ಮಂಗಳವಾರ, ಆಗಸ್ಟ್ 31, 2010

ನೆನಪಿನ ಬುತ್ತಿಯಿಂದ ಒಂದು ತುತ್ತು...


ಇವತ್ತು ಬೆಳಗ್ಗೆ- ಬೆಳಗ್ಗೆ ಏಳುತ್ತಲೇ ಇರುವಾಗ ಅತ್ತೆ ನನ್ನ ಬಳಿ ಬಂದು -" ದಿವ್ಯಾ ಬೇಗ ಬೇಗ ಮಿಂದಕ ಬಾ. ದೋಸೆಗೆ ಕುಂಬಳಕಾಯಿ ಪಾಯಸ ಮಾಡಿದ್ದಿ ತಿನ್ನಲಕ್ಕು "- ಅಂತ ಹೇಳಿದಾಗಲೇ ನನಗನ್ನಿಸಿತ್ತು. ಅಬ್ಬ !! ಇವತ್ತಿನ್ ದಿನ ಹಿಂಗೆ ಸಿಹಿ-ಸಿಹಿಯಾಗಿ ಕಳಿಲಿ ಅಂತ!!. ಹಾಗೆ ಸ್ನಾನಕ್ಕೆ ನೀರು ತಗೊಂಡು ಹೋಗುತ್ತಿರುವಾಗಲೇ ಮನಸಿಗೆ ಹೊಳೆದಿದ್ದು.. ಅರೆ!! ಈ ನನ್ನ PG ಗೆ ಬಂದು ಇವತ್ತಿಗಾಗಲೇ ಮೂರು ವರುಷಗಳು. hurray !! happy third year of PG living ಅಂತ ನನಗೆ ನಾನೇ ಒಂದು ಸಾರಿ ಹೇಳಿಕೊಂಡೆ. ಅತ್ತೆ ಸರಿಯಾದ ದಿನಕ್ಕೆ ಸಿಹಿ ಮಾಡಿದ್ದಾಳೆ. ಎಂಥ ಕಾಕತಾಳಿಯ!!

ಮುಂದೇನು ಅಂತ ಸ್ವಲ್ಪನೂ ಚಿಂತೆ ಮಾಡದಿದ್ದ ನನಗೆ ಅದೃಷ್ಟವೋ , ನನ್ನ ಅಮ್ಮ-ಅಪ್ಪ ಮಾಡಿದ ಪುಣ್ಯದ ಪಲವೋ ಏನೋ ಗೊತ್ತಿಲ್ಲ. ಕಾಲೇಜ್ ಮುಗಿಯುತ್ತಿದ್ದ ಹಾಗೆ ಕರೆದು ಕೆಲಸ ಕೊಟ್ಟಂಗೆ ಕೆಲಸ ಸಿಕ್ಕಿಬಿಟ್ಟಿತು. ಆಮೇಲೆ ಅಪ್ಪ ಮೈಸೂರ್ ನಲ್ಲಿ ನನ್ನ trainingಗೆ ಬಿಟ್ಟು, ಅಲ್ಲಿ ಇರುವ ಸೆಕ್ಯೂರಿಟಿ ಅವರ ಹತ್ತಿರ ನನ್ನ ಮಗಳು,ನಾವು ಯಾವತ್ತೂ ಹೀಗೆ ಹೊರಗೆ ಬಿಟ್ಟಿರಲಿಲ್ಲ. ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದ ಅಪ್ಪನ ಕಾಳಜಿಗೆ ನಾನು ಮೂಕ ವಿಸ್ಮಿತನಾಗಿದ್ದೆ . ಇನ್ನೇನು ಹೊರಡುವ ಹೊತ್ತಿಗಾಗಲೇ ಅಳುವ ಅಪ್ಪನನ್ನು ಸಮಾಧಾನಿಸಿ , ಟಾಟ ಎಂದು ಬೀಳ್ಕೊಟ್ಟಗಲೇ, ನನಗೆ ಮದುವೆ ಮಾಡಿ ಕಳಿಸಿ ಕೊಟ್ಟ ಅನುಭವನೇ ಆಗಿತ್ತಲ್ಲ!! ಎಷ್ಟಾದರೂ ಮೊದಲ ಸಾರಿ ಮನೆ ಬಿಟ್ಟಿದ್ದು. ಅಪ್ಪ, ಅಮ್ಮ ,ತಂಗಿ! ಇನ್ಯಾರು ನನ್ನ ಜೊತೇಲಿ ಇರೋಲ್ಲ. ಬದುಕನ್ನು ನೀನೇ ಸ್ವಂತವಾಗಿ ನಿಭಾಯಿಸಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸವಾಲುಗಳನ್ನು ಎದುರಿಸಬೇಕು. ಎಲ್ಲಕ್ಕಿಂತ ಮುಕ್ಯವಾಗಿ ಕೆಟ್ಟತನದಿಂದ ಆದಷ್ಟು ದೂರವಿದ್ದು, "ಒಳ್ಳೆ ಹೆಸರು" ಇಟ್ಟುಕೊಳ್ಳಬೇಕು. ಇದು ಎಲ್ಲಕ್ಕಿಂತ ದೊಡ್ಡ ಕಷ್ಟದ ವಿಷಯ. ಅಮ್ಮ ಅಂತೂ ಪದೇ ಪದೇ , ತಂಗಿ ದುಡ್ಡು ಕರ್ಚು ಆಗ್ತು ಹೇಳಿ ನೋಡದ. ನಿಂಗೆ ಎಂತ ಬೇಕೋ ಅದ್ನ ತಗಂಡ್ ತಿನ್ನು. ಹಾಳು ಮೂಳು ತಿನ್ನಡ . ಗೋಲ್ ಗಪ್ಪ ತಿನ್ನಡ. ಹಣ್ಣು ತಿನ್ನು ಆದಷ್ಟು ಅಂತ ಹೇಳಿದ್ದು, ನನ್ನ ತಂಗಿ- ಅಕ್ಕ ನಂಗೆ ನೀ ಇಲ್ದೆ ಇದ್ರೆ ಸಕತ್ ಬೋರ್ ಹೊಡಿತು, ಎಂತ ಮಾಡಕೆನ ಅಂತ ಅಸಹಾಯಕಳಾಗಿ ಕಣ್ಣಲ್ಲಿ ನೀರು ಬರಿಸಿಕೊಂಡಿದ್ದು, ಎಲ್ಲವೂ ನೆನಪಾಯಿತು. ಹೊರಡುವ ಹೊತ್ತಿಗಾಗಲೇ ಅವರೆಲ್ಲ ಫೋಟೋಗಳನ್ನು ಎತ್ತಿಕೊಂಡು, ಬಂದಿದ್ದೆ. ಅದೀಗ ನನ್ನ ರೂಮಿನ ಗೋಡೆಯ ಮೇಲೆ ಸುಶೋಭಿತ.

ಆಮೇಲೆ ಶುರುವಾಗಿದ್ದು ಮಣ್ಣು ಹೊರುವುದು.training ಮುಗಿಸಿ ಬೆಂಗಳೂರಿಗೆ ಬಂದ ಮೇಲೆ PG ಗಾಗಿ ಹುಡುಕಾಟ. ಜೊತೇಲಿ ಇದ್ದಿದ್ದು ಒಂದೇ ಊರಿನವರಾದ ,ಇಬ್ಬರು ಸ್ನೇಹಿತೆಯರು. ಕೈಯಲ್ಲಿ ಸರಿಯಾಗಿ 5000 ರೂಪಾಯಿ ಹಣ.ಅಂತೂ ಇಂತೂ PG ಸಿಕ್ಕಿ , ಸದ್ಯಕ್ಕೆ ಇದ್ದು ಬಿಡೋಣ. ಆಮೇಲೆ ಸರಿಯಾಗಲಿಲ್ಲ ಎಂದರೆ ಮತ್ತೆ ಹುಡುಕೋಣ ಎಂದು ತೀರ್ಮಾನಿಸಿ ಉಳಿದುಕೊಂಡು ಬಿಟ್ಟೆವಲ್ಲ. ಅಲ್ಲಿನ ಅಡಿಗೆ ಊಟ ಜೀವನ ಪೂರ್ತಿ ಮರೆಯಲಾಗದ ದಿನಗಳು.ಸಾಂಬಾರು ,ಚಟ್ನಿ,ಪಲ್ಯ ಎಲ್ಲದಕ್ಕೂ ಒಂದೇ ರುಚಿ. ಮೆಣಸಿನ ಕಾಯಿಯ ತರಹವೇ. ನಾನಂತೂ ಊಟಕ್ಕಿಂತ ಹೆಚ್ಚು ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡ ದಿನಗಳೇ !! ಅಂಥ ಖಾರ .ನನಗಂತೂ ಆ PG ಬಿಟ್ಟು ಓಡಿ ಹೋಗುವ ಕೋಪ. ಅದೇ ಸಮಯಕ್ಕೆ ದೇವರ ಹಾಗೆ ಸಿಕ್ಕ ನೆಂಟರೊಬ್ಬರು ನಾನೀಗೆ ಇರುವ PG ಯ ವಿಳಾಸ ತಿಳಿಸಿ, ಅಲ್ಲಿಗೆ ಹೋಗಿ ನೋಡು ಎಂದರು. ನಾನಂತೂ ಹೇಗಾದರೂ ಇರಲಿ. ನಮ್ಮ ಜಾತಿಯದೆ ಅಂತ ಗೊತ್ತಾದ ಮೇಲೆ ಹೇಗಿದ್ದರೂ adjust ಮಾಡಿಕೊಳ್ಳೋಣ ಅಂತ ಹೊರಟೇ ಬಿಟ್ಟೆ. ಸ್ನೇಹಿತೆಯರು ಯಾರೂ ಬರಲು ಒಪ್ಪಲಿಲ್ಲ. ಬೊಮ್ಮನಹಳ್ಳಿಯಿಂದ ಬನಶಂಕರಿ ಒರೆಗೆ ಹೊರಟು ಬಂದೆ ಆಟೋದಲ್ಲಿ. ಮೊದಲಿದ್ದ PG ಯಿಂದ ಆಫೀಸು ಕೇವಲ 10 ನಿಮಿಷದ ದಾರಿ,ಈಗ ಒಂದು ವರೆ ಘಂಟೆಯ ದಾರಿ . ಆದರೂ ಸೈ ಎಂದಿದ್ದೆ. ಡೈರಿಯಲ್ಲಿ ಬರೆದ ತಾರೀಕು ತೆಗೆದು ನೋಡಿದೆ. ಆಗಸ್ಟ್ 31 , ಭಾನುವಾರ, 2007 ,ಬೆಳಗ್ಗೆ 11 .30

ನನಗೆ ಕೊಟ್ಟ ಜಾಗ ಒಂದು bunker , ಹಾಗೇ ಗೋದ್ರೆಜ್ ನಲ್ಲಿ ಸರಿಯಾಗಿ ಅರ್ಧ ಪಾಲು. ನನಗಂತೂ ಅಳುವೇ ಬಂದ ಹಾಗಾಗಿತ್ತು.ಮೊದಲೇ ನನಗೆ ಬಟ್ಟೆ crazu !! ಎಲ್ಲಿ ಇಡ್ಲಿ ನನ್ನ ಬಟ್ಟೆಗಳನ್ನು?ನಾನು ತಂದ ಬಟ್ಟೆಗೆ ಜಾಗ ಸಾಲೊಲ್ಲ. ಇನ್ನು ಮುಂದೆ ನಾನು ತೆಗೆದುಕೊಳ್ಳೋ ಬಟ್ಟೆಗೆ ಜಾಗ ಎಲ್ಲಿ ಅಂತ ಒಂದು ಸಾರಿ ಚಿಂತೆ ಆದರೂ,ಅಮ್ಮ adjust ಮಾಡ್ಕಳಕಪ. ಹಂಗೆಲ್ಲ ಬೇಜಾರ್ ಮಾಡ್ಕಳ್ಳಾಗ ಅಂದಿದ್ದಕೆ ಸಮಾಧಾನಗೊಂಡಿದ್ದು. ಹಾಗೇ ಇನ್ನೊಂದು ಸಲ, ಗೆಳತಿ ನನ್ನ ರೂಮಿಂದ ನನ್ನ ಪುಸ್ತಕ ನನ್ನ ಕೇಳದೆ ತೆಗೆದುಕೊಂಡು ಹೋಗಿ,ಅದನ್ನು ತಾರಸಿಯ ಮೇಲೆ ಬಿಟ್ಟು ಮಳೆಗೆ ಪುಸ್ತಕ ಎಲ್ಲ ಹಾಳಾಗಿ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದು. ಅವಾಗ ಅತ್ತೇನೆ ಹೇಳಿದ್ದು. ಇದೆಲ್ಲ ಎಂತು ಅಲ್ಲ,ನೀ ಇದಕ್ಕೆ ಅತ್ತರೆ ಮುಂದೆ ಎಂತ ಎಂತ ಕಾಣಕ ಅಂದಿದ್ದು !... ನನ್ನ ಏಕಾಂತ,ನನ್ನ ಸಿಟ್ಟು,ನನ್ನ ದುಃಖ, ನನ್ನ ಸಂತೋಷ, ನನ್ನ ನೋವು ಎಲ್ಲವನ್ನು ಸಮಾಧಾನವಾಗಿ ಕೇಳಿಸಿಕೊಳ್ಳೋ ಗಂಡನ ಹಾಗೇ ನನ್ನ teddy bear. ಅಲ್ಲೇ ಮಂಚಕ್ಕೆ ಒರಗಿ ಕೂತು ಯಾವಾಗಲು ನನ್ನೇ ನೋಡುವುದು!! ಎಷ್ಟೆಲ್ಲಾ ಇದೆ ಗಮನಿಸಿದರೆ.

ಅಷ್ಟೇ. ಯಾವ PG ಯಲ್ಲೂ waw factor !! ಇರೋಲ್ಲ ಅನ್ನದು ನನ್ನ ಅನಿಸಿಕೆ. managable ಆಗಿದ್ದರೆ ಸಾಕು. ಊಟ ರುಚಿಯಾಗೆ ಇರಬೇಕು,ಹಾಗೆ ಇರಬೇಕು,ಹೀಗೆ ಇರಬೇಕು ಅಂತೇನೂ ಇಲ್ಲ. ಹೊಟ್ಟೆ ತುಂಬಿದರೆ ಆಯಿತು ನನಗೆ. ಆದ್ರೆ ತೀರ ಮೆಣಸಿನಕಾಯಿ ತರ ತಿನ್ನಕ್ಕಾಗಲ್ಲ. ಎಲ್ಲವೂ ಹಿಡಿಸಿತು.ದಿನಗಳು ಹೋದಂತೆ PG ಪ್ರಿಯವಾಗತೊಡಗಿತು.ಅದನ್ನು ಬಿಟ್ಟು ಬೇರೆ ಕಡೆ ಹೋಗುವುದೇ ಬೇಡ ಅನ್ನುವ ಮಟ್ಟಿಗೆ. ಹಾಗೇ PG ನೋಡಿಕೊಳ್ಳುತ್ತಿರುವ (ನಾವೆಲ್ಲಾ ಅತ್ತೆ ) ಎಂದೇ ಕರೆಯುವ ಒಳ್ಳೆ ಸಂಭಂದ ಸಿಕ್ಕಿತು. ಸ್ವಂತ ಮಕ್ಕಳಲ್ಲದಿದ್ದರು ಸಮಯಕ್ಕೆ ಊಟ ಮಾಡಿ ಎಂದು ಹೇಳುವ ಅತ್ತೆಯ ಪ್ರೀತಿ ,ಎಲ್ಲ ಸಿಕ್ಕಿದೆ PG ಯಿಂದ. ಬೆಂಗಳೂರಿನ ನನ್ನ ಆಶ್ರಯ ತಾಣ ಎಂದರೂ ತಪ್ಪಾಗಲಾರದು.ಈ ಕಳೆದ ಮೂರು ವರುಷಗಳಲ್ಲಿ ಕಲಿತಿದ್ದು ಬಹಳಿದೆ.ದಿವ್ಯಾ ಈಗ ಮೂರು ವರುಷ ದೊಡ್ಡವಳಾಗಿದ್ದಾಳೆ. ಅತ್ತೆ ಹೇಳುತ್ತಾಳೆ, ಮದುವೆ ಆಗಿಯೇ ನೀನು ಈ PG ಬಿಟ್ಟು ಹೋಗು.ಅಲ್ಲಿವರೆಗೆ ಬಿಡಬೇಡ ಅಂತ.ಅವರ ಮಾತಿಗೆ ನನ್ನ ಸಹಮತವೂ ಇದೆ... :-)

ಆಫೀಸ್ ಗೆ ಬಸ್ನಲ್ಲಿ ಬರುವಾಗಾಗಲೆಲ್ಲ ಇವತ್ತು ನನಗನ್ನಿಸಿದ್ದು ಇಷ್ಟು, ಇಷ್ಟೇ , ಮಾಮರವೆಲ್ಲೋ , ಕೋಗಿಲೆಯೆಲ್ಲೋ.. ಏನೀ ಸ್ನೇಹಾ ಸಂಬಂಧ ...ಎಲ್ಲಿಯದೋ ಈ ಅನುಬಂಧ !!

(ಚಿತ್ರಕೃಪೆ: ಅಂತರ್ಜಾಲ)

ಬುಧವಾರ, ಆಗಸ್ಟ್ 18, 2010

ಯಾಕೋ ಕಾಡತಾವ ಚಿತ್ರಗಳು !

ನಿನ್ನೆ ಒಂದು ಕಾದಂಬರಿ ಓದುತ್ತಾ ಕುಳಿತವಳಿಗೆ ಇದ್ದಕ್ಕಿದ್ದಂತೆ ನನ್ನ ಫೋಟೋ ಆಲ್ಬಮ್ ನೋಡಬೇಕು ಅನ್ನಿಸಿ ಬಿಡ್ತು. ಕಪಾಟಿನ ಒಳಗೆ ಜೋಪಾನವಾಗಿಟ್ಟ 45 ಪುಟಗಳ ನನ್ನ ಪುಟ್ಟ ಭಾವಚಿತ್ರಗಳ ಆಲ್ಬಮ್ ತೆಗೆದೇಬಿಟ್ಟೆ !ಎಷ್ಟೊಂದು ಹಳೆ ನೆನಪುಗಳೆಲ್ಲ ಮರುಕಳಿಸಿದವು.ಯಾಕೋ ಕಾಡತಾವ ಚಿತ್ರಗಳು !

"ಸವಿ ಸವಿ ನೆನಪು,ಸಾವಿರನೆನಪು,
ಎದೆಯಾಳದಲಿ ಬಚ್ಚಿಕೊಂಡಿರುವ,
ಅಚ್ಚಳಿಯದ ನೂರೊಂದು ನೆನಪು"ಮೂರನೇ ಕ್ಲಾಸಿನಲ್ಲಿ ಇದ್ದಾಗ ಮುಂದಿನ ಹಲ್ಲು ಬಿದ್ದು ಎಲ್ಲರೂ ನನ್ನ ಮುದುಕಿ ಆದೆ ಎಂದು ಚುಡಾಯಿಸುತಿದ್ದಾಗ ತೆಗೆಸಿಕೊಂಡ ಚಿತ್ರ, ನಾನು ನನ್ನ ತಂಗಿ ನಮ್ಮ ತೋಟದಲ್ಲಿ ತೆಗೆಸಿಕೊಂಡ ಚಿತ್ರ, ಅಪ್ಪ ಮುಂಬಾಯಿಗೆ ಹೋದಾಗ ನನಗಂತ ತಂದ ಚಿಟ್ಟೆ ಚಿತ್ರಗಳಿದ್ದ ಅಂಗಿಯಲ್ಲಿ ತೆಗಿಸಿಕೊಂಡ ಚಿತ್ರ, ಎಂದೋ ಕಾರ್ಯದ ಮನೆಯಲ್ಲಿ ಹುಡುಗರು ನಾವಷ್ಟೇ ಅಡಿಗೆ ಭಟ್ರು ಮಾಡಿದ ಸಿಹಿ ತಿಂಡಿಯ ರುಚಿ ನೋಡುತಿದ್ದಾಗ, ಮಕ್ಕಳೆಲ್ಲ ಹೊಳೆ ದಂಡೆಗೆ walking ಹೋದ ಚಿತ್ರ, ಗುಡ್ಡ ಬೆಟ್ಟ ತಿರುಗಿ "ಮುಳ್ಳು ಹಣ್ಣು" ಕಿತ್ತು ತಂದ ಚಿತ್ರ,ಮಾವನ ಮದುವೆಯಲ್ಲಿ ಮೊದಲನೇ ಸಾರಿ,ಸೀರೆ ಉಟ್ಟಾಗ ತೆಗೆಸಿಕೊಂಡ ಚಿತ್ರ, ನಾನು ಚಿಕ್ಕ ಮಗುವಾಗಿದ್ದಾಗ ಅಪ್ಪ ಇಷ್ಟ ಪಟ್ಟು studio ಗೆ ಹೋಗಿ ಅಪ್ಪನ ಮಡಿಲಿನಲ್ಲಿ , ಅಮ್ಮನ ಜೊತೆ ತೆಗೆಸಿಕೊಂಡ ಚಿತ್ರ, ಹೀಗೆ ಇನ್ನೂ ಎಷ್ಟೋ..ಅಬ್ಬ ಎಲ್ಲಿಂದ ಎಲ್ಲಿಗೆ ಕರೆದುಕೊಂಡು ಹೋಗುತ್ತೆ ಚಿತ್ರಗಳು!

ಹಾಗೆ ಮತ್ತೆ ಹಾಳೆ ತಿರುಗಿಸುತಿದ್ದಾಗ ಮತ್ತೆ ಅದೇ ಫೋಟೋಗಳು. ಶಾಲೆಲಿ ಭಾಷಣ ಮಾಡಿದ, ಬಹುಮಾನ ಗೆದ್ದಾಗ, ಶಾಲೆ ಮುಗಿಯುತಿದ್ದಾಗ ಸೆಂಡ್ ಆಫ ಪಾರ್ಟಿಯಲ್ಲಿ ತೆಗೆಸಿಕೊಂಡ ಫೋಟೋ, ಮತ್ತೆ ಕಾಲೇಜಲ್ಲಿ fashion ಶೋ ಮಾಡಿದ್ದು, ನಾಟಕ ಮಾಡಿದ್ದು , ಟ್ರಿಪ್ ಗಳಿಗೆ ಹೋಗಿದ್ದು, ಮೆಚ್ಚಿನ ಸ್ನೇಹಿತರಿದ್ದು, ಆಹಾ! ಎಂಥ ಆನಂದ. ನಾವು ಡಿಗ್ರಿಯಲ್ಲಿ ಓದುವಾಗ ಕ್ಲಾಸಿಗೆ ಮೂರೇ ಜನ heroine ಗಳು. ಬೇರೆ ಹುಡುಗಿಯರೆಲ್ಲ ಅಯ್ಯೋ ನಮ್ದು scienceu .ನಾವು ಓದಬೇಕು ಅನ್ನುತಿದ್ದರು. ಓದೋದು ಅಂದರೆ ಅವರ ಅರ್ಥದಲ್ಲಿ ಕೇವಲ ಪಟ್ಯ ಪುಸ್ತಕಗಳಷ್ಟೇ! ನಾವಷ್ಟೇ ಸ್ವಲ್ಪ ದೂರ ಆಗಿಬಿಟ್ಟಿದ್ದೆವು. ಆದ್ರೆ ಇದೆ ಕಾರಣ ಹುಡುಗರ ಸ್ನೇಹಕ್ಕೆ ಎಡೆಯಾಯಿತು. ನಾವು ಹುಡುಗರೊಡನೆ ತುಂಬಾ ಗೆಳೆತನದಿಂದ ಇರುತಿದ್ದೆವು. ಯಾವ ಕೆಟ್ಟ ಪಟ್ಟದ ಹಂಗಿಲ್ಲದೆ. "ಆ ದಿನಗಳು" ನೆನಪಾದವು. ಮತ್ತೆ ಬರಲಿ ಅನಿಸಿತು. Hard chance ದಿವ್ಯ!ಅಂತು ಮನಸು. ಚಿತ್ರಗಳನ್ನು ನೋಡುತ್ತಾ ಯಾವುದೋ ಬೇರೆ ಲೋಕದಲ್ಲೇ ಕಳೆದು ಹೋದೆ.ವರ್ತಮಾನದಿಂದ ಭೂತದೆಡೆ ಸಾಗಿತ್ತು ನನ್ನ ಮನಸಿನ ಪಯಣ. ಈ ಚಿತ್ರಗಳು ಮನುಷ್ಯನ ಜೀವನದಲ್ಲಿ ಬೆರೆತು ಹೋಗಿವೆ. ಎಷ್ಟೋ ಖುಷಿಯ ಕ್ಷಣಗಳು ನಮ್ಮ ಬದುಕಿನಲ್ಲಿ ಬಂದೇ ಬರುತ್ತವೆ. ಗೃಹಪ್ರವೇಶ, ಮದುವೆ, ಮುಂಜಿ ಇನ್ನೂ ಅನೇಕ ಸಂದರ್ಭಗಳು ಜೀವನಲ್ಲಿ ಎಂದೂ ಮರೆಯಲು ಅಸಾದ್ಯ ! ಆದರೂ ಯಾವಾಗಾದರೂ ನೆನಪಿಸಿಕೊಂಡು ಆ ಕ್ಷಣಗಳನ್ನು ಮೆಲಕು ಹಾಕಲು ಈ ಫೋಟೋಗಳೇ ಬೇಕು. ಮತ್ತೆ ನೆನಪುಗಳೆಲ್ಲ ಹಸಿರು ಹಸಿರು, ತಾಜಾ ತಾಜಾ ! ಬೇಸರಗೊಂಡ ಮನಸಿಗೊಂದು ಮದ್ದು.

ನಾನು ಹಿಂದೆ ಒಂದು ಪುಸ್ತಕದ ಬಗ್ಗೆ ಬರೆದಿದ್ದೆ. ಅದರಲ್ಲಿ ನಮ್ಮ boss ( ರೋಬಿನ್ ಶರ್ಮಾ) ಹೇಳುತ್ತಾರೆ, ಕೆಲವರಿಗೆ ತಮ್ಮ ಅಂದ ಚಂದದ ಬಗ್ಗೆ ಬಹಳ ಕೀಳರಿಮೆ ಇರುತ್ತದೆಯಂತೆ. ಅಂತಹವರು ಆದಷ್ಟು ಚಿತ್ರಗಳನ್ನು ತೆಗೆಸಿಕೊಂಡು ,ತಮ್ಮಲ್ಲಿ ಏನು ಸುಧಾರಣೆಯಾಗಬೇಕಿದೆ ಅಂತ ನೋಡಿ ಕೊಳ್ಳಬೇಕಂತೆ. ಅದು ನಮ್ಮ ಆತ್ಮ ವಿಶ್ವಾಸ ಹೆಚ್ಚಿಸುತ್ತದಂತೆ. ಇದು ಒಂದು ಒಳ್ಳೆಯ ಉಪಾಯವೇ. ಇಷ್ಟೆಲ್ಲಾ ಯಾಕ್ರಿ ಮಾಡಬೇಕು? ಕನ್ನೆಡಿಯಲ್ಲಿ ನೋಡ್ಕೊಂಡ್ರೆ ಸಾಕಲ್ವ? ಅಂತ ಅನ್ನಬೇಡಿ. ಇದು ರೋಬಿನ್ ಶರ್ಮ ಉವಾಚ,ನನ್ನದಲ್ಲ :-) ಫೋಟೋಗಳು ಎಷ್ಟೊಂದು ಉಪಯುಕ್ತ ಗೊತ್ತ? ದಪ್ಪಗಿದ್ದವರು ಸಣ್ಣಗಾಗಿದ್ದು, ಕಪ್ಪಗಿದ್ದವರು ಬೆಳ್ಳಗಾಗಿದ್ದು, ಮನುಷ್ಯನಲ್ಲಿ ಆದ ಎಲ್ಲ ಬದಲಾವಣೆಗಳನ್ನು ಗಮನಿಸಬಹುದು. ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಬರಲಾಗದವರು ಫೋಟೋ ನೋಡಿ ಸಮಾಧಾನ ಮಾಡಿಕೊಳ್ಳಬಹುದು. ಯಾರದೋ ಬಗ್ಗೆ ಮಾತಾಡುವಾಗ ಅವರ ಚಿತ್ರ ತೋರಿಸಿಕೊಂಡು ಮಾತು ಮುಂದುವರಿಸಬಹುದು.

ಚಿತ್ರಗಳನ್ನು ನೋಡಿ ಎಲ್ಲ ನೆನಪಾಯಿತು . ಕಾಲೇಜು ಜೀವನದ ವೈವಿಧ್ಯತೆಯಲ್ಲ ಕಳೆದು , ಈಗಿನ ಏಕತಾನತೆಯ ಜೀವನದ ಬಗ್ಗೆ ಸ್ವಲ್ಪ ಬೇಸರವು ಮೂಡಿತು.

"Memories play a confusing role,
They make you cry for the days you laughed together,
And make you laugh for the days you cried!!"


kodak ಜಾಹಿರಾತು , "ನಿಮ್ಮ ಸುಮಧುರ ಕ್ಷಣಗಳನ್ನು ಸೆರೆ ಹಿಡಿಯಿರಿ"ಅಂತ. ಅಮ್ಮ ಈಗಲೂ ಅಪ್ಪನ ಹಳೇ ಚಿತ್ರಗಳನ್ನು ನೋಡಿ ಹೇಳುತ್ತಾಳೆ "ನಿನ್ನ ಅಪ್ಪ ಎಷ್ಟು ಚನಾಗಿದ್ರು ನೋಡು,ಈಗಲೇ ಸ್ವಲ್ಪ ಹಾಳಾಗಿದಾರೆ" ಅಂತ. ಅಮ್ಮ ಹಳೇ ದಿನಗಳನ್ನು ನೆನೆಸಿಕೊಂಡು ನಗುತ್ತಾಳೆ. ತಂಗಿ , ಅಪ್ಪ, ನಾನು ಇಲ್ಲದಿದ್ದಾಗ ನನ್ನ ಫೋಟೋ ನೋಡುತ್ತಾರೆ. ನಾನು ಕೂಡ. ಇದೆ ತಾನೇ 4 -5 ಇಂಚಿನ ಕಾಗದದ ಮಹತ್ವ!
ನನಗೆ ಈಗಲೂ ಫೋಟೋ ಹುಚ್ಚು ಇದೆ. ಎಲ್ಲಿ ಹೋದರೂ ಮೊದಲು ಫೋಟೋ ತೆಗೆಯೋದೇ ನನ್ನ ಕೆಲಸ. ಹಾಗಂತ ನಾನೇನು ಒಳ್ಳೆ photographer ಅಲ್ಲ.ಆದರೂ ನನಗಿಷ್ಟ. ಮದುವೆ,ಮುಂಜಿ ಮನೆಗಳಲ್ಲಿ ಆಲ್ಬಮ್ ನೋಡಲು ಕೊಟ್ಟಾಗ, ಅದರ ಮೇಲೆ ಬರೆದ ಪದಗಳು "happy moments " ," memorable moments ","treasured minutes" , "unforgettable timings"ಎಂಬ ಪದಗಳು ನನ್ನ ಸೆಳೆಯುತ್ತವೆ.
ಫೋಟೋಗಳು ಈಗ ಒಳ್ಳೆ ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಒಂದು ಒಳ್ಳೆ ವಿಷ್ಯ. ಕೆಲವರಿಗೆ photography fashion , ಇನ್ನೂ ಕೆಲವರಿಗೆ passion , ಇನ್ನೂ ಕೆಲವರಿಗೆ profession . ನಾನು ಮೊದಲ ಎರಡರಲ್ಲಿ ಯಾವುದರಲ್ಲೂ ಬರಬಹುದು. ಚಿತ್ರಗಳನ್ನು ನೋಡುತ್ತಾ ,ನೋಡುತ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಚಿಕ್ಕ ಮಗುವಾಗಿದ್ದಾಗಿಂದ ಈ ವರೆಗೂ ಪಯಣಿಸಿದ್ದೆ ಕುಳಿತಲ್ಲೇ!
ಮತ್ತೆ ನಾನು ನನ್ನ ಪುಸ್ತಕದಲ್ಲಿ ಬರೆದ ಮಾತು " I like photos, because people can change,but photos cant " ನೆನಪಾಗಿ ನನ್ನಷ್ಟಕ್ಕೆ ನಕ್ಕು ಆಲ್ಬಮ್ ಮುಚ್ಚಿ ಇಟ್ಟೆ. ತುಟಿಯಲ್ಲೊಂದು ಕಾಮನಬಿಲ್ಲು ಮೂಡಿತ್ತು:)(ಚಿತ್ರಕೃಪೆ: ಅಂತರ್ಜಾಲ)

ಬುಧವಾರ, ಆಗಸ್ಟ್ 04, 2010

ನಮ್ಮ ಡ್ರೈವರ್ ಗಳ ನೆನೆಯುತ್ತಾ....

ಆ ದಿನ ಆಫೀಸ್ಯಿಂದ ಹೊರಡುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಫೀಸ್ ಕ್ಯಾಬ್ ನ ಮಿಸ್ ಮಾಡಿಕೊಂಡ ಮೇಲೆ, ಸರಿ volvoಗೆ ಹೋಗೋಣ ಅಂತ ಕಾದೆ.ಎಷ್ಟು ಹೊತ್ತು ಕಾದರೂ volvo ಬರಲೇ ಇಲ್ಲ. ಇನ್ನೇನು ಮಾಡೋದು, ಮಾಮೂಲಿ ಬಸ್ ಬರುತ್ತಾ ಇತ್ತು. ಅಷ್ಟೇನು ತುಂಬಿರದಿದ್ದ ಕಾರಣ ಹತ್ತಿಕೊಂಡೆ. ಸ್ವಲ್ಪ ದೂರದವರೆಗೆ ಬಸ್ಸು ಅಷ್ಟೇನೂ ತುಂಬಿರಲಿಲ್ಲ. ಸದ್ಯ ನನಗೆ ಕುಳಿತುಕೊಳ್ಳಲು ಜಾಗ ಸಿಕ್ಕಿತಲ್ಲ ಅಂತ ಮನಸಲ್ಲೇ ಖುಷಿ ಪಟ್ಟೆ. ಸ್ವಲ್ಪ ದೂರ ಹೋಗುತಿದ್ದಂತೆ ಒಂದು ಮಗು, ಶಾಲೆ ಮುಗಿದು ರಸ್ತೆಯಲ್ಲಿ ಬರುತಿತ್ತು. ಬಸ್ಸಿಗೆ ಅಡ್ಡ ಬಂದೇ ಬಿಟ್ಟಿತು. ಈ ಡ್ರೈವರ್ ಸರಿಯಾದ ಸಮಕ್ಕೆ ತಕ್ಷಣ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದ್ದ. ನಾನಂತೂ ಕಣ್ಣು ಮುಚ್ಚಿಕೊಂಡೇ ಕುಳಿತೆ. ಇನ್ನೇನು ಮಗು ಸತ್ತೇ ಹೋಯಿತೇನೋ ಅಂದುಕೊಂಡೆ. ಆದ್ರೆ ಸದ್ಯ ಪುಣ್ಯಕ್ಕೆ, ಡ್ರೈವರ್ ಸಕಾಲಕ್ಕೆ ಬ್ರೇಕ್ ಹಾಕಿ ಆಗಬಹುದಾದ ಅನಾಹುತ ತಪ್ಪಿಸಿದ್ದ. ದೇವರಿಗೊಂದು thanks ಹೇಳಿದ್ದೆ.

ನಿಜ, ನಾನು ಈಗ ಹೇಳ ಹೊರಟಿರುವುದು ನಮ್ಮ ಡ್ರೈವರ್ ಗಳ ಬಗ್ಗೆ. ನಾನು ಮೂಲತಃ ಸಿದ್ದಾಪುರ (ಉತ್ತರ ಕನ್ನಡ)ದ ಹುಡುಗಿ. ಆದರೆ ಹುಟ್ಟಿ ಬೆಳೆದಿದ್ದೆಲ್ಲ ದಾಂಡೇಲಿ ಎಂಬ ಊರಲ್ಲಿ. ನಮ್ಮ ಊರು ಅಂಥ ದೊಡ್ಡ ಸಿಟಿ ಅಲ್ಲ, ಹಾಗಂತ ಹಳ್ಳಿಯೂ ಅಲ್ಲ. ಮಾಮೂಲಿ ಭಾಷೆಯಲ್ಲಿ town ಅಂತ ಹೇಳಬಹುದು. ಅಲ್ಲಿ ನಮಗೆ ಬೇಕಾಗುವ ಎಲ್ಲ ಸ್ಥಳಗಳು, ಉದಾಹರಣೆಗೆ, ಮಾರ್ಕೆಟ್ , ಶಾಲೆ ,ಕಾಲೇಜ್ ಹೀಗೆ ಎಲ್ಲ ನಡೆದುಕೊಂಡೇ ಹೋಗುವ ಹಾಗಿತ್ತು. ತೀರ ದೂರ ಅಂದರೂ ಆಟೋ ತೆಗೆದುಕೊಂಡರೆ ಕೇವಲ "minimum " ಚಾರ್ಜ್ ಆಗುತಿತ್ತು. ಇಲ್ಲಿ ಬೆಂಗಳೂರಿಗೆ ಬಂದ ಮೇಲೆ ಎಲ್ಲದಕ್ಕೂ ಬಸ್ಸನ್ನೇ ಬಳಸಿದುದು. ಊರಿಗೆ ಹೋದಾಗೆಲ್ಲ, ಕೆಲವರು ನಾನು ಬೆಂಗಳೂರಿನಲ್ಲಿ ಇದ್ದೀನಿ ಅಂದ ಕೂಡಲೇ, ನನ್ನ ನೆಂಟರೂ ಬೆಂಗಳೂರಲ್ಲೇ ಇದ್ದಾರೆ ಎಂದು ಕೆಲವರು ಹೇಳಿದ್ದಾರೆ. ಒಮ್ಮೆ ಹೋಗಿ ಬಾ ಅಂತಾರೆ. ಆದರೆ ಹೋಗಿ ಬರುವುದಕ್ಕೆ ಒಂದು ಒಪ್ಪತ್ತೆ ಬೇಕಾದಿತು.ಬೆಂಗಳೂರು ಅಷ್ಟು ದೊಡ್ಡದಿದೆ. ಆದರೆ ಹೇಳಿಕೊಳ್ಳುವುದು ಮಾತ್ರ ಬೆಂಗಳೂರಲ್ಲೇ ಇದೀನಿ ಅಂತ ಅಷ್ಟೇ!

ಇಲ್ಲಿ ಎಲ್ಲರೂ ಯಾವಾಗಲೂ ಅಲ್ಲದಿದ್ದರೂ, ಒಂದಿಲ್ಲೊಂದು ಸಾರಿ ಬಸ್ಸನ್ನು ಉಪಯೋಗಿಸಿಯೇ ಇರುತ್ತಾರೆ. ಸ್ವಂತ ವಾಹನ ಇರುವವರಿಗೆ ಸಮಸ್ಯೆ ಇಲ್ಲ. ಆದರೆ ವಿದ್ಯಾರ್ಥಿಗಳು, ದಿನಾ ಫ್ಯಾಕ್ಟರಿಗಳಿಗೆ ಹೋಗುವ ಮಹಿಳೆಯರು, ಕೆಲಸಕ್ಕೆ ಹೋಗುವ ಹುಡುಗಿಯರು, ಕಂಪನಿಗಳಿಂದ ಸಾರಿಗೆ ವ್ಯವಸ್ಥೆ ಇಲ್ಲದಿರುವ ಉದ್ಯೋಗಿಗಳು, ಅತ್ತ ಹಳ್ಳಿಕಡೆಯಿಂದ ಬರುವ ರೈತರು, ಶಾಲೆ ಬಿಟ್ಟ ಪುಟ್ಟ ಪುಟ್ಟ ಮಕ್ಕಳು, ಹಿರಿಯ ನಾಗರಿಕರು, ಹೀಗೆ ಎಲ್ಲ ವಿಧದ ಜನರಿಗೆ ಪ್ರಯಾಣ ಮಾಡಲು ಬಸ್ಸು ಅನುಕೂಲಕರ ವ್ಯವಸ್ಥೆ. ಈ ಬಸ್ಸನ್ನು ಓಡಿಸುವ ಡ್ರೈವರ್ ಗಳ ಶ್ರಮ ಬಹಳ ಮೆಚ್ಚತಕ್ಕದ್ದೇ!ಅವರಿಗೆ ಬಹಳ ತಾಳ್ಮೆ ಅವಶ್ಯ. ಎಷ್ಟೋ ರಸ್ತೆ ಗೊತ್ತಿಲ್ಲದವರು,ಊರಿಗೆ ಹೊಸಬರು , ಬಸ್ಸು ಅಲ್ಲಿ ಹೋಗುತ್ತಾ? ಇಲ್ಲಿ ಹೋಗುತ್ತಾ? ಎಂದು ಕೇಳಿದಾಗ ತಾಳ್ಮೆ ಇಂದ ಮಾರ್ಗ ಹೇಳಿ , ನೂರಾರು ಜನರ ಜೀವವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡೇ ಜೋಪಾನವಾಗಿ ಅವರನ್ನು ಅವರವರ ಗಮ್ಯಸ್ಥಾನಕ್ಕೆ ತಲುಪಿಸುವ ಈ ಡ್ರೈವರ್ ಗಳ ಕೆಲಸ ಬಹಳ ಪ್ರಶಂಸನೀಯ.

ಕೆಲವೊಂದು ಬಸ್ಸುಗಳಲ್ಲಿ conductor ಇರುವುದಿಲ್ಲ. ಹಾಗಿರುವಾಗ ಇವರೇ ದ್ವಿಪಾತ್ರಾಭಿನಯ ಮಾಡುತ್ತಾ, ಜನರನ್ನು ಹತ್ತಿಸಿಕೊಂಡು, ಪಾಸ್ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ , ಟಿಕೆಟ್ ಬೇಕಾದವರಿಗೆ ಟಿಕೆಟ್ ಕೊಟ್ಟು, ಹತ್ತು ರೂಪಾಯಿ ಟಿಕೆಟ್ ಗೆ ನೂರು ರೂಪಾಯಿ ನೋಟು ಕೊಟ್ಟ ಅಂಕಲ್ ಗೆ ತಿರುಗಿಸಿ ಚಿಲ್ಲರೆ ಕೊಡಲು ತಡಕಾಡುತ್ತಾ , ಕಡೆಗದು ಸಿಕ್ಕಿತು ಎಂದು ಅವರಿಗೆ ಕೊಡುತ್ತಾರೆ. ವಯಸ್ಸಾದವರಿಗೆ, ಅಷ್ಟೇ ಗೌರವದಿಂದ ಅವರ ಇಳಿಯುವ ಸ್ಥಳ ಬಂದಾಗ ಇಲ್ಲೇ ಇಳಿದುಕೊಳ್ಳಿ ಎಂದು ಹೇಳುತ್ತಾರೆ.
ಹಾಗೇ strike ನಡೆದಾಗಲೂ ಅಷ್ಟೇ. ಡ್ರೈವರ್ ಗಳಿಗೆ ರಜೆ ಘೋಷಣೆ ಆಗಿರದಿದ್ದರೆ, ಅವರು ಗಾಡಿ ಓಡಿಸುವಾಗ , ಕಲ್ಲು ಹೊದೆತಗಳೇನಾದರು ಸಂಭವಿಸಿದರೆ ,ಮೊದಲು ಸಿಕ್ಕಿಬೀಳುವುದೇ ಡ್ರೈವರ್ ಗಳು. ಹಾಗೇ ಅಪ್ಪಿ ತಪ್ಪಿ ಯಾವುದಾದರೂ ಗಾಡಿಗೆ ಗುದ್ದಿದನೋ ಅವನಿಗೆ ಅವರಿಂದ ಧರ್ಮದೇಟು ಗ್ಯಾರಂಟಿ!! ಪ್ರಯಾಣಿಕರು ಮೂಕ ಪ್ರೇಕ್ಷಕರಷ್ಟೇ!

ಬೇಸಿಗೆ ಕಾಲದಲ್ಲಿ ಆ ಎದುರುಗಡೆ ಗಾಜಿನಿಂದ ಬರುವ ಬಿಸಿಲನ್ನು ಸಹಿಸಿಕೊಂಡು, ಮಾಧ್ಯಾನದ ಉರಿ ಬಿಸಿಲಿನಲ್ಲೂ ತಾಳ್ಮೆಗೆಡದೆ ಗಾಡಿಯನ್ನು ಸರಿಯಾಗಿ ಓಡಿಸುತ್ತಾ, ಎಲ್ಲೂ ಅಪ್ಪಿ- ತಪ್ಪಿ ಆಕ್ಸಿಡೆಂಟ್ ಆಗದಂತೆ ಕಾದುಕೊಂಡು ಎಲ್ಲರನ್ನು ಸುರಕ್ಷಿತವಾಗಿಡುವಲ್ಲಿ ಆತ ಕಾರಣವಾಗುತ್ತಾನೆ. ನಿಮಿಷ ನಿಮಿಷಕ್ಕೂ ಬರುವ ಸಿಗ್ನಲ್ ಗಳಲ್ಲಿ ನಿಲ್ಲಿಸುತ್ತಾ,ಹಸಿರು ನಿಶಾನೆ ಕಂಡೊಡನೆ ಮುಂದೆ ಹೋಗುತ್ತಾನೆ. ಇಷ್ಟೊಂದು traffic ಇರುವ ಊರಿನಲ್ಲಿ ಯಾಮಾರುವುದು ಬಲು ಸುಲಭ. ನಾವು ಪ್ರಯಾಣಿಕರಿಗೆ ಬಸ್ಸು ಸಿಗುವ ವರೆಗಷ್ಟೇ ತಲೆ ಬಿಸಿ. ಬಸ್ಸು ಹತ್ತಿ ಕುಳಿತ ಮೇಲೆ ಎಲ್ಲ ತಲೆಬಿಸಿಯನ್ನು ಡ್ರೈವರ್ ಗೆ ರವಾನಿಸಿ ನಾವು ಬೆಚ್ಚಗೆ ಕುಳಿತು ಬಿಡುತ್ತೇವೆ. ಕೆಲವರು ನಿದ್ದೆ ಮಾಡುತ್ತಾರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ, ಇನ್ನು ಕೆಲವರು FM ಕೇಳುತ್ತಾರೆ, ನನ್ನಂತವರು ಕಿಟಿಕಿಯಾಚೆ ನೋಡುತ್ತಾ , ಜನರ ಗುಂಪಲ್ಲು ಸಿಕ್ಕ ಏಕಾಂತದ ಸವಿಯನ್ನು ಇನ್ನೊಬ್ಬರಿಗೆ ಒಂದ್ ಚೂರು ಕೊಡದಂತೆ ಅನುಭವಿಸುತ್ತಾರೆ, ಆದರೆ ಡ್ರೈವರ್ ಮಾತ್ರ ಗಮನವಿಟ್ಟು ಗಾಡಿ ಓಡಿಸುತ್ತಾನೆ. ಹೀಗೆ , ನೂರಾರು ಕನಸಿನ ಲೋಕದಲ್ಲಿ ತೇಲಾಡುತ್ತಿರುವ ಜನರನ್ನು ,ತಾನು ಮಾತ್ರ ವಾಸ್ತವದಲ್ಲಿದ್ದುಕೊಂಡು ಕಾಯುತ್ತಾನೆ ಆತ. ಇದೆಲ್ಲ ದಿನಾ ಓಡಾಡುವ ಈ ಸಿಟಿ ಬಸ್ ಡ್ರೈವರ್ ಗಳ ಕಥೆಯಾದರೆ ಇನ್ನು ಊರಿಂದ ಊರಿಗೆ ಹೋಗುವ ಬಸ್ಸನ್ನು ಓಡಿಸುವ ಡ್ರೈವರ್ ಗಳ ಕಥೆಯೇ ಬೇರೆ.

ರಾತ್ರೆ ಬಸ್ಸುಗಳನ್ನ ಓಡಿಸುವವರು ಎಷ್ಟು ಜಾಗರೂಕರಾಗಿದ್ದರೂ ಸಾಲದು. ಆ ಕತ್ತಲೆ ಕೊಂಪೆಯೊಳಗೆ ಉರಿಯುತ್ತಿರುವ ಬಸ್ಸಿನ ತಿಳಿಬೆಳಕಿನಲ್ಲೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಸ್ಸನ್ನು ಓಡಿಸುತ್ತಾರೆ. ನನ್ನ ಅಜ್ಜನ ಮನೆ ಇರುವುದು ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿ ರಾತ್ರಿ ಹೋಗುವುದು ಒಂದೇ ಬಸ್ಸು.ಊರಿಗೆ ಬರುವ ದಾರಿಯ ಇಕ್ಕೆಲದಲ್ಲಿ ಗುಡ್ಡ ಇರುವುದರಿಂದ ಒಮ್ಮೊಮ್ಮೆ ಕಾಡು-ಕೋಣಗಳು ಬಸ್ಸಿಗೆ ಅಡ್ಡ ಬರುವುದೂ ಉಂಟು. ಆಮೇಲೆ ಜೋರಾಗಿ ಬಸ್ಸಿನ ಹೊರ್ನ್ ಮಾಡಿದಾಗ ಅವು ಹೆದರಿದ ಬೆಕ್ಕಿನಂತೆ ಬೆಚ್ಚಿ ಓಡಿ ಹೋಗುತ್ತವೆ. ಬಸ್ ಡ್ರೈವರ್ -ಕಂಡಕ್ಟೆರ್ ಅಲ್ಲೇ ತಂಗಿದ್ದು ಬೆಳಗ್ಗೆ ಎದ್ದು ಮತ್ತೆ ಪೇಟೆಗೆ ಹೋಗುವ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾರೆ.ಹೀಗೆ ಹಳ್ಳಿಗಳಿಗೆ ಹೋಗುವ ಡ್ರೈವರ್ ನ ಜೀವನ ಸಾಗುತ್ತಿರುತ್ತದೆ.
ನಮ್ಮ ಮನೆಯಿಂದ,ಅಂದರೆ ದಾಂಡೇಲಿಯಿಂದ ಬೆಂಗಳೂರಿಗೆ ಬರಲು ಕನಿಷ್ಠ ಹತ್ತು ಘಂಟೆಗಳ ಪ್ರಯಾಣ ಬಸ್ಸಲ್ಲಿ. ನಾನು ಸುಮಾರಾಗಿ ರಾತ್ರಿ ಪ್ರಯಾಣ ಮಾಡುವುದೇ ಹೆಚ್ಚು. ಬಸ್ ಹತ್ತಿ ಸ್ವಲ್ಪ ಹೊತ್ತಿಗೆಲ್ಲ ಮಲಗಿದರೆ , ಇಲ್ಲಿ ಬಂದ ಮೇಲೇ ಕಣ್ಣು ಬಿಡುತ್ತೇನೆ. ಮಧ್ಯೆ -ಮಧ್ಯೆ ಎಚ್ಚರು ಆದಾಗೆಲ್ಲ, ಎಲ್ಲರೂ ಮಲಗಿದ್ದಾರೆ, ಡ್ರೈವರ್ ಒಬ್ಬ ಮಾತ್ರ ಎಚ್ಚರವೇ ಇದಾನಲ್ಲ ಅಂತ ಮನಸಲ್ಲಿ ಅಂದುಕೊಳ್ಳುತ್ತೇನೆ.

ಡ್ರೈವರ್ ಗಳ ಅಜಾಗರೂಕರಾಗಿವ ಕ್ಷಣಗಳು ಬಹಳಿರಬಹುದು . ಅಲ್ಲೊಂದು ಇಲ್ಲೊಂದು ಕೆಟ್ಟ ಘಟನೆಗಳಾಗಿತ್ತವೆ.ಆದರೂ ಅದು ಅಂಥ ದೊಡ್ಡ ಮಟ್ಟದಲ್ಲಿರಲಿಕ್ಕಿಲ್ಲ. ಎಷ್ಟಾದರೂ ಅವರು ನಮ್ಮ ಹಾಗೆ ಮನುಷ್ಯರೇ ಅಲ್ಲವ? ಇಷ್ಟೊಂದು ಜವಾಬ್ದಾರಿ ಹೊತ್ತು ಜನರನ್ನೆಲ್ಲ ಕ್ಷೇಮವಾಗಿಟ್ಟು ತಾನೂ ಬದುಕುತ್ತಿರುವ ಈ "ಡ್ರೈವರ್ " ಎಂಬ ಜೀವಕ್ಕೆ ನಾವೆಲ್ಲರೂ ಒಂದು ಥ್ಯಾಂಕ್ಸ್ ಹೇಳೋಣವೇ? ಇದು ಕೇವಲ ಬಸ್ ಡ್ರೈವರ್ ಗಳಿಗಷ್ಟೆ ಅಲ್ಲ. ಎಲ್ಲ ವಾಹನ ಡ್ರೈವರ್ ಗಳಿಗೂ ಅನ್ವಯಿಸುತ್ತದೆ.


(ಚಿತ್ರಕೃಪೆ: ಅಂತರ್ಜಾಲ)

ಸೋಮವಾರ, ಆಗಸ್ಟ್ 02, 2010

ಅವನು ಕಾಯುತ್ತಿದ್ದಾನೆ....


ತೆರೆದ ಕಿಟಕಿಯಾಚೆ ಮುಖವಿತ್ತು ಆಚೆ ನೋಡುತ್ತಾ , ಆಟ ಆಡುತ್ತ ಇದ್ದ ಹುಡುಗರನ್ನು , ಖುಷಿ ಖುಷಿ ಆಗಿರುವುದನ್ನು ಕಂಡನು ಚಲಪತಿ. ತಾನೆಷ್ಟೆಲ್ಲ ದಿನಗಳಾಗಿ ಹೋಯಿತು ಇಂಥ ದಿನಗಳನ್ನು ಅನುಭವಿಸಿ!! ಎಷ್ಟೊಂದು ಸಂತೋಷದಿಂದಿದ್ದ ದಿನಗಳಲ್ಲಿ ಅದೆಲ್ಲಿಂದ ಆ ದಿನ ರಸ್ತೆಯಲ್ಲಿ ಹೋಗುವಾಗ, ಆ ಮನೆ ಎದುರಿಗೆ ತಾನು ಕಣ್ಣು ಹಾಯಿಸದಿದ್ದರೆ, ಅದು ನನ್ನನ್ನು ಅಷ್ಟೊಂದು ಸೆಳೆದಿರದಿದ್ದಿದ್ದರೆ, ಅಲ್ಲಿ ಬರೆದಿಟ್ಟ ಅಕ್ಷರಗಳನ್ನು ನಾನು ಓದಿರದಿದ್ದರೆ, ಆ ಅಕ್ಷರಗಳನ್ನೇ ನಂಬಿಕೊಂಡು ಮರುಳಾಗಿರದಿದ್ದರೆ, ಮುಖ ಪರಿಚವಿಲ್ಲದ ಒಂದು ಜೀವದೆಡೆಗೆ ಸೆಳೆತ ಬರದಿರದಿದ್ದರೆ , ಆ ವಾಂಚೆಯು ತೀವ್ರವಾಗಿ ಕಾಡಿರದಿದ್ದರೆ , ಆ ಮರೀಚಿಕೆಯ ಬೆನ್ನು ಹಿಂದೆ ಬಿದ್ದಿರದಿದ್ದರೆ, ಏನೆಲ್ಲಾ ಊಹಿಸಿಕೊಂಡಾಗ , ಜನರ ಸಾವಿರ ಮಾತುಗಳಿಗೆ ಬೆಲೆ ಕೊಟ್ಟಿದಿದ್ದರೆ, ದಿನವೂ ಒಂದೇ ತರಹದ ವಿಲಕ್ಷಣವಾದ ಚಡಪಡಿಕೆ ಆಗಿರದಿದ್ದರೆ, ನಿಮಿಷ ನಿಮಿಷದ ಹತಾಶೆ ಆಗಿರದಿದ್ದರೆ, ಆ ಮನೆಗೆ ಬಂದ ಹೊಸ ಹೊಸ ನೆಂಟರ ಮುಖಗಳನ್ನು ಲಕ್ಷಿಸದಿದ್ದರೆ, ಮನೆ ಒಡತಿಯ ಹುಡುಕಿಕೊಂಡು ಹೋಗಿರದಿದ್ದರೆ, ಯಾರನ್ನ ನೋಡಿದರು ಎಲ್ಲೋ ಒಂದು ಕಡೆ ಆ ಮನೆ ಯಜಮಾನಿಯನ್ನು ಹುಡುಕಿರದಿದ್ದರೆ,ಆ ಮನೆಯವಳ ಬಗ್ಗೆ ಪಕ್ಕದ ಮನೆಯವರಿಂದ ಬರುತಿದ್ದ ಮಾತುಗಳಿಗೆ ಸೊಪ್ಪು ಹಾಕಿದಿದ್ದರೆ, ಆ ಮೆನೆಗೆ ಹೋಗಲು ಅನುಮತಿ ಇಲ್ಲ ಅಂತ ಗೊತ್ತಿದ್ದೂ ಹೋಗಲು ಪ್ರಯತ್ನ ಪಡದಿದ್ದರೆ, ನೋವಲ್ಲೂ ನಗುವ ಪ್ರಯತ್ನ ಮಾಡಿರದಿದ್ದರೆ, ಮೆನೆಯಲ್ಲಿರುವವರು ಮಾಡಿದ ಪ್ರತೀ ತಪ್ಪನ್ನು ಮನ್ನಿಸಿ ಮುಂದೆ ನಡೆಯದಿದ್ದರೆ, ಅದರ ಬಗ್ಗೆ ಒಂದು ದ್ವೇಷ ಬೆಳೆಸಿಕೊಂಡಿರೋಕೆ ಸಾದ್ಯವಾಗಿದ್ದಿದ್ದರೆ,ಇಷ್ಟೆಲ್ಲಾ "ರೆ" ಗಳ ಮಧ್ಯೆಯೂ ಒಂದು ಸಣ್ಣ ನಗು ಬಂತು ಅವನಿಗೆ . ಕುಡಿಯುತ್ತಿದ್ದ ಕಾಪಿ ಸಿಹಿ ಅನಿಸಿತು. ಮನಸು ಉತ್ತರ ಕೊಟ್ಟಿತ್ತು ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ . " ಮನೆಯಾಗಲಿ, ಮನೆಯಲ್ಲಿರುವ ಜನರಾಗಲಿ, ಹೇಗೇ ಇರಲಿ ಅವರು "ನನ್ನವರು" , "ನನ್ನಿಷ್ಟದವರು" ನನಗವರೇ ಇಷ್ಟ. . ಮಕ್ಕಳ ಮುಖದಲ್ಲಿರುವ ನಗೆಗಿಂತ ಉತ್ತಮವಾದ ನಗೆ ಬಂದಿತ್ತು. ರೇಡಿಯೋದಲ್ಲಿ ಹಾಡು ಗುನುಗಿತ್ತು.

"ಹರುಷವೊಂದೆ ಯಾರಿಗುಂಟು ಹೇಳು ಜಗದಲಿ...
ಹೂವು ಮುಳ್ಳು ಎರಡು ಉಂಟು ಬಾಳಲತೆಯಲಿ...
ದುರಾಸೆ ಏತಕೆ ?... ನಿರಾಸೆಯೇತಕೆ...?
ಅದೇನೆ ಬಂದರೂ ಅವನ ಕಾಣಿಕೆ..."

ಒಡಲಿಗೆ ತಾನಾಗೆ ಬೆಂಕಿ ಇಟ್ಟುಕೊಂಡಾಗಿದೆ. ಇನ್ನದರಲ್ಲಿ ಸುಟ್ಟು ಭಾಸ್ಮವಾಗುವುದೊಂದೇ ಬಾಕಿ ಉಳಿದಿರುವುದು. ತನ್ನ ಒಡಲಿನ ಬೆಂಕಿ ಅವಳನ್ನು ಸುಡಕೊಡದಂತೆ ,ಬದಲಿಗೆ ಆ ಬೆಂಕಿಯೇ ತನ್ನ ಬಾಳಿಗೊಂದು ಇಂಧನವಾಗಿ, ಬದುಕಲು ಸ್ಪೂರ್ತಿಯಾಗಿ, ಆ ಬೆಂಕಿಯ ಬಿಸಿ ಅವಳಿಗೆ ಬೆಚ್ಚನೆಯ ಅನುಭೂತಿಯಾಗಿ, ತನ್ನೊಳಗೆ ಬಚ್ಚಿಟ್ಟು ಅವಳು ನಲಿಯುವುದನ್ನು ನೋಡುತ್ತಾ, ತನ್ನ ಬದುಕಿನ ಕೊನೆ ಕ್ಷಣಗವರೆಗೆ ಉಳಿದಿರುವುದು ತನಗೆ ನಿರೀಕ್ಷೆ , ಅವಳೊಂದಿಗೆ ಕಳೆದ ನಾಲ್ಕಾರು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ವರುಷಗಳ ಮರೆಯಲಾರದ ಸಾವಿರ ಸವಿ ನೆನಪುಗಳು ಅಷ್ಟೇ. .!!! ಒಂದು ದಿನ ನಿರೀಕ್ಷೆ ನಿಜವಾಗುತ್ತೆ ಎಂಬ ಹುಚ್ಚು ಬ್ರಮೆಯಿಂದ ದೂರದಲ್ಲೇ ನೋಡುತ್ತಾ ಆಯುಸ್ಸನ್ನು ಗಟ್ಟಿ ಹಿಡಿದುಕೊಂಡು ಕಾಲ ಕಳೆಯುತ್ತಾನೆ.ಬೆಟ್ಟದಷ್ಟು ತಾಳ್ಮೆ, ಸಹನೆ ಆತನಿಗೆ.
ಹೀಗೂ ಪ್ರೀತಿ ಮಾಡಬಹುದೇ ? ಎಂಬ ಅಚ್ಚರಿಯನ್ನು ಮೂಡಿಸಿದ ಪಾತ್ರ ಚಲಪತಿ.


(ರವಿ ಬೆಳೆಗೆರೆಯವರ "ಮಾಂಡೋವಿ" ಕಾದಂಬರಿಯಿಂದ ಪ್ರೇರಿತವಾಗಿ ಮೂಡಿದ ಸಾಲುಗಳು.ಚಲಪತಿ ಪಾತ್ರ ನನಗಿಷ್ಟ)
( ಚಿತ್ರ ಕೃಪೆ: ಅಂತರ್ಜಾಲ )