ಗುರುವಾರ, ಮೇ 05, 2011

ಪಾರ್ಕಿನಲ್ಲೊಂದು ಒಂಟಿ ಜೋಕಾಲಿ


ಪ್ರತೀ ಸಾರಿಯೂ ಹೋಗೋ ಜೋಳದ ಗಾಡಿಯವಳ ಹತ್ತಿರ ಹತ್ತು ರೂಪಾಯಿ ಕೊಟ್ಟು, ಜೋಳ ಸುಡುತ್ತಿರುವ ಅವಳಿಗೆ ಸ್ವಲ್ಪ ಖಾರ ಜಾಸ್ತಿ ಹಾಕಿ ಎಂದು ಹೇಳಿ ಹಾಕಿಸಿಕೊಂಡು, ಸುತ್ತಲೂ ಜೋಳವನ್ನು ಹಿಡಿದುಕೊಂಡು ಪಾರ್ಕಿನ ಒಳಗೆ ಬಂದು ಒಮ್ಮೆ ಅಲ್ಲಿ ಸುತ್ತು ತಿರುಗಿ ನೋಡುತ್ತೇನೆ. ಎಲ್ಲೆಂದರಲ್ಲಿ ಜೋಡಿ ಹಕ್ಕಿಗಳಿದ್ದೇ ಸಾಮ್ರಾಜ್ಯ. ನನಗೆ ಪ್ರತೀ ಸಾರಿ ಕೂರುವ ಜಾಗ ಬೇಡ. ಸ್ವಲ್ಪ ಬದಲಾವಣೆ ಇರಲಿ ಎಂದು ಬಯಸಿ ಬೇರೆ ಎಲ್ಲಾದರೂ ಜಾಗ ಸಿಕ್ಕಬಹುದೇ ಎಂದು ಆಸೆಯ ಕಣ್ಣುಗಳಿಂದ ನೋಡುತ್ತೇನೆ. ಇಲ್ಲ. ನನಗೆ ಅದೇ ಜಾಗ ಖಾತ್ರಿಯಾದಂತಿದೆ. ಬೇರೆ ದಾರಿ ಇಲ್ಲದೇ ನನ್ನ ಮಾಮೂಲಿ ಜಾಗದಲ್ಲಿ ಕೂರುತ್ತೇನೆ. ಸುತ್ತಲೂ ಗಮನಿಸುತ್ತ ಒಂದೊಂದೇ ಕಾಳನ್ನು ಬಿಡಿಸಿಕೊಂಡು ತಿನ್ನತೊಡಗುತ್ತೇನೆ.ಮರದಲ್ಲಿರುವ ಇಣಚಿ ಗಾಬರಿಯಾದಂತೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದೆ. ಚಿಕ್ಕ ಮಕ್ಕಳು ಜೋಕಾಲಿಯಲ್ಲಿ ಜೀಕುತ್ತಿದ್ದಾರೆ, ಅವರ ಅಮ್ಮಂದಿರು ಅವರನ್ನು ತಳ್ಳುತ್ತಾ ಮಕ್ಕಳಿಗೆ ಇನ್ನೂ ಜೋರಾಗಿ ಜೀಕುವಂತೆ ಸಹಾಯ ಮಾಡುತ್ತಿದ್ದಾರೆ. ಬಿಳಿ ತಲೆಯ ಒಂದೆರಡು ತಾತಂದಿರು ತಮ್ಮ ವಾಕ್ ಸ್ಟಿಕ್ ಹಿಡುಕೊಂಡು ಒಳಗೆ ಬರುತ್ತಿದ್ದಾರೆ. ಒಸಾಮಾ ಕೊಲೆಯಾದ ವಿಷಯ ಅವರ ಸಂಜೆಯ ಚರ್ಚೆಯ ವಿಷಯಕ್ಕೆ ವಿಷಯವಾಗಲಿದೆ. ಮಧ್ಯ ವಯಸ್ಸಿನ ಮಹಿಳೆಯರು, ಸೀರೆ ಉಟ್ಟುಕೊಂಡು ನೈಕೆ ಶೂ ಹಾಕಿಕೊಂಡು ವಾಕ್ ಮಾಡಲು ಬರುತ್ತಿದ್ದಾರೆ. ಕಾಲೇಜು ಬಿಟ್ಟ ಮೇಲೆ ಹುಡುಗನ ಜೊತೆ ಹುಡುಗಿ, ಜೊತೆ ಜೊತೆಗೇ ನಡೆದುಕೊಂಡು ಪಾರ್ಕಿನ ಒಳಗೆ ಬರುತ್ತಿದ್ದಾರೆ. ಅವರ ಕಣ್ಣುಗಳು ಕತ್ತಲು ಇರುವ ಸ್ಥಳಗಳನ್ನು ಹುಡುಕುವಂತೆ ಭಾಸವಾಗುತ್ತಿದೆ. ಅಲ್ಲೇ ಯಾವುದೊ ಮರದಡಿಯಲ್ಲಿ ಕುಳಿತು ಅವರು ನನ್ನ ಕಣ್ಣಿಗೆ ಮಾಯವಾಗುತ್ತಾರೆ. ವಾಕ್ ಮಾಡಲು ಟ್ರಾಕ್ ಪ್ಯಾಂಟ್, ಟೀ - ಶರ್ಟ್ ತೊಟ್ಟು ಕಿವಿಗೆ ಇಯರ್ ಫೋನ್ ಹಾಕಿಕೊಂಡ ಹುಡುಗ ಹುಡುಗಿಯರು, ಕೆಲವೊಬ್ಬರು ಜೋರಾಗಿ ನಡೆಯುತ್ತಿದ್ದರೆ ಇನ್ನು ಕೆಲವರು ಓಡುತ್ತಿದ್ದಾರೆ. ಅವರ ಮೈಗಳಿಂದ ಬೆವರು ತೊಟ್ಟಿಕ್ಕುತ್ತಿದೆ. ಆ ಬೆವರು ಅವರು ಚನ್ನಾಗಿ ವ್ಯಾಯಾಮ ಮಾಡಿದ್ದಾರೆಂದು ಎಲ್ಲರಿಗೂ ಮನದಟ್ಟು ಮಾಡಿಸುತ್ತಿದೆ.

ತಲೆ ಎತ್ತಿ ನೋಡಿದಾಗ ಸಾವಿರಾರು ಬಾವಲಿಗಳು, ಹಗಲು ಹೊತ್ತೇ ತಲೆಕೆಳಗಾಗಿ ಮಲಗಿ ಏನೋ ಚೀತ್ಕಾರ ಹಾಕುತ್ತಿವೆ. ನಿದ್ರಿಸುತ್ತಿವೆ. ವಯಸ್ಸಾದ ಅಜ್ಜಿಯರು ಬರುತ್ತಿದ್ದಾರೆ. ಅವರನ್ನು ನೋಡಿ ನನಗೆ ಅಜ್ಜಿಯ ನೆನಪಾಗುತ್ತದೆ. ನನ್ನ ಅಜ್ಜಿಯೂ ಹೀಗೇ ಇದಾರಲ್ಲ. ಮಧ್ಯ ಬಾಚಲು ತೆಗೆದು ಜಡೆ ಹಾಕಿದ ಕೂದಲು, ಒಂದು ರೂಪಾಯಿ ಗಾತ್ರದ ಕುಂಕುಮ, ತಲೆಯಲ್ಲಿ ದಾಸವಾಳ ಹೂವು ! ಅಜ್ಜಿ ಒಂದು ದಿನವೂ ದಾಸವಾಳ ಹೂವು ತಪ್ಪಿಸಿದ್ದಿಲ್ಲ. ನಮಗೂ ಮುಡಿದುಕೊಳ್ಳಿ ಎಂದು ಬಂದಾಗ, ನಮಗೆ ಯಾರೋ ಹೇಳಿದ್ದರು. ದಾಸವಾಳ ಹೂವು ಮುಡಿದರೆ ವಯಸ್ಸಾದ ಗಂಡ ಸಿಗುತ್ತಾನೆ ಎಂದು. ಅದಕ್ಕೆ ನಾವು ಹುಡುಗಿಯರು ದಾಸವಾಳ ಹೂವನ್ನು ಮುಡಿಯಬಾರದು ಎಂದು ನಿರ್ಧರಿಸಿದ್ದೆವು. ಅಜ್ಜಿದು ತಲೆ ಬಾಚಿಕೊಳ್ಳುವ ರೀತಿಯೇ ನಮಗೆ ಇಷ್ಟವಾಗುತ್ತಿರಲಿಲ್ಲ. ಅವರ ಹತ್ತಿರ ನಮಗೆ ತಲೆ ಬಾಚಿ ಕೊಡಿ ಎಂದು ಕುಳಿತರೆ, ಅವರಿಗೆ ಮಹದಾನಂದ. ಎಣ್ಣೆ ತಟ್ಟೆ, ಜೊತೆಗೆ ಒಂದು ಲೋಟದಲ್ಲಿ ನೀರನ್ನು ತಂದು ನಮಗೆ ಬಾಚಲು ಕುಳಿತುಕೊಳ್ಳುತ್ತಿದ್ದರು.ಅವರು ಬಾಚಲು ಹೇನು ಹಣಿಗೆ ಬಳಸುತ್ತಿದ್ದರು. ಅದರ ಹಲ್ಲುಗಳು ತುಂಬಾ ಹತ್ತಿರ-ಹತ್ತಿರ ಇರುತ್ತಿದ್ದವು. ಒಂದು ವೇಳೆ ನಮ್ಮ ತಲೆಯಲ್ಲಿ ಸಿಕ್ಕು ಇದ್ದಿದ್ದರೆ, ಬಾಚುವಾಗ ಕೂದಲು ಸಿಕ್ಕಾಕಿಕೊಂಡು ಜೀವ ಹೋಗುವಷ್ಟು ಉರಿಯುತ್ತಿತ್ತು. ಅಷ್ಟೇ ಅಲ್ಲ, ಅವರು ಬಾಚಿಕೊಟ್ಟರೆ ಒಂದು ಕೂದಲೂ ಅಲ್ಲಾಡುತ್ತಿರಲಿಲ್ಲ. ಎರಡು ಮೂರು ದಿನಗಳೂ ಕೂದಲನ್ನು ಬಾಚದೇ ಇದ್ದರೂ ಇರಬಹುದಿತ್ತು. ನಾನು,ನನ್ನ ತಂಗಿ ನನ್ನ ದೊಡ್ಡಮ್ಮನ ಮಗಳು. ನಮಗೆ ಆಗಲೇ ಫ್ಯಾಶನ್ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆ ಬರುತಿತ್ತು. ನಮಗೆ ಆ ತರಹ ಬಾಚ್ಕೊಂಡರೆ ತೀರ ಹಳೆ ಕಾಲದ ಮುದುಕಿಯರ ಹಾಗೆ ಕಾಣುತ್ತೀವೇನೋ ಅನ್ನಿಸಿದ್ದೇ ತಡ..ಅಜ್ಜಿಯ ಹತ್ತಿರ ತಲೆ ಬಾಚಿಸಿಕೊಳ್ಳೋದನ್ನ ನಿಲ್ಲಿಸಿಬಿಟ್ವಿ. ಅಜ್ಜಿ, ನಮ್ಮ ಅಮ್ಮನ ಹತ್ತಿರ ಪುಕಾರ್ ಮಾಡಿದರು. ನಾವೆಲ್ಲಾ ಬಾಚಿದರೆ ಎಲ್ಲಿ ಸರಿ ಆಗುತ್ತೆ ಇವರಿಗೆ? ಇವರು ಈಗಿನ ಕಾಲದ ಮಕ್ಕಳು ಎಂದು ನಿಟ್ಟುಸಿರು ಬಿಟ್ಟಿದ್ದರು. ಅದು ನನಗೆ ಈಗಲೂ ನೆನಪಿದೆ. ಅಜ್ಜಿ ಈಗಲೂ ಅದರ ಬಗ್ಗೆ ರೇಗಿಸುತ್ತಾರೆ. ಇಷ್ಟೆಲ್ಲಾ ನೆನಪಾಗಿದ್ದು ಆ ರೂಪಾಯಿ ಗಾತ್ರದ ಕುಂಕುಮ ಇಟ್ಟುಕೊಂಡಿದ್ದ ಯಾರದೋ ಅಜ್ಜಿ ನೋಡಿ.

ಸುಮ್ಮನೆ ಹಾಗೆ ಪಕ್ಕ ತಿರುಗಿ ನೋಡಿದಾಗ ನನಗೆ ಏನೋ ಕಾಣಿಸಿತು. ಯಾಕೋ ಒಂಥರಾ ಆಯ್ತು. ನೋಡಲು ಚಿಕ್ಕ ಪ್ರಾಯದವರ ಹಾಗೇ ಇದ್ದರು ಆ ಹುಡುಗ ಹುಡುಗಿ . ಹುಡುಗ ಹುಡುಗಿಗೆ ಮುತ್ತು ಕೊಡುತ್ತಿದ್ದಾನೆ. ಅದು ಪರ್ಕಿನಂಥ ಸಾರ್ವಜನಿಕ ಸ್ಥಳದಲ್ಲಿ ! ಕೂಡಲೇ ನನಗೆ ಗಾಂಧಿಜಿಯವರು ನೆನಪಾದರು. "ಕೆಟ್ಟದ್ದನ್ನು ನೋಡಬೇಡ" ಅಂತ. ನನ್ನ ಪಾಡಿಗೆ ಹಾಡನ್ನು ಕೇಳುತ್ತ ಕುಳಿತುಬಿಟ್ಟೆ. ಆದರೆ ಮನಸು ಮತ್ತೆ ಯೋಚಿಸಹತ್ತಿತು. ಸುತ್ತ ತಿರುಗಿ ನೋಡಿದಲ್ಲಿ ಪ್ರೇಮಿಗಳ ಜೋಡಿ. "ಪ್ರೇಮಿಗಳ ಜೋಡಿ " ಅದನ್ನ ಹಾಗೇ ತೀರ್ಮಾನಿಸಲು ಕಾರಣವಿದೆ. ನಮಗೆ ಯಾಕೆ ಎಲ್ಲೇ ಹುಡುಗ ಹುಡುಗಿಯನ್ನು ಜೊತೆ ಜೊತೇಲಿ ನೋಡಿದಾಗ ಅವರು ಒಳ್ಳೇ ಸ್ನೇಹಿತರಿರಬಹುದು, ಅಣ್ಣ-ತಂಗಿ, ಅಕ್ಕ-ತಮ್ಮ ಇರಬಹುದು ಎಂಬ ಭಾವನೆ ಬರುವುದಿಲ್ಲ? ಬಂದರೂ ಅದು ಅವರು ಪ್ರೇಮಿಗಳಿರಬಹುದೇ ಎಂಬ ಶಂಕೆಯ ನಂತರ ಬರುವಂತ್ತದ್ದು. ಹಾಗಾದರೆ ಜಗತ್ತನ್ನು ನೋಡುವ ದೃಷ್ಟಿ ಹಾಳಾಗಿದೆಯೇ? ಅಥವಾ ನಮ್ಮಲ್ಲೇ ಒಳ್ಳೆಯದನ್ನು ಗ್ರಹಿಸುವ ಶಕ್ತಿ ಇಲ್ಲವಾಗಿದೆಯೇ? ಒಂದು ವೇಳೆ ಜಗತ್ತಿನಲ್ಲಿ ಇಷ್ಟೊಂದು ಪ್ರೀತಿ-ಪ್ರೇಮ ತುಂಬಿದ್ದೆ ಆಗಿದ್ದರೆ ಯಾಕೆ ಈ ದ್ವೇಷ, ಅಸೂಯೆ, ಸೇಡು ಎಂಬಿತ್ಯಾದಿ ಭಾವನೆಗಳಿಂದ ಮನುಷ್ಯರು ಬದುಕುತ್ತಿದ್ದಾರೆ? ಇಲ್ಲಿ ಕುಳಿತ ಎಲ್ಲ ಜೋಡಿಗಳು ನಿಜವಾಗಿಯೂ ಮದುವೆ ಆಗುವವರ? ಆಮೇಲೆ ಮತ್ತೆ. ನಿನಗ್ಯಾಕೆ ಇದೆಲ್ಲ. ಲೀವ್ ಇಟ್ ಅಂತ ಅಂದುಕೊಂಡು ಮತ್ತೆ ಸುಮ್ಮನಾಗುತ್ತೇನೆ. ಅಷ್ಟಕ್ಕೂ ಪ್ರೀತಿ ಅಂದ್ರೆ ಹಿಂಗೆ ಅಂತ ಹೇಳೋದು ಕಷ್ಟದ ವಿಷಯ.

ತೆಗೆದುಕೊಂಡ ಜೋಳ ಸುಮಾರಾಗಿ ಮುಗಿಯುತ್ತಿದೆ. ಆಕಾಶದಲ್ಲಿ ಬೆಳ್ಳಕ್ಕಿಗಳು ತಮ್ಮ ಗೂಡಿಗೆ ಮರಳಲು ಗುಂಪು ಗುಂಪಾಗಿ ಬರುವುದು ಕಾಣುತ್ತಿದೆ. ವಯಸ್ಸಾದ ಒಂದು ಮುದುಕಿ ನನ್ನ ಬಳಿ ಬಂದು ಕಡಲೆ ಬೀಜ ಬೇಕಾ ಎಂದು ಕೇಳುತ್ತಿದ್ದಾಳೆ. ಅವಳ ಮುಖ ಸುಕ್ಕು ಗಟ್ಟಿದೆ. ಪ್ರಾಯ ಅರವತ್ತರ ಮೇಲಿರಬೇಕು ಎಂದು ನನ್ನ ಮನಸ್ಸು ಲೆಕ್ಕ ಹಾಕಿದೆ. ಕಡಲೆ ಬೀಜ ತಿನ್ನುವ ಮನಸ್ಸೇನೂ ಇಲ್ಲದಿದ್ದರೂ ಹತ್ತು ರೂಪಾಯಿ ಕೊಟ್ಟು ಕಡಲೆ ಬೀಜವನ್ನು ಕೊಳ್ಳುತ್ತೇನೆ. ಆ ಮುದುಕಿ ದುಡಿಯದೆ ಸೋಮಾರಿಯಾಗಿಯೇ ಕಾಲ ಕಳೆಯುವ ಎಷ್ಟೋ ಯುವ ಜನರಿಗೆ ಆದರ್ಶ ಎಂದು ಅಂದುಕೊಳ್ಳುತ್ತೇನೆ. ಅಪ್ಪನ ದುಡ್ಡಿನಲ್ಲಿ ಮಜಾ ಮಾಡಿಕೊಂಡು ಜೀವನ ಮಾಡುವ ಎಷ್ಟೋ ಜನರು, ಹಾಗೂ ಈ ಮುದುಕಿ ಇಬ್ಬರೂ ಮನಸಿನ ತಕ್ಕಡಿಯಲ್ಲಿ ಕೂರಿಸಿ ತೂಗಿದಾಗ, ಮುದುಕಿಯ ತೂಕ ಜಾಸ್ತಿ ಬಂದು ಅವಳನ್ನು ಮನಸಲ್ಲೇ ಪ್ರಶಂಸಿಸಿ ಕುಶಿ ಪಡುತ್ತೇನೆ. ಅವಳು ಕೊಟ್ಟ ಕಡಲೆ ಬೀಜವನ್ನು ಒಂದೊಂದೇ ಸಿಪ್ಪೆ ಬಿಡಿಸುತ್ತ ಕುಳಿತ ಬೆಂಚಿನಿಂದ ಏಳುತ್ತೇನೆ . ನನ್ನ ಕಣ್ಣು ಪಕ್ಕದಲ್ಲಿರುವ ಅವರ ಮೇಲೆ ಬೇಡವೆಂದರೂ, ಗಾಂಧೀಜಿ ನೆನಪಾದರೂ ಒಮ್ಮೆ ಓರೆಗಣ್ಣಿನಲ್ಲಿ ನೋಡುತ್ತೇನೆ. ಅವರಿಗೆ ಲೋಕದ ಪರಿವೆ ಇಲ್ಲದಂತಿದೆ ಎಂದು ನನಗೆ ನಗು ಬರುತ್ತದೆ. ಮಕ್ಕಳು ಇನ್ನೂ ಉಯ್ಯಾಲೆ ಆಡುತ್ತಿದ್ದಾರೆ. ನಾನೂ, ತಂಗಿಯೂ ಒಂದು ಕಾಲದಲ್ಲಿ ಹೀಗೇ ಆಡುತ್ತಿದ್ದೆವಲ್ಲ ಎಂದು ನೆನಪಾಗುತ್ತದೆ. ಜೋಕಾಲಿಯಲ್ಲಿ ಒಮ್ಮೆ ತಂಗಿ ಕಂಡಂತಾಗುತ್ತದೆ, ಆಮೇಲೆ ಇನ್ಯಾರೋ! ಬರುವಾಗ ನಡೆದು ಬಂದ ಹಾದಿಯಲ್ಲೇ ಮತ್ತೆ ವಾಪಸ್ ತೆರಳುತ್ತೇನೆ. ಸೂರ್ಯನ ತಿಳಿ ಬಿಸಿಲು ಇದ್ದ ರಸ್ತೆಯಲ್ಲಿ ಈಗ ರಸ್ತೆ ದೀಪಗಳ ಬೆಳಕಿನ ಮೆರವಣಿಗೆ. ನನ್ನ ಫೋನಿನಲ್ಲಿ ಹಾಡು ಕೇಳುತ್ತದೆ,

"ಸುರಜ್ ಹುವ ಮದ್ಧಂ , ಚಾಂದ್ ಜಲನೇ ಲಗಾ
ಆಸ್ಮಾನ್ ಯೇ ಹಾಯ್ ಕ್ಯೂನ್ ಪಿಘಲ್ನೆ ಲಗಾ "

ಸುಂದರ ಸಂಜೆಯನ್ನು ಕಳೆದ ಅನುಭೂತಿ ನನ್ನ ನೆನಪಿನ ಪುಟಗಳಲ್ಲಿ ಸೇರುತ್ತದೆ .

16 ಕಾಮೆಂಟ್‌ಗಳು:

ವಾಣಿಶ್ರೀ ಭಟ್ ಹೇಳಿದರು...

summane ishta atu divya...:)NICE ONE!!

umesh desai ಹೇಳಿದರು...

divya , good writeup.
and appealing narration too.

ಜಲನಯನ ಹೇಳಿದರು...

ಹಹಹ ದಿವ್ಯಾ ..ಚನ್ನಾಗಿದೆ,,,ನನಗೆ ನನ್ನ ಅಮ್ಮ ಸ್ಕೂಲಿಗೆ ಹೋಗುವಾರ ಪೂರಾ ಸೋರೋ ಥರ ಎಣ್ಣೆ (ಅದೂ ಹರಳೆಣ್ಣೆ) ಹಚ್ಚಿ ಬಾಚ್ತಾ ಇದ್ದದ್ದು ನಿನಪಾಯ್ತು...ಸದ್ಯಕ್ಕೆ ನಾಲ್ಕನೇ ಕ್ಲಾಸಿಗೇ ನಿಲ್ತು..ಆಗ ನನ್ನ ಅಕ್ಕ (ದೊಡ್ಡಪ್ಪನ ಮಗಳು) ಬಿಡು ಚಿಕ್ಕಮ್ಮ ನಾನು ಬಾಚ್ತೀನಿ ಅಂತ ಸ್ವಲ್ಪ ಕೊಬರಿ ಎಣ್ಣೆ ಹಾಕಿ (ನನ್ನ ರಿಕ್ವೆಸ್ಟ್ ಮೇಲೆ) ಬಾಚೋದು ಶುರುವಾಯ್ತು...ಚಿಕ್ಕ ಚಿಕ್ಕ ಮಾತು ನೆನಪು ಮರುಕಳಿಸುತ್ತೆ...
ಗುಡ್ ಇಷ್ಟ ಆಯ್ತು

ವನಿತಾ / Vanitha ಹೇಳಿದರು...

Divya, niceeeeeeeee
ನಾ ಮೈಸೂರಲ್ಲಿದ್ದಾಗ, ಒಂದು ದೊಡ್ಡ mallನ ಪಕ್ಕದಲ್ಲೇ ಒಬ್ರು ಅಜ್ಜಿ ನೆಲದಲ್ಲಿ ಕೂತ್ಕೊಂಡು ಹಸಿಮೆಣಸು, ಲಿಂಬೆ, ಕೊತ್ತಂಬರಿ ಸೊಪ್ಪು ಇಟ್ಕೊಂಡು ಮಾರ್ತಿದ್ರು..ನಾನು mallನಲ್ಲಿ ಏನೇ ತರಕಾರಿ ತೊಗೊಂಡ್ರೂ, ಸೊಪ್ಪು, ಲಿಂಬೆ, ಮೆಣಸು ಎಲ್ಲ ಅವಳಿಂದಲೇ ತಗೊಳ್ತಾ
ಇದ್ದೆ!!ಈಗ ಹೇಗಿದ್ದಾರೋ ಏನೋ, ಆ ಅಜ್ಜಿ ನೆನಪಾದ್ರು.

Santhosh ಹೇಳಿದರು...

nice story...park photo looks very sad

thanks for good post
Santhosh

ದಿನಕರ ಮೊಗೇರ ಹೇಳಿದರು...

very nice narration.......

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ನವಿರಾದ ಲಲಿತಪ್ರಬಂದ..
ಸುಂದರ ಬರವಣಿಗೆ..

shivu.k ಹೇಳಿದರು...

ದಿವ್ಯಾ,
ಒಂದೊಂದು ಖಾರ ಹಾಕಿದ ಜೋಳ ಕೊಟ್ಟು ನಿನ್ನನ್ನು ಅನೇಕ ಜಾಗದಲ್ಲಿ ಕೂರಿಸಬೇಕೆನಿಸುತ್ತದೆ. ಏಕೆಂದರೆ ಅದನ್ನು ತಿನ್ನುತ್ತಾ ಇಂಥ ಸುಂದರ ಚಿತ್ರಗಳನ್ನು ಬರಹದ ಮೂಲಕ ಕಟ್ಟಿಕೊಡುತ್ತೀಯಲ್ಲ...ಅದಕ್ಕೆ...
ಚೆಂದವುಂಟು ನಿನ್ನ ಬರಹ..

jithendra hindumane ಹೇಳಿದರು...

nice writeup

Unknown ಹೇಳಿದರು...

nice one...we ppl are lucky to have so many gardens in our city...can I know from which site u upload the blog themes?

ಮನಸಿನ ಮಾತುಗಳು ಹೇಳಿದರು...

ವಾಣಿಶ್ರೀ,
Umesh sir,
ಆಜಾದ್ ಭಯ್ಯಾ(ಜಲನಯನ),
ವನಿತಕ್ಕಾ ,
Santhosh,
ದಿನಕರ ಸರ್,
ವೆಂಕಟಕೃಷ್ಣ ಸರ್,
ಶಿವಣ್ಣ ,
ಜಿತೆಂದ್ರಣ್ಣ,
ಎಲ್ಲರಿಗೂ ನಾನು ಧನ್ಯೋಸ್ಮಿ..:-)

Sakalpa..thanks.I am using the themes provided by blogspot itself.

ಸುಧೇಶ್ ಶೆಟ್ಟಿ ಹೇಳಿದರು...

thumba chennagi barediddeeri divya... naanu yaavaagalu heLuvanthe nanage neevu nimma suththamuththalina janarannu gamanisi bareyuva bage thumba ishta aaguttade...

ಮನಸಿನ ಮಾತುಗಳು ಹೇಳಿದರು...

Thanks Sudhesh..:)

ವೇದಾಂತ ದೇಶಿಕ ಹೇಳಿದರು...

ದಿವ್ಯ... ನಾನು googleನಲ್ಲಿ ಹಾಗೆ ಏನೋ ಹುಡುಕುತ್ತಿದ್ದಾಗ ನಿಮ್ಮ ಬ್ಲಾಗ್ ನೋಡಿದೆ. ನನಗೆ ಕಥೆ ಹೇಳೋದು ಕಥೆ ಕೇಳೋದು ತುಂಬಾ ಇಷ್ಟ.... ಸಣ್ಣ ಬರಹದ ರೂಪದಲ್ಲಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ ತುಂಬಾ ಇಷ್ಟ ಆಯ್ತು ..ನೀವು ಪಾರ್ಕ್ ಒಳಗೆ ಬಂದ ರೀತಿ... ಸುತ್ತಮುತ್ತಲ್ನ ಪರಿಸರದ ವಿವರಣೆ is jus awesome ... ಅಜ್ಜಿಯ ನೆನಪುಗಳನ್ನು ವಿವರ್ಸಿದ ರೀತಿ ಹಾಗೆ ಕಣ್ಣಲೆ ಇದೆ....

ವೇದಾಂತ ದೇಶಿಕ ಹೇಳಿದರು...

ನಿಮ್ಮೀ ಶೀರ್ಷಿಕೆ ತುಂಬಾ philosophical ಆಯ್ತು.... ಒಂಟಿತನ ಏಕಾಂತ ಕಲ್ಲನು ಕವಿಯಾಗಿ ಮಾಡತ್ತೆ ಅನ್ಸತ್ತೆ... ಹ್ಹ ಹ್ಹ ....

Soumya. Bhagwat ಹೇಳಿದರು...

ಚಿತ್ರಗಳನ್ನು ಕಣ್ಣಿಗೆ ಕಟ್ಟಿ ಕೊಡುತ್ತ ಹೋಗುತ್ತದೆ ಬರಹ .. :)) ಚಂದಾಯ್ದು. .. :))