ಬುಧವಾರ, ಆಗಸ್ಟ್ 04, 2010

ನಮ್ಮ ಡ್ರೈವರ್ ಗಳ ನೆನೆಯುತ್ತಾ....

ಆ ದಿನ ಆಫೀಸ್ಯಿಂದ ಹೊರಡುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಫೀಸ್ ಕ್ಯಾಬ್ ನ ಮಿಸ್ ಮಾಡಿಕೊಂಡ ಮೇಲೆ, ಸರಿ volvoಗೆ ಹೋಗೋಣ ಅಂತ ಕಾದೆ.ಎಷ್ಟು ಹೊತ್ತು ಕಾದರೂ volvo ಬರಲೇ ಇಲ್ಲ. ಇನ್ನೇನು ಮಾಡೋದು, ಮಾಮೂಲಿ ಬಸ್ ಬರುತ್ತಾ ಇತ್ತು. ಅಷ್ಟೇನು ತುಂಬಿರದಿದ್ದ ಕಾರಣ ಹತ್ತಿಕೊಂಡೆ. ಸ್ವಲ್ಪ ದೂರದವರೆಗೆ ಬಸ್ಸು ಅಷ್ಟೇನೂ ತುಂಬಿರಲಿಲ್ಲ. ಸದ್ಯ ನನಗೆ ಕುಳಿತುಕೊಳ್ಳಲು ಜಾಗ ಸಿಕ್ಕಿತಲ್ಲ ಅಂತ ಮನಸಲ್ಲೇ ಖುಷಿ ಪಟ್ಟೆ. ಸ್ವಲ್ಪ ದೂರ ಹೋಗುತಿದ್ದಂತೆ ಒಂದು ಮಗು, ಶಾಲೆ ಮುಗಿದು ರಸ್ತೆಯಲ್ಲಿ ಬರುತಿತ್ತು. ಬಸ್ಸಿಗೆ ಅಡ್ಡ ಬಂದೇ ಬಿಟ್ಟಿತು. ಈ ಡ್ರೈವರ್ ಸರಿಯಾದ ಸಮಕ್ಕೆ ತಕ್ಷಣ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದ್ದ. ನಾನಂತೂ ಕಣ್ಣು ಮುಚ್ಚಿಕೊಂಡೇ ಕುಳಿತೆ. ಇನ್ನೇನು ಮಗು ಸತ್ತೇ ಹೋಯಿತೇನೋ ಅಂದುಕೊಂಡೆ. ಆದ್ರೆ ಸದ್ಯ ಪುಣ್ಯಕ್ಕೆ, ಡ್ರೈವರ್ ಸಕಾಲಕ್ಕೆ ಬ್ರೇಕ್ ಹಾಕಿ ಆಗಬಹುದಾದ ಅನಾಹುತ ತಪ್ಪಿಸಿದ್ದ. ದೇವರಿಗೊಂದು thanks ಹೇಳಿದ್ದೆ.

ನಿಜ, ನಾನು ಈಗ ಹೇಳ ಹೊರಟಿರುವುದು ನಮ್ಮ ಡ್ರೈವರ್ ಗಳ ಬಗ್ಗೆ. ನಾನು ಮೂಲತಃ ಸಿದ್ದಾಪುರ (ಉತ್ತರ ಕನ್ನಡ)ದ ಹುಡುಗಿ. ಆದರೆ ಹುಟ್ಟಿ ಬೆಳೆದಿದ್ದೆಲ್ಲ ದಾಂಡೇಲಿ ಎಂಬ ಊರಲ್ಲಿ. ನಮ್ಮ ಊರು ಅಂಥ ದೊಡ್ಡ ಸಿಟಿ ಅಲ್ಲ, ಹಾಗಂತ ಹಳ್ಳಿಯೂ ಅಲ್ಲ. ಮಾಮೂಲಿ ಭಾಷೆಯಲ್ಲಿ town ಅಂತ ಹೇಳಬಹುದು. ಅಲ್ಲಿ ನಮಗೆ ಬೇಕಾಗುವ ಎಲ್ಲ ಸ್ಥಳಗಳು, ಉದಾಹರಣೆಗೆ, ಮಾರ್ಕೆಟ್ , ಶಾಲೆ ,ಕಾಲೇಜ್ ಹೀಗೆ ಎಲ್ಲ ನಡೆದುಕೊಂಡೇ ಹೋಗುವ ಹಾಗಿತ್ತು. ತೀರ ದೂರ ಅಂದರೂ ಆಟೋ ತೆಗೆದುಕೊಂಡರೆ ಕೇವಲ "minimum " ಚಾರ್ಜ್ ಆಗುತಿತ್ತು. ಇಲ್ಲಿ ಬೆಂಗಳೂರಿಗೆ ಬಂದ ಮೇಲೆ ಎಲ್ಲದಕ್ಕೂ ಬಸ್ಸನ್ನೇ ಬಳಸಿದುದು. ಊರಿಗೆ ಹೋದಾಗೆಲ್ಲ, ಕೆಲವರು ನಾನು ಬೆಂಗಳೂರಿನಲ್ಲಿ ಇದ್ದೀನಿ ಅಂದ ಕೂಡಲೇ, ನನ್ನ ನೆಂಟರೂ ಬೆಂಗಳೂರಲ್ಲೇ ಇದ್ದಾರೆ ಎಂದು ಕೆಲವರು ಹೇಳಿದ್ದಾರೆ. ಒಮ್ಮೆ ಹೋಗಿ ಬಾ ಅಂತಾರೆ. ಆದರೆ ಹೋಗಿ ಬರುವುದಕ್ಕೆ ಒಂದು ಒಪ್ಪತ್ತೆ ಬೇಕಾದಿತು.ಬೆಂಗಳೂರು ಅಷ್ಟು ದೊಡ್ಡದಿದೆ. ಆದರೆ ಹೇಳಿಕೊಳ್ಳುವುದು ಮಾತ್ರ ಬೆಂಗಳೂರಲ್ಲೇ ಇದೀನಿ ಅಂತ ಅಷ್ಟೇ!

ಇಲ್ಲಿ ಎಲ್ಲರೂ ಯಾವಾಗಲೂ ಅಲ್ಲದಿದ್ದರೂ, ಒಂದಿಲ್ಲೊಂದು ಸಾರಿ ಬಸ್ಸನ್ನು ಉಪಯೋಗಿಸಿಯೇ ಇರುತ್ತಾರೆ. ಸ್ವಂತ ವಾಹನ ಇರುವವರಿಗೆ ಸಮಸ್ಯೆ ಇಲ್ಲ. ಆದರೆ ವಿದ್ಯಾರ್ಥಿಗಳು, ದಿನಾ ಫ್ಯಾಕ್ಟರಿಗಳಿಗೆ ಹೋಗುವ ಮಹಿಳೆಯರು, ಕೆಲಸಕ್ಕೆ ಹೋಗುವ ಹುಡುಗಿಯರು, ಕಂಪನಿಗಳಿಂದ ಸಾರಿಗೆ ವ್ಯವಸ್ಥೆ ಇಲ್ಲದಿರುವ ಉದ್ಯೋಗಿಗಳು, ಅತ್ತ ಹಳ್ಳಿಕಡೆಯಿಂದ ಬರುವ ರೈತರು, ಶಾಲೆ ಬಿಟ್ಟ ಪುಟ್ಟ ಪುಟ್ಟ ಮಕ್ಕಳು, ಹಿರಿಯ ನಾಗರಿಕರು, ಹೀಗೆ ಎಲ್ಲ ವಿಧದ ಜನರಿಗೆ ಪ್ರಯಾಣ ಮಾಡಲು ಬಸ್ಸು ಅನುಕೂಲಕರ ವ್ಯವಸ್ಥೆ. ಈ ಬಸ್ಸನ್ನು ಓಡಿಸುವ ಡ್ರೈವರ್ ಗಳ ಶ್ರಮ ಬಹಳ ಮೆಚ್ಚತಕ್ಕದ್ದೇ!ಅವರಿಗೆ ಬಹಳ ತಾಳ್ಮೆ ಅವಶ್ಯ. ಎಷ್ಟೋ ರಸ್ತೆ ಗೊತ್ತಿಲ್ಲದವರು,ಊರಿಗೆ ಹೊಸಬರು , ಬಸ್ಸು ಅಲ್ಲಿ ಹೋಗುತ್ತಾ? ಇಲ್ಲಿ ಹೋಗುತ್ತಾ? ಎಂದು ಕೇಳಿದಾಗ ತಾಳ್ಮೆ ಇಂದ ಮಾರ್ಗ ಹೇಳಿ , ನೂರಾರು ಜನರ ಜೀವವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡೇ ಜೋಪಾನವಾಗಿ ಅವರನ್ನು ಅವರವರ ಗಮ್ಯಸ್ಥಾನಕ್ಕೆ ತಲುಪಿಸುವ ಈ ಡ್ರೈವರ್ ಗಳ ಕೆಲಸ ಬಹಳ ಪ್ರಶಂಸನೀಯ.

ಕೆಲವೊಂದು ಬಸ್ಸುಗಳಲ್ಲಿ conductor ಇರುವುದಿಲ್ಲ. ಹಾಗಿರುವಾಗ ಇವರೇ ದ್ವಿಪಾತ್ರಾಭಿನಯ ಮಾಡುತ್ತಾ, ಜನರನ್ನು ಹತ್ತಿಸಿಕೊಂಡು, ಪಾಸ್ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ , ಟಿಕೆಟ್ ಬೇಕಾದವರಿಗೆ ಟಿಕೆಟ್ ಕೊಟ್ಟು, ಹತ್ತು ರೂಪಾಯಿ ಟಿಕೆಟ್ ಗೆ ನೂರು ರೂಪಾಯಿ ನೋಟು ಕೊಟ್ಟ ಅಂಕಲ್ ಗೆ ತಿರುಗಿಸಿ ಚಿಲ್ಲರೆ ಕೊಡಲು ತಡಕಾಡುತ್ತಾ , ಕಡೆಗದು ಸಿಕ್ಕಿತು ಎಂದು ಅವರಿಗೆ ಕೊಡುತ್ತಾರೆ. ವಯಸ್ಸಾದವರಿಗೆ, ಅಷ್ಟೇ ಗೌರವದಿಂದ ಅವರ ಇಳಿಯುವ ಸ್ಥಳ ಬಂದಾಗ ಇಲ್ಲೇ ಇಳಿದುಕೊಳ್ಳಿ ಎಂದು ಹೇಳುತ್ತಾರೆ.
ಹಾಗೇ strike ನಡೆದಾಗಲೂ ಅಷ್ಟೇ. ಡ್ರೈವರ್ ಗಳಿಗೆ ರಜೆ ಘೋಷಣೆ ಆಗಿರದಿದ್ದರೆ, ಅವರು ಗಾಡಿ ಓಡಿಸುವಾಗ , ಕಲ್ಲು ಹೊದೆತಗಳೇನಾದರು ಸಂಭವಿಸಿದರೆ ,ಮೊದಲು ಸಿಕ್ಕಿಬೀಳುವುದೇ ಡ್ರೈವರ್ ಗಳು. ಹಾಗೇ ಅಪ್ಪಿ ತಪ್ಪಿ ಯಾವುದಾದರೂ ಗಾಡಿಗೆ ಗುದ್ದಿದನೋ ಅವನಿಗೆ ಅವರಿಂದ ಧರ್ಮದೇಟು ಗ್ಯಾರಂಟಿ!! ಪ್ರಯಾಣಿಕರು ಮೂಕ ಪ್ರೇಕ್ಷಕರಷ್ಟೇ!

ಬೇಸಿಗೆ ಕಾಲದಲ್ಲಿ ಆ ಎದುರುಗಡೆ ಗಾಜಿನಿಂದ ಬರುವ ಬಿಸಿಲನ್ನು ಸಹಿಸಿಕೊಂಡು, ಮಾಧ್ಯಾನದ ಉರಿ ಬಿಸಿಲಿನಲ್ಲೂ ತಾಳ್ಮೆಗೆಡದೆ ಗಾಡಿಯನ್ನು ಸರಿಯಾಗಿ ಓಡಿಸುತ್ತಾ, ಎಲ್ಲೂ ಅಪ್ಪಿ- ತಪ್ಪಿ ಆಕ್ಸಿಡೆಂಟ್ ಆಗದಂತೆ ಕಾದುಕೊಂಡು ಎಲ್ಲರನ್ನು ಸುರಕ್ಷಿತವಾಗಿಡುವಲ್ಲಿ ಆತ ಕಾರಣವಾಗುತ್ತಾನೆ. ನಿಮಿಷ ನಿಮಿಷಕ್ಕೂ ಬರುವ ಸಿಗ್ನಲ್ ಗಳಲ್ಲಿ ನಿಲ್ಲಿಸುತ್ತಾ,ಹಸಿರು ನಿಶಾನೆ ಕಂಡೊಡನೆ ಮುಂದೆ ಹೋಗುತ್ತಾನೆ. ಇಷ್ಟೊಂದು traffic ಇರುವ ಊರಿನಲ್ಲಿ ಯಾಮಾರುವುದು ಬಲು ಸುಲಭ. ನಾವು ಪ್ರಯಾಣಿಕರಿಗೆ ಬಸ್ಸು ಸಿಗುವ ವರೆಗಷ್ಟೇ ತಲೆ ಬಿಸಿ. ಬಸ್ಸು ಹತ್ತಿ ಕುಳಿತ ಮೇಲೆ ಎಲ್ಲ ತಲೆಬಿಸಿಯನ್ನು ಡ್ರೈವರ್ ಗೆ ರವಾನಿಸಿ ನಾವು ಬೆಚ್ಚಗೆ ಕುಳಿತು ಬಿಡುತ್ತೇವೆ. ಕೆಲವರು ನಿದ್ದೆ ಮಾಡುತ್ತಾರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ, ಇನ್ನು ಕೆಲವರು FM ಕೇಳುತ್ತಾರೆ, ನನ್ನಂತವರು ಕಿಟಿಕಿಯಾಚೆ ನೋಡುತ್ತಾ , ಜನರ ಗುಂಪಲ್ಲು ಸಿಕ್ಕ ಏಕಾಂತದ ಸವಿಯನ್ನು ಇನ್ನೊಬ್ಬರಿಗೆ ಒಂದ್ ಚೂರು ಕೊಡದಂತೆ ಅನುಭವಿಸುತ್ತಾರೆ, ಆದರೆ ಡ್ರೈವರ್ ಮಾತ್ರ ಗಮನವಿಟ್ಟು ಗಾಡಿ ಓಡಿಸುತ್ತಾನೆ. ಹೀಗೆ , ನೂರಾರು ಕನಸಿನ ಲೋಕದಲ್ಲಿ ತೇಲಾಡುತ್ತಿರುವ ಜನರನ್ನು ,ತಾನು ಮಾತ್ರ ವಾಸ್ತವದಲ್ಲಿದ್ದುಕೊಂಡು ಕಾಯುತ್ತಾನೆ ಆತ. ಇದೆಲ್ಲ ದಿನಾ ಓಡಾಡುವ ಈ ಸಿಟಿ ಬಸ್ ಡ್ರೈವರ್ ಗಳ ಕಥೆಯಾದರೆ ಇನ್ನು ಊರಿಂದ ಊರಿಗೆ ಹೋಗುವ ಬಸ್ಸನ್ನು ಓಡಿಸುವ ಡ್ರೈವರ್ ಗಳ ಕಥೆಯೇ ಬೇರೆ.

ರಾತ್ರೆ ಬಸ್ಸುಗಳನ್ನ ಓಡಿಸುವವರು ಎಷ್ಟು ಜಾಗರೂಕರಾಗಿದ್ದರೂ ಸಾಲದು. ಆ ಕತ್ತಲೆ ಕೊಂಪೆಯೊಳಗೆ ಉರಿಯುತ್ತಿರುವ ಬಸ್ಸಿನ ತಿಳಿಬೆಳಕಿನಲ್ಲೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಸ್ಸನ್ನು ಓಡಿಸುತ್ತಾರೆ. ನನ್ನ ಅಜ್ಜನ ಮನೆ ಇರುವುದು ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿ ರಾತ್ರಿ ಹೋಗುವುದು ಒಂದೇ ಬಸ್ಸು.ಊರಿಗೆ ಬರುವ ದಾರಿಯ ಇಕ್ಕೆಲದಲ್ಲಿ ಗುಡ್ಡ ಇರುವುದರಿಂದ ಒಮ್ಮೊಮ್ಮೆ ಕಾಡು-ಕೋಣಗಳು ಬಸ್ಸಿಗೆ ಅಡ್ಡ ಬರುವುದೂ ಉಂಟು. ಆಮೇಲೆ ಜೋರಾಗಿ ಬಸ್ಸಿನ ಹೊರ್ನ್ ಮಾಡಿದಾಗ ಅವು ಹೆದರಿದ ಬೆಕ್ಕಿನಂತೆ ಬೆಚ್ಚಿ ಓಡಿ ಹೋಗುತ್ತವೆ. ಬಸ್ ಡ್ರೈವರ್ -ಕಂಡಕ್ಟೆರ್ ಅಲ್ಲೇ ತಂಗಿದ್ದು ಬೆಳಗ್ಗೆ ಎದ್ದು ಮತ್ತೆ ಪೇಟೆಗೆ ಹೋಗುವ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾರೆ.ಹೀಗೆ ಹಳ್ಳಿಗಳಿಗೆ ಹೋಗುವ ಡ್ರೈವರ್ ನ ಜೀವನ ಸಾಗುತ್ತಿರುತ್ತದೆ.
ನಮ್ಮ ಮನೆಯಿಂದ,ಅಂದರೆ ದಾಂಡೇಲಿಯಿಂದ ಬೆಂಗಳೂರಿಗೆ ಬರಲು ಕನಿಷ್ಠ ಹತ್ತು ಘಂಟೆಗಳ ಪ್ರಯಾಣ ಬಸ್ಸಲ್ಲಿ. ನಾನು ಸುಮಾರಾಗಿ ರಾತ್ರಿ ಪ್ರಯಾಣ ಮಾಡುವುದೇ ಹೆಚ್ಚು. ಬಸ್ ಹತ್ತಿ ಸ್ವಲ್ಪ ಹೊತ್ತಿಗೆಲ್ಲ ಮಲಗಿದರೆ , ಇಲ್ಲಿ ಬಂದ ಮೇಲೇ ಕಣ್ಣು ಬಿಡುತ್ತೇನೆ. ಮಧ್ಯೆ -ಮಧ್ಯೆ ಎಚ್ಚರು ಆದಾಗೆಲ್ಲ, ಎಲ್ಲರೂ ಮಲಗಿದ್ದಾರೆ, ಡ್ರೈವರ್ ಒಬ್ಬ ಮಾತ್ರ ಎಚ್ಚರವೇ ಇದಾನಲ್ಲ ಅಂತ ಮನಸಲ್ಲಿ ಅಂದುಕೊಳ್ಳುತ್ತೇನೆ.

ಡ್ರೈವರ್ ಗಳ ಅಜಾಗರೂಕರಾಗಿವ ಕ್ಷಣಗಳು ಬಹಳಿರಬಹುದು . ಅಲ್ಲೊಂದು ಇಲ್ಲೊಂದು ಕೆಟ್ಟ ಘಟನೆಗಳಾಗಿತ್ತವೆ.ಆದರೂ ಅದು ಅಂಥ ದೊಡ್ಡ ಮಟ್ಟದಲ್ಲಿರಲಿಕ್ಕಿಲ್ಲ. ಎಷ್ಟಾದರೂ ಅವರು ನಮ್ಮ ಹಾಗೆ ಮನುಷ್ಯರೇ ಅಲ್ಲವ? ಇಷ್ಟೊಂದು ಜವಾಬ್ದಾರಿ ಹೊತ್ತು ಜನರನ್ನೆಲ್ಲ ಕ್ಷೇಮವಾಗಿಟ್ಟು ತಾನೂ ಬದುಕುತ್ತಿರುವ ಈ "ಡ್ರೈವರ್ " ಎಂಬ ಜೀವಕ್ಕೆ ನಾವೆಲ್ಲರೂ ಒಂದು ಥ್ಯಾಂಕ್ಸ್ ಹೇಳೋಣವೇ? ಇದು ಕೇವಲ ಬಸ್ ಡ್ರೈವರ್ ಗಳಿಗಷ್ಟೆ ಅಲ್ಲ. ಎಲ್ಲ ವಾಹನ ಡ್ರೈವರ್ ಗಳಿಗೂ ಅನ್ವಯಿಸುತ್ತದೆ.


(ಚಿತ್ರಕೃಪೆ: ಅಂತರ್ಜಾಲ)

22 ಕಾಮೆಂಟ್‌ಗಳು:

ಜಲನಯನ ಹೇಳಿದರು...

ದಿವ್ಯಾ, ಡ್ರೈವರ್ ಎಂದು ಹೀಗಳೆಯೋ ಸಮಾಜಕ್ಕೆ ಒಮ್ದು ಒಳ್ಲೆಯ ವಿಚಾರಾತ್ಮಕ ಲೇಖನ...ಹೌದು ಅವರ ಸ್ವಲ್ಪ ಎಡಹುವಿಕೆ ನಮಗೆ ಮಾರಕವಾಗಬಹುದು ಆದ್ರೆ ನಿದ್ದೆಗೆಟ್ಟು ಜೀವನಕ್ಕ್ಕಾಗಿ ನಮ್ಮೆಲ್ಲರನ್ನೂ ಒಂದೆಡೆ ಕೊಂಡುಹೋಗುವ ಇವರೂ ಮನುಷ್ಯರೇ ಅಲ್ಲವೇ ಎನ್ನುವ ಮಾನವೀಯ ಚಿಂತನೆ ಎಷ್ಟು ಮಂದಿಯಲ್ಲಿರುತ್ತೆ....
ಹೌದು ಯಾಕೆ ಇಷ್ಟು ಸೀರಿಯಸ್...ಹಹಹ ಆಗಾಗ್ಗೆ ಹೀಗಿರಬೇಕು ಅಂತಲಾ...

ಮನದಾಳದಿಂದ............ ಹೇಳಿದರು...

ದಿವ್ಯಾ ಮೇಡಂ,
ಅಪರೂಪದ, ವಿಶಿಷ್ಟ ಬರಹ...., ಎಲ್ಲಾದರೂ ಸ್ವಲ್ಪಾ ಹೆಚ್ಚುಕಡಿಮೆಯಾದರೂ ಡ್ರೈವರ್ ಅಣ್ಣನನ್ನು ಬಯ್ಯುವ ನಾವುಗಳು ಅವರ ಕಷ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ನೀಡಿದ ಗೌರವ ಮೆಚ್ಚಬೇಕಾದ್ದು.
ಆದರೆ ದೆಹಲಿಯ ಬಸ್ ಡ್ರೈವರ್/ಕಂಡಕ್ಟರ್ ಗಳ ದರ್ಪ ನೋಡಬೇಕು, ಬಹಳ ಒರಟು. ಬಸ್ ಹತ್ತಲು ಮನಸ್ಸೇ ಬರುವುದಿಲ್ಲ. ಹಿರಿಯರು, ಹೆಂಗಸರು ಮಕ್ಕಳೆಂಬ ಬೇಧ ಭಾವವಿಲ್ಲದೆ ಮಾತು ಮಾತಿಗೂ ಅವಾಚ್ಯ ಶಬ್ಧಗಳನ್ನು ಉಪಯೋಗಿಸುತ್ತಾರೆ. ನಾನು ಕೆಲವೊಮ್ಮೆ ಅನಿವಾರ್ಯ ಸಂದೆಭಾಗಳಲ್ಲಿ ಬಸ್ಸಿನಲ್ಲಿ ಹೋಗುವಾಗ ಚಿಲ್ಲ ಇಟ್ಟುಕೊಂಡೆ ಹೋಗುತ್ತೇನೆ. ಚಿಲ್ಲರೆ ಇಲ್ಲದಿದ್ದರೆ ಒತ್ತಾಯವಾಗಿ ಕೆಳಗಿಳಿಸುತ್ತಾರೆ, ಪ್ರತಿಭಟಿಸಿದಾಗ ಒತ್ತಾಯವಾಗಿ ಕೈ ಹಿಡಿದು ದಬ್ಬಿಸಿಕೊಂಡ ಅನುಭವ ನನಗಾಗಿದೆ!
ಆದರೆ ನಮ್ಮ ಕನ್ನಡಿಗ ಡ್ರೈವೆರ್/ಕಂಡಕ್ಟರ್ ಗಳು ಶಾಂತಮೂರ್ತಿಗಳೇ!(ಅಲ್ಲಲ್ಲಿ ಒಬ್ಬೊಬ್ಬ ಮುಂಗೊಪಿಗಳೂ ಇದ್ದಾರೆ ಬಿಡಿ).........

sunaath ಹೇಳಿದರು...

ಬಸ್ ಡ್ರೈವರಗಳ ಬಗೆಗೆ ಎಷ್ಟು ಚೆನ್ನಾಗಿ ವಿವರಿಸಿದ್ದೀರಿ! ನಿಜವಾಗಿಯೂ ಅವರಿಗೆ ನಾವು thanks ಹೇಳಲೇ ಬೇಕು.
ನೀವು ಸಿದ್ದಾಪುರದವರು ಎಂದು ಓದಿ ಸಂತೋಷವಾಯಿತು. ಅಲ್ಲಿ ಕಳೆದ ನನ್ನ ಬಾಲ್ಯದ ಒಂದು ಸುಖದ ವರ್ಷವು ನನ್ನ ನೆನಪಿನಲ್ಲಿ ಹಸಿರಾಗಿ ಉಳಿದಿದೆ.

ಮನಸು ಹೇಳಿದರು...

ಹೌದು ಎಲ್ಲಾ ಡ್ರೈವರ್ ಗಳಿಗೂ ನಮ್ಮ ಧನ್ಯವಾದಗಳನ್ನ ಹೇಳಲೇ ಬೇಕು..........

ಚೆಂದುಳ್ಳಿ ಹೇಳಿದರು...

hmm...
ಯಾರೆನಾದರಾಗಲಿ , ನನ್ನ ಕೆಲಸವಾದಿರಾಯಿತು ಅಂತ (ನನ್ನಂತೆ ) ಎಲ್ಲರೂ ಯೋಚಿಸೋ ಕಾಲ ಇದು.
ಬಸ್ ಡ್ರೈವರ್ ಬಗ್ಗೆ ನಿಮಗಿರೋ ಕಾಳಜಿ ಅಭಿನಂದನೀಯ ..

ನನ್ನ brother ಬಸ್ ಡ್ರೈವರ್ , ವೊಮ್ಮೆ ಅವನು ಹೇಳಿದ ಮಾತಿದು ..
ಡ್ರೈವರ್ ಕೆಲಸ ಸುಲಭ ಅಲ್ಲ.. ದಿನವಿಡೀ ವಂದೇ ಕಡೆ ಕುಳಿತು ಡ್ರೈವ್ ಮಾಡ್ಬೇಕು .. ಇಟ್ಟ ನೋಟ ಕೀಳುವಂತಿಲ್ಲ...
ಡ್ರೈವರ್ ಗಳಲ್ಲಿ ೫೦% ಎಲ್ಲರಿಗೂ ಮೂಲವ್ಯಾಧಿ ಸಾಮಾನ್ಯ ,.. ಇನ್ನು ನನ್ನಂಥ ತಲೆತಿರುಕರಿಗೆ ಎಲ್ಲ ದುಶ್ಚಟ ಇರುತ್ತೆ ಅಂತ ....

Subrahmanya ಹೇಳಿದರು...

ಉತ್ತಮ ಕಳಕಳಿಯ ಬರಹ. ಬಸ್ಸಿನೊಳಗೆ ಕೂತಾಗ ಡ್ರೈವರ್ ಸಾಹೇಬರನ್ನು ದೇವರೆಂದೇ ತಿಳಿಯಬೇಕು. ಎಲ್ಲರ ಪ್ರಾಣವೂ ಅವರ ಕೈಯಲ್ಲೇ ಇರುತ್ತದಲ್ಲವೆ ?.

ಸವಿಗನಸು ಹೇಳಿದರು...

ಚಾಲಕರಿಗೆ ನಮೋ ನಮಃ...
ಚೆಂದದ ಬರಹ....

Naveen ಹಳ್ಳಿ ಹುಡುಗ ಹೇಳಿದರು...

ಡ್ರೈವರ್ ಸಹೋದರರಿಗೆ ಜೈ ಹೋ....
ಒಳ್ಳೆಯ ಬರಹ ದಿವ್ಯ....

ದಿನಕರ ಮೊಗೇರ ಹೇಳಿದರು...

ದಿವ್ಯಾ,
ಯಾರೂ ಯೋಚಿಸದ, ನಿರ್ಲಕ್ಷ ಪಡುವ ಡ್ರೈವರ್ ಬಗ್ಗೆ ಬರೆದದ್ದು ತುಂಬಾ ಖುಷಿ ನೀಡಿತು... ನಮ್ಮ ಕಂಪನಿಯ ಕಾರ್ ಡ್ರೈವರ್ ನ ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ....ಯಾಕಂದ್ರೆ, ಅವನೇ ತಾನೇ ನನ್ನನ್ನು ಸರಿಯಾಗಿ ಮನೆ ಮುಟ್ಟಿಸುವವನು.... ಅವರಿಗೆ ಸರಿಯಾದ ಊಟ ತಿಂಡಿ ಹಣ ಕೊಟ್ಟು ಖುಷಿಯಿಂದ ನೋಡಿಕೊಳ್ಳುತ್ತಾ ಇದ್ದೇನೆ..... ನಿಮ್ಮ ಲೇಖನ ಮುದ ನೀಡಿತು....thank you drivers ....

ವನಿತಾ / Vanitha ಹೇಳಿದರು...

so true..:-)

ಸಾಗರದಾಚೆಯ ಇಂಚರ ಹೇಳಿದರು...

ಡ್ರೈವರ್ ಗಳು ಕ್ಷಣ ಎಚ್ಚರ ತಪ್ಪಿದರೂ ನಮ್ಮ ಜೀವ ಅಷ್ಟೇ...

ನಿಜಕ್ಕೂ ಕಾಣುವ ಭಗವಂತ ಅವ್ರೆ

ಸುಂದರ ಲೇಖನ

shivu.k ಹೇಳಿದರು...

ದಿವ್ಯರವರೆ,

ಡ್ರೈವರುಗಳ ಬಗ್ಗೆ ಎಲ್ಲಾ ಕೋನಗಳಿಂದ ಚೆನ್ನಾಗಿ ವಿಮರ್ಶಿಸಿದ್ದೀರಿ. ನಾನು ಹೆಚ್ಚು ಬಸ್ಸು ಬಳಸುತ್ತಿಲ್ಲವಾದರೂ ಕೆಲವೊಮ್ಮೆ ಹತ್ತಿದಾಗ ನೀವು ಹೇಳೀದ ಅನುಭವಗಳು ನನಗೂ ಆಗುತ್ತವೆ. ನಿಮ್ಮ ಬರಹ ನಿಜಕ್ಕೂ ಅವರಿಗೊಂದು ನುಡಿನಮನವೇ ಸರಿ...

SATISH N GOWDA ಹೇಳಿದರು...

ಸುಮಧುರ ವಾದ ಬರವಣಿಗೆ. ಸ್ವಲ್ಪ ಎಡವತ್ತಾದಾಗ ಎಲ್ಲರೂ ಡ್ರೈವರ್ ಗಳನ್ನ ಬಯ್ಯುವವರೇ ನಾನು ಕಂಡ ಹಾಗೆ ನೀವೊಬ್ಬರೇ ಡ್ರೈವರ್ ಗಳ ಬಗ್ಗೆ ಕರುಣೆ ಇಟ್ಟು ಬರಹವನ್ನ ಬರೆದಿರಿವುದು... ಉತ್ತಮ ಬರಹ ಧನ್ಯವಾದಗಳು ದಿವ್ಯ ........

ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಇಮ್ಮೆ ಬನ್ನಿ .....
www.nannavalaloka.blogspot.com
ನನ್ನ ಸ್ನೇಹಲೋಕ ......(ORKUT)
satishgowdagowda@gmail.com

V.R.BHAT ಹೇಳಿದರು...

ಬಸ್ ಚಾಲಕರ ಕೆಲಸ ಕಠಿಣ, ಅದು ಎಲ್ಲೇ ಇರಲಿ, ಬಸ್ಸಿನ ಧಡೂತಿ ದೇಹವನ್ನು ಯಾರಿಗೂ , ಎಲ್ಲೂ ತಾಗದಂತೆ ನಿರ್ವಹಿಸುವುದು ಒಂದು ದೊಡ್ಡ ಪ್ರಾಜೆಕ್ಟು, ಅದರಲ್ಲೂ ದ್ವಿಪಾತ್ರಾಭಿನಯ ಅತ್ಯಂತ ಪರಿಶ್ರಮದ್ದು, ಡ್ರೈವರ್ ಗಳಿಗೆ ಹ್ಯಾಟ್ಸ್ ಆಪ್ಹ್ , ಲೇಖನ ಕಳಕಳಿಯಿಂದ ಕೂಡಿದೆ,ಧನ್ಯವಾದಗಳು

ಸೀತಾರಾಮ. ಕೆ. / SITARAM.K ಹೇಳಿದರು...

ಚಾಲಕರ ಬಗ್ಗೆ ಒಳ್ಳೆ ಲೇಖನ. ಅವರಿಗೆ ನನ್ನ ಸಲಾಂ!

chand ಹೇಳಿದರು...

ಸರಳವಾಗಿ ತುಂಬಾ ಚೆನ್ನಾಗಿದೆ.... ಈ ಬೆಂಗಳೂರೇ ಹೀಗೆ... ಈ ಜನಸಾಗರದೊಳಗೆ ಎಲ್ಲಿಂದ ಎಲ್ಲಿಗೆ ಹೋಗುವುದು? ದಿಕ್ಕುತಪ್ಪಿದ ಕರುಗಳು ನಾವು. ಈ ಜನರ ಮಂದೆಯಲ್ಲಿ ಬಸ್ಸು ಓಡಿಸುವುದೆಂದರೆ ಹೆಬ್ಬಂಡೆಯನ್ನೇ ಕೊಂಡೊಯ್ದಂತೆ... ನಿಮ್ಮ ಅನುಭವಗಳನ್ನು ಹೀಗೆ ಬರೆಯುತ್ತಿರಿ...

Ishwar Jakkali ಹೇಳಿದರು...

Very nice write up ....
keep writing ...

ಮನಸಿನ ಮಾತುಗಳು ಹೇಳಿದರು...

ಪ್ರತಿಕ್ರಿಯಿಸದ ಎಲ್ಲರಿಗೂ ಧನ್ಯವಾದಗಳು.. :-)

Manjunatha Kollegala ಹೇಳಿದರು...

ಬೆಂಗಳೂರಲ್ಲೇ ಬೆಳೆದು ಅಲ್ಲೇ ಬಿದ್ದು ಹೊರಳುವ ನಮ್ಮಂಥ ಒರಟರಿಗೆ ಡ್ರೈವರುಗಳ ಒರಟುತನ, ಸ್ಟಾಪಿನಿಂದ ಮೈಲು ದೂರ ಬಸ್ಸು ನಿಲ್ಲಿಸಿ ಎಲ್ಲರನ್ನೂ ಓಡುವಂತೆ ಮಾಡುವ ಅವರ ಧೂರ್ತತನ, ಅವಾಚ್ಯ ಭಾಷೆ, ರೋಡ್ ರೇಜು ಇವೇ ಹೊಡೆದು ಕಾಣುವುದು. ಇದರ ಹಿಂದೆ ಇರುವ ಮಾನವೀಯ ಗುಣ, ಅವರದೇ ಒತ್ತಡ-ಗೋಳುಗಳು ಕಾಣುವುದೇ ಇಲ್ಲ. ಅದು ಸಹಜವೇನೋ. ಆದರೆ ಸಿದ್ದಾಪುರ, ದಾಂಡೇಲಿಯಂಥ ’ಪುಟ್ಟ’ ಊರುಗಳಿಂದ ಬರುವ ನಿಮ್ಮ ಮಿದು ಮನಸ್ಸು ಡ್ರೈವರುಗಳ ಪ್ರತಿಯೊಂದು ಕೆಲಸವನ್ನೂ ಗಮನಿಸಿ ಅನುಕಂಪದಿಂದ ವಿವರಿಸುವಾಗ ಅದು ನಮ್ಮ ಅಂತಃಕರಣ ತಟ್ಟುತ್ತದೆ; ಅರೇ ಹೌದಲ್ಲ, ಇವರು ಮಾಡುವ ಕೆಲಸದ ಒಂದಂಶವನ್ನು ನಾವು ಮಾಡುವುದು ಆಗದು ಅಲ್ಲವೇ ಅನ್ನಿಸುತ್ತದೆ; ನಮ್ಮ ಭಾವನೆಗಳ ಒರಟುತನಕ್ಕೆ ನಮಗೇ ಕ್ಷಣ ನಾಚಿಕೆಯಾಗುತ್ತದೆ; ಡ್ರೈವರಣ್ಣನ ಬಗ್ಗೆ ಮನಸ್ಸು ಮಿದುವಾಗುತ್ತದೆ. Thanks for a beautiful write-up. ನಿಮ್ಮ ಮನಸ್ಸಿನ ಮಾರ್ದವನ್ನು ಬೆಂಗಳೂರು ನುಂಗಿಹಾಕದಿರಲಿ

ಸುಧೇಶ್ ಶೆಟ್ಟಿ ಹೇಳಿದರು...

nice write up....

ತು೦ಬಾ ವೈವಿಧ್ಯಮಯವಾಗಿ ಬರೆಯತ್ತಿದ್ದೀರಾ ಇತ್ತೀಚೆಗೆ :)

ತು೦ಬಾ ಖುಷಿ ಆಗುತ್ತದೆ ಓದಲು :)

ಮನಸಿನ ಮಾತುಗಳು ಹೇಳಿದರು...

ಮಂಜುನಾಥ ಕೊಳ್ಳೇಗಾಲ, ನನ್ನ ಬ್ಲಾಗಿಗೆ ಸ್ವಾಗತ...:-)
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು... :-)

ಸುಧೇಶ್, ನಿಮ್ಮೆಲ್ಲರ ಇಂಥ ಪ್ರೋತ್ಸಾಹದ ನುಡಿಗಳೇ ನನಗೆ ಬರೆಯೋಕೆ ಸ್ಪೂರ್ತಿ.. :-) ಥ್ಯಾಂಕ್ಸ್ ... :-)

RajShekar ಹೇಳಿದರು...

elle drivers ge nanna danyavadhagallu,,,,,,,,,