ಶನಿವಾರ, ಮೇ 31, 2014

ಕಪಾಟಿನೊಳಗಿನ ಪುಸ್ತಕ

ಕಹಾನಿ ಚಿತ್ರದ ನಟಿಯಂತೆ
ನನಗೂ ಧೂಳು ಕಂಡರಾಗದು.
ಹಲವು ಬಾರಿ ಧೂಳ ಕೆಡವಲು
ಆ ಪುಸ್ತಕವನ್ನು ಮುಟ್ಟಿದ್ದಿದೆ
ಊಹುಂ! ಎಂದೂ ಪುಟ ತಿರುವಿ
ಓದಿಯೇ ಇರಲಿಲ್ಲ!
ಅದರ ಮುಖಪುಟ ವಿನ್ಯಾಸಕ್ಕೆ
ಮನಮುದಗೊಂಡರೂ,
ಓದಬೇಕು ಎನಿಸಿದ್ದು,
ತೀರಾ ಇತ್ತೀಚೆಗೆ

****************
ಭಾನುವಾರದ ಒಂದು ಸಂಜೆ
ಮದ್ಯಾಹ್ನದ ನಿದ್ದೆ ಮುಗಿಸಿ,
ಕಾಪಿ-ಚೂಡಾದ ಶಾಸ್ತ್ರದ ಬಳಿಕ
ಕಾಲಮೇಲೆ ಕಾಲು ಹಾಕಿ
ಕುಳಿತುಕೊಂಡೆ ಓದಲು.

ಅಲ್ಲೆ ಬಂದರು ನೋಡಿ
ನೆನಪುಗಳ ಬುತ್ತಿ ಹೊತ್ತ
ದಾರಿಹೋಕರು!
ಪುಟಗಳೀಗ ಒದ್ದೆ ಒದ್ದೆ
ಮೊದಲ ಮಳೆ ಬಿದ್ದ ಇಳೆಯ ಹಾಗೆ!
ನಾನೀಗ ಬೇರೆ ಲೋಕಕ್ಕೆ
ಕಾಲಿಟ್ಟಾಗಿದೆ.
ಆ ಲೋಕದವರ ಖುಷಿ, ದುಃಖ, ನೋವು
ನನ್ನವೂ ಈಗ.
ಒಂದೊಂದೇ ಅಕ್ಷರಗಳು
ಮಸ್ಥಿಷ್ಕದೊಳಗಿಳಿದಂತೇ
ಅದ್ಬುತ ಪುಳಕಾನುಭೂತಿ ನನಗೀಗ!
ಇಲ್ಲ, ಇದು ಓದಿ ಮುಗಿಯಬಾರದು
ಅನ್ನುವಾಗಲೇ ಮುಗಿದೇ ಹೋಗಿದೆ.
ನಾಯಕ, ನಾಯಕಿ, ಉಳಿದವರೆಲ್ಲರೂ
ಸೇರಿಕೊಂಡರು ಮನದ ಮೂಲೆಯಲ್ಲೆಲ್ಲೋ!

************
ಮತ್ತೆ ಹೊರಬಂದಿದ್ದೇನೆ
ನನ್ನದೇ ಆದ ಲೋಕಕ್ಕೆ,
ಕೊನೆಯ ಪುಟವೇನೋ ತಿರುಗಿಸಿಯಾಯಿತು
ಸುಪ್ತ ಮನಸೇಕೋ ಇದೀಗ
ಜಾಗ್ರತಗೊಂಡಂತಿದೆ.
ಕನಸಲೂ ಬಂದು ಕಾಡಲು
ಶುರುವಾಗಿದೆ!
ಅವ ಹೇಳುತ್ತಾನೆ,
ಕನಸಲ್ಲೂ ಬಂದರೆ
ಮನಕ್ಕೆ ನಾಟಿದೆ ಅಂತ.
ಇದ್ದರೂ ಇರಬಹುದು.
ಆ ಪುಸ್ತಕವನ್ನು ಮತ್ತೆ ಕಪಾಟಿನಲ್ಲಿ
ಇರಿಸುತ್ತೇನೆ!
ಓದಿ ಮುಗಿಸಿದ ಆನಂದ
ಕಣ್ಣೀರಿನ ಪುಟಗಳನ್ನು ಮೀರಿಸಿ
ವಿಜಯದನಗುವಿನೊಂದಿಗೆ
ಪುಸ್ತಕಗಳ ಗುಂಪಿನಲ್ಲಿ
ಕಳೆದುಹೋಗಿದೆ!