ಗುರುವಾರ, ಸೆಪ್ಟೆಂಬರ್ 22, 2011

ಪೂರ್ವಾನ್ವಯ

ಆವಾಗ ನಾನು ಅಪ್ಪಯ್ಯನ ಬಳಿ ಅದೆಷ್ಟು ಬೇಡಿಕೊಂಡಿದ್ದೆ? ನಾನು ಮುಂದೆ ಓದಬೇಕು. ದಯವಿಟ್ಟು ಶಾಲೆಯ ಫೀಸಿಗೆ ಎರಡು ರೂಪಾಯಿ ಕೊಡಿ ಅಂತ ಎಷ್ಟೇ ಬೇಡಿದ್ದರೂ ಅಪ್ಪಯ್ಯ ಕೊಡಲೇ ಇಲ್ಲ. ಅವನಿಗೆ ನಾವು ಹೇಗಿದ್ದರೂ ಮುಂದೆ ಇನ್ನೊಬ್ಬರ ಮನೆಗೆ ಹೋಗಿ ಮುಸುರೆ ತಿಕ್ಕುವವರು. ಇವರು (ಹೆಣ್ಣು ಮಕ್ಕಳು) ಓದಿದರೆಷ್ಟು? ಬಿಟ್ಟರೆಷ್ಟು? ಎಂಬ ಅಭಿಪ್ರಾಯ. ಅವರ ಅಭಿಪ್ರಾಯ ಬದಲಾಯಿಸೋಕೆ ಆಗುತ್ಯೇ? ಅಮ್ಮ ಅಪ್ಪನೆದುರು ನಿಂತು ಮಾತಾಡಿದ್ದೇ ನನಗೆ ನೆನಪಿಲ್ಲ. ಊಟದ ಸಮಯ ಆದ ಕೂಡಲೇ, ಅಪ್ಪಯ್ಯನ್ನ ಊಟಕ್ಕೆ ಕರಿಯೇ ತಂಗಿ ಎಂದು ಹೇಳಿದ್ದೇ ನೆನಪಿಲ್ಲ. ಅವರು ಯಾವಾಗಲೂ, ಜಗಲಿಯಲ್ಲಿ ಕೂತವರನ್ನು ಕರಿ ಎಂದೇ ಹೇಳುತಿದ್ದ ನೆನಪು. ಹೀಗಿದ್ದ ಅಮ್ಮನ ಬಳಿ ಅಪ್ಪನಿಗೆ ನಾನು ಓದಲು ಸಹಾಯ ಮಾಡಲು ಕೇಳಿಕೊಳ್ಳುವ ಮನಸ್ಸಾಗಲಿಲ್ಲ ನನಗೆ. ನನ್ನ ಜೊತೆ ಜೊತೆಯೇ ಓದುತ್ತಿದ್ದ ಭಾರತಿ ಓದೋಕೆ ಅಷ್ಟೇನೂ ಚೂಟಿಯಿಲ್ಲದಿದ್ದರೂ ಅವಳ ತಂದೆ ಅವಳಿಗೆ ಮುಂದಕ್ಕೆ ಓದಲು ಎಷ್ಟೊಂದು ಪ್ರೋತ್ಸಾಹಿಸಿದ! ನನಗೆ ಆಗ ಬೇಸರ ಪಡದೆ ಇರುವುದಕ್ಕೆ ಆಗಲೇ ಇಲ್ಲ. ಅದು ಯಾವಾಗಲೂ ಹಾಗೇ! ನಮಗೆ ಸಿಗದಿದ್ದರೆ ಇಲ್ಲ. ಆದರೆ ನಮಗಿಂತ ಕೆಳಗಿರುವರಿಗೆ, ಅಥವ ನಾವು ಅಂದುಕೊಂಡ ನಮಗಿಂತ ಉತ್ತಮ ಏನೂ ಅಲ್ಲ ಬಿಡು ಅಂದುಕೊಂಡವರಿಗೆ, ನಮಗೆ ಸಿಗದ ಯೋಗ ದೊರೆತರೆ ಆವಾಗ ಆಗುವ ಸಂಕಟವೇ ಬೇರೆ! ಅಪ್ಪ ನನಗೆ ಓದಿಸದೇ ಇದ್ದಿದಕ್ಕೆ ನಮ್ಮ ಬಡತನವೂ ಕಾರಣವಾಗಿತ್ತು. ನಮ್ಮ ಬಡತನವನ್ನೇ ಮುಂದಿಟ್ಟುಕೊಂಡು ನನ್ನ ನೊಂದ ಮನಸ್ಸನ್ನು ಸಮಾಧಾನಿಸಿಕೊಂಡಿದ್ದೆ. ನನಗಂತೂ ಓದುವ ಭಾಗ್ಯ ದೊರೆಯಲಿಲ್ಲ. ನನ್ನ ಮಕ್ಕಳಿಗಾದರೂ ಓದಿಸಬೇಕು ಎಂದು ನಿಶ್ಚಯಿಸಿದ್ದೆ.

ಆದರೆ ಹೀಗೆಲ್ಲ ಅಂದುಕೊಂಡ ನಾನು ನನ್ನ ಮಗನ ಓದಿಗೆ ಯಾಕೆ ಮುಂದೆ ಬಂದು ಸಹಕರಿಸಲಿಲ್ಲ? ಇವರಿಗೆ ನಮ್ಮ ಮನೆಯಲ್ಲಿ ಇರುವ ಆಸ್ತಿಯೇ ಸಾಕು. ಇವನು ಓದಿದರೆ ಮುಂದೆ ಪೇಟೆ ಸೇರಿಕೊಂಡರೆ ನಮ್ಮ ಗತಿ ಏನು? ಅಂತ ಅವರು ಹೇಳಿದಾಗ, ಹೌದು. ಮಗ ಬುದ್ದಿವಂತ. ಓದಿಕೊಂಡರೆ ಮುಂದೆ ಒಳ್ಳೆ ಕೆಲಸ ಸಿಕ್ಕೇ ಸಿಗುತ್ತೆ. ಆಗ ಅವನು ಬೇಡ ಎಂದರೂ ನಮ್ಮ ಮಾತು ಕೇಳುವುದಿಲ್ಲ. ಅದಕ್ಕೆ ಅವನು ಮುಂದೆ ಓದುವುದು ಬೇಡ. ಇಲ್ಲೇ, ನಮ್ಮ ಕಾಲು ಬುಡದಲ್ಲೇ ಇರುವಷ್ಟು ತೋಟವನ್ನು ನೋಡಿಕೊಂಡು ಹಾಯಾಗಿ ಇರಲಿ. ಮಗ ನಮ್ಮ ಬಳಿಯೇ ಇರಲಿ ಎಂಬ ಸ್ವಾರ್ಥ ನನ್ನದೂ ಇತ್ತು. ಅದನ್ನು ಅಲ್ಲಗೆಳೆಯಲಾರೆ. ಪ್ರೀತಿಯ ಮಗ. ಅಪ್ಪ ಅಮ್ಮನಿಗೆ ನೋವಾಗಬಾರದು ಎಂದು ಹಠವನ್ನೂ ಮಾಡಲಿಲ್ಲ. ಸುಮ್ಮನಾಗಿಬಿಟ್ಟ. ಆದರೆ ನಾನು ಹಾಗೆ ಮಾಡಬಾರದಿತ್ತು.

***

ಅವರು ನಿನ್ನೆ ಕಾಲ್ ಮಾಡಿದಾಗ ಹೇಳಿದ್ದು ಸರಿಯಾಗಿ ಒಂಭತ್ತು ಘಂಟೆಗೆ ಅಲ್ಲಿರಬೇಕು. ಅವರು ಶಿಸ್ತನ್ನು ಪಾಲಿಸುವವರು. ಸ್ವಲ್ಪ ಸಮಯ ಹೆಚ್ಚೂ ಕಡಿಮೆಯಾದರೂ ನಿನ್ನನ್ನು ಒಳಗೆ ಬಿಡುವುದಿಲ್ಲ ಎಂದು!. ಅದೇ ಮಾತನ್ನು ತಲೆಯೊಳಗೆ ತುಂಬಿಕೊಂಡು ಕಣ್ಣು ಮುಚ್ಚಿದವನಿಗೆ ನಿದ್ದೆ ಎಲ್ಲಿ ತಾನೇ ಬರಬೇಕು?! ಮಗ್ಗುಲು ಬದಲಾಯಿಸುತ್ತ, ಅತಿತ್ತ ಹೊರಳಾಡುತ್ತಾ ಸ್ವಲ್ಪ ಸಮಯ ಹಾಸಿಗೆಯಲ್ಲೇ ಕಳೆದಿದ್ದಾಯಿತು. ಕಾಲ್ ಬಂದಾಗಿನಿಂದ ಏನೋ ಒಂದು ರೀತಿಯ ಆತಂಕ, ದುಗುಡ, ಭಯ!. ಏನೋ ಒಂದು ರೀತಿಯ ತಲ್ಲಣ. ಅವರೇನೋ ಹೇಳಿದ್ದಾರೆ, "ಬಿ ಬ್ರೇವ್ " ಅಂತ. ಮಲಗಿದ್ದವನಿಗೆ ಒಮ್ಮೆ ಬಾತ್ರೂಮಿಗೆ ಹೋಗುವ ಎಂದೆನಿಸಿ ಹೋಗಿ ಬಂದು ಮಲಗಿದಾಗಲೂ ಮತ್ತದೇ ಅದೇ ಯೋಚನೆಗಳು. ನಾಳೆ ದಿನ ಹೇಗಾಗುತ್ತೋ? ನಾನು ಸಮಯಕ್ಕೆ ಸರಿಯಾಗಿ ಹೋಗೋಕೆ ಆಗುತ್ತೋ ಇಲ್ವೋ? ಅವರು ಇನ್ನೇನು ಪ್ರಶ್ನೆಗಳನ್ನ ಕೇಳ್ತಾರೋ? ಹೀಗೆ ಸಾಗುತ್ತಿದ್ದ ಯೋಚನಾ ಲಹರಿಗೆ ಯಾವುದೋ ಒಂದು ಘಳಿಗೆಯಲ್ಲಿ ನಿದ್ದೆ ಒತ್ತರಿಸಿ ಬಂದು ಯೋಚನೆ ನಿಂತಿತ್ತು.

ಬೆಳಗಾಗುವುದರೊಳಗೆ ಎದ್ದು, ಸ್ನಾನ ಮುಗಿಸಿ ಮತ್ತೆ ಒಂದು ಪುಸ್ತಕ ಹಿಡಿದು ಹಾಳೆಯನ್ನು ತಿರುವತೊಡಗಿದ. ಸಮಯ ಈಗಾಗಲೇ ಆರು ಘಂಟೆ! ಇನ್ನು ಕೇವಲ ಮೂರು ಘಂಟೆಗಳಲ್ಲಿ ನಾನು ಅಲ್ಲಿರಬೇಕು. ಹಾಗಂದುಕೊಳ್ಳುತ್ತಲೇ ಬ್ಯಾಗಿನಲ್ಲಿ ರಾತ್ರಿ ಜೋಪಾನವಾಗಿ ಫೈಲಿನಲ್ಲಿ ಸೇರಿಸಿಟ್ಟ ರೆಸುಮನ್ನು ನೋಡಿಕೊಂಡ. ಗೆಳೆಯರು, ನಿನ್ನ ರೆಸುಮಿನಲ್ಲಿ ಇರುವುದರ ಬಗ್ಗೆಯೇ ಪ್ರಶ್ನೆ ಕೇಳುತ್ತಾರೆ ಎಂದು ಹೇಳಿದ್ದು ಅವನಿಗೆ ಜ್ಞಾಪಕವಾಗಿದೆ. ತಿರಿಸಿ ಮುರಿಸಿ ಹೇಗೆ ನೋಡಿದರೂ ಎಲ್ಲಾ ತನಗೆ ತಿಳಿದಿರುವುದೇ ಎಂದು ಅವನಿಗನಿಸುವುದು. ಇದು ಬಹುಷಃ ನಾನು ಹೋಗುತ್ತಿರುವುದು ಐದನೇ ಸಾರಿ. ಅಮ್ಮ ಹೇಳುತ್ತಾಳೆ, ಪ್ರತೀ ಭಾರಿಯೂ ನಾನು ಹೋಗುವಾಗ ಒಂದು ತೆಂಗಿನ ಕಾಯಿ ತೆಗೆದಿಟ್ಟಿದ್ದೇನೆ, ನಿನಗೆ ಒಳ್ಳೆಯದಾಗುತ್ತದೆ ಎಂದು. ಹಾಗಾದ್ರೆ ಹಿಂದೆ ದೇವರ ಹೆಸರಿನಲ್ಲಿ ತೆಗೆದಿಟ್ಟ ನಾಲ್ಕೂ ತೆಂಗಿನಕಾಯಿಗಳಿಗೆ ಅರ್ಥವೇ ಇಲ್ಲವೆ? ಪ್ರಶ್ನೆ ಕೇಳುತಿತ್ತು ಮನಸ್ಸು. ಕೆಲವೊಂದು ವಿಷಯಗಳನ್ನು ಕೇವಲ ನಂಬಿಕೆ ಎಂದು ಅಂದುಕೊಂಡು ಸುಮ್ಮನಿರುವುದೇ ಒಳಿತು. ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ, ಉತ್ತರ ಹುಡುಕುತ್ತ ಹೋದಂತೆ ತಲೆ ಕೆಡುತ್ತದೆ ವಿನಃ ಸಮಂಜಸ ಉತ್ತರ ದೊರೆಯುವುದಿಲ್ಲ. ವಿಷಾದದ ನಗು ಹಾದು ಹೋಯಿತು ಅವನ ತುಟಿಯಲ್ಲಿ.

ಹೇಳಿ ಕೇಳಿ ಬೆಂಗಳೂರಿನ ಹೊರವಲಯದಲ್ಲಿ ಗೂಡು ಕಟ್ಟಿರುವುದು ನಾನು. ಇಲ್ಲಿಂದ ನಾನು ತಲುಪಬೇಕಾದ ಜಾಗಕ್ಕೆ ಹೋಗುವುದಕ್ಕೆ ಎರಡು ಘಂಟೆಗಳ ಪಯಣ. ನಡೆದುಕೊಂಡು ಬಂದು ಬಸ್ ಸ್ಟ್ಯಾಂಡಿನಲ್ಲಿ ಕುಳಿತವನಿಗೆ, ತನ್ನಂತೆ ನೂರಾರು ಜನ ಬಸ್ಸಿಗಾಗಿ ಕಾಯುತ್ತಿರುವುದನ್ನು ಕಂಡು, ದೇವರೇ! ಇವರೆಲ್ಲ ಬೇರೆ ಬಸ್ಸಿಗಾಗಿ ಕಾಯುತ್ತಿರಲಿ. ನಾನು ಹೋಗುವ ಬಸ್ಸು ಖಾಲಿ ಇದ್ದರೆ ಕುಳಿತುಕೊಂಡು ಹೋಗಬಹುದು ಎಂದು ಸಣ್ಣ ಪ್ರಾರ್ಥನೆ ಸಲ್ಲಿಸಿದ. ಅಬ್ಬ! ಈ ಬೆಂಗಳೂರಿನಲ್ಲಿ ಒಂದು ಜಾಗದಿಂದ ಮಾತ್ತೊಂದು ಜಾಗಕ್ಕೆ ಹೋಗಲು ಎಷ್ಟೆಲ್ಲಾ ಕಷ್ಟ ಪಡಬೇಕು! ನಮ್ಮ ಊರಲ್ಲಾಗಿದ್ದರೆ ನಡೆದುಕೊಂಡೇ ಹೋಗಿ ಬಂದು ಬಿಡಬಹುದಾಗಿತ್ತು. ಹೋಗಲಿ, ಸಾದಾ ಬಸ್ಸು ಬೇಡ. ಏ. ಸಿ ಬಸ್ಸು ಹತ್ತಿ ಹೋಗೋಣ ಅಂದುಕೊಂಡರೆ ಅಲ್ಲಿ ಸಾದಾ  ಬಸ್ಸಿಗೆ ಕೊಡುವ ಮೂರರಷ್ಟು ಹಣಕೊಟ್ಟು ಹೋಗಬೇಕು. ಅದೇ ದುಡ್ಡು ಇದ್ದರೆ ಸಂಜೆ ತರಕಾರಿ ತರಲು ಆದರೆ ಅಷ್ಟೇ ಆಯಿತು ಎನ್ನುವ, ಎಸಿ ಬಸ್ಸನ್ನು ಹತ್ತಲು ಬಿಡದ ಮನಸ್ಸು. ಆದರೆ ಇಲ್ಲಿ ಕೆಲವರು ದಿನವೂ ಎಸೀ ಬಸ್ಸಲ್ಲೇ ಹೋಗಿಬರುತ್ತಾರೆ. ಅವರಿಗೆಲ್ಲ ಎಷ್ಟು ಸಂಬಳವಿರಬಹುದು? ಅಥವ ಸಂಬಳ ಹೆಚ್ಚು ಇಲ್ಲದಿದ್ದರೂ ಐಶರಾಮಿಯಾಗಿ ಇರುತ್ತಿರಬಹುದೇ? ಅಥವ ಸಮಯಕ್ಕೆ ಸರಿಯಾಗಿ ಹೋಗಬಹುದು ಎಂದು ಅದನ್ನು ಅವಲಂಬಿಸಿಬಹುದೇ? ತುತ್! ನಾನು ಅದ್ಯಾವಾಗ ಇವರ ತರಹ ಮುಲಾಜಿಲ್ಲದೆ ದುಡ್ಡು ಖರ್ಚು ಮಾಡಿಕೊಂಡಿರುವುದು? ಒಂದಕ್ಕೆ ಹೆಚ್ಚು ಖರ್ಚು ಮಾಡುವಾಗ, ಈ ದುಡ್ಡು ಉಳಿದರೆ ಇನ್ನೊಂದಕ್ಕೆ ಬರುತ್ತಲ್ಲವೆ ಎಂದು ಅಂದುಕೊಳ್ಳುವ ನನ್ನ ಮನಸ್ಸು ಬದಲಾಗುವುದು ಯಾವಾಗ? ಈ ನನ್ನ ಲೆಕ್ಕಾಚಾರದ ಜೀವನಕ್ಕೆ ಕೊನೆಯಲ್ಲಿ, ಯಾವಾಗ?

ನಿಟ್ಟುಸಿರು ದೇಹದಿಂದ ಹೊರಕ್ಕೆ ಜಾರುತ್ತಿದಂತೆ ಬಂದಿತ್ತು ಒಂದು ಬಸ್ಸು. ಸಮಯ ಈಗಾಗಲೇ ಆರು ಮೂವತ್ತು. ಬಸ್ಸು ಬಂದಿದ್ದೇ ಹಿಂದೂ ಮುಂದು ನೋಡದೆ ಹತ್ತಿಬಿಟ್ಟ. ಹೇಗಾದರೂ ಮಾಡಿ ಇವತ್ತು ಕೆಲಸ ಗಿಟ್ಟಿಸಲೇ ಬೇಕು. ಊರಿನ ಜನಕ್ಕೆ ನಾನೂ ಒಂದು ಮನುಷ್ಯ ಆಗಬಲ್ಲೆ ಎಂದು ತೋರಿಸಬೇಕು. ಬಡವರಾದರೂ ನಾವು ಮರ್ಯಾದೆಯಿಂದ ಬದುಕುವವರು ಎಂದು ಅಂದುಕೊಳ್ಳುವಾಗಲೇ ಏನೋ ಒಂದು ತೀವ್ರ ತರ ಅಸಹನೀಯ ನೋವಾದ ಅನುಭವವಾಯಿತು. ಬಾಯೆಲ್ಲಾ ಕಹಿಯಾದಂತೆನಿಸಿ ಯೋಚನಾಲಹರಿಯನ್ನು ಬೇರೆಕಡೆಗೆ ತಿರುಗಿಸಲು ಪ್ರಯತ್ನ ಪಡುತ್ತಿರುವಾಗಲೇ, ಯಾರೋ ಭುಜ ತಟ್ಟಿದ ಅನುಭವವಾಗಿ ತಲೆ ಎತ್ತಿದರೆ, ವಯಸ್ಸಾದ ಒಂದು ತಾತ ಸೀಟ್ ಬಿಟ್ಟುಕೊಡುವಂತೆ ಕೇಳಿ ನಿಂತಿದ್ದರು. ಅವರಿಗೆ ಸೀಟು ಬಿಟ್ಟು ಕೊಟ್ಟು ಕಂಭ ಹಿಡಿದು ನಿಂತ ಇವನಿಗೆ, ಜೀವನವೆಲ್ಲ ಬರೀ ಇನ್ನೊಬ್ಬರಿಗಾಗಿ ತ್ಯಾಗ ಮಾಡುವುದರಲ್ಲೇ ಆಯಿತು ಎಂದೆನಿಸಿ ಸುಮ್ಮನಾದ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗ ಹದಿಮೂರು ರೂಪಾಯಿಯ ಟಿಕೆಟಿಗೆ ಚಿಲ್ಲರೆ ಇಲ್ಲದೆ ಕೊಟ್ಟ ಹದಿನಾಲ್ಕು ರೂಪಯಿಗಳನ್ನು ಬ್ಯಾಗಿನಲ್ಲಿ ಇಳಿಸಿಕೊಂಡು ಟಿಕೆಟ್ ಕೊಟ್ಟು ಹೊರಟವನನ್ನು ಒಂದು ರೂಪಾಯಿ ವಾಪಸ್ಸು ಕೊಡಿ ಎಂದು ಕೇಳಲು ಮನಸ್ಸಾಗಲಿಲ್ಲ.

***

ಅಪ್ಪ, ಅಮ್ಮ ಎಲ್ಲರೂ ಎಷ್ಟೊಂದು ಒಳ್ಳೆಯ ಜನ. ಊರಲ್ಲಿ ಅಪ್ಪನ ಕಂಡರೆ ಎಲ್ಲರಿಗೂ ಎಷ್ಟೊಂದು ಗೌರವ, ನಂಬಿಕೆ. ಆದರೆ ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದೇ ಆಗಬೇಕೆಂದೇನೂ ಇಲ್ಲವಲ್ಲ?! ಎಷ್ಟೊಂದು ತೋಟ, ಗದ್ದೆ ನಮ್ಮದು! ನೆಂಟರಿಷ್ಟರಲ್ಲೇ ನಮ್ಮಷ್ಟು ಆಸ್ತಿ ಯಾರಿಗಿತ್ತು? ಅಪ್ಪ ಅದಿಕ್ಕೆ ಅಲ್ಲವೆ? ನಾನು ಒಬ್ಬನೇ ಮಗ. ಮುಂದೆ ಓದಿ ಪೇಟೆಗೆ ಎಲ್ಲಿ ಸೇರಿಬಿಡುವೆನೋ ಎಂದು ಹೆದರಿ ನಂಗೆ ಕೇವಲ ಹತ್ತನೇ ಕ್ಲಾಸಿಗೆ ನನ್ನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡಿಸಿದ್ದು. ಅಪ್ಪನಿಗೆ ನಾನೆಷ್ಟು ಗೋಗರೆದಿದ್ದೆ, ನಾನು ಡಿಗ್ರಿ ಮಾಡಿಕೊಳ್ಳುತ್ತೇನೆ. ಆಮೇಲೆ ಮನೆಯಲ್ಲೇ ಇರುತ್ತೇನೆ ಎಂದರೂ ನನ್ನ ಮಾತಿಗೆ ಅಪ್ಪ ಬೆಲೆಯೇ ಕೊಡಲಿಲ್ಲ. "ಇಷ್ಟೊಂದು ಅಸ್ತಿ ಇದೆ. ತಿನ್ನವ್ರು ಬೇಕಲ್ಲ. ನೀನು ಪೇಟೆ ಸೇರಿ ಬಿಟ್ರೆ ನಾವೇನು ಮಾಡುವುದು" ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು. ಅಪ್ಪ ಅಮ್ಮನ ಇಷ್ಟಕ್ಕೆ ವಿರುದ್ದವಾಗಿ ನಡೆದುಕೊಳ್ಳುವುದು ನನಗೂ ಇಷ್ಟವಿಲ್ಲ. ಮನೆ ಕೆಲಸ ಮಾಡಿಕೊಂಡು ಹಾಯಾಗಿದ್ದೆ. ಯಾವ ಕಷ್ಟಗಳೂ ನಮಗಿರಲಿಲ್ಲ. ಆದರೆ ಇದು ದೇವರಿಗೆ ಅಷ್ಟೊಂದು ಒಪ್ಪಿಗೆ ಇರಲಿಲ್ಲವೋ ಏನೋ? ಅಪ್ಪ ತನ್ನ ತುಂಬಾ ಹತ್ತಿರದ ಗೆಳೆಯನಿಗೆ ಸಾಲ ಪಡೆಯಲು "ಜಾಮೀನು" ಕೊಟ್ಟಿದ್ದ. ಸಾಲ ಪಡೆದವ ಒಳ್ಳೆಯವನೇ. ನಂಬಿಕಸ್ತನೆ. ಅದಕ್ಕೆಂದೇ ನಾನಾಗಲಿ ಅಮ್ಮನಾಗಲಿ ಏನೂ ತಕರಾರು ಮಾಡಲಿಲ್ಲ. ಆದರೆ ದುರ್ದೈವ, ಅಪ್ಪನ ಗೆಳೆಯ ಯಾವುದೊ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ. ಸುದ್ದಿ ತಿಳಿದ ನಮಗೆ ಅವನು ತೀರಿಕೊಂಡ ಎಂಬುದರ ಬಗ್ಗೆ ನೋವಾದರೂ, ನಮ್ಮ ಭವಿಷ್ಯ ನೆನೆದು ಕುಳಿತಲ್ಲೇ ಕಂಪಿಸಿದ್ದೆವು. ಸಾಲಕ್ಕೆ ಜಾಮೀನಾದ ಅಪ್ಪನೇ ಸಾಲ ತೀರಿಸುವಂತಾಯಿತು. ನಮ್ಮ ತೋಟ, ಗದ್ದೆ, ಮನೆ ಎಲ್ಲಾ ಹರಾಜಿಗೆ ಬಂತು. ನಾವು ಬೀದಿಗೆ ಬಂದೆವು. ಎಷ್ಟೋ ವರ್ಷಗಳಿಂದ ಬಾಳಿಕೊಂಡು ಬಂದ ಮನೆ, ಆ ಊರು, ಅಲ್ಲಿನ ಒಂದು ಭಾಂದವ್ಯವನ್ನು ಭಾರವಾದ ಹೃದಯ ಮತ್ತು ಮಂಜಾದ ಕಣ್ಣುಗಳಿಂದ ಬಿಟ್ಟು ಬೆಂಗಳೂರಿನ ರೈಲನ್ನು ಹತ್ತಿ ಸೋದರ ಮಾವನ ಮನೆಗೆ ಬಂದ ನೆನಪು ಈಗಲೂ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿಸುತ್ತೆ. ಇದೆಲ್ಲ ಆದ ಮೇಲೆ ಅಪ್ಪ ಮಂಕಾದ. ನನ್ನನ್ನು ಕೊನೆ ಪಕ್ಷ ಓದಿಸಿದ್ದರೆ ಹೇಗೋ ಜೀವನ ನಡೆಯುತ್ತಿತ್ತು. ಅಪ್ಪನಿಗೆ ಬಹುಷಃ ಆ ಒಂದು ಅಪರಾಧಿ ಪ್ರಜ್ಞೆ ಮನಸ್ಸಿನಲ್ಲಿ ಕಾಡುತಿತ್ತಿರಬೇಕು. ಏನೊಂದೂ ಅವರು ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ಇಷ್ಟು ದಿನ ನನ್ನ ಪ್ರೀತಿಯಿಂದ ಸಾಕಿದ ನನ್ನ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಸರದಿ ನನ್ನದು ಎಂದು ತಿಳಿದಿದ್ದೇ ನಾನು ಕೆಲಸ ಹುಡುಕಲು ಶುರು ಮಾಡಿದೆ. ಆದರೆ ಕೇವಲ ಹತ್ತನೇ ಕ್ಲಾಸು ಓದಿ, ಬೇರೆ ಯಾವುದೇ ರೀತಿಯ ಸ್ವಯಂ ಉದ್ಯೋಗದ ಬಗ್ಗೆಯೂ ಇನ್ನು ಮಾಹಿತಿ ಇರದ ನನಗೆ ಯಾವ ಕೆಲಸ ತಾನೇ ಸಿಕ್ಕಿತು! ಆದರೆ ಪ್ರಯತ್ನ ನಡೆಯುತ್ತಿದೆ.

***

ತಾನು ಇಳಿದುಕೊಳ್ಳುವ ಜಾಗ ಬಂದಲ್ಲಿ ಸಮಯ ಸರಿಯಾಗಿ ಎಂಟು ಮುಕ್ಕಾಲು. ಗೇಟ್ ನ್ನು ದಾಟಿ ಒಳಗೆ ಹೋಗುವಾಗ ಅಮ್ಮನ ಪ್ರೀತಿಯ ನುಡಿಗಳು, ಅಪ್ಪನ ಅಸಹಾಯಕತೆ, ಕೊನೆಯ ಸಾರಿ ಊರಿನಲ್ಲಿರುವ ಮನೆಯನ್ನು ನೋಡಿದ ದೃಶ್ಯ, ಹಾಗೂ ದೇವರಲ್ಲಿ ಅಮ್ಮ ಈ ಭಾರಿಯಾದರೂ ನಾನು ಇಂಟರ್ವ್ಯೂ ನಲ್ಲಿ ಪಾಸ್ ಆಗಲಿ ಎಂದು ದೇವರಲ್ಲಿ ಬೇಡಿ ತೆಗೆದಿಟ್ಟ ತೆಂಗಿನಕಾಯಿ ಎಲ್ಲದರ ನೆನಪು ಒಂದರ ಹಿಂದಂತೆ ಒಂದು ಬರತೊಡಗಿದವು....