ಬುಧವಾರ, ಜುಲೈ 15, 2015

ಕ್ಯಾಂಡಿ ಕ್ರಶ್ ಎಂಬ ಮಾಯಾಸಾಗ!

ಕ್ಯಾಂಡಿ ಕ್ರಶ್! ಈ ಆಟದ ಬಗ್ಗೆ ತುಂಬಾ ಜನ ಮಾತಾಡ್ತಾ ಇದ್ರೂ ನಾನು ಆಕಡೆ ತಲೆ ಹಾಕಿರಲಿಲ್ಲ. ಯಾಕೋ ಏನೋ, ಯಾವಾಗ್ಲು ಅದನ್ನ ಆಡಬೇಕು ಅಂತ ನಂಗೆ ಅನಿಸಿರಲೇ ಇಲ್ಲ. ಅದೇನಾಯಿತೋ ಗೊತ್ತಿಲ್ಲ. ನನ್ನ ಯಜಮಾನರು ಹೊಸಾ ಫೋನ್ ಕೊಂಡಿದ್ದೇ, ತಾನು ’ಕ್ಯಾಂಡಿ ಕ್ರಶ್’ ಡೌನ್ಲೋಡ್ ಮಾಡಿದ್ದೇನೆ ಎಂದು ಹೇಳಿದ್ದು ನನ್ನ ತಲೆಯಲ್ಲಿ, ’ನನ್ನ ಮೊಬೈಲ್ನಲ್ಲೂ ಈ ಆಟ ಇದ್ದರೆ ಹೇಗೆ’? ಎಂಬ ಆಲೋಚನೆಯ ಹುಳವನ್ನ ನಾನೇ ಬಿಟ್ಟುಕೊಂಡು, ಆಮೇಲೆ ಈ ಹುಳದ ಕಾಟ ತಾಳಲಾರದೆ ಡೌನ್ಲೋಡ್ ಮಾಡಿದೆ ನೋಡಿ, ಅಲ್ಲೇ ಎಲ್ಲವೂ ಶುರುವಾಗಿದ್ದು.

ಮೇಲ್ನೋಟಕ್ಕೆ ಸುಲಭಕ್ಕೆ ತುದಿಗಾಣದ ಹಾವಿನಂತೆ ಕಾಣುವ ಈ ಆಟ, ನಾವು ಒಂದೊಂದೇ ಲೆವಲ್ ದಾಟುತ್ತಿದ್ದಂತೆ ತುದಿಗೆ ಹತ್ತಿರವಾಗುತ್ತಾ ಸಾಗುತ್ತೇವೆ. ನಮ್ಮ ಫ಼ೇಸ್ಬುಕ್ ಸ್ನೇಹಿತರು ಯಾರ್ಯಾರು ಎಲ್ಲೆಲ್ಲಿದ್ದಾರೆ, ಯಾವ ಲೆವಲ್ ಮುಗಿಸಿ, ಯಾವ ಲೆವಲ್ನಲ್ಲಿ ಆಟ ಆಡುತ್ತಿದ್ದಾರೆ ಎಂಬುದನ್ನೂ ತೋರಿಸಿ, ನೀನೊಬ್ಬಳೇ ಅಲ್ಲ, ಇಡೀ ಜಗತ್ತೇ ಈ ಆಟ ಆಡ್ತಾ ಇದೆ, ನೀನೇ ಸ್ಲೋ ಅಂತನೂ ತೋರಿಸಿಕೊಡುತ್ತದೆ. ಎಷ್ಟೆಷ್ಟೋ ಲೆವಲ್ಗಳನ್ನು ದಾಟಿ ಮುಂದೆ ಹೋದವರು ನನಗೆ ನಮ್ಮ ಹಿರೀಕರಂತೆ ಭಾಸವಾಗುತ್ತಾರೆ. ಹಿರೀಕರು ಎಂದರೆ ನಮಗಿಂತ ಹೆಚ್ಚು ಅನುಭವ ಉಳ್ಳವರು ಎಂದಲ್ಲವೇ? ಇಲ್ಲು ಅದೇ ಲಾಜಿಕ್ಕು. ಆದರೆ ಇಲ್ಲಿ ಆಟ, ಅಲ್ಲಿ ಜೀವನ.  

ನಿಮಗೀ ಆಟ ಶುರು ಮಾಡಿದ ಕೂಡಲೇ ಐದು ಜೀವ ದೊರಕುತ್ತದೆ. ಹಾಂ! ಅದೇ... ಪಂಚಪ್ರಾಣ! ಈ ಪ್ರಾಣ ಮುಗಿಯೋವರೆಗೂ ನೀವು ಆಡುತ್ತಲೇ ಇರಬಹುದು. ನಿಮ್ಮ ಜೀವಗಳು ಮುಗಿದ ಕೂಡಲೇ, ಆಟವೇ ನಿಮ್ಮ ಸ್ನೇಹಿತರಲ್ಲಿ ಜೀವಭಿಕ್ಷೆ ಬೇಡಿಕೋ ಎಂದು ಹೇಳುತ್ತದೆ. ಆಗ, ನೀವೇನಾದರೂ, "ಸರಿ" ಎಂದು ಬಟ್ಟನ್ ಒತ್ತಿದಿರೋ, ನಿಮ್ಮ ಫ಼ೇಸ್ಬುಕ್ ಸ್ನೇಹವಲಯದ ಎಲ್ಲರಿಗೂ, ನಿಮ್ಮ ಜೀವ ಭಿಕ್ಷೆಯ ಕೋರಿಕೆಗಳು ವೈರಸ್ನಂತೆ ಸಂಚರಿಸಿಬಿಡುತ್ತವೆ. ಈ ಆಟಕ್ಕಿನ್ನೂ ಮರುಳಾಗದವರಿಗೇನಾದರೂ ನಿಮ್ಮ ಅಹವಾಲು ಹೋಯಿತೋ, ಮರುದಿನ ಅವರ ಯೆಫ಼್ಬಿ ಸ್ಟೇಟಸ್, "ನಾನು ಯಾವ ಆಟವನ್ನು ಆಡುವುದಿಲ್ಲ. ದಯವಿಟ್ಟು ನನ್ನ ಬಿಟ್ಟುಬಿಡಿ" ಎಂದಿದ್ದರೂ ಆಶ್ಚರ್ಯವಿಲ್ಲ. ಆಟದ ಸುಖ-ದುಃಖ ತಿಳಿದವರ್ಯಾರಾರು ಜೀವದಾನ ಮಾಡಿದರೆ ನೀವು ಇನ್ನೊಂದು ಆಟ ಆಡೇ ಬಿಡಬಹುದು. ಇಲ್ಲದಿದ್ದರೆ ಮತ್ತೆ ಅರ್ಧ ಗಂಟೆಯೋ, ಒಂದು ಗಂಟೆಯೋ ಕಾಯಬೇಕಾಗುವುದು. 

ನೇರಾವಾಗಿ, ಅಥ್ವ ಅಡ್ಡವಾಗಿ, ಮೂರು, ನಾಲ್ಕು, ಐದು ಒಂದೇ ಬಣ್ಣದ ಕ್ಯಾಂಡಿಗಳನ್ನು ಸೇರಿಸಬೇಕು. ಮೂರು ಸೇರಿಸಿದರೆ "ಗುಡ್" ಅಂದರೆ ನೀವು ಒಂದು ’ಮೂವ್’ ಕಳೆದುಕೊಂಡು, ಅಲ್ಲಿರುವ ಜಲ್ಲಿಯನ್ನು ಒಡೆಯುವಿರಿ. ನಾಲ್ಕು ಸೇರಿಸಿದರೆ, "ಬೆಟರ್" ಅಂದರೆ ಇದರಿಂದ ಒಂದಿಡೀ ಸಾಲಿನಲ್ಲಿರುವ ಜಲ್ಲಿಯನ್ನು ನೀವು ಸಲೀಸಾಗಿ ಒಡೆಯುವಿರಿ. ಒಂದು ’ಮೂವ್’ ಕಳೆದುಕೊಂಡು, ಬಹಳ ಲಾಭ ಮಾಡುವಿರಿ. ಇನ್ನು ಈ ತರಹದ ಎರಡು ಬಿಲ್ಲೆಗಳನ್ನು ಮಾಡಿ, ಒಂದಕ್ಕೊಂದು ಹೊಡಿಸಿದಿರೋ, ಎರಡು ಸಾಲುಗಳನ್ನು ಒಟ್ಟಿಗೇ ಒಡೆದುಬಿಡಬಹುದು, ಅಡ್ಡಡ್ಡ ಸೇರಿಸಿದರೆ ಆರು ಸಾಲು, ಅಡ್ಡ-ಉದ್ದ ಸೇರಿಸಿದರೆ ಎರಡು ಸಾಲು ಹೀಗೆ. ಇನ್ನು ಒಂದೇ ಬಣ್ಣದ ಐದು ಕ್ಯಾಂಡಿಗಳನ್ನು ಸೇರಿಸುವುದು, ದ "ಬೆಸ್ಟ್". ಇದು ಒಂದು ಬಾಂಬಿನಂತೆ ಕೆಲಸ ಮಾಡುತ್ತದೆ. ಇದಕ್ಕೇನಾದರೂ ನೀವು, "ಬೆಟರ್" ಎಂದಿದ್ದೆನಲ್ಲ, ಆತರಹದ ಬಿಲ್ಲೆಗೆ ತಾಗಿಸಿದಿರೋ,  ಬಂಪರ್ ಲಾಟರಿ ಬಂದಹಾಗೇ ಲೆಕ್ಕ! ನಿಮ್ಮ ಅಷ್ಟೂ ಜಲ್ಲಿ ನಿರ್ಣಾಮವಾಗಿ, ನೀವು ಲೆವಲ್ ದಾಟುವುದರಲ್ಲಿ ಯಾವುದೇ ಶಂಕ್ಯೆಯೇ ಇಲ್ಲ! ಇನ್ನುಳಿದಂತೆ ನೀವು ಹೇಗೆ ಆಟ ಬೇಗನೇ ಮುಗಿಸುತ್ತೀರೋ ಹಾಗೆ ನಿಮಗೆ ಆಟವನ್ನು ವೇಗವಾಗಿಸೋ ಅವಾರ್ಡುಗಳು ಬರುತ್ತಾ ಹೋಗುತ್ತವೆ. 

ನಾನೇನೋ ಸುಮ್ಮನೆ ನೋಡೋಣ ಎಂದು ಶುರು ಮಾಡಿದ ಆಟ ಆಮೇಲಾಮೇಲೆ ಒಂಥರ ನಶೆ ಏರತೊಡಗಿದಂತಾಗಿಹೋಯಿತು. ಸ್ವಲ್ಪ ಸಮಯ ಪುರುಸೊತ್ತು ಸಿಕ್ಕಾಗ ಹಿಡಿಯುತ್ತಿದ್ದ ಮೊಬೈಲನ್ನ, ಈಗ ಸಮಯ ಮಾಡಿಕೊಂಡು, ಹೊಂದಿಸಿಕೊಂಡು, ಅಥ್ವ ಯಾವುದೋ ಕೆಲ್ಸ ಮುಂದೂಡಿಕೊಂಡು ’ಆಟವನ್ನೇ ಆಡುತ್ತಿರುವ’ ಅನ್ನುವ ಮಟ್ಟಿಗೆ ಲೈಟಾಗಿ ಹಾಳಗಿ ಹೋದೆ. ಊಟ ಮಾಡುವಾಗಲೂ ಇದನ್ನೇ ಆಟ ಆಡುತ್ತಿರೋದನ್ನ ಕಂಡು ಅಮ್ಮ ಉಗಿದಿದ್ದೂ ಆಯಿತು. ಆದರೂ ನನಗೆ ಮಾತ್ರ ಆಡೋದನ್ನ ನಿಲ್ಸೋಕೆ ಆಗಲೇ ಇಲ್ಲ. ಯಾವಾಗಲೂ ನಾನು ಏನಾದ್ರು ಸುದ್ದಿನೋ/ಕಥೆನೋ ನಮ್ಮೆಜಮಾನ್ರಿಗೆ ಹೇಳಿ ಮುಗಿದ ಬಳಿಕ, ’ನಾ ಎನ್ ಹೇಳ್ದೆ ಹೇಳಿ’ ಅನ್ನೋ ವಾಡಿಕೆ, ಈಗ ಉಲ್ಟ, ಇದೇ ಪ್ರಶ್ನೆ ನನ್ ಯಜ್ಮಾನ್ರು ಕೇಳೋ ಹಾಗಾಗೋಯ್ತು.(ನೋಡಿ ಕಾಲ ಹೇಗೆಲ್ಲಾ ಆಟಾಡಿಸುತ್ತೆ). ಆಡಿದ್ದೇ ಆಟ ಆಡೀ-ಆಡೀ ಅಮೇಲೆ ಸಮಯ ಬರಿದೇ ನಷ್ಟ ಆಗುವಾಗ, ಕಪಾಟಿನೊಳಗಿನ ಪುಸ್ತಕ, ಸಿನೆಮ ಸೀಡಿ ನೋಡ್ತಾ ಇಣುಕು ನೋಟ. ಪುಸ್ತಕದ ಮೇಲೆ ಆಸೆ, ಆಟದ ಮೇಲೆ ಪ್ರೀತಿ!

ಹೀಗೇ ನಡಿತಾ ಒಂದೆರಡು ತಿಂಗಳು ಸರಿದವು. ಇನ್ನೊಂದ್ ವಿಷ್ಯ ಏನು ಅಂದರೆ, ಜೀವ ಮುಗಿದ ಕೂಡಲೇ, ನಾವು ಸ್ನೇಹಿತರಿಗೆ ಜೀವದಾನದ ವಿನಂತಿ ಕಳಿಸಿದರೆ, ತಕ್ಷಣ ಜೀವ ಕೊಡೋದಕ್ಕೆ ಅವರಿಗೆಲ್ಲ ಪುರುಸೊತ್ತಿರುವುದಿಲ್ಲ, ಅಥ್ವ ಕೊಡೋಕೇ ಮನಸಿರುವುದಿಲ್ಲ. ಜೀವ ಬರುವವರೆಗೂ ಆಡುವ ಹಾಗಿಲ್ಲ. ಅದಕ್ಕೇನು ಮಾಡಬಹುದು? ಎಂದು ಸುಮಾರು ತಲೆಕೆಡಿಸಿಕೊಂಡು ಗೂಗಲ್ ಮೊರೆ ಹೋಗ್ ನೋಡ್ತೀನಿ, ಅಲ್ಲಿ ನೂರಾರು ವಿಡಿಯೋಗಳು, ಸಲಹೆಗಳು! ಉಪಾಯ ಏನು ಅಂದರೆ, ನಮ್ಮ ಮೊಬೈಲ್ನಲ್ಲಿ ಸಮಯವನ್ನ ಮೂರು ತಾಸಿಗೆ ಮುಂದೂಡುವುದು. ಅಲ್ಲಿಗೆ ನನಗಿದ್ದ ಸಣ್ಣ ತೊಡಕೂ ಮಾಯವಾಗಿ ಎಲ್ಲವೂ ಸುಗಮ, ಸರಳ! ಇದೇ ಪ್ರಯೋಗ ಇನ್ನೂರನೇ ಲೆವಲ್ವರೆಗೂ ಯಾವುದೇ ಅಡೆತಡೆಗಳಿಲ್ಲದೇ ಸಾಗಿತು.

ಒಂದು ಮಾತು ನಿಜ ನೋಡಿ, ಯಾರು ಏನೇ ಬೈಯಲಿ, ಬುದ್ದಿ ಹೇಳಲಿ, ನಮಗೇ ಏನೋ ಒಂದು ಅನ್ನಿಸೋವರೆಗೂ ಅವರ್ಯಾವ್ ಮಾತೂ ತಲೆ ಒಳಗೆ ಹೋಗುವುದೇ ಇಲ್ಲ! ಇನ್ನೂರನೇ ಲೆವಲ್ಗೆ ಹೋಗಿದ್ದೇ, ಯಾಕೆ ಈ ಆಟ, ಏನುಪಯೋಗ? ಎಂಬೆಲ್ಲಾ ಪ್ರಶ್ನೆಗಳು ತಲೆಕೊರೆಯ ತೊಡಗಿದವು. ಕಪಾಟಿನೊಳಗಿರುವ ಪುಸ್ತಕಗಳು, ಅರ್ಧ ಬಿಟ್ಟ ಪೈಂಟಿಂಗಳು ಎಲ್ಲಾ ನನ್ನೆದುರಿಗೆ ಒಟ್ಟೊಟ್ಟಿಗೆ ಯಕ್ಷಗಾನ, ಭರತನಾಟ್ಯ ಮಾಡತೊಡಗಿದವು. ಗಡಿಯಾರ ಹಿನ್ನೆಲೆ ಧ್ವನಿಯಾಯಿತು. ’ನೀನು ಹೀಗೇ ನಮ್ಮನ್ನು ಕಡೆಗಣಿಸಿದರೆ ಈ ಕ್ಷಣವೇ ನಿನ್ನ ಮನೆಯಿಂದ ಹೋಗುತ್ತೇವೆ. ಯಾರಿಂದ ಒಂದು ಪೈಸೆ ಉಪಯೋಗವಿಲ್ಲವೋ, ಅಂಥವರನ್ನು ಮಾತ್ರ ಪೋಷಿಸುವ ಜಾಗದಲ್ಲಿ ಖಂಡಿತಾ ನಾವಿರುವುದಿಲ್ಲ’ ಎಂದೆಲ್ಲ ಅಂದಂತೆ ಭ್ರಮೆಯಲ್ಲೂ, ಜ್ನಾನೋದಯವಾಯಿತು. ಅವರನ್ನೆಲ್ಲ ಅಲ್ಲೆ ತಡೆದುನಿಲ್ಲಿಸಿ, ಅವರೆದುರಿಗೇ "ಕ್ಯಾಂಡೀ ಕ್ರಶ್" ಎಂಬ ಮರೀಚಿಕಯನ್ನು ಕಸದ ಬುಟ್ಟಿಗೆ ಸೇರಿಸಿದೆ. ತಡೆದು ನಿಂತವರು, ನನ್ನ ಕೆನ್ನೆ ಸವರಿ, ಮುಗುಳ್ನಗೆ ಬೀರಿ ತಮ್ಮ ತಮ್ಮ ಸ್ಥಾನಕ್ಕೆ ತೆರಳಿದವು.


ಯಜ್ಮಾನ್ರು ಆಪಿಸ್ ಮುಗಿಸಿ ಮನೆಗೆ ಬಂದರು. ಬಹಳ ದಿನಗಳ ಮೇಲೆ ಮನೆಯಲ್ಲಿ ಬೋಂಡ, ಜಾಮೂನು. ಮೊದಲೇ ಹಸಿವೆಯಾಗಿದ್ದ ಯಜಮಾನರು, ಬೋಂಡ ಕರಿದು ತಟ್ಟೆಗೆ ಹಾಕುತ್ತಿದ್ದಂತೆ, ತಿನ್ನುತ್ತಾ ಬಂದರು. ಕಾಫಿ ಮಾಡಿಕೊಂಡು, ಅವರಿಗೊಂದು ಕಪ್ಪು ಕೊಟ್ಟು ಬಾಯಿಗೆ ಇಡುತ್ತೇನೆ. ಇವರು, "ಹೇ, ಕ್ಯಾಂಡಿ ಕ್ರಶ್ ನಂದು ಇವತ್ತು ನೂರನೇ ಲೆವಲ್ ಕ್ಲಿಯರ್ ಆಯಿತು, ನಿಂದು?" ಎಂದು ಖುಶಿಯಿಂದ ಕೇಳಲು, ಗೋಡೆಯಲ್ಲಿ ನೇತು ಹಾಕಿದ ಗಡಿಯಾರ, ಕಪಾಟಿನೊಳಗಿನ ಪುಸ್ತಕಗಳು ನನ್ನನ್ನೇ ನೋಡುತ್ತಿದ್ದಂತೆ ಭಾಸವಾಯಿತು! 

3 ಕಾಮೆಂಟ್‌ಗಳು:

Parisarapremi ಹೇಳಿದರು...

Nandu 381 levels aaytu.. 382nd level alli taglaakkond ideeni.. :P

ಮೌನರಾಗ ಹೇಳಿದರು...

ಅಯ್ಯೋ..! ಮುದ್ದು ಮುದ್ದು ಬರಹ.. ಮೊದಲ ಎರಡು ಪಾರ ಓದುತ್ತಿದ್ದಂತೆಯೇ ಈಗಿಂದ ಈಗ್ಲೇ ಕ್ಯಾಂಡಿಕ್ರಶ್‌ ಡೌನ್‌ಲೋಡ್ ಮಾಡಿಯೇ ತೀರುವೇನು ಅನ್ನುವಷ್ಟು ಉತ್ತುಂಗಕ್ಕೆ ಏರಿದ್ದ ಆಸೆ, ಕೊನೆಯ ಪಾರಾದ ಮೂಲಕ ಇಳಿದು ಸುಖಾಂತವಾಯಿತು...ಆಸೆ ಮೂಡಿಸಿ ಜರ್‍ರನೇ ಇಳಿಸಿದ್ರಿ...   ಹೆಂಡತಿ ಇನ್ನೂರು ದಾಟಿ ಸಹವಾಸ ಬೇಡಾಂತ ಬಿಟ್ಟಾಗ ಯಜಮಾನರು ೧೦೦ಕ್ಕೆ ಬಂದು ತಲುಪಿದ್ದು ಹೆಂಡತಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿ.. ಹೆಂಡತಿಯರಿಗೆ ಜೈ..! ಅಂತೂ ಬ್ಲಾಗೂಲೂ ಕ್ಯಾಂಡಿಕ್ರಶ್ ನೋಡಿದ ಹಾಗಾಗಿದ್ದು ನಮ್ಮ ಪುಣ್ಯ..   ಜೈ ಕ್ಯಾಂಡಿಕ್ರಶಮ್ಮ.

sunaath ಹೇಳಿದರು...

ಕ್ಯಾಂಡಿ ಕ್ರಶ್ addiction ಆಗುವ ಬಗೆಗೆ, ಫೇಸ್‍ಬುಕ್‍ನವರು ಆಟಗಾರರನ್ನು ಉತ್ತೇಜಿಸುವ ಬಗೆಗೆ ತುಂಬ ಚೆನ್ನಾಗಿ ಬರೆದಿದ್ದೀರಿ. ಕೊನೆಯಲ್ಲಿ ನಿಮ್ಮ ಯಜಮಾನರು, "ನನ್ನದು ನೂರನೇ ಲೆವಲ್.." ಎಂದು ಹೇಳುವುದು punch line!