ಮಂಗಳವಾರ, ಅಕ್ಟೋಬರ್ 12, 2010

ಅವರವರ ಭಾವಕ್ಕೆ!

ಅವರು ನನ್ನ ಯಾವಾಗಲೂ ಕರೆಯುತ್ತಿದ್ದರು.ಆದರೆ ನಾನು ಎಂದೂ ಅವರ ಕರೆಗೆ 'ಓ' ಗೊಟ್ಟು ಅವರೊಡನೆ ಹೋಗಿರಲಿಲ್ಲ. ಆದರೆ ಮೊನ್ನೆ ಅದೇನಾಯ್ತೋ ನನಗೇ ಗೊತ್ತಿಲ್ಲ. ಯಾವಾಗ ನೋಡಿದರೂ PG ಯಲ್ಲೇ ಇರುತ್ತಿಯಲ್ಲ. ನಿನಗೆ ಬೇಸರ ಆಗಲ್ವಾ? ಇವತ್ತಾದರೂ ನಡಿ ನಮ್ಮ ಜೊತೆ ಬಾ, ಎಂದು ಹೇಳಿದಾಗ ತಕ್ಷಣಕ್ಕೆ ನಾನು ಒಪ್ಪದಿದ್ದರೂ ,ಅವರು ಕಣ್ ಮರೆಯಾದ ಮೇಲೆ ಅವರ ಮಾತೇ ಕಿವಿಗಳಿಗೆ ಗುನುಗುತಿತ್ತಲ್ಲ! ಹೌದು ಎಷ್ಟೋ ಸಾರಿ ಅನ್ನಿಸಿದ್ದಿದೆ. ಎಲ್ಲರೂ ತಮ್ಮ ತಮ್ಮ ಜೀವನವನ್ನು ಹೇಗೆ ಬೇಕೋ ಹಾಗೆ ಎಂಜಾಯ್ ಮಾಡುತ್ತಿರುವಾಗ, ನಾನು ಯಾಕೆ ಒಂದಷ್ಟು ನಿಯಮಗಳು,ಆದರ್ಶಗಳನ್ನು ಇಟ್ಟುಕೊಂಡು ನನ್ನ ಯವ್ವನವನ್ನೆಲ್ಲ ಇಂಥ ಒಣ principles ಇಟ್ಟುಕೊಂಡು ಸವೆಸುತ್ತಿದ್ದೇನೆ? ನನ್ನ ದೊಡ್ಡಮ್ಮನ ಮಗಳಿಗೆ ಹೆಚ್ಚೂ ಕಡಿಮೆ ನನ್ನ ವಯಸ್ಸೇ. ಆದರೆ ಅವಳಿಗೆ ಈಗಾಗಲೇ ಮೂರು ವರುಷದ ಮಗನಿದ್ದಾನೆ!ನಿಮ್ಮ ತಪ್ಪೇನಿದೆ ಬಿಡಿ,ಅವಳು ಸರಿಯಾಗಿ ಓದಲಿಲ್ಲ.ಮನೆಯಲ್ಲಿ ಇಟ್ಟುಕೊಂಡರೂ ಎಷ್ಟು ದಿನ ಇಟ್ಟುಕೊಂಡಾರು?ಅವಳ ಮದುವೆ ಆಗುವಾಗ ನಾನು ಇನ್ನೂ ಬಿ.ಎಸ್ಸಿ ಮೊದಲನೇ ವರುಷ.ಅಕ್ಕನ ಮದುವೆಯಲ್ಲಿ ನಾನೂ ಅತ್ತೆಯ ಹತ್ತಿರ ಹಠ ಮಾಡಿ ಒಂದು ಸೀರೆ ಇಸಿದುಕೊಂಡು ಮದುವೆ ಮನೆಯಲ್ಲಿ ತಿರುಗಿದ್ದೆ.ಎಲ್ಲರ ಗಮನ ಸೆಳೆದಿದ್ದು ಖುಷಿ ಕೊಟ್ಟಿತ್ತು.ಆದರೆ ಅದು ನನ್ನ ಜಾತಕ ಕೇಳುವ ಹಂತಕ್ಕೆ ಬರುತ್ತದೆ ಎಂದು ಕಡೆಗೇ ತಿಳಿದಿದ್ದು.ಅವರು ಜಾತಕ ಕೇಳುತಿದ್ದರೆ ಕೊಡಲೇ ಎಂದಾಗ ನಾನೂ ಮಾತ್ರ ನಾನಿನ್ನೂ ಓದಬೇಕು.ಈಗಲೇ ಮದುವೆ ಬೇಡ ಅಂದಿದಕ್ಕೆ ತಾನೇ ನೀವೂ ಸುಮ್ಮನಾಗಿದ್ದು. ಅದಾದ ಮೇಲೆ ಓದು ಮುಗಿಯಿತು ,ಕೆಲಸ ಸಿಕ್ಕಿತು. ನಡು ನಡುವೆ ಹುಡುಗರು ಕಂಡಾಗ ಸಣ್ಣ ಸಣ್ಣ crush ಆಗುತ್ತಿದ್ದರೂ ಕೂಡ.ಅದು ನಿಮಗೆ ತಲೆ ನೋವು ಆಗುವಂತೆ ಎಂದೂ ನಡೆದುಕೊಂಡಿಲ್ಲ.ರಸ್ತೆಯಲ್ಲಿ ನೀವೂ ನಡೆದುಕೊಂಡು ಬರುತಿದ್ದಾಗ,ನನ್ನ ಲೆಕ್ಟುರೆರ್ ಕಂಡರೆ,ಒಹ್ ನಿಮ್ಮ ಮಗಳ?ತುಂಬಾ ಒಳ್ಳೆಯ ಹುಡುಗಿ ಅಂತಾನೇ ಹೇಳಿಸಿಕೊಂಡಿದೀನಿ ಅಲ್ವಾ?

ಮನೆಯಲ್ಲಿ ನೆಲ ಒರೆಸುವಾಗ, ಗೋಡೆಯ ಮೂಲೆಯನ್ನು ಸರಿಯಾಗಿ ಒರೆಸದೆ ಸ್ವಲ್ಪ ಧೂಳು ಇದ್ದುದರಿಂದ ನಿನ್ನ ಹತ್ತಿರ ಬೈಸಿಕೊಂಡಿದ್ದೇನೆ ಅಲ್ವಾ?ಶಾಲೆಯಲ್ಲಿ ಎಲ್ಲ ಹುಡುಗರೂ fail ಆದರೂ ಸಂತೋಷದಿಂದ ಇರುತಿದ್ದಾಗ, ನನಗೇ ಕಡಿಮೆ ಅಂಖ ಬಂದಿದೆ ಅಂತಾನೇ ಬೇಸರದಿಂದ ಇರುತಿದ್ದೆ ಅಲ್ವಾ?ಎಷ್ಟೋ ಸಾರಿ ಸ್ನೇಹಿತೆಯರು birthday ಪಾರ್ಟಿ ,ಅದು ಇದು ಅಂತ ಕರೆಯಲು ಬಂದಾಗ,ನಿಮ್ಮ ಮುಂದೆಯೇ ನಿರಾಕರಿಸಿದ್ದೆನಲ್ಲ. ನಾನಾಯ್ತು ,ನನ್ನ ಪಾಡಾಯ್ತು ಅಂತ ಇರುತಿದ್ದೆನಲ್ಲ.ಇಂಥ ಮಕ್ಕಳು ಇನ್ನೂ ಎಷ್ಟಿದ್ದರೂ ಏನೂ ತೊಂದರೆನೇ ಇಲ್ಲ ಅಂತ ನೀವೂ ಉದ್ಗಾರ ಎತ್ತಿದ್ದಿರಲ್ಲ.ನೀನು ದಿನಾನು ದೇವಸ್ಥಾನಕ್ಕೆ ಹೋಗು, ದೇವ್ರೇ ಅಲ್ದಾ ಎಲ್ಲ ಅಂತ ಹೇಳುತಿದ್ದಾಗ, ಒಮ್ಮೊಮ್ಮೆ ಯಾಕೆ ಈ ತರ ದೇವ್ರು ಅಂತಾರೆ ,ನಾನು ಪರೀಕ್ಷೆಗೆ ಓದದಿದ್ದರೆ ,ದೇವರು ಬರೆದುಕೊಡುತ್ತಾನೆಯೇ?ಅಂತ ಮನಸಲ್ಲಿ ಅನ್ನಿಸಿದರು,ನಿಮ್ಮ ಇಷ್ಟಕ್ಕೆ ವಿರೋಧ ಮಾಡಬಾರದು ಅಂತ ಸುಮ್ಮನೆ ಹೋಗಿಲ್ಲವ?

ಇದೆಲ್ಲ ಒಂದು ಕಡೆಯಾದರೆ,ಕೆಲಸ ಸಿಕ್ಕಿ ಈ ಕಡೆಗೆ ಬಂದಾಗ ಇನ್ನೊಂದು ದ್ವಂದ್ವ.ಇಲ್ಲಿ ವಾರಕ್ಕೆ ಒಂದು ಸಾರಿ disco night ಆಗುತ್ತದೆ.ಎಲ್ಲರೂ ದೊಡ್ಡ ಸಂಗೀತಕ್ಕೆ ಹುಚ್ಚರಂತೆ,ಹುಡುಗ ಹುಡುಗಿಯರು ಎದಿರು ಬದಿರು ನಿಂತು ಕುಣಿಯುತ್ತಾರೆ.ದಣಿಯುತ್ತಾರೆ. ನಾನು ಒಂದು ಸಾರಿ ಇದನ್ನು ನೋಡಿ ಥೂ! ಎಂದು ಹಾಗೆ ಹೊರಟುಹೋಗಿದ್ದೆ.ಇದೆಲ್ಲ ನಮ್ಮ ಸಂಸ್ಕೃತಿ ಅಲ್ಲ ಎನ್ನುವ ಧೋರಣೆ ಮನದಲ್ಲೊಂದು ಕಡೆ. ಆ ದಿನ ನಾನು ಹಣೆಗೆ ಹಚ್ಚಿಲ್ಲದಿದ್ದಾಗ,ಗೆಳತಿ ನೀನು ಹಣೆಗೆ ಹಚ್ಚಿಕೋ.ಇಲ್ಲಾಂದರೆ ಚೆನ್ನಾಗಿ ಕಾಣೋಲ್ಲ ಎಂದಾಗ, ನಾನೇ ನನ್ನಷ್ಟಕ್ಕೆ, ಎಲ್ಲೋಯ್ತು ನನ್ನ ಸಂಸ್ಕ್ರತಿ ಆದರ್ಶಗಳು? ಎಂದು ಕೇಳಿಕೊಂಡಿದ್ದೆ.ಒಮ್ಮೊಮ್ಮೆ ನನಗೂ ಅನ್ನಿಸಿದ್ದಿದೆ.ಕೆಲವು ಹುಡುಗಿಯರ ಹಾಗೆ low waist jeans ಹಾಕಿಕೊಂಡು ,ಅರ್ಧ ಮುಚ್ಚಿದ ಸೊಂಟವನ್ನು ತೋರಿಸಿಕೊಂಡು,ಯಾರದೋ ಬೈಕಿನಲ್ಲಿ ಅಪ್ಪಿಕೊಂಡು ಕುಳಿತು ಹೋಗಬೇಕು ಅಂತೆಲ್ಲ.ಆದರೆ ನನಗೇ ಅಂಥ ದೈರ್ಯ ಆಗಲಿ,ನಾಚಿಕೆ ಬಿಟ್ಟು ಹೋಗುವುದಾಗಲೀ ಗೊತ್ತಿಲ್ಲ ಅನ್ನುವುದು ನಿಮಗೇ ಗೊತ್ತು. ಏನಿದ್ದರೂ ನನ್ನದು ಬಾಯಲ್ಲಿ ಬಣಕಾರ!ನಿಮಗಿಷ್ಟ ಅಂತ ಕಾಲೇಜಿಗೆ ಹೋಗುವ ದಿನಗಳಲ್ಲಿ ಉದ್ದ ಜಡೆ ಬಿಟ್ಟುಕೊಂಡರೂ ಆಮೇಲೆ ಅದನ್ನು ಕತ್ತರಿಸಿದ್ದು! ಇಲ್ಲಿ ತುಂಬಾ ಜನ ಇಲ್ಲಿನ ರಂಗು ರಂಗಿನ ಬದುಕಿಗೆ ಮರುಳಾಗುತ್ತಾರೆ. ಆದರೆ ನನಗೇ ಯಾಕೆ ಇಂತವೆಲ್ಲ ಇಷ್ಟವೇ ಆಗುವುದಿಲ್ಲ??ಆವತ್ತು ನಾರಾಯಣ ಕೆಲಸದ training ನಿಮಿತ್ತ ಬೆಂಗಳೂರಿಗೆ ಬಂದಾಗ,ಎಂದೋ ಕಾಲೇಜಿನಲ್ಲಿದ್ದಾಗ ಹೇಳಿದ ಮಾತು, ನಿನಗೆ job ಸಿಕ್ಕಾಗ ನನಗೇ ಒಂದು teddy bear ಕೊಡಿಸಬೇಕು ಅಂತ ಹೇಳಿದ್ದ ನಾನು, ಮರೆತಿದ್ದೆ.ಆದರೆ ಅವನ memory power ಗೆ ಕೊಡಬೇಕು. ಬರುತ್ತಿದ್ದಾಗ teddy bear ಜೊತೆಯಲ್ಲೇ ಬಂದಿದ್ದನಲ್ಲ.ಅವರೆಲ್ಲರ ಜೊತೆಗೂಡಿ ಗರುಡ ಮಾಲ್ ಗೆ ಹೋಗೋದೇನೋ ಹೋದೆ,ಆದರೆ ಮೊದಲ floor ನಲ್ಲೆ ನಾನು ಇನ್ನೂ ಮೇಲೆ ಬರಲ್ಲ. ನೀವು ಹೋಗಿ ಬನ್ನಿ.ನಾನು ಇಲ್ಲೇ ಇರುತ್ತೇನೆ ಎಂದರೂ ಬಿಡದೆ, ಗೊತ್ತೇ ನಿನಗೆ escalator ಅಂದರೆ ಭಯ.ನಾವು ಕೈ ಹಿಡಿದುಕೊಳ್ಳುತ್ತೇವೆ ಬಾ ಎಂದರೂ , ಎರಡನೇ ಮಹಡಿ ಹತ್ತಿ ಹಠ ಹಿಡಿದು ಬಿಟ್ಟೆ.ನಾನು ಬರೋಲ್ಲ ಎಂದು.ಪಾಪ ! ಅವರು ಹೋಗಿ ಬಂದರು. ಇಲ್ಲಿ ಇದ್ದಿದ್ದು ಸಾಕು ಯಾವುದಾದರು ಪಾರ್ಕಿಗೆ ಹೋಗಣ ,ಮಾತಾಡೋಣ, ಅಂತ ಕೋಪಿಸಿಕೊಂಡ ಮೇಲೆ ಅಲ್ಲಿಂದ ಕದಲಿದ್ದು ಅವರೆಲ್ಲ.

ಹೊಸತಾಗಿ PG ಗೆ ಬಂದ ಹುಡುಗಿಗೆ ಇಡೀ ಬೆಂಗಳೂರನ್ನು ನೋಡೋ ಉಮೇದಿ. ಜೊತೆಗಾರ್ತಿ ನಾನಾಗುತ್ತಿನೇನೋ ಅನ್ನುವ ಹಂಬಲ. ನೀನು ಮೂರು ವರುಷ ಆಯ್ತು ,ಇನ್ನೂ ಬೆಂಗಳೂರನ್ನು ನೋಡಿಲ್ವಾ?ಕೇಳಿದರೆ PG ಹತ್ತಿರ ಇರುವ ಪಾರ್ಕಿಗೆ ಕರೆದೊಯ್ಯುತ್ತಿಯ.ಜೊತೆಗೆ ಆ ಜೋಳ ಬೇರೆ ತಿನ್ನಲೇ ಬೇಕು ಅಂತ ಹಠ ಅಂತ ಹುಸಿ ಮುನಿಸ್ಕೊತಾಳೆ.ಏನು ಮಾಡಲೇ ಗೆಳತೀ? ,ನಾನು ಇರುವುದೇ ಹೀಗೆ ಅಂತ ನನ್ನ ಸಮರ್ಥನೆ.ಅಷ್ಟರಲ್ಲೇ ಜೊತೆಗಾರರನ್ನು ಹುಡುಕಿಕೊಂಡಿರುತ್ತಾಳೆ.ಬೇಕಾದ್ದು ಸಿಗದಿದ್ದರೂ ಅದೇ ಬೇಕು ಎಂದು ಕಾಯುವ ನಿನ್ನಂಥ ಫೂಲ್ ನಾನಲ್ಲ ಎಂದು ತೋರಿಸಿಕೊಡುತ್ತಾಳೆ.ತೀರ ಬೇಸರ ಬಂದಾಗ ಒಬ್ಬಳೇ ದೇವಸ್ಥಾನಕ್ಕೆ ಹೋಗುವೆ. ಹೇಯ್ ! ನೀನು beer ಟೇಸ್ಟ್ ಮಾಡಿಲ್ವಾ ಇನ್ನೂ? ನಿಮ್ಮ ಆಫೀಸ್ನಲ್ಲಿ ಪಾರ್ಟಿ ನಡೆದಾಗ ನೀನು ಕುಡಿಯಲ್ವಾ?ಅಂದ್ರೆ ನಾನೇನು ಹೇಳಲಿ?ಪಾರ್ಟಿಗಳಿಗೆ ನಾನು ಹೋದರೆ ತಾನೇ!ಯಾರೋ ಹತ್ತು ವರುಷಗಳಿಂದ ಪ್ರೀತಿಸಿದ್ದರಂತೆ.ಮನೆಯವರಿಗೂ ತಿಳಿಯದಂತೆ.ಈಗ ಮನೆಯವರೂ ಒಪ್ಪಿ ಅವರ ಮದುವೆಯಂತೆ.ಇನ್ಯಾರೋ, ಈ ಮದುವೆಗಳಲ್ಲಿ ನಂಬಿಕೆ ಇಲ್ಲದಿರುವರಂತೆ.ಸಂಸಾರ ,ಜವಾಬ್ದಾರಿ ಬೇಡದೆ,living together relationship ಒಳ್ಳೇದು ಅಂತ ಸಮರ್ಥಿಸಿಕೊಳ್ಳುವವರು . ಇಂಥವರೆಲ್ಲ ಮಧ್ಯೆ ನಾನು... ಹುಚ್ಚು ,ಹುಚ್ಚು ಯೋಚನೆಗಳೊಡನೆ,ಭಾವನೆಗಳೊಡನೆ!

ಆದರೆ ಮೊನ್ನೆ ಯಾಕೋ ತಲೆ ಕೆಟ್ಟಿತು. ಈ ಆದರ್ಶಗಳು ಎಲ್ಲ ಜೀವನಕ್ಕೆ ಯಾಕೆ ಬೇಕು? ಜೀವನ ಹೀಗೆ ಅಂತ ಕಡಿವಾಣ ಯಾಕೆ ಹಾಕಿಕೊಳ್ಳಬೇಕು? ನಾನು ಎಲ್ಲರ ಹಾಗೆ ಎಂಜಾಯ್ ಯಾಕೆ ಮಾಡಬಾರದು ಅನ್ನ್ನಿಸಿದ್ದು ಸುಳ್ಳಲ್ಲ. ಈ ಆದರ್ಶಗಳನ್ನೆಲ್ಲ ಒಂದು ಭದ್ರವಾದ ಡಬ್ಬಿಯಲ್ಲಿ ತುಂಬಿಟ್ಟು ಅದನ್ನು ಹೂತು ಬಿಡೋಣ .ಅಪ್ಪಿ-ತಪ್ಪಿ ಕೂಡ ಅದು ಹೊರ ಬರದಂತೆ ಅನ್ನಿಸಿದ್ದು ಸುಳ್ಳಲ್ಲ. ಯಾವುದೋ ಹಳೆಯ ಗೆಳೆಯನ ನೆನಪಾಯಿತು. ಸಿಗುತ್ತೀಯ ಎಂದು ಕೇಳಿ, ಗಾಂಧಿ ಬಜಾರ್ನಲ್ಲಿ ಸಿಗುವ ಎಂದು ನಿರ್ಧರಿಸಿ, ಚಂದ ತಯಾರಾಗಿ , ಇದ್ದಿದ್ದರಲ್ಲೇ ಒಂದು ಚಂದದ ಸಲ್ವಾರ್ ಸಿಕ್ಕಿಸಿಕೊಂಡು ಹೊರಟೆ., ಬಸ್ಸು ಹತ್ತಿ ,ಅಲ್ಲಿ ಇಳಿದ ಮೇಲೆ ಅನ್ನಿಸಿತು! ಬೇಡ.ಇಷ್ಟು ದಿನಗಳು ಹೀಗೆ ಬದುಕಿದ್ದು ಸಂತೋಷವೇ ಕೊಟ್ಟಿದೆ.ಯಾರ ಮನಸ್ಸಿಗೂ ನೋವು ತಂದಿಲ್ಲ.ಇವಳು ಯಾಕಾದರೂ ಇದಾಳೋ ಅಂತ ಒಬ್ಬರ ಹತ್ತಿರವೂ ಅನ್ನಿಸಿಕೊಂಡಿಲ್ಲ. ನಿಮ್ಮ ಮನಸ್ಸಿಗೆ ಎಂದೂ ನೋವು ಮಾಡಿಲ್ಲ.ಇದೆಲ್ಲ ಯಾಕೆ ಬೇಕು ಅನ್ನ್ನಿಸಿ,ಅದೇ ಬಸ್ ಸ್ಟಾಪ್ನಲ್ಲಿ ನಿಂತುಕೊಂಡೇ, ಗೆಳೆಯನಿಗೆ ,ತಲೆ ನೋವು ನನಗೆ ಬರಲಾಗುವುದಿಲ್ಲ ಎಂದು ಸಂದೇಶ ಕಳಿಸಿ ಮತ್ತೆ ಮನೆಗೆ ಮರಳಿದ್ದೆ. ಇಷ್ಟು ವರುಷಗಳಲ್ಲಿ ನಾನು ಸಂಪಾದಿಸಿದ್ದು ನಿಮ್ಮ ಪ್ರೀತಿ ನಂಬಿಕೆ ಅಲ್ಲದೆ ಇನ್ನೇನು ಅಲ್ಲ.ಅದಕ್ಕಿಂತ ಹೆಚ್ಚು ನನಗೇನು ಬೇಕೂ ಆಗಿಲ್ಲ.ಮನಸಿಗೆ ಏನೋ ಅನ್ನಿಸಿ ಹೊರಟರೂ,ಮತ್ತೆ ಅದೇನೋ ಶಕ್ತಿ ನನ್ನ ಕಾಲನ್ನು ಹಿಂದಕ್ಕೆ ಎಳೆಯುತ್ತಲೇ ಇತ್ತು.ಭದ್ರವಾಗಿ ಹೂತಿಟ್ಟ ಆದರ್ಶಗಳ ಪೆಟ್ಟಿಗೆ ನನ್ನ ಕರೆಯುತ್ತಲೇ ಇತ್ತು,ಡಬ್ಬಿಯಲ್ಲಿ ಕೂಡಿಟ್ಟ ಆದರ್ಶಗಳು ನಮ್ಮನ್ನ ಮುಕ್ತ ಗೊಳಿಸು.ನಾವೂ ನಿನ್ನೊಂದಿಗೇ ಇರುತ್ತೇವೆ ಎಂದು ಕೂಗಿದಂತಾಯ್ತು.ಅದು ನಿನ್ನ ಪಾಲಿನ ಜೀವನ ಅಲ್ಲ ಎಂದು ಹೇಳುತ್ತಲೇ ಇತ್ತು .ನಿಮ್ಮ ಮೇಲಿನ ಪ್ರೀತಿ ಜಾಸ್ತಿ ಆಗುತ್ತಲೇ ಇದೆ.ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ....