ಸೋಮವಾರ, ಮಾರ್ಚ್ 28, 2011

ತಪ್ಪ ಮನ್ನಿಸೈ!!

ಪ್ರತೀ ದಿನದಂತೆ
ಈ ದಿನವೂ ನೀನು,
ಸೇವಂತಿಗೆ ಮುಡಿದಿದ್ದರೆ
ನಾನು ಈ ತಪ್ಪನ್ನು ಮಾಡುತ್ತಿರಲಿಲ್ಲ.
ಪ್ರತೀ ದಿನದಂತೆ ನಿನ್ನ ಭೇಟಿ ಮಾಡಿ,
ಕೋಣೆಯಿಂದ ಹೊರಡುತ್ತಿದ್ದ ಹಾಗೇ,
ಇವತ್ತೂ ಹೋಗುತಿದ್ದೆ.

ಸ್ನಾನ ಮುಗಿಸಿ
ಶುಭ್ರ ಬಟ್ಟೆ ತೊಟ್ಟು
ತಿಂಡಿಯನ್ನೂ ತಿನ್ನದೇ
ನಿನ್ನ ಕೋಣೆಗೆ ಬಂದಾಗ,
ನಿನ್ನ ಮುಡಿಯ ಮೇಲೆ ಕುಳಿತು
ನಗುತಿದ್ದ ಅದನ್ನು ಕಂಡು,
ಕೋಣೆಯಲ್ಲಿ ತುಂಬಿದ ಗಾಳಿಯಲ್ಲಿ
ಆವರಿಸಿದ ಘಮಕ್ಕೆ ಮನಸೋತರೂ,
ಬಿಳಿಯಾದ ಅದರ ಎಸಳುಗಳ
ಮೇಲೆ ಬಿದ್ದ ನೀರಿನ ಹನಿಗಳನ್ನು
ಕಂಡು ಪುಳಕಗೊಂಡರೂ
ಹಸಿರು ಗಿಡದ ಮೇಲೆ,
ಮೊಸರು ಚಲ್ಲಿದೆ ಒಗಟು ನೆನಪಾದರೂ,
ನಿನ್ನಲ್ಲಿ ನಾನು ತಲ್ಲೀನಳಾಗಲು ಅದು ಬಿಡದಿದ್ದರೂ
ಅದು ನಿನ್ನದು,ನಿನಗೆ ಸೇರಿದ್ದು
ಎಂದು ಅನ್ನಿಸಿ ಹಾಗೇ ಬಿಟ್ಟಿದ್ದೆ.

ಆದರೆ, ನಿನ್ನ ಕೋಣೆಯಿಂದೀಚೆ
ಬಂದರೂ ನನ್ನ ಸೆಳೆದು,
ಅದು ಬೇಡ ಎಂದು ಗಟ್ಟಿ ನಿರ್ಧಾರ
ಮಾಡಿದರೂ ಆಗದೆ, ಹೋಗಲಿ
ನಿನ್ನದನ್ನು ನಿನಗೆ ಬಿಟ್ಟು
ನಾನು ಬೇರೆ ಕೊಳ್ಳೋಣ ಎಂದರೂ
ಅದು ಸಿಗುವಲ್ಲಿ ಹೋಗಲು
ನನ್ನಲ್ಲಿ ಸಮಯ ಇಲ್ಲದೇ,
ಮತ್ತೆ ನಿನ್ನ ಕೋಣೆಗೇ ಬಂದು
ನಿನ್ನ ಮುಡಿಯಲ್ಲಿರುವುದನ್ನು ತೆಗೆದು,
ನನ್ನ ಮುಡಿಯಲ್ಲಿರಿಸಿಕೊಂಡೇ ಬಿಟ್ಟೆ,
ಮನಸು ಕೇಳದೇ!
ನನ್ನ ಮೇಲೆ ಕೋಪ ಬಂದಿದ್ದರೆ
ನನ್ನ ಮನ್ನಿಸು ದೇವರೇ !!

ಶುಕ್ರವಾರ, ಮಾರ್ಚ್ 25, 2011

ಅಂತರಂಗ

ಯಾಕೋ ಅರ್ಚು ನನ್ನ ಹತ್ರ ಸರಿಯಾಗಿ ಮಾತಾಡ್ತಾ ಇಲ್ಲ. ಅರ್ಚು ಅಂದ್ರೆ ನನಗೂ ಯಾಕೋ ತುಂಬಾ ಇಷ್ಟ. ಇರುವ ಎಲ್ಲ ಹುಡುಗಿಯರಲ್ಲಿ ಅವಳು ನನಗೆ ಹೊಂದಿಕೊಳ್ಳೋಕೆ, ಏನಾದರು ವಿಷಯಗಳಿದ್ದರೆ ಅವಳೊಂದಿಗೆ ಹಂಚಿಕೊಳ್ಳೋಕೆ, ನಾವು ಓದಿದ ಪುಸ್ತಕದ ಬಗ್ಗೆ ಚರ್ಚೆ ಮಾಡುವುದಕ್ಕೆ, ಎಲ್ಲದಕ್ಕೂ ನನಗೆ ಅವಳೇ ಬೇಕು. ಅವಳು ನನ್ನ ಅಚ್ಚು ಮೆಚ್ಚಿನ ಗೆಳತಿಯರಲ್ಲಿ ಒಬ್ಬಳು.ಆಗ ಬೆಂಗಳೂರಿಗೆ ಹೊಸದಾಗಿ ಬಂದ ದಿನಗಳಲ್ಲಿ, ನನ್ನ ಒಂಟಿತನವನ್ನು ದೂರವಿಡಿಸಿದವಳು ಅವಳು. ನನ್ನ ಸ್ವಭಾವಕ್ಕೆ ಒಮ್ಮೊಮ್ಮೆ ನನಗೂ ನನ್ನ ಮೇಲೆ ಕೋಪ ಬಂದಿದ್ದಿದೆ. ಯಾಕಿಷ್ಟು ಹಚ್ಚಿಕೊಳ್ಳಬೇಕು ಜನರನ್ನ? ಆಮೇಲೆ ಯಾಕೆ ಬೇಸರ ಮಾಡಿಕೊಳ್ಳಬೇಕು? ಹೊಸ ಚೂಡಿದಾರ್ ಹೋಲಿಸಿಕೊಂಡಾಗ, ನಮ್ಮ ಟೈಲರ್ ಹೊಲಿದಿದ್ದು ಸರಿಯಾಗಿದೆಯೋ. ಇಲ್ಲವಾ? ಅದನ್ನು ಹೇಳುವುದು ಅವಳೇ. ಯಾವ ಕೇಶ ವಿನ್ಯಾಸ ನನಗೆ ಚಂದ ಕಾಣುತ್ತದೆ ಎಂದು ಹೇಳುವುದು ಅವಳೇ ಆಗಿತ್ತು. ಅವಳು ನಾನು ಯಾವಾಗಲೂ ಜೊತೆಯಾಗಿರುವುದನ್ನು ಕಂಡು ಎಷ್ಟೋ ಜನರಿಗೆ ನಮ್ಮ ಬಗ್ಗೆ "ಹೊ.ಕಿ" ಆಗುತ್ತಿದ್ದುದು ನಮಗೂ ತಿಳಿದಿತ್ತು. ಅದನ್ನು ತಿಳಿದುಕೊಂಡು ನಾವು ಒಳ- ಒಳಗೇ ಖುಷಿ ಪಡುತ್ತಿದ್ವಿ. ಆದರೆ ಯಾಕೋ ಈಗ ಒಂದು ವಾರದಿಂದ ನನ್ನ ಹತ್ತಿರ ಸರಿಯಾಗಿ ಮಾತಾಡುತ್ತಲೇ ಇಲ್ಲ.

ನನಗೆ ಯಾಕೋ ಅವಳ ಮೌನ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ. ಪುಸ್ತಕ ಹಿಡಿದು ಕುಳಿತ್ತಿದ್ದೇನೆ. ಯಾಕೋ ಓದೋಕೆ ಆಗ್ತಾ ಇಲ್ಲ. ಓದ್ತಾ ಇರಬೇಕಾದರೆ ಅವಳ ಮುಖವೇ ಎದುರಿಗೆ ಬರುತ್ತಿದೆ. ಯಾಕೆ ತರ ವರ್ತಿಸುತ್ತಾರೆ ಜನರು? ತುಂಬಾ ಸನಿಹದವರಂತೆ ಇರಿಸಿಕೊಂಡು, ಆಮೇಲೆ ಒಂದೇ ಸಾರಿ ದೂರ ನೂಕುತ್ತಾರೆ? ಅಥವ ಅವಳು ಸರಿಯಾಗೇ ಇದ್ದಳು. ನಾನೇ ಅವಳನ್ನ ಅತಿಯಾಗೆ ಹಚ್ಚಿಕೊಂಡ್ನ? ಇಲ್ಲ. ಅವಳಿಗೂ ನಾನಂದರೆ ಬಹಳ ಇಷ್ಟ . ಅದರ ಬಗ್ಗೆ ಎರಡು ಮಾತಿಲ್ಲ. ಮೂರು ವರ್ಷದಿಂದ ಒಬ್ಬರನ್ನೊಬ್ಬರು ತಿಳಿದುಕೊಂಡಿದ್ದೀವಿ. ಮತ್ತೆ ಯಾಕೆ ಮಾತಾಡ್ತಾ ಇಲ್ಲ ಅವಳು? ದಿನವೂ ನನ್ನ ಊಟಕ್ಕೆ ಕರೆಯುತ್ತಿದ್ದಳು. ನಾವಿಬ್ಬರು ಒಟ್ಟಿಗೆ ಕುಳಿತು, ಊಟದ ಬಗ್ಗೆ ,ಇನ್ನು ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ವಿ. ಅಂಗಡಿಯಿಂದ ತಂದು ಇರಿಸಿದ್ದ ಚಿಪ್ಸ್ ಮತ್ತು ಅಮ್ಮ ಕಳಿಸಿಕೊಟ್ಟ ಮಿಡಿ ಉಪ್ಪಿನಕಾಯಿ ನಮ್ಮ ಊಟವನ್ನು ಇನ್ನೂ ರುಚಿಯಾಗಿಸುತಿತ್ತು.


ಒಂದು ಸಾರಿ ನಾನು ಅವಳಿಗೆ ಹೇಳಿದ್ದೆ.

"ಇವತ್ತು ಒಂದು quote ಓದಿದೆ ಕಣೆ.ಯಾರು ಬರೆದಿದ್ದು ಅಂತ ಗೊತ್ತಿಲ್ಲ. "

"ಏನದು?"


"The more closer you are to people the more cheap you will be!"


"
ನಾನು ಅದನ್ನು ಒಪ್ಪಲ್ಲ."


"
ಯಾಕೆ? ನನಗ್ಯಾಕೋ ಹೌದು ಅನ್ನಿಸುತ್ತೆ."


ಆಮೇಲೆ ಅವಳು ಹೇಳಿದ್ದು ಇಷ್ಟು.

"ಕ್ಲೋಸ್ ಇದ್ದ ಮಾತ್ರಕ್ಕೆ ಚೀಪ್ ಅಂತ ಯಾರೂ ತಿಳಿಯುವುದಿಲ್ಲ. ಹಾಗಿದ್ದಿದ್ದರೆ ಜಗತ್ತಿನಲ್ಲಿ ಸ್ನೇಹಿತರು ಅಂತಾನೇ ಇರುತ್ತಿರಲಿಲ್ಲ. ಎಷ್ಟೋ ವಿಷಯಗಳನ್ನು ನಾವು ಅಪ್ಪ- ಅಮ್ಮನಿಗೆ ಹೇಳಲು ಹೆದರಿದರೂ ನಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ ಅಲ್ಲವ? ಅವರು ಎಂದಾದರು ನಮ್ಮ ಚೀಪ್ ಆಗಿ ಕಾಣ್ತಾರ? ಇಲ್ಲ ಅಲ್ವಾ. ಹೋಗ್ಲಿ, ಈಗ ನಮ್ಮಿಬ್ಬರನ್ನೇ ನೋಡು. ನಾನು ಎಂದಾದರೂ ನಿನ್ನ ಚೀಪ್ ಆಗಿ ಕಂಡಿದ್ದೇನ? ಹಾಗೆ".


ಸೊ ನನಗೆ quote ಇಷ್ಟ ಆಗಿಲ್ಲ ಅಂದಳು. ನನಗೆ ಮನಸೊಳಗೆ ಇಷ್ಟು ಒಳ್ಳೆ ಸ್ನೇಹಿತೆ ಸಿಕ್ಕಿದಕ್ಕೆ ಖುಷಿ ಆಯ್ತು.


ಆದರೆ ಈಗೇನಾಯ್ತು ? ನನ್ನೊಡನೆ ಮಾತೇ ಆಡುತ್ತಿಲ್ಲ. ಮಾತಾಡುವುದು ಹೋಗಲಿ, ಮುಖನೂ ನೋಡ್ತಾ ಇಲ್ಲ. ಅಂಥ ತಪ್ಪು ನನ್ನಿಂದ ಏನಾಗಿದೆ? ಬಾಯಿ ಬಿಟ್ಟು ಹೇಳಿದ್ದರೆ ನಾನು ತಿದ್ದಿಕೊಳ್ಳುತ್ತಿದ್ದೆ. ಆದರೆ ಅವಳು ಹೇಳುತ್ತಿಲ್ಲ.ನನಗೆ ನಿದ್ದೆಯೂ ಬರುತ್ತಿಲ್ಲ. ಮನಸ್ಸು ಮತ್ತೆ ಮತ್ತೆ ಕೇಳುತ್ತೆ. ಅವಳ್ಯಾಕೆ ಮಾತಾಡ್ತಾ ಇಲ್ಲ?ಯಾರಾದರೂ ನನ್ನ ಬಗ್ಗೆ ಏನಾದರು ಹೇಳಿ ಬಿಟ್ರ? ಹಾಗೆ ಹೇಳೋಕೆ ನಾನು ಯಾರಿಗೂ ಏನೂ ಹೇಳಿಲ್ಲ. ಹಾಗೆ ಹೇಳುವ ಧೈರ್ಯ ಯಾರಿಗೂ ಬರಲಿಕ್ಕಿಲ್ಲ. ಯಾಕೆಂದರೆ ಅವಳ ಬಗ್ಗೆ ಯಾರಾದರೂ ನನಗೆ ಹೇಳಿದರೆ ಅಥವ ನನ್ನ ಬಗ್ಗೆ ಅವಳಿಗೆ ಯಾರಾದರು ಹೇಳಿದರೆ ಅದು ನಮಗೆ ಬಂದು ತಲುಪುತ್ತೆ ಅಂತ ಎಲ್ಲರಿಗು ಗೊತ್ತು!. ಇರಲಿ. ಇವತ್ತು ಏನಾದರಾಗಲಿ, ಅವಳನ್ನ ಕೇಳಿಯೇ ಬಿಡುತ್ತೇನೆ ಅಂತ ನಿರ್ಧರಿಸಿದೆ.

ಸಂಜೆ ಅವಳು ಒಬ್ಬಳೇ ಕುಳಿತು ಏನೋ ಓದುತ್ತ ಇದ್ದಳು. ನಾನು ಹೋಗಿ ಅರ್ಚು ಅಂದೆ. ಅವಳು ಒಮ್ಮೆ ಮುಖ ಎತ್ತಿ ಮತ್ತೆ ಓದೋದ್ರಲ್ಲಿ ಮುಳುಗಿದಳು . ನನ್ನ ನೆಚ್ಚಿನ ಸ್ನೇಹಿತೆ ಜೊತೆ ಮಾತಾಡಲು ಮೊದಲ ಬಾರಿಗೆ ಹಿಂಜರಿಕೆ ಆಗ್ತಾ ಇದೆ! ನನ್ನ ತಪ್ಪು ಏನೂ ಇಲ್ಲದೆ ಇದ್ದರು. ನೋಡು, ಹೇಗೆ ಮೌನದಲ್ಲೇ ನನ್ನ ಕೊಲ್ತಾ ಇದ್ದಾಳೆ! ಆದರೂ ಧೈರ್ಯ ತಂದುಕೊಂಡು ಕೇಳಿದೆ.

"ನನ್ನ ಜೊತೆ ಯಾಕೆ ಮಾತಾಡ್ತಾ ಇಲ್ಲ?"


"
ಇಲ್ಲ. ಹಾಗೇನೂ ಇಲ್ಲ".

"ಇಲ್ಲ ಹೇಳು. ನನ್ನಿಂದ ಏನಾದರು ತಪ್ಪಾಗಿದೀಯ ? ಹಾಗಾದ್ರೆ ಸಾರಿ. ಸುಮ್ ಸುಮ್ನೆ ಒಳ್ಳೆ ಗೆಳತಿನ ಕಳೆದುಕೊಳ್ಳೋಕೆ ನಾನು ತಯಾರಿಲ್ಲ. ಪ್ಲೀಸ್ ಹೇಳು" ಅಂದೆ.


"
ಅವಳು, ನೀನು ಆಂಟಿ ಹತ್ರ ಏನು ಮಾತಾಡ್ತಾ ಇದ್ದೆ?"


"
ಯಾವಾಗ?"


"
ಅವತ್ತು..ನೀನು ಗಾಂಧಿ ಬಜಾರ್ ಗೆ ಹೋಗಿ ಬಂದ ಮೇಲೆ."


"
ಏನು ? ನನಗೆ ನಿಜವಾಗಲು ನೆನಪಿಲ್ಲ. ನೀನೆ ಹೇಳು"


"
ಅದೇನೋ ನಿಂಗೆ "ಕಂಜೂಸ್" ಮಾಡವ್ರ ಕಂಡ್ರೆ ಆಗಲ್ವಂತೆ?! ಆಂಟಿ ಹತ್ರ ಹೇಳ್ತಾ ಇದ್ಯಲ್ಲ. ನಾವು ದುಡಿಯೋದು ಹೊಟ್ಟೆಗಾಗಿ. ಕೆಲವರು ಅದಕ್ಕೂ ತಿನ್ನದೇ ದುಡ್ಡು ಉಳಿಸ್ತಾರೆ. ಸಾಯೋವಾಗ ಹೊತ್ತುಕೊಂಡು ಹೋಗ್ತಾರ ಅವರೇನು ? ಅದು ಇದು ಅಂತ.!"


"
ಓಹ್! ಅದಾ ಹೌದು ಕಣೆ. ಕೆಲವರು ಹಾಗೆ. ಏನು ಮಾಡಕ್ ಬರುತ್ತೆ? ಅವರವರ ಇಷ್ಟ. ಎಂದೋ ಒಂದು ದಿನ ಶ್ರೀಮಂತರಾಗಲು ಇವತ್ತನ್ನು ಬಡವರಾಗೇ ಕಳಿತಾರೆ!."

"ಸಾಕು ಸಾಕು!..ನನಗ್ಯಲ್ಲ ಗೊತ್ತಾಯ್ತು!."


"
ಏನು? ನೀನು ಏನು ಹೇಳೋಕೆ ಟ್ರೈ ಮಾಡ್ತಾ ಇದ್ದೀಯ?"


"
ನೀನು ಆಂಟಿ ಹತ್ರ ಹೇಳಬೇಕಾದರೆ ನನ್ನನ್ನೇ ಮನಸಿನಲ್ಲಿ ಇಟ್ಟುಕೊಂಡಿದ್ದೆ. ಅದು ನನಗೆ ಗೊತ್ತು."


"
ಅಯ್ಯೋ..ಖಂಡಿತ ಇಲ್ಲ . ನಾನು ಜನರಲ್ ಆಗಿ ಹೇಳಿದ್ದು. ನೀನು "ಕಂಜೂಸ್" ಅಂತ ನನಗೆ ಯಾವಾಗಲೂ ಅನ್ನಿಸಿಲ್ಲ. ನಿಜ ಹೇಳಬೇಕು ಅಂದ್ರೆ ದುಂದು ವೆಚ್ಚ ಮಾಡದೆ ಹೇಗೆ ದುಡ್ಡು ಉಳಿಸಬೇಕು ಅಂತ ನಿನ್ನಿಂದನೆ ಕೆಲಿತಿದ್ದೀನಿ. ನನಗೆ ನಿನ್ನ ಸ್ವಭಾವ ಬಹಳ ಇಷ್ಟ."


"
ಇಲ್ಲ...ನೀನು ನನ್ನನ್ನೇ ಮನಸಿನಲ್ಲಿ ಇಟ್ಟುಕೊಂಡು ಆಂಟಿ ಹತ್ರ ಮಾತಾಡಿದ್ದು. ನನಗೆ ಗೊತ್ತು. ಇದರ ಬಗ್ಗೆ ಇನ್ನು ಚರ್ಚೆ ಬೇಡ".

ಹೇಳಿದವಳೇ ಹೊರಟು ಹೋದಳು.

"ನೋಡು ನಾನು ಅರ್ಥದಲ್ಲಿ ಏನೂ ಹೇಳಿಲ್ಲ. ನೀನು ಹಾಗೆ ಅಂದುಕೊಂಡರೆ ನಾನು ಏನೂ ಮಾಡೋಕೆ ಆಗಲ್ಲ "....ಅಂತ ಕೂಗಿದೆ. ಅವಳಿಗೆ ಕೇಳಿದೆ ಎಂದು ನನಗೆ ಖಾತ್ರಿಯಾಗಿತ್ತು . ಅವಳಿಗೆ ಯಾಕೆ ಹಂಗೆ ಅನ್ನಿಸಿತು? ನಾನಂತೂ ಖಂಡಿತ ಅರ್ಥದಲ್ಲಿ ಮಾತಾಡಿಲ್ಲ. ಅದೂ, ಅವಳು ನನ್ನ ಇಷ್ಟದ ಸ್ನೇಹಿತೆ. ಅವಳಿಗೆ ಮನಸಲ್ಲಿ ತಾನು "ಖಂಜೂಸ್" ಎಂಬ ಭಾವನೆ ಇರಬಹುದು. ಅದಕ್ಕೆ ಹಾಗೆ ಅನ್ನಿಸಿರಬೇಕು. ಇರಲಿ. ಸ್ವಲ್ಪ ದಿನದಲ್ಲೇ ಸರಿ ಹೋಗ್ತಾಳೆ ಅಂದುಕೊಂಡೆ.


ಮನಸ್ಸು" ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿದರಂತೆ" ಗಾದೆ ಮಾಡಿದವರು ಯಾರು?!! ಕೇಳುತ್ತಿತ್ತು.

ಸೋಮವಾರ, ಮಾರ್ಚ್ 21, 2011

ಯಯಾತಿ ಓದಿದೆ

ಶ್ರೀ ವಿ.ಎಸ್. ಖಾಂಡೇಕರ್ ಅವರು ಮರಾಠಿಯಲ್ಲಿ ಬರೆದ ಈ ಕಾದಂಬರಿಯನ್ನ ವಿ.ಎಂ.ಇನಾಂದಾರ್ ಕನ್ನಡದಲ್ಲಿ ಅನುವಾದ ಮಾಡಿದ್ದಾರೆ.

ಈ ಪುಸ್ತಕ ಓದುತ್ತಿದ್ದಂತೆ ಯಾವುದೋ ಲೋಕದಲ್ಲಿ ನಾವಿದ್ದಂತೆ ಭಾಸವಾಗುತ್ತದೆ. ಕಾದಂಬರಿಯಲ್ಲಿ ಬರುವ ದೇವಯಾನಿ, ಶರ್ಮಿಷ್ಠೆ, ಯಯಾತಿ ಮತ್ತು ಕಚ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಒಬ್ಬೊಬ್ಬರ ಗುಣಗಳು ಒಂದೊಂದು ತರಹ. ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಇಷ್ಟವಾಗುತ್ತಾರೆ ಹಾಗೂ ಇಷ್ಟ ಆಗುವುದಿಲ್ಲ. ಒಂದೊಂದು ಪುಟವನ್ನು ಓದುವಾಗ, ಹೂವಿನ ಪಕಳೆಯ ಮೇಲೆ ಕುಳಿತು, ಯಾವುದೋ ಪುಷ್ಪವನಕ್ಕೆ ಹೋದ ಭಾಸ ನನಗಾಗುತ್ತಿತ್ತು.

ಇದೊಂದು ಕೇವಲ ಕಾದಂಬರಿ ಅಷ್ಟೇ ಆಗಿರದೆ ಕಾವ್ಯದ ರೀತಿಯಲ್ಲಿಯೂ ನನಗೆ ಗೋಚರಿಸಿತು. ತುಂಬಾ ಒಳ್ಳೆ ಒಳ್ಳೆ ಸಾಲುಗಳು ಸಿಕ್ಕುತ್ತವೆ ಪುಸ್ತಕದಲ್ಲಿ. ಮನಸಿಗೆ ಹತ್ತಿರವಾಗುವ ಸಾಲುಗಳನ್ನು ಹೆಕ್ಕಿ ಬರೆದುಕೊಂಡು ಕಡೆಗೊಮ್ಮೆ ಹೆಕ್ಕಿಟ್ಟ ಸಾಲುಗಳನ್ನು ಓದಿದಾಗ ಎಲ್ಲೋ ಒಂದು ಕಡೆ ನಮ್ಮ ಪ್ರತಿಬಿಂಬ ಕಾಣಸಿಗುತ್ತದೆ. ದೇವಯಾನಿಯ ಅಹಂಕಾರ, ಶರ್ಮಿಷ್ಠಳ ಪ್ರೀತಿ-ತ್ಯಾಗ , ಕಚನ ಭಕ್ತಿ- ಸದ್ಗುಣಗಳು, ಯಯಾತಿಯ ಲಂಪಟತನ ಹಾಗು ಅಂತರಂಗದಲ್ಲಿ ಪ್ರೀತಿಗೆ ಹಸಿದವನಾಗಿಯೇ ಉಳಿಯುವ ಯಯಾತಿ. ಒಂದೊಂದು ಅಧ್ಯಾಯ ಓದುತ್ತಿದ್ದ ಹಾಗೆ ಪಾತ್ರಗಳೇ ನಾವೇನೋ ಅನ್ನಿಸುವಷ್ಟು ಮುದ್ದಾಗಿದೆ ಬರೆದ ಶೈಲಿ. ಪ್ರತಿಯೊಂದು ಭಾವದ ಅಭಿವ್ಯಕ್ತಿ ಗೆ ಅಳವಡಿಸಿಕೊಂಡ ಅಲಂಕಾರಗಳು, ಲೇಖಕರ ಕಲ್ಪನೆಗಳು wonderful !!. ನಾನಂತೂ ಇದುವರೆಗೂ ಇಂಥಹ ಒಂದು ಕಾದಂಬರಿಯನ್ನು ಓದಿರಲಿಲ್ಲ. ಕಥೆ ಇಷ್ಟ ಆಯ್ತು, ಇಲ್ಲವೋ ಅನ್ನುವುದಕ್ಕಿಂತ ಅದನ್ನು ಜನರಿಗೆ ಉಣ ಬಡಿಸಿದ ಶೈಲಿಗೆ hats off !!

****

ಇದೊಂದು ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ. ಹತ್ತು ದಿನಗಳಲ್ಲಿ ಕುಳಿತು ಈ ಪುಸ್ತಕವನ್ನು ಓದಿದ ಖುಷಿ ಹಾಗೂ ಅದನ್ನು ಓದುವಾಗಲಿನ ನನ್ನ ಖುಷಿಯ ಕ್ಷಣಗಳು ಎರಡೂ ನನ್ನದಾಗಿದೆ.


(ಚಿತ್ರಕೃಪೆ: ಅಂತರ್ಜಾಲ)