ಬುಧವಾರ, ಆಗಸ್ಟ್ 03, 2011

ಊರು,ಯಕ್ಷಗಾನ ಮತ್ತು.....ನಾನು!

ಯಕ್ಷಗಾನಕ್ಕೂ ನನಗೂ ತುಂಬಾ ಹಳೆಯ ನಂಟು. ಯಕ್ಷಗಾನ ಎಂದೊಡನೆ ನನ್ನ ಮನಸಿನಲ್ಲಿ ಬೆಚ್ಚಗೆ ಅಡಗಿ ಕುಳಿತ ಸಾವಿರಾರು ನೆನಪುಗಳ ನರ್ತನ. ಚಿಕ್ಕಂದಿನಲ್ಲಿ ನೋಡಿ, ಆಡಿ, ಮಾಡಿದ ಎಷ್ಟೋ ಪ್ರಸಂಗಗಳ ಮರುಕಳಿಕೆ. ಚಿಕ್ಕವರಿದ್ದಾಗ ನಮ್ಮ ಅಂತಿಮ ಪರೀಕ್ಷೆಗಳು ಮುಗಿದು, ಬೇಸಿಗೆ ರಜಗಳು ಶುರುವಾಗುವ ಹೊತ್ತಿಗೆ, ಊರಲ್ಲಿ ಇರುವ ನಮ್ಮ ಸೋದರ ಮಾವ ಬಂದು ನಮ್ಮನ್ನು ಅಜ್ಜನ ಮನೆಗೆಂದು ಕರೆದುಕೊಂಡು ಹೋಗುವುದು ವಾಡಿಕೆಯಾಗಿತ್ತು. ಅಜ್ಜನ ಮನೆಗೆ ಹೋಗುವುದು ಎಂದರೆ ನಂಗೆ ಮತ್ತು ತಂಗಿಗೆ ಬಲು ಹಿಗ್ಗಿನ ವಿಷಯವಾಗಿತ್ತು. ಅಜ್ಜನ ಮನೆಯಲ್ಲಿ ನಾವಷ್ಟೇ ಅಲ್ಲದೇ, ನನ್ನ ದೊಡ್ಡಮ್ಮನ ಮಕ್ಕಳೂ ಬರುತ್ತಿದ್ದರಿಂದ ನಮಗೆ ಅದು ಬಲು ಕಾತರಿಕೆಯ, ಖುಷಿಯ ಹಾಗೂ ಮೋಜು ಮಸ್ತಿ ಮಾಡುವ ದಿನಗಳಾಗಿದ್ದವು.

ನನ್ನ ಅಜ್ಜಿಮನೆ ಇರುವುದು ಮಲೆನಾಡಿನ ಸಾಗರದ ಸಮೀಪದ ಒಂದು ಹಳ್ಳಿಯಲ್ಲಿ. ಮಲೆನಾಡಿನ ಪರಿಸರದ ಸೊಬಗನ್ನು ಸವಿಯುವ ಮಜವೇ ಬೇರೆ. ವರುಷವಿಡೀ ಬಯಲು ಸೀಮೆಯಾದ ದಾಂಡೇಲಿಯಲ್ಲಿ ಇರುತಿದ್ದ ನಮಗೆ, ಬೆಟ್ಟ, ಗುಡ್ಡ ತಿರುಗುವುದು, ತೋಟದಲ್ಲಿ ಅಲೆಯುವುದು, ಗದ್ದೆಯಲ್ಲಿ ನೆಟ್ಟ ಸವತೆಕಾಯಿ ಮಿಡಿಯನ್ನು ಕದ್ದು ಕಿತ್ತು ತಿನ್ನುವುದು ಎಲ್ಲ ಬಹಳ ಅಪರೂಪಕ್ಕೆ ಸಿಕ್ಕುವ ಚಿಕ್ಕ-ಚಿಕ್ಕ ಆನಂದಗಳಲ್ಲಿ ಒಂದಾಗಿದ್ದವು. ಅಜ್ಜಿ ಮನೆ ಊರಲ್ಲಿ ಒಂದು ಗಣೇಶನ ದೇವಸ್ಥಾನವಿದ್ದು, ಅಲ್ಲಿ ಪ್ರತಿ ವರುಷ ರಾಮನವಮಿಯ ದಿನ ಸಂತರ್ಪಣೆ ಆಗುತಿದ್ದು, ಆ ದಿನ ಪೂರ್ತಿ ಒಂದಲ್ಲ ಒಂದು ದೇವರ ಕಾರ್ಯ ನಡೆಯುತ್ತಲೇ ಇತ್ತು. ಹಾಗೆ ಅದೇ ದಿನ ರಾತ್ರಿ ಅಲ್ಲಿಯ ಸ್ತಳೀಯ ಮೇಳ(ಗುಂಪು) ಅಥವ ಹೊರಗಿನ ಊರಿನವರ ಮೇಳದಿಂದ ಯಕ್ಷಗಾನ ಏರ್ಪಡಿಸುತ್ತಿದ್ದರು. ಹಾಗೆ ಸುಮಾರು ರಾತ್ರಿ ಒಂಭತ್ತು ಘಂಟೆಗೆ ಯಕ್ಷಗಾನ ಶುರುವಾದರೆ ಮುಗಿಯುವುದು ಹೆಚ್ಚೂ-ಕಮ್ಮಿ ಆಗಸದಲ್ಲಿ ಸೂರ್ಯ ಮೂಡುವ ಸಮಯಕ್ಕೆ!

ದೇವಸ್ಥಾನದಲ್ಲೇ ಇಡೀ ಊರಿನ ಜನರ ಜೊತೆ ಬೆಳಗಿನಿಂದ ಸಂಜೆಯವರೆಗೂ, ಭಜನೆ, ಹಾಡು, ರಂಗೋಲಿ ಕಾರ್ಯಕ್ರಮದಲ್ಲಿ ಕಳೆಯುತ್ತಾ, ಮಧ್ಯ-ಮಧ್ಯ ಸಂಜೆ ನಡೆಯಲಿರುವ ಯಕ್ಷಾಗನದ ಬಗ್ಗೆ ಚರ್ಚಿಸುತ್ತ, ಅದನ್ನು ನೋಡಲು ನಾವೆಲ್ಲಾ ಉತ್ಸುಕರಾಗಿರುತ್ತಿದ್ದೆವು. ಅಲ್ಲಿಯ ದೇವಸ್ಥಾನದ ಭಟ್ಟರ ಮಗನೂ ಯಕ್ಷಗಾನ ಮಾಡುತ್ತಿದ್ದರು. ಅವರ ಮುಖ ಪರಿಚಯ ಎಷ್ಟೇ ಇದ್ದರೂ ವೇಷ ಕಟ್ಟಿಕೊಂಡು ಅವರು ನಮ್ಮ ಎದುರಿಗೆ ಬಂದಾಗ ಅವರನ್ನು ಗುರುತಿಸುವುದು ಕಷ್ಟವಾಗುತಿತ್ತು!. ಬೆಳಗಿನ ತಿಂಡಿಯಿಂದ ಹಿಡಿದು ಮಧ್ಯಾಹ್ನದ ಊಟವೂ ಅಲ್ಲೇ ದೇವಸ್ಥಾನದಲ್ಲಿ ಆಗುತಿತ್ತು. ದೇವಸ್ಥಾನದ ಎದುರಿಗೇ ಶರಾವತಿ ನದಿ ಹರಿಯುತ್ತದೆ. ಊಟ ಮುಗಿದ ಬಳಿಕ ಹೆಂಗಸರು ಮಾತು ಕಥೆಯಾಡುತ್ತ, ಒಂದು ಕಡೆ ಮಲಗಿಕೊಂಡರೆ, ಗಂಡಸರು ಕೆಲವರು ಯಕ್ಷಗಾನದ ರಂಗಸ್ಥಳ ನಿರ್ಮಿಸುವುದರಲ್ಲಿ ತೊಡಗಿರುತ್ತಿದ್ದರು . ನಾವು ಮಕ್ಕಳೆಲ್ಲ ನದಿಯ ತೀರಕ್ಕೆ ಒಂದು ವಾಕ್ ಹೋಗಿ ಬರುತ್ತಿದ್ದೆವು . ಅಲ್ಲಿ ನಡೆಯುತ್ತಿದ್ದ ಯಕ್ಷಗಾನಕ್ಕೆ ಯಾವುದೇ ದೊಡ್ಡ ರಂಗ ಮಂಚ, ಅಥವ ದೊಡ್ಡ ಭವನವಾಗಲಿ , ಬಂದ ಜನರಿಗೆ ಕುಳಿತುಕೊಳ್ಳಲು ಈಜಿ ಚೇರ್ಗಳಾಗಲಿ ಇರುತ್ತಿರಲಿಲ್ಲ . ಒಂದು ಸಣ್ಣ ಚೌಕಟ್ಟಿನ ಜಾಗದಲ್ಲಿ ಎರಡು ದಿಕ್ಕಿನಿಂದ ಮುಚ್ಚುವಂಥ ಬಿದಿರಿನಿಂದ ಹೆಣೆದ ಒಂದು ದೊಡ್ಡ ಗೋಡೆಯನ್ನು ಇಡುತ್ತಿದ್ದರು. ಹಿಂದೆ ಒಂದು ದೊಡ್ಡ ಪರದೆಯನ್ನು ಇಳಿ ಬಿಡಲಾಗುತಿತ್ತು. ಅದರ ಹಿಂದೆ ಎಲ್ಲ ಕಲಾವಿದರ ಅಲಂಕಾರ(ವೇಷಭೂಷಣ)ದ ಕೋಣೆ ಇರುತಿತ್ತು. ಭಾಗವತರು ಮತ್ತು ಹಿಮ್ಮೇಳದವರು, ಅಲ್ಲೇ ರಂಗಸ್ಥಳದ ಬಲಗಡೆಯಲ್ಲಿ ಅಸೀನರಾಗಿಯೂ, ಪಾತ್ರ ಪ್ರವೇಶ ಎಡಬದಿಯಿಂದ ಆಗುತಿತ್ತು.

ಸಂಜೆ ಸುಮಾರು ಏಳು ಘಂಟೆಗೆ ಎಲ್ಲರೂ ಮನೆಗೆ ತೆರಳಿ, ಅಡಿಗೆ ಮಾಡಿ, ನನ್ನ ಸೋದರ ಅತ್ತೆ, ಕೊಟ್ಟಿಗೆಗೆ ಹೋಗಿ ಹಾಲು ಕರೆದು ತಂದು ಕಾಯಿಸಿ ಹೆಪ್ಪು ಹಾಕುತ್ತಿದ್ದರೆ, ಅಜ್ಜಿ ಬಚ್ಚಲಿನ ಒಲೆಗೆ ಇನ್ನಷ್ಟು ಅಡಿಕೆ ಸಿಪ್ಪೆ ಹಾಕಿ ಬೆಂಕಿ ಮಾಡಲು ಊದುತ್ತಿದ್ದರು, ಬೆಳಗಿನ ಸ್ನಾನಕ್ಕೆ ಮುನ್ನೆಚ್ಚರಿಕೆಯಾಗಿ. ಏಳು ಒರೆಗೆಲ್ಲ ಊಟ ಮುಗಿಸಿ, ಮಕ್ಕಳಿಗೆ ಊಟದ ಮಧ್ಯದಲ್ಲಿ "ಯಾರು ಊಟ ಬೇಗ ಮಾಡ್ತ್ರಿಲ್ಯೋ, ಅವರನ್ನ ಯಕ್ಷಗಾನಕ್ಕೆ ಬಿಟ್ಟಿಕ್ಕೆ ಹೋಗ್ತಿ" ಎಂದು ಬ್ಲಾಕ್ಕ್ಮೈಲ್ ಮಾಡುತ್ತಾ ನಾವೆಲ್ಲ ಬೇಗ ಬೇಗ ಉಂಡು ತಯಾರಾಗುವಂತೆ ಮಾಡುತ್ತಿದ್ದರು ಅಜ್ಜಿ. ಹೊರಡುವಾಗ, ಅಜ್ಜಿ ಒಂದು ಸುಮಾರಾಗಿರುವ(ಇನ್ನೇನು ಹಳಾಗುವಂಥದ್ದು) ಒಂದು ಕಂಬಳಿ , ಒಂದು ದೊಡ್ಡ ಚಾದರ ಜೊತೆಯಲ್ಲೇ ತೆಗೆದುಕೊಂಡು ಬರುತ್ತಿದ್ದರು. ಅವರಿಗೆ ಗೊತ್ತಿತ್ತು, ನನ್ನ ಒಬ್ಬಳನ್ನು ಬಿಟ್ಟು ಉಳಿದ ಎಲ್ಲ ಮೊಮ್ಮಕ್ಕಳು, ಯಕ್ಷಗಾನ ಅರ್ಧ ಮುಗಿಯುವ ಹೊತ್ತಿಗೆ ನಿದ್ದೆಗೆ ಹೋಗಿರುತ್ತಾರೆ. ನೆಲದ ಮೇಲೆ ಮಲಗುವುದು ಕಷ್ಟ ಎಂದು. ಸುಮಾರಗಿರುವ ಕಂಬಳಿಯನ್ನು ಅವರು ಆರಿಸಿದ್ದೂ ಧೂಳು ಹತ್ತಿ ಕೊಳೆಯಾದರೆ ಅದೇ ಆಗಲಿ ಎಂಬ ಉದ್ದೇಶದಿಂದ !

ಯಕ್ಷಗಾನದ
ರಂಗ ಮಂಟಪದ ಎದುರಿಗೇ ಅಜ್ಜಿ ಕಂಬಳಿಯನ್ನು ಹಾಸುತಿದ್ದರು. ಅಜ್ಜಿಯಂತೆ
ಊರಿನ
ಎಲ್ಲರೂ ತಮ್ಮ ತಮ್ಮ ಕಂಬಳಿಯನ್ನು ಹಾಸಿ ತಮ್ಮ ಕುಟುಂಬದವರನ್ನು ಕೂರಿಸಿಕೊಳ್ಳುತ್ತಿದ್ದರು. ಯಕ್ಷಗಾನ ನಿಧಾನಕ್ಕೆ ಪ್ರಾರಂಭವಾಗುತಿತ್ತು. ಅಷ್ಟರಲ್ಲಿ ನಾವು ಅಲಂಕಾರ ಗೃಹವನ್ನು ತಿರುಗಿ ಬರುತಿದ್ದೆವು, ಅದರಲ್ಲಿ ಭಟ್ಟರ ಮಗನನ್ನು ಗುರ್ತು ಇಟ್ಟುಕೊಳ್ಳುವ ಇರಾದೆಯೊಂದಿಗೆ !
ನನ್ನ ದೊಡ್ಡಮ್ಮನ ಮಗಳೂ ಯಕ್ಷಗಾನ ಕಲಿಯುತ್ತಿದ್ದಿದ್ದರಿಂದ ಅವಳಿಗೆ ಅದರ ಬಗ್ಗೆ ಸ್ವಲ್ಪ ಜಾಸ್ತಿ ವಿಷಯಗಳೇ ತಿಳಿದಿತ್ತು. ಇನ್ನೇನು ಭಾಗವತರು ಬಂದು, ಹಾಡು ಶುರು ಮಾಡುತ್ತಿದ್ದಂತೆ, ಒಂದು ಪಾತ್ರಧಾರಿಗಳು ಬಂದ ಕೂಡಲೇ, ಅವಳು ನನ್ನ ಕಿವಿಯಲ್ಲಿ ಪಿಸುಗುಡುತ್ತಿದ್ದಳು. "ನೋಡು ದಿವಿ, ಇದು 'ಬಾಲಗೊಪಾಲರ' ವೇಷ. ನಾನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ನಾಳೆ ಚರ್ಚೆ ಮಾಡುವಾಗ ಮರೆತು ಬಿಟ್ಟರೆ ಎಂಬ ಅಂಜಿಕೆಯಿಂದಲೇ. ಅದಾದ ಬಳಿಕ ಬರುತ್ತಿದ್ದುದು "ಸ್ತ್ರೀ ವೇಷ". ಆಗೆಲ್ಲ ನನಗೆ ತಿಳಿಯುತ್ತಿರಲಿಲ್ಲ. "ಸ್ತ್ರೀ ವೇಷ" ಹೇಳುತ್ತಿದ್ದರು, ಆದರೆ ವೇಷ ಕಟ್ಟಿದವ "ಅವ ಸುಬ್ರಾಯ" ಅಲ್ದನಾ? ಎಂದು ಮಾತಾಡಿಕೊಳ್ಳುತ್ತಿದ್ದುದು ನನಗೆ ಬಹಳ ಕುತೂಹಲದ ವಿಷಯವಾಗಿತ್ತು. ಸ್ತ್ರೀ ವೇಷ ಹಾಕಿದವ ಗಂಡಸೇ ಆದರೂ, ಅವನಿಗೆ ಹ್ಯಾಗೆ ಹೆಣ್ಣಿಗೆ ಇರಬೇಕಾದ ಎಲ್ಲವೂ ಇದೆ? ಎಂದು!. ಹಂಗೂ ಅಜ್ಜಿಯನ್ನ ಕೇಳಿ ತಿಳ್ಕೊಂಡೆ ಬಿಡ್ಲಿಲ್ಲ!. ಅದೆಲ್ಲ ಈಗ ನೆನಪಿಸಿಕೊಂಡರೆ ಒಂಥರಾ ಸಿಲ್ಲಿ ಎನಿಸುತ್ತೆ. ಆದರೆ ಅವಾಗ ಅದು ದೊಡ್ಡ ಅನುಮಾನ!. ಸ್ತ್ರೀ ವೇಷ ಮುಗಿದ ಕೂಡಲೇ, ನಮಗೆಲ್ಲಾ, ತಿನ್ನಲು ಏನಾದರೂ ತಂದುಕೊಳ್ಳೋಣ. ಆಮೇಲೆ ಕಥೆ ಶುರುವಾಗಿಬಿಟ್ಟರೆ ಕಷ್ಟ ಎಂದು ಅಜ್ಜಿ ಬಳಿ ದುಡ್ಡು ತೆಗೆದುಕೊಂಡು ಓಡುತ್ತಿದ್ದೆವು. ಅಂಗಡಿಯಲ್ಲಿ, ಶೇಂಗ ಪ್ಯಾಕೆಟ್,ಕಡ್ಲೆ ಪ್ಯಾಕೆಟ್, ವಟಾಣಿ ಮತ್ತು ಕರ್ಜೂರ ಇತ್ಯಾದಿ ಇರುತಿತ್ತು. ಆಮೇಲೆ, ಮಂಡಕ್ಕಿ ಮಸಾಲೆ(ಇಲ್ಲಿಯ ಭಾಷೆಯಲ್ಲಿ ಭೇಲ್ ) ಮಾಡುತ್ತಿದ್ದರು. ನಾವೆಲ್ಲಾ ಒಂದೊಂದು ಪಟ್ನ ಮಂಡಕ್ಕಿ ಮಸಾಲೆ ತಂದು ಚೂರು ಚೂರೇ ತಿಂತಾ ಮತ್ತೆ ಯಕ್ಷಗಾನ ನೋಡ್ತಾ ಇದ್ವು. ನನ್ನ ತಂಗಿ, ತಮ್ಮ ಎಲ್ಲ ಹಾಗೂ ಹೀಗೂ ಎರಡು ಮಂಡಕ್ಕಿ ಪಟ್ನ ಮುಗಿಸೋವರೆಗೂ ಎಚ್ರು ಇದ್ದು, ಸಮಯ ಸುಮಾರು ಒಂದು ಘಂಟೆ ಅನ್ನೋವಷ್ಟರಲ್ಲಿ ನಿದ್ದೆ ಮಾಡಿಬಿಡುತ್ತಿದ್ದರು. ಯಕ್ಷಗಾನ ನೋಡವ್ರು ನೋಡ್ತಾ ಇರುತ್ತಿದ್ದರು, ಮಲಗುವವರು ಮಲಗುತ್ತಿದ್ದರು! ವೇಷ ಕಟ್ಟಿದವರು ಇದೆಲ್ಲದರ ಪರಿವೆಯೇ ಎಲ್ಲ ಎನ್ನುವಂತೆ ಕಲೆಯ ಸೇವೆ ಮಾಡುತ್ತಿದ್ದರು.

ಯಕ್ಷಗಾನದಲ್ಲಿ "ಮಂಡಿ ತಿರುಗುವುದು" ಎಂದು ಒಂದು ಭಂಗಿ ಇರುತ್ತದೆ. ಅದನ್ನು ನೋಡಲು ನಮಗೆ ಬಹಳ ಇಷ್ಟವಾಗುತಿದ್ದು, ನಾವು ಅದಕ್ಕಾಗಿ ಜಾತಕ ಪಕ್ಷಿ ಕಾದ ಹಾಗೆ ಕಾಯುತ್ತಿದ್ದೆವು. ಅದೂ ಮುಗಿದು, ಇನ್ನೊಂದು ಎರಡು ಮಸಾಲೆ ಮಂಡಕ್ಕಿ ಕಾಲಿಯೂ ಆಗಿತ್ತು.ನೋಡನೋಡುತ್ತ ಹಗಲಾಗುತಿತ್ತು. ಯಕ್ಷಾಗಾನವೂ ಮುಗಿಯುವ ವೇಳೆ ಸಮೀಪಿಸಿ ಮಂಗಳ ಹಾಡಿಯೂ ಆಗಿತ್ತು. ನನ್ನ ತಮ್ಮ ತಂಗಿಯರಿಗೆ ಸೊಗಸಿನ ನಿದ್ದೆ ಮುಗಿದು, ಮನೆಗೆ ಹೋಗಲು ಎಬ್ಬಿಸಲು ಅಜ್ಜಿ ತಾಯಾರಾಗುತ್ತಿದ್ದರು. ನನಗೋ ಆಶ್ಚರ್ಯ! ಇಡಿ ರಾತ್ರಿ ನಾನು ನಿದ್ದೆ ಮಾಡದೇ ಯಕ್ಷಗಾನ ನೋಡಿದೆ ಎಂದು. ಬಹುಶ ಅದರ ಬಗೆಗಿನ ನನ್ನ ಪ್ರೀತಿ ನಿದ್ದೆ ಬರಿಸಲಿಲ್ಲವೋ ಏನೋ?! ಗೊತ್ತಿಲ್ಲ. ಮನೆಗೆ ಬರುವ ದಾರಿಯಲ್ಲಿ ಬೇಕೆಂದೇ, ಅರ್ಧಂಬರ್ಧ ನಿದ್ದೆಯಲ್ಲಿರುವ ನನ್ನ ತಂಗಿಗೆ ಕೇಳುವುದು "ಹೆಂಗಿತ್ತು ಯಕ್ಷಗಾನ?" ಅಂತ. ಅವಳು ನಗುತಿದ್ದಳು ಅಷ್ಟೇ!

ಮನೆಗೆ ಬಂದ ಮೇಲೆ ಅಜ್ಜನ ಮಂಚದ ಮೇಲೆ ನಾವೆಲ್ಲಾ ಸಾಲಾಗಿ ಮಲಗುತಿದ್ದೆವು. ಅಜ್ಜನದು ಮನೆಗಾವಲು ಆದ್ದರಿಂದ ಅಜ್ಜನ ನಿದ್ದೆ ಆಗಿರುತಿತ್ತು.( ಅಜ್ಜ ಸ್ವಲ್ಪ ಹೊತ್ತು ಯಕ್ಷಗಾನ ನೋಡಿ, ಆಮೇಲೆ ಮನೆಗೆ ಬರುತ್ತಿದ್ದರು). ಅಜ್ಜಿ ಮಾತ್ರ ಮಲಗದೇ ತನ್ನ ನಿತ್ಯ ಕಾಯಕದಲ್ಲಿ ತೊಡಗುತಿದ್ದಳು. ಮಲಗೆದ್ದ ಮೇಲೆ ಎಲ್ಲರೂ, ನಿಧಾನಕ್ಕೆ ಸ್ನಾನ, ಊಟ ಮುಗಿಸಿ ಹರಟೆ ಹೊಡೆಯಲು ಕುಳಿತಾಗ ಮತ್ತೆ ಯಕ್ಷಗಾನದ ಚರ್ಚೆ. ಮಂಡಿ ತಿರುಗುವ ಬಗ್ಗೆ ವಿಪರೀತ ಆಸಕ್ತಿ ಮೂಡಿ ನಾವೂ ಮಂಡಿ ತಿರುಗೋಣ ಎಂದು ತಿರುಗಿ ಮಂಡಿಯಲ್ಲ ತರಚಿ ಗಾಯ ಮಾಡಿಕೊಂಡಿದ್ದೂ ಆವಾಗಲೇ!. ಹೀಗೆ ಒಂದು ಸುಂದರವಾದ ಯಕ್ಷಗಾನವನ್ನು ನೋಡಿದ, ಸವಿದ ಅನುಭವದ ಅಮೃತ ಸಿಂಚನ.

*****

ಮೊನ್ನೆ ರಾಷ್ಟ್ರೋತ್ತಾನ ಪರಿಷತ್ನಲ್ಲಿ ಇದ್ದ ಯಕ್ಷಗಾನ "ಜಾನಕಿ ಜೀವನ" ಎಂಬ ಪ್ರಸಂಗಕ್ಕೆ ಹೋಗಿದ್ದೆ. ಯಕ್ಷಗಾನ ನೋಡದೇ ಸತತ ಆರು ವರುಷಗಳು ಕಳೆದಿದ್ದವು. ನೋಡುವಾಗೆಲ್ಲ ಬಾಲ್ಯದ್ದೇ ನೆನಪು. ಬೆಂಗಳೂರಿನಲ್ಲಿ ಯಕ್ಷಗಾನ ನಡೆಯುವುದಿಲ್ಲವೆಂದಲ್ಲ. ಆದರೆ ಹಳ್ಳಿಗಳಲ್ಲಿ ಅದನ್ನು ನೋಡುವ ಸಂಭ್ರಮ, ಪರಿಸರ ಅದರ ಮಜವೇ ಬೇರೆ. ಇನ್ನು ಈ ಸೀಡಿ-ಡಿವಿಡಿಗಳೆಲ್ಲ ಊಹೂಂ, ಅದು ಅಷ್ಟಕ್ಕಷ್ಟೇ!. ಏನಂತೀರ?


ಚಿತ್ರಕೃಪೆ: ಅಂತರ್ಜಾಲ

16 ಕಾಮೆಂಟ್‌ಗಳು:

ಸುಮ ಹೇಳಿದರು...

ಚೆಂದ ಇದ್ದೆ ದಿವ್ಯ ಬರೆದದ್ದು :) ಒಮ್ಮೆ ನನ್ನ ಬಾಲ್ಯದಲ್ಲಿ ನೋಡುತ್ತಿದ್ದ ಯಕ್ಷಗಾನದ ನೆನಪೇ ಆತು ಇದನ್ನ ಓದಿ.

shivu.k ಹೇಳಿದರು...

ದಿವ್ಯ,
ಯಕ್ಷಗಾನದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಅಲ್ವಾ..ನಿನ್ನ ಅಜ್ಜಿ ಊರಿನ ದೇವಸ್ಥಾನ,ಪೂರ್ತಿ ರಾತ್ರಿಯ ಯಕ್ಷಗಾನದ ತಯಾರಿ ಆಟ, ನಿಮ್ಮ ಶೇಂಗ, ಮಂಡಕ್ಕಿ, ಮರುದಿನ ಮಂಡಿತಿರುಗುವುದು..ಎಲ್ಲವನ್ನು ಓದುತ್ತಿದ್ದಂತೆ ಕಣ್ಣ ಮುಂದೆ ಬಂದಂತೆ ಆಯ್ತು...ನನಗೂ ಆ ಮಂಡಿ ತಿರುಗುವ ಯಕ್ಷಗಾನ ಇಷ್ಟ.

Subrahmanya ಹೇಳಿದರು...

ನಿಮ್ಮ ಅನುಭವವನ್ನು ರಸವತ್ತಾಗಿ ಹೇಳಿದ್ದೀರಿ. ಚೆನ್ನಾಗಿದೆ.

Ittigecement ಹೇಳಿದರು...

ದಿವ್ಯಾ...

ಉತ್ತರ ಕನ್ನಡ ಹಾಗೂ ದಕ್ಷಿಣಕನ್ನಡದ ಕರಾವಳಿಯ ಜನ ಬುದ್ಧಿವಂತರೆಂದು ಪ್ರತೀತಿಯಿದೆ...
ಕಾರಂತಜ್ಜನ ಪ್ರಕಾರ ಅದಕ್ಕೆ ಕಾರಣ "ಯಕ್ಷಗಾನ"

ನಮ್ಮ ದೈನಂದಿನ ಮಾತುಕತೆಯಲ್ಲಿನ ತರ್ಕ.. ವಿಚಾರಗಳು ಯಕ್ಷಗಾನದಿಂದ ಪ್ರೇರೆಪಿತವಾಗಿರುತ್ತಿದ್ದವು..

ಈಗ ಯಕ್ಷಗಾನದ ಹುಚ್ಚು ಬಹಳ ಕಡಿಮೆ..

ತುಂಬಾ ಅಪರೂಪದ ಕಲೆ ಯಕ್ಷಗಾನ..

ಮಂಟಪ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನ ಆಖ್ಯಾನಕ್ಕೆ ನಾನೂ ಬರುತ್ತಿದ್ದೆ..
ಅನಾರೋಗ್ಯದ ಕಾರಣ ಬರಲಾಗಲಿಲ್ಲ..

ಈಗ ಹೊಟ್ಟೆ ಉರಿತ ಇದೆ..

ಚಂದದ ಲೇಖನ ..

Ittigecement ಹೇಳಿದರು...

ದಿವ್ಯಾ...

ಉತ್ತರ ಕನ್ನಡ ಹಾಗೂ ದಕ್ಷಿಣಕನ್ನಡದ ಕರಾವಳಿಯ ಜನ ಬುದ್ಧಿವಂತರೆಂದು ಪ್ರತೀತಿಯಿದೆ...
ಕಾರಂತಜ್ಜನ ಪ್ರಕಾರ ಅದಕ್ಕೆ ಕಾರಣ "ಯಕ್ಷಗಾನ"

ನಮ್ಮ ದೈನಂದಿನ ಮಾತುಕತೆಯಲ್ಲಿನ ತರ್ಕ.. ವಿಚಾರಗಳು ಯಕ್ಷಗಾನದಿಂದ ಪ್ರೇರೆಪಿತವಾಗಿರುತ್ತಿದ್ದವು..

ಈಗ ಯಕ್ಷಗಾನದ ಹುಚ್ಚು ಬಹಳ ಕಡಿಮೆ..

ತುಂಬಾ ಅಪರೂಪದ ಕಲೆ ಯಕ್ಷಗಾನ..

ಮಂಟಪ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನ ಆಖ್ಯಾನಕ್ಕೆ ನಾನೂ ಬರುತ್ತಿದ್ದೆ..
ಅನಾರೋಗ್ಯದ ಕಾರಣ ಬರಲಾಗಲಿಲ್ಲ..

ಈಗ ಹೊಟ್ಟೆ ಉರಿತ ಇದೆ..

ಚಂದದ ಲೇಖನ ..

Unknown ಹೇಳಿದರು...

I am from Sakleshpur..studied PUC in SDM residential college, Ujire where all students where from other districts where yakshagana is not performed like its done in dakshina n uttara kannada..our lecturers got an idea n a known artist had taught us yakshagana for a month n we had performed it in our first college day..I had felt so happy when they made a make up to me n when i performed on stage :):)

nsru ಹೇಳಿದರು...

ನಮ್ಮ ನಾಡಿನ ವಿಶಿಷ್ಟ ಕಲೆ - 'ಯಕ್ಷಗಾನ' ಹಾಗು ಅದರೊಂದಿಗಿನ ನಿಮ್ಮ ಬಾಲ್ಯದ ಅನುಭವ ತುಂಬ ಆಪ್ತವಾಗಿದೆ..
ಊರಿನಲ್ಲಿ ಅಜ್ಜ ಆಡುತಿದ್ದ ನಾಟಕ ಹಾಗು ನಮ್ಮ ಸ್ಕೂಲ್ ಮಾಸ್ಟರ್ ಮಾಡಿದ ಯಕ್ಷಗಾನ ಪ್ರಸಂಗ ನೆನಪಾಯ್ತು..
ಈ ಕಲೆಗಳು ನಮಗೆ ನೀಡುವು ಅನುಭೂತಿ ನಿರಂತರ..

ಹೀಗೆ ಬರೆಯುತ್ತಿರಿ

ಕನಸು ಹೇಳಿದರು...

ಹಾಯ್
ದಿವ್ಯಾ ಮೆಡಂ,
ನಿಮ್ಮ "ಊರು,ಯಕ್ಷಗಾನ ಮತ್ತು.....ನಾನು!"
ಲೇಖನ ತುಂಭಾ ಚೆನ್ನಾಗಿದೆ,
ನೆನಪುಗಳೆ ಮಾತೆ ಮಧುರ..
ಧನ್ಯವಾದಗಳು.

Kanthi ಹೇಳಿದರು...

Nice write up Divya, In fact the same experiences in my childhood. Whenever I watch Yakshagaana in Bangalore I never get a pleasent feeling like watching in Navive. Its very different feeling when watching yakshagaana in open field rather than any theater. There was one yakshagaana group in our native, we use to go every day to watch the practice in the evening. Those were the best dayz of my life..

Shruthikumar TD ಹೇಳಿದರು...

U remind my childhood days. Nam bayaluseemyalli raamayana/mahabaratha nataka adthidru, Nam maava shakuni paatra. I love those days. Nim ajjithara nanage doddama idru.
Its my first time reading blogs - am impressed.
thankyou verymuch the way you narrated.
thumba kushi aythu !!!!!!!!!!

Santhosh Rao ಹೇಳಿದರು...

Chennagide.. Nice write-up

mahesh.kendur ಹೇಳಿದರು...

waiting for your next blog...

mahesh.kendur ಹೇಳಿದರು...

Divya.. Waiting for your next blog.

ಮನಸಿನ ಮಾತುಗಳು ಹೇಳಿದರು...

ಕಾಮೆಂಟಿಸಿದ ಎಲ್ಲರಿಗೂ ಸಖತ್ ಧನ್ಯವಾದಗಳು..:-)

UAK... ಹೇಳಿದರು...

super

UAK... ಹೇಳಿದರು...

super