ಬುಧವಾರ, ಡಿಸೆಂಬರ್ 08, 2010
ಅಪ್ಪಣೆಯಾ ?
ಚಳಿಗಾಲ ಶುರುವಾಗುತ್ತಿದೆ.
ಬೆಚ್ಚನೆ ಯೋಚನೆಗಳಲ್ಲಿ ಎಲ್ಲ,
ನಿನ್ನದೇ ಚಹರೆಗಳು.
ಕಳೆದು ಹೋಗುತ್ತಿರುವೆ ,
ಕರಗಿ ಹೋಗುತ್ತಿರುವೆ ನಿನ್ನಲ್ಲಿ,
ನಿನ್ನ ಪ್ರೀತಿಯ ಅಮೃತ ಧಾರೆಯಲ್ಲಿ.
ಒಂದು ನಿಮಿಷವೂ ಶ್ರದ್ದೆಯಿಂದ ಕೆಲಸ ಮಾಡದವಳು,
ಈಗ "ಚನ್ನಾಗಿ ಕೆಲಸ ಮಾಡುತ್ತೀಯ" ಎಂದು ಹೇಳಿಸಿಕೊಳ್ಳುತ್ತೇನೆ ,
ಡೈರಿಯ ಪುಟದ ತುಂಬಾ ನಿನ್ನದೇ ಹೆಸರು,
ನಿನ್ನಿಂದಲೇ ಕಲಿಯುತ್ತಿರುವೆ ಸಹನೆ,
ನಿನ್ನಿಂದ ಬದುಕಿಗೆ ಹೊಸ ತಿರುವು ಬಂದಿದೆ,
ನನ್ನ ಹಸನ್ ಮುಖದ ಹಿಂದನ ಕಾರಣ ,
"ಕೇವಲ ನೀನು, ಹೌದು ಬರೀ ನೀನಷ್ಟೇ"
ಎಂದರೆ ನೀನು ನಂಬಲೇ ಬೇಕು.
ನನ್ನನ್ನು ಮರಳಿ ಹುಡುಕಿಕೊಳ್ಳುವ ಪ್ರಯತ್ನ,
ನಾನು ಇನ್ನು ಮಾಡುವುದಿಲ್ಲ.
ಕಳೆದು ಹೋಗುವುದರಲ್ಲಿರುವ ಸುಖ,
ಒಂಟಿತನದಲ್ಲಿಲ್ಲ. ಸಾಕು ನನಗೆ ,
ನಿನ್ನ ಒಂದು ಸಾಂಗತ್ಯ, ನಿನ್ನ ಪ್ರೀತಿ ಮಾತುಗಳು
ಇಷ್ಟೇ ಸಾಕೆಂದರೆ ನಿನಗೆ ಆತಂಕವೇ?
ಹೇಳು ,ನನ್ನಲ್ಲಿ ಹೇಳೋಕಾಗದ ಆಸೆ ನೂರಿವೆ,
ಮತ್ತು ಅದು ಕೇವಲ ನಿನಗಷ್ಟೇ ಹೇಳಬೇಕಿದೆ,
ನಿನಗಾಗಿಯೇ ಒಂದು ಪತ್ರ ಬರೆಯಲ?
*****************
ಈ ಕಾಮೆಂಟನ್ನು ನೋಡಿ ಸ್ನೇಹಿತರೆ,
"nim hosa postge kayodu andre upendrana super film kaada haage aagide."
ಈ ಕಾಮೆಂಟ್ ಹಾಕಿದವರು ಅನಾಮಧೇಯರು! ಆದರೆ ಯಾರೇ ಹಾಕಿರಲಿ ಅವರಿಗೊಂದು ಥ್ಯಾಂಕ್ಸ್.ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು. ಖುಷಿ ಆಯ್ತು (ಇದನ್ನ ನೋಡಿ ಇನ್ನಷ್ಟು anonymous ಕಾಮೆಂಟುಗಳು ಬರಬಹುದು.. ;-) ಬಿಡಿ ಕಾಮೆಂಟ್ ಮಾಡರೇಶನ್ ಇದೆಯಲ್ಲ ಹೇಗಿದ್ರು! )
ಗುರುವಾರ, ನವೆಂಬರ್ 18, 2010
ಪಯಣ ಹೊಸ ಕನಸಿನೆಡೆಗೆ
ಕೆಲಸ ಬಿಡುತ್ತೀನಿ ಎಂದು ನನ್ನ ಟೀಂ ಲೀಡರ್ ಗೆ ಹೋಗಿ ಒಂದು ತಿಂಗಳ ಹಿಂದೆ ಹೇಳುತ್ತೀನಿ.ಅವರೋ ಆಶ್ಚರ್ಯ , ಆತಂಕದಿಂದ "ವೈ ,ವಾಟ್ ಹ್ಯಾಪೇನ್ಡ್? ಅಂತಾರೆ.ನಾನು ಕೆಲಸಕ್ಕೆ ರಿಸೈನ್ ಮಾಡುತ್ತೀನಿ.ಒಹ್! ನೀವು ಪೆಪೆರ್ಸ್ ಹಾಕಿದ್ರಾ? ಯಾವಾಗ ಲಾಸ್ಟ್ ವರ್ಕಿಂಗ್ ಡೇ ? ಎಂದು ಕೇಳುವ ಎಲ್ಲರಿಗೂ ಉತ್ತರ ಕೊಟ್ಟು ದಣಿಯುತ್ತೇನೆ.ಇನ್ನು ಕೆಲವರು ಯಾಕೆ ಬೇರೆ ಕಡೆ ಕೆಲಸ ಸಿಕ್ಕಿತಾ? ಮದುವೆ ಆಗ್ತಾ ಇದ್ದೀರಾ? ನೀವು ಸೇರುವ ಹೊಸ ಕಂಪನಿಯಲ್ಲಿ ನಮಗೂ ರೆಫರ್ ಮಾಡಿ ಅಂತ ಹೇಳುತ್ತಾರೆ.. ಇನ್ನು ಕೆಲವರು ,ಸಾಕು ಬಿಡಿ ,ಇನ್ಮೇಲಾದ್ರು ಆರಾಮಾಗಿರಿ, ಎಂದು ಬಿಟ್ಟಿ ಸಲಹೆ ಕೊಡುವವರು.ಏನೋ..ಇಷ್ಟು ದಿನ ಮಣ್ಣು ಹೊತ್ತು ಕಷ್ಟ ಪಟ್ಟ ಹಾಗೆ! ಮರಿಬೇಡ ಕಣೆ ಎಂದು ,ಒಂದು ದಿನವೂ ಮಾತಾಡಿಸದ ಹುಡುಗಿ ಬಂದು ಹೇಳುತ್ತಾಳೆ.ಹೋ..ನೀನು ಆರ್ಕುಟ್ನಲ್ಲಿ ಇದಿಯಲ್ಲ..ನಾನು ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸ್ತೇವೆ ಅಂತ ಸ್ವಲ್ಪ ಜನ ಹೇಳುತ್ತಾರೆ.ನೀವು ಈಗ "ಫ್ರೀ ಬರ್ಡ್"ಅಂತ ಇನ್ಯಾರೋ ಹೇಳುತ್ತಾರೆ. ನಾವೆಲ್ಲ ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.ಯಾರೇ ಬ್ಲಾಗ್ ಬಗ್ಗೆ, ಅಥವ ಪುಸ್ತಕದ ಬಗ್ಗೆ ಮಾತಾಡಿದರೆ ನಿನ್ನ ನೆನಪೇ ಆಗುತ್ತೆ ಎಂದು ಹೇಳಿ ನನ್ನನ್ನು ಭಾವುಕಗೊಳಿಸುತ್ತಾರೆ. ನನ್ನ ಸುಂದರ campus , ಇಲ್ಲಿ ಇರುವ ಈಜು ಕೊಳದ ಬಳಿ ನಾನು ಕಳೆಯುತ್ತಿದ್ದ ಸಮಯ ಎಲ್ಲವೂ ಒಮ್ಮೆಲೇ ನೆನಪಾಗುತ್ತದೆ. ನಮ್ಮನ್ನೆಲ್ಲ ಬಿಟ್ಟು ಹೋಗಬೇಡಾ ಪ್ಲೀಸ್ ಅಂತ ಹೇಳಿದ ಹಾಗೇ ನನಗೆ ಭಾಸವಾಗುತ್ತದೆ. ಬಸ್ ನಲ್ಲಿ ಎರಡು ಘಂಟೆಗಳ ಪಯಣ ಮಾಡಿದರೂ, ಅದರಲ್ಲಿ ಇರುವ ಖುಷಿ ಇನ್ನು ಮೇಲೆ ಸಿಗಲ್ಲವಲ್ಲ ಅಂತ ಒಂದು ಸಾರಿ ಬೇಸರವಾಗುತ್ತದೆ. ಮತ್ತೆ ಇದೆಲ್ಲ ನನ್ನ ಸ್ವಂತದ್ದ? ನೀನು ಮುಂದುವರೆಯಬೇಕು.ನಿಂತ ನೀರಾಗಬೇಡ ಅಂತ ನನ್ನ ಮನಸು ಎಲ್ಲೋ ಒಂದು ಕಡೆ ಎಚ್ಚರಿಸುತ್ತೆ.ಮೂರು ವರುಷಗಳಲ್ಲಿ ಪಡೆದುಕೊಂಡಿದ್ದು ಬಹಳಿದೆ. ಕಳೆದುಕೊಂಡಿದ್ದು ಏನೂ ಇಲ್ಲ.ಬರೀ ಗಳಿಕೆ.ಮೊದಲ ಜಾಬು ,ಅಂದರೆ ಏನೋ ವಿಶೇಷ ಪ್ರೀತಿ.ಅಪ್ಪ ಅಮ್ಮನ ನಂತರ ಇದೇ ನನ್ನ ಅನ್ನದಾತ.ನನ್ನ ಜಾಬು ನನಗೆ ಬ್ರೆಡ್,ಬಟರ್ ,ಜಾಮ್,ಗೋಲ್ -ಗಪ್ಪ, ಹೊಸ ಡ್ರೆಸ್ಸು,ಮೊಬೈಲ್, ಕ್ಯಾಮೆರಾ,ಅಮ್ಮಂಗೆ -ಅಪ್ಪಂಗೆ-ತಂಗಿಗೆ ಗಿಫ್ಟುಗಳು,ಹುಡುಗನಿಗೆ ಕೊಟ್ಟ ನಾಯಿ ಮರಿ ಗೊಂಬೆ, ಎಲ್ಲದಕ್ಕೂ ದುಡ್ಡು ಒದಗಿಸಿದೆ. Thank you soo much .ಆದರೂ ಕಂಪನಿ ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವಾದರೂ, ಮುಂದಿನ ದಿನಗಳ ಬಗ್ಗೆ ನೆನೆಸಿಕೊಂಡು ಪುಳಕಗೊಳ್ಳುತ್ತೀನಿ.
ಯಾರಾದರೂ ಕಂಪನಿ ಬಿಟ್ಟು ಹೋಗುವಾಗ,ಯಾರದೋ ಹುಟ್ಟಿದ ದಿನ ಆದಾಗ,ಯಾರದೋ ಮದುವೆ ಆದಾಗ ಟೀಮಿನಲ್ಲಿ ಎಲ್ಲರ ಬಳಿ ಹಣ ಸಂಗ್ರಹ ಮಾಡಿ ಅವರಿಗೊಂದು ನೆನಪಿನ ಕಾಣಿಕೆಯನ್ನು ಕೊಡೋದು ಅಭ್ಯಾಸ.ನನಗೂ ಹಾಗೊಂದು ಬೀಳ್ಕೊಡುಗೆ ಸಮಾರಂಭವನ್ನು ಇಟ್ಟುಕೊಳ್ಳಲು ಇವರೆಲ್ಲ ಗುಟ್ಟು ಗುಟ್ಟಾಗಿ ದುಡ್ಡು ಸಂಗ್ರಹ ಮಾಡುತ್ತಿರುವುದು ನನ್ನ ಗಮನಕ್ಕೆ ಬರುತ್ತಿದೆ.ಈಗಾಗಲೇ ಎಲ್ಲರು ಸೇರಿ ಒಂದು ದೊಡ್ಡ ಡಬ್ಬಿಯಲ್ಲಿ ಚಂದನೆ ,ಬಣ್ಣ ಬಣ್ಣದ ಹೊಳೆಯುವ ಕಾಗದದಲ್ಲಿ ಸುತ್ತಿ,ಅದಕ್ಕೊಂದು ಲೇಬೆಲ್ ಹಚ್ಚಿ ಇಟ್ಟುಕೊಂಡಿದ್ದಾರೆ."ನಾಳೆ ನನ್ನ ಫೇರ್ವೆಲ್ ಕಣೋ.ಹೊಸ ಡ್ರೆಸ್ ಕೊಳ್ಳಲಾ ಅಂತ ನೋಡ್ತಾ ಇದೀನಿ ಅಂತ ಹುಡುಗನಿಗೆ ಹೇಳಿದರೆ, 'ಎಂತದೂ ಬೇಡ.ಇದ್ದಿದ್ ಡ್ರೆಸ್ಸು ಹಾಕಂಡು ಹೋಗು ಸಾಕು.ಏನ್ ಭಾರಿ!!.:-)." ಅಂತಾನೆ.ಇಲ್ಲಿಂದ ಬಿಟ್ಟು ಹೋಗಲು ಬೇಸರ ಆಗುತ್ತಿದ್ದರೂ( ಬೇಸರ ಅನ್ನೋಕಿಂತ mixed feelings ಅನ್ನಬಹುದು )ಹೇಳಿಕೊಳ್ಳಲು ಅವನು,ಮತ್ತು ಅಪ್ಪ ಅಮ್ಮ ಎಲ್ಲರೂ ಇದ್ದಾರೆ ಅನ್ನುವ ನೆಮ್ಮದಿ ಬಿಟ್ಟರೆ ಇನ್ನೇನು ಅಲ್ಲ.ಎಲ್ಲವೂ ಚೆನ್ನಾಗಿದೆ.ಯಾಕೆ ಬಿಡುತಿದ್ದೀಯ ಎಂದು ಯಾರಾದ್ರು ಕೇಳಿದರೆ ನನ್ನ ಬಳಿ ಉತ್ತರ ಇಲ್ಲ. ಪಯಣ ನಾಳೆಯಡೆಗೆ.ಹೊಸ ಕನಸಿನೆಡೆಗೆ.
ರೋಬರ್ಟ್ ಫ್ರಾಸ್ಟ್ ಅವರ ಕವನದ ಸಾಲುಗಳು ನೆನಪಾಗುತ್ತಿವೆ.
"The woods are lovely, dark, and deep,
But I have promises to keep,
And miles to go before I sleep,
And miles to go before I sleep. "
ನನಗಾಗಿ ತಂದ ಡಬ್ಬಿಯಲ್ಲಿ ಏನಿರಬಹುದೋ ಗೊತ್ತಿಲ್ಲ.ಇಲ್ಲಿಂದಾನೆ ಇಣುಕುತ್ತಾ ಇದೀನಿ!!...ಸರ್ವೇ ಜನಃ ಸುಖಿನೋ ಭವಂತು!!..:-)
ಸೋಮವಾರ, ನವೆಂಬರ್ 08, 2010
ಮಾತನ್ನು ಹೇಳುತ್ತಾ - ಎರಡು ವರುಷಗಳು!!

ನಾನು ಯಾರಾದರು ನಾವಲ್ಲಿ ಹೋಗುತ್ತಿದ್ದೇವೆ.ಇಲ್ಲಿ ಹೋಗುತ್ತಿದ್ದೇವೆ..ನಿನಗೆ ಏನು ತರಬೇಕು ಅಂತ ಕೇಳಿದಾಗ,"ನನಗೆ ನೈಲ್ ಪೋಲಿಷ್ ತಗೊಂಡು ಬನ್ನಿ"..ಮತ್ತೇನೂ ಬೇಡ ಅಂತ ಹೇಳೋದು.ಸುಮಾರು 35-40 ಬಣ್ಣದ ನೈಲ್ ಪೋಲಿಷ್ ಬಾಟಲಿಗಳು ಇವೆ ನನ್ನ ಬಳಿ.ಅದೇನೋ ನನಗೆ ಬಹಳ ಪ್ರೀತಿ. ಸ್ವಚ್ಛವಾಗಿ ತೊಳೆದುಕೊಂಡ, ಬೆಳೆಸಿದ ಉಗುರುಗಳಿಗೆ ಬಣ್ಣ ಹಚ್ಚಿಕೊಂಡಾಗ ಅದೇನೋ ಒಂತರಹ ಹೇಳಿಕೊಳ್ಳಲಾಗದ ಖುಷಿ ಆಗುತ್ತದೆ ನನಗೆ.ಖುಷಿ ಪಡುವಂತಹ ಕ್ಷಣಗಳನ್ನು ಬಿಡುವುದುಂಟೆ? ಅದಕ್ಕೆಂದೇ ಅವನ್ನು ನನ್ನದಾಗಿಸಿಕೊಂಡೆ. ಚಿಕ್ಕಂದಿನಲ್ಲಿ ಬಾಟಲಿ ಅರ್ಧ ಖಾಲಿ ಆದ ಕೂಡಲೇ ನೀರನ್ನು ಹಾಕಿ ಅದನ್ನು ತುಂಬಿಸುತಿದ್ದೆ. ಅದು ಹಾಳಾಗಿ ಉಗುರುಗಳಿಗೆ ಹಚ್ಚಲು ಬಾರದೇ ಅಳುತಿದ್ದಾಗ ,ಅಪ್ಪ ಬಂದು "ಹೋಗ್ಲಿ ತಗ...ಆಳಡ ಮಗಾ,ನಿಂಗೆ ಹೊಸಾ ನೈಲ್ ಪೋಲಿಷ್ ಕೋಡ್ಸ್ತಿ.ನೀರು ತಾಗ್ಸಿದ್ರೆ ಹಾಳಗ್ತು.ನೀರ್ ತಾಗ್ಸಡ ..ಫ್ರಿಡ್ಜ್ ನಲ್ಲಿ ಇಟ್ಕ "ಅಂತ ಹೇಳ್ತಿದ್ರು.
ಹ್ಮ್!! ..ಹೌದು .ಈ ನೈಲ್ ಪೋಲಿಷ್ ಹೇಗೆ ಬಂದಿರಬಹುದು? ಎಂಬ ಯೋಚನೆ ಬಂದಿದ್ದು ತೀರಾ ಇತ್ತೀಚೆಗೆ ! ಮಾರುಕಟ್ಟೆಯಲ್ಲಿ ದೊರೆಯುವ ಬಣ್ಣ ಬಣ್ಣದ ನೈಲ್ ಪೋಲಿಷ್ ಗಳಿಗೆ ಮನ ಸೋಲದೆ ಇರುವವರೇ ಇಲ್ಲ. ನೈಲ್ ಪೋಲಿಷ್ ಪ್ರಾಚೀನ ಕಾಲದಿಂದಲೂ ಪ್ರಚಲಿತ. ಪ್ರಾಚೀನ ಚೀನಾದಲ್ಲಿ ಮೊದಲ ಬಾರಿ ಇದರ ಆವಿಷ್ಕಾರವಾಯಿತು.ಆಮೇಲೆ ಕಾಲಕ್ರಮೇಣ ಬೇರೆ ದೇಶಗಳಿಗೆ ರಾವಾಣೆಯಾಯಿತಂತೆ.ಆಗಿನ ಕಾಲದಲ್ಲಿ ಇದು ಕೇವಲ ಫ್ಯಾಶನ್ ಗಾಗಿ ಅಷ್ಟೇ ಮೀಸಲಾಗದೆ, ಒಬ್ಬ ವ್ಯಕ್ತಿಯ ಅಂತಸ್ತನ್ನು ತೋರಿಸುತಿತ್ತು . ಒಂದೊಂದು ಬಣ್ಣಕ್ಕೆ ಒಂದೊಂದು ಅರ್ಥಗಳಿದ್ದವು. ಶ್ರೀಮಂತರು ತಮಗೆ ಬೇಕಾದ ಬಣ್ಣವನ್ನು ಧರಿಸಬಹುದಾಗಿಯೂ ,ಬಡವರು ಯಾವಾಗಲೂ ಮಣ್ಣಿನ ಬಣ್ಣವೋ,ಅಥವಾ ತೀರಾ ಉಗುರಿಗಿಂತ ಬಿನ್ನವಾಗದಂತಹ ಬಣ್ಣವನ್ನು ಹಚ್ಚಬೇಕಾಗುತಿತ್ತು.. ಕೆಲವೊಂದು ಬಣ್ಣಗಳನ್ನು ಕೇವಲ ಹಬ್ಬ, ತಿಥಿ, ಮದುವೆ ಮುಂತಾದ ಕಾರ್ಯಕ್ರಮಗಳಿಗಾಗಿಯೇ ಎತ್ತಿಟ್ಟಿದ್ದರು. ಹೀಗೆ ಇದು ಒಂದು ರೀತಿಯಲ್ಲಿ ಧಾರ್ಮಿಕ ಸಂಕೇತವೂ ಆಗಿತ್ತು ಎಂದರೆ ತಪ್ಪಾಗಲಾರದು.
ಆದರೆ ಇತ್ತೀಚಿನ ದಿನಗಳಲ್ಲಿ ಇದು ಧಾರ್ಮಿಕ ಸಂಕೇತವಾಗಿ ಉಳಿದಿಲ್ಲ.ಎಷ್ಟೋ ಕಂಪನಿಗಳು ನೈಲ್ ಪೋಲಿಷ್ಅನ್ನೇ ಮುಖ್ಯ ಉತ್ಪನ್ನವನ್ನಾಗಿ ಮಾಡಿಕೊಂಡಿದೆ. ಲಾಕ್ಮೆ, ಎವೊನ್ ,ಎಲ್ಲೇ 18 ಇನ್ನೂ ಅನೇಕ ಕಂಪನಿಗಳು ನೈಲ್ ಪೋಲಿಷ್ ತಯಾರಿಕೆಯಲ್ಲೆ ಹೆಸರುವಾಸಿಯಾಗಿವೆ .15 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿ ಬೆಲೆ ಬಾಳುವ ನೈಲ್ ಪೋಲಿಶಗಳು ಅಂಗಡಿಗಳಲ್ಲಿ ದೊರೆಯುತ್ತಿವೆ. ಎಲ್ಲರೂ ಕೊಳ್ಳಬಹುದಾದ ಬೆಲೆಗಳಲ್ಲಿ. ಈಗ ಇದನ್ನು ಕೇವಲ ಫ್ಯಾಶನ್ ,ಮತ್ತು ಕೈ -ಕಾಲುಗಳ ಸೌಂದರ್ಯ ವೃದ್ಧಿ ಸಾಧನ ಎಂದಷ್ಟೇ ನೋಡಲಾಗುತ್ತದೆ ಎಂಬುದು ಏನೋ ವನ್ ತರಹ ಸಮಾಧಾನಕರ ವಿಷಯವೇ ಅಂತ ಹೇಳಬಹುದು.ಇಲ್ಲಿಗೆ ನೈಲ್ ಪೋಲಿಷ್ ಪುರಾಣ ಮುಕ್ತಾಯವಾಯಿತು.
********

ದೀಪಾವಳಿಯ ರಂಗು ರಂಗಿನ ಬೆಳಕುಗಳಲ್ಲಿ, ಎಲ್ಲಿ ನೋಡಿದ್ರೂ ಜಗಮಗಿಸುವ ಲೈಟಿನ ಸರಗಳು,ಸಿಹಿ ತಿಂಡಿಗಳು, ಹೊಸ ಬಟ್ಟೆಗಳು, ಹುಡುಗನ ಕಾಲ್ ,ಮೆಸ್ಸೇಜುಗಳು, ಆಗಾಗ ಬರುವ ಮಳೆಗಳು ,ಅಮ್ಮ-ಅಪ್ಪನ ಶುಭಾಶೀರ್ವಾದಗಳು, ತಂಗಿಯ ಶುಭಾಶಯಗಳು,ಸ್ನೇಹಿತರ ಮೈಲ್ಗಳು,ಪಟಾಕಿಗಳು ,ಅಲಂಕಾರಗಳು, ಟಿವಿಯಲ್ಲಿ ಬರುವ ಹಬ್ಬದ ವಿಶೇಷ ಕಾರ್ಯಕ್ರಮಗಳು, ಪಿಜಿಯಲ್ಲಿ ನಡೆಯುವ ಮೆಹೇಂದಿ ಕಾರ್ಯಕ್ರಮಗಳು, ಹೊರಗಿನಿಂದ ತರಿಸಿದ ಹೋಳಿಗೆಗಳು ,ಇವೆಲ್ಲದರ ಮಧ್ಯೆ ನನ್ನ ಬ್ಲಾಗ್ ಮಗೂಗು ಎರಡು ವರ್ಷ ಆಯ್ತು. ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ ಸರಿಯಾಗಿ ಎರಡು ವರುಷಗಳು!!
ಬರೆದ ಬರಹಗಳು ಎಷ್ಟರ ಮಟ್ಟಿಗೆ ಓದಲು ಸಹ್ಯವೋ ನನಗಂತೂ ಖಂಡಿತ ತಿಳಿದಿಲ್ಲ. ಬರೆದದ್ದಷ್ಟೇ ಗೊತ್ತು. ಬ್ಲಾಗ್ ನಿಂದಾಗಿ ಒಳ್ಳೇ ಸ್ನೇಹಿತರು, ಅಣ್ಣಂದಿರು, ಅಕ್ಕಂದಿರೂ, ತಂಗಿಯರು,ತಮ್ಮಂದಿರು ಹೀಗೆ ಇನ್ನೂ ಹಲವಾರು ಸಿಕ್ಕಿದ್ದಾರೆ. ಬ್ಲಾಗ್ ನನಗೆ ಯಾವತ್ತಿದ್ದರೂ ಖುಷಿ ಕೊಡುವ ಸ್ನೇಹಿತ. ನನ್ನ ಮಾತನ್ನು ಕೇಳಿಸಿಕೊಳ್ಳುವ ಜಾಣ. ಒಂದೊಂದು ಬರಹವೂ ನನಗೆ ಅಷ್ಟಿಷ್ಟು ಖುಷಿ ಕೊಟ್ಟವೆ. ಎಲ್ಲರೂ ಬರೆಯುತ್ತಾರೆ ಅಂತಲೋ, ಅಥವಾ ಇನ್ಯಾರೊಂದಿಗೋ ಸ್ಪರ್ಧೆಗಾಗಿ ನಾನು ಖಂಡಿತ ಬರೆಯೋದಿಲ್ಲ. ಬರೆಯೋಕೆ ನಂಗಿಷ್ಟ.
ಸುಮಾರು ಜನ ಚೆನ್ನಾಗಿ ಬರೆಯುತ್ತಿಯ ಅಂದರು. ಇನ್ಯಾರೋ ಏನು ಬರಿತಿಯ. ಬರೀ ಭಾವನೆಗಳ advertisement ಅಂದರು.ಹಾಗೆ ಹೇಳಿದವರು ಇನ್ಯಾರದೋ ಬ್ಲೋಗಿಗೆ ಚಪ್ಪರಿಸಿಕೊಂಡು ಕಾಮೆಂಟ್ ಹಾಕಿದರು! ಇಂಥವರ ಬಗ್ಗೆ ಅಸಡ್ಡೆ ಇದೆ. ಹೋಗ್ಲಿ ಬಿಡಿ,ಮನಸು ಹಾಳು ಮಾಡಿಕೊಳ್ಳೋದು ಬೇಡ. ಒಳ್ಳೇದು ,ಕೆಟ್ಟದ್ದು ಎರಡನ್ನೂ ಸ್ವೀಕರಿಸಲು ಬರಬೇಕು ಅಲ್ಲವ? ಯಾರು ಏನೇ ಹೇಳಿದರು ನಾನು ಮಾತ್ರ ನನ್ನ "ಮನಸಿನ ಮಾತುಗಳನ್ನು" ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ .ನಾನು ನಿಮ್ಮೆಲ್ಲರ ಬ್ಲಾಗುಗಳನ್ನು ಓದುತ್ತೇನೆ.ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೇನೆ.ನಿಮಗೆ ,ನಿಮ್ಮ ಬ್ಲಾಗಿನ ಮೇಲಿನ ಪ್ರೀತಿ ನನಗೂ ಬರೆಯುವ ಉಮೇದಿ ಹೆಚ್ಚಿಸುತ್ತದೆ. ಯಾರು ಏನು ಬೇಕಾದರೂ ಅಂದುಕೊಳ್ಳಲಿ.ಸಹನೆಯಿಂದ ಕೇಳಿಸಿಕೊಳ್ಳಲು ನೀವಿದ್ದೀರಿ ಎಂಬ ನಂಬಿಕೆ ನನಗಿದೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಇಲ್ಲದಿದ್ದರೆ ಖಂಡಿತ ನಾನು ಬರೆಯುತ್ತಿರಲಿಲ್ಲ. ನಿಮ್ಮೆಲ್ಲರ ಪ್ರೀತಿಗೆ, ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.ಪ್ರೀತಿ ಹೀಗೆ ಇರಲಿ .ಎಲ್ಲರಿಗೂ ಶುಭವಾಗಲಿ.

Love you all....
ಪ್ರೀತಿಯಿಂದ,
ದಿವ್ಯಾ...:-)
(ಚಿತ್ರಕೃಪೆ: ಅಂತರ್ಜಾಲ)
ಮಂಗಳವಾರ, ಅಕ್ಟೋಬರ್ 12, 2010
ಅವರವರ ಭಾವಕ್ಕೆ!
ಮನೆಯಲ್ಲಿ ನೆಲ ಒರೆಸುವಾಗ, ಗೋಡೆಯ ಮೂಲೆಯನ್ನು ಸರಿಯಾಗಿ ಒರೆಸದೆ ಸ್ವಲ್ಪ ಧೂಳು ಇದ್ದುದರಿಂದ ನಿನ್ನ ಹತ್ತಿರ ಬೈಸಿಕೊಂಡಿದ್ದೇನೆ ಅಲ್ವಾ?ಶಾಲೆಯಲ್ಲಿ ಎಲ್ಲ ಹುಡುಗರೂ fail ಆದರೂ ಸಂತೋಷದಿಂದ ಇರುತಿದ್ದಾಗ, ನನಗೇ ಕಡಿಮೆ ಅಂಖ ಬಂದಿದೆ ಅಂತಾನೇ ಬೇಸರದಿಂದ ಇರುತಿದ್ದೆ ಅಲ್ವಾ?ಎಷ್ಟೋ ಸಾರಿ ಸ್ನೇಹಿತೆಯರು birthday ಪಾರ್ಟಿ ,ಅದು ಇದು ಅಂತ ಕರೆಯಲು ಬಂದಾಗ,ನಿಮ್ಮ ಮುಂದೆಯೇ ನಿರಾಕರಿಸಿದ್ದೆನಲ್ಲ. ನಾನಾಯ್ತು ,ನನ್ನ ಪಾಡಾಯ್ತು ಅಂತ ಇರುತಿದ್ದೆನಲ್ಲ.ಇಂಥ ಮಕ್ಕಳು ಇನ್ನೂ ಎಷ್ಟಿದ್ದರೂ ಏನೂ ತೊಂದರೆನೇ ಇಲ್ಲ ಅಂತ ನೀವೂ ಉದ್ಗಾರ ಎತ್ತಿದ್ದಿರಲ್ಲ.ನೀನು ದಿನಾನು ದೇವಸ್ಥಾನಕ್ಕೆ ಹೋಗು, ದೇವ್ರೇ ಅಲ್ದಾ ಎಲ್ಲ ಅಂತ ಹೇಳುತಿದ್ದಾಗ, ಒಮ್ಮೊಮ್ಮೆ ಯಾಕೆ ಈ ತರ ದೇವ್ರು ಅಂತಾರೆ ,ನಾನು ಪರೀಕ್ಷೆಗೆ ಓದದಿದ್ದರೆ ,ದೇವರು ಬರೆದುಕೊಡುತ್ತಾನೆಯೇ?ಅಂತ ಮನಸಲ್ಲಿ ಅನ್ನಿಸಿದರು,ನಿಮ್ಮ ಇಷ್ಟಕ್ಕೆ ವಿರೋಧ ಮಾಡಬಾರದು ಅಂತ ಸುಮ್ಮನೆ ಹೋಗಿಲ್ಲವ?
ಇದೆಲ್ಲ ಒಂದು ಕಡೆಯಾದರೆ,ಕೆಲಸ ಸಿಕ್ಕಿ ಈ ಕಡೆಗೆ ಬಂದಾಗ ಇನ್ನೊಂದು ದ್ವಂದ್ವ.ಇಲ್ಲಿ ವಾರಕ್ಕೆ ಒಂದು ಸಾರಿ disco night ಆಗುತ್ತದೆ.ಎಲ್ಲರೂ ದೊಡ್ಡ ಸಂಗೀತಕ್ಕೆ ಹುಚ್ಚರಂತೆ,ಹುಡುಗ ಹುಡುಗಿಯರು ಎದಿರು ಬದಿರು ನಿಂತು ಕುಣಿಯುತ್ತಾರೆ.ದಣಿಯುತ್ತಾರೆ. ನಾನು ಒಂದು ಸಾರಿ ಇದನ್ನು ನೋಡಿ ಥೂ! ಎಂದು ಹಾಗೆ ಹೊರಟುಹೋಗಿದ್ದೆ.ಇದೆಲ್ಲ ನಮ್ಮ ಸಂಸ್ಕೃತಿ ಅಲ್ಲ ಎನ್ನುವ ಧೋರಣೆ ಮನದಲ್ಲೊಂದು ಕಡೆ. ಆ ದಿನ ನಾನು ಹಣೆಗೆ ಹಚ್ಚಿಲ್ಲದಿದ್ದಾಗ,ಗೆಳತಿ ನೀನು ಹಣೆಗೆ ಹಚ್ಚಿಕೋ.ಇಲ್ಲಾಂದರೆ ಚೆನ್ನಾಗಿ ಕಾಣೋಲ್ಲ ಎಂದಾಗ, ನಾನೇ ನನ್ನಷ್ಟಕ್ಕೆ, ಎಲ್ಲೋಯ್ತು ನನ್ನ ಸಂಸ್ಕ್ರತಿ ಆದರ್ಶಗಳು? ಎಂದು ಕೇಳಿಕೊಂಡಿದ್ದೆ.ಒಮ್ಮೊಮ್ಮೆ ನನಗೂ ಅನ್ನಿಸಿದ್ದಿದೆ.ಕೆಲವು ಹುಡುಗಿಯರ ಹಾಗೆ low waist jeans ಹಾಕಿಕೊಂಡು ,ಅರ್ಧ ಮುಚ್ಚಿದ ಸೊಂಟವನ್ನು ತೋರಿಸಿಕೊಂಡು,ಯಾರದೋ ಬೈಕಿನಲ್ಲಿ ಅಪ್ಪಿಕೊಂಡು ಕುಳಿತು ಹೋಗಬೇಕು ಅಂತೆಲ್ಲ.ಆದರೆ ನನಗೇ ಅಂಥ ದೈರ್ಯ ಆಗಲಿ,ನಾಚಿಕೆ ಬಿಟ್ಟು ಹೋಗುವುದಾಗಲೀ ಗೊತ್ತಿಲ್ಲ ಅನ್ನುವುದು ನಿಮಗೇ ಗೊತ್ತು. ಏನಿದ್ದರೂ ನನ್ನದು ಬಾಯಲ್ಲಿ ಬಣಕಾರ!ನಿಮಗಿಷ್ಟ ಅಂತ ಕಾಲೇಜಿಗೆ ಹೋಗುವ ದಿನಗಳಲ್ಲಿ ಉದ್ದ ಜಡೆ ಬಿಟ್ಟುಕೊಂಡರೂ ಆಮೇಲೆ ಅದನ್ನು ಕತ್ತರಿಸಿದ್ದು! ಇಲ್ಲಿ ತುಂಬಾ ಜನ ಇಲ್ಲಿನ ರಂಗು ರಂಗಿನ ಬದುಕಿಗೆ ಮರುಳಾಗುತ್ತಾರೆ. ಆದರೆ ನನಗೇ ಯಾಕೆ ಇಂತವೆಲ್ಲ ಇಷ್ಟವೇ ಆಗುವುದಿಲ್ಲ??ಆವತ್ತು ನಾರಾಯಣ ಕೆಲಸದ training ನಿಮಿತ್ತ ಬೆಂಗಳೂರಿಗೆ ಬಂದಾಗ,ಎಂದೋ ಕಾಲೇಜಿನಲ್ಲಿದ್ದಾಗ ಹೇಳಿದ ಮಾತು, ನಿನಗೆ job ಸಿಕ್ಕಾಗ ನನಗೇ ಒಂದು teddy bear ಕೊಡಿಸಬೇಕು ಅಂತ ಹೇಳಿದ್ದ ನಾನು, ಮರೆತಿದ್ದೆ.ಆದರೆ ಅವನ memory power ಗೆ ಕೊಡಬೇಕು. ಬರುತ್ತಿದ್ದಾಗ teddy bear ಜೊತೆಯಲ್ಲೇ ಬಂದಿದ್ದನಲ್ಲ.ಅವರೆಲ್ಲರ ಜೊತೆಗೂಡಿ ಗರುಡ ಮಾಲ್ ಗೆ ಹೋಗೋದೇನೋ ಹೋದೆ,ಆದರೆ ಮೊದಲ floor ನಲ್ಲೆ ನಾನು ಇನ್ನೂ ಮೇಲೆ ಬರಲ್ಲ. ನೀವು ಹೋಗಿ ಬನ್ನಿ.ನಾನು ಇಲ್ಲೇ ಇರುತ್ತೇನೆ ಎಂದರೂ ಬಿಡದೆ, ಗೊತ್ತೇ ನಿನಗೆ escalator ಅಂದರೆ ಭಯ.ನಾವು ಕೈ ಹಿಡಿದುಕೊಳ್ಳುತ್ತೇವೆ ಬಾ ಎಂದರೂ , ಎರಡನೇ ಮಹಡಿ ಹತ್ತಿ ಹಠ ಹಿಡಿದು ಬಿಟ್ಟೆ.ನಾನು ಬರೋಲ್ಲ ಎಂದು.ಪಾಪ ! ಅವರು ಹೋಗಿ ಬಂದರು. ಇಲ್ಲಿ ಇದ್ದಿದ್ದು ಸಾಕು ಯಾವುದಾದರು ಪಾರ್ಕಿಗೆ ಹೋಗಣ ,ಮಾತಾಡೋಣ, ಅಂತ ಕೋಪಿಸಿಕೊಂಡ ಮೇಲೆ ಅಲ್ಲಿಂದ ಕದಲಿದ್ದು ಅವರೆಲ್ಲ.
ಹೊಸತಾಗಿ PG ಗೆ ಬಂದ ಹುಡುಗಿಗೆ ಇಡೀ ಬೆಂಗಳೂರನ್ನು ನೋಡೋ ಉಮೇದಿ. ಜೊತೆಗಾರ್ತಿ ನಾನಾಗುತ್ತಿನೇನೋ ಅನ್ನುವ ಹಂಬಲ. ನೀನು ಮೂರು ವರುಷ ಆಯ್ತು ,ಇನ್ನೂ ಬೆಂಗಳೂರನ್ನು ನೋಡಿಲ್ವಾ?ಕೇಳಿದರೆ PG ಹತ್ತಿರ ಇರುವ ಪಾರ್ಕಿಗೆ ಕರೆದೊಯ್ಯುತ್ತಿಯ.ಜೊತೆಗೆ ಆ ಜೋಳ ಬೇರೆ ತಿನ್ನಲೇ ಬೇಕು ಅಂತ ಹಠ ಅಂತ ಹುಸಿ ಮುನಿಸ್ಕೊತಾಳೆ.ಏನು ಮಾಡಲೇ ಗೆಳತೀ? ,ನಾನು ಇರುವುದೇ ಹೀಗೆ ಅಂತ ನನ್ನ ಸಮರ್ಥನೆ.ಅಷ್ಟರಲ್ಲೇ ಜೊತೆಗಾರರನ್ನು ಹುಡುಕಿಕೊಂಡಿರುತ್ತಾಳೆ.ಬೇಕಾದ್ದು ಸಿಗದಿದ್ದರೂ ಅದೇ ಬೇಕು ಎಂದು ಕಾಯುವ ನಿನ್ನಂಥ ಫೂಲ್ ನಾನಲ್ಲ ಎಂದು ತೋರಿಸಿಕೊಡುತ್ತಾಳೆ.ತೀರ ಬೇಸರ ಬಂದಾಗ ಒಬ್ಬಳೇ ದೇವಸ್ಥಾನಕ್ಕೆ ಹೋಗುವೆ. ಹೇಯ್ ! ನೀನು beer ಟೇಸ್ಟ್ ಮಾಡಿಲ್ವಾ ಇನ್ನೂ? ನಿಮ್ಮ ಆಫೀಸ್ನಲ್ಲಿ ಪಾರ್ಟಿ ನಡೆದಾಗ ನೀನು ಕುಡಿಯಲ್ವಾ?ಅಂದ್ರೆ ನಾನೇನು ಹೇಳಲಿ?ಪಾರ್ಟಿಗಳಿಗೆ ನಾನು ಹೋದರೆ ತಾನೇ!ಯಾರೋ ಹತ್ತು ವರುಷಗಳಿಂದ ಪ್ರೀತಿಸಿದ್ದರಂತೆ.ಮನೆಯವರಿಗೂ ತಿಳಿಯದಂತೆ.ಈಗ ಮನೆಯವರೂ ಒಪ್ಪಿ ಅವರ ಮದುವೆಯಂತೆ.ಇನ್ಯಾರೋ, ಈ ಮದುವೆಗಳಲ್ಲಿ ನಂಬಿಕೆ ಇಲ್ಲದಿರುವರಂತೆ.ಸಂಸಾರ ,ಜವಾಬ್ದಾರಿ ಬೇಡದೆ,living together relationship ಒಳ್ಳೇದು ಅಂತ ಸಮರ್ಥಿಸಿಕೊಳ್ಳುವವರು . ಇಂಥವರೆಲ್ಲ ಮಧ್ಯೆ ನಾನು... ಹುಚ್ಚು ,ಹುಚ್ಚು ಯೋಚನೆಗಳೊಡನೆ,ಭಾವನೆಗಳೊಡನೆ!
ಆದರೆ ಮೊನ್ನೆ ಯಾಕೋ ತಲೆ ಕೆಟ್ಟಿತು. ಈ ಆದರ್ಶಗಳು ಎಲ್ಲ ಜೀವನಕ್ಕೆ ಯಾಕೆ ಬೇಕು? ಜೀವನ ಹೀಗೆ ಅಂತ ಕಡಿವಾಣ ಯಾಕೆ ಹಾಕಿಕೊಳ್ಳಬೇಕು? ನಾನು ಎಲ್ಲರ ಹಾಗೆ ಎಂಜಾಯ್ ಯಾಕೆ ಮಾಡಬಾರದು ಅನ್ನ್ನಿಸಿದ್ದು ಸುಳ್ಳಲ್ಲ. ಈ ಆದರ್ಶಗಳನ್ನೆಲ್ಲ ಒಂದು ಭದ್ರವಾದ ಡಬ್ಬಿಯಲ್ಲಿ ತುಂಬಿಟ್ಟು ಅದನ್ನು ಹೂತು ಬಿಡೋಣ .ಅಪ್ಪಿ-ತಪ್ಪಿ ಕೂಡ ಅದು ಹೊರ ಬರದಂತೆ ಅನ್ನಿಸಿದ್ದು ಸುಳ್ಳಲ್ಲ. ಯಾವುದೋ ಹಳೆಯ ಗೆಳೆಯನ ನೆನಪಾಯಿತು. ಸಿಗುತ್ತೀಯ ಎಂದು ಕೇಳಿ, ಗಾಂಧಿ ಬಜಾರ್ನಲ್ಲಿ ಸಿಗುವ ಎಂದು ನಿರ್ಧರಿಸಿ, ಚಂದ ತಯಾರಾಗಿ , ಇದ್ದಿದ್ದರಲ್ಲೇ ಒಂದು ಚಂದದ ಸಲ್ವಾರ್ ಸಿಕ್ಕಿಸಿಕೊಂಡು ಹೊರಟೆ., ಬಸ್ಸು ಹತ್ತಿ ,ಅಲ್ಲಿ ಇಳಿದ ಮೇಲೆ ಅನ್ನಿಸಿತು! ಬೇಡ.ಇಷ್ಟು ದಿನಗಳು ಹೀಗೆ ಬದುಕಿದ್ದು ಸಂತೋಷವೇ ಕೊಟ್ಟಿದೆ.ಯಾರ ಮನಸ್ಸಿಗೂ ನೋವು ತಂದಿಲ್ಲ.ಇವಳು ಯಾಕಾದರೂ ಇದಾಳೋ ಅಂತ ಒಬ್ಬರ ಹತ್ತಿರವೂ ಅನ್ನಿಸಿಕೊಂಡಿಲ್ಲ. ನಿಮ್ಮ ಮನಸ್ಸಿಗೆ ಎಂದೂ ನೋವು ಮಾಡಿಲ್ಲ.ಇದೆಲ್ಲ ಯಾಕೆ ಬೇಕು ಅನ್ನ್ನಿಸಿ,ಅದೇ ಬಸ್ ಸ್ಟಾಪ್ನಲ್ಲಿ ನಿಂತುಕೊಂಡೇ, ಗೆಳೆಯನಿಗೆ ,ತಲೆ ನೋವು ನನಗೆ ಬರಲಾಗುವುದಿಲ್ಲ ಎಂದು ಸಂದೇಶ ಕಳಿಸಿ ಮತ್ತೆ ಮನೆಗೆ ಮರಳಿದ್ದೆ. ಇಷ್ಟು ವರುಷಗಳಲ್ಲಿ ನಾನು ಸಂಪಾದಿಸಿದ್ದು ನಿಮ್ಮ ಪ್ರೀತಿ ನಂಬಿಕೆ ಅಲ್ಲದೆ ಇನ್ನೇನು ಅಲ್ಲ.ಅದಕ್ಕಿಂತ ಹೆಚ್ಚು ನನಗೇನು ಬೇಕೂ ಆಗಿಲ್ಲ.ಮನಸಿಗೆ ಏನೋ ಅನ್ನಿಸಿ ಹೊರಟರೂ,ಮತ್ತೆ ಅದೇನೋ ಶಕ್ತಿ ನನ್ನ ಕಾಲನ್ನು ಹಿಂದಕ್ಕೆ ಎಳೆಯುತ್ತಲೇ ಇತ್ತು.ಭದ್ರವಾಗಿ ಹೂತಿಟ್ಟ ಆದರ್ಶಗಳ ಪೆಟ್ಟಿಗೆ ನನ್ನ ಕರೆಯುತ್ತಲೇ ಇತ್ತು,ಡಬ್ಬಿಯಲ್ಲಿ ಕೂಡಿಟ್ಟ ಆದರ್ಶಗಳು ನಮ್ಮನ್ನ ಮುಕ್ತ ಗೊಳಿಸು.ನಾವೂ ನಿನ್ನೊಂದಿಗೇ ಇರುತ್ತೇವೆ ಎಂದು ಕೂಗಿದಂತಾಯ್ತು.ಅದು ನಿನ್ನ ಪಾಲಿನ ಜೀವನ ಅಲ್ಲ ಎಂದು ಹೇಳುತ್ತಲೇ ಇತ್ತು .ನಿಮ್ಮ ಮೇಲಿನ ಪ್ರೀತಿ ಜಾಸ್ತಿ ಆಗುತ್ತಲೇ ಇದೆ.ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ....
ಗುರುವಾರ, ಸೆಪ್ಟೆಂಬರ್ 30, 2010
ಅಪ್ಪ,ಬಂದ್ ಮತ್ತು ನಾನು
ಅಲ್ಲಿ ಮಲಗಲು ಹೋಗುವ ಹೊತ್ತಿಗಾಗಲೇ ಎಂಟು ಘಂಟೆಯಾಗಿತ್ತು. ಸುತ್ತಲು ಬರೀ ನಿಶ್ಯಬ್ಧ. ಸೂಜಿ ಬಿದ್ದರೂ ಕೇಳುವಷ್ಟು.ಅಲ್ಲಿದ್ದವರೆಲ್ಲ ಮುಸುಕು ಹಾಕಿಕೊಂಡು ಮಲಗಿದ್ದರು.ನನಗ್ಯಾರೋ ಅಲ್ಲಿ ದೆವ್ವ ಓಡಾಡುತ್ತೆ ಅಂತೆಲ್ಲ ಹೇಳಿದ್ದರು.ಸ್ನೇಹಿತೆಯರು noodles ತೆಗೆದುಕೊಂಡು ಬರುತ್ತೇವೆ.ಸಾಕು .ಇವತ್ತು ಊಟ ಬೇಡ ಅಂದರು,ನನಗೂ ತಗೊಂಡು ಬನ್ನಿ ಅಂತ ಹೇಳಿ ಅಲ್ಲೇ ಕುರ್ಚಿಯಲ್ಲಿ ಕುಳಿತುಕೊಂಡೆ. ದೊಡ್ಡ ನಿಲುವುಗನ್ನೆಡಿ ಇತ್ತು.ಕಣ್ಣು ಮುಚ್ಚಿದೆ.ಗೆಜ್ಜೆ ಸಪ್ಪಳ ಆಯಿತು.ಬೆಚ್ಚಿದೆ.ನೋಡಿದರೆ ನನ್ನ ಗೆಜ್ಜೆ ಶಬ್ದ. ಮತ್ತೆ ಕಣ್ಣು ಮುಚ್ಚಲು ಧೈರ್ಯ ಆಗಲಿಲ್ಲ. ಅವನಿಗೆ ಮೆಸೇಜ್ ಮಾಡುತ್ತಾ ಕುಳಿತೆ.ಆದರೂ ಅಲ್ಲಿ ಮುಸುಕು ಹಾಕಿ ಮಲಗಿಕೊಂಡವರಲ್ಲಿ ಯಾರಾದರು ದೆವ್ವ ಇರಬಹುದೇ??ಹೀಗೆ ಎನೇನೋ ಯೋಚನೆ ಆಗುತ್ತಾ ಇದ್ದು.ಅವನ ಮೆಸೇಜ್ ಬರುತ್ತಿದ್ದಾಗ ಮನಸು ಸ್ವಲ್ಪ ಶಾಂತವಾಗುತಿತ್ತು. ಅಷ್ಟರಲ್ಲೇ ಸ್ನೇಹಿತೆಯರು ಬಂದರು. ಅಬ್ಬ!! ಅಂದುಕೊಂಡು noodles ತಿಂದು, ಸುಮಾರು ಹನ್ನೆರಡು ಘಂಟೆ ಒರೆಗೆ ನಿದ್ದೆ ಬರಲಿಲ್ಲ.ನನಗೇನೋ insecured ಅನ್ನಿಸ್ತಾ ಇತ್ತು. ತಕ್ಷಣ ಹಳೆ ನೆನಪುಗಳೆಲ್ಲ ಕಣ್ಣ ಮುಂದೆ ಬಂದು ನಿಂತವು.
*****
ನಾನು ಆಗ ಐದನೇ ಕ್ಲಾಸಿನಲ್ಲಿ ಓದುತಿದ್ದೆ. ಊಟಕ್ಕೆ ಎಲ್ಲರೂ ಜೊತೆಯಲ್ಲೇ ಕುಳಿತು ಮಾಡುವುದು ನಮ್ಮ ವಾಡಿಕೆ. ನಾನು,ಅಪ್ಪ,ಅಮ್ಮ ಮತ್ತೆ ತಂಗಿ. ಅಪ್ಪ ಹೇಳೋಕೆ ಶುರು ಮಾಡಿದರು -"ಕೃಷ್ಣನಿಗೆ ಹೆಣ್ಣು ಮಗು ಆತಡ.ನಂ ಎದ್ರಿಗೆ ಅವನ್ ಹೆಂಡ್ತಿ ಮನೆಯವರಿಂದ ಫೋನ್ ಬಂತು.ಸರಿಯಾಗಿ ಮಾತೂ ಆಡಲ್ಲೇ .ಹೆಂಡ್ತಿನ ನೋಡಲು ಹೋಗ್ತ್ನಿಲ್ಯದ"ಅಂತ. ಅವಾಗಲೇ ನನಗನ್ನಿಸಿತು. ಅಪ್ಪನಿಗೆ ಯಾವಾಗಲೂ ಗಂಡು ಮಗು ಬೇಕು ಅಂತ ಅನಿಸಿರಲಿಲ್ಲವೇ ಅಂತ?.ತಕ್ಷಣ ಅಪ್ಪನಿಗೆ ಕೇಳಿದ್ದೆ. ಅಪ್ಪ..ನಿಂಗೆ ಮಗಾ ಬೇಕು ಹೇಳಿರ್ಲ್ಯ? ಅಂತ.ಅಪ್ಪ ತಲೆಗೆ ಒಂದು ಹೊಡೆದು ಹೇಳಿದ್ರು."ನೀನ್ ಯಾಕೆ ಹಿಂಗೆಲ್ಲ ಕೇಳ್ತಾ ಇದ್ದೆ.ನಾ ಯಾವತ್ತರು ಹಂಗೆ ಮಾಡಿದ್ನ?ನೀನು ,ಮಧು ನಂಗೆ ಎರಡು ಕಣ್ಣಿದ್ದಂಗೆ .ನೀವೇ ನಂಗೆ ಗಂಡು,ಹೆಣ್ಣು ಎಲ್ಲಾ. ನಂಗೆ ಗಂಡಿಲ್ಲೆ ಹೇಳಿ ಬೇಜಾರ್ ಇಲ್ಲೇ ಅಂತ. "ಆವಾಗಲೇ ಸಮಾಧಾನ ಆಯಿತು ನಂಗೆ.ಆದ್ರೆ ಅಪ್ಪನಿಗೆ ನಾನು ಕೇಳಿದ್ದು ಇಷ್ಟ ಆಗಲಿಲ್ಲ ಅಂತನೂ ತಿಳಿಯಿತು.
ಅಮ್ಮನಿಗೆನೋ ಹೇಳೋದಿತ್ತು.ಅವಳ ಮುಖದಿಂದ ತಿಳಿತಿತ್ತು. ಅಪ್ಪ ಎದ್ದು ಹೋದ ಮೇಲೆ ಅಮ್ಮ ಶುರು ಮಾಡಿದರು." ನೀನ್ ಹುಟ್ಟಿದಾಗ ಏನು ಹೇಳಿಲ್ಲ ಯಾರು.ಆದ್ರೆ ಮಧು ಹುಟ್ಟಿದಾಗ ,"ಇದೂ ಹೆಣ್ಣೆಯ?"...ಅಂತ ಎಲ್ಲರೂ ವಿಷಾದ ಪಡ್ತಿದ್ರು.ಆದ್ರೆ ನಿನ್ ಅಪ್ಪ ಮಾತ್ರ ಒಂದು ದಿನಾನು ನಂಗೆ ಬೈಯಲ್ಲೇ.ನಿಂಗ ಪುಣ್ಯ ಮಾಡಿದ್ದಿ ಅಂಥ ಅಪ್ಪನ ಪಡಿಯಕೆ" ಅಂತ. ಹೌದು ಅಂತ ನನಗೆ ಜೀವನದ ಪ್ರತಿ ಘಟ್ಟದಲ್ಲೂ ಅನಿಸುತ್ತಾನೆ ಇದೆ.ಎಲ್ಲರೂ same ಅಪ್ಪನ ಹಂಗೆ ಇದ್ದೆ ನೋಡು ಅಂದಾಗ ಏನೋ ಖುಷಿ ಆಗತ್ತೆ ನಂಗೆ. ಅಪ್ಪನಿಗೆ ನಾಳೆ ವಿಶ್ ಮಾಡಬೇಕು ಅಂತ ಮನಸಿನಲ್ಲಿ ಅಂದುಕೊಳ್ತಾ ಕಣ್ಣು ಮುಚ್ಚಿಕೊಂಡವಳು ಬೆಳಗ್ಗೆ ಆರು ಘಂಟೆಗೆ ಅಲರಾಂ ಆದ ಮೇಲೇ ತೆರೆದಿದ್ದು.
ನನ್ನ ಅಪ್ಪನ 51 ನೆ ವರ್ಷದ ಹುಟ್ಟಿದ ದಿನ ಇಂದು. ಅವರಿಗೆ ನನ್ನ ಶುಭಾಶಯಗಳು...:-)

(ಚಿತ್ರಕೃಪೆ: ಅಂತರ್ಜಾಲ)
ಬುಧವಾರ, ಸೆಪ್ಟೆಂಬರ್ 29, 2010
ಹೆಸರಿನ ಹಂಗಿಲ್ಲದ್ದು - ೧
ಬಸ್ಸಿನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತು,
ಯಾವುದೋ ಲಹರಿಯಲ್ಲಿ ತೇಲುತ್ತಿದ್ದೆ,
ಸುಮ್ ಸುಮ್ನೆ ನನ್ನಷ್ಟಕ್ಕೆ ನಾನೇ ನಗುತಿದ್ದೆ,
ಆಮೇಲೇ ತಿಳಿದಿದ್ದು,
ಎದುರಿನ ಸೀಟಿನಲ್ಲಿ ಕೂತಿದ್ದ ಹುಡುಗ,
ನನ್ನೇ ಗುರಾಯಿಸುತಿದ್ದ ಎಂದು!
ನೀನು ರೆಡಿಯಾ?
ಜೀವನವೆಂಬ ನಾಟಕದಲ್ಲಿ,
ಸೀತೆಯ ಪಾತ್ರ ಹಾಕಲು ನಾನು ರೆಡಿ..
ಅಧುನಿಕ ಸೀತೆಯಲ್ಲವೋ,
ಪಕ್ಕಾ ರಾಮಾಯಣದ ಸೀತೆ,
ಆದರೆ ರಾಮಾಯಣದ ರಾಮನಾಗಲು ನೀನು ರೆಡಿಯಾ?
ಬುದ್ದಿವಂತಿಕೆ ಏನೋ!
ಎಲ್ಲರೂ ಹೇಳಿದರು,
"ನಾವು ಒಳ್ಳೆಯವರಾದರೆ,
ಜಗತ್ತೇ ಒಳ್ಳೇದು"
ಆದರೆ ಯಾಕೋ ನನಗೆ ಒಂದೊಂದು ಸಾರಿ
ಇದು ಸುಳ್ಳು ಅನಿಸುತ್ತದೆ.
ಏನೇ ಇರಲಿ, ಜಗತ್ತನ್ನು ಒಳ್ಳೇದು ಎಂದು ಅಂದುಕೊಂಡು,
ನಾವು ಒಳ್ಳೆಯವರಾಗೋದೆ ಬುದ್ದಿವಂತಿಕೆ ಏನೋ!
ಸ್ವರ್ಗಕ್ಕೆ ಕಿಚ್ಚು
ಸಂಜೆಯ ವೇಳೆ,
ದಿನವಿಡೀ ಕೆಲಸ ಮಾಡಿದ ಆಯಾಸ,
ನೈಸ್ ರೋಡಿನ ಮೇಲೆ ಪಯಣ,
ಇಕ್ಕೆಲದಲ್ಲಿ ಹಸಿರು ಗುಡ್ಡಗಳು,
ಆಗೊಮ್ಮೆ ಈಗೊಮ್ಮೆ ಕಾಣುವ ಹಕ್ಕಿಗಳು,
ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಾ,
ಹಾಡುಗಳನ್ನು ಕೇಳುತ್ತಾ ಮನೆಗೆ ಬರುತ್ತಿದ್ದರೆ,
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ!!
ಬಟ್ಟೆಯ ಸೇಲ್
ಬಟ್ಟೆಯ ಸೇಲ್ ಬಂದಲ್ಲಿಗೆ,
ಅಚಾನಕ್ಕಾಗಿ ಆ ದಾರಿಯಲ್ಲಿ ಹೋಗುತ್ತಿದ್ದಾಗ,
ಚೂಡಿದಾರ್ ಬಟ್ಟೆಗಳು, ಚೆನ್ನಾಗಿವೆ ಎಂದು ,
ನಾಲ್ಕು ಜೊತೆ ಕೊಂಡು ತಂದೆ.
ತಂದ ಕೂಡಲೇ,ಪ್ರಶ್ನೆಗಳು,
ರೇಟ್ ಎಷ್ಟು?ಎಲ್ಲಿಂದ ತಂದೆ?
ಸೇಲ್ ಇನ್ನೆಷ್ಟು ದಿನ?
ಸೇಲ್ ಇವತ್ತೇ ಕೊನೆಯ ದಿನ ಎಂದು ಹೇಳಲು,
ಹೊಟ್ಟೆಕಿಚ್ಚೆಲ್ಲ ಮಾತಿನ ರೂಪದಲ್ಲಿ ಹೊರ ಬಂತಲ್ಲ,
"ಬಟ್ಟೆ ಅಷ್ಟು ಚನಾಗಿರಲ್ಲ",
"ಎರಡು ಸಾರಿ ತೊಳೆದರೆ ಹಾಳಾಗತ್ತೆ "
ಅಬ್ಬ!! ಇವರ ಬುದ್ದಿಯೇ ಅಂತ ಅನ್ನಿಸಿ
ಸುಮ್ಮನಾಗದೆ ವಿಧಿ ಇರಲಿಲ್ಲ.
ನಾನು ನಿರುತ್ತರಿ
ಗೆಳತಿ ಹೇಳಿದಳು,
ನಡಿ ಆ ಕಡೆ ಹೋಗಿ ಹುಡುಗರನ್ನು,
ನೋಡಿಕೊಂಡು ಬರುವ.ನಾನಂದೆ,
ನೋಡಿ ಏನು ಮಾಡುವುದಿದೆ??
ಒಬ್ಬರು ಸಾಕು,ಹಾಗೆಲ್ಲ ನನಗಿಷ್ಟ ಆಗಲ್ಲ ಅಂತ.
ಅದಕ್ಕೆ ಅವಳು ಹೇಳಿದ್ದು,
ಅದೆಲ್ಲ ಮದುವೆ ಆದ ಮೇಲೆ ,
ಈಗ ನಾವ್ ಎಂಜಾಯ್ ಮಾಡಬೇಕು ಅಂತ.
ಅವಳ ಮಾತುಗಳಿಗೆ "ನಾನು ನಿರುತ್ತರಿ"
ಸೋಮವಾರ, ಸೆಪ್ಟೆಂಬರ್ 27, 2010
ನಾ ಮಾಡಿದ್ದು - ಉತ್ತರ.. :-)

ಭಾಗವಹಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು...:-)
ಹಾಗೆ ಕೆಲವೊಂದು ಹೊಸ ಬ್ಲಾಗಿಗರು ನನ್ನ ಬ್ಲಾಗಿಗೆ ಭೇಟಿ ಇತ್ತು ಉತ್ತರಿಸಿದ್ದೀರ .ನನ್ನ ಬ್ಲಾಗಿಗೆ ಸ್ವಾಗತ... :-)
ನನ್ನ ಪ್ರಶ್ನೆಗೆ ಸರಿಯಾದ ಉತ್ತರ..
ಅಂದರೆ ನಾನು ಮಾಡಿದ್ದು "ಕ್ಯಾರೆಟ್ ಬರ್ಫೀ " ಅಥವ "ಕ್ಯಾರೆಟ್ ಹಲ್ವಾ"
ಸಾಧಾರಣವಾಗಿ ಕ್ಯಾರೆಟ್ ಹಲ್ವಾ ಎಂದರೆ ಸ್ವಲ್ಪ ದ್ರವ ರೂಪದಲ್ಲಿರುವುದಕ್ಕೆ ಅದನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನಬೇಕಾಗುತ್ತದೆ. ಆದರೆ ನಾನು ಅದನ್ನು ಬಟ್ಟಲಿಗೆ ಸುರಿದು ವಜ್ರಾಕಾರದಲ್ಲಿ ಕತ್ತರಿಸುವುದರಿಂದ "ಕ್ಯಾರೆಟ್ ಬರ್ಫಿ " ಅತ್ಯಂತ ಸರಿ ಉತ್ತರ.
ಅತ್ಯಂತ ಸರಿ ಉತ್ತರ ಊಹಿಸಿದವರು " ಸುಬ್ರಹ್ಮಣ್ಯ "ಮತ್ತು " ಪ್ರಗತಿ ಹೆಗಡೆ ".ನಿಮ್ಮಿಬ್ಬರಿಗೂ CONGRATULATIONS !!..:-)
"ಕ್ಯಾರೆಟ್ ಹಲ್ವಾ"ಕೂಡ ಸಮೀಪದ ಉತ್ತರವಾದ್ದರಿಂದ ನಿಮಗೂ ಬಹುಮಾನ ಕೊಡುತ್ತೀನಿ.ಉಳಿದಂತೆ ಉತ್ತರಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ಕೊಡುತ್ತೇನೆ.
ಒಂದು ಚಪ್ಪಾಳೆ ನಿಮಗೆಲ್ಲರಿಗೂ... :-) ಉತ್ತರಗಳನ್ನು ಊಹಿಸಿ ನನ್ನಲ್ಲೂ ಲವಲವಿಕೆ ತಂದ ನಿಮಗೆಲ್ಲ ಧನ್ಯವಾದಗಳು.
ಬಹುಮಾನಗಳನ್ನು ಕೊಡಲು ಶೀಘ್ರವೇ ನಿಮ್ಮಲ್ಲರ ಮನೆಗಳಿಗೆ ಬರುವೆ. ಅಲ್ಲಿವರೆಗೂ ಕಾಯುತ್ತಿರಿ. ನಿಮ್ಮೆಲ್ಲರ ಪ್ರೋತ್ಸಾಹ,ಪ್ರೀತಿಗೆ ನನ್ನದೊಂದು thanks ... :-)
ಪ್ರೀತಿಯಿಂದ,
ದಿವ್ಯಾ:-)
(ಚಿತ್ರಕೃಪೆ: ಅಂತರ್ಜಾಲ)
ಮಂಗಳವಾರ, ಸೆಪ್ಟೆಂಬರ್ 21, 2010
ಹಾಗಿದ್ದರೆ ನಾ ಮಾಡಿದ್ದು ಏನು??
ಊಟದ ಜೊತೆ ಅದನ್ನ ಕೊಟ್ಟಾಗಲೇ
ನಾ ಅಂದುಕೊಂಡಿದ್ದೆ,
ಒಮ್ಮೆ ಮನೇಲಿ ಮಾಡಿ ನೋಡಲೇ ಬೇಕು ಅಂತ.
PG ಯ ಅತ್ತೆಗೆ ಮಾಡಲೇ? ಎಂದು ಅನುಮತಿ ಕೇಳಿದಾಗ,
ಎಲ್ಲರಿಗೂ ಆಗುವ ಹಾಗೆ ಮಾಡುವುದಾದರೆ ಮಾಡು ಅಂದರು.
ನನಗೂ ಅದೇ ಬೇಕಾಗಿದ್ದು.
ಹತ್ತಿರದಲ್ಲೇ ಇದ್ದ ಅಂಗಡಿಗೆ ಹೋಗಿ,
ಕೆಜಿ ಗೆ ನಾಲ್ಕು ರೂಪಾಯಿ ಕಡಿಮೆ ಮಾಡುವಂತೆ ,
ಚೌಕಾಶಿ ಮಾಡಿ ಮನೆಗೆ ತಂದೆ.
ಮನೆಗೆ ತಂದ ಕೂಡಲೇ ,ಅದರ ತಲೆ,ಬಾಲವನ್ನು ಕುಯಿದು,
ಹೊರಗಿನ ಅದರ ಚರ್ಮವನ್ನು ಸಣ್ಣಗೆ ತೆಗೆದು,ನೀರಿನಲ್ಲಿ ತೊಳೆದು,
ನುಣ್ಣಗೆ ತುರಿದು, ಕುಕ್ಕರಿನಲ್ಲಿ ಒಂದು ಸೀಟಿ ಹೊಡೆಸಿ,
ಬಾಣಲೆಯಲ್ಲಿ ಕಾಯುತ್ತಿದ್ದ ಬಿಸಿ ಹಾಲಿಗೆ ಇದನ್ನು ಬೆರೆಸಿ,
ಪೂರ್ಣ ಬೆಂದ ಬಳಿಕ ಸಕ್ಕರೆ ಹಾಕಿ,ಹಾಲು ಇಂಗಿದ ಬಳಿಕ,
ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ,
ತುಪ್ಪ ತಳ ಬಿಡುತ್ತಿರಲು ,ತುಪ್ಪದಲ್ಲೇ ಹುರಿದ ಗೋಡಂಬಿ,ದ್ರಾಕ್ಷಿ ಹಾಕಿ,
ಒಂದು ಹದಕ್ಕೆ ಬಂದಾದ ಮೇಲೆ,ತುಪ್ಪ ಸವರಿದ ಬಟ್ಟಲಿಗೆ ಅದನ್ನು ಹಾಕಿ,
ವಜ್ರಾಕಾರದಲ್ಲಿ ಅದನ್ನು ಕತ್ತರಿಸಿ, ಎಲ್ಲರಿಗೂ ತಿನ್ನಲು ಕೊಟ್ಟೆನಲ್ಲ!!
ಎಲ್ಲರು ಚನಾಗಿ ಮಾಡಿದೀಯ ಎಂದಾಗ ಖುಷಿ ಪಟ್ಟೆನಲ್ಲ,
ಹಾಗಿದ್ದರೆ ನೀವೇ ಹೇಳಿ ನಾನು ಮಾಡಿದ್ದು ಏನು ಅಂತ...
(*ಸರಿಯಾದ ಉತ್ತರ ಊಹಿಸಿದವರಿಗೆ, ಬಹುಮಾನ ಕೊಡುತ್ತೇನೆ.. :-))
ಸ್ನೇಹಿತರೆ comment moderation ಮಾಡಿಟ್ಟಿದ್ದೇನೆ .ಸೆಪ್ಟೆಂಬರ್ 27 ಕ್ಕೆ ಉತ್ತರಗಳನ್ನು ಪ್ರಕಟಿಸುವೆ.
ಶುಕ್ರವಾರ, ಸೆಪ್ಟೆಂಬರ್ 17, 2010
ಬಿಂದುಗಳು...
**** ಅವನು ಎದೆ ಉರಿ ಅಂತ ಹೇಳಿಕೊಂಡ. ಸ್ನೇಹಿತರೆಲ್ಲ ಭಗ್ನ ಪ್ರೇಮ ಇರಬೇಕು, ಹುಡುಗಿ ಕೈ ಕೊಟ್ಟಿರಬೇಕು ಎಂದು ಹೇಳಿ ನಕ್ಕರು.ಅವನೂ ನಕ್ಕ. ಆದರೂ ಎದೆ ಉರಿ ಕಡಿಮೆ ಆಗಲಿಲ್ಲ. ಡಾಕ್ಟರ್ ಮಾತ್ರ acidity ತೊಂದರೆ ಇದೆ. ಸರಿಯಾಗಿ ಸಮಯ ಸಮಯಕ್ಕೆ ಊಟ ಮಾಡು ಎಂದರು!!
**** ಪದಗಳಿಗೆ ಹಿಂಸೆ ಕೊಟ್ಟು, ಅವನ್ನು ಹಿಂದೂ ಮುಂದಾಗಿಸಿ ಒಂದು ಕ್ಲಿಷ್ಟ ಕವನ ಬರೆಯಬೇಕು , ಓದಿದ ಹಲವರಲ್ಲಿ ಕೆಲವರಿಗಷ್ಟೇ ಅರ್ಥ ಆಗುವ ಹಾಗೆ ಅಂತ ಪ್ರಯತ್ನ ಪಟ್ಟೆ. ಕವನ ಹುಟ್ಟಲಿಲ್ಲ. ಮನಸಿನ ಸತ್ಯ ಗೋಚರಿಸಿತು. ನೀನೇ 'straight forward' ಆಗಿರುವಾಗ ಕ್ಲಿಷ್ಟ ಕವನ ಹೇಗೆ ಸಾದ್ಯ? ಕೈಯಲ್ಲಿ ಆಗದೆ ಇದ್ರೆ ಹೇಳೋದು ಹೀಗಾ ?ಇರಬಹುದು !
**** ಕೆಲಸ ಮುಗಿಯುವವರೆಗೆ ಕೆಲವರಿಗೆ ಕೆಲವರೇ ಇಂದ್ರ-ಚಂದ್ರ.ಕೆಲಸ ಮುಗಿದ ಮೇಲೆ ಯಾರು ಇಂದ್ರ? ಯಾರು ಚಂದ್ರ?...ಬಲ್ಲವರಾರು?
**** ಹತ್ತು ಜನ ತಪ್ಪಿರುವ ಒಂದು ವಿಷಯವನ್ನು ಸರಿ ಎಂದು ವಾದಿಸುತ್ತಿರುವಾಗ , ನ್ಯಾಯದ ಪರವಾಗಿ ಮಾತಾಡಿದ ಒಂದು ದ್ವನಿ ಯಾರಿಗೂ ಕೇಳದೆ ಹೋಯಿತು. ಅದು ಅರಣ್ಯ ರೋಧನ!!
**** ಹೊಸತಾಗಿ ಬಂದ ಎದಿರು ಮನೆ ಹುಡುಗಿ ದಿನವೂ ಆತನನ್ನು ಗುರಾಯಿಸುತಿದ್ದಳು. ಇವನಿಗೋ ಕುತೂಹಲ. ದೈರ್ಯ ಮಾಡಿ ಒಂದು ದಿನ ಕೇಳಿಯೇ ಬಿಟ್ಟ. ಯಾಕೆ ನನ್ನ ಗುರಾಯಿಸುತ್ತಿಯ? ಅವಳಂದಳು.."ನಿನ್ನ ನೋಡಿದರೆ ಸತ್ತು ಹೋದ ನನ್ನ ಅಣ್ಣನ ನೆನಪು ಆಗುತ್ತೆ" ...ಹುಡುಗ ಮಾತಾಡದೆ ವಾಪಸ್ಸಾದ...
**** ಹುಡುಗ ಕೇಳಿದ ಹುಡುಗಿಗೆ..ನೀನ್ ಯಾಕೆ ಯಾವಾಗಲೂ ಕೈಗೊಂದು ಬಣ್ಣದ nailpolish ,ಕಾಲುಗಳಿಗೊಂದು ಬಣ್ಣದ nailpolish ಹಚ್ಚುತ್ತಿಯ ?..ಅಂತ. ಹುಡುಗಿ ನಕ್ಕು ಸುಮ್ಮನಾದಳು. ಅವನಿಗೇನು ಗೊತ್ತು? ಅವನು ಕೇಳಲಿ ಎಂದೇ ಅವಳು ಹಾಗೆ ಮಾಡುತ್ತಾಳೆ ಎಂದು..
**** ಸಾವಿರ ರೂಪಾಯಿ ಕೊಟ್ಟು fast track watch ಕೊಂಡು ಎಲ್ಲರೆದುರೂ ತೋರಿಸಿಕೊಂಡು ಮೆರೆದವನಿಗೇ ಸಮಯ ಪಾಲನೆ ಗೊತ್ತಿಲ್ಲ. watch ಯಾವುದಾದರೇನು ತೋರಿಸುವ ಸಮಯ ಒಂದೇ!
**** ನನಗೂ ಎಲ್ಲ ಬರುತ್ತೆ. ಬರುತ್ತೆ ಅಂತ ತೋರಿಸಿಕೊಳ್ಳಲು ಬರುವುದಿಲ್ಲ ಅಷ್ಟೇ . ಇನ್ನು ಮುಂದೆ ಬರುತ್ತೆ ನನಗೂ ಅಂತ ತೋರಿಸಿಕೊಳ್ಳಬೇಕು ಅಂತ ಆತ ನಿರ್ಧರಿಸುವಾಗಲೇ ಆತನಿಗೆ ವರುಷ ಅರವತ್ತು!
**** ಕೇಜಿಗಟ್ಟಲೆ ಬಂಗಾರ ಸುರಿದುಕೊಂಡು ಹೋದವಳಿಗೆ ಜನರ ಹೊಗಳಿಕೆಗೆ ಖುಷಿ ಆದರೂ ,ಒಳಗೊಳಗೇ ಅಯ್ಯೋ ಇವೆಲ್ಲ ನಿಜವಾಗಲು ಬಂಗಾರವೇ ಆಗಿದ್ದರೆ ಎಂಬ ಗುಟ್ಟು ಆಸೆ!
**** ಬೇಕರಿ ಎದಿರು ನಿಂತ ಹುಡುಗನ್ನ ಅಂಗಡಿಯಾತ ಕೇಳಿದ.. ಏನಪ್ಪಾ ಬೇಕು? ನನಗೆ ಆ ರಸ ಒಡೆಯುತ್ತಿರುವ ಹನಿ ಕೇಕ್ ಇಷ್ಟ, ಘಂ ಅನ್ನುತ್ತಿರುವ ಪಪ್ಸ್ ಇಷ್ಟ, ಆಲೂಗಡ್ಡೆ ಚಿಪ್ಸ್ ಇಷ್ಟ, ಡೈರಿ ಮಿಲ್ಕ್ ಚಾಕಲೇಟ್ ಇಷ್ಟ.. ಆಮೇಲೆ ಒಂದು ನಿಟ್ಟುಸಿರು ಬಿಟ್ಟು.. ಸದ್ಯಕ್ಕೆ ನನಗೆ ಈ ಅಡ್ರೆಸ್ ಎಲ್ಲಿ ಬರುತ್ತೆ ಹೇಳಿ... ಅಂದ..
**** ಚಂದ ಚಂದ ಎಂದು ಹುಡುಕುವುದು ಯಾಕೆ?ಕಪ್ಪಗಿದ್ದರೂ ನೇರಳೆ ಬಲು ಸಿಹಿ.ಕೆಂಪಗಿದ್ದರೂ ಅತ್ತಿ ಹಣ್ಣು ಹೊರಗೆ, ಒಳಗೆ ಮಾತ್ರ ಹುಳ-ಹುಳ .
**** ಅವಳು ಹಾಗೇ... ಅವಳಿಗೆ ಹೀಗಿರಬೇಡ ಕಣೆ.. atleast ಎಲ್ಲರನ್ನ ನೋಡಿಯಾದರೂ ಅವರ ಹಾಗೇ ಇರು ಎಂದು ಹೇಳಿ ತಿದ್ದಲು ಹೊರಟ ಅವನು ಕಡೆಗೆ ಅವಳ ಹಾಗೇ ಆಗಿಬಿಟ್ಟ..
**** ಅವನು ಶ್ರೀಮಂತ. ಹುಲ್ಲು ತಿಂದ. ಜನ "ಔಷಧಿಗಾಗಿ ಹುಲ್ಲು ತಿನ್ನುತ್ತಿರಬೇಕು" ಅಂದರು.ಇವನು ಬಡವ.ಹುಲ್ಲು ತಿಂದ. ಜನರು "ಪಾಪ,ಹೊಟ್ಟೆಗೆ ಇಲ್ವೇನೋ ಅದ್ಕೆ ಹುಲ್ಲು ತಿಂತಾ ಇದಾನೆ" ಅಂದರು.
****ಯಾಕೋ ಒಂಟಿ ಅನಿಸುತ್ತಿದೆಯಲ್ಲ ಅಂತ ಯೋಚಿಸುತ್ತ ತಾರಸಿಯ ಮೆಟ್ಟಿಲು ಹತ್ತಿದರೆ..ಅಲ್ಲಿ ಆಗಸದಲ್ಲಿ ಚಂದ್ರಮ ನಗುತ್ತಾ ನಿಂತಿದ್ದ..
(ಚಿತ್ರಕೃಪೆ: ಅಂತರ್ಜಾಲ)
ಮಂಗಳವಾರ, ಆಗಸ್ಟ್ 31, 2010
ನೆನಪಿನ ಬುತ್ತಿಯಿಂದ ಒಂದು ತುತ್ತು...

ಇವತ್ತು ಬೆಳಗ್ಗೆ- ಬೆಳಗ್ಗೆ ಏಳುತ್ತಲೇ ಇರುವಾಗ ಅತ್ತೆ ನನ್ನ ಬಳಿ ಬಂದು -" ದಿವ್ಯಾ ಬೇಗ ಬೇಗ ಮಿಂದಕ ಬಾ. ದೋಸೆಗೆ ಕುಂಬಳಕಾಯಿ ಪಾಯಸ ಮಾಡಿದ್ದಿ ತಿನ್ನಲಕ್ಕು "- ಅಂತ ಹೇಳಿದಾಗಲೇ ನನಗನ್ನಿಸಿತ್ತು. ಅಬ್ಬ !! ಇವತ್ತಿನ್ ದಿನ ಹಿಂಗೆ ಸಿಹಿ-ಸಿಹಿಯಾಗಿ ಕಳಿಲಿ ಅಂತ!!. ಹಾಗೆ ಸ್ನಾನಕ್ಕೆ ನೀರು ತಗೊಂಡು ಹೋಗುತ್ತಿರುವಾಗಲೇ ಮನಸಿಗೆ ಹೊಳೆದಿದ್ದು.. ಅರೆ!! ಈ ನನ್ನ PG ಗೆ ಬಂದು ಇವತ್ತಿಗಾಗಲೇ ಮೂರು ವರುಷಗಳು. hurray !! happy third year of PG living ಅಂತ ನನಗೆ ನಾನೇ ಒಂದು ಸಾರಿ ಹೇಳಿಕೊಂಡೆ. ಅತ್ತೆ ಸರಿಯಾದ ದಿನಕ್ಕೆ ಸಿಹಿ ಮಾಡಿದ್ದಾಳೆ. ಎಂಥ ಕಾಕತಾಳಿಯ!!
ಮುಂದೇನು ಅಂತ ಸ್ವಲ್ಪನೂ ಚಿಂತೆ ಮಾಡದಿದ್ದ ನನಗೆ ಅದೃಷ್ಟವೋ , ನನ್ನ ಅಮ್ಮ-ಅಪ್ಪ ಮಾಡಿದ ಪುಣ್ಯದ ಪಲವೋ ಏನೋ ಗೊತ್ತಿಲ್ಲ. ಕಾಲೇಜ್ ಮುಗಿಯುತ್ತಿದ್ದ ಹಾಗೆ ಕರೆದು ಕೆಲಸ ಕೊಟ್ಟಂಗೆ ಕೆಲಸ ಸಿಕ್ಕಿಬಿಟ್ಟಿತು. ಆಮೇಲೆ ಅಪ್ಪ ಮೈಸೂರ್ ನಲ್ಲಿ ನನ್ನ trainingಗೆ ಬಿಟ್ಟು, ಅಲ್ಲಿ ಇರುವ ಸೆಕ್ಯೂರಿಟಿ ಅವರ ಹತ್ತಿರ ನನ್ನ ಮಗಳು,ನಾವು ಯಾವತ್ತೂ ಹೀಗೆ ಹೊರಗೆ ಬಿಟ್ಟಿರಲಿಲ್ಲ. ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದ ಅಪ್ಪನ ಕಾಳಜಿಗೆ ನಾನು ಮೂಕ ವಿಸ್ಮಿತನಾಗಿದ್ದೆ . ಇನ್ನೇನು ಹೊರಡುವ ಹೊತ್ತಿಗಾಗಲೇ ಅಳುವ ಅಪ್ಪನನ್ನು ಸಮಾಧಾನಿಸಿ , ಟಾಟ ಎಂದು ಬೀಳ್ಕೊಟ್ಟಗಲೇ, ನನಗೆ ಮದುವೆ ಮಾಡಿ ಕಳಿಸಿ ಕೊಟ್ಟ ಅನುಭವನೇ ಆಗಿತ್ತಲ್ಲ!! ಎಷ್ಟಾದರೂ ಮೊದಲ ಸಾರಿ ಮನೆ ಬಿಟ್ಟಿದ್ದು. ಅಪ್ಪ, ಅಮ್ಮ ,ತಂಗಿ! ಇನ್ಯಾರು ನನ್ನ ಜೊತೇಲಿ ಇರೋಲ್ಲ. ಬದುಕನ್ನು ನೀನೇ ಸ್ವಂತವಾಗಿ ನಿಭಾಯಿಸಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸವಾಲುಗಳನ್ನು ಎದುರಿಸಬೇಕು. ಎಲ್ಲಕ್ಕಿಂತ ಮುಕ್ಯವಾಗಿ ಕೆಟ್ಟತನದಿಂದ ಆದಷ್ಟು ದೂರವಿದ್ದು, "ಒಳ್ಳೆ ಹೆಸರು" ಇಟ್ಟುಕೊಳ್ಳಬೇಕು. ಇದು ಎಲ್ಲಕ್ಕಿಂತ ದೊಡ್ಡ ಕಷ್ಟದ ವಿಷಯ. ಅಮ್ಮ ಅಂತೂ ಪದೇ ಪದೇ , ತಂಗಿ ದುಡ್ಡು ಕರ್ಚು ಆಗ್ತು ಹೇಳಿ ನೋಡದ. ನಿಂಗೆ ಎಂತ ಬೇಕೋ ಅದ್ನ ತಗಂಡ್ ತಿನ್ನು. ಹಾಳು ಮೂಳು ತಿನ್ನಡ . ಗೋಲ್ ಗಪ್ಪ ತಿನ್ನಡ. ಹಣ್ಣು ತಿನ್ನು ಆದಷ್ಟು ಅಂತ ಹೇಳಿದ್ದು, ನನ್ನ ತಂಗಿ- ಅಕ್ಕ ನಂಗೆ ನೀ ಇಲ್ದೆ ಇದ್ರೆ ಸಕತ್ ಬೋರ್ ಹೊಡಿತು, ಎಂತ ಮಾಡಕೆನ ಅಂತ ಅಸಹಾಯಕಳಾಗಿ ಕಣ್ಣಲ್ಲಿ ನೀರು ಬರಿಸಿಕೊಂಡಿದ್ದು, ಎಲ್ಲವೂ ನೆನಪಾಯಿತು. ಹೊರಡುವ ಹೊತ್ತಿಗಾಗಲೇ ಅವರೆಲ್ಲ ಫೋಟೋಗಳನ್ನು ಎತ್ತಿಕೊಂಡು, ಬಂದಿದ್ದೆ. ಅದೀಗ ನನ್ನ ರೂಮಿನ ಗೋಡೆಯ ಮೇಲೆ ಸುಶೋಭಿತ.
ಆಮೇಲೆ ಶುರುವಾಗಿದ್ದು ಮಣ್ಣು ಹೊರುವುದು.training ಮುಗಿಸಿ ಬೆಂಗಳೂರಿಗೆ ಬಂದ ಮೇಲೆ PG ಗಾಗಿ ಹುಡುಕಾಟ. ಜೊತೇಲಿ ಇದ್ದಿದ್ದು ಒಂದೇ ಊರಿನವರಾದ ,ಇಬ್ಬರು ಸ್ನೇಹಿತೆಯರು. ಕೈಯಲ್ಲಿ ಸರಿಯಾಗಿ 5000 ರೂಪಾಯಿ ಹಣ.ಅಂತೂ ಇಂತೂ PG ಸಿಕ್ಕಿ , ಸದ್ಯಕ್ಕೆ ಇದ್ದು ಬಿಡೋಣ. ಆಮೇಲೆ ಸರಿಯಾಗಲಿಲ್ಲ ಎಂದರೆ ಮತ್ತೆ ಹುಡುಕೋಣ ಎಂದು ತೀರ್ಮಾನಿಸಿ ಉಳಿದುಕೊಂಡು ಬಿಟ್ಟೆವಲ್ಲ. ಅಲ್ಲಿನ ಅಡಿಗೆ ಊಟ ಜೀವನ ಪೂರ್ತಿ ಮರೆಯಲಾಗದ ದಿನಗಳು.ಸಾಂಬಾರು ,ಚಟ್ನಿ,ಪಲ್ಯ ಎಲ್ಲದಕ್ಕೂ ಒಂದೇ ರುಚಿ. ಮೆಣಸಿನ ಕಾಯಿಯ ತರಹವೇ. ನಾನಂತೂ ಊಟಕ್ಕಿಂತ ಹೆಚ್ಚು ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡ ದಿನಗಳೇ !! ಅಂಥ ಖಾರ .ನನಗಂತೂ ಆ PG ಬಿಟ್ಟು ಓಡಿ ಹೋಗುವ ಕೋಪ. ಅದೇ ಸಮಯಕ್ಕೆ ದೇವರ ಹಾಗೆ ಸಿಕ್ಕ ನೆಂಟರೊಬ್ಬರು ನಾನೀಗೆ ಇರುವ PG ಯ ವಿಳಾಸ ತಿಳಿಸಿ, ಅಲ್ಲಿಗೆ ಹೋಗಿ ನೋಡು ಎಂದರು. ನಾನಂತೂ ಹೇಗಾದರೂ ಇರಲಿ. ನಮ್ಮ ಜಾತಿಯದೆ ಅಂತ ಗೊತ್ತಾದ ಮೇಲೆ ಹೇಗಿದ್ದರೂ adjust ಮಾಡಿಕೊಳ್ಳೋಣ ಅಂತ ಹೊರಟೇ ಬಿಟ್ಟೆ. ಸ್ನೇಹಿತೆಯರು ಯಾರೂ ಬರಲು ಒಪ್ಪಲಿಲ್ಲ. ಬೊಮ್ಮನಹಳ್ಳಿಯಿಂದ ಬನಶಂಕರಿ ಒರೆಗೆ ಹೊರಟು ಬಂದೆ ಆಟೋದಲ್ಲಿ. ಮೊದಲಿದ್ದ PG ಯಿಂದ ಆಫೀಸು ಕೇವಲ 10 ನಿಮಿಷದ ದಾರಿ,ಈಗ ಒಂದು ವರೆ ಘಂಟೆಯ ದಾರಿ . ಆದರೂ ಸೈ ಎಂದಿದ್ದೆ. ಡೈರಿಯಲ್ಲಿ ಬರೆದ ತಾರೀಕು ತೆಗೆದು ನೋಡಿದೆ. ಆಗಸ್ಟ್ 31 , ಭಾನುವಾರ, 2007 ,ಬೆಳಗ್ಗೆ 11 .30
ನನಗೆ ಕೊಟ್ಟ ಜಾಗ ಒಂದು bunker , ಹಾಗೇ ಗೋದ್ರೆಜ್ ನಲ್ಲಿ ಸರಿಯಾಗಿ ಅರ್ಧ ಪಾಲು. ನನಗಂತೂ ಅಳುವೇ ಬಂದ ಹಾಗಾಗಿತ್ತು.ಮೊದಲೇ ನನಗೆ ಬಟ್ಟೆ crazu !! ಎಲ್ಲಿ ಇಡ್ಲಿ ನನ್ನ ಬಟ್ಟೆಗಳನ್ನು?ನಾನು ತಂದ ಬಟ್ಟೆಗೆ ಜಾಗ ಸಾಲೊಲ್ಲ. ಇನ್ನು ಮುಂದೆ ನಾನು ತೆಗೆದುಕೊಳ್ಳೋ ಬಟ್ಟೆಗೆ ಜಾಗ ಎಲ್ಲಿ ಅಂತ ಒಂದು ಸಾರಿ ಚಿಂತೆ ಆದರೂ,ಅಮ್ಮ adjust ಮಾಡ್ಕಳಕಪ. ಹಂಗೆಲ್ಲ ಬೇಜಾರ್ ಮಾಡ್ಕಳ್ಳಾಗ ಅಂದಿದ್ದಕೆ ಸಮಾಧಾನಗೊಂಡಿದ್ದು. ಹಾಗೇ ಇನ್ನೊಂದು ಸಲ, ಗೆಳತಿ ನನ್ನ ರೂಮಿಂದ ನನ್ನ ಪುಸ್ತಕ ನನ್ನ ಕೇಳದೆ ತೆಗೆದುಕೊಂಡು ಹೋಗಿ,ಅದನ್ನು ತಾರಸಿಯ ಮೇಲೆ ಬಿಟ್ಟು ಮಳೆಗೆ ಪುಸ್ತಕ ಎಲ್ಲ ಹಾಳಾಗಿ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದು. ಅವಾಗ ಅತ್ತೇನೆ ಹೇಳಿದ್ದು. ಇದೆಲ್ಲ ಎಂತು ಅಲ್ಲ,ನೀ ಇದಕ್ಕೆ ಅತ್ತರೆ ಮುಂದೆ ಎಂತ ಎಂತ ಕಾಣಕ ಅಂದಿದ್ದು !... ನನ್ನ ಏಕಾಂತ,ನನ್ನ ಸಿಟ್ಟು,ನನ್ನ ದುಃಖ, ನನ್ನ ಸಂತೋಷ, ನನ್ನ ನೋವು ಎಲ್ಲವನ್ನು ಸಮಾಧಾನವಾಗಿ ಕೇಳಿಸಿಕೊಳ್ಳೋ ಗಂಡನ ಹಾಗೇ ನನ್ನ teddy bear. ಅಲ್ಲೇ ಮಂಚಕ್ಕೆ ಒರಗಿ ಕೂತು ಯಾವಾಗಲು ನನ್ನೇ ನೋಡುವುದು!! ಎಷ್ಟೆಲ್ಲಾ ಇದೆ ಗಮನಿಸಿದರೆ.
ಅಷ್ಟೇ. ಯಾವ PG ಯಲ್ಲೂ waw factor !! ಇರೋಲ್ಲ ಅನ್ನದು ನನ್ನ ಅನಿಸಿಕೆ. managable ಆಗಿದ್ದರೆ ಸಾಕು. ಊಟ ರುಚಿಯಾಗೆ ಇರಬೇಕು,ಹಾಗೆ ಇರಬೇಕು,ಹೀಗೆ ಇರಬೇಕು ಅಂತೇನೂ ಇಲ್ಲ. ಹೊಟ್ಟೆ ತುಂಬಿದರೆ ಆಯಿತು ನನಗೆ. ಆದ್ರೆ ತೀರ ಮೆಣಸಿನಕಾಯಿ ತರ ತಿನ್ನಕ್ಕಾಗಲ್ಲ. ಎಲ್ಲವೂ ಹಿಡಿಸಿತು.ದಿನಗಳು ಹೋದಂತೆ PG ಪ್ರಿಯವಾಗತೊಡಗಿತು.ಅದನ್ನು ಬಿಟ್ಟು ಬೇರೆ ಕಡೆ ಹೋಗುವುದೇ ಬೇಡ ಅನ್ನುವ ಮಟ್ಟಿಗೆ. ಹಾಗೇ PG ನೋಡಿಕೊಳ್ಳುತ್ತಿರುವ (ನಾವೆಲ್ಲಾ ಅತ್ತೆ ) ಎಂದೇ ಕರೆಯುವ ಒಳ್ಳೆ ಸಂಭಂದ ಸಿಕ್ಕಿತು. ಸ್ವಂತ ಮಕ್ಕಳಲ್ಲದಿದ್ದರು ಸಮಯಕ್ಕೆ ಊಟ ಮಾಡಿ ಎಂದು ಹೇಳುವ ಅತ್ತೆಯ ಪ್ರೀತಿ ,ಎಲ್ಲ ಸಿಕ್ಕಿದೆ PG ಯಿಂದ. ಬೆಂಗಳೂರಿನ ನನ್ನ ಆಶ್ರಯ ತಾಣ ಎಂದರೂ ತಪ್ಪಾಗಲಾರದು.ಈ ಕಳೆದ ಮೂರು ವರುಷಗಳಲ್ಲಿ ಕಲಿತಿದ್ದು ಬಹಳಿದೆ.ದಿವ್ಯಾ ಈಗ ಮೂರು ವರುಷ ದೊಡ್ಡವಳಾಗಿದ್ದಾಳೆ. ಅತ್ತೆ ಹೇಳುತ್ತಾಳೆ, ಮದುವೆ ಆಗಿಯೇ ನೀನು ಈ PG ಬಿಟ್ಟು ಹೋಗು.ಅಲ್ಲಿವರೆಗೆ ಬಿಡಬೇಡ ಅಂತ.ಅವರ ಮಾತಿಗೆ ನನ್ನ ಸಹಮತವೂ ಇದೆ... :-)
ಆಫೀಸ್ ಗೆ ಬಸ್ನಲ್ಲಿ ಬರುವಾಗಾಗಲೆಲ್ಲ ಇವತ್ತು ನನಗನ್ನಿಸಿದ್ದು ಇಷ್ಟು, ಇಷ್ಟೇ , ಮಾಮರವೆಲ್ಲೋ , ಕೋಗಿಲೆಯೆಲ್ಲೋ.. ಏನೀ ಸ್ನೇಹಾ ಸಂಬಂಧ ...ಎಲ್ಲಿಯದೋ ಈ ಅನುಬಂಧ !!
(ಚಿತ್ರಕೃಪೆ: ಅಂತರ್ಜಾಲ)
ಬುಧವಾರ, ಆಗಸ್ಟ್ 18, 2010
ಯಾಕೋ ಕಾಡತಾವ ಚಿತ್ರಗಳು !
"ಸವಿ ಸವಿ ನೆನಪು,ಸಾವಿರನೆನಪು,
ಎದೆಯಾಳದಲಿ ಬಚ್ಚಿಕೊಂಡಿರುವ,
ಅಚ್ಚಳಿಯದ ನೂರೊಂದು ನೆನಪು"

ಮೂರನೇ ಕ್ಲಾಸಿನಲ್ಲಿ ಇದ್ದಾಗ ಮುಂದಿನ ಹಲ್ಲು ಬಿದ್ದು ಎಲ್ಲರೂ ನನ್ನ ಮುದುಕಿ ಆದೆ ಎಂದು ಚುಡಾಯಿಸುತಿದ್ದಾಗ ತೆಗೆಸಿಕೊಂಡ ಚಿತ್ರ, ನಾನು ನನ್ನ ತಂಗಿ ನಮ್ಮ ತೋಟದಲ್ಲಿ ತೆಗೆಸಿಕೊಂಡ ಚಿತ್ರ, ಅಪ್ಪ ಮುಂಬಾಯಿಗೆ ಹೋದಾಗ ನನಗಂತ ತಂದ ಚಿಟ್ಟೆ ಚಿತ್ರಗಳಿದ್ದ ಅಂಗಿಯಲ್ಲಿ ತೆಗಿಸಿಕೊಂಡ ಚಿತ್ರ, ಎಂದೋ ಕಾರ್ಯದ ಮನೆಯಲ್ಲಿ ಹುಡುಗರು ನಾವಷ್ಟೇ ಅಡಿಗೆ ಭಟ್ರು ಮಾಡಿದ ಸಿಹಿ ತಿಂಡಿಯ ರುಚಿ ನೋಡುತಿದ್ದಾಗ, ಮಕ್ಕಳೆಲ್ಲ ಹೊಳೆ ದಂಡೆಗೆ walking ಹೋದ ಚಿತ್ರ, ಗುಡ್ಡ ಬೆಟ್ಟ ತಿರುಗಿ "ಮುಳ್ಳು ಹಣ್ಣು" ಕಿತ್ತು ತಂದ ಚಿತ್ರ,ಮಾವನ ಮದುವೆಯಲ್ಲಿ ಮೊದಲನೇ ಸಾರಿ,ಸೀರೆ ಉಟ್ಟಾಗ ತೆಗೆಸಿಕೊಂಡ ಚಿತ್ರ, ನಾನು ಚಿಕ್ಕ ಮಗುವಾಗಿದ್ದಾಗ ಅಪ್ಪ ಇಷ್ಟ ಪಟ್ಟು studio ಗೆ ಹೋಗಿ ಅಪ್ಪನ ಮಡಿಲಿನಲ್ಲಿ , ಅಮ್ಮನ ಜೊತೆ ತೆಗೆಸಿಕೊಂಡ ಚಿತ್ರ, ಹೀಗೆ ಇನ್ನೂ ಎಷ್ಟೋ..ಅಬ್ಬ ಎಲ್ಲಿಂದ ಎಲ್ಲಿಗೆ ಕರೆದುಕೊಂಡು ಹೋಗುತ್ತೆ ಚಿತ್ರಗಳು!
ಹಾಗೆ ಮತ್ತೆ ಹಾಳೆ ತಿರುಗಿಸುತಿದ್ದಾಗ ಮತ್ತೆ ಅದೇ ಫೋಟೋಗಳು. ಶಾಲೆಲಿ ಭಾಷಣ ಮಾಡಿದ, ಬಹುಮಾನ ಗೆದ್ದಾಗ, ಶಾಲೆ ಮುಗಿಯುತಿದ್ದಾಗ ಸೆಂಡ್ ಆಫ ಪಾರ್ಟಿಯಲ್ಲಿ ತೆಗೆಸಿಕೊಂಡ ಫೋಟೋ, ಮತ್ತೆ ಕಾಲೇಜಲ್ಲಿ fashion ಶೋ ಮಾಡಿದ್ದು, ನಾಟಕ ಮಾಡಿದ್ದು , ಟ್ರಿಪ್ ಗಳಿಗೆ ಹೋಗಿದ್ದು, ಮೆಚ್ಚಿನ ಸ್ನೇಹಿತರಿದ್ದು, ಆಹಾ! ಎಂಥ ಆನಂದ. ನಾವು ಡಿಗ್ರಿಯಲ್ಲಿ ಓದುವಾಗ ಕ್ಲಾಸಿಗೆ ಮೂರೇ ಜನ heroine ಗಳು. ಬೇರೆ ಹುಡುಗಿಯರೆಲ್ಲ ಅಯ್ಯೋ ನಮ್ದು scienceu .ನಾವು ಓದಬೇಕು ಅನ್ನುತಿದ್ದರು. ಓದೋದು ಅಂದರೆ ಅವರ ಅರ್ಥದಲ್ಲಿ ಕೇವಲ ಪಟ್ಯ ಪುಸ್ತಕಗಳಷ್ಟೇ! ನಾವಷ್ಟೇ ಸ್ವಲ್ಪ ದೂರ ಆಗಿಬಿಟ್ಟಿದ್ದೆವು. ಆದ್ರೆ ಇದೆ ಕಾರಣ ಹುಡುಗರ ಸ್ನೇಹಕ್ಕೆ ಎಡೆಯಾಯಿತು. ನಾವು ಹುಡುಗರೊಡನೆ ತುಂಬಾ ಗೆಳೆತನದಿಂದ ಇರುತಿದ್ದೆವು. ಯಾವ ಕೆಟ್ಟ ಪಟ್ಟದ ಹಂಗಿಲ್ಲದೆ. "ಆ ದಿನಗಳು" ನೆನಪಾದವು. ಮತ್ತೆ ಬರಲಿ ಅನಿಸಿತು. Hard chance ದಿವ್ಯ!ಅಂತು ಮನಸು. ಚಿತ್ರಗಳನ್ನು ನೋಡುತ್ತಾ ಯಾವುದೋ ಬೇರೆ ಲೋಕದಲ್ಲೇ ಕಳೆದು ಹೋದೆ.ವರ್ತಮಾನದಿಂದ ಭೂತದೆಡೆ ಸಾಗಿತ್ತು ನನ್ನ ಮನಸಿನ ಪಯಣ. ಈ ಚಿತ್ರಗಳು ಮನುಷ್ಯನ ಜೀವನದಲ್ಲಿ ಬೆರೆತು ಹೋಗಿವೆ. ಎಷ್ಟೋ ಖುಷಿಯ ಕ್ಷಣಗಳು ನಮ್ಮ ಬದುಕಿನಲ್ಲಿ ಬಂದೇ ಬರುತ್ತವೆ. ಗೃಹಪ್ರವೇಶ, ಮದುವೆ, ಮುಂಜಿ ಇನ್ನೂ ಅನೇಕ ಸಂದರ್ಭಗಳು ಜೀವನಲ್ಲಿ ಎಂದೂ ಮರೆಯಲು ಅಸಾದ್ಯ ! ಆದರೂ ಯಾವಾಗಾದರೂ ನೆನಪಿಸಿಕೊಂಡು ಆ ಕ್ಷಣಗಳನ್ನು ಮೆಲಕು ಹಾಕಲು ಈ ಫೋಟೋಗಳೇ ಬೇಕು. ಮತ್ತೆ ನೆನಪುಗಳೆಲ್ಲ ಹಸಿರು ಹಸಿರು, ತಾಜಾ ತಾಜಾ ! ಬೇಸರಗೊಂಡ ಮನಸಿಗೊಂದು ಮದ್ದು.
ನಾನು ಹಿಂದೆ ಒಂದು ಪುಸ್ತಕದ ಬಗ್ಗೆ ಬರೆದಿದ್ದೆ. ಅದರಲ್ಲಿ ನಮ್ಮ boss ( ರೋಬಿನ್ ಶರ್ಮಾ) ಹೇಳುತ್ತಾರೆ, ಕೆಲವರಿಗೆ ತಮ್ಮ ಅಂದ ಚಂದದ ಬಗ್ಗೆ ಬಹಳ ಕೀಳರಿಮೆ ಇರುತ್ತದೆಯಂತೆ. ಅಂತಹವರು ಆದಷ್ಟು ಚಿತ್ರಗಳನ್ನು ತೆಗೆಸಿಕೊಂಡು ,ತಮ್ಮಲ್ಲಿ ಏನು ಸುಧಾರಣೆಯಾಗಬೇಕಿದೆ ಅಂತ ನೋಡಿ ಕೊಳ್ಳಬೇಕಂತೆ. ಅದು ನಮ್ಮ ಆತ್ಮ ವಿಶ್ವಾಸ ಹೆಚ್ಚಿಸುತ್ತದಂತೆ. ಇದು ಒಂದು ಒಳ್ಳೆಯ ಉಪಾಯವೇ. ಇಷ್ಟೆಲ್ಲಾ ಯಾಕ್ರಿ ಮಾಡಬೇಕು? ಕನ್ನೆಡಿಯಲ್ಲಿ ನೋಡ್ಕೊಂಡ್ರೆ ಸಾಕಲ್ವ? ಅಂತ ಅನ್ನಬೇಡಿ. ಇದು ರೋಬಿನ್ ಶರ್ಮ ಉವಾಚ,ನನ್ನದಲ್ಲ :-) ಫೋಟೋಗಳು ಎಷ್ಟೊಂದು ಉಪಯುಕ್ತ ಗೊತ್ತ? ದಪ್ಪಗಿದ್ದವರು ಸಣ್ಣಗಾಗಿದ್ದು, ಕಪ್ಪಗಿದ್ದವರು ಬೆಳ್ಳಗಾಗಿದ್ದು, ಮನುಷ್ಯನಲ್ಲಿ ಆದ ಎಲ್ಲ ಬದಲಾವಣೆಗಳನ್ನು ಗಮನಿಸಬಹುದು. ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಬರಲಾಗದವರು ಫೋಟೋ ನೋಡಿ ಸಮಾಧಾನ ಮಾಡಿಕೊಳ್ಳಬಹುದು. ಯಾರದೋ ಬಗ್ಗೆ ಮಾತಾಡುವಾಗ ಅವರ ಚಿತ್ರ ತೋರಿಸಿಕೊಂಡು ಮಾತು ಮುಂದುವರಿಸಬಹುದು.
ಚಿತ್ರಗಳನ್ನು ನೋಡಿ ಎಲ್ಲ ನೆನಪಾಯಿತು . ಕಾಲೇಜು ಜೀವನದ ವೈವಿಧ್ಯತೆಯಲ್ಲ ಕಳೆದು , ಈಗಿನ ಏಕತಾನತೆಯ ಜೀವನದ ಬಗ್ಗೆ ಸ್ವಲ್ಪ ಬೇಸರವು ಮೂಡಿತು.
"Memories play a confusing role,
They make you cry for the days you laughed together,
And make you laugh for the days you cried!!"
kodak ಜಾಹಿರಾತು , "ನಿಮ್ಮ ಸುಮಧುರ ಕ್ಷಣಗಳನ್ನು ಸೆರೆ ಹಿಡಿಯಿರಿ"ಅಂತ. ಅಮ್ಮ ಈಗಲೂ ಅಪ್ಪನ ಹಳೇ ಚಿತ್ರಗಳನ್ನು ನೋಡಿ ಹೇಳುತ್ತಾಳೆ "ನಿನ್ನ ಅಪ್ಪ ಎಷ್ಟು ಚನಾಗಿದ್ರು ನೋಡು,ಈಗಲೇ ಸ್ವಲ್ಪ ಹಾಳಾಗಿದಾರೆ" ಅಂತ. ಅಮ್ಮ ಹಳೇ ದಿನಗಳನ್ನು ನೆನೆಸಿಕೊಂಡು ನಗುತ್ತಾಳೆ. ತಂಗಿ , ಅಪ್ಪ, ನಾನು ಇಲ್ಲದಿದ್ದಾಗ ನನ್ನ ಫೋಟೋ ನೋಡುತ್ತಾರೆ. ನಾನು ಕೂಡ. ಇದೆ ತಾನೇ 4 -5 ಇಂಚಿನ ಕಾಗದದ ಮಹತ್ವ!
ನನಗೆ ಈಗಲೂ ಫೋಟೋ ಹುಚ್ಚು ಇದೆ. ಎಲ್ಲಿ ಹೋದರೂ ಮೊದಲು ಫೋಟೋ ತೆಗೆಯೋದೇ ನನ್ನ ಕೆಲಸ. ಹಾಗಂತ ನಾನೇನು ಒಳ್ಳೆ photographer ಅಲ್ಲ.ಆದರೂ ನನಗಿಷ್ಟ. ಮದುವೆ,ಮುಂಜಿ ಮನೆಗಳಲ್ಲಿ ಆಲ್ಬಮ್ ನೋಡಲು ಕೊಟ್ಟಾಗ, ಅದರ ಮೇಲೆ ಬರೆದ ಪದಗಳು "happy moments " ," memorable moments ","treasured minutes" , "unforgettable timings"ಎಂಬ ಪದಗಳು ನನ್ನ ಸೆಳೆಯುತ್ತವೆ.

ಫೋಟೋಗಳು ಈಗ ಒಳ್ಳೆ ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಒಂದು ಒಳ್ಳೆ ವಿಷ್ಯ. ಕೆಲವರಿಗೆ photography fashion , ಇನ್ನೂ ಕೆಲವರಿಗೆ passion , ಇನ್ನೂ ಕೆಲವರಿಗೆ profession . ನಾನು ಮೊದಲ ಎರಡರಲ್ಲಿ ಯಾವುದರಲ್ಲೂ ಬರಬಹುದು. ಚಿತ್ರಗಳನ್ನು ನೋಡುತ್ತಾ ,ನೋಡುತ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಚಿಕ್ಕ ಮಗುವಾಗಿದ್ದಾಗಿಂದ ಈ ವರೆಗೂ ಪಯಣಿಸಿದ್ದೆ ಕುಳಿತಲ್ಲೇ!
ಮತ್ತೆ ನಾನು ನನ್ನ ಪುಸ್ತಕದಲ್ಲಿ ಬರೆದ ಮಾತು " I like photos, because people can change,but photos cant " ನೆನಪಾಗಿ ನನ್ನಷ್ಟಕ್ಕೆ ನಕ್ಕು ಆಲ್ಬಮ್ ಮುಚ್ಚಿ ಇಟ್ಟೆ. ತುಟಿಯಲ್ಲೊಂದು ಕಾಮನಬಿಲ್ಲು ಮೂಡಿತ್ತು:)

(ಚಿತ್ರಕೃಪೆ: ಅಂತರ್ಜಾಲ)
ಬುಧವಾರ, ಆಗಸ್ಟ್ 04, 2010
ನಮ್ಮ ಡ್ರೈವರ್ ಗಳ ನೆನೆಯುತ್ತಾ....
ನಿಜ, ನಾನು ಈಗ ಹೇಳ ಹೊರಟಿರುವುದು ನಮ್ಮ ಡ್ರೈವರ್ ಗಳ ಬಗ್ಗೆ. ನಾನು ಮೂಲತಃ ಸಿದ್ದಾಪುರ (ಉತ್ತರ ಕನ್ನಡ)ದ ಹುಡುಗಿ. ಆದರೆ ಹುಟ್ಟಿ ಬೆಳೆದಿದ್ದೆಲ್ಲ ದಾಂಡೇಲಿ ಎಂಬ ಊರಲ್ಲಿ. ನಮ್ಮ ಊರು ಅಂಥ ದೊಡ್ಡ ಸಿಟಿ ಅಲ್ಲ, ಹಾಗಂತ ಹಳ್ಳಿಯೂ ಅಲ್ಲ. ಮಾಮೂಲಿ ಭಾಷೆಯಲ್ಲಿ town ಅಂತ ಹೇಳಬಹುದು. ಅಲ್ಲಿ ನಮಗೆ ಬೇಕಾಗುವ ಎಲ್ಲ ಸ್ಥಳಗಳು, ಉದಾಹರಣೆಗೆ, ಮಾರ್ಕೆಟ್ , ಶಾಲೆ ,ಕಾಲೇಜ್ ಹೀಗೆ ಎಲ್ಲ ನಡೆದುಕೊಂಡೇ ಹೋಗುವ ಹಾಗಿತ್ತು. ತೀರ ದೂರ ಅಂದರೂ ಆಟೋ ತೆಗೆದುಕೊಂಡರೆ ಕೇವಲ "minimum " ಚಾರ್ಜ್ ಆಗುತಿತ್ತು. ಇಲ್ಲಿ ಬೆಂಗಳೂರಿಗೆ ಬಂದ ಮೇಲೆ ಎಲ್ಲದಕ್ಕೂ ಬಸ್ಸನ್ನೇ ಬಳಸಿದುದು. ಊರಿಗೆ ಹೋದಾಗೆಲ್ಲ, ಕೆಲವರು ನಾನು ಬೆಂಗಳೂರಿನಲ್ಲಿ ಇದ್ದೀನಿ ಅಂದ ಕೂಡಲೇ, ನನ್ನ ನೆಂಟರೂ ಬೆಂಗಳೂರಲ್ಲೇ ಇದ್ದಾರೆ ಎಂದು ಕೆಲವರು ಹೇಳಿದ್ದಾರೆ. ಒಮ್ಮೆ ಹೋಗಿ ಬಾ ಅಂತಾರೆ. ಆದರೆ ಹೋಗಿ ಬರುವುದಕ್ಕೆ ಒಂದು ಒಪ್ಪತ್ತೆ ಬೇಕಾದಿತು.ಬೆಂಗಳೂರು ಅಷ್ಟು ದೊಡ್ಡದಿದೆ. ಆದರೆ ಹೇಳಿಕೊಳ್ಳುವುದು ಮಾತ್ರ ಬೆಂಗಳೂರಲ್ಲೇ ಇದೀನಿ ಅಂತ ಅಷ್ಟೇ!

ಇಲ್ಲಿ ಎಲ್ಲರೂ ಯಾವಾಗಲೂ ಅಲ್ಲದಿದ್ದರೂ, ಒಂದಿಲ್ಲೊಂದು ಸಾರಿ ಬಸ್ಸನ್ನು ಉಪಯೋಗಿಸಿಯೇ ಇರುತ್ತಾರೆ. ಸ್ವಂತ ವಾಹನ ಇರುವವರಿಗೆ ಸಮಸ್ಯೆ ಇಲ್ಲ. ಆದರೆ ವಿದ್ಯಾರ್ಥಿಗಳು, ದಿನಾ ಫ್ಯಾಕ್ಟರಿಗಳಿಗೆ ಹೋಗುವ ಮಹಿಳೆಯರು, ಕೆಲಸಕ್ಕೆ ಹೋಗುವ ಹುಡುಗಿಯರು, ಕಂಪನಿಗಳಿಂದ ಸಾರಿಗೆ ವ್ಯವಸ್ಥೆ ಇಲ್ಲದಿರುವ ಉದ್ಯೋಗಿಗಳು, ಅತ್ತ ಹಳ್ಳಿಕಡೆಯಿಂದ ಬರುವ ರೈತರು, ಶಾಲೆ ಬಿಟ್ಟ ಪುಟ್ಟ ಪುಟ್ಟ ಮಕ್ಕಳು, ಹಿರಿಯ ನಾಗರಿಕರು, ಹೀಗೆ ಎಲ್ಲ ವಿಧದ ಜನರಿಗೆ ಪ್ರಯಾಣ ಮಾಡಲು ಬಸ್ಸು ಅನುಕೂಲಕರ ವ್ಯವಸ್ಥೆ. ಈ ಬಸ್ಸನ್ನು ಓಡಿಸುವ ಡ್ರೈವರ್ ಗಳ ಶ್ರಮ ಬಹಳ ಮೆಚ್ಚತಕ್ಕದ್ದೇ!ಅವರಿಗೆ ಬಹಳ ತಾಳ್ಮೆ ಅವಶ್ಯ. ಎಷ್ಟೋ ರಸ್ತೆ ಗೊತ್ತಿಲ್ಲದವರು,ಊರಿಗೆ ಹೊಸಬರು , ಬಸ್ಸು ಅಲ್ಲಿ ಹೋಗುತ್ತಾ? ಇಲ್ಲಿ ಹೋಗುತ್ತಾ? ಎಂದು ಕೇಳಿದಾಗ ತಾಳ್ಮೆ ಇಂದ ಮಾರ್ಗ ಹೇಳಿ , ನೂರಾರು ಜನರ ಜೀವವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡೇ ಜೋಪಾನವಾಗಿ ಅವರನ್ನು ಅವರವರ ಗಮ್ಯಸ್ಥಾನಕ್ಕೆ ತಲುಪಿಸುವ ಈ ಡ್ರೈವರ್ ಗಳ ಕೆಲಸ ಬಹಳ ಪ್ರಶಂಸನೀಯ.
ಕೆಲವೊಂದು ಬಸ್ಸುಗಳಲ್ಲಿ conductor ಇರುವುದಿಲ್ಲ. ಹಾಗಿರುವಾಗ ಇವರೇ ದ್ವಿಪಾತ್ರಾಭಿನಯ ಮಾಡುತ್ತಾ, ಜನರನ್ನು ಹತ್ತಿಸಿಕೊಂಡು, ಪಾಸ್ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ , ಟಿಕೆಟ್ ಬೇಕಾದವರಿಗೆ ಟಿಕೆಟ್ ಕೊಟ್ಟು, ಹತ್ತು ರೂಪಾಯಿ ಟಿಕೆಟ್ ಗೆ ನೂರು ರೂಪಾಯಿ ನೋಟು ಕೊಟ್ಟ ಅಂಕಲ್ ಗೆ ತಿರುಗಿಸಿ ಚಿಲ್ಲರೆ ಕೊಡಲು ತಡಕಾಡುತ್ತಾ , ಕಡೆಗದು ಸಿಕ್ಕಿತು ಎಂದು ಅವರಿಗೆ ಕೊಡುತ್ತಾರೆ. ವಯಸ್ಸಾದವರಿಗೆ, ಅಷ್ಟೇ ಗೌರವದಿಂದ ಅವರ ಇಳಿಯುವ ಸ್ಥಳ ಬಂದಾಗ ಇಲ್ಲೇ ಇಳಿದುಕೊಳ್ಳಿ ಎಂದು ಹೇಳುತ್ತಾರೆ.
ಹಾಗೇ strike ನಡೆದಾಗಲೂ ಅಷ್ಟೇ. ಡ್ರೈವರ್ ಗಳಿಗೆ ರಜೆ ಘೋಷಣೆ ಆಗಿರದಿದ್ದರೆ, ಅವರು ಗಾಡಿ ಓಡಿಸುವಾಗ , ಕಲ್ಲು ಹೊದೆತಗಳೇನಾದರು ಸಂಭವಿಸಿದರೆ ,ಮೊದಲು ಸಿಕ್ಕಿಬೀಳುವುದೇ ಡ್ರೈವರ್ ಗಳು. ಹಾಗೇ ಅಪ್ಪಿ ತಪ್ಪಿ ಯಾವುದಾದರೂ ಗಾಡಿಗೆ ಗುದ್ದಿದನೋ ಅವನಿಗೆ ಅವರಿಂದ ಧರ್ಮದೇಟು ಗ್ಯಾರಂಟಿ!! ಪ್ರಯಾಣಿಕರು ಮೂಕ ಪ್ರೇಕ್ಷಕರಷ್ಟೇ!
ಬೇಸಿಗೆ ಕಾಲದಲ್ಲಿ ಆ ಎದುರುಗಡೆ ಗಾಜಿನಿಂದ ಬರುವ ಬಿಸಿಲನ್ನು ಸಹಿಸಿಕೊಂಡು, ಮಾಧ್ಯಾನದ ಉರಿ ಬಿಸಿಲಿನಲ್ಲೂ ತಾಳ್ಮೆಗೆಡದೆ ಗಾಡಿಯನ್ನು ಸರಿಯಾಗಿ ಓಡಿಸುತ್ತಾ, ಎಲ್ಲೂ ಅಪ್ಪಿ- ತಪ್ಪಿ ಆಕ್ಸಿಡೆಂಟ್ ಆಗದಂತೆ ಕಾದುಕೊಂಡು ಎಲ್ಲರನ್ನು ಸುರಕ್ಷಿತವಾಗಿಡುವಲ್ಲಿ ಆತ ಕಾರಣವಾಗುತ್ತಾನೆ. ನಿಮಿಷ ನಿಮಿಷಕ್ಕೂ ಬರುವ ಸಿಗ್ನಲ್ ಗಳಲ್ಲಿ ನಿಲ್ಲಿಸುತ್ತಾ,ಹಸಿರು ನಿಶಾನೆ ಕಂಡೊಡನೆ ಮುಂದೆ ಹೋಗುತ್ತಾನೆ. ಇಷ್ಟೊಂದು traffic ಇರುವ ಊರಿನಲ್ಲಿ ಯಾಮಾರುವುದು ಬಲು ಸುಲಭ. ನಾವು ಪ್ರಯಾಣಿಕರಿಗೆ ಬಸ್ಸು ಸಿಗುವ ವರೆಗಷ್ಟೇ ತಲೆ ಬಿಸಿ. ಬಸ್ಸು ಹತ್ತಿ ಕುಳಿತ ಮೇಲೆ ಎಲ್ಲ ತಲೆಬಿಸಿಯನ್ನು ಡ್ರೈವರ್ ಗೆ ರವಾನಿಸಿ ನಾವು ಬೆಚ್ಚಗೆ ಕುಳಿತು ಬಿಡುತ್ತೇವೆ. ಕೆಲವರು ನಿದ್ದೆ ಮಾಡುತ್ತಾರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ, ಇನ್ನು ಕೆಲವರು FM ಕೇಳುತ್ತಾರೆ, ನನ್ನಂತವರು ಕಿಟಿಕಿಯಾಚೆ ನೋಡುತ್ತಾ , ಜನರ ಗುಂಪಲ್ಲು ಸಿಕ್ಕ ಏಕಾಂತದ ಸವಿಯನ್ನು ಇನ್ನೊಬ್ಬರಿಗೆ ಒಂದ್ ಚೂರು ಕೊಡದಂತೆ ಅನುಭವಿಸುತ್ತಾರೆ, ಆದರೆ ಡ್ರೈವರ್ ಮಾತ್ರ ಗಮನವಿಟ್ಟು ಗಾಡಿ ಓಡಿಸುತ್ತಾನೆ. ಹೀಗೆ , ನೂರಾರು ಕನಸಿನ ಲೋಕದಲ್ಲಿ ತೇಲಾಡುತ್ತಿರುವ ಜನರನ್ನು ,ತಾನು ಮಾತ್ರ ವಾಸ್ತವದಲ್ಲಿದ್ದುಕೊಂಡು ಕಾಯುತ್ತಾನೆ ಆತ. ಇದೆಲ್ಲ ದಿನಾ ಓಡಾಡುವ ಈ ಸಿಟಿ ಬಸ್ ಡ್ರೈವರ್ ಗಳ ಕಥೆಯಾದರೆ ಇನ್ನು ಊರಿಂದ ಊರಿಗೆ ಹೋಗುವ ಬಸ್ಸನ್ನು ಓಡಿಸುವ ಡ್ರೈವರ್ ಗಳ ಕಥೆಯೇ ಬೇರೆ.
ರಾತ್ರೆ ಬಸ್ಸುಗಳನ್ನ ಓಡಿಸುವವರು ಎಷ್ಟು ಜಾಗರೂಕರಾಗಿದ್ದರೂ ಸಾಲದು. ಆ ಕತ್ತಲೆ ಕೊಂಪೆಯೊಳಗೆ ಉರಿಯುತ್ತಿರುವ ಬಸ್ಸಿನ ತಿಳಿಬೆಳಕಿನಲ್ಲೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಸ್ಸನ್ನು ಓಡಿಸುತ್ತಾರೆ. ನನ್ನ ಅಜ್ಜನ ಮನೆ ಇರುವುದು ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿ ರಾತ್ರಿ ಹೋಗುವುದು ಒಂದೇ ಬಸ್ಸು.ಊರಿಗೆ ಬರುವ ದಾರಿಯ ಇಕ್ಕೆಲದಲ್ಲಿ ಗುಡ್ಡ ಇರುವುದರಿಂದ ಒಮ್ಮೊಮ್ಮೆ ಕಾಡು-ಕೋಣಗಳು ಬಸ್ಸಿಗೆ ಅಡ್ಡ ಬರುವುದೂ ಉಂಟು. ಆಮೇಲೆ ಜೋರಾಗಿ ಬಸ್ಸಿನ ಹೊರ್ನ್ ಮಾಡಿದಾಗ ಅವು ಹೆದರಿದ ಬೆಕ್ಕಿನಂತೆ ಬೆಚ್ಚಿ ಓಡಿ ಹೋಗುತ್ತವೆ. ಬಸ್ ಡ್ರೈವರ್ -ಕಂಡಕ್ಟೆರ್ ಅಲ್ಲೇ ತಂಗಿದ್ದು ಬೆಳಗ್ಗೆ ಎದ್ದು ಮತ್ತೆ ಪೇಟೆಗೆ ಹೋಗುವ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾರೆ.ಹೀಗೆ ಹಳ್ಳಿಗಳಿಗೆ ಹೋಗುವ ಡ್ರೈವರ್ ನ ಜೀವನ ಸಾಗುತ್ತಿರುತ್ತದೆ.
ನಮ್ಮ ಮನೆಯಿಂದ,ಅಂದರೆ ದಾಂಡೇಲಿಯಿಂದ ಬೆಂಗಳೂರಿಗೆ ಬರಲು ಕನಿಷ್ಠ ಹತ್ತು ಘಂಟೆಗಳ ಪ್ರಯಾಣ ಬಸ್ಸಲ್ಲಿ. ನಾನು ಸುಮಾರಾಗಿ ರಾತ್ರಿ ಪ್ರಯಾಣ ಮಾಡುವುದೇ ಹೆಚ್ಚು. ಬಸ್ ಹತ್ತಿ ಸ್ವಲ್ಪ ಹೊತ್ತಿಗೆಲ್ಲ ಮಲಗಿದರೆ , ಇಲ್ಲಿ ಬಂದ ಮೇಲೇ ಕಣ್ಣು ಬಿಡುತ್ತೇನೆ. ಮಧ್ಯೆ -ಮಧ್ಯೆ ಎಚ್ಚರು ಆದಾಗೆಲ್ಲ, ಎಲ್ಲರೂ ಮಲಗಿದ್ದಾರೆ, ಡ್ರೈವರ್ ಒಬ್ಬ ಮಾತ್ರ ಎಚ್ಚರವೇ ಇದಾನಲ್ಲ ಅಂತ ಮನಸಲ್ಲಿ ಅಂದುಕೊಳ್ಳುತ್ತೇನೆ.

ಡ್ರೈವರ್ ಗಳ ಅಜಾಗರೂಕರಾಗಿವ ಕ್ಷಣಗಳು ಬಹಳಿರಬಹುದು . ಅಲ್ಲೊಂದು ಇಲ್ಲೊಂದು ಕೆಟ್ಟ ಘಟನೆಗಳಾಗಿತ್ತವೆ.ಆದರೂ ಅದು ಅಂಥ ದೊಡ್ಡ ಮಟ್ಟದಲ್ಲಿರಲಿಕ್ಕಿಲ್ಲ. ಎಷ್ಟಾದರೂ ಅವರು ನಮ್ಮ ಹಾಗೆ ಮನುಷ್ಯರೇ ಅಲ್ಲವ? ಇಷ್ಟೊಂದು ಜವಾಬ್ದಾರಿ ಹೊತ್ತು ಜನರನ್ನೆಲ್ಲ ಕ್ಷೇಮವಾಗಿಟ್ಟು ತಾನೂ ಬದುಕುತ್ತಿರುವ ಈ "ಡ್ರೈವರ್ " ಎಂಬ ಜೀವಕ್ಕೆ ನಾವೆಲ್ಲರೂ ಒಂದು ಥ್ಯಾಂಕ್ಸ್ ಹೇಳೋಣವೇ? ಇದು ಕೇವಲ ಬಸ್ ಡ್ರೈವರ್ ಗಳಿಗಷ್ಟೆ ಅಲ್ಲ. ಎಲ್ಲ ವಾಹನ ಡ್ರೈವರ್ ಗಳಿಗೂ ಅನ್ವಯಿಸುತ್ತದೆ.
(ಚಿತ್ರಕೃಪೆ: ಅಂತರ್ಜಾಲ)
ಸೋಮವಾರ, ಆಗಸ್ಟ್ 02, 2010
ಅವನು ಕಾಯುತ್ತಿದ್ದಾನೆ....
ಹೂವು ಮುಳ್ಳು ಎರಡು ಉಂಟು ಬಾಳಲತೆಯಲಿ...
ದುರಾಸೆ ಏತಕೆ ?... ನಿರಾಸೆಯೇತಕೆ...?
ಅದೇನೆ ಬಂದರೂ ಅವನ ಕಾಣಿಕೆ..."
ಒಡಲಿಗೆ ತಾನಾಗೆ ಬೆಂಕಿ ಇಟ್ಟುಕೊಂಡಾಗಿದೆ. ಇನ್ನದರಲ್ಲಿ ಸುಟ್ಟು ಭಾಸ್ಮವಾಗುವುದೊಂದೇ ಬಾಕಿ ಉಳಿದಿರುವುದು. ತನ್ನ ಒಡಲಿನ ಬೆಂಕಿ ಅವಳನ್ನು ಸುಡಕೊಡದಂತೆ ,ಬದಲಿಗೆ ಆ ಬೆಂಕಿಯೇ ತನ್ನ ಬಾಳಿಗೊಂದು ಇಂಧನವಾಗಿ, ಬದುಕಲು ಸ್ಪೂರ್ತಿಯಾಗಿ, ಆ ಬೆಂಕಿಯ ಬಿಸಿ ಅವಳಿಗೆ ಬೆಚ್ಚನೆಯ ಅನುಭೂತಿಯಾಗಿ, ತನ್ನೊಳಗೆ ಬಚ್ಚಿಟ್ಟು ಅವಳು ನಲಿಯುವುದನ್ನು ನೋಡುತ್ತಾ, ತನ್ನ ಬದುಕಿನ ಕೊನೆ ಕ್ಷಣಗವರೆಗೆ ಉಳಿದಿರುವುದು ತನಗೆ ನಿರೀಕ್ಷೆ , ಅವಳೊಂದಿಗೆ ಕಳೆದ ನಾಲ್ಕಾರು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ವರುಷಗಳ ಮರೆಯಲಾರದ ಸಾವಿರ ಸವಿ ನೆನಪುಗಳು ಅಷ್ಟೇ. .!!! ಒಂದು ದಿನ ನಿರೀಕ್ಷೆ ನಿಜವಾಗುತ್ತೆ ಎಂಬ ಹುಚ್ಚು ಬ್ರಮೆಯಿಂದ ದೂರದಲ್ಲೇ ನೋಡುತ್ತಾ ಆಯುಸ್ಸನ್ನು ಗಟ್ಟಿ ಹಿಡಿದುಕೊಂಡು ಕಾಲ ಕಳೆಯುತ್ತಾನೆ.ಬೆಟ್ಟದಷ್ಟು ತಾಳ್ಮೆ, ಸಹನೆ ಆತನಿಗೆ.
ಹೀಗೂ ಪ್ರೀತಿ ಮಾಡಬಹುದೇ ? ಎಂಬ ಅಚ್ಚರಿಯನ್ನು ಮೂಡಿಸಿದ ಪಾತ್ರ ಚಲಪತಿ.
(ರವಿ ಬೆಳೆಗೆರೆಯವರ "ಮಾಂಡೋವಿ" ಕಾದಂಬರಿಯಿಂದ ಪ್ರೇರಿತವಾಗಿ ಮೂಡಿದ ಸಾಲುಗಳು.ಚಲಪತಿ ಪಾತ್ರ ನನಗಿಷ್ಟ)
( ಚಿತ್ರ ಕೃಪೆ: ಅಂತರ್ಜಾಲ )
ಶುಕ್ರವಾರ, ಜುಲೈ 30, 2010
ಒಂದಷ್ಟು ಸಾಲುಗಳು ...

- ದಿನವೂ ಕೊಡೆ ತರುತಿದ್ದ ಅವನು, ಆ ದಿನ ಕೊಡೆ ತರಲಿಲ್ಲ. ಮಳೆ ಯದ್ವಾ ತದ್ವಾ ಬಂತು!!!
- ಎಲ್ಲದಕ್ಕೂ ಅಪ್ಪನ ಅವಲಂಬಿಸುತಿದ್ದ ಹುಡುಗಿಗೆ , ನೌಕರಿಯ ಮೊದಲ ಸಂಬಳ ಬಂದಾಗ, "I earned my bread " ಎಂಬ ಸಂತಸ .
- ಬಯಸಿ ಬಯಸಿ ಬಂದವಳನ್ನು ತಿರಸ್ಕರಿಸಿದ ಆತ, ಬೇರೆಯವಳು ಬಂದಾಗ ಇವಳಿಗಿಂತ ಅವಳೇ ವಾಸಿಯಾಗಿದ್ದಳು ಅನ್ನಿಸಿ ಮರುಕಪಟ್ಟ. ಅವನಿಂದ ತಿರಸ್ಕರಿಸಿಕೊಂಡ ಹುಡುಗಿ, ಅವನಿಗಿಂತ ಇವನೇ ವಾಸಿ ಎಂದು ಹಿರಿ ಹಿರಿ ಹಿಗ್ಗಿದಳು.
- ಸದಾ ಮಾತಾಡುತಿದ್ದ ಹೆಂಡತಿ . ಗಂಡ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಗೊತ್ತಾದ ಮರು ಕ್ಷಣವೇ , ಶಾಶ್ವತವಾಗಿ ಮೌನಿಯಾಗಿದ್ದಳು!!
- ದೇವಸ್ಥಾನಕ್ಕೆ ಹೋದಾಗ ದೇವರ ಮುಡಿಯಿಂದ ಹೂವು ಬೀಳಲಿ ಎಂದು ಆತ ಹಲವಾರು ಬಾರಿ ಬೇಡಿಕೊಂಡಿದ್ದ. ಹೂವು ಬೀಳಲಿಲ್ಲ. ಈಗ ಅಲ್ಲಿ ದಿನವೂ ಹೂವು ಬೀಳುತ್ತದೆ. ಹೆಕ್ಕಿಕೊಳ್ಳುವವರು ಇಲ್ಲ!!
- ಇನ್ನೇನು ಕೆಲಸ ಸಿಕ್ಕೇ ಬಿಟ್ಟಿತು ಅಂತ ಖುಷಿ ಪಡುತ್ತಿದ್ದಾಗಲೇ, ಆ ಬಡ ಹುಡುಗನಿಗೆ ತಿಳಿಯಿತು , ಅದು ಸುಳ್ಳು ಎಂದು. ಕಾರಣ ಆಗಲೇ ಮತ್ತೊಬ್ಬರು ದುಡ್ಡು ಕೊಟ್ಟು ಇವನ ಕೆಲಸ ಕೊಂಡುಕೊಂಡಿದ್ದರು.
- ಭಿಕ್ಷೆ ಬೇಡುತಿದ್ದ ತಾತನಿಗೆ , ಹತ್ತು ರೂಪಾಯಿ ತನಗೆ ಹಾಕುತಿದ್ದವನನ್ನು ಕಂಡು ಸಂತಸ. ಒಂಭತ್ತು ರೂಪಾಯಿ ವಾಪಾಸ್ ಕೊಡು ಅಂದಾಗ ವಿಷಾದದ ನಗು.
- ತೋಟಕ್ಕಾಗಿ ಸಾಲ ಮಾಡಿದ್ದನ್ನು ತೀರಿಸಲೆಂದೇ ಮನೆಯಿಂದ ಹೊರ ಹೊರಟವನಿಗೆ , ಮತ್ತೆ ಮನೆಯ ಆಸ್ತಿ ಕೇಳುವ ಹಕ್ಕನ್ನು ಕಳೆದುಕೊಂಡಿದ್ದ. ಕಾರಣ ಅಣ್ಣ ತೋಟ ನೋಡಿಕೊಂಡಿದ್ದ.
- ಮುದ್ದು ಮುಖದ ಕಂದಮ್ಮನನ್ನು ಕಂಡು ಎತ್ತಿಕೊಳ್ಳುವ ಮನಸ್ಸಾಗಿ, ಹೆಸರು ಕೇಳಿದಾಗ , ಯಾರೋ ಹತ್ತಿರದವರ ನೆನಪಾಗಿ ಕಣ್ಣಲ್ಲಿ ನೀರಾಡಿದವು.
- ಜೀವನ ಪೂರ್ತಿ ಇನ್ನೊಬ್ಬರಿಗೆ i miss you ಹೇಳಿಕೊಂಡಿದ್ದವಳಿಗೆ , ಇನ್ಯಾರೋ i missed you ಅಂದಾಗ ಹೇಳಿಕೊಳ್ಳಲಾಗದ ಆನಂದದ ಉನ್ಮಾದ .
- ಒಂದು ಕಾಲದಲ್ಲಿ ತನ್ನ ಪ್ರೀತಿಗಾಗಿ ಕಾಡಿದ್ದವನ ಮಗನೇ, ಮತ್ತೆ ತನ್ನ ಮಗಳ ಪ್ರೀತಿಗಾಗಿ ಕಾಡುತಿದ್ದಾನೆ ಎಂದು ತಿಳಿದ ತಾಯಿಗೆ ಒಳಗೊಳಗೇ ತಳಮಳ!!
- ಜ್ವರ ಬಂದದ್ದನ್ನೂ ಲೆಕ್ಕಿಸದೇ, ಊರೆಲ್ಲ ತಿರುಗಾಡಿ ಅವನಿಗಾಗಿ ತಂದ ಹುಟ್ಟು ಹಬ್ಬದ ಉಡುಗೊರೆ , ಅವನಿಗಿಷ್ಟವಾಗಿಲ್ಲ ಎಂದು ತಿಳಿಯುವ ಹೊತ್ತಿಗಾಗಲೇ ಮತ್ತೆ ಜ್ವರದ ನಿದ್ದೆ!!
- ಗಂಡ ಕುಡಿಯುತ್ತಾನೆ ಎಂದು ಯಾವಾಗಲೂ ಅಪವಾದ ಮಾಡುತಿದ್ದ ಹೆಂಡತಿಗೆ, ಆತ ಕುಡಿಯಲು ತಾನೇ ಕಾರಣ ಎಂದು ಅವನ ಕೊನೆ ಉಸಿರಿರುವರೆಗೂ ತಿಳಿಯಲೇ ಇಲ್ಲ.
( ಚಿತ್ರ ಕೃಪೆ: ಅಂತರ್ಜಾಲ )
ಬುಧವಾರ, ಜುಲೈ 21, 2010
ಜುಲೈ ಕಂತು ಮುಗಿತಪ್ಪ..:-)
ರಂಗೋಲಿ ಬಣ್ಣ ತುಂಬಿದ್ದು ಅಷ್ಟೊಂದು ಸರಿ ಆಗ್ಲಿಲ್ಲ. ಪೇಪರ್ ನಲ್ಲಿ ಬಣ್ಣ ತುಂಬೋದು ನನಗೆ ಕಷ್ಟ. ನೆಲದ ಮೇಲೆ ಸುಲಭ.. :)
17 ರಿಂದ 9

15 ರಿಂದ 8

13 ರಿಂದ 7

15 ರಿಂದ 1

ಶುಕ್ರವಾರ, ಜುಲೈ 16, 2010
ನೀಲಿ ಕಣ್ಣುಗಳ ಹುಡುಗ..

ಆ ದಿನ ನಮ್ಮೂರಲ್ಲಿ ಚೆನ್ನಾಗಿ ಮಳೆ ಬಂದಿತ್ತು. ರಸ್ತೆಯಲ್ಲ ಒದ್ದೆ , ಒದ್ದೆ. ಸಂಬಂಧಿಕರ ಮದುವೆ ಇತ್ತೆಂದು ಮನೆಯವರೆಲ್ಲ ನಾಲ್ಕು ದಿನದ ಮಟ್ಟಿಗೆ ಊರಿಗೆ ಹೋಗಿದ್ದರು. ಮನೆಯಲ್ಲಿ ನಾನೊಬ್ಬಳೇ. ಸಂಜೆಯಾಗುತ್ತಿದ್ದಂತೆ ನನಗೂ ಒಬ್ಬಳೇ ಇದ್ದು ಬೋರ್ ಆಗುತಿತ್ತು. ಏನಾದರೂ ಬರೆಯೋಣ ಎನಿಸಿ ಒಂದು ಕಾಗದ, ಪೆನ್ನು ತೆಗೆದುಕೊಂಡು ತಾರಸಿ ಹತ್ತಿದೆ .ಒಬ್ಬಳೇ ಇದ್ದಾಗೆಲ್ಲ ತಾರಸಿ ಮೇಲೆ ಕುಳಿತುಕೊಳ್ಳೋದು ನನ್ನ ಅಭ್ಯಾಸ. ಮಳೆ ನಿಂತಿತ್ತು. ತಾರಸಿಯ ಮೆಟ್ಟಿಲು ಒದ್ದೆಯಾಗಿ ಜಾರುವಂತಿತ್ತು. ಆಕಾಶದಲ್ಲಿರುವ ಕಾರ್ಮೋಡವೆಲ್ಲ ಮಳೆ ಹನಿಯಾಗಿ ಕರಗಿ,ಆಗಸ ನಿರ್ಲಿಪ್ತತೆಯಿಂದ ಹೊಳೆಯುತ್ತಿತ್ತು.ಸೂರ್ಯ ನಿಧಾನಕ್ಕೆ ಮೋಡದಿಂದಾಚೆ ಬರಲು ಹವಣಿಸುತಿದ್ದ. ತೆಂಗಿನ ಮರದ ಗರಿಗಳನ್ನು ಒಮ್ಮೆ ಅಲ್ಲಾಡಿಸಿದೆ.ಮುಖದ ಮೇಲೆಲ್ಲಾ ಒಮ್ಮೆ ಮಳೆ ಹನಿ ಚಿಮ್ಮಿಸಿಕೊಂಡೆ. ಆಹಾ! ಎಂಥ ಸುಖ.
ಕಾಗದ ಹಿಡಿದುಕೊಂಡು ಕುಳಿತವಳ ಮನಸಲ್ಲಿ ಏನೂ ಬರೆಯಲು ತೋಚುತ್ತಿಲ್ಲ. ತಣ್ಣನೆ ಬೀಸುತಿದ್ದ ಗಾಳಿಗೆ ,ಛಳಿ ಆಗುತ್ತಿರುವುದಷ್ಟೇ ಭಾಸವಾಗುತ್ತಿತ್ತು ನನಗೆ. ಏನಪ್ಪಾ ಮಾಡೋದು, ಇನ್ನು ನಾಲ್ಕು ದಿನ ಹೇಗಪ್ಪ ಕಳೆಯೋದು? ಮಾತಾಡದೆ ಹೇಗಿರೋದು? ಫೋನಲ್ಲಿ ಎಷ್ಟು ಮಾತಾಡಕೆ ಸಾದ್ಯ?ಸುಮ್ನೆ ಹಾಡು ಕೇಳುತ್ತ ಕುಳಿತೆ.ತುಂತುರು ಅಲ್ಲಿ ನೀರ ಹಾಡು ... ಗುನುಗುತಿತ್ತು ನನ್ನ ಕಿವಿಯಲ್ಲಿ.ಸಂದರ್ಭಕ್ಕೆ ತಕ್ಕ ಹಾಡು. ಸ್ವಲ್ಪ ಹೊತ್ತಲ್ಲೇ ಹಾಡು ಸಾಕೆನಿಸಿತು. ಕತ್ತಲಾಗುತ್ತಾ ಬಂದಿತ್ತು. ಯಾರೋ ಸಣ್ಣಗೆ ಕಿರುಚಿದ್ದು ಕೇಳಿತು. ಆ ಧ್ವನಿ ಇನ್ನು ಇನ್ನೂ , ಸ್ಪಷ್ಟವಾಗುತ್ತ , ಹೆಚ್ಚಾಗುತ್ತಾ ಹೋಯಿತು.ಇದ್ದಕ್ಕಿದ್ದಂತೆ ಹಸು ತರಹ ಯಾರೋ ಜೋರಾಗಿ ಕಿರುಚಿದ್ದು ಕೇಳಿಸಿತು. ಏನಿರಬಹುದು ಎಂದು ತರಾಸಿ ಇಂದ ಇಣುಕಿ ನೋಡಿದರೆ, ನಮ್ಮನೆ ತೋಟದಲ್ಲಿದ್ದ ಹುಲ್ಲಿನ ರಾಶಿ ಮೇಲೆ ಯಾರೋ ಬಿದ್ದು ಒದ್ದಾಡುತ್ತಿದ್ದುದು ತಿಳಿ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣಿಸಿತು.ಕೈಯಲ್ಲಿದ್ದ ಪೆನ್ನು ಕಾಗದ ಅಲ್ಲೇ ಬಿಸಾಕಿ ದರ-ದರನೆ ತಾರಸಿಯ ಮೆಟ್ಟಿಲುಗಳನ್ನು, ಜಾರುತ್ತವೆ ಎಂದೂ ಲೆಕ್ಕಿಸದೇ, ಒಂದೇ ಉಸುರಿಗೆ ಇಳಿದೆ. ಜೊತೆಜೊತೆಯಲ್ಲೇ , ಏನಪ್ಪಾ ಮನೇಲಿ ಯಾರು ಇಲ್ಲ. ಏನಿದು ಅಂತ ಅಂಜಿಕೆಯೂ ಶುರುವಾಗಿದ್ದು ಸುಳ್ಳಲ್ಲ.
ಹುಲ್ಲಿನ ರಾಶಿಯ ಮೇಲೆ ತಲೆ ಕೆಳಗಾಗಿ,ಬೆನ್ನು ಮೇಲಾಗಿ ಒಂದು ಮೂರು ವರೆ ಅಡಿ ಗಾತ್ರದ ಒಂದು ಪ್ರಾಣಿ ಇತ್ತು. ಮನುಷ್ಯನ ಹಾಗೆ ಕಾಣಿಸಿತು. ನೋಡ ನೋಡುತ್ತಿದ್ದಂತೆ ಯಾವುದೋ ಒಂದು ಗುಂಪು ನನ್ನ ಮನೆ ಕಡೆಗೆ ಓಡಿ ಬರುವುದು ಕಾಣಿಸಿತು. ಆಗಲೇ ತಿಳಿದಿದ್ದು ಅವರು ಈ ಪ್ರಾಣಿಯನ್ನು ಬೆರೆಸಿಕೊಂಡು ಬಂದಿದ್ದರು ಎಂದು. ಹಾಗೇ ಸುತ್ತ ಮುತ್ತಲು ನೋಡಿ ಅವರು ಹೊರಟು ಹೋದರು. ನಾನು ಆತನನ್ನು ಎಬ್ಬಿಸಲು ಮುಂದಾದೆ. ಅವನ ತಲೆ ಹಿಡಿದು ಎತ್ತಬೇಕು ಎಂದುಕೊಂಡಾಗ ಕೈಗೆ ಏನೋ ತಗುಲಿದಂತಾಯಿತು. ನೋಡಿದರೆ ಏನ್ ಆಶ್ಚರ್ಯ! ಹಸು-ಕರುಗಳಿಗಿರುವಂಥ ಕಿವಿಗಳು.
ಅಬ್ಬ!! ಭಯ ಆಗ್ತಾ ಇದೆ. ಸ್ವಲ್ಪವೇ ಪ್ರಜ್ಞೆ ಇದ್ದ ಅವನನ್ನು ಮನೆ ಒಳಗೆ ಕರೆಕೊಂಡು ಹೋಗಿ ಸೋಫಾದ ಮೇಲೆ ಮಲಗಿಸಿದೆ. ಹೆಚ್ಚೆಂದರೆ ಹದಿನೈದು ವರುಷ ಇರಬಹುದು ಆತನಿಗೆ. ಅವನ ಬಟ್ಟೆಗಳು ತೀರಾ ವಿಚಿತ್ರ ಎನಿಸುವಂತೆ ಇದ್ದವು. ಯಾವುದೋ ಬೇರೆ ಗ್ರಹದ ಪ್ರಾಣಿಯಂತೆ ಕಂಡಿತು ನನಗೆ. ನಾನು ಆ ದಿನ ರಾತ್ರಿ ಮಲಗಲಿಲ್ಲ. ಅವನಿಗೆ ಪ್ರಜ್ನೇನು ಹೊರಟು ಹೋಗಿತ್ತು. ಏನೂ ಮಾಡಲು ತಿಳಿಲಿಲ್ಲ. ಅಂತೂ ಬೆಳಗ್ಗೆ ಅಗುವಷ್ಟ್ತೊತ್ತಿಗೆ ಎಚ್ಚೆತ್ತುಕೊಂಡ. ನನಗೂ ಸಮಾಧಾನವಾಯಿತು. ಆತ ಏಳುತ್ತಿದ್ದಂತೆ ಸುತ್ತಲೂ ಆಶ್ಚರ್ಯದಿಂದ ತನ್ನ ನೀಲಿ ಕಣ್ಣುಗಳನ್ನು ಬಿಟ್ಟುಕೊಂಡು ನೋಡುತಿದ್ದ. ಅವನಿಗೆ ಕನ್ನಡ ಬರುತ್ತದೆಯೋ ಎಂಬ ಕಲ್ಪನೆನೂ ಇಲ್ಲದೆ ಅವನ ಬಳಿ ಮಾತಾಡಿಸಿದೆ.ಅವನ ಬಳಿ ಕುಳಿತಿದ್ದೆ. ಅವನು ನನ್ನ ಹೆಗಲಿಗೆ ತಲೆ ಇಡಲು ಮುಂದಾದ. ನಾನು ಒಂದೇ ಸರೀ ಗುಪ್ ಅಂತ ಎದ್ದು ನಿಂತೆ. what the hell are you doing ? ಅಂತ, ಸಿಟ್ಟಿಂದ ಹೇಳಿದೆ. ಪಾಪ!! ಆ ಪ್ರಾಣಿಯ ಮುಖ ಬಾಡಿತ್ತು. ಅವಾಗಲೇ ನಂಗೆ ತಿಳಿಯಿತು , ಇಂಗ್ಲಿಷ್ ಅರ್ಥ ಆಗುತ್ತೆ ಅಂತ. I was trying to say thanks ಅಂತು ಅದು . Ok but I dont like such closeness . Please dont mind ಅಂದೆ. "I am sorry "ಅಂದ. ತಣ್ಣಗಾದೆ.
ಕಾಫಿ ತಂದು ಕೊಟ್ಟೆ. ಅದನ್ನು ಕುಡಿಯೋದು ಬಿಟ್ಟು , ನಾಲಿಗೆ ಇಂದ ನೆಕ್ಕ ತೊಡಗಿದ. ನಾನೇ ಮಾತಾಡಿಸಿದೆ. ಯಾರು ನೀನು, ಯಾಕೆ ಹೀಗೆ ಬಂದಿದೀಯ ?ನಿಮ್ ಮನೆ ಎಲ್ಲಿದೆ ಹೇಳು. ನಿನ್ನನ್ನು ನಿಮ್ಮ ಮನೆಗೆ ಬಿಟ್ಟು ಬರುತ್ತೇನೆ ಅಂತ. ಅವ ಕಾಫಿ ನೆಕ್ಕುತ್ತಲೇ ಹೇಳಿದ. ನನ್ನ ಮನೆ ಇದಲ್ಲ. "ತಾರಾ ಪ್ರಪಂಚ" ಅಂತ ನನ್ನ ಊರಿನ ಹೆಸರು. ನನ್ನ ಹೆಸರು ಪೋಲಾರಿಸ್. ನಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ. ನಮ್ಮ ಜಗತ್ತಲ್ಲಿ ಉತ್ತಿರ್ಣನಾಗದಿದ್ದರೆ ಅವರನ್ನು ಕೊಲ್ಲಲಾಗುತ್ತದೆ. ನನ್ನ ಅಮ್ಮನ ಹೇಳಿಕೆಯ ಮೇರೆಗೆ ನನ್ನ ಬಿಡುಗಡೆ ಮಾಡಿದ್ದಾರೆ. ನಾನು ಈಗ ಮತ್ತೆ ಅಲ್ಲಿ ಹೋದರೆ ನನ್ನ ಕೊಂದೇ ಬಿಡುತ್ತಾರೆ. ಅವನ ಮಾತುಗಳನ್ನು ಕೇಳಿ ನನಗೇನೋ ಪಾಪ ಅನ್ನಿಸಿತು. ಅವ ನನ್ನ ಪ್ರಶ್ನೆ ಕೇಳಲು ಶುರು ಮಾಡಿದ. ನೀನು ಯಾಕೆ ಒಬ್ಬಳೇ ಇದ್ದೀಯ? ಇದು ಯಾವ ಊರು ಹಾಗೆ ಹೀಗೆ ಅಂತೆಲ್ಲ. ನಾನು ಹೇಳಿದೆ, ಅಮ್ಮ ಅಪ್ಪ ಊರಿಗೆ ಹೋಗಿದಾರೆ. ಇದು ಭೂಮಿ . ಈ ಗ್ರಹಕ್ಕೆ ಭೂಮಿ ಅಂತ ಹೆಸರು ಅಂತ. ಅವನು ನಾನು ಮಾತಾಡುವುದನ್ನು ಕಣ್ಣು ಮಿಟುಕಿಸದೆ ನೋಡುತಿದ್ದ. ನೀನು ತುಂಬಾ ಚೆನ್ನಾಗಿ ಮಾತಾಡುತ್ತಿಯ ಅಂದ. ಥ್ಯಾಂಕ್ಸ್ ಅಂದಿದ್ದೆ. ನಾನು ನಿಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತೇನೆ. ನನಗೆ ಈ ಭೂಮಿಯಲ್ಲಿ ನಿನ್ನ ಬಿಟ್ಟರೆ ಇನ್ಯಾರು ಗೊತ್ತಿಲ್ಲ. ದಯವಿಟ್ಟು ಇಲ್ಲ ಹೇಳಬೇಡ. ನಿಮ್ಮ ಮನೆ ನಂಗೆ ಬಹಳ ಹಿಡಿಸಿತು ಹೇಳಿದ. ಇದೆಂತ ಸಂಕಟ ಬಂತಪ್ಪ. ಒಳ್ಳೆ ಹಸು ತರಹವೇ ಇದ್ದಾನೆ ಅಂದರೂ ತಪ್ಪಿಲ್ಲ. ಕೈ-ಕಾಲುಗಳು ಮನುಷ್ಯರ ಹಾಗೆ ಇದ್ದರೂ, ಮುಖ ಮಾತ್ರ ಹಸುದೆ! ನನಗೂ ಹಸು ಅಂದರೆ ಇಷ್ಟವೇ.. ಯೋಚಿಸಿ , ಅಂತೂ ಸ್ವಲ್ಪ ಹೊತ್ತಿನ ನಂತರ ನನ್ನ ನಿರ್ಧಾರ ತಿಳಿಸಿದೆ. ಸರಿ, ಅಮ್ಮ , ಅಪ್ಪ ಬಂದ ಮೇಲೆ ಅವರಿಗೂ ಕೇಳಿ ನಿನಗೆ ವಿಷಯ ತಿಳಿಸುತ್ತೇನೆ ಮರಿ. ಅಲ್ಲಿವರೆಗೂ ನೀನು ನಮ್ಮ ಮನೆಯಲ್ಲೇ ಇರು ಅಂದೆ. ಅದಕ್ಕವನು , ಹಾಗಿದ್ದರೆ ನೀನು ಇನ್ನು ಮೇಲೆ ನನ್ನ "ತಮ್ಮಾ " ಅಂತ ಕರಿ ಅಂದ. ನನಗೆ ಖುಷಿ ಆಯ್ತು. ನಿನಗೆ maggi ಇಷ್ಟ ಆಗುತ್ತಾ ? ತಿನ್ನುತ್ತಿಯ? ಎಂದೆ..ಹ್ಞೂ ಅಂದ.
"ತಮ್ಮ " ಅಂತ ಕರಿ ಅಂದ್ನಲ್ಲ, ನನಗೂ ಸ್ವಂತ ಅಣ್ಣ,ತಮ್ಮ ಇಲ್ಲ. ಇವನು ಒಳ್ಳೇ ತಮ್ಮ ಸಿಕ್ಕ ಅಂತ ಸಂತೋಷದಿಂದ maggi ಮಾಡಿಕೊಂಡು ಅವನಿಗೆ ಕೊಡಲು ಬಂದರೆ , ತಮ್ಮ ಅಲ್ಲಿ ಇರಲಿಲ್ಲ!!!
ಶುಕ್ರವಾರ, ಜುಲೈ 09, 2010
ಇಷ್ಟ ಪಡುವಂತಹ ಹುಡುಗಿ......

(ಇಂಗ್ಲಿಷ್ ಲಿ ಇ-ಮೇಲ್ ಮೂಲಕ ಬಂದ ಒಂದು ಕಥೆ ಇದು.ಯಾಕೋ ಮನಸಿಗೆ ಬಹಳ ಇಷ್ಟ ಆಯಿತು.ನಿಮಗೂ ಇಷ್ಟವಾಗಬಹುದೆಂದು ಅನುವಾದ ಮಾಡಿ ಬ್ಲಾಗಿನಲ್ಲಿ ಹಾಕಿಕೊಳ್ಳುತಿದ್ದೇನೆ.)
ಆ ಹುಡುಗನಿಗೆ ನಿಜವಾದ ಪ್ರೇಮದಲ್ಲಿ ಬಹಳ ನಂಬಿಕೆ. ತನಗಾಗಿ ಒಂದು ವಿಶೇಷ ಗುಣಗಳುಳ್ಳ ಹುಡುಗಿ ಇದ್ದೇ ಇದ್ದಾಳೆ ಎಂಬ ಭಯಂಕರ ಭರವಸೆ ಆತನಿಗೆ. ಯಾರೋ ತನಗಾಗಿ ಕಾದಿದ್ದಾರೆ, ಅವಳೇ ಬರುತ್ತಾಳೆ ಹೀಗೆ ಇನ್ನೆನ್ನೇನೋ...
ಪ್ರತಿ ವರುಷ ದೀಪಾವಳಿಗೆ ಅವನ ಗೆಳತಿ ಇವನನ್ನು ನೋಡಲೆಂದೇ ಬರುತಿದ್ದಳು. ಅವಳು ಅವನನ್ನು ಪ್ರೀತಿಸುತಿದ್ದಳು. ಅವಳು ಪ್ರೀತಿಸುತ್ತಿದ್ದಾಳೆ ಎಂಬ ಸುಳಿವು ಗೊತ್ತಿದ್ದು, ಹುಡುಗ ಅವಳಲ್ಲಿ ಯಾವುದೇ ಬೇರೆ ರೀತಿಯಾದ ಭಾವನೆಗಳು ಬರದಿರಲೆಂದು ಬೇರೆ ಬೇರೆ ಹುಡುಗಿಯರನ್ನು ಕರೆತಂದು ಅವರೇ ತನ್ನ ಪ್ರೇಯಸಿ ಎಂಬಂತೆ ನಾಟಕವಾದುತಿದ್ದ. ಇದನೆಲ್ಲ ನೋಡಿದ ಗೆಳತಿಗೆ ಪ್ರತಿ ಬಾರಿಯೂ ಅನ್ನಿಸುತಿತ್ತು. ಇನ್ನು ಎಲ್ಲ ಮುಗಿಯಿತು ನಮ್ಮ ಮದ್ಯೆ. ಇವನು ನನ್ನ ಪ್ರೀತಿಸೋಲ್ಲ ಎಂದು. ಎಷ್ಟೋ ಬಾರಿ ಒಂಟಿಯಾಗಿ ಕುಳಿತು ಅತ್ತು ಅತ್ತು ಕಣ್ಣೀರಾಗಿದ್ದಳು.ಪ್ರತೀ ಸಾರಿಯೂ ನಿರಾಶೆಯಿಂದಲೇ ತೆರಳುತ್ತಿದ್ದಳು. ಆದರೆ ಅವನೆದುರು ತೋರಿಸದಷ್ಟು ಅಹಂಕಾರ ಅವಳಲ್ಲೂ ಇತ್ತು.
ಎಷ್ಟೋ ದೀಪಾವಳಿಗಳು ಕಳೆದರೂ ಆತ ಬೇರೆಯವರ ಜೊತೆಯೇ ಇರುವುದನ್ನು ನೋಡಿ ಇನ್ನು ಆಗುವುದಿಲ್ಲ ಅಂತ ತಿಳಿದು ಹುಡುಗಿ ಆತನಿಗೆ ತನ್ನ ಮನಸ್ಸಲ್ಲಿ ಇರುವುದನ್ನು ಹೇಳುತ್ತಾಳೆ. ನೀನೇ ಬೇಕು. ಮತ್ಯಾರು ಬೇಡ ಅಂತ. ಆತನಿಗೆ ಈ ವಿಷ್ಯ ಮೊದಲೇ ಅರ್ಥವಾಗಿದ್ದರೂ ಕೂಡ ಅವಳಿಗೆ ಸರಿಯಾಗಿ ಪ್ರತಿಕ್ರಯಿಸಲಿಲ್ಲ. ಅವನಿಗನ್ನಿಸಿತ್ತು , ತನ್ನ ಬೇರೆ ಹುಡುಗಿಯರ ಜೊತೆ ನೋಡಿ ಇವಳು ತನ್ನ ಬಿಟ್ಟು ಬಿಡುತ್ತಾಳೆ ,ತಮ್ಮ ಮದ್ಯೆ ಎಲ್ಲ ಮುಗಿದಿದೆ ಅಂತ ಬಿಟ್ಟು ಬಿಡುತ್ತಾಳೆ ಎಂದು. ಅವನಿಗೂ ಅವಳ ಮೇಲೆ ಅನುಕಂಪ ಬಂದರೂ , 'ಇವಳು ತಾನು ಇಷ್ಟ ಪಡುವಂತಹ ಹುಡುಗಿ ' ಅಲ್ಲ ಎಂದು ತಕ್ಷಣವೇ ನಿರಾಕರಿಸುತ್ತಾನೆ. ಅದಾದನಂತರ ಮೂರು ವರುಷಗಳು ಕಳೆಯಿತು. ಹುಡುಗಿ ಇನ್ಯಾವತ್ತು ಅವನ ಕಣ್ಣಿಗೆ ಬೀಳಲಿಲ್ಲ, ಅವನೂ ಬದುಕಿನೊಂದಿಗೆ ಮುಂದುವರೆದ. ಇನ್ನೂ 'ತಾನು ಇಷ್ಟ ಪಡುವಂತಹ ಹುಡುಗಿ 'ಯನ್ನು ಹುಡುಕುತ್ತಲೇ ಇದ್ದ. ಆದರೆ ಎಲ್ಲೋ ಒಂದು ಕಡೆ 'ಅವಳನ್ನು' miss ಮಾಡಿಕೊಳ್ಳುತಿದ್ದ.
ಈ ವರುಷ ದೀಪಾವಳಿಗೆ ಹುಡುಗನ ಗೆಳೆಯ ಬಂದವನು ಕೇಳುತ್ತಾನೆ. ಎಲ್ಲಿ ನಿನ್ ಹುಡುಗಿಯರು?? ಅವಳೆಲ್ಲಿ , ಪ್ರತೀ ವರುಷ ನಿನ್ನ ನೋಡಲೆಂದೇ ಬರುತಿದ್ದಳಲ್ಲ ಎಂದಾಗ ... ಇವನಿಗೆ ಮನದಲ್ಲೇನೋ ಕುಷಿ ಆಗುತ್ತದೆ. ನೆನಪಿಸಿಕೊಳ್ಳುತ್ತಾನೆ. ತಾನು ಅವಳಿಗೆ ಎಷ್ಟೊಂದು ಕ್ರೂರವಾಗಿ ನಡೆದುಕೊಂಡೆ.ಆ ಹುಡುಗಿಯರನ್ನು ಒಂದು ದಿನಕ್ಕಾಗಿ ತನ್ನ ಪ್ರೇಯಸಿ ಎಂಬ ರೀತಿ ನಾಟಕವಾಡಿ ಎಂದು ಬೇಡಿಕೊಂಡಿದ್ದನ್ನು ನೆನೆಸಿಕೊಂಡ. ಒಟ್ಟಾರೆ ಅವಳು ತನ್ನ ಬಿಟ್ಟು ಹೋಗಲಿ ಎಂಬ ಭಾವನೆ ಒಂದೇ ಮಾನಸನ್ನಾಳುತಿತ್ತು. ಎಷ್ಟು ಸಾದ್ಯನೋ ಅಷ್ಟು 'ನೆಗ್ಲೆಕ್ಟ್ ' ಮಾಡಿದ್ದು. ಎಲ್ಲ ನೆನಪಾಗುತ್ತೆ.
ಯಾರೋ ಜೋರಾಗಿ ಕೂಗಿದಂತಾಗಿ ನೋಡುತ್ತಾನೆ- ಯಾವುದೊ ಹೆಣ್ಣು ಧ್ವನಿ. ಯಾರೋ ಹಬ್ಬಕ್ಕೆ ಬಂದವರು.
"ಏನು ಹಬ್ಬಾನ ಖುಷಿ ಇಂದ ಆಚರಿಸುತಿದ್ದಿಯ? "
"ಹಾಂ... ಹೌದು "
"ಯಾಕೆ ಈ ವರುಷ ಒಬ್ಬನೇ ಬಂದಿದೀಯ? ಯಾಕೆ ಯಾವ ಪ್ರೀಯಸಿಯರೂ ಬೇಡ್ವ ನಿನ್ನೊಂದಿಗೆ ನಾಟಕವಾಡಲು ?"
"ಇಲ್ಲ.... ನನಗಿನ್ಯಾರು ಬೇಡ.. "
"ಒಹ್ ! ಹಾಗಾದರೆ ನಿನಗೆ ಯಾರೋ ಸಿಕ್ಕಿದ್ದಾರ? ಇಷ್ಟು ವರುಷಗಳಿಂದ ಹುಡುಕುತಿದ್ದೇಯಲ್ಲ"...
"ಹೌದು.. ಅವನ ಮುಖ ಅರಳಿತು. ಕೆಲವು ವರುಷಗಳಿಂದ ನಾನು ಯಾರನ್ನೂ ಹುಡುಕ ಹೋಗಲಿಲ್ಲ"
ಆಮೇಲೆ ಅವನಿಗೆ ತಿಳಿಯಿತು. ಅವನು ಹುಡುಕುತಿದ್ದ ಹುಡುಗಿ ಇನ್ಯಾರು ಅಲ್ಲ. ಪ್ರತೀ ದೀಪಾವಳಿಗೆ ತನ್ನ ನೋಡಲೆಂದೇ ಬರುತಿದ್ದ ತನ್ನ ಗೆಳತಿಯೇ ಎಂದು. ಆ ಹೆಣ್ಣು ದ್ವನಿ ಹೇಳಿದ ಮಾತುಗಳು ಇವನ ಕಣ್ಣು ತೆರೆಸಿತ್ತು.
ತನಗೆ ಬೇಕಾದ ಹುಡುಗಿ ಸಿಕ್ಕಿ ಆಗಿತ್ತು. ಅದಕ್ಕೆ ಅವನು ಅವಳು ಹೊರಟು ಹೋದ ಮೇಲೂ ಬೇರೆ ಹುಡುಗಿಯನ್ನು ಹುಡುಕಿಕೊಳ್ಳಲಿಲ್ಲ. ನಿಜವಾಗಿ ಅವನಿಗೆ ಬೇಕಾಗಿದಿದ್ದು 'ತಕ್ಕ ಹುಡುಗಿ' ಆಗಿರಲಿಲ್ಲ. ಅವನಿಗೆ ಬೇಕಿದುದ್ದು "perfection " .ಹೌದು "perfection " .ಸಂಭಂದ ಎನ್ನುವುದು ಎರಡು ಕಡೆಯಿಂದ ಹೊಂದಾಣಿಕೆಯಿಂದ ಆಗುವಂತದ್ದು. ಅವನಿಗೆ ತನ್ನ ಬದುಕಿನಲ್ಲಿ ಏನೋ ದೊಡ್ಡದನ್ನು ಕಳೆದುಕೊಂಡ ಅನುಭವವಾಯಿತು. ತಕ್ಷಣವೇ ಅವಳಿಗೆ ಕರೆ ಮಾಡಲು ಪ್ರಯತ್ನಿಸಿದ. ಅವನ ಮನಸ್ಸಿನಲ್ಲಿ ಭಯ ತುಂಬಿಕೊಂಡಿತ್ತು. ಎಲ್ಲಿ ಅವಳಿಗೆ ಇನ್ಯಾರೋ ಸಿಕ್ಕಿದ್ದಾರೋ ,ಅಥವ ಅವಳಿಗೆ ತನ್ನ ಮೇಲೆ ಮೊದಲಿದ್ದ ಭಾವನೆ ಈಗಿದೆಯೋ ಇಲ್ಲವೋ ಅಂತ. ದೀಪಾವಳಿ ಆದ್ದರಿಂದ ಕರೆ ಹೋಗುವುದು ಕಷ್ಟವಾಗಿತ್ತು . ಸುಮಾರು ರಾತ್ರಿ 12 ಗಂಟೆಗೆ ಕರೆ ಹೋಯಿತು. ಅವಳೇ ಫೋನ್ ಎತ್ತಿದಳು. ಇವನು ತನ್ನ ಮನಸ್ಸಿನ ಭಾವನೆಗಳೆಲ್ಲ ಹೇಳಿಬಿಟ್ಟ. ಕ್ಷಮೆ ಕೇಳಿದ. ಅಷ್ಟು ವರುಷಗಳಾದರೂ ಅವಳು ಅವನ ನೆನಪಲ್ಲೇ ಇದ್ದಳು. ಅವನ ಪ್ರೀತಿಸದೇ ಬದುಕುವುದು ಅವಳಿಂದ ಸಾಧ್ಯವಾಗಿರಲಿಲ್ಲ . ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅವರ ಜೀವನದ ಹೊಸ ಸಂತೋಷದ ಅದ್ಯಯ ಶುರುವಾಗಿತ್ತು. ಆದರೆ ಈ ಕಾಲ ಹೆಚ್ಚು ದಿನ ಉಳಿದಿಲ್ಲ.ಅವಳನ್ನು ಭೇಟಿ ಮಾಡಬೇಕೆಂದು ಹೊರಡಲು ತಯಾರಾಗುತ್ತಿದ್ದಾಗ ಅವಳ ಅಪ್ಪನ ಕರೆ ಬಂತು. ರಸ್ತೆಯಲ್ಲಿ ಹೋಗುವಾಗ ಕಾರ್ ಅಪಘಾತದಲ್ಲಿ ತಲೆಗೆ ಗಾಯವಾಗಿ , ಆರು ಘಂಟೆಗಳು ಕೋಮದಲ್ಲಿದ್ದು ಸತ್ತು ಹೋದಳು ಅಂದು. ಇವನ ಎದೆ ಒಡೆಯುವುದೊಂದೇ ಉಳಿದಿತ್ತು. ವಿಧಿ ಯಾಕೆ ನನ್ನೊಡನೆ ಇಷ್ಟೊಂದು ಕ್ರೂರವಾಗಿ ಆಟವಾಡಬೇಕಿತ್ತು ? ತನ್ನ ತಾನು ದ್ವೇಶಿಸ ತೊಡಗಿದ. ದೇವರನ್ನೂ ದ್ವೇಷಿಸಿದ. ತನ್ನ ತಪ್ಪಿನ ಅರಿವಾಗಲು ಇಷ್ಟು ತಡ ಮಾಡಿದಕ್ಕೆ ತನ್ನ ತಾನೇ ದ್ವೇಷಿಸಿದ.
ನೀತಿ: ಇರುವುದನ್ನು ಇಷ್ಟಪಡಿ,
ಕಾಯುವವರಿಗೆ ಸಮಯ ಬಹಳ ಚಿಕ್ಕದು,
ಹೆದರುವವರಿಗೆ ಬಹಳ ಚುರುಕು,
ವ್ಯಥೆ ಪಡುವವರಿಗೆ ಬಹಳ ದೀರ್ಘ,
ಹರ್ಶಿಸುವವರಿಗೆ ಬಹಳ ಸಣ್ಣದು,
ಆದರೆ ಪ್ರೀತಿಸುವವರಿಗೆ ಸಮಯ ಅನಂತ.
ಅದಕ್ಕೆ ಜೀವನದ ಪ್ರತೀ ಕ್ಷಣವನ್ನು ಆನಂದಿಸಿ. ಬದುಕನ್ನು ಪ್ರೀತಿಸಿ. ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಆಮೇಲೆ ತಡವಾಗಿ ಹೋಯಿತು ಎಂಬ ವಿಷಾದ ಮಾತ್ರ ಉಳಿಯುವುದು . ಹಾಗಾಗದಿರಲಿ. .. :-)
ಸೋಮವಾರ, ಜೂನ್ 28, 2010
ಶುಭ ಹಾರೈಸೋಣ

ನಾನು ಕೆಲವರನ್ನು ಗಮನಿಸಿದ್ದೀನಿ...
ಅದೇನು ಆಂಗ್ಲ ಭಾಷೆಯ ಮೇಲಿನ ವ್ಯಾಮೋಹವೋ ಏನೋ?? ಎಷ್ಟೋ ಸಾರಿ ಕನ್ನಡ ಭಾಷೆ ಬಂದರೂ ಆಂಗ್ಲ ಭಾಷೆ ಮಾತಾಡುವವರನ್ನ . ಅಂಗ್ಲ ಭಾಷೆ ಚೆನ್ನಾಗಿ ಬರುವವರು ಮಾತಾಡಿದರೆ ಸ್ವಲ್ಪ ಮಟ್ಟಿಗಾದರೂ ಸಹಿಸಿಕೊಳ್ಳಬಹುದು. ಆದರೆ ಈ ಅರೆ- ಬರೆ ಆಂಗ್ಲ ಭಾಷೆ ಮಾತಾಡೋರನ್ನ ದೇವ್ರಾಣೆ ಸಹಿಸಿಕೊಳ್ಳಕೆ ಆಗಲ್ಲ!! ಪಾಪ.. ಬಸ್ conductor ಹತ್ರ ಒಂದು ಹುಡುಗಿ ಆ ದಿನ ಏನೋ ಕೇಳ್ತಾ ಇದ್ಲು. ಅವನಿಗೋ ಆಂಗ್ಲ ಭಾಷೆ ತಿಳಿಯುತ್ತಿಲ್ಲ. ಇವಳಿಗೂ ಕನ್ನಡ ಬರುವುದಿಲ್ಲವೇನೋ ಅಂದುಕೊಂಡೆ ನಾನು . ಸ್ವಲ್ಪ ಹೊತ್ತಲ್ಲೇ ಇವಳಿಗೆ ಯಾವುದೋ ಕರೆ ಬಂತು.ನೋಡಿದರೆ ಗಳಗಳನೆ ಕನ್ನಡ ಮಾತಾಡ್ತಾ ಇದಾಳೆ..ಅಬ್ಬ!! ಇದೇನು ತಿಕ್ಲು ಇರಬಹುದು ಅಂದುಕೊಂಡು ಸುಮ್ನೆ ನಕ್ಕು ಬಿಟ್ಟಿದ್ದೆ.ಇದೊಂದು ಉದಾಹರಣೆ ಅಷ್ಟೇ !!
ಕನ್ನಡ ಪ್ರೀತಿ ಇದ್ದ ಮಾತ್ರಕ್ಕೆ ಬೇರೆ ಭಾಷೆ ದ್ವೇಷ ಅಂತಲ್ಲ. ಅವಶ್ಯಕತೆ ಇದ್ದರೆ ಅಷ್ಟೇ ಬೇರೆ ಭಾಷೆ ಪ್ರಯೋಗ ಮಾಡಬಹುದೇನೋ ಅನ್ಸುತ್ತೆ ನಂಗೆ. ಇರಲಿ ಬಿಡಿ . ಇದು ನನ್ನ ಸ್ವಂತ ಅಭಿಪ್ರಾಯ....
***********
ವಿಷಯ ಇದಲ್ಲ...
ನಿಮಗೆಲ್ಲರಿಗೂ "ಮೃದುಮನಸು" ಬ್ಲಾಗ್ ತಿಳಿದೇ ಇದೆ.ಇದರ ನಿರ್ವಾಹಕರು ಕುವೈತ್ ನಲ್ಲಿದ್ದರೂ ಕನ್ನಡ ಮರೆತಿಲ್ಲ .ಇದಕ್ಕೆ ಇವರು ಪ್ರತಿ ತಿಂಗಳೂ ಹೊರತರುತ್ತಿರುವ "ಮರಳ ಮಲ್ಲಿಗೆ " ಎಂಬ ಸಂಚಿಕೆ , ಕನ್ನಡ ಕಂಪನ್ನು ಬೀರುತ್ತಾ ಮರಳುಗಾಡಿನಲ್ಲಿ ಬಿತ್ತರ ಗೊಳ್ಳುತ್ತಿರುವುದೇ ಸಾಕ್ಷಿ. ಸ್ನೇಹಿತರೇ ನಿಮ್ಮ ಬರಹಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಿ.
maralamallige@kuwaitkannadakoota.org
ಕೆಲವೊಂದಷ್ಟು ನಿಯಮಾವಳಿಗಳು ಇವೆ ... ತಿಳಿಯಲು ಇಲ್ಲಿ ಕ್ಲಿಕ್ಕಿಸಿ
http://mrudhumanasu.blogspot.com/2010/05/blog-post.html
ಕನ್ನಡಕ್ಕಾಗಿ ಇವರು ಮಾಡುತ್ತಿರುವ ಕೆಲಸಕ್ಕೆ ನಾವೂ ಸೇರಿಕೊಳ್ಳೋಣ. ಅವರು ಮಾಡುತ್ತಿರುವ ಪ್ರಯತ್ನಕ್ಕೆ ನಾವೂ ಕೈ ಜೋಡಿಸೋಣ. ಶುಭ ಹಾರೈಸೋಣ.
ಕಳಿಸುತ್ತೀರಲ್ಲ ???
- ದಿವ್ಯಾ :-)
ಭಾನುವಾರ, ಜೂನ್ 20, 2010
ಒಂದು ಮೀನಿನ ಸುತ್ತ...
ಹುಡುಗ, ಮೀನು ಅಪ್ಪಿತಪ್ಪಿ ಆ ಚರಂಡಿಗೆ ವಾಪಸ್ಸು ಬೀಳದಿರುವಂತೆ ನೋಡಿಕೊಳ್ಳುತಿದ್ದಾನೆ. ಕೈಯಲ್ಲಿ ಒಂದು ಕೋಲನ್ನು ಹಿಡಿದುಕೊಂಡಿದ್ದಾನೆ, ಮೀನು ಚರಂಡಿಗೆ ಬಿದ್ದರೆ ಎತ್ತಿ ತೆಗೆಯಲು. ಆದರೂ ಮೀನು ಪ್ರಯತ್ನ ಮಾಡುತ್ತಲೇ ಇದೆ. ಚರಂಡಿಗೆ ಧುಮುಕಲು.ಹುಡುಗನ ಈ ಆಟಗಳನ್ನು ನಿಂತಲ್ಲೇ ಗಮನಿಸುತಿದ್ದ ಅದರ್ಶನಿಗೆ , ಒಂದು ವಿದೇಶಿ ಪ್ರವಾಸಿಗ ಜೋಡಿ ಬರುವುದು ಕಾಣುತ್ತದೆ.ಗಂಡ ಹೆಂಡತಿ ಇರಬಹುದೇ ಎಂಬ ಶಂಕೆ ಆದರ್ಶನ ಮನಸ್ಸಲ್ಲಿ. ಗಂಡ ಸುಮಾರು ಆರು ಅಡಿ ಎತ್ತರಕ್ಕೆ ದಪ್ಪ ಇದ್ದು, ಒಂದು T -shirt ,3 /4 ಪ್ಯಾಂಟ್ ಹಾಕಿದ್ದ, ಹೆಂಡತಿ jeans , t - shirt ಹಾಕಿದ್ದು, ಕೂದಲು ಭುಜದ ಒರೆಗೆ ಬರುತಿತ್ತು. ಅವರು ಇಂಗ್ಲಿಷ್ನಲ್ಲಿ ಮಾತಾಡುತಿದ್ದರು.ಪ್ರವಾಸಿ ತಾಣವಾದ ಆ ಜಾಗಕ್ಕೆ ವಿದೇಶಿಗರೇನು ಅಪರೂಪವಾಗಿರಲಿಲ್ಲ. ಆದರೆ ಯಾರೂ ಆ ಊರಲ್ಲಿ ಉಳಿಯಲು ಇಷ್ಟ ಪಡುತ್ತಿರಲಿಲ್ಲ. ವಸತಿ ವ್ಯವಸ್ತೆ ಸರಿ ಇರಲಿಲ್ಲ ಊರಲ್ಲಿ. ಅವರು ಮಾತನಾಡುತ್ತಿದ್ದುದು ಆದರ್ಶನ ಕಿವಿಗೆ ಕೇಳಿಸುತಿತ್ತು.
ಮಹಿಳೆ - " ನಾನು ಮೊದಲೇ ಹೇಳಿದೆ ಇಲ್ಲಿ ಬರುವುದು ಬೇಡ ಅಂತ."
ಆತ- " ಈಗ ಬಂದಾಗಿದೆಯಲ್ಲ. ನೋಡೋಣ... ಇಲ್ಲೇ ಎಲ್ಲಾದರೂ ಉಳಿದುಕೊಳ್ಳೋದಕ್ಕೆ ವ್ಯವಸ್ತೆ ಹುಡುಕುವ ಇರು .."
ಮೀನು ಆ ಮಹಿಳೆಯ ಕಣ್ಣಿಗೆ ಕಾಣುತ್ತದೆ.
ಮಹಿಳೆ - "ರೀ ಅದನ್ನ ನೋಡಿ...ಪಾಪದ ಪ್ರಾಣಿ"
ಆತ- "ಅದೆಲ್ಲಾ ಬೇಡ ಈಗ . ಸದ್ಯಕ್ಕೆ ಬೇಗ ಉಳಿದುಕೊಳ್ಳಲು ವ್ಯವಸ್ತೆ ಮಾಡಬೇಕು.ಸ್ವಲ್ಪ ಬೇಗ ಹೆಜ್ಜೆ ಹಾಕು. ಆಗಲೇ ಕತ್ತಲಾಗುತ್ತಿದೆ "
ಮಹಿಳೆ - "ರೀ... ಪಾಪದ ಪ್ರಾಣಿ ರೀ.. ಒಂದೇ ನಿಮಿಷ ಇರಿ... ಬರ್ತೀನಿ"
ಆ ಹುಡುಗನ ಹತ್ತಿರ ಹೋಗುತ್ತಾಳೆ ಮಹಿಳೆ.
ಅಲ್ಲೇ, ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಆದರ್ಶನ ಗಮನಿಸದೇ ಇರಲಿಲ್ಲ ಮಹಿಳೆ. ಆ ಹುಡುಗನ ಹತ್ತಿರ ಇಂಗ್ಲಿಷ್ನಲ್ಲಿ ಕೇಳುತ್ತಾಳೆ.
"what do you want to do with this poor thing ? ..
ಹುಡುಗ ಮಾತಾಡಲಿಲ್ಲ. ಮತ್ತೆ ಮಹಿಳೆ ಕೇಳುತ್ತಾಳೆ.
ನಿನಗೆ ಇಂಗ್ಲಿಷ್ ಬರುವುದಿಲ್ಲವಾ? ಹುಡುಗ ಮಾತಾಡುತ್ತಿಲ್ಲ.
ಆದರ್ಶನ ಹತ್ತಿರ - ಆ ಹುಡುಗ ಮೀನನ್ನು ಏನು ಮಾಡಬೇಕೆಂದಿದ್ದಾನೆ ?? ಅದನ್ನು ನೀರಲ್ಲಿ ಬಿಟ್ಟು ಬಿಡುವಂತೆ ಹೇಳುತ್ತಾಳೆ.
ಆದರ್ಶ ಹೇಳೋಣ ಅಂತ ಅಂದುಕೊಳ್ಳುತ್ತಾನೆ- ಸಮುದ್ರದ ದಂಡೆಗಳಲ್ಲಿ ವಾಸಿಸುವ ಮೀನುಗಾರರ ದರಿದ್ರ ಜೀವನವನ್ನ . ಹೇಗೆ ಅವರು ಹೊತ್ತಿನ ಗಂಜಿಗಾಗಿ ಕಷ್ಟ ಪಡುತ್ತಾರೆ. ಅವರ ಜೀವನ ಹೇಗಿದೆ?ಶಾಲೆಯೇ ಕಾಣದ ಮಕ್ಕಳು, ಹೊಟ್ಟೆಗೆ ಹಿಟ್ಟಿಲ್ಲದೆ ಸೊರಗುತ್ತಿರುವ ಮಹಿಳೆಯರು, ಔಷದ ತರಲು ದುಡ್ಡಿಲ್ಲದೆ, ರೋಗ ವಾಸಿಯಾಗದೇ ಸಾಯುತ್ತಿರುವ ಜನರ ಬಗ್ಗೆ. ಯಾವಾಗ ತ್ಸುನಾಮಿ ಬಂದು ತಮ್ಮ ಇರುವ ಒಂದು ನೆಲೆಯೂ ಕಳೆದು ಹೋಗಬಹುದು ಎಂಬ ಭಯದಿಂದ ಬದುಕುತ್ತಿರುವ ಜನರ ಬಗ್ಗೆ. ಆಮೇಲೆ ಯಾಕೋ , ಹೇಳಿ ಪ್ರಯೋಜನ ಇಲ್ಲ ಅಂತ ಅನ್ನಿಸಿ ,ಒಂದು ದೀರ್ಘ ಉಸಿರು ಬಿಟ್ಟು , ಹುಡುಗನನ್ನು ಕೇಳಲು ಮುಂದಾಗುತ್ತಾನೆ. ಹುಡುಗನನ್ನು ಕನ್ನಡದಲ್ಲಿ ಮಾತಾಡಿಸುತ್ತಾನೆ.
ಆದರ್ಶ - "ಮೀನನ್ನು ಯಾಕೆ ಹೀಗೆ ಹಿಡಿದುಕೊಂಡಿದಿಯ? ಏನು ಮಾಡಬೇಕು ಅಂದುಕೊಂಡಿದ್ದಿಯ?"
ಹುಡುಗ -" ಮಾರಬೇಕು ಅಂದುಕೊಂಡಿದ್ದೇನೆ. "
ಆದರ್ಶ ಮಹಿಳೆಗೆ -" ಮಾರುತ್ತಾನಂತೆ."
ಮಹಿಳೆ- "ಎಷ್ಟಾಗುತ್ತಂತೆ?"
ಆದರ್ಶ- "ಎಷ್ತಾಗುತ್ತಪ್ಪ? "
ಮೀನಿಗೆ ಆ ಊರಿನಲ್ಲಿ ಸಿಗಬಹುದಾದಕ್ಕಿಂತ ಐದು ಪಟ್ಟು ದುಡ್ಡು ಹೆಚ್ಚಿಗೆ ಹೇಳುತ್ತಾನೆ ಹುಡುಗ.
ಆದರ್ಶ- "......... ಇಷ್ಟಾಗುತ್ತಂತೆ "
ಕೂಡಲೇ ಮಹಿಳೆ ಗಂಡನ ಹತ್ತಿರ ಓಡಿ ದುಡ್ಡು ತಂದು ಹುಡುಗನಿಗೆ ಕೊಟ್ಟು , ಆ ಮೀನನ್ನು ಚರಂಡಿಗೆ ಬಿಟ್ಟು ಬಿಡುವಂತೆ ಹೇಳುತ್ತಾಳೆ. ದುಡ್ಡು ಇಸಿದುಕೊಂಡು ಹುಡುಗ ಮೀನನ್ನು ಚರಂಡಿಗೆ ತಳ್ಳುತ್ತಾನೆ. ಖುಷಿ ಪಟ್ಟ ಮಹಿಳೆ, ಗಂಡನೊಡನೆ ಹೊರಟು ಹೋಗುತ್ತಾಳೆ. ಹೋಗುತಿದ್ದ ಆ ಜೋಡಿಗಳು, ಹೋಗುತ್ತಾ ಹೋಗುತ್ತಾ, ಕಣ್ಣಿಂದ ಮಾಯವಾಗುತ್ತಾರೆ.
ಇತ್ತ ಹುಡುಗ , ಚರಂಡಿಗೆ ತಳ್ಳಿದ ಮೀನನ್ನು ಮತ್ತೆ ಒಂದು ಕೋಲಿನಿಂದ ಎಳೆದು ತೆಗೆದು, ಮತ್ತೆ ಯಥಾ ಪ್ರಕಾರ ಅದೇ ಜಾಗದಲ್ಲಿ ನಿಲ್ಲುತ್ತಾನೆ. ಮೀನು ಜಗತ್ತಿಗೆ ಅಷ್ಟೊತ್ತಿಗೆ ಕೊನೆಯ ವಿದಾಯ ಹೇಳಾಗಿತ್ತು
.
ಆದರ್ಶ , ಮತ್ತೊಂದು cigarette ಹೊತ್ತಿಸಿ ಮತ್ತೆ ಚಿಂತಾ ಮಗ್ನನಾದ .
ಮಂಗಳವಾರ, ಮೇ 18, 2010
ನೆರೆಗೂದಲಿನ ಬಗ್ಗೆ ಒಂದಿಷ್ಟು....
ಕೂದಲಿಗೆ ಸಂಭಂಧಿಸಿದ ಹಲವಾರು ಸಮಸ್ಯೆಗಳಲ್ಲಿ ಕೂದಲು ಉದುರುವುದು, ಸೀಳು ತುದಿ, ಹೊಟ್ಟು, ಇತ್ಯಾದಿಗಳು ಬರುತ್ತವೆ . ಜೀವನದ ಒಂದಿಲ್ಲೊಂದು ಹಂತದಲ್ಲಿ ಪ್ರತಿಯೊಬ್ಬರಿಗೂ ಈ "ನೆರೆ ಗೂದಲಿನ "ತೊಂದರೆ ಬಂದೇ ಬರುತ್ತದೆ. ಮುಂಚೆ ಎಲ್ಲಾ ,ಇದು ವಯಸ್ಸಾದವರಿಗೆ ಮಾತ್ರ ಬರುತಿತ್ತು. ಆದರೆ ಈಗ ಇದು ಚಿಕ್ಕ ವಯಸ್ಸಿನ ಮಕ್ಕಳಿಗೂ ಬರುತ್ತಿದೆ. ಇದನ್ನು "ಬಾಲ ನೆರೆ" ಎಂದು ಕರೆಯಲಾಗುತ್ತದೆ. ಕೂದಲಲ್ಲಿನ "ಮೆಲನಿನ್" ಪದಾರ್ಥ ಕಡಿಮೆಯಾಗುವುದೇ ಇದಕ್ಕೆ ಮೂಲ ಕಾರಣ.
ಈ ಬಾಲ ನೆರೆಗೆ ಕಾರಣಗಳೇನು ಅಂತ ಈಗ ಒಂದೊಂದಾಗಿ ತಿಳಿದುಕೊಳ್ಳೋಣ.
- ಇದು ಒಂದು ಅನುವಂಷಿಕವಾಗಿ ಬರುವ ಕಾಯಿಲೆ. ಅಂದರೆ ನಮ್ಮ ತಂದೆಗೆ, ಅಥವ ತಾತನಿಗೆ ಈ ಸಮಸ್ಯೆ ಇದ್ದಲ್ಲಿ ನಮಗೂ ಕಂಡು ಬರುವ ಸಾಧ್ಯತೆ ಇದೆ.
- ಅತಿಯಾದ ಮಾನಸಿಕ ಒತ್ತಡ, ಚಿಂತೆ.
- typhoid ಕಾಯಿಲೆಯಿಂದ ಬಳಲುತಿದ್ದರೆ .
- ಅತಿಯಾದ ಚಹಾ , ಕಾಫಿ ಸೇವನೆ.
- ಅತಿಯಾದ ಮಸ್ಸಾಲೆ ಪದಾರ್ಥ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿಗಳ ಸೇವನೆ.
- ಸತ್ವಯುತ ಆಹಾರ ಸೇವನೆಯ ಕೊರತೆಯೂ "ಮೆಲನಿನ್" ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ.
ಹಾಗಾದರೆ ಈ ನೆರೆಗೂದಲ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ ?
ಇದಕ್ಕೊಂದಿಷ್ಟು ಪರಿಹಾರಗಳು ಇಂತಿವೆ.

- ಸತ್ವಯುತವಾದ ಆಹಾರ ಸೇವನೆ ಅಂದ್ರೆ ಮೊಳಕೆ ಕಟ್ಟಿದ ಕಾಳುಗಳು, ಹಸಿರು ತರಕಾರಿ, ಹಣ್ಣುಗಳು.
- vitamin A ,vitamin B , ಮತ್ತು ಕಬ್ಬಿನಂಶ ಹೆಚ್ಚು ಇರುವ ಆಹಾರ ಸೇವನೆ.( vitamin A - ಹಸಿರು ತರಕಾರಿ ಮತ್ತು ಹಳದಿ ಹಣ್ಣುಗಳು, vitamin B -ಟೊಮೇಟೊ, ಕಾಳುಗಳು, ಬಾಳೆಹಣ್ಣು ಇತ್ಯಾದಿ,ಕೊಬ್ಬಿನಂಶ- ಗೋಧಿ ಆಹಾರ , ಇತ್ಯಾದಿ )
- ದಿನಕ್ಕೆರಡು ಲೋಟದಷ್ಟು ಮಜ್ಜಿಗೆಯನ್ನು ಉಪ್ಪಿನೊಡನೆ ಕುಡಿಯುವುದರಿಂದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.
- ನೆಲ್ಲಿಕಾಯಿಯನ್ನು ತೆಂಗಿನೆಣ್ಣೆಯಲ್ಲಿ ಬೇಯಿಸಿ , ಅದನ್ನು ಸೋಸಿ ಆ ಎಣ್ಣೆಯನ್ನು ತಲೆಗೆ ಚೆನ್ನಾಗಿ ಮಸಾಜ್ ಮಾಡುವುದು ನಮಗೆ ಒಳ್ಳೆ ಫಲಿತಾಂಶವನ್ನು ಕೊಡುತ್ತದೆ.
- ಶುಂಟಿಯನ್ನು ಜಜ್ಜಿ, ಜೇನು ತುಪ್ಪದೊಂದಿಗೆ ಕಲಸಿ ಒಂದು ಜಾರಿಯಲ್ಲಿಟ್ಟು ದಿನವೂ ಒಂದು ಚಮಚದಷ್ಟು ತಿನ್ನಬೇಕು.
- ಕೂದಲನ್ನು ತೆಂಗಿನೆಣ್ಣೆ ಮತ್ತು ಲಿಂಬೆ ಹಣ್ಣಿನ ರಸ ಮಿಶ್ರಿತ ಎಣ್ಣೆಯಿಂದ ದಿನವೂ ಮಸಾಜ್ ಮಾಡಿ.
- ಹಾಗಲ ಕಾಯಿಯನ್ನು ತೆಂಗಿನೆಣ್ಣೆಯೊಂದಿಗೆ ಅದು ಕಪ್ಪಗುವವರೆಗೂ ಕುಡಿಸಿ , ಈ ಎಣ್ಣೆಯನ್ನು ಸೋಸಿ ತಲೆಗೆ ಹಚ್ಚುವುದರಿಂದ ನೆರೆಗೂದಲನ್ನು ತಡೆಗಟ್ಟಬಹುದು.
- ಬೇವಿನ ಎಲೆ ( ಒಗ್ಗರಣೆ ಎಲೆ) ಇದನ್ನು ಕೂಡ ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಹಚ್ಚಿಕೊಳ್ಳಬಹುದು
- ಎರಡು ಚಮಚ ಮೆಹೆಂದಿ ಪುಡಿ , ಒಂದು ಚಮದಷ್ಟು ಮೆಂತ್ಯ ಪುಡಿ, ಒಂದು ಚಮಚ ನೆಲ್ಲಿಕಾಯಿ ಪುಡಿ (ಇದು ಅಂಗಡಿಗಳಲ್ಲಿ ಅಮ್ಲ ಪುಡಿ ಎಂದರೆ ಸಿಗುತ್ತದೆ) ಮತ್ತು ಚಹಾ ಡಿಕಾಕ್ಶನ್ ನೊಂದಿಗೆ ಕಲಸಿ ತಲೆಗೆ ಹಚ್ಚಿಕೊಂಡು ಮೂರು ಘಂಟೆಯ ನಂತರ ಸ್ನಾನ ಮಾಡಬೇಕು.
ಒಬ್ಬರ ಮೈಬಣ್ಣ ಒಂದೊಂದು ತರಹ. ಒಬ್ಬರ ಕೂದಲಿಗೆ ಚಂದ ಕಾಣುವ ಬಣ್ಣ ಇನ್ನೊಬ್ಬರಿಗೆ ಕಾಣದಿರಬಹುದು. ಹಾಗಾಗಿ "ಸರಿಯಾದ ಬಣ್ಣದ ಆಯ್ಕೆ" ಮೊದಲ ಹೆಜ್ಜೆ. ಒಮ್ಮೆ ಬಣ್ಣ ಆರಿಸಿ ತಂದಾಯಿತೆಂದರೆ ಹಚ್ಚಿಕೊಳ್ಳುವುದು ಹೇಗೆ? ಇದನ್ನು ಓದಿ.
- ತೀರ ಅಗ್ಗದ ಬೆಲೆಯ ಬಣ್ಣಗಳನ್ನು ಕೊಂಡುಕೊಳ್ಳುವುದು ಅಷ್ಟು ಒಳ್ಳೆಯದಲ್ಲ. ಆದಷ್ಟು ಒಳ್ಳೆ brand ಬಳಸುವುದು ಉತ್ತಮ.( ಯಾವ brand ಬಳಸಿದ್ದೀರಿ, ಅದರ color tone, shades, ಯಾವುದು ನೆನಪಿಟ್ಟುಕೊಳ್ಳುವುದುಅವಶ್ಯ),
- ಕೂದಲಿಗೆ ಬಣ್ಣ ಹಚ್ಚುವ ಮೊದಲು , ಸ್ವಲ್ಪೇ ಕೂದಲಿಗೆ ಬಣ್ಣವನ್ನು ಹಚ್ಚಿ ಮರುದಿನ ಅದು ಚೆನ್ನಾಗಿ ಕಂಡುಬಂದರೆ ಪೂರ್ತಿ ಹಚ್ಚಿಕೊಳ್ಳಿ.
- ಒಳ್ಳೆ ಫಲಿತಾಂಶಕ್ಕಾಗಿ , ಮೊದಲು ಕುತ್ತಿಗೆಯಿಂದ ಶುರು ಮಾಡಿ ಅಲ್ಲಿಂದ ಮೇಲೆ ಬಣ್ಣ ಹಚ್ಚುತ್ತಾ ಬನ್ನಿ. ಕೂದಲನ್ನು ಬಿಡಿಬಿಡಿಯಾಗಿ ವಿಂಗಡಿಸಿ ಬೇರಿಗೆ ಚೆನ್ನಾಗಿ ಹಚ್ಚಿ. ಬಣ್ಣ ಹಚ್ಚಿದ ಕೊದಲನ್ನು ಒಮ್ಮೆಬಾಚಬೇಕು.
- ಅರ್ಧ ಘಂಟೆ ,ತಪ್ಪಿದರೆ ಒಂದು ಘಂಟೆ ಬಿಟ್ಟು ಆಮೇಲೆ shampoo , conditioner ಬಳಸಿ ತಲೆಯನ್ನು ತೊಳೆದುಕೊಂದರೆ ಒಳ್ಳೆ ಬಣ್ಣ ಹಚ್ಚಿದ ಕೇಶ ನಿಮ್ಮದಾಗುವುದು.
ಮಂಗಳವಾರ, ಏಪ್ರಿಲ್ 27, 2010
ನನಗಿಷ್ಟ ...ನಿಮಗೂ ಇಷ್ಟವಾಗಿದ್ದು ....
ಖಾರ ಸ್ವಲ್ಪ ಜಾಸ್ತಿ (ಕೆಲವರು ಕಮ್ಮಿ) ಹಾಕಿ...
ನನಗೆ ಸ್ವೀಟ್ ಪಾನಿ ಬೇಡ , ಖಾರ ಪಾನಿ ಕೊಡಿ ....
ಭಯ್ಯ ನನಗೆ ನಾಲ್ಕು ಪೂರಿ ಪಾನಿ ಕೊಡಿ,ಮತ್ತೆ ನಾಲ್ಕು ಸೂಖಾ(ಪಾನಿ ಇಲ್ಲದೆ ) ಕೊಡಿ...
ಭಯ್ಯ ಇನ್ನೂ ಏಳೇ ಪೂರಿ ಆಗಿರೋದು..ಇನ್ನೂ ಒಂದು ಬಾಕಿ ಇದೆ...
ಸ್ವಲ್ಪ ಪಾನಿ ಕೊಡಿ....
ಹ್ಮ್ಮ್ ...ಹೌದು ..ನಾನು ಯಾವುದರ ಬಗ್ಗೆ ಮಾತಾಡುತ್ತಿದ್ದೀನಿ ಅಂತ ನಿಮಗೆಲ್ಲರಿಗೂ ಗೊತ್ತಾಗೇ ಇರುತ್ತೆ..
ನಿಮ್ಮ guess ಸರಿಯಾಗಿದೆ.

ಎಲ್ಲರಿಗೂ ತಿಳಿದಿರುವಂತೆ "ಪಾನಿ ಪೂರಿ" ಅಥವ "ಗೋಲ್ ಗಪ್ಪ " ತಿನ್ನಲು ಬಲು ರುಚಿ. ಇದನ್ನು "ಬತಾಶ" , "ಗುಪ್ ಶುಪ್" ಅಂತ ಕರೆಯುವುದೂ ಉಂಟು. ಗೋಲ್ ಗಪ್ಪ ಅಂತ ಯಾಕೆ ಹೆಸರು ಬಂತು ಅಂತ ಹೇಳಿದ್ರೆ ಗೋಲ್ ಅಂದ್ರೆ ಉರುಟಾದ , ಅಥವ ಗುಂಡಾಕಾರ ಅಂತ, ಗಪ್ಪ ಅಂದ್ರೆ 'ಗಪ್' ಅಂತ ಒಂದೇ ಗುಟುಕಿನಲ್ಲಿ ತಿನ್ನುವುದು ಅಂತ . ಅದಕ್ಕೆ ಗೊಲ್ಗಪ್ಪ ಅಂತ ಹೆಸರು ಬಂದಿದ್ದಂತೆ. ಹಾಗೇ ಪಾನಿ ಅಂದರೆ ನೀರು( ಇದನ್ನು ಹುಣಿಸೆ ಹುಳಿ ಇಂದ ತಯಾರುಮಾಡಲಾಗುತ್ತದೆ. ಒಂದು ಪಾತ್ರೆಯಲ್ಲಿ ಸಿಹಿ ಹಾಕಿ, ಮತ್ತೊಂದರಲ್ಲಿ ಖಾರ ಹಾಕಿ ಇಟ್ಟಿರುತ್ತಾರೆ) . ಪೂರಿ ಅಂದರೆ ಗೋಧಿ ಅಥವ ಮೈದಾ ಹಿಟ್ಟಿನಿಂದ ತಯಾರಾದ ತಿಂಡಿ. ಅದಕ್ಕೆಂದೇ ಪಾನಿ ಪೂರಿ ಅಂತನೂ ಕರೆಯುವುದು.
ಪಾನಿ ಪೂರಿ ಅಂಗಡಿಗೆ ಹೋಗಿ ನಿಂತಾಗ ಅಂಗಡಿಯಾತ ಕೈಗೊಂದು ಎಲೆಯ ಅಥವ ಪ್ಲಾಸ್ಟಿಕ್ ತಟ್ಟೆಯನ್ನು ಕೊಟ್ಟು , ಒಂದೊಂದು ಪಾನಿ ಪೂರಿಯನ್ನು , ನಡುವೆ ಭಾರಿ ನಾಜೂಕಾಗಿ ತೂತು ಮಾಡಿ ಅದರಲ್ಲಿ ಬೆಂದ ಬಟಾಟೆ , ಕಡಲೆಕಾಳು, ದ

ಈ ಗೋಲ್ ಗಪ್ಪ ಎನ್ನುವುದು ವಿಕಿಪೀಡಿಯ ಪ್ರಕಾರ ಮೂಲತಃ ಉತ್ತರ ಪ್ರದೇಶದ 'ಬನಾರಸ್' ಎಂಬ ಊರಿನಿಂದ ಬಂದಂತ್ತದ್ದು. ತುಂಬಾ ಜನ ಉತ್ತರ ಭಾರತದವರು ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರಿಂದ ಅದು ಬೆಂಗಳೂರಿನಲ್ಲಿ ಪ್ರಸಿದ್ದಿ ಪಡೆದಿದೆ. ಗೊಲ್ಗಪ್ಪದಲ್ಲಿರುವ ಹಲವಾರು ಮಸ್ಸಾಲೆ ಪದಾರ್ಥಗಳು ಕೆಮ್ಮು, ನೆಗಡಿ, ಹಾಗೂ ಸೈನಸ್ ನಿವಾರಿಸುವ ಗುಣವನ್ನು ಹೊಂದಿದೆ.
ಮಳೆ ಬಂದು ನಿಂತ ಮೇಲೆ ಹೊರಗೆ ಹೋಗಿ ಪಾನಿ ಪೂರಿ ತಿನ್ನುವಲ್ಲಿನ ಆನಂದವೇ ಬೇರೆ!!! ಹಾಗಾದ್ರೆ ಯಾಕೆ ತಡ ಮಾಡ್ತೀರ ?? ಇವತ್ತೇ ಹೋಗಿ ಗೋಲ್ ಗಪ್ಪ ತಿನ್ತೀರಾ ಅಲ್ವಾ??
ಮಂಗಳವಾರ, ಮಾರ್ಚ್ 16, 2010
ನೆನಪಲ್ಲೇ...

ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿಯು ನಿಮ್ಮ ಬದುಕಿನಲ್ಲಿ ಸಿಹಿ ತರಲಿ ಅಂತ ನಿಮ್ಮ ಈ ಗೆಳತಿಯ ಹಾರೈಕೆ.... :-)
ಶನಿವಾರ, ಮಾರ್ಚ್ 13, 2010
ನಾವ್ಯಾಕೆ ಬ್ಲಾಗಿಂಗ್ ಮಾಡಬೇಕು???
ಶುಕ್ರವಾರ, ಜನವರಿ 29, 2010
ಹೂವಾಗಿ ಅರಳುವ ಮುನ್ನವೇ ಬಾಡಿತೇ?

ದಿನೇ ದಿನೇ ಹೆಚ್ಚುತ್ತಿರುವ ಟಿವಿ ಚಾನೆಲ್ ಗಳ ಈ ಸ್ಪರ್ಧಾಯುಗದಲ್ಲಿ ಚಾನೆಲ್ ಗಳು ವೀಕ್ಷಕರನ್ನು ಆಕರ್ಷಿಸಲು ಮಾಡುತ್ತಿರುವ ಪ್ರಯತ್ನ ಹೇಳತೀರದು . ಹೇಗೆ ಜನರನ್ನು ತಮ್ಮತ್ತ ಆಕರ್ಷಿಸಬೇಕು ಎಂಬುದರ ಬಗ್ಗೆ ವಿಚಾರಗಳು ನಡೆಯುತ್ತಲೇ ಇರುತ್ತವೆ . ಒಂದಕ್ಕಿಂತ ಒಂದು ಒಳ್ಳೆಯ ಕಾರ್ಯಕ್ರಮಗಳನ್ನು ತಂದು ಜನರನ್ನು ಟಿವಿಯೆಡೆಗೆ ಮೋಡಿ ಮಾಡುತ್ತಿವೆ . ಹೀಗಿದ್ದಾಗಲೇ ಧಾಳಿ ಇಟ್ಟಿದ್ದು “ರಿಯಾಲಿಟಿ ಶೋ "ಗಳು . ಸಾಮಾನ್ಯ ಜನರನ್ನು ಪರದೆಯ ಮೇಲೆ ಕಾಣಿಸಿಕೊಳ್ಳಲು ,ಜನರಿಗೆ ಮನೋರಂಜನೆಯ ಹೊಸ ಕಾರ್ಯಕ್ರಮವನ್ನು ಶುರು ಮಾಡುವ ಕಾರಣದಿಂದ ಶುರು ಆಗಿದ್ದು" ರಿಯಾಲಿಟಿ ಶೋ"ಗಳು .
ಈ ರೆಅಲಿಟಿ ಶೋ ಗಳಲ್ಲಿ ರಿಯಾಲಿಟಿಯೇ ಹೊರಟು ಹೋಗಿದೆ . ಬರೀ ಹೆಸರು , ಕೀರ್ತಿ ಸಂಪಾದನೆಗೋಸ್ಕರ ಪ್ರತಿಯೊಬ್ಬರೂ ಟಿವಿಯಲ್ಲಿ ಕಾಣಬಯಸುತ್ತಾರೆ .ಈ ರಿಯಾಲಿಟಿ ಶೋಗಳು ಒಬ್ಬ ಸಾಮಾನ್ಯ ಮನುಷ್ಯನಿಗೆ ಹೀರೋ \ಹೀರೋಇನ್ ಆಗುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ .ಈ ರಿಯಾಲಿಟಿ ಶೋಗಳಲ್ಲಿ ನೃತ್ಯ ,ಸಂಗೀತ ,ನಟನೆ ಹೀಗೆ ಯಾವುದಾದರೂ ಇರುತ್ತದೆ ಕೆಲವು ರಿಯಾಲಿಟಿ ಶೋಗಳು ಜನರಿಗೆ ತಮ್ಮ ಪ್ರತಿಭೆ ಪ್ರದರ್ಶನ ಮಾಡಲು ಒಳ್ಳೇ ಅವಕಾಶವನ್ನು ಕಲ್ಪಿಸಿಕೊಡುತ್ತದೆ . ಹಾಗೇ ಕೆಲವು ದುಷ್ಪರಿಣಾಮಗಳೂ ಇವೆ . ಮೊದಲೆಲ್ಲ ಇದು ಬರೀ 18 ವರುಷ ಮೇಲಿನವರಿಗಷ್ಟೇ ಸೀಮಿತವಾಗಿತ್ತು .ಆದರೆ ಈಗ ಅದು ಚಿಕ್ಕ ಮಕ್ಕಳಿಗೂ ತೆರೆದುಕೊಂಡಿದೆ .
ನನ್ನ ಮಗ \ಮಗಳು ಟಿವಿಯಲ್ಲಿ ಬರುತ್ತಾಳೆ \ನೆ ,ಬಹುಮಾನ ಗೆಲ್ಲುತ್ತಾರೆ ಎಂದರೆ ಪಾಲಕರು ಅದೆಷ್ಟು ಸಂತಸ ಪಡುತ್ತಾರೆ . ಆದರೆ ಎಲ್ಲಾ ಮಕ್ಕಳೂ ಬಹುಮಾನ ಗೆಲ್ಲಲು ಸಾದ್ಯವೇ ? ಎಷ್ಟೋ ಮಕ್ಕಳಿಗೆ ಓದಿನೆಡೆಗೆ ಆಸಕ್ತಿ ಇರುತ್ತದೆ ,ಇನ್ನು ಕೆಲವರಿಗೆ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ . ಆದರೆ ಇದು ಎಷ್ಟೋ ಪಾಲಕರ ಕಣ್ಣಿಗೆ ಕಾಣುವುದೇ ಇಲ್ಲ .ಪಕ್ಕದ ಮನೆಯವರ ಮಗಳ ಹಾಗೇ ನನ್ನ ಮಗಳೂ ಟಿವಿಯಲ್ಲಿ ಬರಲಿ ಎಂಬ ತಮ್ಮ ಆಶಯದಂತೆ ಮಕ್ಕಳನ್ನು ಈ ರಂಗಕ್ಕೆ ಒತ್ತಾಯಪೂರ್ವಕವಾಗಿ ತಳ್ಳುತ್ತಿರುವರೆ ಹೆಚ್ಚು . ಎಷ್ಟು ಮಕ್ಕಳಿಗೆ ಎಲ್ಲಾ ಪ್ರತಿಭೆ ಇರಲು ಸಾದ್ಯ ಹೇಳಿ ? ಮಕ್ಕಳ ಮನಸ್ಸಿನ ಮೇಲೆ ಇದು ಎಷ್ಟು ಘಾಡವಾದ ಪರಿಣಾಮ ಬೀರುತ್ತದೆ ಎಂದು ಯಾರಿಗೂ ಬೇಕಾಗಿಲ್ಲ .ಈ ರಿಯಾಲಿಟಿ ಶೋಗಳು ಒಂದು ರೀತಿಯಲ್ಲಿ ಮಕ್ಕಳು ಹಾಗೂ ಪಾಲಕರ ಭಾವನೆಗಳ ಜೊತೆ ಆಟ ಆಡುವಂತಾಗಿ ಬಿಟ್ಟಿವೆ.
ನಾವು ಬಾಲ-ಕಾರ್ಮಿಕವನ್ನು ವಿರೋಧಿಸುತ್ತೇವೆ .14 ವಯಸ್ಸಿನ ಒಳಗಿನ ಮಕ್ಕಳಿಗೆ ಬೇರೆ ಯಾವುದೇ ರಂಗದಲ್ಲೂ ಕೆಲಸಕ್ಕೆ ಹೋಗಲು ಬಿಡುವುದಿಲ್ಲ .ಹೊಟ್ಟೆ ಪಾಡಿಗೋಸ್ಕರ ದುಡಿಯುವ ಮಗುವನ್ನು ಬಾಲ- ಕಾರ್ಮಿಕ ಎಂದು ಪರಿಗಣಿಸಿ ಅವರನ್ನು ಶಾಲೆಗಳಿಗೆ ಹೋಗಲು ಪ್ರೋತ್ಸಾಹಿಸುವ ನಾವು ,ಈ ರಿಯಾಲಿಟಿ ಶೋಗಳು ಹೇಗೆ ಪ್ರೂತ್ಸಾಹಿಸುತ್ತಿದ್ದೇವೆ ಅನ್ನಿಸಿಬಿಡುತ್ತದೆ ಒಂದೊಂದು ಸಲ . ಹೀಗಿರುವ ನಾವು ತೀರ 12 ವರ್ಷಕ್ಕಿಂತ ಕೆಳಗಿನ ಮಕ್ಕಳು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರೆ ಮಾತ್ರ ಎಲ್ಲಿಲ್ಲದ ಸಂತೋಷದಿಂದ , ಬೇಗ ಬೇಗ ಎಲ್ಲಾ ಕೆಲಸವನ್ನು ಮುಗಿಸಿ , ಟಿವಿ ಮುಂದೆ ಕುಳಿತು ಘಂಟೆಗಟ್ಟಲೆ ಸಮಯ ಕಳೆಯುತ್ತಾ ಕೃತಾರ್ಥರಾಗುತ್ತೇವೆ . ಇಂದು ಈ ರಿಯಾಲಿಟಿ ಶೋಗಳು ತುಂಬಾ ಜನ ವೀಕ್ಷರನ್ನು ಆಕರ್ಶಿಸಿದೆ , ಕಾರ್ಯಕ್ರಮ ಸೂಪರ್ ಹಿಟ್ ಆಗಿದೆ .ಈ ಶೋಗಳಲ್ಲಿ ತಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದರೆ ಅಪ್ಪ ,ಅಮ್ಮ ,ಜೊತೆಗೆ ತಾತ -ಅಜ್ಜಿ ಇಡೀ ಕುಟುಂಬವೇ ಹೆಮ್ಮಯಿಂದ ಭಾಗವಹಿಸುತ್ತವೆ . ಆದರೆ ಅದೇ ಮಗು ಶಾಲೆಯಲ್ಲಿ ಪಾಲಕರ ದಿನಾಚರಣೆ ಇದೆ ಬನ್ನಿ ಎಂದರೆ ಬರದ ಪಾಲಕರು ಅದೆಷ್ಟು ಇದ್ದರೋ ? ಇಲ್ಲಿ ಉದ್ಭವವಾಗುವ ಪ್ರಶ್ನೆ ಪಾಲಕರಿದ್ದಲ್ಲ . ಮಕ್ಕಳಿದ್ದು ….ಮಕ್ಕಳ ಮನಸಿನ ಭಾವನೆಗಳಿಗೆ ಎಲ್ಲಿ ಬೆಲೆ ಇದೆ ?
ಮೊನ್ನೆ ಮೊನ್ನೆ ಒಂದು ಸುದ್ದಿ ಕೇಳಿದ ನೆನಪು . "ಬಾಲಕಿಯೊಬ್ಬಳು ತನಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಪಾಲಕರು ಬಿಡದ ಕಾರಣ ,ತನ್ನ ದುಪಟ್ಟವನ್ನೇ ಉರುಳಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ".
ಇಲ್ಲಿ ನೋಡಿ :
http://thatskannada.oneindia.in/news/2010/01/05/girl-suicide-fuels-tv-bashing.html
ಇದೆಲ್ಲ ಬೇಕಾ ? ಅಂತ ಅನಿಸಿಬಿಡುತ್ತದೆ . ನಕ್ಕು ನಲಿಯಬೇಕಾದ ಇನ್ನೂ ಹನ್ನೊಂದೇ ವರುಷದ ಮಗು ಆತ್ಮ ಹತ್ಯೆಗೆ ಶರಣಾಗುತ್ತದೆ ಎಂದರೆ ಈ ರಿಯಾಲಿಟಿ ಶೋಗಳ ಪರಿಣಾಮಗಳು ಕಡಿಮೆ ಏನಿರಲಿಕ್ಕಿಲ್ಲ !! ಸ್ವಚ್ಛಂದವಾಗಿ ಆಟ ಆಡಿಕೊಂಡು ಖುಷಿ- ಖುಷಿಯಾಗಿ ಬಾಲ್ಯವನ್ನು ಕಳೆಯುವ ಕಾಲದಲ್ಲಿ , ಅವರು ಈ ರಿಯಾಲಿಟಿ ಶೋಗಳಿಗೆ ಬಲಿಯಾಗಿ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ . ಮನೆಯಂಗಳದಲ್ಲಿ ಕುಂಟಾಬಿಲ್ಲೆ ಆಡಿಕೊಂಡು ಹಾಯಾಗಿದ್ದ ಮಕ್ಕಳು ಈಗ ಯಾವುದೋ ಡಾನ್ಸ್ ಕ್ಲಾಸ್ಸೋ ,ಸಂಗೀತ ಕ್ಲಾಸ್ಸೋ ಅಂತ ಬ್ಯುಸಿ ಆಗಿ ಬಿಟ್ಟಿದ್ದಾರೆ . ಇದೆಲ್ಲ ಮೊದಮೊದಲಿಗೆ ತುಂಬಾ ಚೆನ್ನಾಗಿರುತ್ತದೆ .ಆದರೆ ದಿನಗಳುರುಳಿದಂತೆ ಮಕ್ಕಳಿಗೆ ತಮ್ಮ ಮೇಲೆ ತಮಗೇ ಬೇಸರ ಉಂಟಾಗಬಹುದು . ಬಹುಮಾನ ಗೆದ್ದರೆ ಬೀಗುವ ಪಾಲಕರು, ಮಕ್ಕಳಿಗೆ ಸೋತರೆ , ಅಂದರೆ ಬಹುಮಾನ ಗೆಲ್ಲದಿದ್ದರೆ ಅದನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ಕಲಿಸಿರುವುದಿಲ್ಲ . ಮಕ್ಕಳಿಗೆ ಹೋಗಲಿ ತಮಗೇ ಗೊತ್ತಿರುವುದಿಲ್ಲ ಇದು ವಿಷಾದನೀಯ .
ಎಷ್ಟೋ ಟಿವಿ ರಿಯಾಲಿಟಿ ಶೋಗಳ ಜನರು ಮಕ್ಕಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆಂದು ಕೆಳಲ್ಪಟ್ಟಿದೆ . ಸರಿಯಾದ ಸಮಯದಲ್ಲಿ ಊಟ ತಿಂಡಿ ಸಿಗದೇ , audition ಪಾಸು ಆದರೆ ಸಾಕು ಎಂದು ನಿತ್ರಾಣವಾಗಿ ಕೂರುವ 5 -7 ವರ್ಷದ ಮಕ್ಕಳನ್ನು ಕಂಡರೆ ಯಾರಿಗೆ ತಾನೇ ಬೇಸರವಾಗುವುದಿಲ್ಲ ಹೇಳಿ ? ಇದೆಲ್ಲ ಯಾಕೆ ಬೇಕು ? ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಸಬೇಕು , ಆದರೆ ಅದು ತೀರ ಅವರ ಜೀವ ತೆಗೆದುಕೊಳ್ಳುವಷ್ಟು ಆಗಬಾರದು ಅಲ್ಲವಾ ?ಆರೋಗ್ಯಕರವಾಗಿರಬೇಕು .ಮಕ್ಕಳು ಸೋತರೆ ಸ್ವಂತ ಪಾಲಕರೇ ಅವರನ್ನು ಕೀಳಾಗಿ ಕಂಡರೆ ಮಕ್ಕಳು ಕಕ್ಕಾ-ಬಿಕ್ಕಿ ಆಗದೆ ಇರಲಾರರು .ಒಂದು ವೇಳೆ ಸೋತರೆ ಜೀವನವೇ ಮುಗಿದಂತೆ ಕೊರಗುವುದು ಯಾಕೆ ?ಬದಲಿಗೆ ಅವರ ಮಕ್ಕಳಿಗೆ ಆಸಕ್ತಿ ಇದ್ದಲ್ಲಿ ಮುಂದುವರೆಸುವುದು ಒಳ್ಳೆಯದಲ್ಲವೇ ? ಹುಟ್ಟಿದ ಮಕ್ಕಳೆಲ್ಲ ಶಾಹ್ರುಖ್ ಖಾನ್ , ಐಶ್ವರ್ಯ ನೇ ಆಗಲು ಸಾಧ್ಯವಾ ?
ಇವೆಲ್ಲ ಶೋಗಳಲ್ಲಿ ಭಾಗವಹಿಸುವವರ ಪಾಡಾದರೆ ಇನ್ನೂ ಮನೆಯಲ್ಲೇ ಕುಳಿತು ಟಿವಿ ನೋಡುವ ಮಕ್ಕಳ ಪಾಡು ಕೇಳಿ .ಕಾರ್ಟೂನಗಳನ್ನು ನೋಡಿಕೊಂಡು ಖುಷಿ ಪಡುತ್ತಿದ್ದ ಮಕ್ಕಳು ,ರಿಮೋಟ್ ಕೈಗೆ ಸಿಕ್ಕಿದ ತಕ್ಷಣ ಯಾವುದಾದರೂ ಚಾನೆಲ್ ನಲ್ಲಿ ರಿಯಾಲಿಟಿ ಶೋಗಳು ಬರುತ್ತಿದ್ದರೆ ತಪ್ಪದೇ ನೋಡುತ್ತಾರೆ .ಇದರಿಂದ ಅವರ ಓದು - ಬರಹವೂ ಸ್ವಲ್ಪ ಮಟ್ಟಿಗೆ ಕೆಡುವಂತಾಗುತ್ತದೆ . ಮಕ್ಕಳನ್ನು ಕೂರಿಸಿಕೊಂಡು ಭಗತ್ ಸಿಂಗ್ , ಶಿವಾಜಿ ,ಇಂಥವರ ಬಗ್ಗೆ ಕಥೆ ಹೇಳುವುದೆಲ್ಲ ಈಗ ಕಣ್ಣಿಗೆ ಕಾಣುವುದು ಬಲು ಅಪರೂಪ . ಅಸಲಿಗೆ ಈ ರಿಯಾಲಿಟಿ ಶೋಗಳ ಅವಶ್ಯಕತೆ ಇದೆಯಾ ? ಹೌದು ಇದೆ . ನಿರ್ಮಾಪರಿಗೆ ಒಳ್ಳೇ ದುಡ್ಡಾಗುತ್ತದೆ , ಮತ್ತೆ ನಮಗೂ ಮನೋರಂಜನೆಯಾಗುತ್ತದೆ , ದಿನಾ ಬರುವ ,ನಾವು ನೋಡುವ ಧಾರಾವಾಹಿಗಳಿಗಿಂತ ಭಿನ್ನವಾಗಿದೆ ಅಂತ ನೀವಂದರೆ ಅಲ್ಲ ಹೇಳಲಾಗುವುದಿಲ್ಲ .
ಮಾಧ್ಯಮಗಳಿಂದ ಜನರಿಗೆ ಕಲಿಯಲು ಸಂದೇಶಗಳಿರಬೇಕು.ಆದರೆ ಈಗ ಹೇಗಾಗಿಬಿಟ್ಟಿದೆ ಎಂದರೆ ಬೇರೆಯವರ ದುಃಖ ,ಅಸಹನೆ ,ನಿರಾಸೆ ನೋಡುವುದೇ ಮನೋರಂಜನೆ ಆಗಿಬಿಟ್ಟಿದೆ .ಅದು ಹಾಗಾಗಬಾರದು .ಮಕ್ಕಳಿಗೆ ರಿಯಾಲಿಟಿ ಶೋಗಳಿಗೆ ಕರೆದುಕೊಂಡು ಹೋಗುವುದಕ್ಕಿಂತ ಮುಂಚೆ ಪಾಲಕರು ,ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಬೇಕು .ನಾವು ಗೆದ್ದರೂ ಸಂತೋಷ ,ಸೋತರೂ ಪರವಾಗಿಲ್ಲ , ಭಾಗವಹಿಸುವುದು ಮುಖ್ಯ ,ಎಂದು ಕಡಾಖಂಡಿತ ನಿರ್ಧಾರ ಮಾಡಿಕೊಂಡೇ ಮನೆಯಿಂದ ಹೊರಗೆ ಹೊರಡ ಬೇಕು .ಈ ನಿಟ್ಟಿನಲ್ಲಿ ಪಾಲಕರು ಸ್ವಲ್ಪ ಗಮನ ಹರಿಸಿದರೆ, ಅವಮಾನ ,ಒತ್ತಡ ತಾಳಲಾರದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವ ಮುಗ್ಧ ಕಂದಮ್ಮಗಳನ್ನು ಕಾಪಾಡಬಹುದು . ಹೂವಾಗಿ ಅರಳಬೇಕಾದ ಕಂದಮ್ಮಗಳನ್ನು ಚಿಗುರಿನಲ್ಲೇ ಹೊಸಕಿ ಹಾಕುತ್ತಿರುವ ಈ ರಿಯಾಲಿಟಿ ಶೋಗಳ ಯಾವುದೇ ಪ್ರಭಾವ ಬೀರದಂತೆ ಕಾಪಾಡುವುದು ಪಾಲಕರ ಕರ್ತವ್ಯ .