ಬಹಳವಾಗಿ ಸೆಳೆದ, ಕಾಡಿದ, ಕಣ್ತೇವಗೊಳಿಸಿ ಇಷ್ಟವಾದ ಕಾದಂಬರಿ "ದುರ್ಗಾಸ್ತಮಾನ". ಆರಂಭದಲ್ಲಿ ಲೇಖಕರು ಹೇಳುವಂತೆ - ’ಚಿತ್ರದುರ್ಗ’_’ಮದಕರಿನಾಯಕ’ ಬೇರೆಬೇರೆಯಲ್ಲ. ಒಂದೇ ಎಂಬ ಅವಿನಾಭಾವ. ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ. ಈ ಮಾತು ಎಷ್ಟು ನಿಜ ಎಂದು ಕಾದಂಬರಿ ಓದುತ್ತಾ ಹೋದ ಹಾಗೆ ನಿಧಾನಕ್ಕೆ ಸುರುಳಿ ಬಿಚ್ಚುತ್ತಾ ಹೋಗುತ್ತದೆ.

ಹಿರಿಯ ಮದಕರಿ ನಾಯಕ ಹಾಗೂ ಓಬವ್ವ ನಾಗತಿಯ ಮಗನಾದ ಕಸ್ತೂರಿ ರಂಗಪ್ಪ ನಾಯಕರ ಸಾವಿನಿಂದ ಶುರುವಾಗಿ, ಮದುವೆ ಆಗದ ನಾಯಕರ ಸಾವಿನ ನಂತರ ದುರ್ಗಕ್ಕೆ ನಾಯಕರು ಯಾರು ಎಂಬ ಬಿಕ್ಕಟ್ಟು ಮತ್ತು ಅವರ ಸಾವಿನ ದುಃಖದ ಜೊತೆಜೊತೆಯಲ್ಲೆ ಕಥೆ ಆರಂಭವಾಗುತ್ತದೆ. ಇದರ ಚರ್ಚೆಗೆ ಸಭೆ ಸೇರಿಸಿ ಓಬವ್ವ ನಾಗತಿಯ ಆಯ್ಕೆಯಾಗಿ, ಕಾಮಗೇತೀ ವ೦ಶದ  ಜಾನಕಲ್ಲಿನ ದಳವಾಯಿ ಬರಮಣ್ಣನಾಯಕನ ಹನ್ನೆರಡು ವರ್ಷದ ಮಗ ಚಿಕ್ಕ ಮದಕರಿ ರಾಜೇ೦ದ್ರನನ್ನು ಆಯ್ದು ಅವನಿಗೆ ಪಟ್ಟಾಭಿಷೇಕವಾಗುತ್ತದೆ.

ಓಬವ್ವ ನಾಗತಿ ತನ್ನಿಂದಾದಷ್ಟು ಮದಕರಿಯನ್ನು ತಿದ್ದುತ್ತಾ, ನಾಯಕರು ಹೇಗಿರಬೇಕು ಎಂಬ ತರಬೇತಿ ನೀಡುತ್ತಾ ಒಂದಿನ ಸಾವನ್ನಪ್ಪುತ್ತಾಳೆ. ಓಬವ್ವ ನಾಗತಿಯ ಇಷ್ಟದ ಮೇರೆಗೆ, ಮದಕರಿ ನಾಯಕರ ತಂದೆ ಭರಮಣ್ಣನಾಯಕ, ತಾಯಿ ನಿಂಗವ್ವ ಹಾಗೂ ಸೋದರ ಪರಶುರಾಮನಾಯಕ ಅರಮನೆಯಲ್ಲೇ ಬಂದು ನೆಲೆಸುತ್ತಾರೆ. ತನ್ನ ಸಾಹಸ, ಶೌರ್ಯ, ಪ್ರೀತಿ, ಔದಾರ್ಯ, ಮಮತೆ, ಕರುಣೆ, ಬುದ್ದಿವಂತಿಕೆಯಿಂದಾಗಿ ದುರ್ಗದ ಜನರೆಲ್ಲರೂ ನಾಯಕರಿಗೆ, ದುರ್ಗಕ್ಕೆ ತಮ್ಮ ತಲೆ ಕೊಡಲು ಎಂದೂ ಸಿದ್ದರಿದ್ದೇವೆ ಎಂಬ ಮಟ್ಟಿಗೆ ಅಭಿಮಾನಕ್ಕೆ ಪಾತ್ರನಾಗುತ್ತಾನೆ. ಹಲವಾರು ಯುದ್ದಗಳ ಮಾಡಿ ಗೆದ್ದುಬರುತ್ತಾರೆ. ಈ ಮದ್ಯೆ ನಾಯಕರಿಗೆ ಮೊದಲ ಮದುವೆಯಾಗಿ, ಏನೋ ಕಾರಣಗಳಿಂದ ಹೆಂಡತಿಯನ್ನು ತವರಿಗಟ್ಟಿ, ಮತ್ತೆ ಬಂಗರವ್ವ ಹಾಗು ಪದ್ಮವ್ವ ಎಂಬ ಇಬ್ಬರೊಡನೆ ವಿವಾಹವಾಗಿ, ಕೊನೆಯವೆಗೂ ಅವರನ್ನು ಚನ್ನಾಗಿ ನೋಡಿಕೊಳ್ಳುತ್ತಾನೆ. ಇವರ ಜೊತೆ ಕಡೂರಿ ಹಾಗು ನಾಗವ್ವ ಎಂಬ ಅಕ್ಕ ತಂಗಿಯರ ಮೋಹದಲ್ಲಿ ಸಿಲುಕಿ ಅವರನ್ನು ತನ್ನ ವಿಲಾಸದ ಅರಸಿಯರನ್ನಾಗಿ ಮಾಡಿಕೊಂಡು ಸಕಲ ಮರ್ಯಾದೆಯಿಂದ ನೋಡಿಕೊಳ್ಳುತ್ತಾನೆ ಮದಕರಿ.

ಹೀಗಿರುವಾಗ ನಾಯಕರು ಅತಿಕಾಮಿ ಎಂಬ ಸುದ್ದಿ ಊರಲೆಲ್ಲಾ ಹರಡಿ, ಸುಂದರ ಸ್ತ್ರೀಯರು ರಾಜರ ಕಣ್ಣಿಗೆ ಬೀಳುವಂತಿಲ್ಲ ಎಂಬ ಗುಮಾನಿ ಹುಟ್ಟಿ, ಸ್ತ್ರೀಯರು ಹೆದರಿ ನಡುಗುತ್ತಾರೆ. ಇದಕ್ಕೆ ಇಂಬು ಕೊಡುವಂತೆ ಒಂದು ದುರಂತ ನಡೆದು, ಏನೆಂದರೆ, ನಾಯಕರು ಕಣ್ಣು ಹಾಕಿದರೆಂದು, ಒಂದು ಹೆಣ್ಣಿನ ತಂದೆ ತನ್ನ ಮಗಳು ನಾಯಕರ ಪಾಲಾದರೆ ಸಂಸಾರದ ಮರ್ಯಾದೆ ಹೋಗಿಬಿಡುತ್ತದೆಂದು ದೇವರಿಗೆ ಅವಳನ್ನು ಬಲಿ ಕೊಟ್ಟುಬಿಡುತ್ತಾನೆ. ಈ ಘಟನೆ ನಾಯಕರಲ್ಲಿ ಬಹಳ ನೋವು, ವ್ಯಥೆವುಂಟು ಮಾಡಿ, ತಮ್ಮ ತಪ್ಪನ್ನು ತಿದ್ದುಕೊಳ್ಳುವಲ್ಲಿ ಕಾರ್ಯಗತರಾಗುತ್ತರೆ.

ಶ್ರೀ ಮುರುಗಿ ರಾಜೇಂದ್ರ  ಸ್ವಾಮಿಗಳಲ್ಲಿ ಭಕ್ತಿ ಹೊಂದಿದ್ದ ಮದಕರಿಗೆ, ಯಾವುದೋ ಒಂದು ವಿಷಯಕ್ಕೆ ಗುರುಗಳಿಗೂ-ತನಗೂ ಮಾತಿನ ಚಕಮಕಿಯಲ್ಲಿ, ’ಅರಮನೆ ಇರುವುದ್ರಿಂದಲೇ ಗುರುಮನೆ, ಮರೆಯಬೇಡಿ’ ಎಂಬ ಮಾತನ್ನು ದುಡುಕಿಯಾಡಿ, ಗುರುಗಳು ಮಠಬಿಟ್ಟು ಹೋಗಲು ಕಾರಣವಾಗುತ್ತಾನೆ. ಕೊಟ್ಟ ಮಾತಿಗೆ ತಪ್ಪಬಾರದೆಂದು ಮರಾಠರ ಸ್ನೇಹವನ್ನು ಉಳಿಸಿಕೊಳ್ಳಲೋಸುಗ, ನವಾಬರ ಹೈದರಾಲಿಯ ದ್ವೇಶ ಕಟ್ಟಿಕೊಳ್ಳುತ್ತಾನೆ. ಪ್ರಧಾನಿಯಾಗಿ ಕಳ್ಳೀ ನರಸಪ್ಪಯ್ಯನ ಮೇಲಿನ ತನ್ನ ಅನುಮಾನ ಪ್ರಧಾನಿಗಳಿಗೆ ತಿಳಿದಿದ್ದೇ, ತಮ್ಮ ಗೌರವಕ್ಕೆ ಚ್ಯುತಿ ಬಂತೆಂದು, ಪ್ರಧಾನಿ ಪದವಿಗೆ ರಾಜಿನಾಮೆ ಕೊಟ್ಟು, ಹೆಂಡತಿಯ ಜೊತೆಗೆ ದೇಶಾಂತರ ಹೊರಟು, ಮುಂದೆ ಅತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅವರ ಕಥೆ ದುರಂತಮಯವಾಗುತ್ತದೆ.

ಮದಕರಿನಾಯಕರ ಮಗ ಭರಮಣ್ಣನಾಯಕನನ್ನು, ಒಂದು ಗುಪ್ತ ಜಾಗಕ್ಕೆ ಕರೆದುಕೊಂಡೋಗಿ, ನಿಧಿ ಸಂಗ್ರಹಣೆ ಮಾಡುವ ಸ್ಥಳವಿದು ಎಂದು ತೋರಿಸಿಕೊಡುವ ಕ್ಷಣಗಳು ಯಾವುದೋ ಸಿನೆಮಾದ ದ್ರುಶ್ಯದ ಹಾಗೆ ಕಣ್ಣೆದುರು ನಿಲ್ಲುತ್ತವೆ. ಹೈದರಾಲಿಯ ಸೈನ್ಯದ ಜೊತೆಗೆ ಸತತ ಎಂಟು ತಿಂಗಳು ಹೋರಾಡಿ, ಸ್ನೇಹದ ಸಂಧಾನದ ಕುಟಿಲ ತಂತ್ರದಲ್ಲಿ ಸಿಲುಕಿಬಿಡುತ್ತಾನೆ. ಕೋಟೆಯ ಒಳಗೆ ದುರ್ಗದ ಜನ, ಹೊರಗೆ ಸದಾ ಪಿತೂರಿ ಮಾಡುತ್ತಾ, ಕೋಟೆಯ ಹುಳುಕನ್ನು ಹುಡುಕುವ ಹೈದರನ ಸೇನೆ. ಒಮ್ಮೆ, ಹೈದರನ ಸೇನೆ ಕೋಟೆಯ ಸಣ್ಣದಾದ ಕಿಂಡಿಯಿಂದ ಬರುವ ಶತ್ರು ಸೈನಿಕರ ಸದೆಬಡಿದು ಅಪಾರ ವೀರತ್ವ ಮೆರೆದು,  ನಾಯಕರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ ಒಬ್ಬ ದಳವಾಯಿಯ ಹೆಂಡತಿ. ಅವಳೇ ಓಬವ್ವ. ಮುಂದೆ ಆ ಕಿಂಡಿ ’ಓಬವ್ವನ ಕಿಂಡಿ’ ಎಂದು ಹೆಸರುವಾಸಿಯಾಗಿದ್ದು ಎಲ್ಲರಿಗೂ ತಿಳಿದ ವಿಷಯ.

ದುರ್ಗದ ಒಳಗೇ ಇರುವ ಜನರ ಮೋಸದ ಜಾಲಕ್ಕೆ ಸಿಕ್ಕು, ದುರ್ಗವನ್ನು ಕಳೆದುಕೊಳ್ಳುವಂತಾಗುತ್ತದೆ. ಕೊನೆಯ ದಿನ ಯುದ್ದಕ್ಕೆ ಹೊರಡುವ ದಿನಗಳ ಬಗ್ಗೆ ಓದುವಾಗ ಮೈನವಿರೇಳುತ್ತದೆ. ತನ್ನ ಹೆಂಡತಿಯರ ಬಳಿ ತನ್ನನ್ನು ಸಿಂಗರಿಸಿ, ಸಂತೋಷದಿಂದ ಕಳಿಸಿಕೊಡಿ ಎಂದು ಬೇಡಿ, ಸಕಲ ಸಿಂಗಾರಗೊಂಡು, ಹೋಗುವ ವೇಳೆಗೆ ಬಂಗಾರವ್ವ ತನ್ನ ತುಟಿ ಕಚ್ಚಿಕೊಂಡು, ರಕ್ತಬರಿಸಿ, ಮದಕರಿಯ ಹಣೆಗೆ ಮುತ್ತಿಟ್ಟು, ರಕ್ತಮುದ್ರೆ ಕೊಟ್ಟು ಕಳಿಸುತ್ತಾಳೆ. ಅವ ಹೋದ ಬಳಿಕ ಅಕ್ಕ ತಂಗಿಯರಿಬ್ಬರೂ, ಮದುವಣಗಿತ್ತಿಯರ ಹಾಗೆ ತಯಾರಾಗಿ, ಇಬ್ಬರೂ ಒಬ್ಬೊರನ್ನೊಬ್ಬರು ತಬ್ಬಿ, ಹೊಂಡಕ್ಕೆ ಹಾರುತ್ತಾರೆ. ಕಡೂರಿ ಮತ್ತು ನಾಗವ್ವ ವಿಷ ಸೇವಿಸಿ ಸಾಯುತ್ತಾರೆ. ಒಂದೊಂದು ಸಾಲು ಓದುವಾಗಲೂ ಮನಸ್ಸು ’ಅಯ್ಯೋ, ಅಯ್ಯೋ’ ಅನ್ನುತ್ತಾ, ಮೈ ರೋಮಾಂಚನವಾಗುತ್ತದೆ.

ಇತ್ತ ವಿಷ್ಯ ತಿಳಿದ ಮದಕರಿ, ಅಶ್ವದ ಮೇಲೆ ಕುಳಿತು ಹೋರಾಡುತ್ತ, ಅಶ್ವ ಸತ್ತು ಬಿದ್ದಾಗಲೂ, ಕೆಳಗಿಳಿದು ಯುದ್ಧಮಾಡುತ್ತಾ, ಹೈದರನ ಸೈನಿಕರ ಗುಂಡಿನ ಧಾಳಿಗೆ ಬಲಿಯಾಗಿ, ನೆಲಕ್ಕುರುಳುತ್ತಾನೆ. ’ಅವ್ವಾ’...., ಎನ್ನುತ್ತ ದುರ್ಗದ ಭೂಮಿಯನ್ನು ಮುತ್ತಿಟ್ಟು ಕೊನೆಯುಸಿರಿರೆಳೆಯುತ್ತಾನೆ.

***

೬೫೯ ಪುಟಗಳ ಈ ಬ್ರುಹತ್ ಕಾದಂಬರಿ ಓದಿ ಮುಗಿಸೋ ವೇಳೆಗೆ ನನಗೂ ಸಹ ಮದಕರಿಯ ಬಗ್ಗೆ ಹೆಮ್ಮೆ ಅನ್ನಿಸೋಕೆ ಶುರುವಾಗಿಬಿಟ್ಟಿತು. ಅಷ್ಟರ ಮಟ್ಟಿಗೆ ಕಾಡುತ್ತೆ ಈ ಪುಸ್ತಕ. ಯಾಕಿಷ್ಟು ತಡ ಮಾಡಿ ಓದಿದೆ ಅನಿಸಿದ್ರೂ, ಸಧ್ಯ ಓದಿದ್ನಲ್ಲ ಅಂತ ಸಮಾಧಾನದಲ್ಲಿ ಪುಟ ತಿರುವುತ್ತೇನೆ.

PC: GOOGLE

1 ಕಾಮೆಂಟ್‌:

Unknown ಹೇಳಿದರು...

ದುರ್ಗಾಸ್ತಮಾನ ಓದಿದೆ......
ಸರಳವಾದ ಶಬ್ಧಗಳಲ್ಲಿ ಸುಂದರವಾಗಿ ಬಣ್ಣಿಸಿದ್ದಿರಿ...
ತುಂಬಾ ಇಷ್ಟ ಆಯಿತು...