ಶುಕ್ರವಾರ, ಅಕ್ಟೋಬರ್ 21, 2011

ಬೆಳ್ಳುಳ್ಳಿ ಉಪ್ಪಿನಕಾಯಿ

ಅದೇನೋ ನನಗೆ ಗೊತ್ತಿಲ್ಲ. ಉಪ್ಪಿನಕಾಯಿ ಇಲ್ಲದೆ ಇರುವ ಊಟ ನನಗೆ ಇಷ್ಟವೇ ಆಗುವುದಿಲ್ಲ. ಉಪ್ಪಿನಕಾಯಿ ಇರಲೇ ಬೇಕು ಊಟಕ್ಕೆ. ದಿನವೂ ಊಟವನ್ನು ನಾನು ಜೊತೆಯಲ್ಲೇ ತರುವುದರಿಂದ ಏನಾದರೂ ನಂಚಿಕೊಳ್ಳಲು ಬೇಕೇ ಬೇಕು ಎನಿಸುತ್ತದೆ. ಊಟ ಅಂದರೆ ಊಟವಲ್ಲ. ನಾನು ತರುವುದರಲ್ಲಿ ಪುಳಿಯೋಗರೆ, ಚಿತ್ರಾನ್ನ, ಮೇತಿ ರೈಸ್ ಇವುಗಳಲ್ಲಿ ಯಾವುದಾದರೂ ಇರಬಹುದು. ಅದನ್ನ ಹಾಗೇ ತಿನ್ನಲು ಸಪ್ಪೆ ಎನಿಸಿದಾಗ ಯಾವುದಾದರೂ ಉಪ್ಪಿನಕಾಯಿಯ ಮೊರೆ ಹೋಗುವುದೇ ಉಳಿದ ದಾರಿ. ಹೀಗೆ ಉಪ್ಪಿನಕಾಯಿ ಅರಸುತ್ತ ಅಂಗಡಿಗೆ ಹೋಗಿದ್ದಾಗ ನನ್ನ ಕಣ್ಣಿಗೆ ಉಪ್ಪಿನಕಾಯಿ ಪ್ಯಾಕೆಟುಗಳ ಮಾಲೆಯಲ್ಲಿ ಜೋತು ಬೀಳುತ್ತಿದ್ದ ಬೆಳ್ಳುಳ್ಳಿ ಉಪ್ಪಿನಕಾಯಿ ಕಾಣಿಸಿತು. ನೋಡೋಣ ಎಂದು ಕೊಂಡು ತರುವಾಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಅದರ ಮೇಲೆ ಬರೆದಿರುವ "ingredients " ನೋಡಿದೆ. ಅದನ್ನು ಮಾಡಲು ಬಳಸಿದ ಎಲ್ಲಾ ಪದಾರ್ಥಗಳೂ ಸಾಮಾನ್ಯವಾಗಿ ಎಲ್ಲರ ಮನೆಯ ಸಾಂಬಾರ್ ಡಬ್ಬಿಯಲ್ಲಿ ಇರುವಂಥದ್ದೇ! ತಕ್ಷಣ ಇದನ್ನು ಮಾಡಲು ಕಲಿಯೋಣ ಎನಿಸಿ, ಅದು ಮನೆಯಲ್ಲಿ ಹೊಸ ಪ್ರಯೋಗಕ್ಕೆ ಸ್ಪೂರ್ತಿಯಾಗಿ, ಅದು ಯಶಸ್ವಿಯಾಗಿ ನಿಮ್ಮ ಮುಂದೆ ಮಾಡುವ ವಿಧಾನವನ್ನು ಹಂಚಿಕೊಳ್ಳುವ ಆತ್ಮವಿಶ್ವಾಸ ಹುಟ್ಟು ಹಾಕಿದೆ.

ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ ನಿಮ್ಮ ಮುಂದೆಬೇಕಾಗುವ ಸಾಮಾಗ್ರಿಗಳು
ಬೆಳ್ಳುಳ್ಳಿ ಎಸಳುಗಳು - ಹನ್ನೆರಡು ಎಸಳುಗಳು (ಇದು ಎಸಳುಗಳ ಗಾತ್ರದ ಮೇಲೆ ಬದಲಾಗುತ್ತದೆ)
ಧನಿಯ - ಎರಡು ಟೀ ಚಮಚ
ಮೆಂತ್ಯ ಕಾಳು -ಎರಡು ಟೀ ಚಮಚ
ಜೀರಿಗೆ - ಒಂದು ಟೀ ಚಮಚ
ಲಿಂಬೆ ರಸ - ೧/೪ ಲೋಟ
ಅರಿಸಿನ ಪುಡಿ -ಒಂದು ಟೀ ಚಮಚ
ಮೆಣಸಿನ ಪುಡಿ - ಎರಡು ಟೀ ಚಮಚ
ಎಣ್ಣೆ - ಐದು ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು

ವಿಧಾನ
 1. ಮೊದಲಿಗೆ ಧನಿಯ, ಮೆಂತ್ಯ ಕಾಳು, ಜೀರಿಗೆಯನ್ನು ಒಂದು ಬಾಣಲೆಯಲ್ಲಿ ಸ್ವಲ್ಪ ಕಪ್ಪಗಾಗುವವರೆಗೆ ಹುರಿಯಿರಿ. ಇದನ್ನು ಮಿಕ್ಸರ್ನಲ್ಲಿ ನೀರು ಹಾಕದೆ ಪುಡಿಯಾಗುವಂತೆ ರುಬ್ಬಿ ಒಂದೆಡೆ ಇರಿಸಿ.
 2. ಇನ್ನೊಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ.
 3. ಈಗ ಇದೇ ಬಾಣಲಿಗೆ ಬೀಸಿಟ್ಟ ಮಸಾಲೆ ಪುಡಿ, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ ಮತ್ತು ಲಿಂಬೆ ರಸ ಹಾಕಿ ಒಮ್ಮೆ ಕೈಯ್ಯಾಡಿಸಿ.
 4. ಚನ್ನಾಗಿ ಕೈಯ್ಯಾಡಿಸುತ್ತ, ಸ್ವಲ್ಪ ಮಂದ(ದಪ್ಪ) ಅಗುವಂತಾಗಿಸಿ.
 5. ಚೂರು ಚೂರು ಎಣ್ಣೆ ಸೇರಿಸುತ್ತಾ ಸ್ವಲ್ಪ ಹೊತ್ತು ಕುದಿಸಿ ಕೆಳಗಿಸಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ.
ಇದನ್ನು ದೋಸೆ, ಚಪಾತಿ, ರೊಟ್ಟಿ ಎಲ್ಲದರ ಜೊತೆಗೆ ಬಳಸಬಹುದು. ಮೊಸರನ್ನಕ್ಕೆ ಹೇಳಿ ಮಾಡಿಸಿದ ಜೊತೆಗಾರ!

***

ದೀಪದ ಹಬ್ಬ ನಿಮ್ಮೆಲ್ಲರ ಬಾಳಲ್ಲಿ ಹರುಷ ಉಲ್ಲಾಸ ತರಲಿ. ನನ್ನ ಎಲ್ಲ ಸ್ನೇಹಿತರಿಗೂ ದೀಪಾವಳಿಯ ಶುಭಾಶಯಗಳು..
ದಿವ್ಯಾ :-)

(ಚಿತ್ರ ಕೃಪೆ: istockphotos )

ಶುಕ್ರವಾರ, ಅಕ್ಟೋಬರ್ 14, 2011

ಹೆಸರಿನ ಹಂಗಿಲ್ಲದ್ದು - ೨

<1>

ಬೆಟ್ಟದ ತುದಿಯಲ್ಲಿ,
ಝುಳು-ಝುಳು ನೀರಿನ
ಸದ್ದಿನ ನಡುವೆ,
ಹಸಿರು ಹುಲ್ಲಿನ
ಹಾಸಿಗೆಯ ಮೇಲೆ,
ಎಂದಿನಂತೆ
ನನ್ನ ಕನಸಿನಲ್ಲಿ,
ನಿನ್ನೆ ,ನಾನೊಬ್ಬಳೇ
ಇರಲಿಲ್ಲ,
ಜೊತೆಯಲ್ಲಿ ಇದ್ದಿದ್ದು
ಯಾರೆಂಬ ಕುತೂಹಲವೂ
ಇಲ್ಲ ನನಗೀಗ,
ಹಾಗೆ ನನ್ನ ಕನಸಿನಲ್ಲಿ
ಬರುವ ಹಕ್ಕನ್ನು,
"ನಿನಗೆ" ಖುದ್ದಾಗಿ
ನಾನೇ ಕೊಟ್ಟಿರುವಾಗ
ಇನ್ನೆಲ್ಲಿಯ ಕುತೂಹಲ!


<2>

ಇವನು ಹೇಳುತ್ತಾನೆ
ಆತ ಬಹಳ
ಒಳ್ಳೆಯವನು ಎಂದು.
ನನಗೂ,
ಅತ್ತೆಗೂ ತಿಳಿದಿದೆ
ಅವ ಏನು ಎಂದು?
ಜಗತ್ತೇ ಒಳ್ಳೆಯದು
ಎಂದು ಹೇಳುವ
ಇವನಿಗೆ,
ಹೇಗೆ ತಿಳಿಸುವುದು?
ಬೆಳ್ಳಗಿರುವುದೆಲ್ಲ
ಯಾವಾಗಲೂ ಹಾಲೇ
ಆಗಬೇಕೆಂದಿಲ್ಲ ಎಂದು!

<3>

ನೆನಪಾಗುತ್ತಿದೆಯೇ
ಆ ದಿನಗಳು?
ಆ ಮಧುರ
ಮಾತುಗಳು?
ಆ ಪ್ರೀತಿಯ
ಕರೆಯೋಲೆಗಳು?
ಅವಳ ಕಣ್ಣೀರ
ಹನಿಗಳು?
ಅವಳು ನಿನಗಾಗಿ
ಕಾದು ನಶಿಸಿದ
ಘಳಿಗೆಗಳು?
ಎಷ್ಟೇ ನೆನಪಾದರೂ
ನೆನಪಿರಲಿ,
ಅವಳಿಂದು ಬೇರೆಯವರ
ಸೊತ್ತು,
ನಿನಗಿದು ಪಶ್ಚಾತಾಪದ
ಹೊತ್ತು!!

<4>

ಬುದ್ದಿವಂತ ಹೆಂಡತಿ
ಹೇಳಿದಂತೆ ಕೇಳಿಕೊಂಡು
ಸಂಸಾರ ಮಾಡುತ್ತಿದ್ದ
ಗಂಡನನ್ನು ಕಂಡು,
ಪಕ್ಕದ ಮನೆಯವನಿಗೆ ,
ತನ್ನ ಕಳ್ಳ ವ್ಯವಹಾರ
ಎನೂ ಅರಿಯದ,
ತನ್ನ ಪೆದ್ದು
ಹೆಂಡತಿಯ ಮೇಲೆ
ಅನುಕಂಪ ಹೆಚ್ಚಾಗಿ,
ಮುದ್ದು ಉಕ್ಕಿತಂತೆ!!

<5>

ಸುಮ್ಮನೆ ಹೋಗುತ್ತಿದ್ದೆ,
ನನ್ನಷ್ಟಕ್ಕೆ ನಾನು,
ಜೊತೆಯಲ್ಲಿ ಬಂದನೊಬ್ಬ
ಆಸಾಮಿ.
ಕನಸು ಹಂಚಿಕೋ ಎಂದ,
ಉತ್ಸಾಹಿತಳಾದ
ನಾನು ಹಂಚಿಕೊಂಡೆ,
ಹಂಚಿಕೊಂಡ
ನನ್ನ ಕನಸನ್ನು
ಅವ ಬಾಚಿಕೊಂಡು
ತನ್ನದಾಗಿಸಿಕೊಳ್ಳುವ
ಆತುರದಲ್ಲಿ
ಹೊರಟೇ ಹೋದ,
ತಿರುಗಿಯೂ ನೋಡದೆ

<6>

ಎಂದಿನಂತೆ ಅವರು,
ಇಂದೂ ತರಲೆ
ಮಾತಾಡಿದರು.
ಎಂದಿನಂತೆ ನಾನು
ಸಿಡುಕಲಿಲ್ಲ.
ಬದಲಿಗೆ ಅವನಿಗೆ
ಕಿಟಕಿಯಲ್ಲೇ ಕರೆದು
ವರದಿ ಒಪ್ಪಿಸುತ್ತೇನೆ.
ತಲೆಯಲ್ಲಿರುವ ಕೊಳೆಯಲ್ಲ
ಅಕ್ಷರಕ್ಕೆ ಇಳಿದು
ಮನಸು ಬೆತ್ತಲಾದಂತೆ,
ತುಟಿಯಲ್ಲಿ ನಗು,
ಸಮಾಧಾನದಿಂದ
ಆಲಿಸಿದ
ಅವನ ಬಗೆಗೆ
ಮನದಲ್ಲಿ
ಮೆಚ್ಚುಗೆಯ ಬುಗ್ಗೆ!
ಇದಕೆಲ್ಲ ಕಾರಣ
ಅವನಲ್ಲ,
ಎಂದರೆ ತಪ್ಪು
ನನ್ನದೇ ಅಲ್ಲವೆ?


ಗುರುವಾರ, ಸೆಪ್ಟೆಂಬರ್ 22, 2011

ಪೂರ್ವಾನ್ವಯ

ಆವಾಗ ನಾನು ಅಪ್ಪಯ್ಯನ ಬಳಿ ಅದೆಷ್ಟು ಬೇಡಿಕೊಂಡಿದ್ದೆ? ನಾನು ಮುಂದೆ ಓದಬೇಕು. ದಯವಿಟ್ಟು ಶಾಲೆಯ ಫೀಸಿಗೆ ಎರಡು ರೂಪಾಯಿ ಕೊಡಿ ಅಂತ ಎಷ್ಟೇ ಬೇಡಿದ್ದರೂ ಅಪ್ಪಯ್ಯ ಕೊಡಲೇ ಇಲ್ಲ. ಅವನಿಗೆ ನಾವು ಹೇಗಿದ್ದರೂ ಮುಂದೆ ಇನ್ನೊಬ್ಬರ ಮನೆಗೆ ಹೋಗಿ ಮುಸುರೆ ತಿಕ್ಕುವವರು. ಇವರು (ಹೆಣ್ಣು ಮಕ್ಕಳು) ಓದಿದರೆಷ್ಟು? ಬಿಟ್ಟರೆಷ್ಟು? ಎಂಬ ಅಭಿಪ್ರಾಯ. ಅವರ ಅಭಿಪ್ರಾಯ ಬದಲಾಯಿಸೋಕೆ ಆಗುತ್ಯೇ? ಅಮ್ಮ ಅಪ್ಪನೆದುರು ನಿಂತು ಮಾತಾಡಿದ್ದೇ ನನಗೆ ನೆನಪಿಲ್ಲ. ಊಟದ ಸಮಯ ಆದ ಕೂಡಲೇ, ಅಪ್ಪಯ್ಯನ್ನ ಊಟಕ್ಕೆ ಕರಿಯೇ ತಂಗಿ ಎಂದು ಹೇಳಿದ್ದೇ ನೆನಪಿಲ್ಲ. ಅವರು ಯಾವಾಗಲೂ, ಜಗಲಿಯಲ್ಲಿ ಕೂತವರನ್ನು ಕರಿ ಎಂದೇ ಹೇಳುತಿದ್ದ ನೆನಪು. ಹೀಗಿದ್ದ ಅಮ್ಮನ ಬಳಿ ಅಪ್ಪನಿಗೆ ನಾನು ಓದಲು ಸಹಾಯ ಮಾಡಲು ಕೇಳಿಕೊಳ್ಳುವ ಮನಸ್ಸಾಗಲಿಲ್ಲ ನನಗೆ. ನನ್ನ ಜೊತೆ ಜೊತೆಯೇ ಓದುತ್ತಿದ್ದ ಭಾರತಿ ಓದೋಕೆ ಅಷ್ಟೇನೂ ಚೂಟಿಯಿಲ್ಲದಿದ್ದರೂ ಅವಳ ತಂದೆ ಅವಳಿಗೆ ಮುಂದಕ್ಕೆ ಓದಲು ಎಷ್ಟೊಂದು ಪ್ರೋತ್ಸಾಹಿಸಿದ! ನನಗೆ ಆಗ ಬೇಸರ ಪಡದೆ ಇರುವುದಕ್ಕೆ ಆಗಲೇ ಇಲ್ಲ. ಅದು ಯಾವಾಗಲೂ ಹಾಗೇ! ನಮಗೆ ಸಿಗದಿದ್ದರೆ ಇಲ್ಲ. ಆದರೆ ನಮಗಿಂತ ಕೆಳಗಿರುವರಿಗೆ, ಅಥವ ನಾವು ಅಂದುಕೊಂಡ ನಮಗಿಂತ ಉತ್ತಮ ಏನೂ ಅಲ್ಲ ಬಿಡು ಅಂದುಕೊಂಡವರಿಗೆ, ನಮಗೆ ಸಿಗದ ಯೋಗ ದೊರೆತರೆ ಆವಾಗ ಆಗುವ ಸಂಕಟವೇ ಬೇರೆ! ಅಪ್ಪ ನನಗೆ ಓದಿಸದೇ ಇದ್ದಿದಕ್ಕೆ ನಮ್ಮ ಬಡತನವೂ ಕಾರಣವಾಗಿತ್ತು. ನಮ್ಮ ಬಡತನವನ್ನೇ ಮುಂದಿಟ್ಟುಕೊಂಡು ನನ್ನ ನೊಂದ ಮನಸ್ಸನ್ನು ಸಮಾಧಾನಿಸಿಕೊಂಡಿದ್ದೆ. ನನಗಂತೂ ಓದುವ ಭಾಗ್ಯ ದೊರೆಯಲಿಲ್ಲ. ನನ್ನ ಮಕ್ಕಳಿಗಾದರೂ ಓದಿಸಬೇಕು ಎಂದು ನಿಶ್ಚಯಿಸಿದ್ದೆ.

ಆದರೆ ಹೀಗೆಲ್ಲ ಅಂದುಕೊಂಡ ನಾನು ನನ್ನ ಮಗನ ಓದಿಗೆ ಯಾಕೆ ಮುಂದೆ ಬಂದು ಸಹಕರಿಸಲಿಲ್ಲ? ಇವರಿಗೆ ನಮ್ಮ ಮನೆಯಲ್ಲಿ ಇರುವ ಆಸ್ತಿಯೇ ಸಾಕು. ಇವನು ಓದಿದರೆ ಮುಂದೆ ಪೇಟೆ ಸೇರಿಕೊಂಡರೆ ನಮ್ಮ ಗತಿ ಏನು? ಅಂತ ಅವರು ಹೇಳಿದಾಗ, ಹೌದು. ಮಗ ಬುದ್ದಿವಂತ. ಓದಿಕೊಂಡರೆ ಮುಂದೆ ಒಳ್ಳೆ ಕೆಲಸ ಸಿಕ್ಕೇ ಸಿಗುತ್ತೆ. ಆಗ ಅವನು ಬೇಡ ಎಂದರೂ ನಮ್ಮ ಮಾತು ಕೇಳುವುದಿಲ್ಲ. ಅದಕ್ಕೆ ಅವನು ಮುಂದೆ ಓದುವುದು ಬೇಡ. ಇಲ್ಲೇ, ನಮ್ಮ ಕಾಲು ಬುಡದಲ್ಲೇ ಇರುವಷ್ಟು ತೋಟವನ್ನು ನೋಡಿಕೊಂಡು ಹಾಯಾಗಿ ಇರಲಿ. ಮಗ ನಮ್ಮ ಬಳಿಯೇ ಇರಲಿ ಎಂಬ ಸ್ವಾರ್ಥ ನನ್ನದೂ ಇತ್ತು. ಅದನ್ನು ಅಲ್ಲಗೆಳೆಯಲಾರೆ. ಪ್ರೀತಿಯ ಮಗ. ಅಪ್ಪ ಅಮ್ಮನಿಗೆ ನೋವಾಗಬಾರದು ಎಂದು ಹಠವನ್ನೂ ಮಾಡಲಿಲ್ಲ. ಸುಮ್ಮನಾಗಿಬಿಟ್ಟ. ಆದರೆ ನಾನು ಹಾಗೆ ಮಾಡಬಾರದಿತ್ತು.

***

ಅವರು ನಿನ್ನೆ ಕಾಲ್ ಮಾಡಿದಾಗ ಹೇಳಿದ್ದು ಸರಿಯಾಗಿ ಒಂಭತ್ತು ಘಂಟೆಗೆ ಅಲ್ಲಿರಬೇಕು. ಅವರು ಶಿಸ್ತನ್ನು ಪಾಲಿಸುವವರು. ಸ್ವಲ್ಪ ಸಮಯ ಹೆಚ್ಚೂ ಕಡಿಮೆಯಾದರೂ ನಿನ್ನನ್ನು ಒಳಗೆ ಬಿಡುವುದಿಲ್ಲ ಎಂದು!. ಅದೇ ಮಾತನ್ನು ತಲೆಯೊಳಗೆ ತುಂಬಿಕೊಂಡು ಕಣ್ಣು ಮುಚ್ಚಿದವನಿಗೆ ನಿದ್ದೆ ಎಲ್ಲಿ ತಾನೇ ಬರಬೇಕು?! ಮಗ್ಗುಲು ಬದಲಾಯಿಸುತ್ತ, ಅತಿತ್ತ ಹೊರಳಾಡುತ್ತಾ ಸ್ವಲ್ಪ ಸಮಯ ಹಾಸಿಗೆಯಲ್ಲೇ ಕಳೆದಿದ್ದಾಯಿತು. ಕಾಲ್ ಬಂದಾಗಿನಿಂದ ಏನೋ ಒಂದು ರೀತಿಯ ಆತಂಕ, ದುಗುಡ, ಭಯ!. ಏನೋ ಒಂದು ರೀತಿಯ ತಲ್ಲಣ. ಅವರೇನೋ ಹೇಳಿದ್ದಾರೆ, "ಬಿ ಬ್ರೇವ್ " ಅಂತ. ಮಲಗಿದ್ದವನಿಗೆ ಒಮ್ಮೆ ಬಾತ್ರೂಮಿಗೆ ಹೋಗುವ ಎಂದೆನಿಸಿ ಹೋಗಿ ಬಂದು ಮಲಗಿದಾಗಲೂ ಮತ್ತದೇ ಅದೇ ಯೋಚನೆಗಳು. ನಾಳೆ ದಿನ ಹೇಗಾಗುತ್ತೋ? ನಾನು ಸಮಯಕ್ಕೆ ಸರಿಯಾಗಿ ಹೋಗೋಕೆ ಆಗುತ್ತೋ ಇಲ್ವೋ? ಅವರು ಇನ್ನೇನು ಪ್ರಶ್ನೆಗಳನ್ನ ಕೇಳ್ತಾರೋ? ಹೀಗೆ ಸಾಗುತ್ತಿದ್ದ ಯೋಚನಾ ಲಹರಿಗೆ ಯಾವುದೋ ಒಂದು ಘಳಿಗೆಯಲ್ಲಿ ನಿದ್ದೆ ಒತ್ತರಿಸಿ ಬಂದು ಯೋಚನೆ ನಿಂತಿತ್ತು.

ಬೆಳಗಾಗುವುದರೊಳಗೆ ಎದ್ದು, ಸ್ನಾನ ಮುಗಿಸಿ ಮತ್ತೆ ಒಂದು ಪುಸ್ತಕ ಹಿಡಿದು ಹಾಳೆಯನ್ನು ತಿರುವತೊಡಗಿದ. ಸಮಯ ಈಗಾಗಲೇ ಆರು ಘಂಟೆ! ಇನ್ನು ಕೇವಲ ಮೂರು ಘಂಟೆಗಳಲ್ಲಿ ನಾನು ಅಲ್ಲಿರಬೇಕು. ಹಾಗಂದುಕೊಳ್ಳುತ್ತಲೇ ಬ್ಯಾಗಿನಲ್ಲಿ ರಾತ್ರಿ ಜೋಪಾನವಾಗಿ ಫೈಲಿನಲ್ಲಿ ಸೇರಿಸಿಟ್ಟ ರೆಸುಮನ್ನು ನೋಡಿಕೊಂಡ. ಗೆಳೆಯರು, ನಿನ್ನ ರೆಸುಮಿನಲ್ಲಿ ಇರುವುದರ ಬಗ್ಗೆಯೇ ಪ್ರಶ್ನೆ ಕೇಳುತ್ತಾರೆ ಎಂದು ಹೇಳಿದ್ದು ಅವನಿಗೆ ಜ್ಞಾಪಕವಾಗಿದೆ. ತಿರಿಸಿ ಮುರಿಸಿ ಹೇಗೆ ನೋಡಿದರೂ ಎಲ್ಲಾ ತನಗೆ ತಿಳಿದಿರುವುದೇ ಎಂದು ಅವನಿಗನಿಸುವುದು. ಇದು ಬಹುಷಃ ನಾನು ಹೋಗುತ್ತಿರುವುದು ಐದನೇ ಸಾರಿ. ಅಮ್ಮ ಹೇಳುತ್ತಾಳೆ, ಪ್ರತೀ ಭಾರಿಯೂ ನಾನು ಹೋಗುವಾಗ ಒಂದು ತೆಂಗಿನ ಕಾಯಿ ತೆಗೆದಿಟ್ಟಿದ್ದೇನೆ, ನಿನಗೆ ಒಳ್ಳೆಯದಾಗುತ್ತದೆ ಎಂದು. ಹಾಗಾದ್ರೆ ಹಿಂದೆ ದೇವರ ಹೆಸರಿನಲ್ಲಿ ತೆಗೆದಿಟ್ಟ ನಾಲ್ಕೂ ತೆಂಗಿನಕಾಯಿಗಳಿಗೆ ಅರ್ಥವೇ ಇಲ್ಲವೆ? ಪ್ರಶ್ನೆ ಕೇಳುತಿತ್ತು ಮನಸ್ಸು. ಕೆಲವೊಂದು ವಿಷಯಗಳನ್ನು ಕೇವಲ ನಂಬಿಕೆ ಎಂದು ಅಂದುಕೊಂಡು ಸುಮ್ಮನಿರುವುದೇ ಒಳಿತು. ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ, ಉತ್ತರ ಹುಡುಕುತ್ತ ಹೋದಂತೆ ತಲೆ ಕೆಡುತ್ತದೆ ವಿನಃ ಸಮಂಜಸ ಉತ್ತರ ದೊರೆಯುವುದಿಲ್ಲ. ವಿಷಾದದ ನಗು ಹಾದು ಹೋಯಿತು ಅವನ ತುಟಿಯಲ್ಲಿ.

ಹೇಳಿ ಕೇಳಿ ಬೆಂಗಳೂರಿನ ಹೊರವಲಯದಲ್ಲಿ ಗೂಡು ಕಟ್ಟಿರುವುದು ನಾನು. ಇಲ್ಲಿಂದ ನಾನು ತಲುಪಬೇಕಾದ ಜಾಗಕ್ಕೆ ಹೋಗುವುದಕ್ಕೆ ಎರಡು ಘಂಟೆಗಳ ಪಯಣ. ನಡೆದುಕೊಂಡು ಬಂದು ಬಸ್ ಸ್ಟ್ಯಾಂಡಿನಲ್ಲಿ ಕುಳಿತವನಿಗೆ, ತನ್ನಂತೆ ನೂರಾರು ಜನ ಬಸ್ಸಿಗಾಗಿ ಕಾಯುತ್ತಿರುವುದನ್ನು ಕಂಡು, ದೇವರೇ! ಇವರೆಲ್ಲ ಬೇರೆ ಬಸ್ಸಿಗಾಗಿ ಕಾಯುತ್ತಿರಲಿ. ನಾನು ಹೋಗುವ ಬಸ್ಸು ಖಾಲಿ ಇದ್ದರೆ ಕುಳಿತುಕೊಂಡು ಹೋಗಬಹುದು ಎಂದು ಸಣ್ಣ ಪ್ರಾರ್ಥನೆ ಸಲ್ಲಿಸಿದ. ಅಬ್ಬ! ಈ ಬೆಂಗಳೂರಿನಲ್ಲಿ ಒಂದು ಜಾಗದಿಂದ ಮಾತ್ತೊಂದು ಜಾಗಕ್ಕೆ ಹೋಗಲು ಎಷ್ಟೆಲ್ಲಾ ಕಷ್ಟ ಪಡಬೇಕು! ನಮ್ಮ ಊರಲ್ಲಾಗಿದ್ದರೆ ನಡೆದುಕೊಂಡೇ ಹೋಗಿ ಬಂದು ಬಿಡಬಹುದಾಗಿತ್ತು. ಹೋಗಲಿ, ಸಾದಾ ಬಸ್ಸು ಬೇಡ. ಏ. ಸಿ ಬಸ್ಸು ಹತ್ತಿ ಹೋಗೋಣ ಅಂದುಕೊಂಡರೆ ಅಲ್ಲಿ ಸಾದಾ  ಬಸ್ಸಿಗೆ ಕೊಡುವ ಮೂರರಷ್ಟು ಹಣಕೊಟ್ಟು ಹೋಗಬೇಕು. ಅದೇ ದುಡ್ಡು ಇದ್ದರೆ ಸಂಜೆ ತರಕಾರಿ ತರಲು ಆದರೆ ಅಷ್ಟೇ ಆಯಿತು ಎನ್ನುವ, ಎಸಿ ಬಸ್ಸನ್ನು ಹತ್ತಲು ಬಿಡದ ಮನಸ್ಸು. ಆದರೆ ಇಲ್ಲಿ ಕೆಲವರು ದಿನವೂ ಎಸೀ ಬಸ್ಸಲ್ಲೇ ಹೋಗಿಬರುತ್ತಾರೆ. ಅವರಿಗೆಲ್ಲ ಎಷ್ಟು ಸಂಬಳವಿರಬಹುದು? ಅಥವ ಸಂಬಳ ಹೆಚ್ಚು ಇಲ್ಲದಿದ್ದರೂ ಐಶರಾಮಿಯಾಗಿ ಇರುತ್ತಿರಬಹುದೇ? ಅಥವ ಸಮಯಕ್ಕೆ ಸರಿಯಾಗಿ ಹೋಗಬಹುದು ಎಂದು ಅದನ್ನು ಅವಲಂಬಿಸಿಬಹುದೇ? ತುತ್! ನಾನು ಅದ್ಯಾವಾಗ ಇವರ ತರಹ ಮುಲಾಜಿಲ್ಲದೆ ದುಡ್ಡು ಖರ್ಚು ಮಾಡಿಕೊಂಡಿರುವುದು? ಒಂದಕ್ಕೆ ಹೆಚ್ಚು ಖರ್ಚು ಮಾಡುವಾಗ, ಈ ದುಡ್ಡು ಉಳಿದರೆ ಇನ್ನೊಂದಕ್ಕೆ ಬರುತ್ತಲ್ಲವೆ ಎಂದು ಅಂದುಕೊಳ್ಳುವ ನನ್ನ ಮನಸ್ಸು ಬದಲಾಗುವುದು ಯಾವಾಗ? ಈ ನನ್ನ ಲೆಕ್ಕಾಚಾರದ ಜೀವನಕ್ಕೆ ಕೊನೆಯಲ್ಲಿ, ಯಾವಾಗ?

ನಿಟ್ಟುಸಿರು ದೇಹದಿಂದ ಹೊರಕ್ಕೆ ಜಾರುತ್ತಿದಂತೆ ಬಂದಿತ್ತು ಒಂದು ಬಸ್ಸು. ಸಮಯ ಈಗಾಗಲೇ ಆರು ಮೂವತ್ತು. ಬಸ್ಸು ಬಂದಿದ್ದೇ ಹಿಂದೂ ಮುಂದು ನೋಡದೆ ಹತ್ತಿಬಿಟ್ಟ. ಹೇಗಾದರೂ ಮಾಡಿ ಇವತ್ತು ಕೆಲಸ ಗಿಟ್ಟಿಸಲೇ ಬೇಕು. ಊರಿನ ಜನಕ್ಕೆ ನಾನೂ ಒಂದು ಮನುಷ್ಯ ಆಗಬಲ್ಲೆ ಎಂದು ತೋರಿಸಬೇಕು. ಬಡವರಾದರೂ ನಾವು ಮರ್ಯಾದೆಯಿಂದ ಬದುಕುವವರು ಎಂದು ಅಂದುಕೊಳ್ಳುವಾಗಲೇ ಏನೋ ಒಂದು ತೀವ್ರ ತರ ಅಸಹನೀಯ ನೋವಾದ ಅನುಭವವಾಯಿತು. ಬಾಯೆಲ್ಲಾ ಕಹಿಯಾದಂತೆನಿಸಿ ಯೋಚನಾಲಹರಿಯನ್ನು ಬೇರೆಕಡೆಗೆ ತಿರುಗಿಸಲು ಪ್ರಯತ್ನ ಪಡುತ್ತಿರುವಾಗಲೇ, ಯಾರೋ ಭುಜ ತಟ್ಟಿದ ಅನುಭವವಾಗಿ ತಲೆ ಎತ್ತಿದರೆ, ವಯಸ್ಸಾದ ಒಂದು ತಾತ ಸೀಟ್ ಬಿಟ್ಟುಕೊಡುವಂತೆ ಕೇಳಿ ನಿಂತಿದ್ದರು. ಅವರಿಗೆ ಸೀಟು ಬಿಟ್ಟು ಕೊಟ್ಟು ಕಂಭ ಹಿಡಿದು ನಿಂತ ಇವನಿಗೆ, ಜೀವನವೆಲ್ಲ ಬರೀ ಇನ್ನೊಬ್ಬರಿಗಾಗಿ ತ್ಯಾಗ ಮಾಡುವುದರಲ್ಲೇ ಆಯಿತು ಎಂದೆನಿಸಿ ಸುಮ್ಮನಾದ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗ ಹದಿಮೂರು ರೂಪಾಯಿಯ ಟಿಕೆಟಿಗೆ ಚಿಲ್ಲರೆ ಇಲ್ಲದೆ ಕೊಟ್ಟ ಹದಿನಾಲ್ಕು ರೂಪಯಿಗಳನ್ನು ಬ್ಯಾಗಿನಲ್ಲಿ ಇಳಿಸಿಕೊಂಡು ಟಿಕೆಟ್ ಕೊಟ್ಟು ಹೊರಟವನನ್ನು ಒಂದು ರೂಪಾಯಿ ವಾಪಸ್ಸು ಕೊಡಿ ಎಂದು ಕೇಳಲು ಮನಸ್ಸಾಗಲಿಲ್ಲ.

***

ಅಪ್ಪ, ಅಮ್ಮ ಎಲ್ಲರೂ ಎಷ್ಟೊಂದು ಒಳ್ಳೆಯ ಜನ. ಊರಲ್ಲಿ ಅಪ್ಪನ ಕಂಡರೆ ಎಲ್ಲರಿಗೂ ಎಷ್ಟೊಂದು ಗೌರವ, ನಂಬಿಕೆ. ಆದರೆ ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದೇ ಆಗಬೇಕೆಂದೇನೂ ಇಲ್ಲವಲ್ಲ?! ಎಷ್ಟೊಂದು ತೋಟ, ಗದ್ದೆ ನಮ್ಮದು! ನೆಂಟರಿಷ್ಟರಲ್ಲೇ ನಮ್ಮಷ್ಟು ಆಸ್ತಿ ಯಾರಿಗಿತ್ತು? ಅಪ್ಪ ಅದಿಕ್ಕೆ ಅಲ್ಲವೆ? ನಾನು ಒಬ್ಬನೇ ಮಗ. ಮುಂದೆ ಓದಿ ಪೇಟೆಗೆ ಎಲ್ಲಿ ಸೇರಿಬಿಡುವೆನೋ ಎಂದು ಹೆದರಿ ನಂಗೆ ಕೇವಲ ಹತ್ತನೇ ಕ್ಲಾಸಿಗೆ ನನ್ನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡಿಸಿದ್ದು. ಅಪ್ಪನಿಗೆ ನಾನೆಷ್ಟು ಗೋಗರೆದಿದ್ದೆ, ನಾನು ಡಿಗ್ರಿ ಮಾಡಿಕೊಳ್ಳುತ್ತೇನೆ. ಆಮೇಲೆ ಮನೆಯಲ್ಲೇ ಇರುತ್ತೇನೆ ಎಂದರೂ ನನ್ನ ಮಾತಿಗೆ ಅಪ್ಪ ಬೆಲೆಯೇ ಕೊಡಲಿಲ್ಲ. "ಇಷ್ಟೊಂದು ಅಸ್ತಿ ಇದೆ. ತಿನ್ನವ್ರು ಬೇಕಲ್ಲ. ನೀನು ಪೇಟೆ ಸೇರಿ ಬಿಟ್ರೆ ನಾವೇನು ಮಾಡುವುದು" ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು. ಅಪ್ಪ ಅಮ್ಮನ ಇಷ್ಟಕ್ಕೆ ವಿರುದ್ದವಾಗಿ ನಡೆದುಕೊಳ್ಳುವುದು ನನಗೂ ಇಷ್ಟವಿಲ್ಲ. ಮನೆ ಕೆಲಸ ಮಾಡಿಕೊಂಡು ಹಾಯಾಗಿದ್ದೆ. ಯಾವ ಕಷ್ಟಗಳೂ ನಮಗಿರಲಿಲ್ಲ. ಆದರೆ ಇದು ದೇವರಿಗೆ ಅಷ್ಟೊಂದು ಒಪ್ಪಿಗೆ ಇರಲಿಲ್ಲವೋ ಏನೋ? ಅಪ್ಪ ತನ್ನ ತುಂಬಾ ಹತ್ತಿರದ ಗೆಳೆಯನಿಗೆ ಸಾಲ ಪಡೆಯಲು "ಜಾಮೀನು" ಕೊಟ್ಟಿದ್ದ. ಸಾಲ ಪಡೆದವ ಒಳ್ಳೆಯವನೇ. ನಂಬಿಕಸ್ತನೆ. ಅದಕ್ಕೆಂದೇ ನಾನಾಗಲಿ ಅಮ್ಮನಾಗಲಿ ಏನೂ ತಕರಾರು ಮಾಡಲಿಲ್ಲ. ಆದರೆ ದುರ್ದೈವ, ಅಪ್ಪನ ಗೆಳೆಯ ಯಾವುದೊ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ. ಸುದ್ದಿ ತಿಳಿದ ನಮಗೆ ಅವನು ತೀರಿಕೊಂಡ ಎಂಬುದರ ಬಗ್ಗೆ ನೋವಾದರೂ, ನಮ್ಮ ಭವಿಷ್ಯ ನೆನೆದು ಕುಳಿತಲ್ಲೇ ಕಂಪಿಸಿದ್ದೆವು. ಸಾಲಕ್ಕೆ ಜಾಮೀನಾದ ಅಪ್ಪನೇ ಸಾಲ ತೀರಿಸುವಂತಾಯಿತು. ನಮ್ಮ ತೋಟ, ಗದ್ದೆ, ಮನೆ ಎಲ್ಲಾ ಹರಾಜಿಗೆ ಬಂತು. ನಾವು ಬೀದಿಗೆ ಬಂದೆವು. ಎಷ್ಟೋ ವರ್ಷಗಳಿಂದ ಬಾಳಿಕೊಂಡು ಬಂದ ಮನೆ, ಆ ಊರು, ಅಲ್ಲಿನ ಒಂದು ಭಾಂದವ್ಯವನ್ನು ಭಾರವಾದ ಹೃದಯ ಮತ್ತು ಮಂಜಾದ ಕಣ್ಣುಗಳಿಂದ ಬಿಟ್ಟು ಬೆಂಗಳೂರಿನ ರೈಲನ್ನು ಹತ್ತಿ ಸೋದರ ಮಾವನ ಮನೆಗೆ ಬಂದ ನೆನಪು ಈಗಲೂ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿಸುತ್ತೆ. ಇದೆಲ್ಲ ಆದ ಮೇಲೆ ಅಪ್ಪ ಮಂಕಾದ. ನನ್ನನ್ನು ಕೊನೆ ಪಕ್ಷ ಓದಿಸಿದ್ದರೆ ಹೇಗೋ ಜೀವನ ನಡೆಯುತ್ತಿತ್ತು. ಅಪ್ಪನಿಗೆ ಬಹುಷಃ ಆ ಒಂದು ಅಪರಾಧಿ ಪ್ರಜ್ಞೆ ಮನಸ್ಸಿನಲ್ಲಿ ಕಾಡುತಿತ್ತಿರಬೇಕು. ಏನೊಂದೂ ಅವರು ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ಇಷ್ಟು ದಿನ ನನ್ನ ಪ್ರೀತಿಯಿಂದ ಸಾಕಿದ ನನ್ನ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಸರದಿ ನನ್ನದು ಎಂದು ತಿಳಿದಿದ್ದೇ ನಾನು ಕೆಲಸ ಹುಡುಕಲು ಶುರು ಮಾಡಿದೆ. ಆದರೆ ಕೇವಲ ಹತ್ತನೇ ಕ್ಲಾಸು ಓದಿ, ಬೇರೆ ಯಾವುದೇ ರೀತಿಯ ಸ್ವಯಂ ಉದ್ಯೋಗದ ಬಗ್ಗೆಯೂ ಇನ್ನು ಮಾಹಿತಿ ಇರದ ನನಗೆ ಯಾವ ಕೆಲಸ ತಾನೇ ಸಿಕ್ಕಿತು! ಆದರೆ ಪ್ರಯತ್ನ ನಡೆಯುತ್ತಿದೆ.

***

ತಾನು ಇಳಿದುಕೊಳ್ಳುವ ಜಾಗ ಬಂದಲ್ಲಿ ಸಮಯ ಸರಿಯಾಗಿ ಎಂಟು ಮುಕ್ಕಾಲು. ಗೇಟ್ ನ್ನು ದಾಟಿ ಒಳಗೆ ಹೋಗುವಾಗ ಅಮ್ಮನ ಪ್ರೀತಿಯ ನುಡಿಗಳು, ಅಪ್ಪನ ಅಸಹಾಯಕತೆ, ಕೊನೆಯ ಸಾರಿ ಊರಿನಲ್ಲಿರುವ ಮನೆಯನ್ನು ನೋಡಿದ ದೃಶ್ಯ, ಹಾಗೂ ದೇವರಲ್ಲಿ ಅಮ್ಮ ಈ ಭಾರಿಯಾದರೂ ನಾನು ಇಂಟರ್ವ್ಯೂ ನಲ್ಲಿ ಪಾಸ್ ಆಗಲಿ ಎಂದು ದೇವರಲ್ಲಿ ಬೇಡಿ ತೆಗೆದಿಟ್ಟ ತೆಂಗಿನಕಾಯಿ ಎಲ್ಲದರ ನೆನಪು ಒಂದರ ಹಿಂದಂತೆ ಒಂದು ಬರತೊಡಗಿದವು....

ಬುಧವಾರ, ಆಗಸ್ಟ್ 03, 2011

ಊರು,ಯಕ್ಷಗಾನ ಮತ್ತು.....ನಾನು!

ಯಕ್ಷಗಾನಕ್ಕೂ ನನಗೂ ತುಂಬಾ ಹಳೆಯ ನಂಟು. ಯಕ್ಷಗಾನ ಎಂದೊಡನೆ ನನ್ನ ಮನಸಿನಲ್ಲಿ ಬೆಚ್ಚಗೆ ಅಡಗಿ ಕುಳಿತ ಸಾವಿರಾರು ನೆನಪುಗಳ ನರ್ತನ. ಚಿಕ್ಕಂದಿನಲ್ಲಿ ನೋಡಿ, ಆಡಿ, ಮಾಡಿದ ಎಷ್ಟೋ ಪ್ರಸಂಗಗಳ ಮರುಕಳಿಕೆ. ಚಿಕ್ಕವರಿದ್ದಾಗ ನಮ್ಮ ಅಂತಿಮ ಪರೀಕ್ಷೆಗಳು ಮುಗಿದು, ಬೇಸಿಗೆ ರಜಗಳು ಶುರುವಾಗುವ ಹೊತ್ತಿಗೆ, ಊರಲ್ಲಿ ಇರುವ ನಮ್ಮ ಸೋದರ ಮಾವ ಬಂದು ನಮ್ಮನ್ನು ಅಜ್ಜನ ಮನೆಗೆಂದು ಕರೆದುಕೊಂಡು ಹೋಗುವುದು ವಾಡಿಕೆಯಾಗಿತ್ತು. ಅಜ್ಜನ ಮನೆಗೆ ಹೋಗುವುದು ಎಂದರೆ ನಂಗೆ ಮತ್ತು ತಂಗಿಗೆ ಬಲು ಹಿಗ್ಗಿನ ವಿಷಯವಾಗಿತ್ತು. ಅಜ್ಜನ ಮನೆಯಲ್ಲಿ ನಾವಷ್ಟೇ ಅಲ್ಲದೇ, ನನ್ನ ದೊಡ್ಡಮ್ಮನ ಮಕ್ಕಳೂ ಬರುತ್ತಿದ್ದರಿಂದ ನಮಗೆ ಅದು ಬಲು ಕಾತರಿಕೆಯ, ಖುಷಿಯ ಹಾಗೂ ಮೋಜು ಮಸ್ತಿ ಮಾಡುವ ದಿನಗಳಾಗಿದ್ದವು.

ನನ್ನ ಅಜ್ಜಿಮನೆ ಇರುವುದು ಮಲೆನಾಡಿನ ಸಾಗರದ ಸಮೀಪದ ಒಂದು ಹಳ್ಳಿಯಲ್ಲಿ. ಮಲೆನಾಡಿನ ಪರಿಸರದ ಸೊಬಗನ್ನು ಸವಿಯುವ ಮಜವೇ ಬೇರೆ. ವರುಷವಿಡೀ ಬಯಲು ಸೀಮೆಯಾದ ದಾಂಡೇಲಿಯಲ್ಲಿ ಇರುತಿದ್ದ ನಮಗೆ, ಬೆಟ್ಟ, ಗುಡ್ಡ ತಿರುಗುವುದು, ತೋಟದಲ್ಲಿ ಅಲೆಯುವುದು, ಗದ್ದೆಯಲ್ಲಿ ನೆಟ್ಟ ಸವತೆಕಾಯಿ ಮಿಡಿಯನ್ನು ಕದ್ದು ಕಿತ್ತು ತಿನ್ನುವುದು ಎಲ್ಲ ಬಹಳ ಅಪರೂಪಕ್ಕೆ ಸಿಕ್ಕುವ ಚಿಕ್ಕ-ಚಿಕ್ಕ ಆನಂದಗಳಲ್ಲಿ ಒಂದಾಗಿದ್ದವು. ಅಜ್ಜಿ ಮನೆ ಊರಲ್ಲಿ ಒಂದು ಗಣೇಶನ ದೇವಸ್ಥಾನವಿದ್ದು, ಅಲ್ಲಿ ಪ್ರತಿ ವರುಷ ರಾಮನವಮಿಯ ದಿನ ಸಂತರ್ಪಣೆ ಆಗುತಿದ್ದು, ಆ ದಿನ ಪೂರ್ತಿ ಒಂದಲ್ಲ ಒಂದು ದೇವರ ಕಾರ್ಯ ನಡೆಯುತ್ತಲೇ ಇತ್ತು. ಹಾಗೆ ಅದೇ ದಿನ ರಾತ್ರಿ ಅಲ್ಲಿಯ ಸ್ತಳೀಯ ಮೇಳ(ಗುಂಪು) ಅಥವ ಹೊರಗಿನ ಊರಿನವರ ಮೇಳದಿಂದ ಯಕ್ಷಗಾನ ಏರ್ಪಡಿಸುತ್ತಿದ್ದರು. ಹಾಗೆ ಸುಮಾರು ರಾತ್ರಿ ಒಂಭತ್ತು ಘಂಟೆಗೆ ಯಕ್ಷಗಾನ ಶುರುವಾದರೆ ಮುಗಿಯುವುದು ಹೆಚ್ಚೂ-ಕಮ್ಮಿ ಆಗಸದಲ್ಲಿ ಸೂರ್ಯ ಮೂಡುವ ಸಮಯಕ್ಕೆ!

ದೇವಸ್ಥಾನದಲ್ಲೇ ಇಡೀ ಊರಿನ ಜನರ ಜೊತೆ ಬೆಳಗಿನಿಂದ ಸಂಜೆಯವರೆಗೂ, ಭಜನೆ, ಹಾಡು, ರಂಗೋಲಿ ಕಾರ್ಯಕ್ರಮದಲ್ಲಿ ಕಳೆಯುತ್ತಾ, ಮಧ್ಯ-ಮಧ್ಯ ಸಂಜೆ ನಡೆಯಲಿರುವ ಯಕ್ಷಾಗನದ ಬಗ್ಗೆ ಚರ್ಚಿಸುತ್ತ, ಅದನ್ನು ನೋಡಲು ನಾವೆಲ್ಲಾ ಉತ್ಸುಕರಾಗಿರುತ್ತಿದ್ದೆವು. ಅಲ್ಲಿಯ ದೇವಸ್ಥಾನದ ಭಟ್ಟರ ಮಗನೂ ಯಕ್ಷಗಾನ ಮಾಡುತ್ತಿದ್ದರು. ಅವರ ಮುಖ ಪರಿಚಯ ಎಷ್ಟೇ ಇದ್ದರೂ ವೇಷ ಕಟ್ಟಿಕೊಂಡು ಅವರು ನಮ್ಮ ಎದುರಿಗೆ ಬಂದಾಗ ಅವರನ್ನು ಗುರುತಿಸುವುದು ಕಷ್ಟವಾಗುತಿತ್ತು!. ಬೆಳಗಿನ ತಿಂಡಿಯಿಂದ ಹಿಡಿದು ಮಧ್ಯಾಹ್ನದ ಊಟವೂ ಅಲ್ಲೇ ದೇವಸ್ಥಾನದಲ್ಲಿ ಆಗುತಿತ್ತು. ದೇವಸ್ಥಾನದ ಎದುರಿಗೇ ಶರಾವತಿ ನದಿ ಹರಿಯುತ್ತದೆ. ಊಟ ಮುಗಿದ ಬಳಿಕ ಹೆಂಗಸರು ಮಾತು ಕಥೆಯಾಡುತ್ತ, ಒಂದು ಕಡೆ ಮಲಗಿಕೊಂಡರೆ, ಗಂಡಸರು ಕೆಲವರು ಯಕ್ಷಗಾನದ ರಂಗಸ್ಥಳ ನಿರ್ಮಿಸುವುದರಲ್ಲಿ ತೊಡಗಿರುತ್ತಿದ್ದರು . ನಾವು ಮಕ್ಕಳೆಲ್ಲ ನದಿಯ ತೀರಕ್ಕೆ ಒಂದು ವಾಕ್ ಹೋಗಿ ಬರುತ್ತಿದ್ದೆವು . ಅಲ್ಲಿ ನಡೆಯುತ್ತಿದ್ದ ಯಕ್ಷಗಾನಕ್ಕೆ ಯಾವುದೇ ದೊಡ್ಡ ರಂಗ ಮಂಚ, ಅಥವ ದೊಡ್ಡ ಭವನವಾಗಲಿ , ಬಂದ ಜನರಿಗೆ ಕುಳಿತುಕೊಳ್ಳಲು ಈಜಿ ಚೇರ್ಗಳಾಗಲಿ ಇರುತ್ತಿರಲಿಲ್ಲ . ಒಂದು ಸಣ್ಣ ಚೌಕಟ್ಟಿನ ಜಾಗದಲ್ಲಿ ಎರಡು ದಿಕ್ಕಿನಿಂದ ಮುಚ್ಚುವಂಥ ಬಿದಿರಿನಿಂದ ಹೆಣೆದ ಒಂದು ದೊಡ್ಡ ಗೋಡೆಯನ್ನು ಇಡುತ್ತಿದ್ದರು. ಹಿಂದೆ ಒಂದು ದೊಡ್ಡ ಪರದೆಯನ್ನು ಇಳಿ ಬಿಡಲಾಗುತಿತ್ತು. ಅದರ ಹಿಂದೆ ಎಲ್ಲ ಕಲಾವಿದರ ಅಲಂಕಾರ(ವೇಷಭೂಷಣ)ದ ಕೋಣೆ ಇರುತಿತ್ತು. ಭಾಗವತರು ಮತ್ತು ಹಿಮ್ಮೇಳದವರು, ಅಲ್ಲೇ ರಂಗಸ್ಥಳದ ಬಲಗಡೆಯಲ್ಲಿ ಅಸೀನರಾಗಿಯೂ, ಪಾತ್ರ ಪ್ರವೇಶ ಎಡಬದಿಯಿಂದ ಆಗುತಿತ್ತು.

ಸಂಜೆ ಸುಮಾರು ಏಳು ಘಂಟೆಗೆ ಎಲ್ಲರೂ ಮನೆಗೆ ತೆರಳಿ, ಅಡಿಗೆ ಮಾಡಿ, ನನ್ನ ಸೋದರ ಅತ್ತೆ, ಕೊಟ್ಟಿಗೆಗೆ ಹೋಗಿ ಹಾಲು ಕರೆದು ತಂದು ಕಾಯಿಸಿ ಹೆಪ್ಪು ಹಾಕುತ್ತಿದ್ದರೆ, ಅಜ್ಜಿ ಬಚ್ಚಲಿನ ಒಲೆಗೆ ಇನ್ನಷ್ಟು ಅಡಿಕೆ ಸಿಪ್ಪೆ ಹಾಕಿ ಬೆಂಕಿ ಮಾಡಲು ಊದುತ್ತಿದ್ದರು, ಬೆಳಗಿನ ಸ್ನಾನಕ್ಕೆ ಮುನ್ನೆಚ್ಚರಿಕೆಯಾಗಿ. ಏಳು ಒರೆಗೆಲ್ಲ ಊಟ ಮುಗಿಸಿ, ಮಕ್ಕಳಿಗೆ ಊಟದ ಮಧ್ಯದಲ್ಲಿ "ಯಾರು ಊಟ ಬೇಗ ಮಾಡ್ತ್ರಿಲ್ಯೋ, ಅವರನ್ನ ಯಕ್ಷಗಾನಕ್ಕೆ ಬಿಟ್ಟಿಕ್ಕೆ ಹೋಗ್ತಿ" ಎಂದು ಬ್ಲಾಕ್ಕ್ಮೈಲ್ ಮಾಡುತ್ತಾ ನಾವೆಲ್ಲ ಬೇಗ ಬೇಗ ಉಂಡು ತಯಾರಾಗುವಂತೆ ಮಾಡುತ್ತಿದ್ದರು ಅಜ್ಜಿ. ಹೊರಡುವಾಗ, ಅಜ್ಜಿ ಒಂದು ಸುಮಾರಾಗಿರುವ(ಇನ್ನೇನು ಹಳಾಗುವಂಥದ್ದು) ಒಂದು ಕಂಬಳಿ , ಒಂದು ದೊಡ್ಡ ಚಾದರ ಜೊತೆಯಲ್ಲೇ ತೆಗೆದುಕೊಂಡು ಬರುತ್ತಿದ್ದರು. ಅವರಿಗೆ ಗೊತ್ತಿತ್ತು, ನನ್ನ ಒಬ್ಬಳನ್ನು ಬಿಟ್ಟು ಉಳಿದ ಎಲ್ಲ ಮೊಮ್ಮಕ್ಕಳು, ಯಕ್ಷಗಾನ ಅರ್ಧ ಮುಗಿಯುವ ಹೊತ್ತಿಗೆ ನಿದ್ದೆಗೆ ಹೋಗಿರುತ್ತಾರೆ. ನೆಲದ ಮೇಲೆ ಮಲಗುವುದು ಕಷ್ಟ ಎಂದು. ಸುಮಾರಗಿರುವ ಕಂಬಳಿಯನ್ನು ಅವರು ಆರಿಸಿದ್ದೂ ಧೂಳು ಹತ್ತಿ ಕೊಳೆಯಾದರೆ ಅದೇ ಆಗಲಿ ಎಂಬ ಉದ್ದೇಶದಿಂದ !

ಯಕ್ಷಗಾನದ
ರಂಗ ಮಂಟಪದ ಎದುರಿಗೇ ಅಜ್ಜಿ ಕಂಬಳಿಯನ್ನು ಹಾಸುತಿದ್ದರು. ಅಜ್ಜಿಯಂತೆ
ಊರಿನ
ಎಲ್ಲರೂ ತಮ್ಮ ತಮ್ಮ ಕಂಬಳಿಯನ್ನು ಹಾಸಿ ತಮ್ಮ ಕುಟುಂಬದವರನ್ನು ಕೂರಿಸಿಕೊಳ್ಳುತ್ತಿದ್ದರು. ಯಕ್ಷಗಾನ ನಿಧಾನಕ್ಕೆ ಪ್ರಾರಂಭವಾಗುತಿತ್ತು. ಅಷ್ಟರಲ್ಲಿ ನಾವು ಅಲಂಕಾರ ಗೃಹವನ್ನು ತಿರುಗಿ ಬರುತಿದ್ದೆವು, ಅದರಲ್ಲಿ ಭಟ್ಟರ ಮಗನನ್ನು ಗುರ್ತು ಇಟ್ಟುಕೊಳ್ಳುವ ಇರಾದೆಯೊಂದಿಗೆ !
ನನ್ನ ದೊಡ್ಡಮ್ಮನ ಮಗಳೂ ಯಕ್ಷಗಾನ ಕಲಿಯುತ್ತಿದ್ದಿದ್ದರಿಂದ ಅವಳಿಗೆ ಅದರ ಬಗ್ಗೆ ಸ್ವಲ್ಪ ಜಾಸ್ತಿ ವಿಷಯಗಳೇ ತಿಳಿದಿತ್ತು. ಇನ್ನೇನು ಭಾಗವತರು ಬಂದು, ಹಾಡು ಶುರು ಮಾಡುತ್ತಿದ್ದಂತೆ, ಒಂದು ಪಾತ್ರಧಾರಿಗಳು ಬಂದ ಕೂಡಲೇ, ಅವಳು ನನ್ನ ಕಿವಿಯಲ್ಲಿ ಪಿಸುಗುಡುತ್ತಿದ್ದಳು. "ನೋಡು ದಿವಿ, ಇದು 'ಬಾಲಗೊಪಾಲರ' ವೇಷ. ನಾನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ನಾಳೆ ಚರ್ಚೆ ಮಾಡುವಾಗ ಮರೆತು ಬಿಟ್ಟರೆ ಎಂಬ ಅಂಜಿಕೆಯಿಂದಲೇ. ಅದಾದ ಬಳಿಕ ಬರುತ್ತಿದ್ದುದು "ಸ್ತ್ರೀ ವೇಷ". ಆಗೆಲ್ಲ ನನಗೆ ತಿಳಿಯುತ್ತಿರಲಿಲ್ಲ. "ಸ್ತ್ರೀ ವೇಷ" ಹೇಳುತ್ತಿದ್ದರು, ಆದರೆ ವೇಷ ಕಟ್ಟಿದವ "ಅವ ಸುಬ್ರಾಯ" ಅಲ್ದನಾ? ಎಂದು ಮಾತಾಡಿಕೊಳ್ಳುತ್ತಿದ್ದುದು ನನಗೆ ಬಹಳ ಕುತೂಹಲದ ವಿಷಯವಾಗಿತ್ತು. ಸ್ತ್ರೀ ವೇಷ ಹಾಕಿದವ ಗಂಡಸೇ ಆದರೂ, ಅವನಿಗೆ ಹ್ಯಾಗೆ ಹೆಣ್ಣಿಗೆ ಇರಬೇಕಾದ ಎಲ್ಲವೂ ಇದೆ? ಎಂದು!. ಹಂಗೂ ಅಜ್ಜಿಯನ್ನ ಕೇಳಿ ತಿಳ್ಕೊಂಡೆ ಬಿಡ್ಲಿಲ್ಲ!. ಅದೆಲ್ಲ ಈಗ ನೆನಪಿಸಿಕೊಂಡರೆ ಒಂಥರಾ ಸಿಲ್ಲಿ ಎನಿಸುತ್ತೆ. ಆದರೆ ಅವಾಗ ಅದು ದೊಡ್ಡ ಅನುಮಾನ!. ಸ್ತ್ರೀ ವೇಷ ಮುಗಿದ ಕೂಡಲೇ, ನಮಗೆಲ್ಲಾ, ತಿನ್ನಲು ಏನಾದರೂ ತಂದುಕೊಳ್ಳೋಣ. ಆಮೇಲೆ ಕಥೆ ಶುರುವಾಗಿಬಿಟ್ಟರೆ ಕಷ್ಟ ಎಂದು ಅಜ್ಜಿ ಬಳಿ ದುಡ್ಡು ತೆಗೆದುಕೊಂಡು ಓಡುತ್ತಿದ್ದೆವು. ಅಂಗಡಿಯಲ್ಲಿ, ಶೇಂಗ ಪ್ಯಾಕೆಟ್,ಕಡ್ಲೆ ಪ್ಯಾಕೆಟ್, ವಟಾಣಿ ಮತ್ತು ಕರ್ಜೂರ ಇತ್ಯಾದಿ ಇರುತಿತ್ತು. ಆಮೇಲೆ, ಮಂಡಕ್ಕಿ ಮಸಾಲೆ(ಇಲ್ಲಿಯ ಭಾಷೆಯಲ್ಲಿ ಭೇಲ್ ) ಮಾಡುತ್ತಿದ್ದರು. ನಾವೆಲ್ಲಾ ಒಂದೊಂದು ಪಟ್ನ ಮಂಡಕ್ಕಿ ಮಸಾಲೆ ತಂದು ಚೂರು ಚೂರೇ ತಿಂತಾ ಮತ್ತೆ ಯಕ್ಷಗಾನ ನೋಡ್ತಾ ಇದ್ವು. ನನ್ನ ತಂಗಿ, ತಮ್ಮ ಎಲ್ಲ ಹಾಗೂ ಹೀಗೂ ಎರಡು ಮಂಡಕ್ಕಿ ಪಟ್ನ ಮುಗಿಸೋವರೆಗೂ ಎಚ್ರು ಇದ್ದು, ಸಮಯ ಸುಮಾರು ಒಂದು ಘಂಟೆ ಅನ್ನೋವಷ್ಟರಲ್ಲಿ ನಿದ್ದೆ ಮಾಡಿಬಿಡುತ್ತಿದ್ದರು. ಯಕ್ಷಗಾನ ನೋಡವ್ರು ನೋಡ್ತಾ ಇರುತ್ತಿದ್ದರು, ಮಲಗುವವರು ಮಲಗುತ್ತಿದ್ದರು! ವೇಷ ಕಟ್ಟಿದವರು ಇದೆಲ್ಲದರ ಪರಿವೆಯೇ ಎಲ್ಲ ಎನ್ನುವಂತೆ ಕಲೆಯ ಸೇವೆ ಮಾಡುತ್ತಿದ್ದರು.

ಯಕ್ಷಗಾನದಲ್ಲಿ "ಮಂಡಿ ತಿರುಗುವುದು" ಎಂದು ಒಂದು ಭಂಗಿ ಇರುತ್ತದೆ. ಅದನ್ನು ನೋಡಲು ನಮಗೆ ಬಹಳ ಇಷ್ಟವಾಗುತಿದ್ದು, ನಾವು ಅದಕ್ಕಾಗಿ ಜಾತಕ ಪಕ್ಷಿ ಕಾದ ಹಾಗೆ ಕಾಯುತ್ತಿದ್ದೆವು. ಅದೂ ಮುಗಿದು, ಇನ್ನೊಂದು ಎರಡು ಮಸಾಲೆ ಮಂಡಕ್ಕಿ ಕಾಲಿಯೂ ಆಗಿತ್ತು.ನೋಡನೋಡುತ್ತ ಹಗಲಾಗುತಿತ್ತು. ಯಕ್ಷಾಗಾನವೂ ಮುಗಿಯುವ ವೇಳೆ ಸಮೀಪಿಸಿ ಮಂಗಳ ಹಾಡಿಯೂ ಆಗಿತ್ತು. ನನ್ನ ತಮ್ಮ ತಂಗಿಯರಿಗೆ ಸೊಗಸಿನ ನಿದ್ದೆ ಮುಗಿದು, ಮನೆಗೆ ಹೋಗಲು ಎಬ್ಬಿಸಲು ಅಜ್ಜಿ ತಾಯಾರಾಗುತ್ತಿದ್ದರು. ನನಗೋ ಆಶ್ಚರ್ಯ! ಇಡಿ ರಾತ್ರಿ ನಾನು ನಿದ್ದೆ ಮಾಡದೇ ಯಕ್ಷಗಾನ ನೋಡಿದೆ ಎಂದು. ಬಹುಶ ಅದರ ಬಗೆಗಿನ ನನ್ನ ಪ್ರೀತಿ ನಿದ್ದೆ ಬರಿಸಲಿಲ್ಲವೋ ಏನೋ?! ಗೊತ್ತಿಲ್ಲ. ಮನೆಗೆ ಬರುವ ದಾರಿಯಲ್ಲಿ ಬೇಕೆಂದೇ, ಅರ್ಧಂಬರ್ಧ ನಿದ್ದೆಯಲ್ಲಿರುವ ನನ್ನ ತಂಗಿಗೆ ಕೇಳುವುದು "ಹೆಂಗಿತ್ತು ಯಕ್ಷಗಾನ?" ಅಂತ. ಅವಳು ನಗುತಿದ್ದಳು ಅಷ್ಟೇ!

ಮನೆಗೆ ಬಂದ ಮೇಲೆ ಅಜ್ಜನ ಮಂಚದ ಮೇಲೆ ನಾವೆಲ್ಲಾ ಸಾಲಾಗಿ ಮಲಗುತಿದ್ದೆವು. ಅಜ್ಜನದು ಮನೆಗಾವಲು ಆದ್ದರಿಂದ ಅಜ್ಜನ ನಿದ್ದೆ ಆಗಿರುತಿತ್ತು.( ಅಜ್ಜ ಸ್ವಲ್ಪ ಹೊತ್ತು ಯಕ್ಷಗಾನ ನೋಡಿ, ಆಮೇಲೆ ಮನೆಗೆ ಬರುತ್ತಿದ್ದರು). ಅಜ್ಜಿ ಮಾತ್ರ ಮಲಗದೇ ತನ್ನ ನಿತ್ಯ ಕಾಯಕದಲ್ಲಿ ತೊಡಗುತಿದ್ದಳು. ಮಲಗೆದ್ದ ಮೇಲೆ ಎಲ್ಲರೂ, ನಿಧಾನಕ್ಕೆ ಸ್ನಾನ, ಊಟ ಮುಗಿಸಿ ಹರಟೆ ಹೊಡೆಯಲು ಕುಳಿತಾಗ ಮತ್ತೆ ಯಕ್ಷಗಾನದ ಚರ್ಚೆ. ಮಂಡಿ ತಿರುಗುವ ಬಗ್ಗೆ ವಿಪರೀತ ಆಸಕ್ತಿ ಮೂಡಿ ನಾವೂ ಮಂಡಿ ತಿರುಗೋಣ ಎಂದು ತಿರುಗಿ ಮಂಡಿಯಲ್ಲ ತರಚಿ ಗಾಯ ಮಾಡಿಕೊಂಡಿದ್ದೂ ಆವಾಗಲೇ!. ಹೀಗೆ ಒಂದು ಸುಂದರವಾದ ಯಕ್ಷಗಾನವನ್ನು ನೋಡಿದ, ಸವಿದ ಅನುಭವದ ಅಮೃತ ಸಿಂಚನ.

*****

ಮೊನ್ನೆ ರಾಷ್ಟ್ರೋತ್ತಾನ ಪರಿಷತ್ನಲ್ಲಿ ಇದ್ದ ಯಕ್ಷಗಾನ "ಜಾನಕಿ ಜೀವನ" ಎಂಬ ಪ್ರಸಂಗಕ್ಕೆ ಹೋಗಿದ್ದೆ. ಯಕ್ಷಗಾನ ನೋಡದೇ ಸತತ ಆರು ವರುಷಗಳು ಕಳೆದಿದ್ದವು. ನೋಡುವಾಗೆಲ್ಲ ಬಾಲ್ಯದ್ದೇ ನೆನಪು. ಬೆಂಗಳೂರಿನಲ್ಲಿ ಯಕ್ಷಗಾನ ನಡೆಯುವುದಿಲ್ಲವೆಂದಲ್ಲ. ಆದರೆ ಹಳ್ಳಿಗಳಲ್ಲಿ ಅದನ್ನು ನೋಡುವ ಸಂಭ್ರಮ, ಪರಿಸರ ಅದರ ಮಜವೇ ಬೇರೆ. ಇನ್ನು ಈ ಸೀಡಿ-ಡಿವಿಡಿಗಳೆಲ್ಲ ಊಹೂಂ, ಅದು ಅಷ್ಟಕ್ಕಷ್ಟೇ!. ಏನಂತೀರ?


ಚಿತ್ರಕೃಪೆ: ಅಂತರ್ಜಾಲ

ಶುಕ್ರವಾರ, ಜುಲೈ 22, 2011

ನೋವಿನಲೂ ನಲಿವಿನಲೂ...

ಇಷ್ಟವಿಲ್ಲದಿದ್ದರೂ, ಬೆಳಗ್ಗೆ ಕೆಲಸಕ್ಕೆ ಹೋಗಲು ಎಚ್ಚರ ಆಗಲೇ ಬೇಕೆಂದು, ಹಾಗೂ ಹತ್ತು ನಿಮಿಷ ಮುಂಚೆಯೇ ಬಡಿದುಕೊಳ್ಳುವಂತೆ ಇಟ್ಟ ಅಲರಾಮನ್ನು ತಕ್ಷಣ ನಿಲ್ಲಿಸಿ, ಇನ್ನೂ ಹತ್ತು ನಿಮಿಷ ನಿದ್ದೆಗೆ ಹೋದೆ. ಹಾಗೆ ನಾನು ಸಕ್ಕರೆ ನಿದ್ದೆಯಲ್ಲಿ ಇರುವಾಗ, ಸಕ್ಕರೆಗಿಂತ ಸಿಹಿಯಾಗಿರುವ ನೀನು ಬಂದಾಗ ನಾನು ಕಣ್ಣು ಮುಚ್ಚಿಕೊಂಡೇ ನಗುತ್ತಿದ್ದೆ ಎಂದು ನನ್ನ ಗೆಳತಿ ಹೇಳಿದರೆ ನಾನು ಅಚ್ಚರಿ ಇಂದ ಕಣ್ ಕಣ್ ಬಿಡುತ್ತಿದ್ದೆ. ಚಿಕ್ಕವರಿದ್ದಾಗ, ರಾತ್ರಿ ಅಪ್ಪ ಬರುವಾಗ ತಡವಾಗುವುದೆಂದು ಅಮ್ಮ ನಮಗೆ ಮೊದಲು ಊಟ ಹಾಕಿರುತ್ತಿದ್ದರೂ, ಅಪ್ಪ ಬಂದ ಮೇಲೆ ಅವರು ಊಟ ಮಾಡುವಾಗ ಒಂದು ತುತ್ತು ನನ್ನ ಬಾಯಿಗೆ ಇಟ್ಟ ನೆನಪು, ನೀನು ಮಸ್ಸಾಲ್ ಪೂರಿಯ ಒಂದು ತುತ್ತನ್ನು ಎಲ್ಲರ ಎದುರಿಗೇ ನನ್ನ ಬಾಯಿಗೆ ಹಾಕಿದಾಗ. ಮನೆಯಿಂದ ದೂರವಿದ್ದರೂ, ಅದು ಅಮ್ಮನಿಗೂ ಅಭ್ಯಾಸವಾಗಿದ್ದರೂ, ಪ್ರತಿ ಸಾರಿ ಮನೆಯಿಂದ ಬರುವಾಗ, ನಾನು ಬಸ್ಸು ಹತ್ತಿದ ಕೂಡಲೇ ಅಮ್ಮನ ಕಣ್ಣುಗಳು ತುಂಬಿಕೊಂಡ ನೆನಪು, ನೀನು ನನ್ನ ಬಸ್ಸು ಹತ್ತಿಸಿದಾಗ.

ನೀನು ಮಾಡಿದ ರುಚಿಯಾದ ಟೊಮೇಟೊ ಹಣ್ಣಿನ ಸಾರನ್ನು, ಮೂರು ಬಾರಿಯೂ ತಿನ್ನುವಾಗ ಅನ್ನಿಸಿದ್ದು, ಎಷ್ಟು ರುಚಿಯಾಗಿದೆ! ಎಂದೇ. ಸಾರೇ ರುಚಿ ಇತ್ತೋ, ನೀನು ಪ್ರೀತಿಯಿಂದ ನನಗಾಗಿ ಮಾಡಿದ್ದಕ್ಕೋ ಉತ್ತರ ಗೊತ್ತಿಲ್ಲ. ಪಿ ಜಿ ಯಲ್ಲಿ ಮಾಡಿದ ಸಾರಿಗೂ, ಅಮ್ಮ ಮಾಡಿದ ಸಾರಿಗೂ ಇತ್ತು ಇಷ್ಟು ದಿನ ಹೋಲಿಕೆ. ಈಗಲ್ಲಿ ನೀನು ಮಾಡಿದ ಸಾರು ಬಂದು ನಾನು ನಾನು ಎಂದು ಹೋಲಿಕೆಗೆ ಪೈಪೋಟಿ ನಿಂತ ಭಾಸ. ನೀನು ಕೊಟ್ಟ ಮಲೆಗಳಲ್ಲಿ ಮದುಮಗಳು ಓದುವಾಗ, ಯಾವುದೋ ಸನ್ನಿವೇಶಕ್ಕೆ ನಿನ್ನ ನೆನಪಾಗಿ, ಕಣ್ಣಲ್ಲಿ ಹನಿ ಮೂಡಿ, ಪುಟ ತಿರುವುತ್ತೇನೆ. ಹಿಂದೆ ಬೈಕಿನಲ್ಲಿ ಕುಳಿತು ಪ್ರತಿ ಬಾರಿಯೂ ಹೋಗುವಾಗ, ಚಿಕ್ಕಂದಿನಲ್ಲಿ ಅಪ್ಪನ ಸ್ಕೂಟರ್ನಲ್ಲಿ ಶಾಲೆಗೆ ಹೋಗುತಿದ್ದ ನೆನಪು. ಯಾರೋ ಕೆಲಸಕ್ಕೆ ಬಾರದವರು ಹೇಳಿದ ಅನವಶ್ಯಕ ಮಾತಿಗೆ ತಲೆ ಕೆಡಿಸಿಕೊಂಡು ಅಳುವಾಗ ಸಮಾಧಾನಿಸುವ ನಿನ್ನ ಗುಣದ ಜೊತೆ ಅಮ್ಮನ ಹೋಲಿಕೆಗೆ ತೆರಳುವ ಮನಸ್ಸು.

ಈಗ ಪಾರ್ಕಲ್ಲೂ ನೀನು ನನ್ನ ಜೊತೆ ಇಲ್ಲದಿದ್ದರೂ ನೀನು ನನ್ನ ಜೊತೆಗೇ ಇದ್ದಂತೆ ಭಾಸ. ಬೋರ್ ಎನಿಸುತಿದ್ದ ಬಟ್ಟೆ ತೊಳೆಯುವುದು, ರೂಮು ಕ್ಲೀನ್ ಮಾಡುವುದು, ವ್ಯಾಯಾಮ ಮಾಡುವುದು ಎಲ್ಲೂ ಈಗ ಬೇಸರ ಕಾಣುತ್ತಿಲ್ಲ. ಹಿಂತಿರುಗಿ ನೋಡಿದಾಗ ನನ್ನಲ್ಲೂ ಬದಲಾವಣೆಗಳು. ಮತ್ತು ಅದು ನಾನೂ ಬೇಸರ ಪಡದೆ ಇರುವಂಥದ್ದು. ನಿನ್ನ ಜೊತೆ ಇರುವಾಗೆಲ್ಲ ನನಗೆ ಅನ್ನಿಸಿದ್ದು, ಎಲ್ಲ ಹುಡುಗಿಗೂ ನಿನ್ನ ತರದ ಹುಡುಗನೇ ಸಿಗಲಿ ಎಂದು. ಆದರೆ ನೀನು ಹಾಕುವ ಆ ಚಾಕಲೇಟ್ ಪರ್ಫುಮ್ ಇದೆಯಲ್ಲ
ಅದು ನನಗೆ ಆಗಲ್ಲ ನೋಡು!.ಗೊತ್ತು!.ನೀನು ಅದನ್ನು ಹಾಕುವುದನ್ನು ಬಿಟ್ಟಿದ್ದಿಯ ಎಂದು.

ಯಾರೋ ಓಡಿ ಹೋದಾಗ, ಯಾರದೋ ಮದುವೆ ಮುರಿದಾಗ, ಇನ್ಯಾರದೋ ಗಂಡ ಕಿರುಕುಳ ಕೊಡುವ ಸುದ್ದಿ ಓದಿದಾಗ, ನಿನ್ನ ಮುಖ ನೆನಪಾಗಿ, ನಾನು ಇದರಿಂದೆಲ್ಲ ಪಾರಾದ ಸಮಾಧಾನದ ನಿಟ್ಟುಸಿರು. ನಿನ್ನ ಸಹನೆಯ ಗುಣವನ್ನು ಸ್ವಲ್ಪವಾದರೂ ನಾನು ಅಳವಡಿಸಿ ಕೊಳ್ಳಬೇಕೆಂದು ಅಮ್ಮ ಹೇಳಿದ್ದಾಳೆ. ಅದಕೆಂದೇ ನಾನೂ ಪ್ರಯತ್ನ ಪಡುತ್ತಿರುವೆ. ನೀನೇ ದಾನವಾಗಿ ಕೊಟ್ಟರೆ ಇನ್ನೂ ಒಳಿತು ನೋಡು! ಯಾರೋ ಏನೋ ಹೇಳಿದರು ಅಂತ ನಾನು ತಲೆಕೆಡಿಸಿಕೊಳ್ಳಲ್ಲ ಬಿಡು. ಅವರು ಏನು ಅಂತ ಮೊದಲು ಅಳೆದೇ ಅಳೆಯುವೆ. ನೀನು ಮಾತ್ರ ಯಾವಾಗಲೂ ಹೀಗೆ ಇರಬೇಕು ಆಯ್ತಾ? ನೀನು ಯಾವತ್ತೂ ಬದಲಾಗಬಾರದು. ಭಾವಕ್ಕೆ ಭಾವವನ್ನು ಬೆಸೆಯುತ್ತಿರುವ ನೀನು ನನಗೆ ಅದ್ಭುತ ಗೆಳೆಯ. ಹೀಗೆಲ್ಲ ಹೇಳಿ ನಾನು ಕಾಗೆ ಹಾರಿಸುವುದಿಲ್ಲ ಬಿಡು. ಉಳಿದಿದ್ದು ನಿನಗೆ ಗೊತ್ತೇ ಇದೆ.
ಆದರೆ ಅದೇನೋ ಗೊತ್ತಿಲ್ಲ. ನಾನು ನಿನ್ನೊಡನೆ ಎಷ್ಟೇ ಜಗಳ ಆಡಿದರೂ, ಮತ್ತೆ ನನಗೇ ನನ್ನ ಬಗ್ಗೆ ಬೇಸರ. ತಪ್ಪು ನನ್ನದಿದ್ದರೂ ನೀನು ಬಂದು ಸಂತೈಸುವಾಗಲೇ ನಾನು ಕರಗಿ ಹೋಗುವುದು. ಈಗಂತೂ ಅಭ್ಯಾಸವಾಗಿ ಬಿಟ್ಟಿದೆ! ಜಗಳವಾಡಿದ ಮೇಲೆ ನೀನು ಕೊಡುವ ಸಂತೈಕೆಗೆ ನಾನು addict ಆಗಿಬಿಟ್ಟಿದೀನಿ. ನೋವಿನಲೂ ನಲಿವಿನಲೂ ನಾನು ನಿನ್ನ ಜೊತೆಗೆ ಇರುತ್ತೀನಿ ಎಂಬ ಭರವಸೆ ಮಾತ್ರ ನಾ ಕೊಡಬಲ್ಲೆ. ನನ್ನಲ್ಲಿರುವ ಅಭದ್ರತೆಯ ಕೋಟೆಯೊಳಗೂ ನಿನ್ನ ಭದ್ರವಾಗಿಟ್ಟುಕೊಳ್ಳುವೆ. ನೀನು ನನ್ನೊಡನೆ ಸಂತೋಷದಿಂದ ಇರುವೆ ಎಂದು ನಂಬಿ, ನಿನ್ನಿಂದ ನನಗೆ ಸಿಗುತ್ತಿರುವ ಆನಂದಕ್ಕಾದರೂ ನಾನು ನಿನ್ನ-ನಿನ್ನೇ ಪ್ರೀತಿಸುವೆ.

ತಾರಸಿಯಲ್ಲಿ ನಿಂತು ಮಾತಾಡುವಾಗ, ಒಂದೇ ಚಂದ್ರನಾಗಿದ್ದ ಮೊದಲೆಲ್ಲ. ಈಗ ಎರಡು! ಇಬ್ಬರೂ ತಣ್ಣಗೇ, ಹಿತವಾಗೇ ಇದ್ದಾರೆ!

ಸೋಮವಾರ, ಜೂನ್ 20, 2011

ಮೈಯನೆ ಹಿಂಡಿ ನೊಂದರು ಕಬ್ಬು....

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು..ಈ ಹಾಡು ಕೇಳಿದೊಡನೆ, ಅಪ್ಪನ ನೆನಪೂ ಅದೇಕೋ ಇದ್ದಕ್ಕಿದ್ದಂತೆ ತೀವ್ರವಾಗಿ ಕಾಡಲು ಶುರುವಿಟ್ಟಿತು. ಅಪ್ಪ ಜೀವನದಲ್ಲಿ ಎಷ್ಟಂದರೂ ಕಷ್ಟ ಪಟ್ಟು ಮೇಲೆ ಬಂದ ಜೀವಿ. ಯಾರಿಂದನೂ ಒಂದು ರೂಪಾಯಿ ಬೇಡದ ಕಟ್ಟಾ ಸ್ವಾಭಿಮಾನಿ. ಯಾರು ಏನೇ ಹೇಳಿದರು, ತಲೆ ಕೆಡಿಸಿಕೊಳ್ಳದೆ, ಅವರಿಗೆ ಒಳ್ಳೇದನ್ನೇ ಮಾಡುವ ಅಪ್ಪನ ಗುಣ, ನನಲ್ಲಿ ಎಂದೂ ಒಂದು ಹೊಟ್ಟೆಕಿಚ್ಚನ್ನು ಉಳಿಸಿಕೊಳ್ಳುವಂಥದ್ದು. ಅಷ್ಟೊಂದು ಸಹನೆ, ಅಷ್ಟೊಂದು ಒಳ್ಳೆತನ ನನ್ನಲ್ಲೂ ಬರಲು ಎಷ್ಟು ಕಾಲ ಕಾಯಬೇಕೆನೋ!

ದಿನಾ ಬಸ್ಸಿನಲ್ಲಿ ಓಡಾಡುವ ಅದೇ ಜಾಗ. ಆದರೂ ಅದೇನೋ ಎಲ್ಲರಂತೆ ನಿದ್ರಿಸುತ್ತಲೋ, ಇಲ್ಲವೆ ಪುಸ್ತಕ ಓದುತ್ತಲೋ ಕೂರುವುದೆಂದರೆ ಶೃತಿಗೆ ಆಗದು. ಸುಮ್ಮನೆ ಕಿಟಕಿಯಿಂದ ಹೊರಗೆ ನೋಟ ನೆಟ್ಟು, ನೋಡಿದ ಜಾಗವನ್ನೇ ಆದರೂ ಮತ್ತೆ ಮತ್ತೆ ನೋಡುತ್ತಲೇ ಮನೆ ಸೇರುತ್ತಿದ್ದಳು. ಆ ನೋಟ ಜನರನ್ನು ಕುತೂಹಲದಿಂದ ನೋಡುತ್ತಿದ್ದರೂ, ಮನಸ್ಸಿನಲ್ಲಿ ಸಾವಿರಾರು ತಲ್ಲಣಗಳು, ಯೋಚನೆಗಳು, ಇಬ್ಬಂದಿತನ, ಹಳೆಯ ನೆನಪಿನ ಮೆಲುಕುಗಳು, ತನ್ನ ಮಾತಿಗೆ ಇನಿಯ ಕೊಟ್ಟ ಪ್ರತ್ಯುತ್ತರ ನೆನೆಸಿಕೊಂಡು ತುಟಿಯಲ್ಲಿ ಬರುವ ಕಿರುನಗು, ಆಕಾಶದಲ್ಲಿ ಕಾಣುವ ಮೋಡಗಳಿಗೆ ತನ್ನ ಪರಿಸ್ಥಿತಿಯನ್ನು ಹೋಲಿಸುತ್ತಾ, ಮೋಡಕರಗಿದಂತೆ ಮನಸ್ಸೂ ತಿಳಿಯಾಗುತ್ತದೆ ಎಂಬೆಲ್ಲ ಲಹರಿಗಳು ಅಡಕವಾಗಿರುತಿತ್ತು. ಮುಂಜಾನೆಯ ಬಸ್ಸಿಗೆ ಹೋಗುವಾಗ ದಾರಿಯಲ್ಲಿ ಕಾಣುವ ಎಷ್ಟೋ ಸಾವಿರಾರು ಮುಖಗಳಲ್ಲೂ ಒಂದೊಂದು ಕಥೆಗಳಿವೆಯಲ್ಲ! ಎಂದು ಅಂದುಕೊಳ್ಳುವಳು. ಶಾಲೆಗೆ ಕಳಿಸಲು ಮಕ್ಕಳನ್ನು ತಯಾರು ಮಾಡಿ, ತಂದೆ ತಾಯಿಗಳು, ಬರುವ ಶಾಲಾ ವಾಹನಕ್ಕಾಗಿ ಕಾಯುತ್ತಿರುವುದನ್ನು ಕಂಡು, ಒಮ್ಮೆ ತನ್ನ ಬಾಲ್ಯದೆಡೆಗೆ ಮನಸನ್ನು ತಿರುಗಿಸುವಳು. ತಾನು ಚಿಕ್ಕವಳಿದ್ದಾಗ ಅಪ್ಪ ತಾನೇ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದರು. ನಾನು ಕ್ಯಾಬ್ಗಳನ್ನೂ ಹತ್ತಲು ಶುರುವಿಟ್ಟಿದ್ದು ಈ ಬೆಂಗಳೂರು ಎಂಬ ಮಹಾನಗರಿಗೆ ಬಂದ ಮೇಲೆಯೇ! ಆದರೆ, ಈಗಿನ ಹುಡುಗರು, ಶಾಲೆಗೆ ಹೋಗಲು ಶುರುವಿಟ್ಟುಕೊಳ್ಳುವಾಗಲೇ ಕ್ಯಾಬ್ ಹತ್ತುತ್ತಾರೆ!

ಆ ದಿನ ತನಗಿನ್ನೂ ಚನ್ನಾಗಿ ನೆನಪಿದೆ. ನಾನಿನ್ನೂ ಪಿ.ಯು.ಸಿ. ಫಲಿತಾಂಶಕ್ಕೆ ಕಾಯುತ್ತಿದೆ. ನನ್ನ ಫಲಿತಾಂಶ ಚನ್ನಾಗಿ ಬಂದಿದ್ದಾಗಿಯೂ, ನಾನು ಇಂಜಿನಿಯರಿಂಗ್ ಮಾಡುವ ಯಾವ ಆಸಕ್ತಿಯನ್ನು ಹೊಂದಿರಲಿಲ್ಲ. ನಾನು ಇಂಜಿನಿಯರಿಂಗ್ ಹೋಗಲು ಇಷ್ಟ ಪಡದಿದ್ದಕ್ಕೆ ಅಪ್ಪ ಮೊದಮೊದಲು ಹುಸಿ ಮುನಿಸು ತೋರಿದರೂ, ಕೊನೆಗೆ ಮಗಳ ಆಸೆಗೆ ವಿರೋಧ ಮಾಡುವುದು ಬೇಡ ಎಂದು , ಬಿ.ಎಸ್ಸಿ ಮಾಡುವುದಕ್ಕೆ ಸಮ್ಮತಿಸಿದ್ದರು. ಅಪ್ಪ ಎಷ್ಟು ಒಳ್ಳೆಯವರು ಅಂತ ನನಗನ್ನಿಸಿತ್ತು. ಎಲ್ಲರ ಅಪ್ಪ ಅಮ್ಮಂದಿರೂ, ತಮ್ಮ ಮಕ್ಕಳು ಇಂಜಿನಿಯರಿಂಗ್ಗೇ ಮಾಡಬೇಕು, ಅವರಿಗೆ ಇಷ್ಟವಿಲ್ಲದಿದ್ದರೂ ಎಂದು ಹಠ ಮಾಡುವುವಾಗ, ನನಗೆ ನನ್ನ ಅಮ್ಮ ಅಪ್ಪ ದೇವರಂತೆ ಕಂಡಿದ್ದರು. ಆದರೆ ಪಕ್ಕದ ಮನೆಯ ಅಂಕಲ್ ಮಾತ್ರ, " ಏನ್ರೀ ಹೆಗಡೆರೆ, ಅಷ್ಟು ಪರ್ಸೆಂಟ್ ಮಾಡಿದ್ರೂ, ನಿಮ್ಮ ಮಗಳನ್ನ ಇಂಜಿನಿಯರಿಂಗ್ ಹಾಕೊದಿಲ್ಲವೇನ್ರಿ? ನೋಡಿ..ನಮ್ಮ ಮಗಳು ಹಿಂದಿನ ವರುಷ ಇಂಜಿನಿಯರಿಂಗ್ ಹಾಕಿಯಾಗಿದೆ. ಇನ್ನೊಂದು ಮೂರು ವರುಷದಲ್ಲಿ ಅವಳು 'ಸ್ಟ್ಯಾಂಡ್' ಆಗುತ್ತಾಳೆ. ಬಿ.ಎಸ್ಸಿ ಓದಿದರೆ ಏನಿದೆ ರೀ?" ಅಂತ. ಮಾತು ನನ್ನ ಕಿವಿಗೆ ಬಿದ್ದರೂ, ಅಪ್ಪ ಮಾತ್ರ ಅವಳಿಗೆ ಇಷ್ಟ ಇಲ್ಲ, ಇಂಜಿನಿಯರಿಂಗ್ ಅಂತ ಹೇಳಿ ಸುಮ್ಮನಾಗಿಬಿಟ್ಟರು.

ಕಾಲ ಚಕ್ರ ಓಡುತ್ತಿರುತ್ತೆ. ಅದು ಯಾರಿಗೂ ಸಹಾ ಕಾಯುವುದಿಲ್ಲ. ಬಸ್ಸಿನಲ್ಲಿ ಬರುವಾಗ ಅಪ್ಪನ ಕಾಲ್. ಅಪ್ಪ ಯಾಕೆ ಈಗ ಫೋನ್ ಮಾಡಿದರು? ಅಂತ ಯೋಚಿಸುತ್ತಲೇ ಫೋನ್ ಎತ್ತಿದೆ. ಅಪ್ಪ ಹೇಳಿದರು..."ಶೃತಿ, ನಿಮ್ಮ ಕಂಪನಿಲಿ ನಮ್ಮ ಪಕ್ಕದ ಮನೆ ಮನೋಜನಿಗೆ ಒಂದು ಕೆಲಸ ಕೊಡ್ಸೋಕೆ ಟ್ರೈ ಮಾಡ್ತಿಯ? ಹೇಗಿದ್ದರೂ ನೀನೇ ತಾನೇ ಆ ಕಂಪನಿಲಿ ಇಂಟರ್ವ್ಯೂ ಎಲ್ಲ ತೆಗೆದುಕೊಳ್ಳೋದು? ನೀನೇ ಹೇಳಿದ್ಯಲ್ಲ? ಮೊದಲ ಎರಡು ರೌಂಡ್ ಪಾಸು ಆದರೆ, ಮುಂದಿನದನ್ನು ನೀನು ನೋಡಿಕೊಳ್ಳುತ್ತಿಯ ಅಂತ , ಎಂದು ನನಗೆ ಮಾತಾಡಲೂ ಬಿಡದೆ ಮಾತಾಡುತ್ತಿದ್ದರು. ಅಪ್ಪ, ಅವನು ಪರ್ಸೆಂಟ್ ಎಷ್ಟು ಮಾಡಿದ್ದಾನೆ? ಅವನು ಆಯ್ದು ಕೊಂಡ ವಿಷಯಗಳು ಯಾವುವು? ಅಂತೆಲ್ಲ ನಾನು ಕೇಳಿದರೆ, ಪೆರ್ಸೆಂಟ್ ಏನೋ 56 ಇರಬಹುದು. ವಿಷಯಗಳು ಯಾವುವು ಅಂತ ನನಗೂ ಗೊತ್ತಿಲ್ಲ. ಅದೇನೋ ಇಂಟರ್ವ್ಯೂ ಇದ್ರೆ ಕಳಿಸ್ತಾರಂತಲ್ಲಾ. ಅವನಿಗೆ ಅದನ್ನ ನಿಂಗೆ ಕಳಿಸೋಕೆ ಹೇಳ್ತೀನಿ ಅಂದರು. ಹ್ಯಾಗಾದ್ರೂ ಮಾಡಿ ಅವನಿಗೊಂದು ಕೆಲಸ ಕೊಡ್ಸು ಮಗ. ಅವನ್ ಅಪ್ಪ ಸಾಲ ಮಾಡಿಕೊಂಡು, ತೀರ್ಸೋಕಾಗ್ದೆ ಒದ್ದಾಡ್ತಾ ಇದ್ದಾರೆ. ಮಗನಿಗೆ ಕೆಲಸ ಸಿಕ್ಕರೆ ಸ್ವಲ್ಪ ಸುಧಾರಿಸಿಕೊಳ್ಳುತ್ತಾರೆ, ಎಂದು ಹೇಳುತ್ತಿದ್ದರೆ, ನನಗೆ ಯಾರೋ ಬಂದು.."ಅಷ್ಟು ಪರ್ಸೆಂಟ್ ಮಾಡಿದ್ರೂ, ನಿಮ್ಮ ಮಗಳನ್ನ ಇಂಜಿನಿಯರಿಂಗ್ ಹಾಕೊದಿಲ್ಲವೇನ್ರಿ? ನೋಡಿ..ನಮ್ಮ ಮಗಳು ಹಿಂದಿನ ವರುಷ ಇಂಜಿನಿಯರಿಂಗ್ ಹಾಕಿಯಾಗಿದೆ. ಇನ್ನೊಂದು ಮೂರು ವರುಷದಲ್ಲಿ ಅವಳು 'ಸ್ಟ್ಯಾಂಡ್' ಆಗುತ್ತಾಳೆ. ಬ.ಎಸ್ಸಿ ಓದಿದರೆ ಏನಿದೆ ರೀ?" ಈ ಮಾತನ್ನು ಪದೇ ಪದೆ ಹೇಳಿದಂತೆ ಭಾಸವಾಗಿ, ಅದರ ಹಿಂದೆಯೇ, ಇಂತಹ ಮಾತನ್ನು ನನಗೆ ಹೇಳಿದವರ ಮಗನಿಗೆ ನಾನ್ಯಾಕೆ ಕೆಲಸ ಕೊಡಿಸಬೇಕು? ಅಂತ ಮನಸ್ಸು ಪ್ರಶ್ನೆ ಕೇಳುತಿತ್ತು. ಮನಸ್ಸು ಹಾಗೆ ಕೇಳಲು ಒಂದು ಕಾರಣ ಇತ್ತು. ಅವರ ಆ ಪ್ರಶ್ನೆಯಲ್ಲಿ ವ್ಯಂಗ್ಯವಿತ್ತು ಆ ದಿನ, ಕುಹಕ ಇತ್ತು, ಏನೋ ಒಂದು ರೀತಿ ಸಂತೃಪ್ತ ಅನುಕಂಪದ ಧಾಟಿ ಇತ್ತು, ತಾವು ನಿಮಗಿಂತ ಮೇಲು ಎಂದು ಸಾರುವ ಅಡಕವಾದ ಸಂದೇಶವಿತ್ತು. ಸರಿ ಹಂಗಾದ್ರೆ.. ಸಂಜೆ ಕಾಲ್ ಮಾಡ್ತೀನಿ. ಏನು ಅಂತ ತಿಳಿಸು, ಅಂತ ಹೇಳಿ ಅಪ್ಪ ಫೋನ್ ಇಟ್ಟರು.

ನಿಜ. ನಾನು ಒಂದು ಮಾತು ಹೇಳಿದರೆ ಸಾಕು, ಆ ಹುಡುಗನ್ನ ಮೊದಲನೇ ಎರಡು ಸುತ್ತಿನಲ್ಲೂ, ಅವನನ್ನು ಪಾಸು ಮಾಡಿಸಿ, ಕೊನೆಯ ಸುತ್ತಿನ ಇಂಟರ್ವ್ಯೂ ನಾನೇ ತೆಗೆದು ಕೊಳ್ಳುವುದರಿಂದ ಅವನಿಗೆ ಕೆಲಸ ಕೊಡಿಸುವುದು ನನ್ನ ಕೈಯಲ್ಲೇ ಇತ್ತು. ಆದರೆ ಮನಸ್ಸು ಮಾತ್ರ, ಅಂಥವರಿಗೆ ಯಾಕೆ ಸಹಾಯ ಮಾಡಬೇಕು? ಎಂದು ಕೇಳುತ್ತಿದ್ದರೆ, ಹಿಂದೆ ನಾನು ಸಹಾಯ ಮಾಡಿ ಕೆಲಸ ಪಡೆದ ನನ್ನ ಸ್ನೇಹಿತರ ಸಂತೋಷದ ಮಾತುಗಳೂ ಕೇಳುತ್ತಿದ್ದವು. ಒಬ್ಬರಿಗೆ ಸಹಾಯ ಮಾಡಿದ್ದಾಗ ಆಗುವ ಸಂತೋಷ, ಹಾಗೂ ಅದರಿಂದ ಅವರು ಪಡುವ ಆನಂದವನ್ನು ನೋಡುವುದಕ್ಕಿಂತ ಸಂತೋಷ ಇನ್ನೇನಿದೆ? ನಿನ್ನ ಸ್ನೇಹಿತರಿಗೆ ಸಹಾಯ ಮಾಡಿದ್ದೀಯ. ಆದರೆ ಇವನಿಗೆ ಯಾಕೆ ಮಾಡಲು ಹಿಂಜರಿಯುತ್ತಿದ್ದೀಯ? ಅವನ ಅಪ್ಪ ಏನೋ ಹೇಳಿರಬಹುದು. ಅದನ್ನೇ ಹಿಡಿದುಕೊಂಡು ಸಾಧಿಸುವುದರಲ್ಲಿ ಏನಿದೆ? ಇರಲಿ. ಅವನಿಗೆ ಸಹಾಯ ಮಾಡೋಣ. ಅವರು ಏನೋ ಹೇಳಿದ್ದರಿಂದ ನನಗೇನೂ ಕೆಡುಕಾಗಿಲ್ಲ. ಎಷ್ಟೇ ಮನಸಿನಲ್ಲೇ ಮಾತನಾಡಿಕೊಂಡರೂ, ಅವನಿಗೆ ಕೆಲಸ ಕೊಡಿಸುವಲ್ಲಿ ಯಾಕೋ ಒಲವೇ ಬರುತ್ತಿಲ್ಲ! ಏನೇನೋ ಯೋಚಿಸುತ್ತ ಆಫೀಸು ಬಂದೇ ಬಿಟ್ಟಿತು ಎಂದು, ತನ್ನ ಬ್ಯಾಗನ್ನು ಹೆಗಲಿಗೇರಿಸಿ, ಬಸ್ಸನ್ನು ಇಳಿದಳು ಶೃತಿ.

***

ಸಂಜೆ ಏನೋ ಪುಸ್ತಕ ಓದುತ್ತಾ ಕುಳಿತಾಗ, ಅಪ್ಪ ಮತ್ತೆ ಕಾಲ್ ಮಾಡಿದರು. ನಾ ಹೇಳಿದ್ದು ಏನು ಮಾಡಿದೆ? ಎಂದು ಕೇಳಿದರು. ಮುಂದಿನ ಸೋಮವಾರ ಅವನ ಇಂಟರ್ವ್ಯೂ ಇಟ್ಟಿದೀನಿ ಅಪ್ಪ. ಅವನಿಗೆ ನಾನು ಏನೇನು ಓದಿಕೊಂಡು ಬರಬೇಕು ಎಂದು ಮೇಲ್ ಮಾಡಿದ್ದೀನಿ. ಓದಿಕೊಂಡು ಬರೋಕೆ ಹೇಳಿ. ಅವನಿಗೆ ಕೆಲಸ ಗ್ಯಾರೆಂಟಿ ಆಗಿದೆ ಎಂದು ಈಗಲೇ ಹೇಳಬೇಡಿ. ನಾನು ಅವನಿಗೆ ನಿಧಾನಕ್ಕೆ ತಿಳಿಸುತ್ತೇನೆ. ಅಪ್ಪ ಸಂತೋಷದಿಂದ, ನನಗೆ ಗೊತ್ತಿತ್ತು, ನಿನ್ನ ಹತ್ತಿರ ಹೇಳಿದರೆ ಕೆಲಸ ಆಗುತ್ತೆ ಎಂದು ಹೇಳಿ ಸಂತೋಷ ಪಟ್ಟರು. ಅವರ ಸಂತಸದ ಜೊತೆ ನಾನೂ!

ಸೋಮವಾರ, ಮೇ 23, 2011

ಪಾಠ

ಮಿರಮಿರನೆ ಹೊಳೆಯುವ,
ಅತ್ಯಂತ ಗುಣಮಟ್ಟದ,
ಸುಮಾರು ಹದಿನೈದು ಸಾವಿರಕ್ಕಂತೂ ಮೋಸ ಇರದ,
ಚಂದನೆಯ ಆಪಲ್ ಐ ಫೋನನು,
ನನ್ನ ಕಛೇರಿಯ ಹುಡುಗ,
ಕೇವಲ ಏಳು ಸಾವಿರಕ್ಕೆ ಕೊಂಡು ತಂದೆ,
ಎಂದಾಗಲೇ ನನಗೆ ಅನುಮಾನವಿತ್ತು,
ಇಲ್ಲೇನೋ ಮರ್ಮವಿದೆ ಎಂದು!

ಈತ ಅವ ತೋರಿಸಿದ ಐ ಫೋನಿನ,
ಚಂದಕ್ಕೆ, ಬಣ್ಣಕ್ಕೆ, ಮರುಳಾಗಿ,
ಎಲ್ಲದಕ್ಕಿಂತ ಅದು ದೊರಕುತ್ತಿರುವ
ಬೆಲೆಗೆ ಮನಸೋತು,
ರಸ್ತೆಯ ಬದಿಯಲ್ಲೇ ಎಂಟು ಸಾವಿರ ರೂಪಾಯಿ
ಎಂದು ಹೇಳಿದ ಆಗಂತುಕನ ಬಳಿ,
ಏಳು ಸಾವಿರಕ್ಕೆ ವ್ಯವಹಾರ ಕುದುರಿಸಿ,
ಐ ಫೋನ್ ಕರಿದಿಸಿದ್ದ ಐದು ನಿಮಿಷದಲ್ಲಿ!

ಎಂಟು ಸಾವಿರಕ್ಕಿಂತ ಕಡಿಮೆ ಬೆಲೆಗೆ
ಕೊಡುವುದಿಲ್ಲ ಎಂದು ಮುಖ ತಿರುಗಿಸಿ
ಆಗಂತುಕ ತನ್ನ ಸ್ಕೂಟರ್ ಏರಿ ಹೊರಟಾಗ,
ಇವನೂ ಸರಿ ಬೇಡ ಎಂದು ಸುಮ್ಮನಿದ್ದನಂತೆ.
ಇದ್ದಕ್ಕಿದ್ದಂತೆ ಆಗಂತುಕನ ಮನಃ ಪರಿವರ್ತನೆಯಾಗಿ,
ಏಳು ಸಾವಿರವೇ ಕೊಡಿ ಎಂದು,
ಇವನ ಕೈಗೆ ಒಂದು ಪರ್ಸು,
ಒಂದು ಚಾರ್ಜರ್ ಕೊಡಲು,
ಇವನಿಗೋ ಜಗತ್ತನ್ನು ಗೆದ್ದ ಹೆಮ್ಮೆ,
ಅವನನ್ನು ಪುರ್ಸನ್ನು ಬಿಚ್ಚ್ಚಿ ನೋಡಿ,
ಐ ಫೋನ್ ಇದೆಯೋ ಇಲ್ಲವೋ ಎಂದು
ಖಾತ್ರಿ ಪಡಿಸಿಕೊಳ್ಳುವುದನ್ನು ತಡೆದಿತ್ತು.

ದುಡ್ಡು ಇಸಿದುಕೊಂಡ ಆತ,
ಕುಶಿಯಿಂದ ಸ್ಕೂಟರ್ ಏರಿ ತೆರಳಲು,
ಇವನು ಇಲ್ಲಿ ಕಚೇರಿಗೆ ಬಂದು,
ಪರ್ಸನ್ನು ಬಿಚ್ಚಲು ಎಷ್ಟೇ ಪ್ರಯತ್ನ ಮಾಡಿದರೂ,
ಅದನ್ನು ಅಂಟು ಹಾಕಿ ಅಂಟಿಸಿದ್ದರಿಂದ ತೆಗೆಯಲು
ಬರದೆ, ಕತ್ತರಿಸಿದ್ದಾಯ್ತು.
ಒಳಗೆ ನೋಡಿದರೆ, ಐ ಫೋನ್ ಬದಲಾಗಿ,
ಒಂದು ಹೆಂಕೋ ಸಾಬೂನು,
ಜೊತೆಯಲ್ಲಿ ಕೊಟ್ಟ ಚಾರ್ಜರ್ ಗಿಲೀಟು !
ಅವನು ತೋರಿಸಿದ್ದೆ ಬೇರೆ,
ಇವನಿಗೆ ಕೊಟ್ಟಿದ್ದೇ ಬೇರೆ.
ಅದಕ್ಕೆಂದೇ ಅವನು ಸ್ಕೂಟರ್ ಏರಿ
ಹೊರಡುವವನಂತೆ ನಟಿಸಿದ್ದು!

ಅತ್ಯಂತ ರೋಷದಿಂದ ಓಡುತ್ತಾ,
ತನ್ನ ಬೈಕನ್ನು ಏರಿ ಇವನು ,
ಆಗಂತುಕನ ಜಾಡು ಹಿಡಿದು ಹೊರಟಾಗ,
ಅವನು ನಾಪತ್ತೆ.
ದುಡ್ಡು ಇಸಿದುಕೊಂಡವ ಪರಾರಿಯಾಗಿದ್ದ.
ಇವನು ಕೋಡಂಗಿಯಾಗಿದ್ದ.
ಹೆಚ್ಚು ಬೆಲೆಯ ವಸ್ತುವು ಕಡಿಮೆ ಬೆಲೆಗೆ ಸಿಕ್ಕಾಗ,
ದುರಾಸೆಯ ಗುಲಾಮನಾಗಿದ್ದ.
ಮರಳಿ ಬರಲು ಆತ,ನಾವು ಕೇಳುವ ಪ್ರಶ್ನೆಗಳಿಗೆ,
ಹ್ಯಾಪು ಮೋರೆಯನ್ನೇ ಉತ್ತರವಾಗಿ ನೀಡಿದ್ದ.
ದುಬಾರಿ ವಸ್ತುಗಳನ್ನು ಕೊಳ್ಳುವಾಗ
ನೋಡಿ ಕೊಂಡುಕೊಳ್ಳಿ.
ಕಿಸೆಯಲ್ಲಿ ಆದಷ್ಟು ಕಡಿಮೆ ದುಡ್ಡು
ಇರಲಿ, ತುರ್ತಕ್ಕೆ atmಕಾರ್ಡು ಜೊತೆಗಿರಲಿ.

ಗುರುವಾರ, ಮೇ 05, 2011

ಪಾರ್ಕಿನಲ್ಲೊಂದು ಒಂಟಿ ಜೋಕಾಲಿ


ಪ್ರತೀ ಸಾರಿಯೂ ಹೋಗೋ ಜೋಳದ ಗಾಡಿಯವಳ ಹತ್ತಿರ ಹತ್ತು ರೂಪಾಯಿ ಕೊಟ್ಟು, ಜೋಳ ಸುಡುತ್ತಿರುವ ಅವಳಿಗೆ ಸ್ವಲ್ಪ ಖಾರ ಜಾಸ್ತಿ ಹಾಕಿ ಎಂದು ಹೇಳಿ ಹಾಕಿಸಿಕೊಂಡು, ಸುತ್ತಲೂ ಜೋಳವನ್ನು ಹಿಡಿದುಕೊಂಡು ಪಾರ್ಕಿನ ಒಳಗೆ ಬಂದು ಒಮ್ಮೆ ಅಲ್ಲಿ ಸುತ್ತು ತಿರುಗಿ ನೋಡುತ್ತೇನೆ. ಎಲ್ಲೆಂದರಲ್ಲಿ ಜೋಡಿ ಹಕ್ಕಿಗಳಿದ್ದೇ ಸಾಮ್ರಾಜ್ಯ. ನನಗೆ ಪ್ರತೀ ಸಾರಿ ಕೂರುವ ಜಾಗ ಬೇಡ. ಸ್ವಲ್ಪ ಬದಲಾವಣೆ ಇರಲಿ ಎಂದು ಬಯಸಿ ಬೇರೆ ಎಲ್ಲಾದರೂ ಜಾಗ ಸಿಕ್ಕಬಹುದೇ ಎಂದು ಆಸೆಯ ಕಣ್ಣುಗಳಿಂದ ನೋಡುತ್ತೇನೆ. ಇಲ್ಲ. ನನಗೆ ಅದೇ ಜಾಗ ಖಾತ್ರಿಯಾದಂತಿದೆ. ಬೇರೆ ದಾರಿ ಇಲ್ಲದೇ ನನ್ನ ಮಾಮೂಲಿ ಜಾಗದಲ್ಲಿ ಕೂರುತ್ತೇನೆ. ಸುತ್ತಲೂ ಗಮನಿಸುತ್ತ ಒಂದೊಂದೇ ಕಾಳನ್ನು ಬಿಡಿಸಿಕೊಂಡು ತಿನ್ನತೊಡಗುತ್ತೇನೆ.ಮರದಲ್ಲಿರುವ ಇಣಚಿ ಗಾಬರಿಯಾದಂತೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದೆ. ಚಿಕ್ಕ ಮಕ್ಕಳು ಜೋಕಾಲಿಯಲ್ಲಿ ಜೀಕುತ್ತಿದ್ದಾರೆ, ಅವರ ಅಮ್ಮಂದಿರು ಅವರನ್ನು ತಳ್ಳುತ್ತಾ ಮಕ್ಕಳಿಗೆ ಇನ್ನೂ ಜೋರಾಗಿ ಜೀಕುವಂತೆ ಸಹಾಯ ಮಾಡುತ್ತಿದ್ದಾರೆ. ಬಿಳಿ ತಲೆಯ ಒಂದೆರಡು ತಾತಂದಿರು ತಮ್ಮ ವಾಕ್ ಸ್ಟಿಕ್ ಹಿಡುಕೊಂಡು ಒಳಗೆ ಬರುತ್ತಿದ್ದಾರೆ. ಒಸಾಮಾ ಕೊಲೆಯಾದ ವಿಷಯ ಅವರ ಸಂಜೆಯ ಚರ್ಚೆಯ ವಿಷಯಕ್ಕೆ ವಿಷಯವಾಗಲಿದೆ. ಮಧ್ಯ ವಯಸ್ಸಿನ ಮಹಿಳೆಯರು, ಸೀರೆ ಉಟ್ಟುಕೊಂಡು ನೈಕೆ ಶೂ ಹಾಕಿಕೊಂಡು ವಾಕ್ ಮಾಡಲು ಬರುತ್ತಿದ್ದಾರೆ. ಕಾಲೇಜು ಬಿಟ್ಟ ಮೇಲೆ ಹುಡುಗನ ಜೊತೆ ಹುಡುಗಿ, ಜೊತೆ ಜೊತೆಗೇ ನಡೆದುಕೊಂಡು ಪಾರ್ಕಿನ ಒಳಗೆ ಬರುತ್ತಿದ್ದಾರೆ. ಅವರ ಕಣ್ಣುಗಳು ಕತ್ತಲು ಇರುವ ಸ್ಥಳಗಳನ್ನು ಹುಡುಕುವಂತೆ ಭಾಸವಾಗುತ್ತಿದೆ. ಅಲ್ಲೇ ಯಾವುದೊ ಮರದಡಿಯಲ್ಲಿ ಕುಳಿತು ಅವರು ನನ್ನ ಕಣ್ಣಿಗೆ ಮಾಯವಾಗುತ್ತಾರೆ. ವಾಕ್ ಮಾಡಲು ಟ್ರಾಕ್ ಪ್ಯಾಂಟ್, ಟೀ - ಶರ್ಟ್ ತೊಟ್ಟು ಕಿವಿಗೆ ಇಯರ್ ಫೋನ್ ಹಾಕಿಕೊಂಡ ಹುಡುಗ ಹುಡುಗಿಯರು, ಕೆಲವೊಬ್ಬರು ಜೋರಾಗಿ ನಡೆಯುತ್ತಿದ್ದರೆ ಇನ್ನು ಕೆಲವರು ಓಡುತ್ತಿದ್ದಾರೆ. ಅವರ ಮೈಗಳಿಂದ ಬೆವರು ತೊಟ್ಟಿಕ್ಕುತ್ತಿದೆ. ಆ ಬೆವರು ಅವರು ಚನ್ನಾಗಿ ವ್ಯಾಯಾಮ ಮಾಡಿದ್ದಾರೆಂದು ಎಲ್ಲರಿಗೂ ಮನದಟ್ಟು ಮಾಡಿಸುತ್ತಿದೆ.

ತಲೆ ಎತ್ತಿ ನೋಡಿದಾಗ ಸಾವಿರಾರು ಬಾವಲಿಗಳು, ಹಗಲು ಹೊತ್ತೇ ತಲೆಕೆಳಗಾಗಿ ಮಲಗಿ ಏನೋ ಚೀತ್ಕಾರ ಹಾಕುತ್ತಿವೆ. ನಿದ್ರಿಸುತ್ತಿವೆ. ವಯಸ್ಸಾದ ಅಜ್ಜಿಯರು ಬರುತ್ತಿದ್ದಾರೆ. ಅವರನ್ನು ನೋಡಿ ನನಗೆ ಅಜ್ಜಿಯ ನೆನಪಾಗುತ್ತದೆ. ನನ್ನ ಅಜ್ಜಿಯೂ ಹೀಗೇ ಇದಾರಲ್ಲ. ಮಧ್ಯ ಬಾಚಲು ತೆಗೆದು ಜಡೆ ಹಾಕಿದ ಕೂದಲು, ಒಂದು ರೂಪಾಯಿ ಗಾತ್ರದ ಕುಂಕುಮ, ತಲೆಯಲ್ಲಿ ದಾಸವಾಳ ಹೂವು ! ಅಜ್ಜಿ ಒಂದು ದಿನವೂ ದಾಸವಾಳ ಹೂವು ತಪ್ಪಿಸಿದ್ದಿಲ್ಲ. ನಮಗೂ ಮುಡಿದುಕೊಳ್ಳಿ ಎಂದು ಬಂದಾಗ, ನಮಗೆ ಯಾರೋ ಹೇಳಿದ್ದರು. ದಾಸವಾಳ ಹೂವು ಮುಡಿದರೆ ವಯಸ್ಸಾದ ಗಂಡ ಸಿಗುತ್ತಾನೆ ಎಂದು. ಅದಕ್ಕೆ ನಾವು ಹುಡುಗಿಯರು ದಾಸವಾಳ ಹೂವನ್ನು ಮುಡಿಯಬಾರದು ಎಂದು ನಿರ್ಧರಿಸಿದ್ದೆವು. ಅಜ್ಜಿದು ತಲೆ ಬಾಚಿಕೊಳ್ಳುವ ರೀತಿಯೇ ನಮಗೆ ಇಷ್ಟವಾಗುತ್ತಿರಲಿಲ್ಲ. ಅವರ ಹತ್ತಿರ ನಮಗೆ ತಲೆ ಬಾಚಿ ಕೊಡಿ ಎಂದು ಕುಳಿತರೆ, ಅವರಿಗೆ ಮಹದಾನಂದ. ಎಣ್ಣೆ ತಟ್ಟೆ, ಜೊತೆಗೆ ಒಂದು ಲೋಟದಲ್ಲಿ ನೀರನ್ನು ತಂದು ನಮಗೆ ಬಾಚಲು ಕುಳಿತುಕೊಳ್ಳುತ್ತಿದ್ದರು.ಅವರು ಬಾಚಲು ಹೇನು ಹಣಿಗೆ ಬಳಸುತ್ತಿದ್ದರು. ಅದರ ಹಲ್ಲುಗಳು ತುಂಬಾ ಹತ್ತಿರ-ಹತ್ತಿರ ಇರುತ್ತಿದ್ದವು. ಒಂದು ವೇಳೆ ನಮ್ಮ ತಲೆಯಲ್ಲಿ ಸಿಕ್ಕು ಇದ್ದಿದ್ದರೆ, ಬಾಚುವಾಗ ಕೂದಲು ಸಿಕ್ಕಾಕಿಕೊಂಡು ಜೀವ ಹೋಗುವಷ್ಟು ಉರಿಯುತ್ತಿತ್ತು. ಅಷ್ಟೇ ಅಲ್ಲ, ಅವರು ಬಾಚಿಕೊಟ್ಟರೆ ಒಂದು ಕೂದಲೂ ಅಲ್ಲಾಡುತ್ತಿರಲಿಲ್ಲ. ಎರಡು ಮೂರು ದಿನಗಳೂ ಕೂದಲನ್ನು ಬಾಚದೇ ಇದ್ದರೂ ಇರಬಹುದಿತ್ತು. ನಾನು,ನನ್ನ ತಂಗಿ ನನ್ನ ದೊಡ್ಡಮ್ಮನ ಮಗಳು. ನಮಗೆ ಆಗಲೇ ಫ್ಯಾಶನ್ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆ ಬರುತಿತ್ತು. ನಮಗೆ ಆ ತರಹ ಬಾಚ್ಕೊಂಡರೆ ತೀರ ಹಳೆ ಕಾಲದ ಮುದುಕಿಯರ ಹಾಗೆ ಕಾಣುತ್ತೀವೇನೋ ಅನ್ನಿಸಿದ್ದೇ ತಡ..ಅಜ್ಜಿಯ ಹತ್ತಿರ ತಲೆ ಬಾಚಿಸಿಕೊಳ್ಳೋದನ್ನ ನಿಲ್ಲಿಸಿಬಿಟ್ವಿ. ಅಜ್ಜಿ, ನಮ್ಮ ಅಮ್ಮನ ಹತ್ತಿರ ಪುಕಾರ್ ಮಾಡಿದರು. ನಾವೆಲ್ಲಾ ಬಾಚಿದರೆ ಎಲ್ಲಿ ಸರಿ ಆಗುತ್ತೆ ಇವರಿಗೆ? ಇವರು ಈಗಿನ ಕಾಲದ ಮಕ್ಕಳು ಎಂದು ನಿಟ್ಟುಸಿರು ಬಿಟ್ಟಿದ್ದರು. ಅದು ನನಗೆ ಈಗಲೂ ನೆನಪಿದೆ. ಅಜ್ಜಿ ಈಗಲೂ ಅದರ ಬಗ್ಗೆ ರೇಗಿಸುತ್ತಾರೆ. ಇಷ್ಟೆಲ್ಲಾ ನೆನಪಾಗಿದ್ದು ಆ ರೂಪಾಯಿ ಗಾತ್ರದ ಕುಂಕುಮ ಇಟ್ಟುಕೊಂಡಿದ್ದ ಯಾರದೋ ಅಜ್ಜಿ ನೋಡಿ.

ಸುಮ್ಮನೆ ಹಾಗೆ ಪಕ್ಕ ತಿರುಗಿ ನೋಡಿದಾಗ ನನಗೆ ಏನೋ ಕಾಣಿಸಿತು. ಯಾಕೋ ಒಂಥರಾ ಆಯ್ತು. ನೋಡಲು ಚಿಕ್ಕ ಪ್ರಾಯದವರ ಹಾಗೇ ಇದ್ದರು ಆ ಹುಡುಗ ಹುಡುಗಿ . ಹುಡುಗ ಹುಡುಗಿಗೆ ಮುತ್ತು ಕೊಡುತ್ತಿದ್ದಾನೆ. ಅದು ಪರ್ಕಿನಂಥ ಸಾರ್ವಜನಿಕ ಸ್ಥಳದಲ್ಲಿ ! ಕೂಡಲೇ ನನಗೆ ಗಾಂಧಿಜಿಯವರು ನೆನಪಾದರು. "ಕೆಟ್ಟದ್ದನ್ನು ನೋಡಬೇಡ" ಅಂತ. ನನ್ನ ಪಾಡಿಗೆ ಹಾಡನ್ನು ಕೇಳುತ್ತ ಕುಳಿತುಬಿಟ್ಟೆ. ಆದರೆ ಮನಸು ಮತ್ತೆ ಯೋಚಿಸಹತ್ತಿತು. ಸುತ್ತ ತಿರುಗಿ ನೋಡಿದಲ್ಲಿ ಪ್ರೇಮಿಗಳ ಜೋಡಿ. "ಪ್ರೇಮಿಗಳ ಜೋಡಿ " ಅದನ್ನ ಹಾಗೇ ತೀರ್ಮಾನಿಸಲು ಕಾರಣವಿದೆ. ನಮಗೆ ಯಾಕೆ ಎಲ್ಲೇ ಹುಡುಗ ಹುಡುಗಿಯನ್ನು ಜೊತೆ ಜೊತೇಲಿ ನೋಡಿದಾಗ ಅವರು ಒಳ್ಳೇ ಸ್ನೇಹಿತರಿರಬಹುದು, ಅಣ್ಣ-ತಂಗಿ, ಅಕ್ಕ-ತಮ್ಮ ಇರಬಹುದು ಎಂಬ ಭಾವನೆ ಬರುವುದಿಲ್ಲ? ಬಂದರೂ ಅದು ಅವರು ಪ್ರೇಮಿಗಳಿರಬಹುದೇ ಎಂಬ ಶಂಕೆಯ ನಂತರ ಬರುವಂತ್ತದ್ದು. ಹಾಗಾದರೆ ಜಗತ್ತನ್ನು ನೋಡುವ ದೃಷ್ಟಿ ಹಾಳಾಗಿದೆಯೇ? ಅಥವಾ ನಮ್ಮಲ್ಲೇ ಒಳ್ಳೆಯದನ್ನು ಗ್ರಹಿಸುವ ಶಕ್ತಿ ಇಲ್ಲವಾಗಿದೆಯೇ? ಒಂದು ವೇಳೆ ಜಗತ್ತಿನಲ್ಲಿ ಇಷ್ಟೊಂದು ಪ್ರೀತಿ-ಪ್ರೇಮ ತುಂಬಿದ್ದೆ ಆಗಿದ್ದರೆ ಯಾಕೆ ಈ ದ್ವೇಷ, ಅಸೂಯೆ, ಸೇಡು ಎಂಬಿತ್ಯಾದಿ ಭಾವನೆಗಳಿಂದ ಮನುಷ್ಯರು ಬದುಕುತ್ತಿದ್ದಾರೆ? ಇಲ್ಲಿ ಕುಳಿತ ಎಲ್ಲ ಜೋಡಿಗಳು ನಿಜವಾಗಿಯೂ ಮದುವೆ ಆಗುವವರ? ಆಮೇಲೆ ಮತ್ತೆ. ನಿನಗ್ಯಾಕೆ ಇದೆಲ್ಲ. ಲೀವ್ ಇಟ್ ಅಂತ ಅಂದುಕೊಂಡು ಮತ್ತೆ ಸುಮ್ಮನಾಗುತ್ತೇನೆ. ಅಷ್ಟಕ್ಕೂ ಪ್ರೀತಿ ಅಂದ್ರೆ ಹಿಂಗೆ ಅಂತ ಹೇಳೋದು ಕಷ್ಟದ ವಿಷಯ.

ತೆಗೆದುಕೊಂಡ ಜೋಳ ಸುಮಾರಾಗಿ ಮುಗಿಯುತ್ತಿದೆ. ಆಕಾಶದಲ್ಲಿ ಬೆಳ್ಳಕ್ಕಿಗಳು ತಮ್ಮ ಗೂಡಿಗೆ ಮರಳಲು ಗುಂಪು ಗುಂಪಾಗಿ ಬರುವುದು ಕಾಣುತ್ತಿದೆ. ವಯಸ್ಸಾದ ಒಂದು ಮುದುಕಿ ನನ್ನ ಬಳಿ ಬಂದು ಕಡಲೆ ಬೀಜ ಬೇಕಾ ಎಂದು ಕೇಳುತ್ತಿದ್ದಾಳೆ. ಅವಳ ಮುಖ ಸುಕ್ಕು ಗಟ್ಟಿದೆ. ಪ್ರಾಯ ಅರವತ್ತರ ಮೇಲಿರಬೇಕು ಎಂದು ನನ್ನ ಮನಸ್ಸು ಲೆಕ್ಕ ಹಾಕಿದೆ. ಕಡಲೆ ಬೀಜ ತಿನ್ನುವ ಮನಸ್ಸೇನೂ ಇಲ್ಲದಿದ್ದರೂ ಹತ್ತು ರೂಪಾಯಿ ಕೊಟ್ಟು ಕಡಲೆ ಬೀಜವನ್ನು ಕೊಳ್ಳುತ್ತೇನೆ. ಆ ಮುದುಕಿ ದುಡಿಯದೆ ಸೋಮಾರಿಯಾಗಿಯೇ ಕಾಲ ಕಳೆಯುವ ಎಷ್ಟೋ ಯುವ ಜನರಿಗೆ ಆದರ್ಶ ಎಂದು ಅಂದುಕೊಳ್ಳುತ್ತೇನೆ. ಅಪ್ಪನ ದುಡ್ಡಿನಲ್ಲಿ ಮಜಾ ಮಾಡಿಕೊಂಡು ಜೀವನ ಮಾಡುವ ಎಷ್ಟೋ ಜನರು, ಹಾಗೂ ಈ ಮುದುಕಿ ಇಬ್ಬರೂ ಮನಸಿನ ತಕ್ಕಡಿಯಲ್ಲಿ ಕೂರಿಸಿ ತೂಗಿದಾಗ, ಮುದುಕಿಯ ತೂಕ ಜಾಸ್ತಿ ಬಂದು ಅವಳನ್ನು ಮನಸಲ್ಲೇ ಪ್ರಶಂಸಿಸಿ ಕುಶಿ ಪಡುತ್ತೇನೆ. ಅವಳು ಕೊಟ್ಟ ಕಡಲೆ ಬೀಜವನ್ನು ಒಂದೊಂದೇ ಸಿಪ್ಪೆ ಬಿಡಿಸುತ್ತ ಕುಳಿತ ಬೆಂಚಿನಿಂದ ಏಳುತ್ತೇನೆ . ನನ್ನ ಕಣ್ಣು ಪಕ್ಕದಲ್ಲಿರುವ ಅವರ ಮೇಲೆ ಬೇಡವೆಂದರೂ, ಗಾಂಧೀಜಿ ನೆನಪಾದರೂ ಒಮ್ಮೆ ಓರೆಗಣ್ಣಿನಲ್ಲಿ ನೋಡುತ್ತೇನೆ. ಅವರಿಗೆ ಲೋಕದ ಪರಿವೆ ಇಲ್ಲದಂತಿದೆ ಎಂದು ನನಗೆ ನಗು ಬರುತ್ತದೆ. ಮಕ್ಕಳು ಇನ್ನೂ ಉಯ್ಯಾಲೆ ಆಡುತ್ತಿದ್ದಾರೆ. ನಾನೂ, ತಂಗಿಯೂ ಒಂದು ಕಾಲದಲ್ಲಿ ಹೀಗೇ ಆಡುತ್ತಿದ್ದೆವಲ್ಲ ಎಂದು ನೆನಪಾಗುತ್ತದೆ. ಜೋಕಾಲಿಯಲ್ಲಿ ಒಮ್ಮೆ ತಂಗಿ ಕಂಡಂತಾಗುತ್ತದೆ, ಆಮೇಲೆ ಇನ್ಯಾರೋ! ಬರುವಾಗ ನಡೆದು ಬಂದ ಹಾದಿಯಲ್ಲೇ ಮತ್ತೆ ವಾಪಸ್ ತೆರಳುತ್ತೇನೆ. ಸೂರ್ಯನ ತಿಳಿ ಬಿಸಿಲು ಇದ್ದ ರಸ್ತೆಯಲ್ಲಿ ಈಗ ರಸ್ತೆ ದೀಪಗಳ ಬೆಳಕಿನ ಮೆರವಣಿಗೆ. ನನ್ನ ಫೋನಿನಲ್ಲಿ ಹಾಡು ಕೇಳುತ್ತದೆ,

"ಸುರಜ್ ಹುವ ಮದ್ಧಂ , ಚಾಂದ್ ಜಲನೇ ಲಗಾ
ಆಸ್ಮಾನ್ ಯೇ ಹಾಯ್ ಕ್ಯೂನ್ ಪಿಘಲ್ನೆ ಲಗಾ "

ಸುಂದರ ಸಂಜೆಯನ್ನು ಕಳೆದ ಅನುಭೂತಿ ನನ್ನ ನೆನಪಿನ ಪುಟಗಳಲ್ಲಿ ಸೇರುತ್ತದೆ .

ಬುಧವಾರ, ಏಪ್ರಿಲ್ 27, 2011

ಎಲ್ಲ ಮರೆಯುವುದು ಅಂದರೆ ಅಷ್ಟು ಸುಲಭಾನ?

ಮೂರ್ತಿ ರಾಯರು ಅಂದರೆ ಮೊದಲಿಂದಲೂ ಮನೆತನದ ಎಲ್ಲರಿಗೂ ವಿಶೇಷ ಗೌರವ. ಸ್ನಾನ ಮುಗಿಸಿ ಮಡಿಯಲ್ಲಿ ಬಾವಿಯಿಂದ ನೀರು ಸೇದುವಾಗ, ಅಪ್ಪಿ ತಪ್ಪಿ ಸ್ನಾನವಾಗದ ಪಕ್ಕದ ಮನೆಯ ಮಗು ಬಂದು ಅವರ ಮುಟ್ಟಿದರೂ ಮಡಿಗೆ ಭಂಗ ಬಂದೀತೆಂಬ ಭಯದಿಂದ ಅದನ್ನು ಗದರಿಸಿ, ನೀರನ್ನು ತಂದು ಪೂಜೆಗೆ ಕೂರುತ್ತಿದ್ದರು. ಗಂಧ, ಚಂದನಗಳ ತೇದು, ದೇವರ ವಿಗ್ರಹಗಳಿಗೆ ಹಾಲು, ಮೊಸರಿನ ಅಭಿಷೇಕ ಮಾಡಿ, ಗಾಯಿತ್ರಿ ಪಠಣ ಮಾಡಿ ಹೊರ ಬರುವುದಕ್ಕೆ ಕಡಿಮೆ ಎಂದರೂ ಎರಡು ಘಂಟೆಗಳು!. ತಮ್ಮ ಇಚ್ಚೆಯೆಂತೆ ನಡೆದುಕೊಳ್ಳುವ ಅವರ ಹೆಂಡತಿ, ಪೂಜೆ ಮುಗಿಯುತ್ತಿದ್ದಂತೆ ಅವರಿಗೆ ತಿಂಡಿ ಮಾಡಿರುತ್ತಿದ್ದಳು. ಅವರ ಅದೃಷ್ಟ ಎನ್ನುವಂತೆ ಆರತಿಗೊಬ್ಬಳು, ಕೀರ್ತಿಗೊಬ್ಬ ಎಂದು ಎರಡು ಮುದ್ದಾದ ಮಕ್ಕಳು. ಓದಲು ಎಷ್ಟು ಬುದ್ದಿವಂತರೋ, ಅದು ಯಾರಿಗೂ ಗೊತ್ತಿಲ್ಲ. ಆದರೆ ಸಂಬಂಧಿಕರಲ್ಲಿ ಅವರ ಮಕ್ಕಳು ಬಹಳ ಬುದ್ದಿವಂತರು ಅಂತಲೇ ಪ್ರಚಾರವಿತ್ತು. ಅದು ಬಹುಶಃ ಮೂರ್ತಿ ರಾಯರ ಪ್ರಭಾವವೇ ಕಾರಣವಿರಬೇಕು.

ಕೆಲವೊಮ್ಮೆ ಹಾಗೆ. ಕೆಲವೊಂದು ವಿಷಯಗಳನ್ನು ಸುಮ್ಮನೆ ನಂಬಿಕೊಂಡು ಬಿಡುತ್ತೇವೆ ಅಲ್ಲವ? ಹಾಗೆ. ಇದ್ದ ಇಪ್ಪತ್ತು ಎಕ್ಕರೆ ತೋಟದಲ್ಲಿ ಒಳ್ಳೆ ಬೆಳೆಯಾಗುತಿತ್ತು. ಊರಲ್ಲಿ ಎಲ್ಲರಿಗಿಂತ ಶ್ರೀಮಂತರಾಗಿದ್ದರು. ತಾವು ಉಳ್ಳವರು ಎಂಬುದರ ಬಗ್ಗೆ ಅವರಲ್ಲಿ ಬಹಳೇ ಅಹಂಕಾರ ಇತ್ತು. ಹೆಂಡತಿ ಇವರು ಹೇಳಿದ ಒಂದು ಮಾತನ್ನೂ ಮೀರುವಂತಿರಲಿಲ್ಲ. ಮಕ್ಕಳು ಅಪ್ಪನ ಜೊತೆಗೆ ಮುಖ ನೋಡಿ ಮಾತಾಡಿದ್ದೆ ಹೆಚ್ಚು! ಏನಿದ್ದರೂ ಅಮ್ಮನ ಮೂಲಕ ಅಪ್ಪನಿಗೆ ತಲುಪುತ್ತಿತ್ತು. ಇಂಥ ಮೂರ್ತಿರಾಯರಿಗೆ ಒಬ್ಬಳು ತಂಗಿ ಇದ್ದಳು.ಹೆಸರು ಮುಕ್ತ.

****

ಜೋರು ಮಳೆ ಸುರಿಯುತ್ತಿರುವುದನ್ನು ನೋಡುತ್ತಾ ಕಿಡಕಿ ಪಕ್ಕ ಕುಳಿತಿದ್ದಳು ಮುಕ್ತ. ಇಪ್ಪತ್ತೈದು ವರ್ಷಗಳೇ ಉರುಳಿವೆ. ತಾನು ಹೀಗೆ ಇಷ್ಟಪಟ್ಟವನೊಡನೆ ಹೊರ ಬಂದು! ಆ ದಿನದಿಂದ ತವರಿನ ಒಂದೇ ಒಂದು ಎಳೆ ಸಂಬಂಧವೂ ಉಳಿಯಲಿಲ್ಲ. ಇಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನಿತ್ತು? ಇಷ್ಟ ಪಟ್ಟ ಹುಡುಗನನ್ನ ಮದುವೆಯಾಗಲು ಎಷ್ಟು ಗೋಗರೆದರೂ ಅಣ್ಣ ಬಿಡುತ್ತಿರಲಿಲ್ಲ. ಅವನಿಗೆ ನನ್ನ ಸುಖಕ್ಕಿಂತ ಅವನ ಪ್ರತಿಷ್ಠೆಯೇ ಹೆಚ್ಚಾಗಿತ್ತು. ಇವನೂ ಕೂಡ ಮರ್ಯಾದಿಯಿಂದಲೇ ಅಣ್ಣನ ಬಳಿ ಬಂದು ನನ್ನ ಕೈಯನ್ನು ಕೇಳಿದ. ಆದರೆ ಅಣ್ಣ ಅವನಿಗೆ "ನನ್ನ ತಂಗಿ ಸಾಕುವ ಯೋಗ್ಯತೆ ನಿನಗಿದೆಯ?" ಎಂದು ಕೇಳಿ ಅವಮಾನಿಸಿ ಕಳಿಸಿಬಿಟ್ಟಿದ್ದ. ಆಗ ಹುಟ್ಟಿದ್ದು ನನಗೆ ಅಣ್ಣನ ಮೇಲೆ ಕೋಪ. ಅಲ್ಲಿಯವರೆಗೂ ಅಣ್ಣಾ ಎಂದರೆ ನನಗೂ ಬಹಳ ಇಷ್ಟ. ಅವನು ನನ್ನ ಅಣ್ಣ ಆದರೂ ಕೂಡ, ನನಗೆ ಆ ಕ್ಷಣಕ್ಕೆ ಅಣ್ಣನ ಬಿಟ್ಟು ಬದುಕಬಲ್ಲೆ, ಆದರೆ ಇವನ ಬಿಟ್ಟು ಇರಲಾರೆ ಅನ್ನಿಸಿದ್ದೇ ಮನೆ ಬಿಟ್ಟು ಹೊರಟೆನಲ್ಲ? ಹಾಗೆ ಮನೆ ಬಿಟ್ಟು ಹೋದವಳು ಈ ದಿನದವರೆಗೂ ಹಿಂತಿರುಗಿ ನೋಡಿರಲಿಲ್ಲ. ಇವನಿಗೂ ನಾನು ತವರಿಗೆ ಹೋಗುವುದು ಬೇಕಾಗಿರಲಿಲ್ಲ. ಎರಡು ವರುಷಕ್ಕೆ ಅಭಿಲಾಷ ಹುಟ್ಟಿದಳು. ಬದುಕು ಸಂತೋಷದಲ್ಲೇ ಕಳೆಯಿತು. ಎಂದೂ ಈ ಅಣ್ಣನ ಮಿಸ್ ಮಾಡಿಕೊಳ್ಳುತ್ತ ಇದೀನಿ ಅನ್ನಿಸಲೇ ಇಲ್ಲ. ಆದ್ರೆ ಇವತ್ಯಾಕೆ ಹೀಗೆ ನೆನಪಾಗುತಿದ್ದಾನೆ? ಇಷ್ಟು ವರ್ಷ ಕಾಡದ ಪಾಪ ಪ್ರಜ್ಞೆ ಇವತ್ತು ನನಗೆ ಬರುತ್ತಿದೆ? ತಪ್ಪು ಮಾಡಿ ಬಿಟ್ಟೆನ? ಹಾಗೇ ಏನೋ ಯೋಚಿಸುತ್ತಾ ಕುಳಿತಿದ್ದಳು.

ನಿನ್ನೆ ಸಂಜೆ ದೂರದ ನೆಂಟರೊಬ್ಬರು ಬಂದಿದ್ದರು. ಅಣ್ಣ ತನ್ನ ಮಗನ ಮುಂಜಿ ಮಾಡಲಿದ್ದಾನೆ. ಅದಕ್ಕೆ ತಮಗೆ ಕರೆಯ ಇದೆ ಎಂದು ಹೇಳಿದ್ದರು. ಆಗಲೇ ತಾನೇ ನನಗೆ ಸ್ತ್ರೀ ಸಹಜ ಹೊಟ್ಟೆ ಉರಿ ಶುರುವಾಗಿದ್ದು? ಯಾರೋ ದೂರದ ನೆಂಟರನ್ನು ಕರೆಯಲು ಅಣ್ಣನಿಗೆ ಪುರುಸೊತ್ತಿದೆ. ಆದರೆ ಸ್ವಂತ ತಂಗಿಯನ್ನು ಕರೆಯಲು?! ಆದರೂ ಮುಖದಲ್ಲಿ ಸಣ್ಣ ನಗು ಇಟ್ಟುಕೊಂಡೇ ಮಾತಾಡಿದ್ದೆ. ಅವರಿಗೆ ಏನು ಅನಿಸಿತೋ ಗೊತ್ತಿಲ್ಲ. ಹಿಂದೆ ಆಗಿದ್ದೆಲ್ಲ ಆಯ್ತು ಬಿಡಿ. ಹಳೇದನ್ನೆಲ್ಲ ಮರೆತು, ಅಣ್ಣ ಕರೆಯದಿದ್ದರೂ ಹೋಗಿ ಬನ್ನಿ. ನಿಮ್ಮ ಅಣ್ಣ ತಾನೇ? ಹಾಗೆಲ್ಲ ದ್ವೇಷ ಇಟ್ಟುಕೊಳ್ಳಬಾರದು. ಹಾಗೆ ಹೇಳಿ ಇನ್ನು ಹೊರಡುತ್ತೇನೆ ಅಂತ ಹೇಳಿ ಎದ್ದು ಹೋದರು. ಮನಸ್ಸು ಯೋಚನಾಮಗ್ನ ವಾಗಿತ್ತು. ಅವರು ಹೇಳಿದ ಮಾತನ್ನು ಪುನಃ ಪುನಃ ಸ್ಮರಿಸಿಕೊಂಡಳು. ಹೌದು, ನನ್ನ ಅಣ್ಣನೆ! ಅದರ ಬಗ್ಗೆ ಅನುಮಾನ ಇಲ್ಲ. ಆದರೆ ಅಣ್ಣನಿಗೂ ನಾನು ಅವನ ತಂಗಿಯೇ ಅಂತ ಅನ್ನಿಸೋದೇ ಇಲ್ಲವಾ? ಅವರನ್ನು ಅವಮಾನಿಸೋವಾಗ ಇವರು ನನ್ನ ತಂಗಿ ಗಂಡ ಆಗುವವರೆ ಅಂತ ಅನ್ನಿಸಲಿಲ್ಲವ? ಇಷ್ಟು ವರ್ಷಗಳಂತೂ ನನ್ನ ನೆನಪು ಆಗಲಿಲ್ಲ. ಆದರೆ ಈಗಾದರೂ ಒಮ್ಮೆ ಬಂದು ನನ್ನ ಕರೆಯಬಹುದಿತ್ತಲ್ಲ.ಇಲ್ಲ, ಅವನ ಕರೆಯ ಇಲ್ಲದ ಹೊಗುವುದಾ? ಇಲ್ಲ, ಎಲ್ಲ ತಿಳಿದೂ ವಿಷಯವೇ ಗೊತ್ತಿಲ್ಲದ ಹಾಗೆ ಇರುವುದಾ? ಯೋಚಿಸುತ್ತಲೇ ಇದ್ದಳು. ಯಾರೋ ಬಾಗಿಲು ತಟ್ಟಿದ ಶಭ್ದವಾಯಿತು. ಮಗಳು ಕಾಲೇಜಿಂದ ಬಂದಿದ್ದಾಳೆ ಎಂದು ತಿಳಿದು ಬಾಗಿಲನ್ನು ತೆಗೆಯಲು ಮೇಲೆದ್ದಳು.

****

ಒಳಗೆ ಬರುತ್ತಿರುವಾಗಲೇ ತಿಳಿದಿತ್ತು ಇವಳಿಗೆ ಮಗಳು ಮುನಿಸಿಕೊಂದಿದ್ದಾಳೆ ಎಂದು. ಯಾಕಮ್ಮ ಕೋಪ ಮಾಡಿಕೊಂಡಿದ್ದೀಯ ? ಅಂತ ಕೇಳಬೇಕು ಎನಿಸಿತು. ಸ್ವಲ್ಪ ಸಮಯದ ನಂತರ ಕೇಳೋಣ.ಅವಳು ಫ್ರೆಶ್ ಆಗಿ ಬರಲಿ ಎಂದು ಕಾದಳು. ಆಮೇಲೆ ಅಭಿಲಾಷನೆ ಮಾತಿಗೆ ಶುರುವಿಟ್ಟು ಕೊಂಡಳು. ಅಮ್ಮ, ಇವತ್ತು ಸುಹಾಸ್ದು ಹುಟ್ಟಿದ ದಿನ. ಅವನು ಎಲ್ಲ ಫ್ರೆಂಡ್ಸ್ ನೂ ಕರೆದಿದಾನಂತೆ. ನಂಗೆ ಒಂದು ಮಾತೂ ತಿಳಿಸಲಿಲ್ಲ. ನಾನು ಅವನು ಎಷ್ಟು ಕ್ಲೋಸ್ ಫ್ರೆಂಡ್ಸ್ ಗೊತ್ತ?ಅವನು ಕೊನೆ ಪಕ್ಷ ಹೋಗ್ತಾ ಇರುವ ಮಾತಾದರೂ ಹೇಳಬಹುದಿತ್ತು ಎಂದಳು. ಮಗಳಿಗೆ ಬೇಸರ ಆಗಿದೆ. ಆದರೂ ಅಮ್ಮ ಹೇಳಿದಳು, ಇರಲಿ ಬಿಡಮ್ಮ. ಅವನು ಕರೆಯದಿದ್ದರೆ ಏನು ? ಎಲ್ಲ ಮರೆತು, ಅವನು ನಿನ್ನ ಸ್ನೇಹಿತ ಎಂಬ ಅಭಿಮಾನದಿಂದ ನೀನು ಹೋಗು. ಮಗಳು ಕಾಲೇಜ್ ಬ್ಯಾಗನ್ನು ಸೋಫಾದ ಮೇಲೆ ಚಲ್ಲಿ ಸಿಡಿ ಮಿಡಿಗುಡುತ್ತ ರೂಮಿಗೆ ಹೋಗಿ ಬಾಗಿಲ ಕದ ಹಾಕಿಕೊಂಡಳು. ಮಗಳು ಹೋಗುವುದಿಲ್ಲ ಎಂದು ಇವಳಿಗೂ ಗೊತ್ತಿತ್ತು. ಯೋಚಿಸುತ್ತ ಕುಳಿತಳು..ಎಲ್ಲ ಮರೆಯುವುದು ಅಂದರೆ ಅಷ್ಟು ಸುಲಭಾನ? ಉತ್ತರ ಸಿಗಲಿಲ್ಲ.

ಗುರುವಾರ, ಏಪ್ರಿಲ್ 21, 2011

ಮಾವಿನಕಾಯಿ ಹಿಂಡಿ

ಮಾವಿನಕಾಯಿ ಸಂತೆಗೆ ಈಗಾಗಲೇ ಬಂದಾಗಿದೆ. ನಿನ್ನೆ ರಸ್ತೆಯಲ್ಲಿ ಹೋಗುವಾಗ ಮಾವಿನಕಾಯಿ ಮಾರುವವರನ್ನು ಕಂಡು ಅಮ್ಮ ಮಾಡುವ "ಮಾವಿನಕಾಯಿ ಹಿಂಡಿ" ನೆನಪಾಯಿತು. ಮಾಡುವ ವಿಧಾನ ನಿಮ್ಮ ಮುಂದೆ.

ಬೇಕಾಗುವ ಸಾಮಾಗ್ರಿಗಳು

ಮಾವಿನಕಾಯಿ(ದೊಡ್ಡದು) - ಒಂದು
(ಗಮನಿಸಿ:ಮಾವಿನಕಾಯಿ ಒರಟೆಯದ್ದಾಗಿರಬೇಕು. ಎಳೆಯದಾದರೆ ಬೇಗ ಕೆಟ್ಟು ಹೋಗುವ ಸಂದರ್ಭಗಳು ಹೆಚ್ಚು)
ಕೆಂಪು ಮೆಣಸಿನ ಕಾಯಿ ಪುಡಿ - ಒಂದು ಟೀ ಚಮಚ
ಮೆಂತ್ಯ ಕಾಳು - ಅರ್ಧ ಟೀ ಚಮಚ
ಜೀರಿಗೆ - ಒಂದು ಟೀ ಚಮಚ
ಎಣ್ಣೆ - ಮೂರು ಟೀ ಚಮಚ
ಸಾಸಿವೆ ಕಾಳು - ಅರ್ಧ ಟೀ ಚಮಚ
ಇಂಗು - ಒಂದು ಚಿಟಕಿ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
 1. ಮೊದಲಿಗೆ ಮಾವಿನಕಾಯಿಯನ್ನು ಚನ್ನಾಗಿ ತೊಳೆದು ಸ್ವಚ್ಛ ಬಟ್ಟೆಯಿಂದ ಒರೆಸಿ.
 2. ಮಾವಿನಕಾಯಿಯ ಸಿಪ್ಪೆಯನ್ನು ತೆಳ್ಳಗೆ ತೆಗೆದು,ಸಿಪ್ಪೆ ತೆಗೆದ ಮಾವಿನಕಾಯಿಯನ್ನು ಸಣ್ಣಗೆ ತುರಿಯಿರಿ. ಈ ತುರಿದ ಮಾವಿನಕಾಯಿಗೆ ಉಪ್ಪು ಹಾಕಿ ಕಲೆಸಿ ಒಂದೆಡೆ ಇರಿಸಿ.
 3. ಒಂದು ಬಾಣಲೆಯಲ್ಲಿ ಮೆಂತ್ಯ, ಜೀರಿಗೆ ಹಾಕಿ ಅದು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಈಗ ಹುರಿದಿಟ್ಟ ಮೆಂತ್ಯ ಹಾಗೂ ಜೀರಿಗೆಯನ್ನು ಮಿಕ್ಸರ್ನಲ್ಲಿ ಬೀಸಿರಿ(ನೀರು ಹಾಕದೆ).
 4. ಉಪ್ಪಿನಲ್ಲಿ ಕಲೆಸಿಟ್ಟ ಮಾವಿನಕಾಯಿ ಈಗ ನೀರೊಡೆದಿರುತ್ತದೆ. ಅದನ್ನು ಚನ್ನಾಗಿ ಹಿಂಡಿ ರಸವನ್ನು ತೆಗೆಯಿರಿ.
 5. ಹಿಂಡಿದ ಮಾವಿನಕಾಯಿಗೆ, ರುಬ್ಬಿದ ಮಸಾಲೆ, ಮೆಣಸಿನಪುಡಿ(ಇಚ್ಚಾನುಸಾರ), ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಕಲೆಸಿ.
 6. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ, ಜೀರಿಗೆ ಹಾಕಿ, ಸಾಸಿವೆ ಚಿಟ-ಚಿಟ ಎಂದ ಬಳಿಕ ಚಿಟಕಿ ಇಂಗು ಹಾಕಿ ಕಲಸಿದ ಮಿಶ್ರಣಕ್ಕೆ ಈ ಒಗ್ಗರಣೆ ಹಾಕಿ ಒಮ್ಮೆ ಕೈಯ್ಯಾಡಿಸಿ.

ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ಇದು ಸುಮಾರು ಒಂದು ತಿಂಗಳು ಕೆಡದೆ ಇರುತ್ತದೆ.
ಮೊಸರನ್ನ ಊಟ ಮಾಡುವಾಗ ಇದನ್ನು ನಂಚಿಕೊಂಡು ಉಂಡಾಗ ಇನ್ನೊಂದು ಎರಡು ತುತ್ತು ಜಾಸ್ತಿ ಇಳಿಯದಿದ್ದರೆ ಕೇಳಿ!

ಸೋಮವಾರ, ಮಾರ್ಚ್ 28, 2011

ತಪ್ಪ ಮನ್ನಿಸೈ!!

ಪ್ರತೀ ದಿನದಂತೆ
ಈ ದಿನವೂ ನೀನು,
ಸೇವಂತಿಗೆ ಮುಡಿದಿದ್ದರೆ
ನಾನು ಈ ತಪ್ಪನ್ನು ಮಾಡುತ್ತಿರಲಿಲ್ಲ.
ಪ್ರತೀ ದಿನದಂತೆ ನಿನ್ನ ಭೇಟಿ ಮಾಡಿ,
ಕೋಣೆಯಿಂದ ಹೊರಡುತ್ತಿದ್ದ ಹಾಗೇ,
ಇವತ್ತೂ ಹೋಗುತಿದ್ದೆ.

ಸ್ನಾನ ಮುಗಿಸಿ
ಶುಭ್ರ ಬಟ್ಟೆ ತೊಟ್ಟು
ತಿಂಡಿಯನ್ನೂ ತಿನ್ನದೇ
ನಿನ್ನ ಕೋಣೆಗೆ ಬಂದಾಗ,
ನಿನ್ನ ಮುಡಿಯ ಮೇಲೆ ಕುಳಿತು
ನಗುತಿದ್ದ ಅದನ್ನು ಕಂಡು,
ಕೋಣೆಯಲ್ಲಿ ತುಂಬಿದ ಗಾಳಿಯಲ್ಲಿ
ಆವರಿಸಿದ ಘಮಕ್ಕೆ ಮನಸೋತರೂ,
ಬಿಳಿಯಾದ ಅದರ ಎಸಳುಗಳ
ಮೇಲೆ ಬಿದ್ದ ನೀರಿನ ಹನಿಗಳನ್ನು
ಕಂಡು ಪುಳಕಗೊಂಡರೂ
ಹಸಿರು ಗಿಡದ ಮೇಲೆ,
ಮೊಸರು ಚಲ್ಲಿದೆ ಒಗಟು ನೆನಪಾದರೂ,
ನಿನ್ನಲ್ಲಿ ನಾನು ತಲ್ಲೀನಳಾಗಲು ಅದು ಬಿಡದಿದ್ದರೂ
ಅದು ನಿನ್ನದು,ನಿನಗೆ ಸೇರಿದ್ದು
ಎಂದು ಅನ್ನಿಸಿ ಹಾಗೇ ಬಿಟ್ಟಿದ್ದೆ.

ಆದರೆ, ನಿನ್ನ ಕೋಣೆಯಿಂದೀಚೆ
ಬಂದರೂ ನನ್ನ ಸೆಳೆದು,
ಅದು ಬೇಡ ಎಂದು ಗಟ್ಟಿ ನಿರ್ಧಾರ
ಮಾಡಿದರೂ ಆಗದೆ, ಹೋಗಲಿ
ನಿನ್ನದನ್ನು ನಿನಗೆ ಬಿಟ್ಟು
ನಾನು ಬೇರೆ ಕೊಳ್ಳೋಣ ಎಂದರೂ
ಅದು ಸಿಗುವಲ್ಲಿ ಹೋಗಲು
ನನ್ನಲ್ಲಿ ಸಮಯ ಇಲ್ಲದೇ,
ಮತ್ತೆ ನಿನ್ನ ಕೋಣೆಗೇ ಬಂದು
ನಿನ್ನ ಮುಡಿಯಲ್ಲಿರುವುದನ್ನು ತೆಗೆದು,
ನನ್ನ ಮುಡಿಯಲ್ಲಿರಿಸಿಕೊಂಡೇ ಬಿಟ್ಟೆ,
ಮನಸು ಕೇಳದೇ!
ನನ್ನ ಮೇಲೆ ಕೋಪ ಬಂದಿದ್ದರೆ
ನನ್ನ ಮನ್ನಿಸು ದೇವರೇ !!

ಶುಕ್ರವಾರ, ಮಾರ್ಚ್ 25, 2011

ಅಂತರಂಗ

ಯಾಕೋ ಅರ್ಚು ನನ್ನ ಹತ್ರ ಸರಿಯಾಗಿ ಮಾತಾಡ್ತಾ ಇಲ್ಲ. ಅರ್ಚು ಅಂದ್ರೆ ನನಗೂ ಯಾಕೋ ತುಂಬಾ ಇಷ್ಟ. ಇರುವ ಎಲ್ಲ ಹುಡುಗಿಯರಲ್ಲಿ ಅವಳು ನನಗೆ ಹೊಂದಿಕೊಳ್ಳೋಕೆ, ಏನಾದರು ವಿಷಯಗಳಿದ್ದರೆ ಅವಳೊಂದಿಗೆ ಹಂಚಿಕೊಳ್ಳೋಕೆ, ನಾವು ಓದಿದ ಪುಸ್ತಕದ ಬಗ್ಗೆ ಚರ್ಚೆ ಮಾಡುವುದಕ್ಕೆ, ಎಲ್ಲದಕ್ಕೂ ನನಗೆ ಅವಳೇ ಬೇಕು. ಅವಳು ನನ್ನ ಅಚ್ಚು ಮೆಚ್ಚಿನ ಗೆಳತಿಯರಲ್ಲಿ ಒಬ್ಬಳು.ಆಗ ಬೆಂಗಳೂರಿಗೆ ಹೊಸದಾಗಿ ಬಂದ ದಿನಗಳಲ್ಲಿ, ನನ್ನ ಒಂಟಿತನವನ್ನು ದೂರವಿಡಿಸಿದವಳು ಅವಳು. ನನ್ನ ಸ್ವಭಾವಕ್ಕೆ ಒಮ್ಮೊಮ್ಮೆ ನನಗೂ ನನ್ನ ಮೇಲೆ ಕೋಪ ಬಂದಿದ್ದಿದೆ. ಯಾಕಿಷ್ಟು ಹಚ್ಚಿಕೊಳ್ಳಬೇಕು ಜನರನ್ನ? ಆಮೇಲೆ ಯಾಕೆ ಬೇಸರ ಮಾಡಿಕೊಳ್ಳಬೇಕು? ಹೊಸ ಚೂಡಿದಾರ್ ಹೋಲಿಸಿಕೊಂಡಾಗ, ನಮ್ಮ ಟೈಲರ್ ಹೊಲಿದಿದ್ದು ಸರಿಯಾಗಿದೆಯೋ. ಇಲ್ಲವಾ? ಅದನ್ನು ಹೇಳುವುದು ಅವಳೇ. ಯಾವ ಕೇಶ ವಿನ್ಯಾಸ ನನಗೆ ಚಂದ ಕಾಣುತ್ತದೆ ಎಂದು ಹೇಳುವುದು ಅವಳೇ ಆಗಿತ್ತು. ಅವಳು ನಾನು ಯಾವಾಗಲೂ ಜೊತೆಯಾಗಿರುವುದನ್ನು ಕಂಡು ಎಷ್ಟೋ ಜನರಿಗೆ ನಮ್ಮ ಬಗ್ಗೆ "ಹೊ.ಕಿ" ಆಗುತ್ತಿದ್ದುದು ನಮಗೂ ತಿಳಿದಿತ್ತು. ಅದನ್ನು ತಿಳಿದುಕೊಂಡು ನಾವು ಒಳ- ಒಳಗೇ ಖುಷಿ ಪಡುತ್ತಿದ್ವಿ. ಆದರೆ ಯಾಕೋ ಈಗ ಒಂದು ವಾರದಿಂದ ನನ್ನ ಹತ್ತಿರ ಸರಿಯಾಗಿ ಮಾತಾಡುತ್ತಲೇ ಇಲ್ಲ.

ನನಗೆ ಯಾಕೋ ಅವಳ ಮೌನ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ. ಪುಸ್ತಕ ಹಿಡಿದು ಕುಳಿತ್ತಿದ್ದೇನೆ. ಯಾಕೋ ಓದೋಕೆ ಆಗ್ತಾ ಇಲ್ಲ. ಓದ್ತಾ ಇರಬೇಕಾದರೆ ಅವಳ ಮುಖವೇ ಎದುರಿಗೆ ಬರುತ್ತಿದೆ. ಯಾಕೆ ತರ ವರ್ತಿಸುತ್ತಾರೆ ಜನರು? ತುಂಬಾ ಸನಿಹದವರಂತೆ ಇರಿಸಿಕೊಂಡು, ಆಮೇಲೆ ಒಂದೇ ಸಾರಿ ದೂರ ನೂಕುತ್ತಾರೆ? ಅಥವ ಅವಳು ಸರಿಯಾಗೇ ಇದ್ದಳು. ನಾನೇ ಅವಳನ್ನ ಅತಿಯಾಗೆ ಹಚ್ಚಿಕೊಂಡ್ನ? ಇಲ್ಲ. ಅವಳಿಗೂ ನಾನಂದರೆ ಬಹಳ ಇಷ್ಟ . ಅದರ ಬಗ್ಗೆ ಎರಡು ಮಾತಿಲ್ಲ. ಮೂರು ವರ್ಷದಿಂದ ಒಬ್ಬರನ್ನೊಬ್ಬರು ತಿಳಿದುಕೊಂಡಿದ್ದೀವಿ. ಮತ್ತೆ ಯಾಕೆ ಮಾತಾಡ್ತಾ ಇಲ್ಲ ಅವಳು? ದಿನವೂ ನನ್ನ ಊಟಕ್ಕೆ ಕರೆಯುತ್ತಿದ್ದಳು. ನಾವಿಬ್ಬರು ಒಟ್ಟಿಗೆ ಕುಳಿತು, ಊಟದ ಬಗ್ಗೆ ,ಇನ್ನು ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ವಿ. ಅಂಗಡಿಯಿಂದ ತಂದು ಇರಿಸಿದ್ದ ಚಿಪ್ಸ್ ಮತ್ತು ಅಮ್ಮ ಕಳಿಸಿಕೊಟ್ಟ ಮಿಡಿ ಉಪ್ಪಿನಕಾಯಿ ನಮ್ಮ ಊಟವನ್ನು ಇನ್ನೂ ರುಚಿಯಾಗಿಸುತಿತ್ತು.


ಒಂದು ಸಾರಿ ನಾನು ಅವಳಿಗೆ ಹೇಳಿದ್ದೆ.

"ಇವತ್ತು ಒಂದು quote ಓದಿದೆ ಕಣೆ.ಯಾರು ಬರೆದಿದ್ದು ಅಂತ ಗೊತ್ತಿಲ್ಲ. "

"ಏನದು?"


"The more closer you are to people the more cheap you will be!"


"
ನಾನು ಅದನ್ನು ಒಪ್ಪಲ್ಲ."


"
ಯಾಕೆ? ನನಗ್ಯಾಕೋ ಹೌದು ಅನ್ನಿಸುತ್ತೆ."


ಆಮೇಲೆ ಅವಳು ಹೇಳಿದ್ದು ಇಷ್ಟು.

"ಕ್ಲೋಸ್ ಇದ್ದ ಮಾತ್ರಕ್ಕೆ ಚೀಪ್ ಅಂತ ಯಾರೂ ತಿಳಿಯುವುದಿಲ್ಲ. ಹಾಗಿದ್ದಿದ್ದರೆ ಜಗತ್ತಿನಲ್ಲಿ ಸ್ನೇಹಿತರು ಅಂತಾನೇ ಇರುತ್ತಿರಲಿಲ್ಲ. ಎಷ್ಟೋ ವಿಷಯಗಳನ್ನು ನಾವು ಅಪ್ಪ- ಅಮ್ಮನಿಗೆ ಹೇಳಲು ಹೆದರಿದರೂ ನಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ ಅಲ್ಲವ? ಅವರು ಎಂದಾದರು ನಮ್ಮ ಚೀಪ್ ಆಗಿ ಕಾಣ್ತಾರ? ಇಲ್ಲ ಅಲ್ವಾ. ಹೋಗ್ಲಿ, ಈಗ ನಮ್ಮಿಬ್ಬರನ್ನೇ ನೋಡು. ನಾನು ಎಂದಾದರೂ ನಿನ್ನ ಚೀಪ್ ಆಗಿ ಕಂಡಿದ್ದೇನ? ಹಾಗೆ".


ಸೊ ನನಗೆ quote ಇಷ್ಟ ಆಗಿಲ್ಲ ಅಂದಳು. ನನಗೆ ಮನಸೊಳಗೆ ಇಷ್ಟು ಒಳ್ಳೆ ಸ್ನೇಹಿತೆ ಸಿಕ್ಕಿದಕ್ಕೆ ಖುಷಿ ಆಯ್ತು.


ಆದರೆ ಈಗೇನಾಯ್ತು ? ನನ್ನೊಡನೆ ಮಾತೇ ಆಡುತ್ತಿಲ್ಲ. ಮಾತಾಡುವುದು ಹೋಗಲಿ, ಮುಖನೂ ನೋಡ್ತಾ ಇಲ್ಲ. ಅಂಥ ತಪ್ಪು ನನ್ನಿಂದ ಏನಾಗಿದೆ? ಬಾಯಿ ಬಿಟ್ಟು ಹೇಳಿದ್ದರೆ ನಾನು ತಿದ್ದಿಕೊಳ್ಳುತ್ತಿದ್ದೆ. ಆದರೆ ಅವಳು ಹೇಳುತ್ತಿಲ್ಲ.ನನಗೆ ನಿದ್ದೆಯೂ ಬರುತ್ತಿಲ್ಲ. ಮನಸ್ಸು ಮತ್ತೆ ಮತ್ತೆ ಕೇಳುತ್ತೆ. ಅವಳ್ಯಾಕೆ ಮಾತಾಡ್ತಾ ಇಲ್ಲ?ಯಾರಾದರೂ ನನ್ನ ಬಗ್ಗೆ ಏನಾದರು ಹೇಳಿ ಬಿಟ್ರ? ಹಾಗೆ ಹೇಳೋಕೆ ನಾನು ಯಾರಿಗೂ ಏನೂ ಹೇಳಿಲ್ಲ. ಹಾಗೆ ಹೇಳುವ ಧೈರ್ಯ ಯಾರಿಗೂ ಬರಲಿಕ್ಕಿಲ್ಲ. ಯಾಕೆಂದರೆ ಅವಳ ಬಗ್ಗೆ ಯಾರಾದರೂ ನನಗೆ ಹೇಳಿದರೆ ಅಥವ ನನ್ನ ಬಗ್ಗೆ ಅವಳಿಗೆ ಯಾರಾದರು ಹೇಳಿದರೆ ಅದು ನಮಗೆ ಬಂದು ತಲುಪುತ್ತೆ ಅಂತ ಎಲ್ಲರಿಗು ಗೊತ್ತು!. ಇರಲಿ. ಇವತ್ತು ಏನಾದರಾಗಲಿ, ಅವಳನ್ನ ಕೇಳಿಯೇ ಬಿಡುತ್ತೇನೆ ಅಂತ ನಿರ್ಧರಿಸಿದೆ.

ಸಂಜೆ ಅವಳು ಒಬ್ಬಳೇ ಕುಳಿತು ಏನೋ ಓದುತ್ತ ಇದ್ದಳು. ನಾನು ಹೋಗಿ ಅರ್ಚು ಅಂದೆ. ಅವಳು ಒಮ್ಮೆ ಮುಖ ಎತ್ತಿ ಮತ್ತೆ ಓದೋದ್ರಲ್ಲಿ ಮುಳುಗಿದಳು . ನನ್ನ ನೆಚ್ಚಿನ ಸ್ನೇಹಿತೆ ಜೊತೆ ಮಾತಾಡಲು ಮೊದಲ ಬಾರಿಗೆ ಹಿಂಜರಿಕೆ ಆಗ್ತಾ ಇದೆ! ನನ್ನ ತಪ್ಪು ಏನೂ ಇಲ್ಲದೆ ಇದ್ದರು. ನೋಡು, ಹೇಗೆ ಮೌನದಲ್ಲೇ ನನ್ನ ಕೊಲ್ತಾ ಇದ್ದಾಳೆ! ಆದರೂ ಧೈರ್ಯ ತಂದುಕೊಂಡು ಕೇಳಿದೆ.

"ನನ್ನ ಜೊತೆ ಯಾಕೆ ಮಾತಾಡ್ತಾ ಇಲ್ಲ?"


"
ಇಲ್ಲ. ಹಾಗೇನೂ ಇಲ್ಲ".

"ಇಲ್ಲ ಹೇಳು. ನನ್ನಿಂದ ಏನಾದರು ತಪ್ಪಾಗಿದೀಯ ? ಹಾಗಾದ್ರೆ ಸಾರಿ. ಸುಮ್ ಸುಮ್ನೆ ಒಳ್ಳೆ ಗೆಳತಿನ ಕಳೆದುಕೊಳ್ಳೋಕೆ ನಾನು ತಯಾರಿಲ್ಲ. ಪ್ಲೀಸ್ ಹೇಳು" ಅಂದೆ.


"
ಅವಳು, ನೀನು ಆಂಟಿ ಹತ್ರ ಏನು ಮಾತಾಡ್ತಾ ಇದ್ದೆ?"


"
ಯಾವಾಗ?"


"
ಅವತ್ತು..ನೀನು ಗಾಂಧಿ ಬಜಾರ್ ಗೆ ಹೋಗಿ ಬಂದ ಮೇಲೆ."


"
ಏನು ? ನನಗೆ ನಿಜವಾಗಲು ನೆನಪಿಲ್ಲ. ನೀನೆ ಹೇಳು"


"
ಅದೇನೋ ನಿಂಗೆ "ಕಂಜೂಸ್" ಮಾಡವ್ರ ಕಂಡ್ರೆ ಆಗಲ್ವಂತೆ?! ಆಂಟಿ ಹತ್ರ ಹೇಳ್ತಾ ಇದ್ಯಲ್ಲ. ನಾವು ದುಡಿಯೋದು ಹೊಟ್ಟೆಗಾಗಿ. ಕೆಲವರು ಅದಕ್ಕೂ ತಿನ್ನದೇ ದುಡ್ಡು ಉಳಿಸ್ತಾರೆ. ಸಾಯೋವಾಗ ಹೊತ್ತುಕೊಂಡು ಹೋಗ್ತಾರ ಅವರೇನು ? ಅದು ಇದು ಅಂತ.!"


"
ಓಹ್! ಅದಾ ಹೌದು ಕಣೆ. ಕೆಲವರು ಹಾಗೆ. ಏನು ಮಾಡಕ್ ಬರುತ್ತೆ? ಅವರವರ ಇಷ್ಟ. ಎಂದೋ ಒಂದು ದಿನ ಶ್ರೀಮಂತರಾಗಲು ಇವತ್ತನ್ನು ಬಡವರಾಗೇ ಕಳಿತಾರೆ!."

"ಸಾಕು ಸಾಕು!..ನನಗ್ಯಲ್ಲ ಗೊತ್ತಾಯ್ತು!."


"
ಏನು? ನೀನು ಏನು ಹೇಳೋಕೆ ಟ್ರೈ ಮಾಡ್ತಾ ಇದ್ದೀಯ?"


"
ನೀನು ಆಂಟಿ ಹತ್ರ ಹೇಳಬೇಕಾದರೆ ನನ್ನನ್ನೇ ಮನಸಿನಲ್ಲಿ ಇಟ್ಟುಕೊಂಡಿದ್ದೆ. ಅದು ನನಗೆ ಗೊತ್ತು."


"
ಅಯ್ಯೋ..ಖಂಡಿತ ಇಲ್ಲ . ನಾನು ಜನರಲ್ ಆಗಿ ಹೇಳಿದ್ದು. ನೀನು "ಕಂಜೂಸ್" ಅಂತ ನನಗೆ ಯಾವಾಗಲೂ ಅನ್ನಿಸಿಲ್ಲ. ನಿಜ ಹೇಳಬೇಕು ಅಂದ್ರೆ ದುಂದು ವೆಚ್ಚ ಮಾಡದೆ ಹೇಗೆ ದುಡ್ಡು ಉಳಿಸಬೇಕು ಅಂತ ನಿನ್ನಿಂದನೆ ಕೆಲಿತಿದ್ದೀನಿ. ನನಗೆ ನಿನ್ನ ಸ್ವಭಾವ ಬಹಳ ಇಷ್ಟ."


"
ಇಲ್ಲ...ನೀನು ನನ್ನನ್ನೇ ಮನಸಿನಲ್ಲಿ ಇಟ್ಟುಕೊಂಡು ಆಂಟಿ ಹತ್ರ ಮಾತಾಡಿದ್ದು. ನನಗೆ ಗೊತ್ತು. ಇದರ ಬಗ್ಗೆ ಇನ್ನು ಚರ್ಚೆ ಬೇಡ".

ಹೇಳಿದವಳೇ ಹೊರಟು ಹೋದಳು.

"ನೋಡು ನಾನು ಅರ್ಥದಲ್ಲಿ ಏನೂ ಹೇಳಿಲ್ಲ. ನೀನು ಹಾಗೆ ಅಂದುಕೊಂಡರೆ ನಾನು ಏನೂ ಮಾಡೋಕೆ ಆಗಲ್ಲ "....ಅಂತ ಕೂಗಿದೆ. ಅವಳಿಗೆ ಕೇಳಿದೆ ಎಂದು ನನಗೆ ಖಾತ್ರಿಯಾಗಿತ್ತು . ಅವಳಿಗೆ ಯಾಕೆ ಹಂಗೆ ಅನ್ನಿಸಿತು? ನಾನಂತೂ ಖಂಡಿತ ಅರ್ಥದಲ್ಲಿ ಮಾತಾಡಿಲ್ಲ. ಅದೂ, ಅವಳು ನನ್ನ ಇಷ್ಟದ ಸ್ನೇಹಿತೆ. ಅವಳಿಗೆ ಮನಸಲ್ಲಿ ತಾನು "ಖಂಜೂಸ್" ಎಂಬ ಭಾವನೆ ಇರಬಹುದು. ಅದಕ್ಕೆ ಹಾಗೆ ಅನ್ನಿಸಿರಬೇಕು. ಇರಲಿ. ಸ್ವಲ್ಪ ದಿನದಲ್ಲೇ ಸರಿ ಹೋಗ್ತಾಳೆ ಅಂದುಕೊಂಡೆ.


ಮನಸ್ಸು" ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿದರಂತೆ" ಗಾದೆ ಮಾಡಿದವರು ಯಾರು?!! ಕೇಳುತ್ತಿತ್ತು.