ಶನಿವಾರ, ಫೆಬ್ರವರಿ 09, 2013

ಹಕ್ಕಿ ಮತ್ತು ಜೀವ

ಸ್ವಚ್ಛ ಬಿಳಿ ಹಾಳೆಯ ಮೇಲೆ
ಶುರುವಿಟ್ಟೆ ಬರೆಯಲೊಂದು ಚಿತ್ರ
ಬರೆಯುತ್ತಾ ಬಿಡಿಸುತ್ತಾ
ಆಮೇಲೆ ಅರಿವಿಗೆ ಬಂದಿದ್ದು
ನಾನು ಕೇವಲ ಬಿಡಿಸುತ್ತಿಲ್ಲ
ಯಾವುದೋ ಕಲ್ಪನಾ ಲೋಕಕ್ಕೆ
ಹೋಗುತ್ತಿದ್ದೇನೆ ಎಂದು.


ಹಕ್ಕಿಗೆ ರೆಕ್ಕೆ,
ಸುಂದರ ಪುಕ್ಕ,
ಅದಕ್ಕೊಂದು ಕೊಕ್ಕು,
ಅದರ ಮಧ್ಯದಲ್ಲೊಂದು
ಮೀನು.
ಆ ಮೀನು ಈಗ
ಹಕ್ಕಿಗೆ ಆಹಾರ.
ಸುತ್ತಲೂ ಹಸಿರು,
ಹಕ್ಕಿ ನದಿಯ ದಡದಲ್ಲಿ.

ಆ ಚಿತ್ರದಲ್ಲಿರುವ
ಹಕ್ಕಿಗೆ ಎಂದೂ
ಮುಪ್ಪಾಗುವುದೇ ಇಲ್ಲ.
ಆ ಮೀನು ಎಂದೂ
ಅದರ ಹೊಟ್ಟೆಗೆ
ಹೋಗುವುದೇ ಇಲ್ಲ.
ಎಲೆ, ಗಿಡ, ಮರಗಳು
ಹಸಿರಾಗೇ ಇರುತ್ತವೆ.

ನಿಂತಿದೆ ಕಾಲಚಕ್ರ
ಸ್ಥಬ್ಧವಾಗಿ.
ಚಿತ್ರ ಬಿಡಿಸಿ
ಮುಗಿದ ಮೇಲೆ ಯೋಚಿಸುತ್ತೇನೆ,
ಇಷ್ಟು ಸುಂದರ
ಹಕ್ಕಿಗೆ ಜೀವ
ಬರುವ ಹಾಗಿದ್ದರೆ?
ಮತ್ತೆ ಹಾಗೆ,
ಎಲ್ಲ ಚಿತ್ರಗಳಿಗೂ
ಜೀವ ಬರುವ ಹಾಗಿದ್ದರೆ?
ಬಿಡಿಸಿಟ್ಟ ಚಿತ್ರಕ್ಕೆ
ಅವನು ಚೆನ್ನಾಗಿದೆ
ಅನ್ನುತ್ತಾನೆ.
ಚಿತ್ರಕ್ಕೆ ಜೀವ ಬಂದು
ಹಕ್ಕಿ ರೆಕ್ಕೆಬಿಚ್ಚಿ
ಹಾರಿದ ಅನುಭವ
ನನಗಾಗುತ್ತದೆ !