ಶನಿವಾರ, ಅಕ್ಟೋಬರ್ 19, 2013

ವೀಕೆಂಡು!!..

ವೀಕೆಂಡು! ಅದರಲ್ಲಿ  ಏನಿದೆ ಅಂದಿರಾ?
ಇದೆ ಎಂದರೆ ಇದೆ, ಇಲ್ಲಾ ಅಂದರೆ ಇಲ್ಲ.
ಮತ್ತದೇ ಅದೇ ನೆಲವನ್ನ ಗುಡಿಸಿ,
ಫಿನಾಯ್ಲ್ ಸೇರಿಸಿದ ನೀರಿಗೆ,
ಅದ್ದಿ ಅದ್ದಿ ಬಟ್ಟೆ, ನೆಲ ಒರೆಸುವುದು.
ಅಡಿಗೆ ಮನೆಯನ್ನ ಸ್ವಚ್ಹ ಮಾಡು.
ಸಿಂಕನ್ನು ತಿಕ್ಕಿ ತಿಕ್ಕಿ, ತೊಳತೊಳೆದು,
ಮುಖ ಕಾಣಿಸಿಕೊಳ್ಳುವುದು.
ಲೀಟರ್ ಎಣ್ಣೆ ತಲೆಗೆ ಸುರಿದು,
ಘಂಟೆಗಟ್ಟಲೆ ಸ್ನಾನ ಮಾಡುವುದು.
ಅರ್ಧ ಬಿಡಿಸಿದ ಚಿತ್ರ,
ಅರ್ಧಕ್ಕೇ ಬಿಟ್ಟ ಪುಸ್ತಕ,
ಧೂಳಾಗಿರುವ ಟೀವಿ ಪರದೆ,
ಎಲ್ಲವೂ ನಿನಗಾಗೇ ಕಾಯುತ್ತಿರುವವು.
ಅಲ್ಲೆಲ್ಲೋ ಒಂದು ನಿರೀಕ್ಷೆ ಇದೆ,
ವೀಕೆಂಡಲ್ಲಾದರೂ ಸಿಗಬಹುದೇ, ಒಳ್ಳೇ ಊಟ?
ಬಟ್ಟೆಗಳಿಗೋ ರಾಶಿ ಬೀಳುವ ಚಾಳಿ.
ರಾಶಿ ಬಿದ್ದಿರುವುದನ್ನ ವಪ್ಪ ಮಾಡಿ
ತೊಳೆದು ಇಸ್ತ್ರಿ ಮಾಡಬೇಡವೇ?
ತೆಗೆದು ನೋಡಿದರೆ ಸಾಂಬಾರ್ ಡಬ್ಬಿ,
ಖಾಲೀ ಕಾಣುತ್ತಿರುವ ಕುಳಿಗಳು,
ಸಾಸಿವೆ, ಉದ್ದಿನಬೇಳೆ, ಅರಿಶಿನ.
ತುಂಬಿಸಬೇಡವೇ ಖಾಲಿಯನ್ನು?
ಹಿಗ್ಗಬೇಡವೇ ಮನ ತುಂಬಿದ್ದನ್ನು ಕಂಡು?

ಗೋಲಗಪ್ಪ ಅಂಗಡಿಯವ ನೋಡಿ ನಗುತ್ತಾನೆ,
ಇರಬಹುದೇ, ಇವರು ಬಿಡು ವೀಕೆಂಡ್-
ಗಿರಾಕಿ ಎಂಬ ತಾತ್ಸಾರ, ಅಥವ ಕನಿಕರ?
ತುಂಬಿಸಲು ಖಾಲಿಯನ್ನು,
ಹೋಗಿ ಮಾರುಕಟ್ಟೆಗೆ, ಪರಿಶೀಲಿಸಿ,
ಅಳೆದು ಸುರಿದು, ಚೀಲ ತುಂಬಿ
ತಂದ ಸಾಮಾನುಗಳು.
ತಂದ ಸಾಮಾನು, ಕಾಳು-ಬೇಳೆ
ತರಕಾರಿಯನ್ನು ಜೋಡಿಸಿಟ್ಟಿದ್ದೇ,
ಹೊರಟಿದ್ದು ಹೊರಗೆ ನಿಟ್ಟುಸಿರು.
ಎಲ್ಲೋ ಕೇಳಿದ ನಾಟಕ,
ಎಲ್ಲೋ ಓದಿದ ಚಿತ್ರವಿಮರ್ಶೆ,
ಎಲ್ಲವೂ ಕಣ್ಣೆದುರಿಗೆ ಬಂದು ನಿಲ್ಲುವುದು,
ಈ ವೀಕೆಂಡಿಗೆ!

ಬೆಳಗ್ಗೆ ಮುಂಚೆ ಏಳಬೇಕೆಂಬುದಿಲ್ಲ,
ತಯಾರಾಗಿ ಒಡಬೇಕೆಂಬುದಿಲ್ಲ.
ನನಗೂ ಸಮಯ ಬೇಕು,
ನಾ ಇಷ್ಟ ಪಡುವುದನ್ನ ಮಾಡಲು,
ಸೋಮಾರಿಯಾಗಿ ಕಾಲ ಕಳೆಯಲು.
ಅವನ ಜೊತೆ ಹರಟಲು.
ಅದಕ್ಕೆಂದೇ ನಾನು ವೀಕೆಂಡಿಗಾಗಿ ಕಾಯುವೆ,
ಪ್ರತೀ ಬಾರಿ ಬಂದು ಹೋದಮೇಲೂ,
ವರುಣನಿಗಾಗಿ ಕಾಯುವ ಭೂಮಿಯ ಹಾಗೆ!
ಸಖನಿಗಾಗಿ ಕಾಯುವ ಸಖಿಯ ಹಾಗೆ!!