ಸಾಕು ನನಗಿನ್ನು ಮುಂದೆ ಓದೋಕೆ ಸಾಧ್ಯನೇ ಇಲ್ಲ. ನನಗೆ ಗೊತ್ತು, ತಡೆದುಕೊಳ್ಳಲಾಗದೇ ಇರುವಷ್ಟು ಅಳು ಬರುತ್ತ ಇದೆ. ಈ ಪುಸ್ತಕ ಓದೋಕೂ ಮುಂಚೆ ಖುಷಿ-ಖುಷಿಯಾಗೇ ಇದ್ದೆ. ಆದರೆ ಈ ಪುಟ ಓದಿದಂತೆ ಅದ್ಯಾಕೆ ಹಾಗೆ ಅಳು ಉಕ್ಕಿ ಉಕ್ಕಿ ಬಂತು? ಹಾಗಾಗಲು ಕಾರಣ ಏನು? ನನ್ನ ಸುಪ್ತ ಮನಸ್ಸಿನಲ್ಲಿ ಸತ್ತಂತೆ ಅಡಗಿದ್ದ ಎಷ್ಟೋ ಹಳೆ ಘಟನೆಗಳು ಮತ್ತೆ ಮತ್ತೆ ನೆನಪಾದವ? ಯಾವ ಪುಸ್ತಕ ನನ್ನ ಮನಸ್ಸಿನಲ್ಲಿನ ಸಾವಿರಾರು ನೋವುಗಳಿಗೆ ಒಂದು ಪರಿಹಾರ ಅಂದುಕೊಳ್ಳುತ್ತಲೇ ಕೊಂಡಿದ್ದೆನೋ ಅದೇ ಇಂದು ನನ್ನ ಭಾವಗಳೆಲ್ಲ ಒಟ್ಟಿಗೇ ನರ್ತನ ಮಾಡುವಂತೆ ಮಾಡಿ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆಯಾ? ಹಾಗೆ ಅಂದುಕೊಳ್ಳುತ್ತಲೆ ಪುಸ್ತಕವನ್ನು ಬದಿಗಿಟ್ಟು ಮುಸುಕು ಹಾಕಿಕೊಂಡು ಮಲಗಿದಳು. ಅದ್ಯಾವಾಗ ನಿದ್ದೆ ಹತ್ತಿತೋ ತಿಳಿಯಲೇ ಇಲ್ಲ!
<>
ಬೆಳಗ್ಗೆ ಎದ್ದ ಕೂಡಲೇ ಮಂಚದಿಂದ ತಕ್ಷಣ ಇಳಿಯುವುದು ಅವಳಿಗೆ ಆಭ್ಯಾಸವಿಲ್ಲ. ಚಿಕ್ಕಂದಿನಲ್ಲಿ ಅಮ್ಮ ಕಲಿಸಿಕೊಟ್ಟ ಹಾಗೆ, ಸ್ವಲ್ಪ ಹೊತ್ತು ಮಂಚದ ಮೇಲೇ ಕುಳಿತು, "ಕರಾಗ್ರೆ ವಸತೇ ಲಕ್ಶ್ಮಿ..." ಎಂದು ಹೇಳುವುದು ರೂಢಿ. ಆದರೆ ಇತ್ತೀಚೆಗೆ ನಾನು ಆ ಸ್ಲೋಕವನ್ನು ಸರಿಯಾಗಿ ಹೇಳುತ್ತಿಲ್ಲ. ಏಳುವ ಮುಂಚೆಯೇ ಮುಂದಿನ ಸರದಿಯಲ್ಲಿ ಹಲ್ಲು ತಿಕ್ಕುವುದು, ಸ್ನಾನ ಮಾಡುವುದು ಈ ಸಮಯದಲ್ಲಿ ನನ್ನದು ಎಂದು ಅಚ್ಚಾಗಿ ಹೋಗಿದೆ. ಸ್ವಲ್ಪ ತಡ ಮಾಡಿದರು ಸರದಿಯಲ್ಲಿ ಕಾದಿರುವ ಇನ್ನೊಬ್ಬರಿಗೆ ತೊಂದರೆಯಾಗುತ್ತದೆ. ಸ್ನಾನ ಮುಗಿಸಿ ತಿಂಡಿ ತಿಂದು ಮಧ್ಯಾನ್ಹಕ್ಕೆಂದು ಊಟ ಕಟ್ಟಿಕೊಂಡು ಎಂಟು ಘಂಟೆಗೆ ಮನೆ ಬಿಟ್ಟರೆ ,ತಿರುಗಿ ಮನೆ ಸೇರುವುದು ಏಳು ಘಂಟೆಗೆ. ಬಂದ ಮೇಲೆ ಊಟ ಮಾಡಿಕೊಂಡು, ರೂಮಿನಲ್ಲಿ ಪುಸ್ತಕ ಹಿಡಿದು ಕುಳಿತರೆ ಹೊರ ಬರುವುದು ಇವನ ಕರೆ ಬಂದಾಗಲೇ.
ರಾತ್ರೆ ಓದಿದ ಪುಸ್ತಕದ ನೆನಪುಗಳು ಇನ್ನೂ ತಲೆಯಲ್ಲಿಯೇ ಗಿರಕಿ ಹೊಡೆಯುತ್ತಿದ್ದವು. ಅದರ ಬಗ್ಗೆಯೇ ಯೊಚಿಸುತ್ತಾ ಹಾಸಿಗೆಯಿಂದ ಎದ್ದು ಬೆಡ್ ಶೀಟ್ ಮಡಚಿ, ತಲೆಯ ದಿಂಬನ್ನು ಸರಿಯಾಗಿಟ್ಟು ತಾನು ಮಡಚಿದ್ದು ಸರಿಯಾಯ್ತ? ಎಂದು ಮತ್ತೊಮ್ಮೆ ತಿರುಗಿ ನೋಡಿ, ಬ್ರಶ್ ಮತ್ತು ಪೇಸ್ಟ್ ಹಿಡುದುಕೊಂಡು ಹೊರ ನಡೆದಳು. ಹಲ್ಲು ತಿಕ್ಕಿ ಆದ ಮೇಲೆ ಸ್ನಾನ ಮಾಡಲು ಬಿಸಿ ನೀರನ್ನು ಹಿಡಿದುಕೊಂಡು, ಬಚ್ಚಲ ಮನೆಗೆ ನಡೆದಳು. ಬಿಸಿ ನೀರಿಗೆ ತಣ್ಣೀರನ್ನು ಬೆರೆಸಿ, ಅದು ಹದ ಆಗಿರುವುದನ್ನು ಒಮ್ಮೆ ಮುಟ್ಟಿ ಖಾತರಿಯಾದ ಮೇಲೆ ತಂಬಿಗೆಯಿಂದ ನೀರು ಸುರಿದುಕೊಳ್ಳಲು ಶುರು ಮಾಡಿದಳು. ಇದ್ದಕ್ಕಿದ್ದಂತೆ ಅವ ಹೇಳಿದ ಮಾತು ನೆನಪಿಗೆ ಬಂದಿತು. ಅವನು ಹೇಳುತ್ತಿದ್ದ. ನಾವು ಮುಂದೆ ಮನೆ ಮಾಡಿದಾಗ ದೊಡ್ಡದಾಗಿರುವ ಬಚ್ಚಲು ಮನೆ ಇರುವ ಮನೆಗೇ ಹೋಗೋಣ. ಅವ ಹಾಗೇ! ಸ್ವಲ್ಪ ಪೋಲಿ ಪೋಲಿ ಮಾತುಗಳನ್ನಾಡುತ್ತಿದ್ದ. ಅವನ ಮಾತುಗಳು ನನಗೂ ಆಗ ಖುಷಿ ಕೊಡುತ್ತಿದ್ದವು. ಆದರೆ ಈಗ? ಆ ಮಾತುಗಳನ್ನು ನೆನೆಸಿಕೊಂಡಾಗಲೆಲ್ಲ ಮನಸ್ಸಲ್ಲಿ ಹೇಳಿಕೊಳ್ಳಲಾಗದಷ್ಟು ಹೇಸಿಗೆ, ರೇಜಿಗೆ ಹುಟ್ಟುತ್ತಿದೆ. ಅದಕ್ಕಿಂತ ಹೆಚ್ಚಿನದೇನೂ ನನ್ನಲ್ಲಿ ಆಗುತ್ತಿಲ್ಲ. ಬಹುಷಃ ಅವನು ನನ್ನ ಅಸಹ್ಯ ಅನ್ನೋ ಪದಕ್ಕಿಂತ ಹೆಚ್ಚಿನ ಯಾವುದಕ್ಕೂ ಅರ್ಹನಲ್ಲವೇನೋ? ಮೊದಲಿಂದಲೂ ಮನಸ್ಸು ನನ್ನ ಹೃದಯದ ಮೇಲೆ ಹತೋಟಿ ಸಾಧಿಸುವಲ್ಲಿ ಗೆಲ್ಲಲೇ ಇಲ್ಲ. ಪ್ರತಿಸಾರಿಯೂ ಹೃದಯಕ್ಕೆ ಗೆಲುವು. ಆಮೇಲೆ ಮನಸ್ಸಿಗೆ ನೋವು.
ಅವನಲ್ಲಿ ನನಗೆ ವಿಶೇಷವಾದ ಆಸಕ್ತಿ ಹುಟ್ಟೋಕೆ ಕಾರಣವಾದರು ಏನು? ನಾನಾಗೇ ಆಸಕ್ತಿ ಬೆಳೆಸಿಕೊಂಡೆನಾ? ಅಥವಾ ಅವನಾಗೇ ನನ್ನಲ್ಲಿ ಅವನ ಬಗ್ಗೆ ಆಸಕ್ತಿ ಬರುವಂತೆ ನಟಿಸಿದನ? ಸ್ನಾನ ಮುಗಿಸಿ ಬಂದು ಬಟ್ಟೆ ಹಾಕಿಕೊಳ್ಳತೊಡಗಿದಳು. ದಿನವೂ ಯಾವ ಯಾವ ಬಟ್ಟೆ ಹಾಕಿ ಕೊಳ್ಳುವುದು ಎಂದು, ಭಾನುವಾರವೇ ನಿರ್ಧರಿಸಿಟ್ಟು ಬಿಡುತ್ತಿದ್ದಳು. ಹಾಗಾಗಿ ಇವತ್ತು ಯಾವ ಬಟ್ಟೆ ಹಾಕಿಕೊಳ್ಳುವುದು ಎಂಬ ಸಮಸ್ಯೆ ಅವಳಿಗಿರುತ್ತಿರಲಿಲ್ಲ. ತನ್ನ ಜೀನ್ಸ್ ಪ್ಯಾಂಟನ್ನು ಹಾಕಿಕೊಳ್ಳುತ್ತಿರುವಾಗ ಅವನ ಮಾತೇ ನೆನಪಾಯಿತು. ನೀನು ಜೀನ್ಸ್ ನಲ್ಲಿ ಚನ್ನಾಗಿ ಕಾಣುತ್ತೀಯ ಎಂದು. ಅಷ್ಟೇ ,ಜೀನ್ಸನ್ನು ಒಂದೆಡೆ ರೋಷದಿಂದ ಒಗೆದಳು. ಯಾವುದೋ ಹಳೆ ಸಲ್ವಾರನ್ನು ಸಿಕ್ಕಿಸಿಕೊಂಡಳು. ಛೆ! ಎಂಥ ಮನುಷ್ಯ ಅವನು?! ಅವನ ಬಗ್ಗೆ ಯೋಚಿಸುವುದೂ ತಪ್ಪು ಎಂದು ಭಾವಿಸಿ, ಮುಖಕ್ಕೆ ಪೌಡರ್ ಹಚ್ಚಿ ತಲೆ ಬಾಚಿಕೊಂಡು, ದೇವರ ಕೋಣೆಗೆ ಹೋಗಿ ದೇವರಿಗೆ ದೀಪ ಹಚ್ಚಿ, ಮೂರು ಪ್ರದಕ್ಷಿಣೆ ಹಾಕಿ ನಮಸ್ಕರಿಸಿದಳು. ದೇವರಲ್ಲಿ ಅಂತ ನಂಬಿಕೆ ಏನೂ ಇಲ್ಲದಿದ್ದರೂ ನಿತ್ಯದ ಕಾಯಕ ಬಿಡಲು ಮನಸ್ಸಿರಲಿಲ್ಲ ಅವಳಿಗೆ.
ಚಹಾ ಮಾಡಿಕೊಳ್ಳಲು ಗ್ಯಾಸ್ ಬಳಿ ಹೋದಾಗ ಮತ್ತೆ ಅವ ನೆನಪಾದ. ಎಷ್ಟೇ ತಡೆದರೂ ಮತ್ತೆ ನೆನಪಾಗುತ್ತಿದ್ದಾನೆ. ಆ ಪುಸ್ತಕ ಓದಲೇ ಬಾರದಿತ್ತು. ಛೆ! ಹೀಗೇ, ಇದೇ ತರಹ ಆ ದಿನ ನಾನು ಚಹಾ ಮಾಡುತ್ತಿದೆ. ಅವನ ಕರೆ ಬಂದಿತ್ತು. ಮನಸಿಗೆ ಬಂದಂತೆ ನನ್ನ ಬೈದಿದ್ದ. ಹೌದು ! ಅದೇ ಕೊನೆ. ಇನ್ನು ಮುಂದೆ ಅವನ ಜೊತೆ ಮಾತಾಡಲೇ ಬಾರದು ಎಂದು ನಿರ್ಧರಿಸಿಬಿಟ್ಟೆ. ಇದಕ್ಕೂ ಮುಂಚೆ ಅವನ್ನನ್ನು ಎಂದಾದರು ಭೇಟಿಯಾಗೋಣ ಅಂದಿದಕ್ಕೆ, ಕವಲು ಕಾದಂಬರಿಯ ಯಾವುದೋ ಒಂದು ಹೆಣ್ಣು ಪಾತ್ರಕ್ಕೆ ನನ್ನನ್ನು ಹೋಲಿಸಿ ಹೀಯಾಳಿಸಿದ್ದ. ಅವನು ಹಾಗೆ ಹೇಳಿದ ಅಂದ ಮಾತ್ರಕ್ಕೆ ನಾನೆಷ್ಟು ಅತ್ತೆ? ಯಾಕೆ? ಇನ್ಯಾರಾದರೂ ಹಾಗೆ ಹೇಳಿದ್ದರೆ ಅವರಿಗೆ ಕಪಾಳಕ್ಕೆ ಒಂದು ಹೊಡೆದು ಬರುತ್ತಿದ್ದೆ. ಆದರೆ ಇವನಿಗೆ ಬೈಯ್ಯೋಕೂ ನನಗೆ ಮನಸಾಗಲಿಲ್ಲ. ಯಾಕೆ? ನನಗೇನು ಗೊತ್ತು ಅವನು ಹಾಗೆ ಅಂತ?! ನಾನು ಅವನನ್ನು ಪ್ರೀತಿಸಿಬಿಟ್ಟೆ. ಯಾರನ್ನೂ ಕೇಳಲಿಲ್ಲ. ಪ್ರೀತಿಸಿಬಿಟ್ಟೆ!! ಸಿಕ್ಕ ಸಿಕ್ಕವರ ಜೊತೆ ಟೈಮ್ ಪಾಸ್ ಮಾಡಿ ಕಡೆಗೊಂದು ದಿನ ಮನೆಯಲ್ಲಿ ನೋಡಿದ ಹುಡುಗಿಯನ್ನು ಮದುವೆ ಆಗುವ ಯೋಚನೆ ಅವನಿಗಿತ್ತೆಂದು ಒಮ್ಮೆ ನನಗೆ ಗೊತ್ತಾಗಿದ್ದರೆ! ಚಹಾ ಬಿಸಿಯಾಗಿ ಚುಸ್ ಎಂದು ಮೇಲೆ ಬರುತ್ತಿದ್ದಂತೆ ಅದನ್ನು ಸೋಯಿಸಿ ಕಿಟಕಿ ಬಳಿನಿಂತು ಒಂದೊಂದೇ ಗುಟುಕು ಕುಡಿಯತೊಡಗಿದಳು.
ಹಿಂದೊಮ್ಮೆ ನಾವಿಬ್ಬರು ಸ್ನೇಹಿತರು ಎಂದು ಮೂರನೆಯವರಿಗೆ ಗೊತ್ತಾದಾಗ ಇವನೆಷ್ಟು ರೇಗಾಡಿಬಿಟ್ಟಿದ್ದ . ನಾನು ಅದನ್ನು ಅವನಿಗೆ ನನ್ನ ಮೇಲಿರುವ ಪೋಸ್ಸೇಸಿವೆನೆಸ್ಸ್ ಇರಬಹುದೇನೋ ಅಂದುಕೊಂಡು, ಯಾರೋ ಹಿಂದೆ ಹೇಳಿದ್ದರು, "ಕಳೆದುಕೊಳ್ಳೋ ಭಯ ಇದ್ದರೆ ಪೋಸ್ಸೇಸ್ಸಿವೆ ಆಗ್ತಾರೆ " ಅಂತೆ ಕೇಳಿದ್ದೆ. ಹಾಗಾದರೆ ಅವನಿಗೆ ನನ್ನ ಕಳೆದುಕೊಳ್ಳೋ ಭಯ ಇದೆ. ಅಂದರೆ ಅವನು ನನ್ನ ಪ್ರೀತಿಸುತ್ತಾನೆ. ಏನೇನೋ ಅಂದುಕೊಂಡೆ. ಕಣ್ಣುಗಳು ನನಗೇ ತಿಳಿಯದಂತೆ ತೇವವಾದವು. ಹಾಗೆ ಅವನು ರೇಗಾಡಿದ್ದು ಯಾಕೆ? ತನ್ನ ಕಳ್ಳ ವ್ಯವಹಾರ ಇಡೀ ಊರಿಗೆ ಗೊತ್ತಾಗುವುದು ಅವನಿಗಿಷ್ಟವಿರಲಿಲ್ಲ. ಹೇಗಿದ್ದರೂ ಅವನು ನನ್ನೊಂದಿಗೆ ಗುಟ್ಟಾಗಿದ್ದು ಕಡೆಗೊಂದು ದಿನ, ಎಲ್ಲರ ಎದಿರು ಸಭ್ಯನಂತೆ ಮನೆಯಲ್ಲಿ ನೋಡಿದವರನ್ನು ಮದುವೆ ಆಗುವವನಿದ್ದಾನೆ ಎಂದು ತಿಳಿದಿದ್ದು ತೀರ ಇತ್ತೀಚಿಗೆ. ಒಮ್ಮೆಯೂ ನಾನು, ನನ್ನ ಬಗ್ಗೆ ಯೋಚಿಸಲೇ ಇಲ್ಲವಲ್ಲ. ಇವನ ಎದಿರು ಮನೇಲಿ ನನಗೇ ನೋಡಿದ ಹುಡುಗರೆಲ್ಲ ತೃಣದಂತೆ ಕಾಣುತ್ತಿದ್ದರಲ್ಲ. ಯಾಕೆ? ಚಹಾದ ಲೋಟ ಖಾಲಿಯಾಯಿತು. ಚಹಾ ಮಾಡಿದ ಪಾತ್ರೆ ಮತ್ತು ಲೋಟವನ್ನು ತೊಳೆದಿಟ್ಟು ಅದರ ಜಾಗದಲ್ಲಿಟ್ಟಳು.
ಅಡಿಗೆ ಭಟ್ಟರು ಮಾಡಿಟ್ಟಿದ್ದ ಇಡ್ಲಿ ಸಾಂಬಾರನ್ನು ತಟ್ಟೆಗೆ ಬಡಿಸಿಕೊಂಡಳು. ಇಡ್ಲಿ ಎಂದರೆ ಎಲಿಲ್ಲದ ದ್ವೇಷ ಅವಳಿಗೆ. ಮನೆಯಲ್ಲಾಗಿದ್ದರೆ ಅಮ್ಮನೊಡನೆ ಜಗಳ ಆಡಿ ತನಗೆಂದೇ ಬೇರೆ ತಿಂಡಿ ಮಾಡಿಸಿಕೊಳ್ಳುತ್ತಿದ್ದಳು. ಆದರೆ ಈಗ? ವಿಧಿ ಇಲ್ಲ. ಆದರೂ ಯಾಕೋ ಸಾಂಬಾರು ನಾಲಿಗೆಗೆ ರುಚಿ ಎನಿಸಿತು. ಸಾಂಬಾರು ಚೆನ್ನಾಗಿರುವುದಕ್ಕೆ, ಇಡ್ಲಿ ತಿನ್ನಿವುದು ಕಷ್ಟವಾಗಲಿಕ್ಕಿಲ್ಲ ಎಂದು ಸಮಾಧಾನ ಮಾಡಿಕೊಂಡಳು. ಅವನು ಒಮ್ಮೆ ಕೇಳಿದ್ದ, ನಿನಗೆ ಅಡಿಗೆ ಮಾಡಲು ಬರುತ್ತದೆಯ? ಎಂದು. ನಾನು ಖುಷಿಯಿಂದ, ಸೌತ್ ಇಂಡಿಯನ್ ಮಾಡುತ್ತೀನಿ. ನಾರ್ತ್ ಇಂಡಿಯನ್ ಬರುವುದಿಲ ಎಂದಿದಕ್ಕೆ, ಅವನು,ನನಗೂ ಸೌತ್ ಇಂಡಿಯಾನ್ನೇ ಬೇಕು ಅಂದಿದ್ದ. ನಾನು ಮನಸೊಳಗೆ ಸಂತೋಷಗೊಂಡಿದ್ದೆ. ಅವನು ಬೇಕಂತಲೇ ಹಾಗೆ ಹೇಳುತ್ತಿದ್ದನೋ, ಅಥವಾ ನಾನೇ ಅವನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇನೋ? ನನಗಂತೂ ತಿಳಿತಿಲ್ಲ.
ಇಡ್ಲಿಯ ಒಂದೊಂದು ಚೂರನ್ನು ಮುರಿಯುತ್ತ ಯೋಚನೆ ಮಾಡ್ತಾ ಇದ್ಲು ಅವಳು. ಹಾಕಿಕೊಂಡ ಎರಡು ಇಡ್ಲಿ ಮುಗಿಯುವಂತೆ ಕಾಣಲಿಲ್ಲ. ಒಂದಿಬ್ಬರು ಆಪ್ತ ಸ್ನೇಹಿತೆಯರಿಗೆ ಹೇಳಿದ್ದಳು ಅವಳು. ಹೀಗೆಲ್ಲ ನಡೆದಿದ ಅಂತ. ಅದಕ್ಕವರು ,ನಿಮ್ಮಿಬ್ಬರಲ್ಲಿ "ಅದೇನೂ" ಆಗಿಲ್ಲವಲ್ಲ. ಬಿಟ್ಟು ಬಿಡು. ಅವನಪ್ಪನಂತವರು ಸಿಗುತ್ತಾರೆ ಎಂದಿದ್ದರು. ಅವರ ಮಾತುಗಳಿಗೆ ಅವರ ಮೇಲೆ ಆದಿನ ಕೋಪಗೊಂಡಿದ್ದರೂ ಇವತ್ತು ಅವರೇ ಸರಿ ಅನ್ನಿಸಿಬಿಟ್ಟಿದೆ. ಆದರೂ "ಅದೊಂದು" ಆಗಿಲ್ಲ ಅಂದ ಮಾತ್ರಕ್ಕೆ ಎಲ್ಲವನ್ನೂ ಮರೆಯುವುದು ಅಷ್ಟು ಸುಲಭಾನ? ಯಾಕೋ ಹೊಟ್ಟೆ ತುಂಬಿದಂತಾಯ್ತು. ನಾವು ಮನೆ ಮಾಡಿದ್ರೆ ಡಬಲ್ ಬೆಡ್ರೂಮ್ ಮನೆ ಮಾಡೋಣ. ಅಪ್ಪ ಅಮ್ಮ ಬರುತ್ತಿರುತ್ತಾರೆ. ಸರಿ ಆಗುವುದಿಲ್ಲ ಎನ್ನುತಿದ್ದ. ಹೀಗೆಲ್ಲ ಮಾತಾಡುವವರು ಎಷ್ಟು ಸರಿ ಎಂದು ನಾನೇಕೆ ಯೋಚಿಸಲಿಲ್ಲ? ಬಹುಷಃ ಹುಡುಗರ ಬಗ್ಗೆ ನನಗೆ ಕೊರತೆ ಇದ್ದ ಅವರ ಗುಣಗಳ ತಿಳುವಳಿಕೆ ಅಥವಾ ನನ್ನ ಸನಿಹದವರಲ್ಲಿ ಯಾರೂ ಹಾಗೆ ಇಲ್ಲದಿರುವುದರಿಂದ ಅವನಲ್ಲಿರುವ "ಅವನು "ಕಾಣದೆ ಇದ್ದಿದ್ದು!. ತಟ್ಟೆ ತೊಳೆದಿಟ್ಟು ಮುಖವನ್ನು ಮತ್ತೊಮೆ ನೋಡಿಕೊಂಡಳು. ತಾನೆಷ್ಟು ಚಂದ ಅನ್ನಿಸ್ತು ಅವಳಿಗೆ. ಹಾಗೆ ಮತ್ತೆ ಇಲ್ಲ, ತಾನು ಚಂದ ಇದ್ದಿದ್ದರೆ ಅವನ್ಯಾಕೆ ತನ್ನ ಬಿಟ್ಟು ಹೋಗುತಿದ್ದ? ಮತ್ತೆ ದುಃಖ ಉಮ್ಮಳಿಸಿ ಬಂತು. ಅದರ ಹಿಂದೆಯೇ , ಬಿಡು ಅವನಿಗೆ ಬೇಕಿದಿದ್ದು ಮಾಂಸ ಪರ್ವತದಂಥ ಹೆಣ್ಣಿರಬೇಕು. ನಿನ್ನ ಹಾಗೆ ಸ್ಲಿಮ್ ಆಗಿರುವವರು ಅವನಿಗೆ ಸೇರಲಿಕ್ಕಿಲ್ಲ. ಹಾಗಂದು ಕೊಂಡಿದ್ದೇ ತಡ, ಅಳು ನಿಂತು ಬಿಟ್ಟಿತು.
ಅವನ್ಯಾಕೆ ಹಾಗೆ ಮಾಡಬೇಕಿತ್ತು? ಹಾಗೆ ಮಾಡುವ ಅವನ ಉದ್ದೇಶ ಏನಿರಬಹುದು? ನಾನು ಪ್ರೀತಿಸುತ್ತೀನಿ ಅಂದಾಗೆಲ್ಲ ಅವನು,ನಿನ್ನದೇನೋ "ಹಿಡ್ದೆನ್ ಆಜಂಡ" ಇದೆ ಅನ್ನುತ್ತಿದ್ದ. ನಾನು ಕಸಿವಿಸಿಗೆ ಒಳಗಾಗುತ್ತಿದ್ದೆ. ಹಾಗೆ ಒಂದು ವೇಳೆ ಅವನಿಗೆ ಹೊತ್ತು ಕಳೆಯಲೇ ಜನ ಬೇಕಿತ್ತಾದರೆ ಎಷ್ಟೊಂದು ಹುಡುಗಿಯರು ಸಿಗುತ್ತಿದ್ದರಲ್ಲವೇ? ಅಥವಾ, ನುರಿತವರ ಜೊತೆ ಬೇಸರ ಬಂದು, ಬದಲಾವಣೆಗೆಂದು ನನ್ನ ಬಳಿ ಬಂದನ? ಅವನಿಗೇ ತಿಳಿಯದೆ ಅವನಲ್ಲಿ ಆ ವೀಕ್ನೆಸ್ಸ್ ಇರಬಹುದಾ? ನನ್ನ ಸಂಬಂಧಿಕರೊಬ್ಬರು ಮಾನಸಿಕ ವೈದ್ಯರು. ಅವರನ್ನು ಕೇಳಿದೆ, ಇವನು ಎಲ್ಲ ಮಾತನ್ನು ಆಡುತ್ತಾನೆ. ಆದ್ರೆ ಮದುವೆ ಅನ್ನುವ ಲಾಂಗ್ ಟರ್ಮ್ ಸಂಭಂದಗಳಿಗೆ ಮಾತ್ರ ಮನೆಯಲ್ಲಿ ಹೇಳಿದವರೇ ಆಗಬೇಕು ಅನ್ನುತ್ತಾನೆ. ಯಾಕಿರಬಹುದು ? ಎಂದಾಗ ಅವರು ಹೇಳಿದ ಉತ್ತರಕ್ಕೆ ನಾನು ಅವಾಕ್ಕಾದೆ. ಅವರು ಹೇಳಿದರು. ಹಿಂದೆ ಯಾರಾದರು ಅವರಿಗೆ ತೀವ್ರವಾಗಿ ಮೋಸ ಮಾಡಿದ್ದರೆ, ತೀರ ನಿರಾಶೆ ಹೊಂದಿದ್ದರೆ ಮುಂದೆ ಇಂಥ ಕೆಲಸಗಳಲ್ಲಿ ಕೈ ಹಾಕಲು ಹೆದರುತ್ತಾರೆ. ಅವರು ಯಾರನ್ನೂ ನಂಬುವುದಿಲ್ಲ. ಹಾಗೆ ಅವನು ನಿನ್ನ ಜೊತೆ ಚನ್ನಾಗಿರುವ ಕಾಲದಲ್ಲಿ ಬೇರೆ ಹುಡುಗಿಯರೊಂದಿಗೂ ಹಾಗೆ ವರ್ತಿಸುತ್ತಿರುತ್ತಾನೆ ಅಂದರು. ನನಗೇ ಏನೂ ತೋಚಲೇ ಇಲ್ಲ. ಇವನು ಎಲ್ಲರಿಗೂ ಹುಡುಗಿಯರ ಬಗ್ಗೆ ಹುಷಾರಾಗಿರಿ ಎನ್ನುತ್ತಿದ್ದುದು ಹೌದು!! ನನಗೆ ಇವನೆಲ್ಲಾದರು ಸ್ತ್ರೀ ದ್ವೇಷಿ ಇರಬಹುದೇ ಎನ್ನುವ ಅನುಮಾನ ಶುರುವಾಯಿತು. ಅಬ್ಬ! ಹಾಗಿದ್ದಲ್ಲಿ ಅವನ ಜೊತೆಗಿನ ನನ್ನ ಜೀವನ ಎಷ್ಟು ಭೀಕರವಾಗಿರುತಿತ್ತು. ಮೊದಲೇ ನಾನು ಸ್ವತಂತ್ರ ಜೀವಿ. ಇನ್ನೊಬ್ಬರು ಹೇಳಿದಂತೆ ನಡೆಯುವುದು ನನ್ನ ತನವೇ ಅಲ್ಲ.
ಅವನ ನಡವಳಿಕೆಯಿಂದಾಗಿ ಹುಡುಗರು ಎಂದರೆ ಇಷ್ಟೇ ಅಂದುಕೊಳ್ಳುವಂತಾಗಿ ಬಿಟ್ಟಿತ್ತು. ಆದ್ರೆ ನನ್ನ ತಪ್ಪು ಕಲ್ಪನೆಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿದ್ದು ಇವನು. ಇವನೆಂಥಹ ಮನುಷ್ಯ! ತಂಗಾಳಿ, ನದಿ, ಸಮುದ್ರ , ಬೆಳದಿಂಗಳು, ಚಂದ್ರ ಈ ಸುಂದರ ಕಲ್ಪನೆಗಳ ಪ್ರೀತಿ ಇವನದು ಕೂಡ. ನನ್ನ ತರದ ಹುಡುಗ ಅವನಲ್ಲವೇ ಅಲ್ಲ. ಯಾವುದೋ ಒಂದು ಘಳಿಗೆಯಲ್ಲಿ ನನಗೆ ಅವನು ಇಷ್ಟವಾಗಿ ಬಿಟ್ಟ. ಆದ್ರೆ ಆ ಇಷ್ಟ ಯಾವಾಗ ಹಠವಾಗಿ ಬಿಟ್ಟಿತೋ ನನಗೆ ಗೊತ್ತೇ ಆಗಲಿಲ್ಲ. ಅಹಂ ಗೆ ಪೆಟ್ಟಾದಾಗ ಮನುಷ್ಯ ಕೆರಳುತ್ತಾನೆ. ನನಗೂ ಹಾಗೆ ಆಯ್ತಾ? ಹೌದು, ಎಲ್ಲರು ಹೇಳುವಂತೆ ನನಗೆ ಸ್ವಲ್ಪ ಅಹಂಕಾರ ಇದೆ. ಆದರೆ ಅದು ದುರಹಂಕಾರ ಏನೂ ಅಲ್ಲ. ನನ್ನ ಅಹಂನ್ನು ತಣಿಸಿದವನು ಇವನು. ತಂಗಾಳಿಗೂ ಬಿರುಗಾಳಿಗೂ ಇರುವ ಅಂಥಹ ವ್ಯತ್ಯಾಸ ನನಗೆ ಈಗ ಗೋಚರಿಸುತ್ತಿದೆ. ಹೌದು ,ಇವನನ್ನು ಪ್ರೀತಿಸಬೇಕು. ಎಷ್ಟು ಪ್ರೀತಿಸಬೇಕು ಎಂದರೆ ಇವನ ಪ್ರೀತಿಯಲ್ಲಿ ನನ್ನನ್ನೇ ನಾನು ಮರೆಯಬೇಕು. ನನ್ನ ನಾನು ಪ್ರೀತಿಸಿದಕ್ಕಿಂತಲೂ ಇವನನ್ನು ಪ್ರೀತಿಸಬೇಕು. ಈಗಾಗಲೇ ಇವನು ನನಗೆ ಉಸಿರಿನಷ್ಟೇ ಅನಿವಾರ್ಯವಾಗಿಬಿಟ್ಟಿದ್ದಾನೆ. ಇನ್ನು ಅವನಲ್ಲಿ ನನಗ್ಯಾವ ಆಸಕ್ತಿಯೂ ಇಲ್ಲ. ನನ್ನ ಬದುಕು ಇವನಲ್ಲಿ ಲೀನವಾಗಿ ಬಿಟ್ಟಿದೆ. ಕಾರ್ಮೋಡದಂತ ನನ್ನ ಜೀವನದಲ್ಲಿ ಕಾಣಿಸಿಕೊಂಡು ಬೆಳ್ಳಿ ಕಿರಣ ಇವನು.
<>
ಇವನ ಹೆಸರು ಮೊಬೈಲ್ನ ಸ್ಕ್ರೀನ್ ನಲ್ಲಿ ಕಾಣುತ್ತಿದೆ. ನನಗೆ ಜೀವನದಲ್ಲಿ ಅನುಭವಿಸಬೇಕಾದ ತಿಲದಷ್ಟು ನೋವನ್ನು ಇವನಿಗೆ ಕೊಡಬಾರದು. ಇವನು ಎಷ್ಟು ಒಳ್ಳೆಯವನು. ಈ ಸಾರಿ ನಾನು ಮೋಸ ಹೋಗಲ್ಲ. ಅದು ನನಗೆ ಗೊತ್ತು. ಅಪ್ಪ ಯಾವಾಗಲೂ ಹೇಳುತ್ತಿದ್ದ. "ಒಳ್ಳೆ ಹುಡುಗನಾದರೆ ನನ್ನ ಅಭ್ಯಂತರ ಇಲ್ಲ " ಎಂದು. ಇವನನ್ನು ಅಪ್ಪನ ಎದಿರು ನಿಲ್ಲಿಸಲು ನನಗೆ ಯಾವುದೇ ಅಳುಕಿಲ್ಲ. "ಫೋನ್ ಎತ್ತಿದ್ದೆ, ಎಂಥ ಮಾಡ್ತಿದ್ದೆ ಪುಟ್ಟ? ಎಂದು ಪ್ರೀತಿ ಹೊಳೆನೇ ಹರಿಸಿದ್ದ. ಇಂಥ ಒಂದು ಪ್ರೀತಿಗಾಗಿಯೇ ಅಲ್ಲವೇ ನಾನು ಇಷ್ಟು ದಿನ ಕಾದಿದ್ದು? ಎನಿಸಿತು ಅವಳಿಗೆ. ನಮ್ಮಲ್ಲಿ ಇದ್ದರಷ್ಟೇ ಬೇರೆಯವರಿಗೆ ಧಾರೆ ಎರೆಯಲು ಸಾದ್ಯ. ನಿನ್ನಲ್ಲೇ ಇಲ್ಲ ಎಂದಾಗ ಬೇರೆಯವರಿಗೆ ನಿ ಏನು ತಾನೇ ಕೊಡಬಲ್ಲೆ? ನಿ ಕೊಟ್ಟ ಪುಸ್ತಕ ಓದುತ್ತಾ ಇದೀನಿ. ಎಲ್ಲ ಅಕ್ಷರಗಳಲ್ಲೂ ನೀನೇ ಕಾಣುತ್ತಿರುವೆ ಎಂದು ಪುಸ್ತಕದ ಮೇಲೆ ಒಮ್ಮೆ ಪ್ರೀತಿಯಿಂದ ಕೈಯಾಡಿಸಿದೆ. ಇವನಿಗೆ ಹೇಳಿದೆ, ನನಗೊಂದು ಕನಸಿತ್ತು. ನನ್ನ ಮನೆಯಲ್ಲಿ ಎರಡು ಕಪಾಟಿರಬೇಕು. ಒಂದರ ತುಂಬಾ ಪುಸ್ತಕಗಳು, ಇನ್ನೊಂದರಲ್ಲಿ ತಿಂಡಿಗಳು ಎಂದು. ಅದಕ್ಕವನು , ಮೊದಲನೆಯದು ನನ್ನಲ್ಲಿ ಈಗಾಗಲೇ ಇದೆ. ಎರಡನೆಯದನ್ನು ನೀನೇ ಮಾಡಿಕೊಳ್ಳಬೇಕು. ನಾನು ಜೋರಾಗಿ ನಕ್ಕೆ. ಬೆಳಗಿನಿಂದ ಕಾಡಿದ ಹೊಲಸು ನೆನಪುಗಳು ನನ್ನ ಹಿಂಡಿ ಹಿಪ್ಪೆ ಮಾಡಿದ್ದರೂ, ಇವನ ದ್ವನಿ ಕೇಳಿ ಎಲ್ಲ ಮರೆತು ಹೋಯಿತು. ನನ್ನ ಚಟುವಟಿಕೆಗಳನ್ನೆಲ್ಲ ಗಮನಿಸುತಿದ್ದ ನನ್ನ ಟೆಡ್ಡಿ ಬೇರ್ ಕೂಡ ನನ್ನ ನೋಡಿ ಕಣ್ಣು ಹೊಡೆದ ಭಾಸವಾಯಿತು.
17 ಮಾತಿಗೆ ಸ್ಪಂದಿಸಿದವರು:
good one divya nice writeup
ಅವತ್ತು 'ಅವನು', ಇವತ್ತು 'ಇವನು', ನಾಳೆ ಮತ್ಯಾರೋ... ಒಟ್ಟಿನಲ್ಲಿ ಜೀವನ ಹೀಗೆ.........
ಬದುಕನ್ನು ಯಾವುದೇ ಕಾಲದಲ್ಲೂ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಇರಬೇಕು ಎನ್ನುವದನ್ನು ಚೆನ್ನಾಗಿ ತೋರಿಸಿದ್ದೀರಿ.
kapatallella tindi idbadri, iruve baratte.
nice story Divya :)
ಚೆನ್ನಾಗಿದೆ.. :)
very very good writing.. keep it up:)
ದಿವ್ಯ
ಒಂದು ಉತ್ತಮ ಕತೆಯನ್ನು ಓದಿದ ಅನುಭವವಾಯಿತು..ಗುಡ್...
all the best :)
ಎಲ್ಲೂ ಬೋರ್ ಹೊಡೆಸಲಿಲ್ಲ ದಿವ್ಯಾ.....
ತು೦ಬಾ ಚೆನ್ನಾಗಿ ಬರೆದಿದ್ದೀರಿ... ಸು೦ದರ ಕಥೆಗೆ ಧನ್ಯವಾದಗಳು.
ನಿಮ್ಮದೆ ಸ್ವಂತ ಕಥೆ ಎಂಬಷ್ಟು ಸೊಗಸಾಗಿ ಬರೆದಿರುವಿರಿ. ಈ ಕಾಲದ ಹೆಣ್ಣು ಮಕ್ಕಳ ಮನೋಭಾವವನ್ನು ತೆರೆದಿಟ್ಟಿದೆ ಈ ಕಥೆ. ಈ ಬರಹ ಓದಿದ ನಂತರ ಬೈರಪ್ಪನವರು ಕವಲು ಕಾದಂಬರಿಯಲ್ಲಿ ಸೃಷ್ಟಿಸಿದ ಪಾತ್ರಗಳು ಸರಿಯಾಗಿವೆ ಅನ್ನಿಸಿತು. ಇವನು ಕೈಕೊಟ್ಟರೆ ಮತ್ತೊಬ್ಬ ಎಂಬ ದಾಟಿ ಇಲ್ಲಿ ಸ್ಪಷ್ಟವಾಗುತ್ತದೆ. ಹೀಗಾಗಿ ಆ ಕಥಾ ನಾಯಕಿ ಅವನನ್ನು ತೆಗೆಳುವ ನೈತಿಕತೆ ಉಳಿಸಿಕೊಂಡಿಲ್ಲ.
ಚೆನ್ನಾಗ್ ಬರದ್ಯೆ ದಿವ್ಯಾ.. :) ಮೊದ್ಲು ಸ್ವಲ್ಪ ಓದಿ ಇದೆಂತ ಮಳ್ಳು ಹೇಳಿ ಕಾಮೆಂಟ್ ನೋಡ್ದಿ, ಕಾಮೆಂಟ್ ನೋಡಿ ಏನೋ interesting ಅನ್ನಿಸ್ತು, ಇರ್ಲಿ ಹೇಳಿ ಪೂರ್ತಿ ಕಥೆ ಓದಿದಿ.. super!!! ಇಸ್ಟ ಆತು.... Thanks to all the bloggers for making my Saturday easier !!
"kathe" chennaagide- even though i have some bhinnabhiprayagaLu.
ಮೊದಲಿಗೆ ಎಲ್ಲರಿಗೂ ನನ್ನ ಮನವಿ...
ಇದನ್ನು ಬರೀ ಕಥೆಯಾಗಿ ಓದಿಕೊಳ್ಳಿ.ಈ ಕಥೆಗೂ ನನಗೂ ಯಾವುದೇ ಸಂಬಂಧ ಇಲ್ಲ.
ಉಮೇಶ್ ಸರ್, ಥ್ಯಾಂಕ್ಸ್ ರಿ...:-)
PSY,
ತುಂಬಾ ಅನುಭವಸ್ತರಂತೆ ಕಾಣುತ್ತೀರಿ ನೀವು. ಕಾಮೆಂಟ್ಗೆ ಧನ್ಯವಾದಗಳು
ಸುನಾಥ ಅಂಕಲ್,ಧನ್ಯವಾದಗಳು..:-)
ಅನಮಧೇಯ, ಹ ಹ ,ಸರಿ ಸರಿ..:D
ಸುಮಕ್ಕ, ಥ್ಯಾಂಕ್ಸು :-)
ಅನಿಲ್, ಥ್ಯಾಂಕ್ಸ್ ಕಣ್ರಿ:-)
ಕಾಂತೇಶ , ತುಂಬಾ ಥ್ಯಾಂಕ್ಸು :-)
ಶಿವಣ್ಣ . ಥ್ಯಾಂಕ್ಸು :-)
Vani,thanks..
ಸುಧೇಶ್, ಥ್ಯಾಂಕ್ಯ..:)
ಅನಾಮಧೇಯ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನೀವು ಕಥೆಯನ್ನು ಸರಿಯಾಗಿ ಅರ್ಥೈಸಿಕೊಂಡತಿಲ್ಲ ,ಅಥವ ನನ್ನ ಕಥೆಗೆ ನಿಮ್ಮ ಕಾಮೆಂಟ್ ಬೇರೆಯೇ ದೃಷ್ಟಿಕೋನ ನೀಡಿದೆ.ನಿಮ್ಮ ದೃಷ್ಟಿಕೋನದಲ್ಲಿ ಹೇಗೆ ನೋಡುತ್ತಿರೋ ಹಾಗೆ ಕಥೆ ಕಾಣುತ್ತದೆ. ಹಾಕಿಕೊಂಡ ಕನ್ನಡಕ ಅರಿಶಿನದ್ದಾದರೆ ಜಗತ್ತು ಬೆಳ್ಳಗೆ ಕಾಣುವುದಿಲ್ಲ. ನಿಮ್ಮ ಕಾಮೆಂಟ್ ನನ್ನ ಮನಸ್ಸಿನಲ್ಲಿ ಮತ್ತೊಂದು ಕಥೆಯನ್ನು ಶ್ರುಷ್ಟಿಸುತ್ತಿದೆ. ಸದ್ಯದಲ್ಲೇ ಬರೆಯುವೆ. ಭೈರಪ್ಪನವರ ಬಗ್ಗೆ ನನ್ನ ಬ್ಲಾಗಿನ ಚರ್ಚೆ ಬೇಡ. ಅವರು ನನ್ನ ಇಷ್ಟದ ಲೇಖಕರು ಹೌದು.ಬರುತ್ತಿರಿ.
Hegsss...thanku..:-)
ಶ್ರೀನಿಧಿ.ಡಿ.ಎಸ್ - Okay.thanku
very good narration divya... ಚಂದ ಬರದ್ದೆ ...... :))
Hi...I accidentally saw your blog, read BELLI KIRANA completely. its good. Finaly I end up with one confusion..how u wrote such a nice way.........being a technology(BE)girl...how u develop such a good skill.......... ??
I hope u answer
Thanks
ಅನಾಮಧೇಯ ,
Idont get the point why you dint wish to mention your name!..
anyways, thanks for the appreciation. But is there any rule that a tecchi girl should not write stories as such??
If yes,let me know. I will give a thought on that..;-)
Keep visting. Your feedback is important to me...:-)
ಒಂದು ಕಮೆಂಟನ್ನು ಪೋಸ್ಟ್ ಮಾಡಿ