ಸೋಮವಾರ, ಜೂನ್ 20, 2011

ಮೈಯನೆ ಹಿಂಡಿ ನೊಂದರು ಕಬ್ಬು....

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು..ಈ ಹಾಡು ಕೇಳಿದೊಡನೆ, ಅಪ್ಪನ ನೆನಪೂ ಅದೇಕೋ ಇದ್ದಕ್ಕಿದ್ದಂತೆ ತೀವ್ರವಾಗಿ ಕಾಡಲು ಶುರುವಿಟ್ಟಿತು. ಅಪ್ಪ ಜೀವನದಲ್ಲಿ ಎಷ್ಟಂದರೂ ಕಷ್ಟ ಪಟ್ಟು ಮೇಲೆ ಬಂದ ಜೀವಿ. ಯಾರಿಂದನೂ ಒಂದು ರೂಪಾಯಿ ಬೇಡದ ಕಟ್ಟಾ ಸ್ವಾಭಿಮಾನಿ. ಯಾರು ಏನೇ ಹೇಳಿದರು, ತಲೆ ಕೆಡಿಸಿಕೊಳ್ಳದೆ, ಅವರಿಗೆ ಒಳ್ಳೇದನ್ನೇ ಮಾಡುವ ಅಪ್ಪನ ಗುಣ, ನನಲ್ಲಿ ಎಂದೂ ಒಂದು ಹೊಟ್ಟೆಕಿಚ್ಚನ್ನು ಉಳಿಸಿಕೊಳ್ಳುವಂಥದ್ದು. ಅಷ್ಟೊಂದು ಸಹನೆ, ಅಷ್ಟೊಂದು ಒಳ್ಳೆತನ ನನ್ನಲ್ಲೂ ಬರಲು ಎಷ್ಟು ಕಾಲ ಕಾಯಬೇಕೆನೋ!

ದಿನಾ ಬಸ್ಸಿನಲ್ಲಿ ಓಡಾಡುವ ಅದೇ ಜಾಗ. ಆದರೂ ಅದೇನೋ ಎಲ್ಲರಂತೆ ನಿದ್ರಿಸುತ್ತಲೋ, ಇಲ್ಲವೆ ಪುಸ್ತಕ ಓದುತ್ತಲೋ ಕೂರುವುದೆಂದರೆ ಶೃತಿಗೆ ಆಗದು. ಸುಮ್ಮನೆ ಕಿಟಕಿಯಿಂದ ಹೊರಗೆ ನೋಟ ನೆಟ್ಟು, ನೋಡಿದ ಜಾಗವನ್ನೇ ಆದರೂ ಮತ್ತೆ ಮತ್ತೆ ನೋಡುತ್ತಲೇ ಮನೆ ಸೇರುತ್ತಿದ್ದಳು. ಆ ನೋಟ ಜನರನ್ನು ಕುತೂಹಲದಿಂದ ನೋಡುತ್ತಿದ್ದರೂ, ಮನಸ್ಸಿನಲ್ಲಿ ಸಾವಿರಾರು ತಲ್ಲಣಗಳು, ಯೋಚನೆಗಳು, ಇಬ್ಬಂದಿತನ, ಹಳೆಯ ನೆನಪಿನ ಮೆಲುಕುಗಳು, ತನ್ನ ಮಾತಿಗೆ ಇನಿಯ ಕೊಟ್ಟ ಪ್ರತ್ಯುತ್ತರ ನೆನೆಸಿಕೊಂಡು ತುಟಿಯಲ್ಲಿ ಬರುವ ಕಿರುನಗು, ಆಕಾಶದಲ್ಲಿ ಕಾಣುವ ಮೋಡಗಳಿಗೆ ತನ್ನ ಪರಿಸ್ಥಿತಿಯನ್ನು ಹೋಲಿಸುತ್ತಾ, ಮೋಡಕರಗಿದಂತೆ ಮನಸ್ಸೂ ತಿಳಿಯಾಗುತ್ತದೆ ಎಂಬೆಲ್ಲ ಲಹರಿಗಳು ಅಡಕವಾಗಿರುತಿತ್ತು. ಮುಂಜಾನೆಯ ಬಸ್ಸಿಗೆ ಹೋಗುವಾಗ ದಾರಿಯಲ್ಲಿ ಕಾಣುವ ಎಷ್ಟೋ ಸಾವಿರಾರು ಮುಖಗಳಲ್ಲೂ ಒಂದೊಂದು ಕಥೆಗಳಿವೆಯಲ್ಲ! ಎಂದು ಅಂದುಕೊಳ್ಳುವಳು. ಶಾಲೆಗೆ ಕಳಿಸಲು ಮಕ್ಕಳನ್ನು ತಯಾರು ಮಾಡಿ, ತಂದೆ ತಾಯಿಗಳು, ಬರುವ ಶಾಲಾ ವಾಹನಕ್ಕಾಗಿ ಕಾಯುತ್ತಿರುವುದನ್ನು ಕಂಡು, ಒಮ್ಮೆ ತನ್ನ ಬಾಲ್ಯದೆಡೆಗೆ ಮನಸನ್ನು ತಿರುಗಿಸುವಳು. ತಾನು ಚಿಕ್ಕವಳಿದ್ದಾಗ ಅಪ್ಪ ತಾನೇ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದರು. ನಾನು ಕ್ಯಾಬ್ಗಳನ್ನೂ ಹತ್ತಲು ಶುರುವಿಟ್ಟಿದ್ದು ಈ ಬೆಂಗಳೂರು ಎಂಬ ಮಹಾನಗರಿಗೆ ಬಂದ ಮೇಲೆಯೇ! ಆದರೆ, ಈಗಿನ ಹುಡುಗರು, ಶಾಲೆಗೆ ಹೋಗಲು ಶುರುವಿಟ್ಟುಕೊಳ್ಳುವಾಗಲೇ ಕ್ಯಾಬ್ ಹತ್ತುತ್ತಾರೆ!

ಆ ದಿನ ತನಗಿನ್ನೂ ಚನ್ನಾಗಿ ನೆನಪಿದೆ. ನಾನಿನ್ನೂ ಪಿ.ಯು.ಸಿ. ಫಲಿತಾಂಶಕ್ಕೆ ಕಾಯುತ್ತಿದೆ. ನನ್ನ ಫಲಿತಾಂಶ ಚನ್ನಾಗಿ ಬಂದಿದ್ದಾಗಿಯೂ, ನಾನು ಇಂಜಿನಿಯರಿಂಗ್ ಮಾಡುವ ಯಾವ ಆಸಕ್ತಿಯನ್ನು ಹೊಂದಿರಲಿಲ್ಲ. ನಾನು ಇಂಜಿನಿಯರಿಂಗ್ ಹೋಗಲು ಇಷ್ಟ ಪಡದಿದ್ದಕ್ಕೆ ಅಪ್ಪ ಮೊದಮೊದಲು ಹುಸಿ ಮುನಿಸು ತೋರಿದರೂ, ಕೊನೆಗೆ ಮಗಳ ಆಸೆಗೆ ವಿರೋಧ ಮಾಡುವುದು ಬೇಡ ಎಂದು , ಬಿ.ಎಸ್ಸಿ ಮಾಡುವುದಕ್ಕೆ ಸಮ್ಮತಿಸಿದ್ದರು. ಅಪ್ಪ ಎಷ್ಟು ಒಳ್ಳೆಯವರು ಅಂತ ನನಗನ್ನಿಸಿತ್ತು. ಎಲ್ಲರ ಅಪ್ಪ ಅಮ್ಮಂದಿರೂ, ತಮ್ಮ ಮಕ್ಕಳು ಇಂಜಿನಿಯರಿಂಗ್ಗೇ ಮಾಡಬೇಕು, ಅವರಿಗೆ ಇಷ್ಟವಿಲ್ಲದಿದ್ದರೂ ಎಂದು ಹಠ ಮಾಡುವುವಾಗ, ನನಗೆ ನನ್ನ ಅಮ್ಮ ಅಪ್ಪ ದೇವರಂತೆ ಕಂಡಿದ್ದರು. ಆದರೆ ಪಕ್ಕದ ಮನೆಯ ಅಂಕಲ್ ಮಾತ್ರ, " ಏನ್ರೀ ಹೆಗಡೆರೆ, ಅಷ್ಟು ಪರ್ಸೆಂಟ್ ಮಾಡಿದ್ರೂ, ನಿಮ್ಮ ಮಗಳನ್ನ ಇಂಜಿನಿಯರಿಂಗ್ ಹಾಕೊದಿಲ್ಲವೇನ್ರಿ? ನೋಡಿ..ನಮ್ಮ ಮಗಳು ಹಿಂದಿನ ವರುಷ ಇಂಜಿನಿಯರಿಂಗ್ ಹಾಕಿಯಾಗಿದೆ. ಇನ್ನೊಂದು ಮೂರು ವರುಷದಲ್ಲಿ ಅವಳು 'ಸ್ಟ್ಯಾಂಡ್' ಆಗುತ್ತಾಳೆ. ಬಿ.ಎಸ್ಸಿ ಓದಿದರೆ ಏನಿದೆ ರೀ?" ಅಂತ. ಮಾತು ನನ್ನ ಕಿವಿಗೆ ಬಿದ್ದರೂ, ಅಪ್ಪ ಮಾತ್ರ ಅವಳಿಗೆ ಇಷ್ಟ ಇಲ್ಲ, ಇಂಜಿನಿಯರಿಂಗ್ ಅಂತ ಹೇಳಿ ಸುಮ್ಮನಾಗಿಬಿಟ್ಟರು.

ಕಾಲ ಚಕ್ರ ಓಡುತ್ತಿರುತ್ತೆ. ಅದು ಯಾರಿಗೂ ಸಹಾ ಕಾಯುವುದಿಲ್ಲ. ಬಸ್ಸಿನಲ್ಲಿ ಬರುವಾಗ ಅಪ್ಪನ ಕಾಲ್. ಅಪ್ಪ ಯಾಕೆ ಈಗ ಫೋನ್ ಮಾಡಿದರು? ಅಂತ ಯೋಚಿಸುತ್ತಲೇ ಫೋನ್ ಎತ್ತಿದೆ. ಅಪ್ಪ ಹೇಳಿದರು..."ಶೃತಿ, ನಿಮ್ಮ ಕಂಪನಿಲಿ ನಮ್ಮ ಪಕ್ಕದ ಮನೆ ಮನೋಜನಿಗೆ ಒಂದು ಕೆಲಸ ಕೊಡ್ಸೋಕೆ ಟ್ರೈ ಮಾಡ್ತಿಯ? ಹೇಗಿದ್ದರೂ ನೀನೇ ತಾನೇ ಆ ಕಂಪನಿಲಿ ಇಂಟರ್ವ್ಯೂ ಎಲ್ಲ ತೆಗೆದುಕೊಳ್ಳೋದು? ನೀನೇ ಹೇಳಿದ್ಯಲ್ಲ? ಮೊದಲ ಎರಡು ರೌಂಡ್ ಪಾಸು ಆದರೆ, ಮುಂದಿನದನ್ನು ನೀನು ನೋಡಿಕೊಳ್ಳುತ್ತಿಯ ಅಂತ , ಎಂದು ನನಗೆ ಮಾತಾಡಲೂ ಬಿಡದೆ ಮಾತಾಡುತ್ತಿದ್ದರು. ಅಪ್ಪ, ಅವನು ಪರ್ಸೆಂಟ್ ಎಷ್ಟು ಮಾಡಿದ್ದಾನೆ? ಅವನು ಆಯ್ದು ಕೊಂಡ ವಿಷಯಗಳು ಯಾವುವು? ಅಂತೆಲ್ಲ ನಾನು ಕೇಳಿದರೆ, ಪೆರ್ಸೆಂಟ್ ಏನೋ 56 ಇರಬಹುದು. ವಿಷಯಗಳು ಯಾವುವು ಅಂತ ನನಗೂ ಗೊತ್ತಿಲ್ಲ. ಅದೇನೋ ಇಂಟರ್ವ್ಯೂ ಇದ್ರೆ ಕಳಿಸ್ತಾರಂತಲ್ಲಾ. ಅವನಿಗೆ ಅದನ್ನ ನಿಂಗೆ ಕಳಿಸೋಕೆ ಹೇಳ್ತೀನಿ ಅಂದರು. ಹ್ಯಾಗಾದ್ರೂ ಮಾಡಿ ಅವನಿಗೊಂದು ಕೆಲಸ ಕೊಡ್ಸು ಮಗ. ಅವನ್ ಅಪ್ಪ ಸಾಲ ಮಾಡಿಕೊಂಡು, ತೀರ್ಸೋಕಾಗ್ದೆ ಒದ್ದಾಡ್ತಾ ಇದ್ದಾರೆ. ಮಗನಿಗೆ ಕೆಲಸ ಸಿಕ್ಕರೆ ಸ್ವಲ್ಪ ಸುಧಾರಿಸಿಕೊಳ್ಳುತ್ತಾರೆ, ಎಂದು ಹೇಳುತ್ತಿದ್ದರೆ, ನನಗೆ ಯಾರೋ ಬಂದು.."ಅಷ್ಟು ಪರ್ಸೆಂಟ್ ಮಾಡಿದ್ರೂ, ನಿಮ್ಮ ಮಗಳನ್ನ ಇಂಜಿನಿಯರಿಂಗ್ ಹಾಕೊದಿಲ್ಲವೇನ್ರಿ? ನೋಡಿ..ನಮ್ಮ ಮಗಳು ಹಿಂದಿನ ವರುಷ ಇಂಜಿನಿಯರಿಂಗ್ ಹಾಕಿಯಾಗಿದೆ. ಇನ್ನೊಂದು ಮೂರು ವರುಷದಲ್ಲಿ ಅವಳು 'ಸ್ಟ್ಯಾಂಡ್' ಆಗುತ್ತಾಳೆ. ಬ.ಎಸ್ಸಿ ಓದಿದರೆ ಏನಿದೆ ರೀ?" ಈ ಮಾತನ್ನು ಪದೇ ಪದೆ ಹೇಳಿದಂತೆ ಭಾಸವಾಗಿ, ಅದರ ಹಿಂದೆಯೇ, ಇಂತಹ ಮಾತನ್ನು ನನಗೆ ಹೇಳಿದವರ ಮಗನಿಗೆ ನಾನ್ಯಾಕೆ ಕೆಲಸ ಕೊಡಿಸಬೇಕು? ಅಂತ ಮನಸ್ಸು ಪ್ರಶ್ನೆ ಕೇಳುತಿತ್ತು. ಮನಸ್ಸು ಹಾಗೆ ಕೇಳಲು ಒಂದು ಕಾರಣ ಇತ್ತು. ಅವರ ಆ ಪ್ರಶ್ನೆಯಲ್ಲಿ ವ್ಯಂಗ್ಯವಿತ್ತು ಆ ದಿನ, ಕುಹಕ ಇತ್ತು, ಏನೋ ಒಂದು ರೀತಿ ಸಂತೃಪ್ತ ಅನುಕಂಪದ ಧಾಟಿ ಇತ್ತು, ತಾವು ನಿಮಗಿಂತ ಮೇಲು ಎಂದು ಸಾರುವ ಅಡಕವಾದ ಸಂದೇಶವಿತ್ತು. ಸರಿ ಹಂಗಾದ್ರೆ.. ಸಂಜೆ ಕಾಲ್ ಮಾಡ್ತೀನಿ. ಏನು ಅಂತ ತಿಳಿಸು, ಅಂತ ಹೇಳಿ ಅಪ್ಪ ಫೋನ್ ಇಟ್ಟರು.

ನಿಜ. ನಾನು ಒಂದು ಮಾತು ಹೇಳಿದರೆ ಸಾಕು, ಆ ಹುಡುಗನ್ನ ಮೊದಲನೇ ಎರಡು ಸುತ್ತಿನಲ್ಲೂ, ಅವನನ್ನು ಪಾಸು ಮಾಡಿಸಿ, ಕೊನೆಯ ಸುತ್ತಿನ ಇಂಟರ್ವ್ಯೂ ನಾನೇ ತೆಗೆದು ಕೊಳ್ಳುವುದರಿಂದ ಅವನಿಗೆ ಕೆಲಸ ಕೊಡಿಸುವುದು ನನ್ನ ಕೈಯಲ್ಲೇ ಇತ್ತು. ಆದರೆ ಮನಸ್ಸು ಮಾತ್ರ, ಅಂಥವರಿಗೆ ಯಾಕೆ ಸಹಾಯ ಮಾಡಬೇಕು? ಎಂದು ಕೇಳುತ್ತಿದ್ದರೆ, ಹಿಂದೆ ನಾನು ಸಹಾಯ ಮಾಡಿ ಕೆಲಸ ಪಡೆದ ನನ್ನ ಸ್ನೇಹಿತರ ಸಂತೋಷದ ಮಾತುಗಳೂ ಕೇಳುತ್ತಿದ್ದವು. ಒಬ್ಬರಿಗೆ ಸಹಾಯ ಮಾಡಿದ್ದಾಗ ಆಗುವ ಸಂತೋಷ, ಹಾಗೂ ಅದರಿಂದ ಅವರು ಪಡುವ ಆನಂದವನ್ನು ನೋಡುವುದಕ್ಕಿಂತ ಸಂತೋಷ ಇನ್ನೇನಿದೆ? ನಿನ್ನ ಸ್ನೇಹಿತರಿಗೆ ಸಹಾಯ ಮಾಡಿದ್ದೀಯ. ಆದರೆ ಇವನಿಗೆ ಯಾಕೆ ಮಾಡಲು ಹಿಂಜರಿಯುತ್ತಿದ್ದೀಯ? ಅವನ ಅಪ್ಪ ಏನೋ ಹೇಳಿರಬಹುದು. ಅದನ್ನೇ ಹಿಡಿದುಕೊಂಡು ಸಾಧಿಸುವುದರಲ್ಲಿ ಏನಿದೆ? ಇರಲಿ. ಅವನಿಗೆ ಸಹಾಯ ಮಾಡೋಣ. ಅವರು ಏನೋ ಹೇಳಿದ್ದರಿಂದ ನನಗೇನೂ ಕೆಡುಕಾಗಿಲ್ಲ. ಎಷ್ಟೇ ಮನಸಿನಲ್ಲೇ ಮಾತನಾಡಿಕೊಂಡರೂ, ಅವನಿಗೆ ಕೆಲಸ ಕೊಡಿಸುವಲ್ಲಿ ಯಾಕೋ ಒಲವೇ ಬರುತ್ತಿಲ್ಲ! ಏನೇನೋ ಯೋಚಿಸುತ್ತ ಆಫೀಸು ಬಂದೇ ಬಿಟ್ಟಿತು ಎಂದು, ತನ್ನ ಬ್ಯಾಗನ್ನು ಹೆಗಲಿಗೇರಿಸಿ, ಬಸ್ಸನ್ನು ಇಳಿದಳು ಶೃತಿ.

***

ಸಂಜೆ ಏನೋ ಪುಸ್ತಕ ಓದುತ್ತಾ ಕುಳಿತಾಗ, ಅಪ್ಪ ಮತ್ತೆ ಕಾಲ್ ಮಾಡಿದರು. ನಾ ಹೇಳಿದ್ದು ಏನು ಮಾಡಿದೆ? ಎಂದು ಕೇಳಿದರು. ಮುಂದಿನ ಸೋಮವಾರ ಅವನ ಇಂಟರ್ವ್ಯೂ ಇಟ್ಟಿದೀನಿ ಅಪ್ಪ. ಅವನಿಗೆ ನಾನು ಏನೇನು ಓದಿಕೊಂಡು ಬರಬೇಕು ಎಂದು ಮೇಲ್ ಮಾಡಿದ್ದೀನಿ. ಓದಿಕೊಂಡು ಬರೋಕೆ ಹೇಳಿ. ಅವನಿಗೆ ಕೆಲಸ ಗ್ಯಾರೆಂಟಿ ಆಗಿದೆ ಎಂದು ಈಗಲೇ ಹೇಳಬೇಡಿ. ನಾನು ಅವನಿಗೆ ನಿಧಾನಕ್ಕೆ ತಿಳಿಸುತ್ತೇನೆ. ಅಪ್ಪ ಸಂತೋಷದಿಂದ, ನನಗೆ ಗೊತ್ತಿತ್ತು, ನಿನ್ನ ಹತ್ತಿರ ಹೇಳಿದರೆ ಕೆಲಸ ಆಗುತ್ತೆ ಎಂದು ಹೇಳಿ ಸಂತೋಷ ಪಟ್ಟರು. ಅವರ ಸಂತಸದ ಜೊತೆ ನಾನೂ!