ಶುಕ್ರವಾರ, ಆಗಸ್ಟ್ 27, 2010

ನನ್ನೊಳಗಿನ ಅವನು ಬರೆಸಿದ್ದು!!!


<1>

ಎಲ್ಲರೂ ನಕ್ಕಿದ್ದಾರಂತೆ ನನ್ನ ಹುಚ್ಚುತನಕ್ಕೆ,
ಅವನೂ ನಕ್ಕಿದ್ದಾನಂತೆ,
ತಮಾಷೆ ಮಾಡಿದಾನಂತೆ,
ಯಾರು ನಕ್ಕರೂ ನನಗೆ ಬೇಸರ ಇರಲಿಲ್ಲ,
ಅವನೊಬ್ಬನ ಬಿಟ್ಟು.
ಆದರೆ ಹಾಗಾಗಲಿಲ್ಲ,
ಅದೇನೋ ಹೆಣ್ಣು ಕ್ಷಮಯಾ ಧರಿತ್ರಿಯಂತೆ,
ಕ್ಷಮೆ ಕೊಡುವುದು ನನಗೆ ಬಿಟ್ಟ ವಿಷಯ
ಅನ್ನೋದು ಅಷ್ಟೇ ಸತ್ಯವಂತೆ,
ಎಲ್ಲರ ಮನೋರಂಜನೆ ಆದ ಸ್ವಗತಕ್ಕೆ,
ನಾನೂ ಎಲ್ಲರನ್ನೂ ನಗಿಸಬಲ್ಲೆ, ನೋವಾದರೂ ನನಗೆ
ಎಂದು ತಿಳಿದು ನನ್ನ ಮೇಲೆ ನಾನೂ ನಕ್ಕೆ!!

<2>

ನಿನಗಾಗಿ ನನ್ನತನ ಕೆಳೆದುಕೊಂಡು,
ನನ್ನೆಲ್ಲ ಕನಸುಗಳನ್ನು ಕೊಂದು,
ನನ್ನೆಲ್ಲ ಆಸೆಗಳನ್ನು ಬದಿಗಿಟ್ಟು,
ಮನಸಲ್ಲಿ ಸಾವಿರಾರು ನಿರೀಕ್ಷೆ ಇಟ್ಟುಕೊಂಡು,
ಕಡೆಗೊಂದು ದಿನ ನೀನೂ ಇಲ್ಲ,
ನನ್ನತನವೂ ಇರದೇ ಹೋಗುವುದನ್ನು ನೋಡುವುದಕ್ಕಿಂತ,
ನಾ ಹೀಗೆ ಇದ್ದುಬಿಡುತ್ತೇನೆ ಬಿಡು,
ನಾನು ನಾನಾಗಿ.

<3>

ಅಮ್ಮನಿಗೆ ಹೇಳಿದೆ,
ನಂಬಿದವ ಕೊಂಕು ಮಾತಾಡಿದ,
ಬೇಸರ ಮಾಡಿದ ಅಂತ,
ಅಮ್ಮ ಅಂದಳು- ನೀನು ಸುಮ್ಮನಿದ್ದು ಬಿಡು,
ನಿನಗೇ ಗೊತ್ತಲ್ಲ??
ಕಪ್ಪೆ ವಟಗುಟ್ಟುವಾಗ ಕೋಗಿಲೆ.....

<4>

ಸಿಗಬಹುದು ನಿನಗೆ ನಾಳೆ,
ನನಗಿಂತ ಚೆಂದ ಇರುವವರು,
ನನಗಿಂತ ತಿಳಿದವರು,
ಆದರೆ ನಾನು??ನನ್ನ ಪ್ರೀತಿ ??
ಅಕ್ಷರಗಳಲ್ಲೇ ಕರೆದೆ,
ಇಲ್ಲ ಎನ್ನಲಾಗಲಿಲ್ಲ,
ನಾ ಬರುವ ವೇಳೆಗೆ ನೀನು ,
ಆಮಂತ್ರಣ ನೀಡದ ಸೋಗು ಹಾಕಿದೆ.

<5>

ನೆನಪಿರಲಿ ನನಗೆ ಬೇಕಿದ್ದು
ನಿನ್ನ mnc ಕೆಲಸವಲ್ಲ,
ನಿನ್ನ software ಹಣವಲ್ಲ.
ನಿಮ್ಮಂತವರ ಮನೆ ಸೇರಿದ ಹೆಮ್ಮೆಯಲ್ಲ,
ನೀನು ಕೊಡಿಸಬಹುದಾದ ಒಡವೆ ,ರೀಶಿಮೆ ಸೀರೆಯಲ್ಲ,
ನಿನ್ನ ಗೆದ್ದ ಅಹಂ ಅಲ್ಲ,
ನಾನು ನಿನ್ನವಳು ಎಂಬ ಸಂತೋಷವಷ್ಟೇ!
ನಿನ್ನ ಹನಿ ಪ್ರೀತಿ ಅಷ್ಟೇ!!
ಹೌದು ನೆನಪಿರಲಿ, ಹನಿ ಪ್ರೀತಿಯಷ್ಟೇ!!

<6>

ಜೀವನ ಆಯ್ಕೆಗಳ ಸಂತೆಯಂತೆ,
ಪ್ರೀತಿ ಹರಿಯುವ ನದಿಯಂತೆ,
ಹಳೆ ನೀರು ಹೋದಾಗ ಹೊಸ ನೀರು ಬರುವುದಂತೆ,
ನನಗೀಗ ಆಯ್ಕೆಯ ಸ್ವಾತಂತ್ರವಿದೆಯಂತೆ,
ಒಂದು ನಾನು ಇಷ್ಟಪಟ್ಟಿದ್ದು,
ಇನ್ನೊಂದು ನನ್ನ ಇಷ್ಟಪಟ್ಟಿದ್ದು,
ಆಯ್ಕೆ ಸರಿಯಾಗಿ ಮಾಡಬೇಕಂತೆ,
ಇದು ಎಲ್ಲರಿಗೂ ತಿಳಿಯದ ವಿಷಯವಂತೆ!!

<7>

ಹಿಂದಿನ ಕಾಲದ ಹಾಗೆ ಈಗ ಯಾರೂ
ನಿಜವಾಗಿ ಪ್ರೀತಿಸೋಲ್ಲವಂತೆ,
ನಾನು ಕಣ್ಣು ಬಿಡಬೇಕಂತೆ.
ಈಗೆಲ್ಲ ಏನಿದ್ದರೂ,
ಬರೀ ಕಣ್ಣಿಗೆ ಕಾಣುವ ಬಹಿರಂಗವನ್ನು ಮೆಚ್ಚುವರಂತೆ
ಶುದ್ದವಿದ್ದರೂ ಕಣ್ಣಿಗೆ ಕಾಣದ ಅಂತರಂಗವನ್ನಲ್ಲವಂತೆ!!

<8>

ನಿನ್ನೆ ರಾತ್ರಿ ಕನಸಲ್ಲಿ ದೇವರು ಬಂದ,
ಏನು ವರ ಬೇಕು ಕೇಳೆಂದ,
ನಾನೂ ಕೇಳಿದೆ,
ನಾನಿಷ್ಟು ಬೇಡಿಕೊಂಡರೂ ನೀನ್ಯಾಕೆ
ಅವನ ನನಗೆ ಕೊಡಲಿಲ್ಲ?
ದೇವರಂದ, ಅವನಲ್ಲ ನಿನ್ನವ,
ನಿನಗೆ ಬೇರೆಯದೇ ಕಾದಿದೆ,
ಅವನನ್ನು ಕಥೆಯಾಗಿಸಿ ಕಸದ ತೊಟ್ಟಿಗೆ ಹಾಕಿಬಿಡು,
ನನಗೆ ಹಾಗೆ ಮಾಡಲು ಆಗಲೇ ಇಲ್ಲ,
ದೇವರೇ ಹೇಳಿದರೂ !!

23 ಕಾಮೆಂಟ್‌ಗಳು:

nimmolagobba ಹೇಳಿದರು...

ನಿಮ್ಮೊಳಗಿನ ಅವನು ತುಂಬಾ ಸ್ಮಾರ್ಟ್ ಕಂಡ್ರೀ . ಎಷ್ಟೊಂದು ವಿಚಾರಣ ನಿಮ್ಮಹತ್ರ್ರ ಬರೆಸಿದ್ದಾನೆ.ನಿಮ್ಮೊಳಗಿನ ಅವನು ಬರೆಸಿದ ಕವಿತೆಗಳು ಮನಸ್ಸಿನ ಕನ್ನಡಿ ಅದಕ್ಕೆ ನಿಮ್ಮೊಳಗಿನ ಅವನಿಗೆ ಒಂದು ಥ್ಯಾಂಕ್ಸ್ ಕಂಡ್ರೀ.


<1>

ಸುಮ ಹೇಳಿದರು...

nice ..chennaagive kavanagaLu divya .

Raghu ಹೇಳಿದರು...

ತುಂಬಾ ಚೆನ್ನಾಗಿದೆ. ಮನಸ್ಸಿಗೆ ಹತ್ತಿರವಾದ ಅವನು..ಅವನ ಮಾತುಗಳು..
ನಿಮ್ಮವ,
ರಾಘು.

shridhar ಹೇಳಿದರು...

ದಿವ್ಯಾ,
ಬಹಳ ಚೆನ್ನಾಗಿದೆ ನಿಮ್ಮ ಅವನ ಬಗೆಗಿನ ಕವನ ..

ತೇಜಸ್ವಿನಿ ಹೆಗಡೆ ಹೇಳಿದರು...

ನಿನಗಾಗಿ ನನ್ನತನ ಕೆಳೆದುಕೊಂಡು,
ನನ್ನೆಲ್ಲ ಕನಸುಗಳನ್ನು ಕೊಂದು,
ನನ್ನೆಲ್ಲ ಆಸೆಗಳನ್ನು ಬದಿಗಿಟ್ಟು,
ಮನಸಲ್ಲಿ ಸಾವಿರಾರು ನಿರೀಕ್ಷೆ ಇಟ್ಟುಕೊಂಡು,
ಕಡೆಗೊಂದು ದಿನ ನೀನೂ ಇಲ್ಲ,
ನನ್ನತನವೂ ಇರದೇ ಹೋಗುವುದನ್ನು ನೋಡುವುದಕ್ಕಿಂತ,
ನಾ ಹೀಗೆ ಇದ್ದುಬಿಡುತ್ತೇನೆ ಬಿಡು,
ನಾನು ನಾನಾಗಿ.

ತುಂಬಾ ತುಂಬಾ ಇಷ್ಟಾ ಆತು ಈ ಚುಟುಕು ದಿವ್ಯಾ....very touchy. ಎಲ್ಲಾ ತುಣುಕುಗಳೂ ಚೆನ್ನಾಗಿವೆ. :)

Narayan Bhat ಹೇಳಿದರು...

ನಿಮ್ಮ "ಅವನನ್ನು" ಕವನದ ಮೂಲಕ ಕಥೆಯಾಗಿಸುತ್ತಲೇ ಚಿರಂಜೀವಿಯಾಗಿಸಿದ್ದೀರಿ.

shivu.k ಹೇಳಿದರು...

ದಿವ್ಯ

ಅವನ ಬಗೆಗಿನ ಕವನ ತುಂಬಾ ಚೆನ್ನಾಗಿದೆ. ನಿಮ್ಮ ಮನಸ್ಸಿನಲ್ಲಿರುವ ಆತನಿಗೊಂದು ಥ್ಯಾಂಕ್ಸ್.

ಪ್ರವೀಣ್ ಭಟ್ ಹೇಳಿದರು...

ninnolagiddava.. ninagintha chennagi bardidna..... swalpa antegala kante santeyaagide.. jastiyagide aste...

bhavanegalu chandavagide
pravi

ಸೀತಾರಾಮ. ಕೆ. / SITARAM.K ಹೇಳಿದರು...

ನಿಮ್ಮಲ್ಲಿದ್ದು ಈ ಕವನ ಬರೆಯಿಸಿದ ಅವನಿಗೆ ಮತ್ತು ಕೈಗೆಟುಕದ ಅವಾನ ಕವನದಲ್ಲಿ ಜೀವವಾಗಿಟ್ಟ ನಿಮಗೆ ಧನ್ಯವಾದಗಳು. ಒಂದಕ್ಕೊಂದು ಅರ್ಥಗರ್ಭಿತವಾಗಿದೆ. ಕೊನೆಯ ಸಾಲುಗಳು ಮನತಟ್ಟಿದವು.

ಕ್ಷಣ... ಚಿಂತನೆ... bhchandru ಹೇಳಿದರು...

ದಿವ್ಯಾ ಅವರೆ,
ಅಮ್ಮ ಅಂದರಳು...
...ಕೋಗಿಲೆ....

ಈ ಸಾಲುಗಳು ವಾಸ್ತವಿಕ ಎನಿಸುತ್ತದೆ. ಹಾಗೆಯೇ ಎಲ್ಲ ಸಾಲುಗಳಲ್ಲೂ ಅವನು ಬರೆಸಿದ ವಿಚಾರಗಳು ... ಚೆನ್ನಾಗಿವೆ.

Uday Hegde ಹೇಳಿದರು...

all are good...liked second one most...

Subrahmanya ಹೇಳಿದರು...

ಕವನದ ಸಾಲುಗಳು ಕಾಡುತ್ತವೆ !. ಚೆನ್ನಾಗಿದೆ.

ದಿನಕರ ಮೊಗೇರ.. ಹೇಳಿದರು...

ದಿವ್ಯಾ..
ಆಗಲೇ ಓದಿದ್ದೆ... ಆಫೀಸಿನಲ್ಲಿ.... ಕನ್ನಡದಲ್ಲೇ ಬರೆಯಬೇಕೆಂದು ಈಗ ಬರೆಯುತ್ತಿದೇನೆ.... ಚಿಕ್ಕ ಚಿಕ್ಕ ಪ್ಯಾರಾಗಳಲ್ಲಿ ಎಷ್ಟು ಅರ್ಥವಿದೆ..... ಅದನ್ನು ಯಾರಿಗೂ ನೋವಾಗದ ರೀತಿಯಲ್ಲಿ ಬರೆಯೋದು, ಅವರಿಗೆ ಅರ್ಥವಾಗೋ ಹಾಗೆ ಬರೆಯೋದು ತುಂಬಾ ಕಷ್ಟ...... excellent .... ಸುಪ್ಪರ್....

ವಿ.ಆರ್.ಭಟ್ ಹೇಳಿದರು...

nimmoliruva avanu avanoliruva neevu eradara milita bahala arthagarbhita, chennaagide ! [kannada font sigalilla adakke english nalli barede]

sunaath ಹೇಳಿದರು...

ಬದುಕಿನಲ್ಲಿ ಇರಬೇಕಾದ ಧೋರಣೆ, ಬದುಕಿನ ವೈರುಧ್ಯ ಇವು ಚೆನ್ನಾಗಿ ಮೂಡಿ ಬಂದ ಕವನ. ಅಭಿನಂದನೆಗಳು.

ದಿನಕರ ಮೊಗೇರ.. ಹೇಳಿದರು...

ದಿವ್ಯಾ..
ತುಂಬಾ ಚೆನ್ನಾಗಿ ಬರೆದಿದ್ದೀಯಾ.... ತುಂಬಾ ಸಾರಿ ಓದಿದೆ.... ಮನ ತಟ್ಟಿತು..... ಯಾಕೋ ಗೊತ್ತಿಲ್ಲ ಮನಸ್ಸು ಭಾರವಾಯಿತು..... ಎಲ್ಲಾ ಸಾಲುಗಳು ಅರ್ಥಪೂರ್ಣ ಅರ್ಥ ಕೊಡುತ್ತಿವೆ.... ತುಂಬಾ ಧನ್ಯವಾದ ಒಳ್ಳ್ಲೆಯ ಕವನ ಕೊಟ್ಟಿದ್ದಕ್ಕೆ....

ಮನಮುಕ್ತಾ ಹೇಳಿದರು...

ದಿವ್ಯ ಅವರೆ,
ತು೦ಬಾ ಸೊಗಸಾದ ಸಾಲುಗಳು.
ನನಗೆ ನಿಮ್ಮ ಬ್ಲೊಗ್ ಫಾಲೋ ಮಾಡ್ಲಿಕಾಗ್ತಾ ಇಲ್ವಲ್ರಿ..ನೀವ್ ಹೇಳಿದ್ ಹ್ಯಾಗೆ ಅ೦ತ ನನಗೆ ತಿಳಿತಾ ಇಲ್ಲ.:(

ಶಿವಪ್ರಕಾಶ್ ಹೇಳಿದರು...

Nice one divya..
We must accept the reality :)

ದಿವ್ಯಾ ಹೇಳಿದರು...

@ ALL, thanku so much... :-)

Badarinath Palavalli ಹೇಳಿದರು...

ದಿವ್ಯಾ ಅವರೇ,

ನಿಮ್ಮೊಳಗಿನವ ತುಂಬಾ ವಿವರ ಕೇಳುತ್ತಾನೆ ರೀ...

ಸೂಪರ್ರಾಗಿದೆ.

ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...

Shamaa Shastry ಹೇಳಿದರು...

bahaLa ishTavaayitu!

ee kavana nimma manasannu swalpavaadaru haguraagiside endu bhaavisuttEne.

Manjula ಹೇಳಿದರು...

ನಿಮ್ಮೊಳಗಿನ ಅವನು, ನಿಮ್ಮನ್ನು ಅದ್ಭುತ ಕವಿಯಾಗಿಸಿದ್ದಾನೆ. ಮನಮುಟ್ಟೋ ಸಾಲುಗಳು.. :-)

ಸುಧೇಶ್ ಶೆಟ್ಟಿ ಹೇಳಿದರು...

ನಿಮ್ಮೊಳಗಿರುವ ಅವನನ್ನು ಕಥೆಯಾಗಿಸಿ ಬಿಡಿ ದಿವ್ಯಾ!